ಕುಮಾರಸ್ವಾಮಿಯವರಿಗೀಗ ತನಿಖೆಯ ಸಂಕಷ್ಟ?
ಸಿದ್ದರಾಮಯ್ಯ ಅವರ ರಾಜೀನಾಮೆಗೆ ಒತ್ತಾಯಿಸುತ್ತಿರುವ ವಿರೋಧ ಪಕ್ಷಗಳಿಗೆ ಪಾಠ ಕಲಿಸಲು ಕಾಂಗ್ರೆಸ್ ಈಗ ಮುಂದಾಗಿರುವ ಹಾಗೆ ಕಾಣಿಸುತ್ತಿದೆ. ಬಿಜೆಪಿ ಮುಖಂಡರು ಹಾಗೂ ಕುಮಾರಸ್ವಾಮಿ ವಿರುದ್ಧದ ಹಳೇ ಕೇಸುಗಳು ಹೊರಬರತೊಡಗಿವೆ. ಕುಮಾರಸ್ವಾಮಿ ವಿರುದ್ಧದ ಕೇಸೊಂದರಲ್ಲಿ ಚಾರ್ಜ್ ಶೀಟ್ ಸಲ್ಲಿಸಲು ಲೋಕಾಯುಕ್ತ ಎಸ್‌ಐಟಿ ಈಗ ಮತ್ತೆ ರಾಜ್ಯಪಾಲರ ಅನುಮತಿ ಕೇಳಿರುವುದು ಕುತೂಹಲ ಕೆರಳಿಸಿರುವ ವಿದ್ಯಮಾನ. ಈಗ ಬಹುಶಃ ರಾಜ್ಯಪಾಲರಿಗೂ ಸಂದಿಗ್ಧ ಎದುರಾದಂತಿದೆ.
ಇಷ್ಟು ಕಾಲದ ರಾಜಕಾರಣದಲ್ಲಿ ಎಲ್ಲಿಯೂ ಕಳಂಕ ಅಂಟಿಸಿಕೊಂಡಿರದ ಸಿದ್ದರಾಮಯ್ಯ ಅವರನ್ನು ಹೇಗಾದರೂ ಮುಡಾ ಪ್ರಕರಣದಲ್ಲಿ ಕಟ್ಟಿಹಾಕಬೇಕೆಂದು ಬಿಜೆಪಿ ಮತ್ತು ಜೆಡಿಎಸ್ ಎರಡೂ ಜಿದ್ದಿಗೆ ಬಿದ್ದಂತಿದೆ.
ಸಿದ್ದರಾಮಯ್ಯ ವಿರುದ್ಧ ರಾಜ್ಯಪಾಲರು ತನಿಖೆ ನಡೆಸಲು ಅನುಮತಿ ನೀಡಿದ್ದು, ಅದರ ವಿರುದ್ಧ ಸಿದ್ದರಾಮಯ್ಯ ಕೋರ್ಟ್ ಮೆಟ್ಟಿಲು ಹತ್ತಿದ್ದೂ ಆಗಿದೆ. ಅರ್ಜಿ ವಿಚಾರಣೆಯನ್ನು ಹೈಕೋರ್ಟ್ ಆಗಸ್ಟ್ 29ಕ್ಕೆ ಮುಂದೂಡಿದ್ದು, ಮುಂದೇನಾಗಲಿದೆ ಎಂದು ನೋಡಬೇಕಾಗಿದೆ. ಆದರೆ, ಇಡೀ ಮುಡಾ ಪ್ರಕರಣ ಪಕ್ಷ-ಪಕ್ಷಗಳ ನಡುವಿನ ಸಂಘರ್ಷವಾಗುತ್ತಿರುವ ಹಾಗೆ ಕಾಣಿಸುತ್ತಿದೆ.
ಒಂದೆಡೆ ಸಿದ್ದರಾಮಯ್ಯ ಕಾನೂನು ಹೋರಾಟಕ್ಕೆ ಇಳಿದಿರುವಾಗಲೇ ಮತ್ತೊಂದೆಡೆ ಅದರ ರಾಜಕೀಯ ಸಂಘರ್ಷದ ಕಿಡಿಗಳೂ ಹಾರುತ್ತಿವೆ. ಸಿದ್ದರಾಮಯ್ಯ ವಿರುದ್ಧ ಮುಗಿಬಿದ್ದಂತೆ ಮಾತಾಡುತ್ತಿದ್ದ ಜೆಡಿಎಸ್ ನಾಯಕ, ಕೇಂದ್ರ ಸಚಿವ ಕುಮಾರಸ್ವಾಮಿಗೂ ಈಗ ಕಾನೂನು ಕ್ರಮದ ಕಂಟಕ ಎದುರಾಗಲಿದೆಯೇ ಎಂಬ ಪ್ರಶ್ನೆ ಎದ್ದಿದೆ.
ಮುಡಾ ಹಗರಣ ಭಾರೀ ಚರ್ಚೆಗೆ ಗ್ರಾಸವಾಗಿದ್ದು, ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ ಬಳಿಕವಂತೂ ಆಡಳಿತ ಪಕ್ಷ ಮತ್ತು ವಿಪಕ್ಷಗಳ ನಡುವಿನ ಕದನ ತಾರಕಕ್ಕೇರಿದೆ.
ಸಿದ್ದರಾಮಯ್ಯ ಅವರ ರಾಜೀನಾಮೆಗೆ ಒತ್ತಾಯಿಸುತ್ತಿರುವ ವಿರೋಧ ಪಕ್ಷಗಳಿಗೆ ಪಾಠ ಕಲಿಸಲು ಕಾಂಗ್ರೆಸ್ ಈಗ ಮುಂದಾಗಿರುವ ಹಾಗೆ ಕಾಣಿಸುತ್ತಿದೆ.
ಬಿಜೆಪಿ ಮುಖಂಡರು ಹಾಗೂ ಕುಮಾರಸ್ವಾಮಿ ವಿರುದ್ಧದ ಹಳೇ ಕೇಸುಗಳು ಹೊರಬರತೊಡಗಿವೆ.
ಕುಮಾರಸ್ವಾಮಿ ವಿರುದ್ಧದ ಕೇಸೊಂದರಲ್ಲಿ ಚಾರ್ಜ್ ಶೀಟ್ ಸಲ್ಲಿಸಲು ಲೋಕಾಯುಕ್ತ ಎಸ್‌ಐಟಿ ಈಗ ಮತ್ತೆ ರಾಜ್ಯಪಾಲರ ಅನುಮತಿ ಕೇಳಿರುವುದು ಕುತೂಹಲ ಕೆರಳಿಸಿರುವ ವಿದ್ಯಮಾನ.
ಈಗ ಬಹುಶಃ ರಾಜ್ಯಪಾಲರಿಗೂ ಸಂದಿಗ್ಧ ಎದುರಾದಂತಿದೆ. ಮುಡಾ ಹಗರಣದಲ್ಲಿ ಯಾವುದೇ ತನಿಖಾ ವರದಿ ಇಲ್ಲದೆಯೂ, ಟಿ.ಜೆ. ಅಬ್ರಹಾಂ ನೀಡಿದ ದೂರಿನ ಮೇರೆಗೆ 24 ಗಂಟೆಗಳಲ್ಲೇ ಸಿದ್ದರಾಮಯ್ಯಗೆ ನೋಟಿಸ್ ನೀಡಿದ್ದರು ರಾಜ್ಯಪಾಲರು.
ಆದರೆ ಕುಮಾರಸ್ವಾಮಿ ವಿರುದ್ಧ ತನಿಖೆ ನಡೆಸಲು ಕೋರಿದ್ದಕ್ಕೆ ಅದೇ ರಾಜ್ಯಪಾಲರು ಅನುಮತಿ ನೀಡದೆ ಕುಳಿತದ್ದು ಈಗ ದೊಡ್ಡ ಪ್ರಶ್ನೆಯಾಗಿ ನಿಂತಿದೆ.
ಇಂಥ ಹೊತ್ತಲ್ಲಿ ಕುಮಾರಸ್ವಾಮಿ ವಿರುದ್ಧ ತನಿಖಾ ವರದಿ ಜೊತೆಗೆ ಚಾರ್ಜ್‌ಶೀಟ್ ಸಲ್ಲಿಕೆಗೆ ಅನುಮತಿ ನೀಡುವಂತೆ ಎಸ್‌ಐಟಿ ರಾಜ್ಯಪಾಲರಿಗೆ ಮನವಿ ಮಾಡಿರುವುದು, ರಾಜ್ಯಪಾಲರು ಏನು ಮಾಡಲಿದ್ದಾರೆ ಎಂಬುದು ಮುಖ್ಯವಾಗಲಿದೆ.
ಚಾರ್ಜ್‌ಶೀಟ್ ಸಲ್ಲಿಸಲು ರಾಜ್ಯಪಾಲರು ಅನುಮತಿ ನೀಡಿದರೆ ಕುಮಾರಸ್ವಾಮಿಗೂ ಕಂಟಕ ಎದುರಾಗುತ್ತದೆ.
ನಿಯಮ ಉಲ್ಲಂಘಿಸಿ ಶ್ರೀ ಸಾಯಿ ವೆಂಕಟೇಶ್ವರ ಮಿನರಲ್ಸ್ ಕಂಪೆನಿಗೆ ಗಣಿ ಗುತ್ತಿಗೆ ಮಂಜೂರು ಮಾಡಿರುವ ಆರೋಪದಡಿ ಎಚ್.ಡಿ. ಕುಮಾರಸ್ವಾಮಿ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಲು ಅನುಮತಿ ಕೋರಿ ಎಸ್‌ಐಟಿ ಮತ್ತೊಮ್ಮೆ ರಾಜ್ಯಪಾಲರಿಗೆ ಪತ್ರ ಬರೆದಿದೆ.
ಆ ಕೇಸಿನಲ್ಲಿ ಲಾಭ ಪಡೆದಿದ್ದ ಕಂಪೆನಿಯೇ ಬೋಗಸ್ ಆಗಿತ್ತು ಎಂಬುದು ಕುತೂಹಲಕರ. ಮೂಲತಃ ಆ ಕಂಪೆನಿಗೆ ಗಣಿಗಾರಿಕೆ ಜೊತೆಗೆ ಸಂಬಂಧವೇ ಇರಲಿಲ್ಲ ಎಂಬುದನ್ನು ತನಿಖಾಧಿಕಾರಿಗಳು ಪತ್ತೆ ಹಚ್ಚಿದ ನಂತರ ಅಕ್ರಮದ ಮತ್ತೊಂದು ಆಯಾಮ ಬೆಳಕಿಗೆ ಬಂದಿದೆ ಎಂದೂ ವರದಿಗಳಿವೆ.
ವಿನಯ್ ಗೋಯೆಲ್ ವಂಚಕ. ಆತ ಗಣಿಗೆ ಅರ್ಜಿಯನ್ನೇ ಹಾಕಿರಲಿಲ್ಲ. ಕುಮಾರಸ್ವಾಮಿ ಆತನಿಗೆ ಅನುಕೂಲ ಮಾಡಿಕೊಡಲು ಕಾನೂನುಬಾಹಿರ ಅನುಮತಿ ನೀಡಿದ್ದರು ಎಂದು ಮುಖ್ಯಮಂತ್ರಿಯವರ ಕಾನೂನು ಸಲಹೆಗಾರ ಎ.ಎಸ್. ಪೊನ್ನಣ್ಣ ಕೂಡ ಹೇಳಿದ್ದಾರೆ.
ಕುಮಾರಸ್ವಾಮಿ ವಿರುದ್ಧದ ಪ್ರಕರಣದ ಹಿನ್ನೆಲೆ
2007ರಲ್ಲಿ ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದ ಸಮಯದಲ್ಲಿ ಬಳ್ಳಾರಿಯ ಸಂಡೂರಿನಲ್ಲಿ ಶ್ರೀ ಸಾಯಿ ವೆಂಕಟೇಶ್ವರ ಮಿನರಲ್ಸ್ (ಎಸ್‌ಎಸ್‌ವಿಎಂ) ಕಂಪೆನಿಗೆ 550 ಹೆಕ್ಟೇರ್ ಭೂಮಿಯನ್ನು ಗಣಿ ನಿಯಮಗಳನ್ನು ಉಲ್ಲಂಘಿಸಿ ಮಂಜೂರು ಮಾಡಲಾಗಿದೆ ಎಂಬ ಆರೋಪವಿದೆ.
2011ರಲ್ಲಿ ಲೋಕಾಯುಕ್ತರಾಗಿದ್ದ ಎನ್. ಸಂತೋಷ್ ಹೆಗ್ಡೆ ಅವರು ಅಕ್ರಮ ಗಣಿಗಾರಿಕೆ ಕುರಿತು ಸಲ್ಲಿಸಿದ್ದ ವರದಿಯಲ್ಲಿ ನಿಯಮ ಉಲ್ಲಂಘನೆ ಬಗ್ಗೆ ಉಲ್ಲೇಖವಾಗಿತ್ತು.
ಆ ಉಲ್ಲೇಖ ಆಧರಿಸಿ ತನಿಖೆ ನಡೆಸಿದ್ದ ಲೋಕಾಯುಕ್ತ ಎಸ್‌ಐಟಿ, 2023ರ ನವೆಂಬರ್ 21ರಂದು ಕುಮಾರಸ್ವಾಮಿ ವಿರುದ್ಧ ತನಿಖೆ ನಡೆಸಲು ಅನುಮತಿ ಕೋರಿ ರಾಜ್ಯಪಾಲರಿಗೆ ಪತ್ರ ಬರೆದಿತ್ತು.
ರಾಜ್ಯಪಾಲರು ಜುಲೈ 29ರಂದು ಲೋಕಾಯುಕ್ತ ಎಸ್‌ಐಟಿಗೆ ಪತ್ರ ಬರೆದು ಕುಮಾರಸ್ವಾಮಿ ವಿರುದ್ಧದ ಆರೋಪಗಳಿಗೆ ಕೆಲ ಸ್ಪಷ್ಟನೆ ನೀಡುವಂತೆ ಕೇಳಿದ್ದರು.
ರಾಜ್ಯಪಾಲರು ಕೇಳಿದ್ದ ಸ್ಪಷ್ಟನೆಗಳಿಗೆ ಈಗ ಆಗಸ್ಟ್ 19ರಂದು ಲೋಕಾಯುಕ್ತ ಎಸ್‌ಐಟಿ ಮುಖ್ಯಸ್ಥರು ಉತ್ತರ ನೀಡಿ, ಕುಮಾರಸ್ವಾಮಿ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಲು ಮತ್ತೊಮ್ಮೆ ಅನುಮತಿ ಕೇಳಿದ್ದಾರೆ.
ಸಿದ್ದರಾಮಯ್ಯ ಅವರ ಮೇಲೆ ಖಾಸಗಿ ವ್ಯಕ್ತಿ ಕೊಟ್ಟಿರುವ ಆಧಾರ ರಹಿತ ದೂರಿನ ಆಧಾರದಲ್ಲಿ ನೋಟಿಸ್ ಜಾರಿ ಮಾಡಿರುವ ರಾಜ್ಯಪಾಲರು, ಕುಮಾರಸ್ವಾಮಿ ಬಗ್ಗೆ ಇಷ್ಟೆಲ್ಲಾ ತನಿಖೆ ನಡೆದು, ಸಾಕಷ್ಟು ದಾಖಲೆಗಳಿರುವಾಗಲೂ ಕಳೆದ ಹತ್ತು ತಿಂಗಳಿಂದ ಯಾಕೆ ತನಿಖೆ ನಡೆಸಲು ಅನುಮತಿ ನೀಡಿಲ್ಲ ಎಂಬುದು ಈಗ ಕಾಂಗ್ರೆಸ್ ಎತ್ತಿರುವ ಪ್ರಶ್ನೆ.
ನಿಯಮ ಉಲ್ಲಂಘಿಸಿ ಗಣಿ ಗುತ್ತಿಗೆ ಮಂಜೂರು ಮಾಡಿರುವ ಆರೋಪದಲ್ಲಿ ಕುಮಾರಸ್ವಾಮಿ ವಿರುದ್ಧ ಆರೋಪಪಟ್ಟಿ ಸಲ್ಲಿಸಲು ಅನುಮತಿ ನೀಡದ ರಾಜ್ಯಪಾಲರು ನನ್ನ ವಿರುದ್ಧ ಟಿ.ಜೆ. ಅಬ್ರಹಾಂ ತನಿಖೆಗೆ ಅನುಮತಿ ಕೇಳಿದ ತಕ್ಷಣ ಕೊಟ್ಟಿದ್ದಾರೆ. ಇಂಥ ತಾರತಮ್ಯ ಏಕೆ ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
ಈ ನಡುವೆ, ‘‘ನನ್ನ ವಿರುದ್ಧ ಇರುವ ಆರೋಪಕ್ಕೆ ರಾಜ್ಯಪಾಲರ ಪ್ರಾಸಿಕ್ಯೂಷನ್ ಅನುಮತಿಯೇ ಬೇಡ. ನನ್ನನ್ನು ಹೆದರಿಸಲು ತನಿಖೆಯ ಅನುಮತಿಗಾಗಿ ರಾಜ್ಯಪಾಲರಿಗೆ ದೂರು ಕೊಡಲಾಗಿದೆ’’ ಎಂದು ಕುಮಾರಸ್ವಾಮಿ ಹೇಳುತ್ತಿದ್ದಾರೆ.
ಕುಮಾರಸ್ವಾಮಿ ಹೇಳುತ್ತಿರುವುದು ಹೀಗೆ:
‘‘ಸಾಯಿ ವೆಂಕಟೇಶ್ವರ ಕೇಸ್ ತನಿಖೆ ಮಾಡಲು ಕೋರ್ಟ್ ಹೇಳಿದೆ. ಅಬ್ರಹಾಂ ಅವರು 2011ರಲ್ಲಿ ನನ್ನ ಮೇಲೆ, ಎಸ್.ಎಂ. ಕೃಷ್ಣ ಮತ್ತು ಧರಂ ಸಿಂಗ್ ಮೇಲೆ ಸುಪ್ರೀಂ ಕೋರ್ಟ್‌ಗೆ ದೂರು ಕೊಟ್ಟರು. ಎಸ್.ಎಂ. ಕೃಷ್ಣ ಕೇಸ್‌ಗೆ ಸ್ಟೇ ತಂದರು. ಧರಂ ಸಿಂಗ್ ಈಗ ಇಲ್ಲ. ಸುಪ್ರೀಂ ಕೋರ್ಟ್‌ನಲ್ಲಿ ನನ್ನ ವಿರುದ್ಧ ಎಸ್‌ಐಟಿ ತನಿಖೆಗೆ ಆದೇಶ ಮಾಡಲಾಗಿತ್ತು. ಎಸ್‌ಐಟಿ ತಂಡ 3 ತಿಂಗಳಲ್ಲಿ ತನಿಖಾ ವರದಿ ಸಲ್ಲಿಸಲು 2017ರಲ್ಲಿ ಸುಪ್ರೀಂ ಕೋರ್ಟ್ ಆದೇಶ ಮಾಡಿತ್ತು. ಈಗ 2024. ಸುಪ್ರೀಂ ಕೋರ್ಟ್ ಮುಂದೆ ನೀವು ಹೋಗಬೇಡಿ ಎಂದು ನಿಮ್ಮನ್ನು ಹಿಡಿದುಕೊಂಡಿರುವವರು ಯಾರು?’’ ಎಂದು ಕುಮಾರಸ್ವಾಮಿ ಕೇಳಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿಯವರ ಕಾನೂನು ಸಲಹೆಗಾರ ಎ.ಎಸ್. ಪೊನ್ನಣ್ಣ,
‘‘ಕುಮಾರಸ್ವಾಮಿ ವಿರುದ್ಧ ಗಂಭೀರ ಆರೋಪಗಳಿವೆ. ಕುಮಾರಸ್ವಾಮಿ ವಿರುದ್ಧ ತನಿಖೆ ನಡೆಸಲು ಲೋಕಾಯುಕ್ತ ಅನುಮತಿ ಕೇಳಿದೆ. ಇದನ್ನು ತಿರುಚಿ ಅವರು ಮಾತನಾಡುತ್ತಿದ್ದಾರೆ’’ ಎಂದು ಆರೋಪಿಸಿದ್ದಾರೆ.
‘‘ಭ್ರಷ್ಟಾಚಾರ ಆರೋಪ ಹೊತ್ತವರು ಕೇಂದ್ರ ಮಂತ್ರಿಯಾಗಿ ಮುಂದುವರಿಯಬಹುದೇ?’’ ಎಂದು ಪೊನ್ನಣ್ಣ ಪ್ರಶ್ನಿಸಿದ್ದಾರೆ.
‘‘ಕುಮಾರಸ್ವಾಮಿ ವಿರುದ್ಧ ಇಲ್ಲದ ಕ್ರಮ ನಮ್ಮ ವಿರುದ್ಧವೇಕೆ ರಾಜ್ಯಪಾಲರೇ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಪ್ರಶ್ನಿಸಿದ್ದಾರೆ.
ತನಿಖೆ ನಡೆಸಲು ಅನುಮತಿ ನೀಡಿರುವ ರಾಜ್ಯಪಾಲರ ಆದೇಶ ಪ್ರಶ್ನಿಸಿ ಸಿದ್ದರಾಮಯ್ಯ ಸಲ್ಲಿಸಿರುವ ರಿಟ್ ಅರ್ಜಿ ವಿಚಾರಣೆ ವೇಳೆ ಸೋಮವಾರ, ರಾಜ್ಯಪಾಲರ ಮುಂದೆ ಯಾವುದೇ ತನಿಖೆಗೆ ಅನುಮತಿಯ ಅರ್ಜಿಗಳು ಬಾಕಿ ಇಲ್ಲ ಎಂದು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಹೇಳಿದ್ದರು. ಅದರ ನಡುವೆಯೇ ಲೋಕಾಯುಕ್ತ ಎಸ್‌ಐಟಿ ಕುಮಾರಸ್ವಾಮಿ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಸಲು ರಾಜ್ಯಪಾಲರ ಅನುಮತಿ ಕೇಳಿರುವುದು ಮಹತ್ವ ಪಡೆದಿದೆ.
ಈಗ, ಕುಮಾರಸ್ವಾಮಿ ವಿರುದ್ಧ ಆರೋಪಪಟ್ಟಿ ಸಲ್ಲಿಸಲು ಲೋಕಾಯುಕ್ತ ಎಸ್‌ಐಟಿ ಮನವಿ ಮಾಡಿರುವುದಕ್ಕೆ ರಾಜ್ಯಪಾಲರು ಹೇಗೆ ಪ್ರತಿಕ್ರಿಯಿಸಲಿದ್ದಾರೆ ಎಂಬುದು ಕುತೂಹಲಕರ ವಿಚಾರ.
ಇದೆಲ್ಲವೂ ಪಡೆಯುತ್ತಿರುವ ರಾಜಕೀಯ ತಿರುವುಗಳು ಕೂಡ ಅಷ್ಟೇ ಕುತೂಹಲಕಾರಿಯಾಗಿರಲಿವೆ.