ಭಗತ್ ಸಿಂಗ್‌ರ ಶೌರ್ಯಕ್ಕಾಗಿ ಬಾಗಿ ನಮಸ್ಕರಿಸೋಣ ಆದರೆ ಅವರ ಕೃತ್ಯವನ್ನು ನಾವು ಅನುಕರಿಸದಿರೋಣ
ಭಗತ್‌ಸಿಂಗ್ ಮತ್ತು ಅವರ ಸಹಚರರಾದ ರಾಜಗುರು ಮತ್ತು ಸುಖ್‌ದೇವ್‌ರನ್ನು ಬ್ರಿಟಿಷರು ಗಲ್ಲಿಗೇರಿಸಿದ ಸಂದರ್ಭ ಮಹಾತ್ಮಾ ಗಾಂಧೀಜಿಯವರು ಬರೆದ ಲೇಖನ
ಧೀರ ಭಗತ್‌ಸಿಂಗ್ ಮತ್ತು ಅವರ ಇಬ್ಬರು ಸಹಚರರನ್ನು ಗಲ್ಲಿಗೇರಿಸಿದ್ದಾರೆ. ಅವರ ಜೀವವನ್ನುಳಿಸಲು ಅನೇಕ ಪ್ರಯತ್ನಗಳು ನಡೆದವು; ಮೇಲ್ಮನವಿ ಸಲ್ಲಿಸಲಿಕ್ಕೆ ಕೂಡಾ ನಿರಾಕರಿಸಿದರು. ಅವರು ಬದುಕಲು ಒಪ್ಪುವುದಿದ್ದರೆ ಅದು ಇತರರ ಸಲುವಾಗಿ; ತನ್ನ ಸಾವು ಯಾರನ್ನಾದರೂ ಅವಿವೇಚನೆಯ ಕೊಲೆಗಳಿಗೆ ಪ್ರಚೋದಿಸುತ್ತದೆ ಎನ್ನಿಸಿದರೆ ಅವರು ಬದುಕಲು ಒಪ್ಪಬಹುದಿತ್ತು. ಭಗತ್‌ಸಿಂಗ್ ಅಹಿಂಸೆಯ ಭಕ್ತರಾಗಿರಲಿಲ್ಲ; ಆದರೆ ಅವರು ಹಿಂಸಾಧರ್ಮವನ್ನು ಸಮ್ಮತಿಸಿದವರಲ್ಲ. ನಿಸ್ಸಹಾಯಕತೆಯ ಭಾವನೆಯಿಂದ, ಅವರು ಕೊಲೆಮಾಡಲು ಸಿದ್ಧರಾದರು. ಅವರ ಕೊನೆಯ ಪತ್ರದಲ್ಲಿ ಹೀಗಿತ್ತು: ‘ನಾನು ಯುದ್ಧದಲ್ಲಿ ತೊಡಗಿದಾಗ ನನ್ನನ್ನು ಬಂಧಿಸಲಾಯಿತು. ನನಗೆ ನೇಣುಗಂಬವಲ್ಲ; ತುಪಾಕಿಯ ಬಾಯಲ್ಲಿಟ್ಟು ನನ್ನನ್ನು ಸುಟ್ಟು ಹಾರಿಸಿ.’ ಈ ಧೀರರು ಸಾವಿನ ಭಯವನ್ನು ಗೆದ್ದಿದ್ದರು. ಅವರ ಶೌರ್ಯಕ್ಕಾಗಿ ನಾವು ಸಾವಿರ ಸಲ ಬಾಗಿ ನಮಸ್ಕಾರ ಮಾಡೋಣ.
ಆದರೆ ನಾವು ಅವರ ಕೃತ್ಯವನ್ನು ಅನುಕರಿಸಬಾರದು. ಅವರ ಕೃತಿಯಿಂದ ದೇಶಕ್ಕೆ ಲಾಭವಾಯಿತು ಎಂದು ನಂಬಲು ನಾನು ಸಿದ್ಧನಿಲ್ಲ. ಅದರಿಂದುಂಟಾದ ಹಾನಿಯನ್ನು ಮಾತ್ರ ನಾನು ಕಾಣಬಲ್ಲೆ. ಆ ದಾರಿಯನ್ನು ಪ್ರತಿಪಾದಿಸದೇ ಹೋಗಿದ್ದರೆ ಮತ್ತು ಶುದ್ಧ ಅಹಿಂಸಾತ್ಮಕ ಹೋರಾಟದಲ್ಲೇ ತೊಡಗಿದ್ದರೆ ಎಷ್ಟೋ ಹಿಂದೆಯೇ ನಾವು ಸ್ವರಾಜ್ಯವನ್ನು ದೊರಕಿಸಿಕೊಂಡಿರ ಬಹುದಿತ್ತು. ಈ ನನ್ನ ಊಹೆಯ ಬಗ್ಗೆ ಭಿನ್ನಾಭಿಪ್ರಾಯವಿದ್ದೀತು. ಹೇಗಿದ್ದರೂ ಕೊಲೆಯ ಮೂಲಕ ನ್ಯಾಯ ದೊರಕಿಸಿಕೊಳ್ಳುವ ರೂಢಿಯನ್ನು ನಾವು ಸ್ಥಾಪಿಸಿಕೊಂಡದ್ದಾದರೆ, ಯಾವುದನ್ನು ನ್ಯಾಯವೆಂದು ನಾವು ತಿಳಿಯುತ್ತೇವೋ ಅದಕ್ಕಾಗಿ, ಒಬ್ಬರನ್ನೊಬ್ಬರು ಕೊಲೆ ಮಾಡಲು ತೊಡಗಿಕೊಳ್ಳುತ್ತೇವೆ; ಈ ಮಾತನ್ನು ಯಾರೂ ನಿರಾಕರಿಸಲಾರರು. ಕೋಟಿಗಟ್ಟಲೆ ನಿರ್ಗತಿಕರು ಮತ್ತು ದುರ್ಬಲಾಂಗರಿರುವ ದೇಶದಲ್ಲಿ ಅದೊಂದು ಭಯಾನಕ ಸನ್ನಿವೇಶವುಂಟಾದೀತು. ಈ ಬಡವರೆಲ್ಲರೂ ನಮ್ಮ ಭೀಕರ ಕೃತ್ಯಕ್ಕೆ ಬಲಿಯಾಗಲೇ ಬೇಕಾಗುತ್ತದೆ. ಇದರ ಪರಿಣಾಮವೇನೆಂಬುದನ್ನು ಸಮಸ್ತರೂ ಪರಿಗಣಿಸಬೇಕಾದ್ದು ಅಪೇಕ್ಷಣೀಯ ಮತ್ತು ನಾವು ಬಯಸುವ ಸ್ವರಾಜ್ಯವು ಅವರದ್ದು ಮತ್ತು ಅವರಿಗಾಗಿ ಬಯಸುವಂಥದ್ದು. ಹಿಂಸೆಯ ಧರ್ಮವನ್ನು ಕೈಗೊಳ್ಳುವ ಮೂಲಕ ನಾವು ಆ ನಮ್ಮ ಕ್ರಿಯೆಯ ಹಿಂಸಾಫಲವನ್ನು ಕೊಯ್ದುಕೊಳ್ಳುವಂತಾಗುತ್ತದೆ.
ಆದ್ದರಿಂದ ಈ ವೀರರ ಧೈರ್ಯಗುಣವನ್ನು ಪ್ರಶಂಸಿಸಿದರೂ ಯಾವತ್ತೂ ನಾವು ಅವರ ಕ್ರಿಯೆಗಳಿಗೆ ಸಮ್ಮತಿಗೊಟ್ಟುಕೊಳ್ಳಬಾರದು.
ಈ ಮೂವರನ್ನು ಗಲ್ಲಿಗೇರಿಸುವ ಮೂಲಕ ಸರಕಾರವು ತನ್ನ ಮೃಗಸ್ವಭಾವವನ್ನೇ ಪ್ರದರ್ಶಿಸಿದೆ. ಸಾರ್ವಜನಿಕ ಅಭಿಪ್ರಾಯವನ್ನು ಅವಗಣಿಸುವ ತನ್ನ ಧಾರ್ಷ್ಟ್ಯಕ್ಕೆ ಸರಕಾರವು ಈ ಮೂಲಕ ಇನ್ನೊಂದು ಹೊಸ ನಿದರ್ಶನವನ್ನು ಕಾಣಿಸಿಕೊಟ್ಟಿದೆ. ಸರಕಾರವು ಜನರಿಗೆ ಯಾವುದೇ ನಿಜವಾದ ಅಧಿಕಾರವನ್ನೂ ಬಿಟ್ಟುಕೊಡಲಿಕ್ಕೆ ಬಯಸುವುದಿಲ್ಲ ಎಂಬುದನ್ನು ಈ ನೇಣಿನ ಪ್ರಸಂಗದಿಂದ ತೀರ್ಮಾನಿಸಿಕೊಳ್ಳಬಹುದು. ಈ ವ್ಯಕ್ತಿಗಳನ್ನು ನೇಣಿಗೇರಿಸಲು ಸರಕಾರಕ್ಕೆ ಅಧಿಕಾರವಿರುವುದು ನಿಶ್ಚಿತ. ಕೆಲವು ಬಗೆಯ ಅಧಿಕಾರಗಳಿವೆ, ಅವನ್ನು ಹೊಂದಿರುವವರು ಹೆಸರಿಗೆ ಮಾತ್ರ ಅವನ್ನಿಟ್ಟುಕೊಂಡಿದ್ದರೆ ಅದು ಅವರ ಠೇವಣಿಯಂತಿರುತ್ತದೆ. ಎಲ್ಲಾ ಸಂದರ್ಭಗಳಲ್ಲೂ ತನ್ನ ಎಲ್ಲಾ ಅಧಿಕಾರಗಳನ್ನೂ ಚಲಾಯಿಸುತ್ತ ಹೋದರೆ ಕೊನೆಯಲ್ಲಿ ಅವೆಲ್ಲವೂ ತಾವೇ ನಾಶವಾಗಿ ಹೋಗುತ್ತವೆ. ಈ ಸಂದರ್ಭದಲ್ಲಿ ಸರಕಾರವು ತನ್ನ ಅಧಿಕಾರವನ್ನು ಚಲಾಯಿಸದೆಯೇ ಉಳಿದಿದ್ದರೆ ಅದಕ್ಕೆ ಘನತೆ ಸಿಗುತ್ತಿತ್ತು; ಶಾಂತಿಯನ್ನು ಕಾಪಾಡಿಕೊಳ್ಳುವುದರಲ್ಲಿ ಅದು ತುಂಬ ಉಪಯುಕ್ತವಾಗುತ್ತಿತ್ತು.
ಆದರೆ ಈ ದಿನದ ತನಕವೂ ಸರಕಾರವು ಅಂಥ ವಿವೇಚನೆಯನ್ನು ರೂಢಿಸಿಕೊಂಡಿಲ್ಲ; ಇದು ಸ್ಪಷ್ಟವೇ ಆಗಿದೆ. ಸಾರ್ವಜನಿಕರು ಕೋಪದಿಂದ ಉದ್ರಿಕ್ತರಾಗುವುದಕ್ಕೆ ಸರಕಾರವು ಈ ಮೂಲಕ ಬಹು ಸ್ಪಷ್ಟವಾದ ಕಾರಣವನ್ನೊದಗಿಸಿಕೊಟ್ಟಿದೆ. ಆದರೆ, ಈ ಸಂದರ್ಭದಲ್ಲಿ ಜನತೆಯು ಸಿಟ್ಟಿಗೆದ್ದಿತೆಂದರೆ ಗೆಲುವು ಬರಲಿರುವ ಹೊತ್ತಿನಲ್ಲಿ ಅದು ಸೋತು ಹೋಗಬೇಕಾಗುತ್ತದೆ. ಸಾರ್ವಜನಿಕರು ತಮ್ಮ ಕೋಪವನ್ನು ಹೊರಹಾಕಿಕೊಳ್ಳಲಿ ಅಂತಲೇ ಕೆಲವು ಅಧಿಕಾರಿಗಳು ಆಸೆಪಟ್ಟುಕೊಳ್ಳುತ್ತಿರಬಹುದು. ಜನ ಏನೇ ಮಾಡಲಿ ನಮ್ಮದು ನೇರವಾದ ದಾರಿ. ಭಗತ್‌ಸಿಂಗ್‌ರ ಜೀವವುಳಿಸಲು, ಸಂಧಾನ ನಡೆಸುತ್ತಿದ್ದಾಗ, ಅವರನ್ನು ಗಲ್ಲಿಗೇರಿಸಲಾರರು ಎನ್ನುವುದು ನಮ್ಮ ಮೇಲಿನ ಭಾರವಾಗಿತ್ತು. ಭಗತ್‌ಸಿಂಗ್ ಮತ್ತು ಅವರ ಸಹಚರರಿಗೆ ಮರಣಶಿಕ್ಷೆಯ ವಿನಾಯಿತಿಯಷ್ಟನ್ನಾದರೂ ಸರಕಾರವು ಕೊಟ್ಟೀತೆಂದು ನಾವು ನಂಬಿಕೊಂಡಿದ್ದೆವು; ಸರಕಾರವು ಅಷ್ಟು ವಿವೇಚನೆಯನ್ನಾದರೂ ತೋರೀತು ಎಂದುಕೊಂಡಿದ್ದೆವು. ನಮ್ಮ ನಿರೀಕ್ಷೆಯು ಫಲಿಸಲಿಲ್ಲವೆಂಬ ಕಾರಣಕ್ಕೆ ನಾವು ಕೈಗೊಂಡಿರುವ ಪ್ರತಿಜ್ಞೆಯನ್ನು ಮುರಿಯಬಾರದು. ನಮ್ಮ ಮೇಲೆ ಎರಗಿದ ಈ ಪ್ರಹಾರವನ್ನು ಸಹಿಸಿಕೊಂಡು ನಮ್ಮ ಪ್ರತಿಜ್ಞೆಯನ್ನು ಕಾಪಾಡಿಕೊಳ್ಳಬೇಕು. ಇಂಥ ಕಠಿಣ ಪರೀಕ್ಷೆಯ ಸಂದರ್ಭದಲ್ಲಿ ಕೂಡಾ ನೀವು ನಮ್ಮ ಪ್ರತಿಜ್ಞೆಯನ್ನು ಕಾಪಾಡಿಕೊಂಡರೆ, ಗುರಿಯ ಸಾಧನೆಯಲ್ಲಿ ನಮ್ಮ ಶಕ್ತಿಯು ಹೆಚ್ಚುತ್ತದೆಯಲ್ಲದೆ ಕಡಿಮೆಯಾಗುವುದಿಲ್ಲ. ಹಾಗಲ್ಲದೆ ನಾವು ನಮ್ಮ ಪ್ರತಿಜ್ಞೆಯನ್ನು ಮುರಿದರೆ, ಸತ್ಯಪಥವನ್ನು ಉಲ್ಲಂಘಿಸಿದರೆ ನಮ್ಮ ಸತ್ವವು ಕುಂದುತ್ತದೆ, ಶಕ್ತಿಯು ಕುಂದುತ್ತದೆ. ಅಲ್ಲದೆ, ಗುರಿ ತಲುಪಲಿಕ್ಕೆ ಈಗ ನಮಗಿರುವ ಆತಂಕಗಳ ಜೊತೆಗೆ ಅದೂ ಸೇರಿಕೊಳ್ಳುತ್ತದೆ. ಆದ್ದರಿಂದ ಈ ಕ್ರೋಧವನ್ನು ನುಂಗಿಕೊಂಡು ಇದ್ದುದಕ್ಕೆ ಬದ್ಧರಾಗಿ ನಮ್ಮ ಕರ್ತವ್ಯವನ್ನು ನೆರವೇರಿಸಿಕೊಂಡು ಹೋಗಬೇಕಾದ್ದೇ ನಮ್ಮ ಧರ್ಮ.
ಗಾಂಧಿ ಬರಹಗಳ ಸಂಕಲನ
ಅನುವಾದ: ಕೆ.ವಿ. ಸುಬ್ಬಣ್ಣ
(ಮೂಲ: ಗುಜರಾತಿ) ನವಜೀವನ ಪತ್ರಿಕೆ 29-3-1931