ನಾಪೊಕ್ಲುವಿನಲ್ಲಿ 'ಕುಂಡ್ಯೋಳಂಡ ಹಾಕಿ ಕಾರ್ನಿವಲ್'

Update: 2024-03-27 05:08 GMT

ಮಡಿಕೇರಿ: ದೇಶದ ಹಾಕಿ ಕ್ರೀಡೆಗೆ ಪುಟ್ಟ ಜಿಲ್ಲೆ ಕೊಡಗು ಹಲವು ಕೊಡುಗೆಗಳನ್ನು ನೀಡಿದೆ. ಅದರಲ್ಲೂ ವಿಶೇಷವಾಗಿ ಕೊಡವ ಜನಾಂಗದವರು 50ಕ್ಕೂ ಹೆಚ್ಚು ಅಂತರ್‌ರಾಷ್ಟ್ರೀಯ ಹಾಕಿ ಕ್ರೀಡಾಪಟುಗಳನ್ನು ಜಗತ್ತಿಗೆ ಪರಿಚಯಿಸಿದ್ದಾರೆ.

ಜಿಲ್ಲೆಯಲ್ಲಿ ನಡೆಯುವ ಕೊಡವ ಕುಟುಂಬಗಳ ನಡುವಿನ ಕೌಟುಂಬಿಕ ಹಾಕಿ ಉತ್ಸವ ಈ ಬಾರಿ ಮಾ.30 ರಿಂದ ಎ.28ರವರೆಗೆ ಕುಂಡ್ಯೋಳಂಡ ಕುಟುಂಬಸ್ಥರು ನಾಪೊಕ್ಲುವಿನ ಜನರಲ್ ತಿಮ್ಮಯ್ಯ ಮೈದಾನದಲ್ಲಿ ಆಯೋಜಿಸಿದ್ದಾರೆ. ಆದರೆ, ಈ ಬಾರಿಯ ಹಾಕಿ ಉತ್ಸವ ‘ಕುಂಡ್ಯೋಳಂಡ ಹಾಕಿ ಕಾರ್ನಿವಲ್’ ಎಂಬ ಹೆಸರಿನಿಂದ ನಡೆಯಲಿದ್ದು, ಪಂದ್ಯಾವಳಿಯಲ್ಲಿ 360 ತಂಡಗಳು ಭಾಗವಹಿಸುತ್ತಿದೆ.

ಈ ಹಾಕಿ ಹಬ್ಬಕ್ಕೆ ಅಂದಾಜು 2 ಕೋಟಿ ರೂ. ವೆಚ್ಚ ಆಗಲಿದ್ದು, ಕುಂಡ್ಯೋಳಂಡ ಕುಟುಂಬಸ್ಥರಿಂದ ಈಗಾಗಲೇ 50 ಲಕ್ಷ ರೂ. ಸಂಗ್ರಹಿಸಲಾಗಿದೆ. ಕಳೆದ ವರ್ಷದ ನಾಪೊಕ್ಲುವಿನಲ್ಲಿ ನಡೆದ ಅಪ್ಪಚಟ್ಟೋಳಂಡ ಹಾಕಿ ಹಬ್ಬಕ್ಕೆ ಕುಂಡ್ಯೋಳಂಡ ಕುಟುಂಬಸ್ಥರು ವೀರಾಜಪೇಟೆ ಶಾಸಕ ಎ.ಎಸ್.ಪೊನ್ನಣ್ಣ ಅವರ ನೇತೃತ್ವದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ್ದರು. ಅದರಂತೆಯೇ, ರಾಜ್ಯ ಸರಕಾರ 1 ಕೋಟಿ ರೂ. ಅನುದಾನ ನೀಡಿತ್ತು. ಹಾಗಾಗಿ ಕುಂಡ್ಯೋಳಂಡ ಕಾರ್ನಿವಲ್‌ಗೆ ಶೀಘ್ರದಲ್ಲೇ ಅನುದಾನ ಬಿಡುಗಡೆಯ ನಿರೀಕ್ಷೆಯಲ್ಲಿ ಕುಟುಂಬಸ್ಥರು ಇದ್ದಾರೆ.

ಹಾಕಿ ಹಬ್ಬದಲ್ಲಿ ಪಳಂಗಂಡ ಕಿಂಗ್: 1,997ರಲ್ಲಿ ಆರಂಭಗೊಂಡಿರುವ ಕೊಡವ ಕುಟುಂಬಗಳ ನಡುವಿನ ಹಾಕಿ ಉತ್ಸವದಲ್ಲಿ ಇದುವರೆಗೆ 5 ಬಾರಿ ಚಾಂಪಿಯನ್ ಪಟ್ಟವನ್ನು ಅಲಂಕರಿಸಿರುವ ಕುಟುಂಬ ಎಂಬ ಹೆಗ್ಗಳಿಕೆ ಪಳಂಗಂಡ ಕುಟುಂಬಸ್ಥರು ಪಾತ್ರರಾಗಿದ್ದಾರೆ. ಮೂರು ಬಾರಿ ಪಳಂಗಂಡ ತಂಡವು ರನ್ನರ್ ಅಪ್ ಪ್ರಶಸ್ತಿಯನ್ನು ಪಡೆದಿದೆ. ಈ ಬಾರಿಯ ಹಾಕಿ ಹಬ್ಬದಲ್ಲೂ ಪ್ರಶಸ್ತಿ ಗೆಲ್ಲುವ ಅಚ್ಚುಮೆಚ್ಚಿನ ತಂಡಗಳಲ್ಲಿ ಪಳಂಗಂಡ ತಂಡ ಮುಂದಿದೆ.

ತಂಡಗಳಾದ ಕೂತಂಡ ನಾಲ್ಕು ಬಾರಿ, ಕಲಿಯಂಡ, ಕುಲ್ಲೇಟೀರ, ನೆಲ್ಲಮಕ್ಕಡ ಕುಟಂಬಸ್ಥರು ತಲಾ ಮೂರು ಬಾರಿ, ಅಂಜಪರವಂಡ, ಚೇಂದಂಡ ತಲಾ ಎರಡು ಬಾರಿ ಹಾಗೂ ಮಂಡೇಪಂಡ, ಕುಪ್ಪಂಡ (ಕೈಕೇರಿ) ತಲಾ ಒಂದು ಬಾರಿ ಚಾಂಪಿಯನ್ ಪಟ್ಟಯನ್ನು ಅಲಂಕರಿಸಿದೆ. ನೆಲ್ಲಮಕ್ಕಡ, ಕೂತಂಡ ತಲಾ ಮೂರು ಬಾರಿ, ಕಲಿಯಂಡ ಎರಡು, ಕುಲ್ಲೇಟೀರ, ಚೇಂದಂಡ ಕುಟುಂಬಗಳು ತಲಾ ಒಂದು ಬಾರಿ ರನ್ನರ್ ಅಪ್ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ.

ಬಹುಮಾನ ವಿವರ: ಕುಂಡ್ಯೋಳಂಡ ಹಾಕಿ ಕಾರ್ನಿವಲ್‌ನಲ್ಲಿ ಚಾಂಪಿಯನ್ ಆಗುವ ಕೊಡವ ಕುಟುಂಬ ತಂಡಕ್ಕೆ 4 ಲಕ್ಷ ರೂ. ನಗದು ಬಹುಮಾನ ಸಿಗಲಿದೆ. ದ್ವಿತೀಯ 3 ಲಕ್ಷ ರೂ., ತೃತೀಯ 2 ಲಕ್ಷ ರೂ. ಮತ್ತು 4ನೇ ಸ್ಥಾನದ ತಂಡಕ್ಕೆ 1 ಲಕ್ಷ ರೂ. ನಗದು ನೀಡಲಾಗುವುದು. ಕೊಡವ ಹಾಕಿ ಅಕಾಡಮಿ ಕಳೆದ ವರ್ಷದಿಂದ ಒಂದು ಕೆ.ಜಿ. ಬೆಳ್ಳಿಯ ರೋಲಿಂಗ್ ಟ್ರೋಫಿ ನೀಡಿದೆ. ಈ ಬಾರಿಯ ಕುಂಡ್ಯೋಳಂಡ ಹಾಕಿ ಹಬ್ಬದಲ್ಲಿ ‘ಮ್ಯಾನ್ ಆಫ್ ದಿ ಫೆಸ್ಟಿವಲ್’ ಆಟಗಾರನಿಗೆ ‘ಏತರ್’ ಸ್ಕೂಟರ್ ಸಂಸ್ಥೆ ಇಲೆಕ್ಟ್ರಿಕ್ ಸ್ಕೂಟರ್ ಬಹುಮಾನವಾಗಿ ನೀಡಲಿದೆ.

ಹಾಕಿ ಜನಕ ಪಾಂಡಂಡ ಕುಟ್ಟಪ್ಪ

ಪಾಂಡಂಡ ಕುಟ್ಟಪ್ಪ ಕೊಡವ ಕುಟುಂಬಗಳ ನಡುವಿನ ಕೌಟುಂಬಿಕ ಹಾಕಿ ಉತ್ಸವ ಜನಕ ಎಂದೇ ಪ್ರಸಿದ್ಧರಾಗಿದ್ದಾರೆ. ಲಿಮ್ಕಾ ಬುಕ್ ಆಫ್ ರೆಕಾರ್ಡ್‌ನಲ್ಲಿ ಸ್ಥಾನ ಪಡೆದ ಅವರು, 1,997ರಲ್ಲಿ ತಮ್ಮ ಸಹೋದರರೊಂದಿಗೆ ಸೇರಿ ಕರಡದಲ್ಲಿ ಮೊದಲ ಬಾರಿಗೆ ಕೊಡವ ಕುಟುಂಬ ತಂಡಗಳ ನಡುವೆ ‘ಹಾಕಿ ನಮ್ಮೆ’ಯನ್ನು ಆಯೋಜಿಸಿದ್ದರು.

1,997ರಲ್ಲಿ ಮೊದಲ ಬಾರಿಗೆ ನಡೆದ ಕೊಡವ ಕುಟುಂಬಗಳ ಹಾಕಿ ಉತ್ಸವದಲ್ಲಿ 60 ತಂಡಗಳು ಭಾಗವಹಿಸಿತ್ತು. ಪ್ರಕೃತಿ ವಿಕೋಪ, ಕೋವಿಡ್ ಕಾರಣಗಳಿಂದ 2018ರಿಂದ 2021ರವರೆಗೆ ಕೊಡವ ಹಾಕಿ ಉತ್ಸವ ನಡೆದಿರಲಿಲ್ಲ. 2022ರಲ್ಲಿ ಪುನಃ ‘ಕುಲ್ಲೇಟೀರ ಕಪ್’ ಮೂಲಕ ಹಾಕಿ ಉತ್ಸವಕ್ಕೆ ಚಾಲನೆ ನೀಡಲಾಗಿತ್ತು. 25ನೇ ವರ್ಷದ ಕೊಡವ ಕುಟುಂಬಗಳ ನಡುವಿನ ಹಾಕಿಹಬ್ಬ ನಡೆಸಲು ಮುದ್ದಂಡ ಕುಟುಂಬಸ್ಥರಿಗೆ ಅವಕಾಶ ನೀಡಲಾಗಿದ್ದು, 2025ರಲ್ಲಿ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜು ಮೈದಾನದಲ್ಲಿ ನಡೆಯಲಿದೆ ಎಂದು ತಿಳಿದು ಬಂದಿದೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ಕೆ.ಎಂ.ಇಸ್ಮಾಯಿಲ್ ಕಂಡಕರೆ

contributor

Similar News