‘7 ಸಾವಿರ ರೂ. ಇದ್ದ ಆಕ್ಸಿಜನ್ ಗೆ 40 ಸಾವಿರ ರೂ. ಕೊಟ್ಟರೂ ನನ್ನಪತಿ ಬದುಕಿದ್ದು ಒಂದೇ ದಿನ’

Update: 2024-11-25 16:26 GMT

PC: PTI

ಬೆಂಗಳೂರು, ನ.21: 2019ರಲ್ಲಿ ಜಗತ್ತಿನಾದ್ಯಂತ ವಕ್ಕರಿಸಿದ್ದ ಕೊರೋನಾ ಸೋಂಕಿನಿಂದ ಜೀವವೇ ಕಳೆದುಕೊಂಡ ಹಲವು ಕುಟುಂಬಗಳು ಇನ್ನೂ ಆ ನೋವಿನಿಂದ ಹೊರಬಂದಿಲ್ಲ. ಕೋವಿಡ್ಗೆ ಸಂಬಂಧಪಟ್ಟಂತೆ ಹಲವರದ್ದು ಹಲವು ಅನುಭವವಗಳು. ಕೊರೋನದಿಂದ ತನ್ನ ಪತಿಯನ್ನು ಕಳೆದುಕೊಂಡ ಬಗ್ಗೆ ಡಾ.ಜಿ.ವೈ. ಪದ್ಮಾ ನಾಗರಾಜ್ ತಮ್ಮ ಅನುಭವವನ್ನು ವಾರ್ತಾಭಾರತಿ ಜೊತೆ ಹಂಚಿಕೊಂಡಿದ್ದಾರೆ.

‘ಮನೆಯಲ್ಲಿ ಮೊದಲು ಕೊರೋನ ಬಂದದ್ದು ನನ್ನ ಮಗನಿಗೆ. ಬಳಿಕ ಅದು ನನಗೂ ಹರಡಿತು. ಈ ಸಂದರ್ಭದಲ್ಲಿ ನನ್ನ ಪತಿಯವರಿಗೆ ಕೊರೋನ ಪಾಸಿಟಿವ್ ಆಗಿರಲಿಲ್ಲ. ತನಗೂ ಹರಡಬಹುದೆಂಬ ಆತಂಕದಲ್ಲಿ ಅವರು ಮನೆ ಬಿಟ್ಟು ಖಾಸಗಿ ಹೊಟೇಲ್ನಲ್ಲಿ ತಂಗಿದ್ದರು. ಆದರೆ ಹೊಟೇಲ್ನಲ್ಲಿ ತಂಗಿದ್ದ ನನ್ನ ಪತಿಗೂ ಕೊರೋನ ಹರಡಿತು. ಎರಡು ದಿನಕ್ಕೆ ಜ್ವರ ಬಂದು, ನಾಲ್ಕೈದು ದಿನ ಕಳೆಯುತ್ತಿದ್ದಂತೆ ಆಕ್ಸಿಜನ್ ಮಟ್ಟ ಕಡಿಮೆಯಾಗುತ್ತ ಬಂತು. ಅವರು ಕ್ಯಾನ್ಸರ್ನಿಂದ ಬಳಲುತ್ತಿದ್ದರು. ಬೆಂಗಳೂರಿನ ಪ್ರತಿಷ್ಠಿತ ಆಸ್ಪತ್ರೆಗೆ ನಾವು ಖಾಯಂ ಆಗಿ ಹೋಗುತ್ತಿದ್ದರೂ ಅಲ್ಲಿ ನಮಗೆ ಬೆಡ್ ಸಿಗಲಿಲ್ಲ. ಬೇರೆ ಆಸ್ಪತ್ರೆಯಲ್ಲಿ ಬೆಡ್ ಸಿಕ್ಕಿದ್ದರೂ ರೋಗಿಯನ್ನು ಬಿಟ್ಟು ಇನ್ನುಳಿದ ಯಾರನ್ನೂ ಒಳಗೆ ಬಿಡುತ್ತಿರಲಿಲ್ಲ. ಈ ಕಾರಣಕ್ಕೆ ಅವರ ಒತ್ತಾಯದಿಂದ ಮನೆಯಲ್ಲೇ ಚಿಕಿತ್ಸೆ ಪಡೆಯಲು ಆರಂಭಿಸಿದೆವು. ಈ ಸಂದರ್ಭದಲ್ಲಿ ನನಗೂ ಕೊರೋನ ಪಾಸಿಟಿವ್ ಆಗಿರುವುದರಿಂದ ಇವರ ಹಾರೈಕೆ ಮಾಡಲು ಕೂಡ ಸವಾಲುಗಳನ್ನೇ ಅನುಭವಿಸಬೇಕಾಯಿತು’ ಎಂದು ತನ್ನ ನೋವು ತೊಡಿಕೊಂಡಿದ್ದಾರೆ ಪದ್ಮಾ ನಾಗರಾಜ್.

ಸರಿಯಾದ ಆಹಾರವಿಲ್ಲ: ಕೋವಿಡ್ ನಿಂದ ಬಳಲುತ್ತಿದ್ದ ನನಗೆ ಅತೀ ಹೆಚ್ಚಾಗಿ ಸುಸ್ತು ಆಗುತ್ತಿತ್ತು. ಊಟ ತಯಾರಿಸುವಷ್ಟು ಸಾಮರ್ಥ್ಯ ಇರಲಿಲ್ಲ. ಸಂಪೂರ್ಣ ಲಾಕ್ಡೌನ್ ಜಾರಿಯಾಗಿರುವುದರಿಂದ ಸರಿಯಾದ ದಿನಸಿ ವಸ್ತುಗಳು, ಆಹಾರ, ಊಟ ಯಾವುದೂ ಸಿಗುತ್ತಿರಲಿಲ್ಲ. ಈ ಸಂದರ್ಭದಲ್ಲಿ ನನ್ನ ಅಕ್ಕ ವಿದ್ಯಾ ಊಟ ಕಳುಹಿಸುತ್ತಿದ್ದಳು. ಅದನ್ನೇ ಬೆಳಗ್ಗೆಯಿಂದ ಮಧ್ಯಾಹ್ನದವರೆಗೂ ಇಟ್ಟು ತಿನ್ನುತ್ತಿದ್ದೆವು ಎನ್ನುತ್ತಾರೆ ಪದ್ಮಾ ನಾಗರಾಜ್.

ಆಕ್ಸಿಜನ್ ಗಾಗಿ ಪರದಾಟ: ಪತಿಯ ಆಕ್ಸಿಜನ್ ಮಟ್ಟ ಕೆಳಗೆ ಬರುತ್ತಿತ್ತು. ಈ ಸಂದರ್ಭದಲ್ಲಿ ಎಲ್ಲಿ ವಿಚಾರಿಸಿದರೂ ಆಕ್ಸಿಜನ್ ಸಿಗುತ್ತಿರಲಿಲ್ಲ. ಕೊನೆಯ ಘಳಿಗೆಯಲ್ಲಿ 7 ಸಾವಿರ ರೂ. ಇದ್ದ ಆಕ್ಸಿಜನ್ಗೆ 40 ಸಾವಿರ ರೂ. ಕೊಟ್ಟು ಖರೀದಿಸಬೇಕಾದ ಅನಿವಾರ್ಯತೆ ಎದುರಾ ಯಿತು. ಆದರೂ ಅವರು ಆಕ್ಸಿಜನ್ ಹಾಕಿದ ಬಳಿಕ ಕೇವಲ ಒಂದು ದಿನವಷ್ಟೇ ಬದುಕುಳಿದಿದ್ದರು. ಬಳಿಕ ಆಸ್ಪತ್ರೆಯೊಂದರಲ್ಲಿ ಕೋವಿಡ್ ಪ್ರೊಟೋಕಾಲ್ ಮಾಡಲಾಯಿತು. ಸಂಜೆ ಸಾವನ್ನಪ್ಪಿದ ನನ್ನ ಪತಿಯ ಪಾರ್ಥಿವ ಶರೀರ ಮನೆಗೆ ತಲುಪುವಾಗ ರಾತ್ರಿ 12:30 ಆಗಿತ್ತು. ನಮ್ಮದು ದೊಡ್ಡ ಕುಟುಂಬವಾಗಿದ್ದರೂ ಮನೆಗೆ ಬಂದಾಗ ಯಾರೂ ಇರಲಿಲ್ಲ ಎಂದು ಪದ್ಮಾ ನಾಗರಾಜ್ ಕಹಿ ನೆನಪು ಹಂಚಿಕೊಂಡರು.

ಅಂತ್ಯಕ್ರಿಯೆಗೆ ಸ್ಮಶಾನದಲ್ಲಿ ಗಂಟೆಗಟ್ಟಲೆ ಕ್ಯೂ

ಕೊರೋನ ಪಾಸಿಟಿವ್ ಬಂದಾಗ ಒಂದು ನರಕಯಾತನೆಯಾದರೆ, ಬಳಿಕ ಅಂತ್ಯಕ್ರಿಯೆ ಮಾಡಲು ಮತ್ತೊಂದು ನರಕಯಾತನೆ ಅನುಭವಿಸಬೇಕಾಯಿತು. ಅಂತ್ಯಕ್ರಿಯೆ ಮಾಡಲು ಬೆಂಗಳೂರು ನಗರದಲ್ಲಿದ್ದ ಎಲ್ಲ ಸ್ಮಶಾನಗಳಲ್ಲೂ ಬೆಳಗ್ಗಿನಿಂದಲೇ ಸರತಿ ಸಾಲಿನಲ್ಲಿ ನಿಲ್ಲಬೇಕಿತ್ತು. ಕ್ಯೂ ಹೆಚ್ಚಾಗಿರುವುದರಿಂದ ಅಲೆದಾಡುವ ಪರಿಸ್ಥಿತಿ ಬಂದಿತ್ತು. ಕೊನೆಯಲ್ಲಿ ಗೋರಿಪಾಳ್ಯದಲ್ಲಿ ಬೆಳಗ್ಗೆ ಅಂತ್ಯಕ್ರಿಯೆ ನಡೆಯಿತು. ಈ ಎಲ್ಲ ಘಟನೆಗಳನ್ನು ನೆನಪಿಸುವಾಗ ದುಃಖ ಉಮ್ಮಳಿಸುತ್ತದೆ ಡಾ.ಜಿ.ವೈ.ಪದ್ಮಾ ತಮ್ಮ ಅನುಭವ ಹಂಚಿಕೊಂಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Contributor - ಇಬ್ರಾಹಿಂ ಖಲೀಲ್ ಬನ್ನೂರು

contributor

Similar News