ಕರ್ನಾಟಕ ವೈದ್ಯಕೀಯ ಪರಿಷತ್ತು ನ್ಯಾಯಯುತವಾಗಿರಲಿ

Update: 2024-07-09 05:50 GMT

ನಮ್ಮ ಆಗ್ರಹಗಳು

ಕರ್ನಾಟಕ ವೈದ್ಯಕೀಯ ಪರಿಷತ್ತು ಮತ್ತು ಇತರ ಸಾಂವಿಧಾನಿಕ ಸಂಸ್ಥೆಗಳಿಗೆ ಕಾಲಬದ್ಧವಾಗಿ ನ್ಯಾಯಯುತ ಚುನಾವಣೆಗಳು ಮತ್ತು ನಾಮನಿರ್ದೇಶನಗಳಾಗಬೇಕು, ಅಧಿಕಾರದಲ್ಲಿರುವ ಸದಸ್ಯರು ಪಟ್ಟಭದ್ರರಾಗಿ ಕಾನೂನನ್ನು ದುರ್ಬಳಕೆ ಮಾಡಿ ಮುಂದುವರಿಯಲು ಅವಕಾಶವಿರಕೂಡದು.

ಕರ್ನಾಟಕ ವೈದ್ಯಕೀಯ ಪರಿಷತ್ತು ಮತ್ತು ಇತರ ಸಂಸ್ಥೆಗಳಿಗೆ ನಾಮನಿರ್ದೇಶನ ಮಾಡುವಾಗ ಮಹಿಳೆಯರು, ಅಲ್ಪಸಂಖ್ಯಾತರು ಮತ್ತು ಪರಿಶಿಷ್ಟ ಜಾತಿ ಹಾಗೂ ವರ್ಗಗಳವರಿಗೆ ಸೂಕ್ತ ಪ್ರಾತಿನಿಧ್ಯ ದೊರೆಯುವುದನ್ನು ಕಾನೂನಿನ ತಿದ್ದುಪಡಿಗಳ ಮೂಲಕ ಕಡ್ಡಾಯಗೊಳಿಸಬೇಕು; ರಾಜಕೀಯವಾಗಿ ಪ್ರಬಲವಾಗಿರುವ ಸಮುದಾಯಗಳವರನ್ನಷ್ಟೇ ಇಂಥ ಸಂಸ್ಥೆಗಳಲ್ಲೂ ತುಂಬಿಸುವುದು ಅಪೇಕ್ಷಣೀಯವಲ್ಲ, ನ್ಯಾಯಯುತವಲ್ಲ.

ಕರ್ನಾಟಕ ವೈದ್ಯಕೀಯ ಪರಿಷತ್ತಿನಲ್ಲಿ ದೂರುಗಳ ವಿಚಾರಣೆಯಾಗುವಾಗ ಜನಸಾಮಾನ್ಯರ ಪ್ರತಿನಿಧಿಯಾಗಿ ನಿವೃತ್ತ ನ್ಯಾಯಾಧೀಶರು, ವಿಶ್ರಾಂತ ಕುಲಪತಿಗಳು ಅಥವಾ ತತ್ಸಮಾನರಾದವರು ವೀಕ್ಷಕರಾಗುವಂತೆ ಕಾಯ್ದೆಯಲ್ಲಿ ಅವಕಾಶ ಕಲ್ಪಿಸಬೇಕು.

ರಾಜ್ಯದ ಎಲ್ಲಾ ಆಧುನಿಕ ವೈದ್ಯರನ್ನು ನೋಂದಾಯಿಸಿಕೊಂಡು, ವೃತ್ತಿ ಸಂಹಿತೆಯ ಉಲ್ಲಂಘನೆ ಹಾಗೂ ಚಿಕಿತ್ಸೆಯ ಲೋಪಗಳ ಬಗ್ಗೆ ಜನಸಾಮಾನ್ಯರ ದೂರುಗಳನ್ನು ವಿಚಾರಣೆಗೊಳಪಡಿಸಿ ಸೂಕ್ತ ಕ್ರಮಗಳನ್ನು ಕೈಗೊಳ್ಳುವ ಅಧಿಕಾರವನ್ನು ಹೊಂದಿರುವ ಸ್ವಾಯತ್ತ, ಅರೆ-ನ್ಯಾಯಿಕ, ಸಾಂವಿಧಾನಿಕ ಸಂಸ್ಥೆಯಾಗಿರುವ ಕರ್ನಾಟಕ ವೈದ್ಯಕೀಯ ಪರಿಷತ್ತು (ಕೆಎಂಸಿ) 13 ವರ್ಷಗಳ ಬಳಿಕ ಈಗ ತಾನೇ ಹೊಸ ಸದಸ್ಯರು ಹಾಗೂ ಅಧ್ಯಕ್ಷ, ಉಪಾಧ್ಯಕ್ಷರನ್ನು ಪಡೆದಿದೆ. ರಾಜ್ಯದ ವೈದ್ಯರಿಂದಲೇ ಚುನಾಯಿಸಲ್ಪಡುವ 12 ವೈದ್ಯರು ಹಾಗೂ ಸರಕಾರದಿಂದ ನಾಮ ನಿರ್ದೇಶನಗೊಳ್ಳುವ ಐದು ಸದಸ್ಯರನ್ನು ಹೊಂದಿರುವ ಕೆಎಂಸಿಯ ಚುನಾವಣೆಗಳು ಒಂದು ದಶಕದಷ್ಟು ತಡವಾದದ್ದು, ನಾಮನಿರ್ದೇಶನಗಳನ್ನು ಮಾಡುವಾಗ ಕಾಯ್ದೆಯನ್ನು ಪಾಲಿಸದೇ ಇದ್ದದ್ದು, ಇವೆಲ್ಲಕ್ಕೂ ರಾಜ್ಯದ ಕೆಲವು ವೈದ್ಯರು ಎರಡೆರಡು ಉಚ್ಚ ನ್ಯಾಯಾಲಯಗಳಲ್ಲಿ ಸುದೀರ್ಘವಾದ ಕಾನೂನು ಹೋರಾಟಗಳನ್ನು ನಡೆಸಬೇಕಾಗಿ ಬಂದದ್ದು ಎಲ್ಲಾ ಪ್ರಜ್ಞಾವಂತರನ್ನೂ ಕಾಡಬೇಕಾದ ಸಂಗತಿಯಾಗಿದೆ. ಇದೇ ಕೆಎಂಸಿಯೆದುರು ವೈದ್ಯಕೀಯ ನಿರ್ಲಕ್ಷ್ಯದ ಮುನ್ನೂರಕ್ಕೂ ಹೆಚ್ಚು ಪ್ರಕರಣಗಳು ವರ್ಷಗಟ್ಟಲೆಯಿಂದ ವಿಚಾರಣೆಗೆ ಬಾಕಿಯಿದ್ದು, ಈ ಹಿಂದಿನ ಸದಸ್ಯರು ವಿಚಾರಣೆಯನ್ನು ಮುಂದೂಡುತ್ತಲೇ ಹೋದುದರಿಂದ ಸಂತೃಸ್ತರಿಗೆ ಇದುವರೆಗೂ ನ್ಯಾಯ ದೊರೆತಿಲ್ಲ ಎನ್ನುವುದು ಇತ್ತೀಚೆಗೆ ಪತ್ರಿಕೆಯಲ್ಲೇ ವರದಿಯಾಗಿರುವುದು ಈ ಸಾಂವಿಧಾನಿಕ ಸಂಸ್ಥೆಯು ನ್ಯಾಯಬದ್ಧವಾಗಿರಬೇಕಾದ ಮಹತ್ವವನ್ನು ತೋರಿಸುತ್ತದೆ.

ಹೀಗೆ ವೈದ್ಯರಿಗಷ್ಟೇ ಅಲ್ಲ, ಜನರಿಗೂ ನ್ಯಾಯವೊದಗಿಸಬೇಕಾದ ಗುರುತರವಾದ ಜವಾಬ್ದಾರಿಯನ್ನು ಹೊಂದಿರುವ ವೈದ್ಯಕೀಯ ಪರಿಷತ್ತು ನ್ಯಾಯಬದ್ಧವಾಗಿ, ಪ್ರಾಮಾಣಿಕ ಸದಸ್ಯರನ್ನು ಹೊಂದಿರುವುದು ಅತ್ಯಗತ್ಯವಾಗಿರುವುದರಿಂದ ಇನ್ನಾದರೂ ಇಂಥ ಸಾಂವಿಧಾನಿಕ ಸಂಸ್ಥೆಗಳ ಬಗ್ಗೆ ಸರಕಾರವು ಹೆಚ್ಚು ಮುತುವರ್ಜಿಯನ್ನು ವಹಿಸಬೇಕೆಂದು ನಾವು ಒತ್ತಾಯಿಸುತ್ತಿದ್ದೇವೆ.

ಕೆಎಂಸಿಯಲ್ಲಿ 2011ರಲ್ಲಿ ಚುನಾಯಿತರಾಗಿ ಅಧಿಕಾರದಲ್ಲಿದ್ದವರು ಕಾಲಕ್ಕೆ ಸರಿಯಾಗಿ ಚುನಾವಣೆ ನಡೆಸದಿದ್ದುದರಿಂದ, ರಾಜ್ಯ ಸರಕಾರವೂ ನಿರಾಸಕ್ತವಾಗಿದ್ದುದರಿಂದ, ಕೆಲವು ವೈದ್ಯರು ಚುನಾವಣೆಗಾಗಿ ಆಗ್ರಹಿಸಿ ರಾಜ್ಯ ಉಚ್ಚ ನ್ಯಾಯಾಲಯದ ಮೊರೆ ಹೋಗಬೇಕಾಯಿತು. ಅದನ್ನು ಮನ್ನಿಸಿ ಚುನಾವಣೆ ನಡೆಸುವಂತೆ ನ್ಯಾಯಾಲಯವು ಆದೇಶಿಸಿದರೂ ಕೆಎಂಸಿಯ ಪದಾಧಿಕಾರಿಗಳು, ರಿಜಿಸ್ಟ್ರಾರ್ ಮತ್ತು ಸರಕಾರ ಎಲ್ಲರೂ ಅದನ್ನು ಕಡೆಗಣಿಸಿ ಚುನಾವಣೆ ನಡೆಸಲಿಲ್ಲ, ಆಗ ಆ ವೈದ್ಯರು ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಬೇಕಾಯಿತು. ಕೊನೆಗೆ ಉಚ್ಚ ನ್ಯಾಯಾಲಯದ ಕಟ್ಟಪ್ಪಣೆಯ ಮೇರೆಗೆ ಜನವರಿ 2020ರಲ್ಲಿ ಚುನಾವಣೆಗಳು ನಡೆದವು. ಆದರೆ ಪಟ್ಟಭದ್ರರಾಗಿ ಕುಳಿತಿದ್ದವರು ಹೊಸ ಸದಸ್ಯರು ಅಧಿಕಾರ ವಹಿಸದಂತೆ ಕಲಬುರ್ಗಿ ಪೀಠದಿಂದ ತಡೆಯಾಜ್ಞೆ ತಂದರು. ಅದನ್ನು ವಿರೋಧಿಸಿ ಮತ್ತೆ ಹೋರಾಡಬೇಕಾಯಿತು. ಆಗಲೂ ಸರಕಾರವು ವಿಶೇಷ ಆಸಕ್ತಿಯನ್ನೇನೂ ತೋರಿಸಲಿಲ್ಲ. ಅಂತೂ ಕೊನೆಗೆ ನವೆಂಬರ್ 2023ರಲ್ಲಿ, ಚುನಾವಣೆಗಳಾಗಿ ಸುಮಾರು ನಾಲ್ಕು ವರ್ಷಗಳ ಬಳಿಕ, ಮಾನ್ಯ ನ್ಯಾಯಾಲಯವು ತಡೆಯಾಜ್ಞೆ ತೆರವುಗೊಳಿಸಿ ಚುನಾಯಿತ ಸದಸ್ಯರು ಅಧಿಕಾರ ವಹಿಸಿಕೊಳ್ಳುವಂತಾಯಿತು.

ಹೊಸ ಸದಸ್ಯರು ಬರುವವರೆಗೆ ಹಳಬರು ಮುಂದುವರಿಯುತ್ತಾರೆ ಎಂದು ಕೆಎಂಸಿಯ ಕಾಯ್ದೆಯ ಐದನೇ ಕಂಡಿಕೆಯಲ್ಲಿ ನೀಡಿರುವ ತಾತ್ಕಾಲಿಕ ಅವಕಾಶವನ್ನೇ ದುರುಪಯೋಗಿಸಿಕೊಂಡು, ಹೊಸ ಸದಸ್ಯರೇ ಬಾರದಂತೆ ತಡೆದು ಹಳಬರೇ ಹದಿಮೂರು ವರ್ಷಗಳ ಕಾಲ ಮುಂದುವರಿಯಲು ಸಾಧ್ಯವಾದುದು ಸಾಂವಿಧಾನಿಕ ಸಂಸ್ಥೆಯಲ್ಲಿ ಕಾನೂನಿಗೆ ಆಗಿರುವ ಅಪಚಾರವಾಗಿದ್ದು, ಇನ್ನೆಂದಿಗೂ ಇಂಥವು ಪುನರಾವರ್ತನೆಯಾಗದಂತೆ ತಡೆಯಬೇಕು, ಅದಕ್ಕಾಗಿ ಕಾನೂನಿನಲ್ಲಿ ಸೂಕ್ತ ತಿದ್ದುಪಡಿಗಳನ್ನು ಮಾಡಲೇಬೇಕು.

ವೈದ್ಯಕೀಯ ಪರಿಷತ್ತಿಗೆ ಐವರು ಸದಸ್ಯರನ್ನು ರಾಜ್ಯ ಸರಕಾರವು ನಾಮನಿರ್ದೇಶನ ಮಾಡುವಾಗ ಚುನಾಯಿತ ಸದಸ್ಯರಲ್ಲಿ ಮಹಿಳೆಯರು ಹಾಗೂ ಇತರ ವರ್ಗಗಳವರು ಸ್ಥಾನವನ್ನು ಪಡೆದಿರದಿದ್ದಲ್ಲಿ ಆ ವರ್ಗಗಳವರಿಗೆ ಪ್ರಾತಿನಿಧ್ಯ ನೀಡುವುದನ್ನು ಪರಿಗಣಿಸಬೇಕು ಎಂದು ವೈದ್ಯಕೀಯ ನೋಂದಣಿ ಕಾಯ್ದೆಯ ಕಂಡಿಕೆ 3(2)(ಡಿ)ಯಲ್ಲಿ ಸ್ಪಷ್ಟವಾಗಿ ಹೇಳಿದೆ. ಆದರೆ ಜನವರಿ 2020ರಲ್ಲಿ ನಡೆದ ಚುನಾವಣೆಗಳಿಗೆ ಮೂರು ದಿನ ಮೊದಲೇ ರಾಜ್ಯ ಸರಕಾರವು ಐವರು ಸದಸ್ಯರನ್ನು ನಾಮ ನಿರ್ದೇಶನ ಮಾಡಿತ್ತು, ಅವರೆಲ್ಲರೂ ಗಂಡಸರೇ ಆಗಿದ್ದು, ನಾಲ್ವರು ಮೇಲ್ಜಾತಿಗಳವರಾಗಿದ್ದರು.

ಈ ನಾಮನಿರ್ದೇಶನಗಳನ್ನು ಮಾಡುವಾಗ ಮಹಿಳೆಯರು, ಅಲ್ಪಸಂಖ್ಯಾತರು ಹಾಗೂ ಪರಿಶಿಷ್ಟ ಜಾತಿ ಹಾಗೂ ವರ್ಗಗಳವರಿಗೆ ಪ್ರಾತಿನಿಧ್ಯ ನೀಡಬೇಕೆಂಬ ಕಾನೂನಿನ ಆಶಯವನ್ನು ಕಡೆಗಣಿಸಲಾಗಿದೆ ಎಂದು ಸಲ್ಲಿಸಿದ್ದ ಅರ್ಜಿಯನ್ನು ಮಾನ್ಯ ಮಾಡಿದ ಉಚ್ಚ ನ್ಯಾಯಾಲಯದ ಸೂಚನೆಯ ಮೇರೆಗೆ ಆ ಐದು ನಾಮಕರಣಗಳು ಅದೇ ವರ್ಷ ರದ್ದಾಗಿದ್ದವು. ಹೀಗೆ ರದ್ದಾದುದನ್ನು ಕೂಡ ಕಲಬುರ್ಗಿ ಪೀಠದೆದುರು ಪ್ರಶ್ನಿಸಲಾಗಿತ್ತು, ಆದರೆ ನ್ಯಾಯಾಲಯವು ಆ ಅರ್ಜಿಯನ್ನು ವಜಾ ಮಾಡಿತ್ತು.

ಹೀಗೆ ರದ್ದಾದ ಐದು ಸ್ಥಾನಗಳ ನಾಮನಿರ್ದೇಶನವನ್ನು ಕೂಡಲೇ ಮಾಡಬೇಕು, ಮಹಿಳೆಯರು, ಅಲ್ಪಸಂಖ್ಯಾತರು ಹಾಗೂ ಪರಿಶಿಷ್ಟ ಜಾತಿ ಹಾಗೂ ವರ್ಗಗಳವರಿಗೆ ಪರಿಷತ್ತಿನಲ್ಲಿ ಪ್ರಾತಿನಿಧ್ಯ ನೀಡಬೇಕು ಎಂದು ನಿರಂತರವಾಗಿ ಸರಕಾರವನ್ನು ಒತ್ತಾಯಿಸಲಾಗಿತ್ತು. ನವೆಂಬರ್ 2023ರಲ್ಲಿ ಚುನಾವಣೆಗಳು ಊರ್ಜಿತಗೊಂಡ ಬಳಿಕವೂ ಸರಕಾರವು ಈ ನಾಮನಿರ್ದೇಶನಗಳನ್ನು ಮಾಡಲು ತಡಮಾಡಿದಾಗ ಮತ್ತೆ ಇದೇ ಮಾರ್ಚ್‌ನಲ್ಲಿ ಉಚ್ಚ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲಾಗಿತ್ತು. ಅಂತೂ ಜೂನ್ ಮೊದಲ ವಾರದಲ್ಲಿ ಸರಕಾರವು ನಾಲ್ವರು ವೈದ್ಯರನ್ನು ನಾಮಕರಣ ಮಾಡಿತು, ಓರ್ವ ಮಹಿಳಾ ವೈದ್ಯರಿಗಷ್ಟೇ ಅವಕಾಶ ದೊರೆತುದು ಬಿಟ್ಟರೆ ಅಲ್ಪಸಂಖ್ಯಾತ ಹಾಗೂ ಪರಿಶಿಷ್ಟ ಜಾತಿ ಹಾಗೂ ವರ್ಗಗಳವರನ್ನು ಮತ್ತೆ ಕಡೆಗಣಿಸಲಾಯಿತು.

ಇಂದು ರಾಜಕೀಯವಾಗಿ ಉನ್ನತ ಅಧಿಕಾರವನ್ನು ಪಡೆದು ಪ್ರಬಲರಾಗಿರುವ ಸಮುದಾಯಗಳವರು ಎಲ್ಲಾ ಪ್ರಮುಖ ಅಧಿಕಾರಯುಕ್ತ ಸ್ಥಾನಗಳಲ್ಲಿ ತಮ್ಮ ಸಮುದಾಯಗಳವರನ್ನೇ ನಿಯುಕ್ತಿಗೊಳಿಸುತ್ತಿರುವುದು ಮತ್ತು ರಾಜಕೀಯ ಅಧಿಕಾರವನ್ನು ಪಡೆಯುವ ಅವಕಾಶಗಳಿಂದ ಮೊದಲೇ ವಂಚಿತರಾಗಿರುವ ಅಲ್ಪಸಂಖ್ಯಾತರು ಮತ್ತು ಪರಿಶಿಷ್ಟ ಜಾತಿ ಹಾಗೂ ವರ್ಗಗಳವರನ್ನು ಪ್ರಮುಖ ನೇಮಕಾತಿಗಳಿಂದ ಹೊರಗಿಡುತ್ತಿರುವುದು ಸಂವಿಧಾನದ ಹಾಗೂ ಕಾನೂನುಗಳ ಆಶಯಗಳಿಗೆ ಮಾಡುತ್ತಿರುವ ಅಪಚಾರವಾಗಿದೆ, ಅನ್ಯಾಯವಾಗಿದೆ. ಆದ್ದರಿಂದ ಕಾಯ್ದೆಯ ಕಂಡಿಕೆ 3(2)(ಡಿ)ಯಲ್ಲಿ ಮಹಿಳೆಯರು ಮತ್ತು ಇತರ ವರ್ಗಗಳವರು ಎಂದಿರುವಲ್ಲಿ ಮಹಿಳೆಯರು, ಅಲ್ಪಸಂಖ್ಯಾತರು ಮತ್ತು ಪರಿಶಿಷ್ಟ ಜಾತಿ ಹಾಗೂ ವರ್ಗಗಳವರ ಪ್ರಾತಿನಿಧ್ಯ ಎಂದು ಸ್ಪಷ್ಟವಾದ ತಿದ್ದುಪಡಿಯನ್ನು ಮಾಡಬೇಕೆಂದು ನಾವು ಆಗ್ರಹಿಸುತ್ತೇವೆ.

ಹಾಗೆಯೇ, ಇತರ ಎಲ್ಲಾ ನಿಗಮಗಳು, ಮಂಡಳಿಗಳು, ಅಕಾಡಮಿಗಳು, ವಿಶ್ವವಿದ್ಯಾನಿಲಯದ ಹುದ್ದೆಗಳು ಮುಂತಾದವುಗಳ ನೇಮಕಾತಿಗಳಲ್ಲೂ ಮಹಿಳೆಯರು, ಅಲ್ಪ ಸಂಖ್ಯಾತರು ಮತ್ತು ಪರಿಶಿಷ್ಟ ಜಾತಿ ಮತ್ತು ವರ್ಗಗಳವರಿಗೆ ಪ್ರಾತಿನಿಧ್ಯ ನೀಡಬೇಕೆಂದು ಸ್ಪಷ್ಟವಾದ ಕಾನೂನುಗಳನ್ನು ಮಾಡಬೇಕು ಮತ್ತು ಅವನ್ನು ತಪ್ಪದೇ ಪಾಲಿಸಬೇಕು ಎಂದು ಆಗ್ರಹಿಸುತ್ತೇವೆ.

ವೈದ್ಯಕೀಯ ಪರಿಷತ್ತು ವೃತ್ತಿ ಸಂಹಿತೆ ಉಲ್ಲಂಘನೆ ಹಾಗೂ ಚಿಕಿತ್ಸೆಗಳ ಲೋಪಗಳ ಬಗ್ಗೆ ವಿಚಾರಣೆ ನಡೆಸುವ ಸಂಸ್ಥೆಯಾಗಿರುವುದರಿಂದ ಅದರ ವಿಶ್ವಾಸಾರ್ಹತೆಯನ್ನು ಹೆಚ್ಚಿಸುವುದಕ್ಕಾಗಿ ಜನಸಾಮಾನ್ಯರ ಪ್ರತಿನಿಧಿಯಾಗಿ ನಿವೃತ್ತ ನ್ಯಾಯಾಧೀಶರು, ವಿಶ್ರಾಂತ ಕುಲಪತಿಗಳು ಅಥವಾ ತತ್ಸಮಾನರಾದವರನ್ನು, ಅವರಲ್ಲೂ ಮಹಿಳೆಯರನ್ನು, ಈ ವಿಚಾರಣೆಗಳಲ್ಲಿ ವೀಕ್ಷಕರಾಗುವಂತಹ ಅವಕಾಶವನ್ನು ಕೂಡ ಕಾಯ್ದೆಯಲ್ಲಿ ಕಲ್ಪಿಸಬೇಕೆಂದು ನಾವು ಆಗ್ರಹಿಸುತ್ತೇವೆ.

ಡಾ. ಶ್ರೀನಿವಾಸ ಕಕ್ಕಿಲ್ಲಾಯ, ಮಂಗಳೂರು, ಡಾ. ಎಚ್.ಎಸ್. ಅನುಪಮಾ, ಕವಲಕ್ಕಿ, ಡಾ. ಪಿ.ವಿ. ಭಂಡಾರಿ, ಉಡುಪಿ, ಡಾ. ಸಂಜೀವ ಕುಲಕರ್ಣಿ, ಧಾರವಾಡ, ಡಾ. ಟಿ. ಶ್ರೀನಿವಾಸ ರೆಡ್ಢಿ, ಕಲಬುರ್ಗಿ, ಡಾ. ಅರವಿಂದ ಪಟೇಲ್, ಬಳ್ಳಾರಿ, ಡಾ.ಜಿ. ರಾಮಕೃಷ್ಣ, ಬೆಂಗಳೂರು, ಮೋಹನ ಕಾತರಕಿ, ಹಿರಿಯ ನ್ಯಾಯವಾದಿಗಳು, ದಿಲ್ಲಿ, ಡಾ. ಮರುಳಸಿದ್ದಪ್ಪ, ಬೆಂಗಳೂರು, ಡಾ. ಎಸ್.ಜಿ. ಸಿದ್ದರಾಮಯ್ಯ, ಬೆಂಗಳೂರು, ಪ್ರೊ. ಮಾವಳ್ಳಿ ಶಂಕರ್, ಬೆಂಗಳೂರು, ಡಾ. ಸಿದ್ದನಗೌಡ ಪಾಟೀಲ್, ಬೆಂಗಳೂರು, ಡಾ. ನಿರಂಜನಾರಾಧ್ಯ ವಿ.ಪಿ., ಬೆಂಗಳೂರು, ಡಾ. ಮೂಡ್ನಾಕೂಡು ಚಿನ್ನಸ್ವಾಮಿ, ಬೆಂಗಳೂರು, ಡಾ. ವಸುಂಧರಾ ಭೂಪತಿ, ಬೆಂಗಳೂರು, ಡಾ.ಎನ್.ಗಾಯತ್ರಿ, ಬೆಂಗಳೂರು, ಡಾ. ಇಂದಿರಾ ಹೆಗ್ಗಡೆ, ಮೈಸೂರು.

(ಅಲ್ಲದೆ ಇತರ ನೂರಕ್ಕೂ ಅಧಿಕ ಚಿಂತಕರ ಸಹಿ ಇದೆ)

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ವಾರ್ತಾಭಾರತಿ

contributor

Similar News