ಮತ್ತೆ ಸಂಸತ್ತಿಗೆ ಮರಳಿದ ಮಹುವಾ ಮೊಯಿತ್ರಾ

Update: 2024-06-14 05:28 GMT
Editor : Thouheed | Byline : ವಿನಯ್ ಕೆ.

ಮಹುವಾ ಮೊಯಿತ್ರಾ ಮತ್ತೆ ಗೆದ್ದು ದಿಲ್ಲಿಗೆ ಬಂದಿದ್ದಾರೆ. ಈ ದೇಶದ ಬಹುತ್ವದ ಪರವಾದ ಮಹತ್ವದ ಧ್ವನಿ ಮತ್ತೆ ಹೊಸ ಲೋಕಸಭೆಯಲ್ಲಿ ಗಟ್ಟಿಯಾಗಿ ಕೇಳಲಿದೆ. ಇಲ್ಲಿ ಬಹುತ್ವ ನಾಶ ಮಾಡಲು ಹೊರಟವರಿಗೆ, ಇಲ್ಲಿನ ಜನರ ಸಂಪತ್ತನ್ನು ಕೆಲವೇ ಕೆಲವರ ಮಡಿಲಿಗೆ ಹಾಕಲು ಹೊರಟವರಿಗೆ ಮತ್ತೆ ಇರಿಸು ಮುರಿಸು ಉಂಟಾಗಲಿದೆ. ‘‘ಈ ದೇಶ ಯಾರಪ್ಪನ ಸೊತ್ತಲ್ಲ, ಈ ದೇಶವನ್ನು ನಾವೆಲ್ಲರೂ ರಕ್ತ, ಬೆವರು ಹರಿಸಿ ಕಟ್ಟಿದ್ದೇವೆ’’ ಎಂಬ ಘೋಷಣೆ ಮತ್ತೆ ಅಲ್ಲಿ ಮೊಳಗಲಿದೆ.

ಹೇಗಾದರೂ ಈಕೆಯನ್ನು ಸದನಕ್ಕೆ ಬಾರದ ಹಾಗೆ ಮಾಡುತ್ತೇವೆ ಎಂದು ಷಡ್ಯಂತ್ರ ಮಾಡಿದವರಿಗೆ ಈಗ ಭಾರೀ ಮುಖಭಂಗವಾಗಿದೆ.

ಮೋದಿ ಮಿತ್ರ ಅದಾನಿಯ ಅವ್ಯವಹಾರಗಳ ವಿಚಾರವಾಗಿಯೇ ಸದನದಲ್ಲಿ ಪ್ರಶ್ನೆ ಎತ್ತುತ್ತಿದ್ದ ಕಾರಣಕ್ಕೆ ಏನೋ ನೆಪ ಮುಂದಿಟ್ಟುಕೊಂಡು ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ಅವರನ್ನು ಸಂಸತ್ತಿನಿಂದ ಉಚ್ಚಾಟಿಸಲಾಗಿತ್ತು. ಅವರ ವಿರುದ್ಧ ಸಿಬಿಐ ಮತ್ತು ಈ.ಡಿ.ಯನ್ನು ಬಳಸಲಾಯಿತು. ಅವು ಮೊಯಿತ್ರಾ ಮನೆ ಬಾಗಿಲು ತಟ್ಟಿದ್ದವು. ಆದರೆ ಮೊಯಿತ್ರಾ ಮತ್ತೆ ಸಂಸತ್ತಿಗೆ ಮರಳಿದ್ದಾರೆ. ಚುನಾವಣಾ ಕಣದಲ್ಲೂ ಬಿಜೆಪಿಯ ವಿರುದ್ಧವೇ ಗೆದ್ದು, ಈಗ ತನ್ನನ್ನು ಉಚ್ಚಾಟಿಸಿದ್ದವರ ಎದುರೇ ಬಂದು ನಿಂತಿದ್ದಾರೆ. ಈ ಕಾರಣಕ್ಕಾಗಿ ಇದು ಅವರ ಬಹಳ ದೊಡ್ಡ ಗೆಲುವು ಕೂಡ.

ಯಾಕೆಂದರೆ, ಇನ್ನು ಆಕೆಯ ರಾಜಕೀಯ ಬದುಕೇ ಮುಗಿದುಹೋಯಿತು ಎಂದವರಿದ್ದರು. ಆ ದಿನಗಳಲ್ಲೂ ಆಕೆ ತನ್ನ ಬಗ್ಗೆ ಹಾಗೆ ಹೇಳಿದ್ದವರನ್ನು ಅದೇ ದಿಟ್ಟತನದಿಂದ ‘ಇರ್ರೆಲವಂಟ್’ ಎಂದಿದ್ದರು. ಅವರೆಲ್ಲ ಈಗ ಅಪ್ರಸ್ತುತವಾಗಿದ್ದಾರೆ ಮತ್ತು ಮೊಯಿತ್ರಾ ತಮ್ಮ ಪ್ರಸ್ತುತತೆಯನ್ನು ಸಾಬೀತುಪಡಿಸಲು ಮತ್ತೆ ಸಂಸತ್ತನ್ನು ತಲುಪಿದ್ದಾರೆ.

ಹಿರಿಯ ಪತ್ರಕರ್ತೆ ಬರ್ಕಾ ದತ್ ಅವರೊಂದಿಗಿನ ಸಂದರ್ಶನದಲ್ಲಿ ಅನೇಕ ವಿಚಾರಗಳನ್ನು ಮೊಯಿತ್ರಾ ಹೇಳಿಕೊಂಡಿದ್ದಾರೆ.

ಮೊಯಿತ್ರಾ ಅವರ ವಿರುದ್ಧದ ಸಂಚಿನ ಭಾಗವಾಗಿ ಅವರ ವೈಯಕ್ತಿಕ ಬದುಕನ್ನೇ ಕೆದಕುವ, ಅವರನ್ನು ಆಘಾತಕ್ಕೀಡು ಮಾಡುವ ಯತ್ನಗಳೂ ನಡೆದವು. ಅವರ ಖಾಸಗಿ ಚಿತ್ರಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುವಂಥ ಯತ್ನಗಳು ನಡೆದವು.

ಒಬ್ಬರ ಚಾರಿತ್ರ್ಯವಧೆ ಮಾಡುವುದಕ್ಕಾಗಿ ವ್ಯಕ್ತಿಯೊಬ್ಬ ಯಾವ ಮಟ್ಟಕ್ಕೂ ಇಳಿಯಬಹುದು ಎಂಬುದು ತಮ್ಮ ವಿರುದ್ಧದ ಸಂಚಿನಲ್ಲಿ ಕಂಡಿತೆನ್ನುತ್ತಾರೆ ಮಹುವಾ.

ತಮ್ಮ ಬಗ್ಗೆ ಅನಗತ್ಯ ಟೀಕೆ ಮಾಡಿದವರು, ತನ್ನ ಬಗ್ಗೆ ತೀರ್ಮಾನ ಕೊಟ್ಟವರನ್ನು ‘ಲೂಸರ್ಸ್’ ಅಂದರೆ ಸೋತು ಹೋದವರು ಎಂದು ಕರೆದಿದ್ದಾರೆ ಮೊಯಿತ್ರಾ. ಆದರೆ ತಮ್ಮನ್ನು ನಿಜವಾಗಿಯೂ ಪ್ರೀತಿಸುವವರು ತನ್ನ ಚಾರಿತ್ರ್ಯವಧೆಗೆ ನಿಂತಿದ್ದವರ ನಡೆಯ ಬಗ್ಗೆ ತಲೆಕೆಡಿಸಿಕೊಳ್ಳದೆ ಮತ ಹಾಕಿದ್ದಾರೆ ಎನ್ನುತ್ತಾರೆ.

‘‘ನಮ್ಮ ವಿರುದ್ಧ ಷಡ್ಯಂತ್ರ ಮಾಡಬೇಕೆಂದು ನಮ್ಮ ಜೊತೆಗಿದ್ದವರೇ ನಿಂತಾಗ, ಆಗುವುದನ್ನು ನಾವು ತಡೆಯುವುದು ಸಾಧ್ಯವಿಲ್ಲ. ಹಾಗಾಗಿ ನನ್ನ ವಿರುದ್ಧ ಏನೆಲ್ಲ ಷಡ್ಯಂತ್ರ ನಡೆಸಲಾಯಿತು ಎಂಬುದರ ಬಗ್ಗೆ ತಲೆಕೆಡಿಸಿಕೊಂಡಿಲ್ಲ’’ ಎಂಬುದು ಮಹುವಾ ಅವರ ದಿಟ್ಟ ಮಾತು.

ಸಂಸತ್ತಿನಿಂದ ಉಚ್ಚಾಟನೆ ಬಳಿಕ ಹೇಗೆ ತನ್ನನ್ನು ಸರಕಾರಿ ಬಂಗಲೆಯಿಂದ ಹೊರಗಟ್ಟಲಾಯಿತು ಎಂಬುದನ್ನೂ ಮೊಯಿತ್ರಾ ವಿವರಿಸಿದ್ದಾರೆ. ಸರ್ಜರಿಗೆ ಒಳಗಾಗಿದ್ದ ಸಂದರ್ಭದಲ್ಲಿಯೇ ಅದೆಲ್ಲ ನಡೆದಿತ್ತು. ನಾಳೆಯೊಳಗೆ ಖಾಲಿ ಮಾಡದಿದ್ದರೆ ಬಲವಂತವಾಗಿ ಹೊರಹಾಕಬೇಕಾಗುತ್ತದೆ ಎಂಬ ಸೂಚನೆ ಇತ್ತು. ಸರ್ಜರಿಗೆ ಒಳಗಾಗಿದ್ದ ಒಂದೇ ವಾರದಲ್ಲಿ ಅವರು ಸರಕಾರಿ ಮನೆ ಖಾಲಿ ಮಾಡಬೇಕಾಗಿ ಬಂದಿತ್ತು.

ತಾನು ಆ ಮನೆಗೆ ಮಾರ್ಕೆಟ್ ದರದಲ್ಲಿ ಬಾಡಿಗೆ ಕೊಡಲು ಸಿದ್ಧ ಎಂದು ಹೇಳಿದಾಗಲೂ ಅದನ್ನು ಕೇಳಲಿಲ್ಲ. ಇನ್ನೂರು ಪೊಲೀಸರು ಮತ್ತು ಎಲ್ಲ ಬಿಜೆಪಿ ಮೀಡಿಯಾಗಳು ತಾನು ಮನೆ ಖಾಲಿ ಮಾಡುವುದನ್ನು ನೋಡಲು ಕಾದಿದ್ದುದರ ಬಗ್ಗೆ ಹೇಳಿದ್ದಾರೆ ಮೊಯಿತ್ರಾ.

‘‘ನನಗೆ ಮನೆ ಖಾಲಿ ಮಾಡುವುದರಲ್ಲೇನೂ ಆಕ್ಷೇಪ ಇರಲಿಲ್ಲ. ಆದರೆ ಮೋದಿ ಸರಕಾರ ಯಾವ ಮಟ್ಟಕ್ಕೆ ಇಳಿಯಿತು ಎಂಬುದಷ್ಟೇ ಇಲ್ಲಿ ಮುಖ್ಯ ವಿಚಾರ’’ ಎನ್ನುತ್ತಾರೆ ಮಹುವಾ. ಎಲ್ಲವೂ ನನ್ನನ್ನು ತಡೆಯುವ ತಂತ್ರವಾಗಿತ್ತು, ಕುಗ್ಗಿಸುವ ತಂತ್ರವಾಗಿತ್ತು ಎಂದಿದ್ದಾರೆ ಅವರು.

ಪ್ರಜಾಪ್ರಭುತ್ವ ಅಪಾಯದಲ್ಲಿದೆ ಎನ್ನುವಾಗ ಜನ ಕೊಟ್ಟಿರುವ ನಿರ್ಣಯ ದೊಡ್ಡದು. ಸಾಕಷ್ಟು ಸಂಖ್ಯೆಯ ಎಂಪಿಗಳು ವಿಪಕ್ಷಗಳಿಂದ ಆಯ್ಕೆಯಾಗಿದ್ದಾರೆ. ಬಿಜೆಪಿಯ ಸ್ಥಿತಿ ಶೋಚನೀಯ ಎನ್ನುವಂತಾಗಲು ಇದು ಕಾರಣವಾಗಿದೆ ಎನ್ನುತ್ತಾರೆ ಅವರು.

ಯುಪಿ 80, ಬಂಗಾಳ 42, ಮಹಾರಾಷ್ಟ್ರ 48 ಒಟ್ಟು 170 ಸೀಟುಗಳಿವೆ. ಅಂದರೆ ಒಟ್ಟು ಲೋಕಸಭಾ ಸ್ಥಾನಗಳ ಮೂರನೇ ಒಂದರಷ್ಟು. ಆದರೆ ಈ 170ರಲ್ಲಿ ಬಿಜೆಪಿ ಗೆದ್ದಿದ್ದು 54 ಸೀಟುಗಳನ್ನು ಮಾತ್ರ. ಬಿಜೆಪಿಯ ಮಟ್ಟಿಗೆ ಇದು ಅತ್ಯಂತ ಕಳಪೆ ಸಾಧನೆ ಎನ್ನುತ್ತಾರೆ ಮಹುವಾ. ಇದು ಮೋದಿ ವಿರುದ್ಧದ ಜನಾದೇಶ ಎಂಬುದು ಅವರ ಸ್ಪಷ್ಟ ಅಭಿಪ್ರಾಯ.

ಚುನಾವಣಾ ಆಯೋಗದ ನಡೆಯಿಂದ ಚುನಾವಣಾ ಕರ್ತವ್ಯದಲ್ಲಿದ್ದ ಎಷ್ಟೋ ಮಂದಿ ಬಿಸಿಲಿನ ತಾಪಕ್ಕೆ ಪ್ರಾಣ ಕಳೆದುಕೊಳ್ಳುವಂತಾದುದಕ್ಕೆ ಕೂಡ ಮೊಯಿತ್ರಾ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆಯೋಗವೇ ಅದಕ್ಕೆ ಸಂಪೂರ್ಣ ಹೊಣೆ ಎಂದು ಪ್ರತಿಪಾದಿಸಿದ್ದಾರೆ.

‘ಇಂಡಿಯಾ’ ಒಕ್ಕೂಟದ ಸಾಧನೆಯ ಬಗ್ಗೆ ‘‘ಮೋದಿಯ ಜಾಗದಲ್ಲಿ ಬೇರೆಯವರಾಗಿದ್ದರೆ ಈ ಫಲಿತಾಂಶದ ನೈತಿಕ ಹೊಣೆ ಹೊತ್ತು ದೂರ ಸರಿಯುತ್ತಿದ್ದರು ಮತ್ತು ಬೇರೊಬ್ಬರು ಪ್ರಧಾನಿಯಾಗಲು ಅವಕಾಶ ಮಾಡಿ ಕೊಡುತ್ತಿದ್ದರು’’ ಎಂದಿದ್ದಾರೆ ಮಹುವಾ. ಎನ್‌ಡಿಎ ಯನ್ನು ‘ನಿತೀಶ್ ನಾಯ್ಡು ಡಿಪೆಂಡೆಂಟ್ ಅಲಯನ್ಸ್’ ಎಂದು ಲೇವಡಿ ಮಾಡಿದ್ದಾರೆ.

ಸಂದರ್ಶನದಲ್ಲಿ ಅವರು ಟಿಎಂಸಿಗಿಂತ ಮೊದಲು ಕಾಂಗ್ರೆಸ್ ಸೇರಿದ್ದರ ಬಗ್ಗೆಯೂ ಮಾತಾಡಿದ್ದಾರೆ.

ರಾಷ್ಟ್ರೀಯ ಪಕ್ಷವೆಂಬ ಆಕರ್ಷಣೆ ಸಹಜವಾಗಿಯೇ ಇದ್ದುದರ ಬಗ್ಗೆ ಹೇಳಿದ್ದಾರೆ. ಆನಂತರ ಅವರು ಬಂಗಾಳದ ರಾಜಕಾರಣದ ಹಿನ್ನೆಲೆಯಲ್ಲಿ ಟಿಎಂಸಿ ಕಡೆಗೆ ಹೋದವರು. ಕಾಂಗ್ರೆಸ್‌ನಲ್ಲಿ ದ್ದ ಸಮಯವೂ ಚೆನ್ನಾಗಿಯೇ ಇತ್ತು ಎಂದು ಅವರು ನೆನಪಿಸಿಕೊಂಡಿದ್ದಾರೆ.

ನಾವು ಯಾವುದನ್ನು ನಂಬುತ್ತೇವೆಯೋ ಅದಕ್ಕೆ ಬದ್ಧವಾಗಿ ಇರುವುದು ಸರಿ ಎನ್ನುವುದು ಮಹುವಾ ನಿಲುವು. ಬಿಜೆಪಿಯ ಷಡ್ಯಂತ್ರದ ಹೊತ್ತಿನಲ್ಲಿ ಮಮತಾ ಬ್ಯಾನರ್ಜಿ ತಮಗೆ ಉದ್ದಕ್ಕೂ ಬೆಂಬಲ ವಾಗಿದ್ದರು ಎಂಬುದನ್ನು ಮಹುವಾ ನೆನಪು ಮಾಡಿಕೊಳ್ಳುತ್ತಾರೆ.

ಯಾವ ರಾಜಕೀಯ ಹಿನ್ನೆಲೆಯೂ ಇಲ್ಲದೆ 40 ವರ್ಷಗಳ ಕಾಲ ಮಮತಾ ನಡೆಸಿದ ಹೋರಾಟ ಎಂಥದ್ದಿರಬಹುದು, ಸ್ತ್ರೀದ್ವೇಷಿಗಳ ಬಗೆಗಿನ ಆಕೆಯ ಹೋರಾಟ ಎಂಥದ್ದಿರಬಹುದು ಎಂಬ ಅಚ್ಚರಿಯನ್ನು ಮೊಯಿತ್ರಾ ವ್ಯಕ್ತಪಡಿಸುತ್ತಾರೆ.

ಕೃಷ್ಣಾನಗರದಲ್ಲಿ ಮಹುವಾರನ್ನು ಸೋಲಿಸಲೇಬೇಕು ಎಂದು ಪಣತೊಟ್ಟಿತ್ತು ಬಿಜೆಪಿ. ಅಲ್ಲಿ ಬಿಜೆಪಿಯ ಅಚ್ಚರಿಯ ಅಭ್ಯರ್ಥಿಯಾಗಿ ಕೃಷ್ಣಾನಗರದಲ್ಲಿ ಭಾರೀ ಜನಪ್ರಿಯತೆ ಇರುವ ರಾಜಮನೆತನದ ಅಮೃತಾ ರಾಯ್ ಅವರು ಮಹುವಾ ವಿರುದ್ಧ ಕಣಕ್ಕಿಳಿದಿದ್ದರು. ಅದು ಮಹುವಾ ಪಾಲಿಗೆ ದೊಡ್ಡ ಸವಾಲಾಗಿತ್ತು. ಇಡೀ ಕ್ಷೇತ್ರದಲ್ಲಿ ರಾಜಮನೆತನಕ್ಕೆ ಒಂದು ವಿಶೇಷ ಗೌರವದ ಭಾವನೆಯಿತ್ತು. ಅದನ್ನು ನಿಭಾಯಿಸಿ ಬಿಜೆಪಿಯನ್ನು ಸೋಲಿಸುವುದು ಸುಲಭವಿರಲಿಲ್ಲ. ಸಾಲದ್ದಕ್ಕೆ ಮಹುವಾ ವಿರುದ್ಧ ವ್ಯವಸ್ಥಿತ ಅಪಪ್ರಚಾರಕ್ಕೆ ದೊಡ್ಡದೊಂದು ವ್ಯವಸ್ಥೆಯೇ ಕಾರ್ಯಾಚರಿಸುತ್ತಿತ್ತು.

ಆದರೆ ಮಹುವಾ ಛಲ ಬಿಡದೆ ಹೋರಾಡಿದರು, ಜನರ ನಡುವೆ ಹೋದರು. ಜೊತೆಗೆ ಮಮತಾ ಬ್ಯಾನರ್ಜಿ ಅವರ ಬೆಂಬಲ ಹಾಗೂ ತೃಣಮೂಲದ ಸಂಘಟನಾ ಶಕ್ತಿ ಕೂಡ ಇತ್ತು. ಕೊನೆಗೂ ಕೃಷ್ಣಾನಗರದಲ್ಲಿ ಜನರ ಆಶೀರ್ವಾದ ಪಡೆದು ಒಳ್ಳೆಯ ಅಂತರದಿಂದಲೇ ಗೆದ್ದು ಮತ್ತೆ ಸಂಸತ್ತಿಗೆ ಬಂದರು.

ಬಿಜೆಪಿಯ ವಿರುದ್ಧ ತಾತ್ವಿಕ ಹೋರಾಟದಲ್ಲಿ ತೊಡಗಿರುವ ಅನೇಕರು ಬಹಳ ಸಲ ವೈಯಕ್ತಿಕ ಕಾರಣಗಳಿಗೆ ರಾಜಿ ಮಾಡಿಕೊಳ್ಳುವ ಸ್ಥಿತಿ ಇರುತ್ತದೆ. ಅವರು ಕುಟುಂಬದವರ ಒತ್ತಡಕ್ಕೂ ಮಣಿಯಬೇಕಾಗಿ ಬರಬಹುದು ಎನ್ನುವ ಮಹುವಾ ತನಗೆ ಅಂತಹ ಸಮಸ್ಯೆ ಇರಲಿಲ್ಲ ಎಂದು ತಮ್ಮ ತಾಯಿಯ ಬೆಂಬಲವನ್ನು ನೆನೆಯುತ್ತಾರೆ.

ಆದರೆ ಮಹುವಾ ಮೊಯಿತ್ರಾ ಹೋರಾಟ ಸಣ್ಣ ಹೋರಾಟವಲ್ಲ. ಅಲ್ಲೊಂದು ದಿಟ್ಟತನ ಎದ್ದು ಕಾಣುತ್ತದೆ. ಮೋದಿಯಂಥವರ ವಿರುದ್ಧದ ಹೋರಾಟವನ್ನು ಗೆಲ್ಲುವಲ್ಲಿ ಮೊಯಿತ್ರಾ ಅಂಥ ದಿಟ್ಟ ನಾಯಕಿಗೆ ಬಂಗಾಳದ ಜನ ಕೂಡ ಜೊತೆಯಾಗಿ ನಿಂತರು ಎಂಬುದು ಪ್ರಜಾಪ್ರಭುತ್ವದ ಬಹಳ ದೊಡ್ಡ ಸತ್ಯ ಮತ್ತು ಹಿರಿಮೆ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ವಿನಯ್ ಕೆ.

contributor

Similar News