ಯುಪಿಎಸ್ಸಿ ಪುಸ್ತಕಗಳು ಕನ್ನಡದಲ್ಲಿ ಬರಲಿ
ಮಾನ್ಯರೇ,
ಕೇಂದ್ರ ನಾಗರಿಕ ಸೇವಾ ಪರೀಕ್ಷೆ/ ಯುಪಿಎಸ್ಸಿಗೆ ರಾಜ್ಯದಿಂದ ಗಣನೀಯ ಪ್ರಮಾಣದಲ್ಲಿ ಆಕಾಂಕ್ಷಿಗಳು ಹೆಚ್ಚಾಗಿ ಅರ್ಜಿ ಸಲ್ಲಿಸುತ್ತಿದ್ದು ಶ್ಲಾಘನೀಯ. ಆದರೆ, ಫಲಿತಾಂಶದಲ್ಲಿ ಹಿಂದಿ, ತಮಿಳು, ತೆಲುಗು ಮಾಧ್ಯಮದ ಅಭ್ಯರ್ಥಿಗಳು ಮೇಲುಗೈ ಸಾಧಿಸುತ್ತಿದ್ದಾರೆ. ಇದಕ್ಕೆ ಬಹುಮುಖ್ಯ ಕಾರಣ ಭಾಷಾ ಮಾಧ್ಯಮ ತೊಡಕು. ನೆರೆಯ ರಾಜ್ಯಗಳಾದ ತಮಿಳುನಾಡು, ಆಂಧ್ರ ಪ್ರದೇಶದಲ್ಲಿ ಯುಪಿಎಸ್ಸಿ ಸಂಬಂಧ ತಮಿಳು, ತೆಲುಗು ಭಾಷೆಯಲ್ಲಿ ಆಂಗ್ಲ ಭಾಷೆಯಿಂದ ಸಾಕಷ್ಟು ಪುಸ್ತಕಗಳನ್ನು ಅಲ್ಲಿನ ಲೇಖಕರು ಮತ್ತು ಪ್ರಕಾಶನಾ ಸಂಸ್ಥೆಗಳು ತರ್ಜುಮೆ ಮಾಡುತ್ತಿವೆ. ಅದೇ ಉತ್ಸಾಹ ಕನ್ನಡದಲ್ಲಿ ಆಗುತ್ತಿಲ್ಲ.
ಕಳೆದ ಒಂದು ದಶಕದಲ್ಲಿ ಈ ಎರಡು ರಾಜ್ಯಗಳಿಂದ ಕರ್ನಾಟಕಕ್ಕಿಂತ ಹೆಚ್ಚಿನ ಅಭ್ಯರ್ಥಿಗಳು ಯುಪಿಎಸ್ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗುತ್ತಿದ್ದು ಅಧ್ಯಯನ ವಿಷಯಗಳ ಭಾಷಾ ಮಾಧ್ಯಮ ಮಾತೃ ಭಾಷೆಯಲ್ಲಿ ದೊರೆತರೆ ಸಾಕಷ್ಟು ಪ್ರತಿಭಾನ್ವಿತ ಕನ್ನಡಿಗ ವಿದ್ಯಾರ್ಥಿಗಳು ಆಯ್ಕೆ ಆಗಬಹುದು. ಆದ್ದರಿಂದ ಬಹುತೇಕವಾಗಿ ಇಂಗ್ಲಿಷ್‌ನಲ್ಲಿರುವ ಸ್ಪರ್ಧಾ ಪುಸ್ತಕಗಳನ್ನು ಕನ್ನಡಕ್ಕೆ ತರ್ಜುಮೆ ಮಾಡಲು ರಾಜ್ಯ ಸರಕಾರ, ಕನ್ನಡ ಅಭಿವೃದ್ಧಿ ಪ್ರಾಧಿಕಾರ ಮತ್ತು ಸಮಸ್ತ ಪುಸ್ತಕ ಪ್ರಕಾಶನ ಸಂಸ್ಥೆಗಳು ರಾಜ್ಯದ ಗ್ರಾಮಾಂತರ ಹಾಗೂ ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಪೂರೈಸಿರುವ ಪ್ರತಿಭಾನ್ವಿತ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಉತ್ಸಾಹ ತೋರಲಿ. ಆಗ, ಹೆಚ್ಚೆಚ್ಚು ಕನ್ನಡಿಗ ಐಎಎಸ್ ಅಧಿಕಾರಿಗಳನ್ನು ಕಾಣಬಹುದು.
- ಅನಿಲ್ ಕುಮಾರ್, ನಂಜನಗೂಡು