ಪಡಿತರ ಚೀಟಿ ರದ್ದು ಮತ್ತು ‘ಡಿಜಿಟಲೀಕರಣ’ಕ್ಕೆ ವ್ಯತ್ಯಾಸ ಇದೆಯೇ?

Update: 2024-11-23 05:39 GMT

ಮಾನ್ಯರೇ,

ನಮ್ಮ ಆಡಳಿತಗಾರರು ಕೆಲವೊಮ್ಮೆ ಸೋಲುವುದು, ಗೆಲ್ಲುವುದು ಅವರು ಬಳಸುವ ಶಬ್ದಗಳಿಂದ ಹೊರತು ಅವರು ಮಾಡುವ ಕೆಲಸದಿಂದ ಅಲ್ಲ. ಹೀಗೆ ನೋಡಿದರೆ ಕಾಂಗ್ರೆಸ್ ನವರಿಗೂ ಬಿಜೆಪಿಯವರಿಗೂ ಸ್ವಲ್ಪ ವ್ಯತ್ಯಾಸವಿದೆ. ಈ ಬಿಜೆಪಿಗರು ಪದ ಬಳಕೆಯಲ್ಲಿ ತುಂಬಾ ನಿಷ್ಣಾತರು. ಅವರು ಸೃಷ್ಟಿಸುವ ಪದಗಳನ್ನು ಸರಿಯಾಗಿ ಅರ್ಥಮಾಡಿಕೊಳ್ಳುವಾಗಲೇ ಐದು ವರುಷಗಳು ಮುಗಿದು ಹೋಗಿರುತ್ತದೆ. ಅದೇ ಕಾಂಗ್ರೆಸ್ ನವರು ಸೋತಿರುವುದು ಅವರು ಬಳಸುವ ಸಾದಾ ಸೀದಾ ಜನಸಾಮಾನ್ಯರಿಗೂ ಅರ್ಥವಾಗುವ ಶಬ್ದಗಳಿಂದ. ಬಿಜೆಪಿಯವರು ಬಳಸುವ ‘ವಿಕಸಿತ ಭಾರತ’, ‘ಆತ್ಮ ನಿರ್ಭರ’, ‘ವಿಶ್ವ ಗುರು’..ಇದನ್ನು ಸುಲಭವಾಗಿ ವ್ಯಾಖ್ಯಾನ ಮಾಡುವುದು ಕಷ್ಟ. ಹಾಗಾಗಿ ನಾವು ಈ ಪದಗಳನ್ನು ಹಿಡಿದು ಕೊಂಡು ತೇಲುತ್ತಾ ಸುಖ ನಿದ್ರೆಗೆ ಜಾರಿ ಹೋಗಬೇಕು..ಯಾಕೆಂದರೆ ಈ ಪದಗಳ ಅರ್ಥ ಇನ್ನೂ ನಮಗಾಗಲಿಲ್ಲ. ಇದನ್ನೇ ಕರೆಯುವುದು ಅಸಂಗತ ಸಾಹಿತ್ಯ..!

ಅದೇ ಕಾಂಗ್ರೆಸ್‌ನವರಿಗೆ ಪದಗಳ ಬಂಡವಾಳದ ತೀವ್ರ ಕೊರತೆ ಕಾಡುತ್ತಿದೆ ಅನ್ನಿಸುತ್ತದೆ. ಇವರು ಬಳಸುವ ಪದಗಳು ಸಾದಾ ಸೀದಾವಾಗಿ ಹೊಟ್ಟೆಗೆ ನೇರವಾಗಿ ಬಡಿಯುವಂತೆ ಇರುತ್ತದೆ. ಇದಕ್ಕೊಂದು ಉತ್ತಮ ಉದಾಹರಣೆ ಅಂದರೆ ಇತ್ತೀಚೆಗೆ ಕರ್ನಾಟಕದಲ್ಲಿ ಬಹು ಚರ್ಚೆಯಾಗುತ್ತಿರುವ ವಿಷಯ ಬಿಪಿಎಲ್ ಪಡಿತರ ಚೀಟಿ ರದ್ದು. ಕಾಂಗ್ರೆಸ್‌ನವರಿಗೆ ಇದನ್ನು ಝರಿ ಶಾಲಿನೊಳಗೆ ಇಟ್ಟು ಹೊಡೆಯಲು ಸಾಧ್ಯವಿತ್ತು. ಆದರೆ ಇವರಿಗೆ ಪದ ಸಾಹಿತ್ಯದ ಕೊರತೆ ಇದೆ ಅನ್ನುವುದು ಅವರ ಮಾತಿನಲ್ಲಿಯೇ ಸ್ಪಷ್ಟವಾಗುತ್ತದೆ. ಪಡಿತರ ಚೀಟಿ ರದ್ದು ಮಾಡುತ್ತೇವೆ ಅನ್ನುವುದರ ಬದಲಾಗಿ ಡಿಜಿಟಲೀಕರಣ ಮಾಡಲಾಗುವುದು ಎಂದು ಹೇಳಿದ್ದರೆ ಜನರಿಗೂ ಅರ್ಥವಾಗುತ್ತಿರಲಿಲ್ಲ, ವಿರೋಧ ಪಕ್ಷಗಳಿಗೂ ಸುಲಭವಾಗಿ ತಲೆಗೂ ಹೊಳೆಯುತ್ತಿರಲಿಲ್ಲ. ಈಗ ಇನ್ನೊಂದು ತಮಾಷೆ ನೋಡಿ: ಕರ್ನಾಟಕದಲ್ಲಿ ವಿರೋಧಿಸುವ ಬಿಜೆಪಿ ಮತ್ತು ಮಿತ್ರ ಪಕ್ಷಗಳ ಆಡಳಿತವಿರುವ ಕೇಂದ್ರ ಸರಕಾರ ಪಡಿತರ ಕಾರ್ಡ್ ಡಿಜಿಟಲೀಕರಣ ಮಾಡುವುದರ ಮೂಲಕ ಸುಮಾರು 5.8 ಕೋಟಿ ಅನರ್ಹ ಪಡಿತರ ಚೀಟಿಗಳು ರದ್ದು ಮಾಡಲು ಮುಂದಾಗಿದ್ದಾರೆ ಅನ್ನುವುದನ್ನು ಕೇಂದ್ರ ಸರಕಾರವೇ ಮಾಹಿತಿ ನೀಡಿದೆ. ಹಾಗಾದರೆ ರದ್ದು ಮಾಡುತ್ತೇವೆ ಅನ್ನುವುದಕ್ಕೂ ಡಿಜಿಟಲೀಕರಣದ ಮೂಲಕ ರದ್ದು ಮಾಡುವುದಕ್ಕೂ ವ್ಯತ್ಯಾಸ ಏನು? ‘ಅಳಿಯ ಅಲ್ಲ..ಮಗಳ ಗಂಡ’ ಅಷ್ಟೇ ವ್ಯತ್ಯಾಸ? ಮೇಲೆ ಕೂತವರು ಪದ ಬಳಕೆಯಲ್ಲಿ ಬುದ್ಧಿವಂತಿಕೆ ತೋರಿಸಿದ್ದಾರೆ. ಹಾಗಾಗಿ ಕಾಂಗ್ರೆಸ್‌ನವರಿಗೂ ಅರ್ಥವಾಗಿಲ್ಲ. ಜನಸಾಮಾನ್ಯರಾದ ನಮಗೂ ಈ ಡಿಜಿಟಲ್ ಪದ ಅರ್ಥವಾಗಲಿಲ್ಲ. ಏನೋ ಮಹತ್ತರವಾದ ಆಡಳಿತ ಸುಧಾರಣೆಗೆ ಕೇಂದ್ರ ಕೈ ಹಾಕಿದೆ ಎಂದು ನಿರ್ಭಯರಾಗಿ ತಿರುಗುತ್ತಿದ್ದೇವೆ ಅಷ್ಟೇ.

ಅದಕ್ಕೆ ಹೇಳುವುದು Administratio is an art' ಇದನ್ನು ಕಾಂಗ್ರೆಸ್‌ನವರು ಬಿಜೆಪಿಯವರಿಂದ ಕಲಿಯ ಬೇಕು.

-ಪ್ರೊ.ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿ,

ಉಡುಪಿ

Tags:    

Writer - ವಾರ್ತಾಭಾರತಿ

contributor

Editor - Musaveer

contributor

Byline - ವಾರ್ತಾಭಾರತಿ

contributor

Similar News