ಮರಾಠಾ ಮೀಸಲಾತಿ ಬೇಡಿಕೆ ಮಸೂದೆ ಅಂಗೀಕಾರ, ಮುಂದೇನು?

ಮರಾಠರಿಗೆ ಮೀಸಲಾತಿ ಪಡೆದೇ ತೀರಬೇಕೆಂಬ ಒಂದು ರೀತಿಯ ಛಲ ಅವರನ್ನು ಆವರಿಸಿಕೊಂಡಿದೆ. ಅದಕ್ಕಾಗಿ ಯಾವ ಸ್ವರೂಪದ ಚಳವಳಿಯನ್ನಾದರೂ ಮಾಡಲು ಅವರು ಸಿದ್ಧ. ಹೋರಾಟ ತೀವ್ರವಾದಂತೆಲ್ಲ ಅಧಿಕಾರ ಹಿಡಿದಿರುವ ಪಕ್ಷಕ್ಕೆ ಮುಂಬರುವ ಲೋಕಸಭಾ ಚುನಾವಣೆಯ ಭಯ. ರಾಜ್ಯದಲ್ಲಿ ಬಹುದೊಡ್ಡ ಸಮುದಾಯ ಒಂದರ ವಿರೋಧ ಕಟ್ಟಿಕೊಳ್ಳಲು ಸಾಧ್ಯವಾಗದ ಏಕನಾಥ ಶಿಂದೆ ಸರಕಾರ ಮರಾಠಾ ಸಮುದಾಯದವರ ಬೇಡಿಕೆಯನ್ನು ಈಡೇರಿಸಲು ಅನ್ಯಮಾರ್ಗವಿಲ್ಲದೆ ಒಪ್ಪಿಕೊಂಡುಬಿಟ್ಟಿತು.

Update: 2024-02-27 06:42 GMT

ಸರ್ವೋಚ್ಚ ನ್ಯಾಯಾಲಯದ ಸಾಂವಿಧಾನಿಕ ಪೀಠ ಮೇ 5, 2021 ಮಹಾರಾಷ್ಟ್ರ ಸರಕಾರ ಮರಾಠಾ ಸಮುದಾಯವನ್ನು ಹಿಂದುಳಿದ ವರ್ಗ ಎಂದು ಪರಿಗಣಿಸಿ ಶೇ.12ರಷ್ಟು ಕೋಟಾ ನಿಗದಿಪಡಿಸಿ ಮೀಸಲಾತಿ ನೀಡಿರುವುದು ಸಂವಿಧಾನ ವಿರೋಧಿ ಎಂದು ಘೋಷಿಸಿದ ದಿನ. (ಡಾ. ಜಯಶ್ರೀ ಲಕ್ಷ್ಮಣರಾವ್ ಪಾಟೀಲ್, LL  2021 SC 243), ಮಹಾರಾಷ್ಟ್ರ ರಾಜ್ಯದ ದೃಷ್ಟಿಯಿಂದ ಅತಿ ಮಹತ್ವ ಪಡೆದುಕೊಂಡ ಈ ತೀರ್ಪಿನಲ್ಲಿ ಮರಾಠಾ ಸಮುದಾಯ ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದಿರುವುದಿಲ್ಲ ಮತ್ತು ಮಹಾರಾಷ್ಟ್ರ ಸರಕಾರ ಶೇ.50ರ ಮಿತಿಯನ್ನು ಮೀರಿರುವುದು ಕೂಡ ಸಂವಿಧಾನ ಬದ್ಧವಲ್ಲ, ಹಾಗೆಯೇ ಮೀಸಲಾತಿ ಹೆಚ್ಚಿಸಲೂ ಇದ್ದ ಸಂದರ್ಭವೂ ಅಸದೃಶ ಪ್ರಕರಣವಾಗಿರಲಿಲ್ಲ ಎಂದು ಕೂಡ ನ್ಯಾಯಾಲಯ ಸ್ಪಷ್ಟಪಡಿಸಿದೆ. ಹೀಗಾಗಿ ಮರಾಠಾ ಸಮುದಾಯಕ್ಕೆ ಸರ್ವೋಚ್ಚ ನ್ಯಾಯಾಲಯದ ಅಸಾಧಾರಣ ತೀರ್ಪಿನಿಂದಾಗಿ ಹಿಂದುಳಿದ ವರ್ಗಗಳ ಮೀಸಲಾತಿ ಮರಾಠರಿಗೆ ದಕ್ಕಲಿಲ್ಲ.

ಈ ಪ್ರಕರಣ ಸರ್ವೋಚ್ಚ ನ್ಯಾಯಾಲಯದ ಮುಂದೆ ದಾಖಲಾಗಲು ಇದ್ದ ಹಿನ್ನೆಲೆಯನ್ನು ಒಮ್ಮೆ ನೋಡೋಣ:

ವರ್ಷ 1997 ಇರಬಹುದು. ಮರಾಠಾ ಸಮುದಾಯಕ್ಕೆ ಉದ್ಯೋಗ ಮತ್ತು ಶಿಕ್ಷಣದಲ್ಲಿ ಮೀಸಲಾತಿ ಪಡೆಯಬೇಕೆಂಬ ಮಹತ್ವಾಕಾಂಕ್ಷೆಯಿಂದ ‘ಮರಾಠಾ ಸೇವಾ ಸಂಘ’ ಎಂಬೊಂದು ಸಂಸ್ಥೆ ಹೋರಾಟದ ಹಾದಿ ಹಿಡಿದಿತ್ತು. ಆದರೆ ಅಂದಿನಿಂದ 2010ರವರೆಗೆ ಹೋರಾಟದ ಸ್ವರೂಪ ಅಷ್ಟಾಗಿ ತೀಕ್ಷ್ಣತೆಯನ್ನು ಪಡೆದುಕೊಂಡಿರಲಿಲ್ಲ. 2010ರಷ್ಟರಲ್ಲಿ ಸೇವಾ ಸಂಘದ ತೀವ್ರ ಒತ್ತಡದಿಂದಾಗಿ ಸರಕಾರ ತುಟಿ ಎರಡು ಮಾಡದೆ ಹೋರಾಟದ ಸ್ವರೂಪಕ್ಕೆ ತಲೆ ಬಾಗಲೇ ಬೇಕಾಯಿತು. ಅಂದಿನ ಮುಖ್ಯಮಂತ್ರಿ ಪೃಥ್ವಿರಾಜ್ ಚೌಹಾಣ್ ನೇತೃತ್ವದ ಕಾಂಗ್ರೆಸ್ ಮತ್ತು ಎನ್‌ಸಿಪಿ ಸಮ್ಮಿಶ್ರ ಸರಕಾರ ಜೂನ್ 2014ರಲ್ಲಿ ಮರಾಠರಿಗೆ ಶೇ.16 ಮತ್ತು ಮುಸ್ಲಿಮರಿಗೆ ಶೇ.5ರಷ್ಟು ಕೋಟಾ ನಿಗದಿಪಡಿಸಿ ಆದೇಶ ಹೊರಡಿಸಿತ್ತು. ಮುಂಬೈ ಉಚ್ಚ ನ್ಯಾಯಾಲಯ ತಡೆಯಾಜ್ಞೆ ನೀಡಿತು, ಆದರೆ ಸರ್ವೋಚ್ಚ ನ್ಯಾಯಾಲಯ ಮಧ್ಯಪ್ರವೇಶಿಸಲು ನಿರಾಕರಿಸಿದ ಕಾರಣ ತಡೆಯಾಜ್ಞೆ ಮುಂದುವರಿಯಿತು. ಮುಂದೆ ಚುನಾವಣೆ ನಡೆದು ಸಮ್ಮಿಶ್ರ ಸರಕಾರ ಪತನಗೊಂಡು ಭಾಜಪ-ಶಿವಸೇನೆ ಜೋಡಿ ಅಧಿಕಾರ ಹಿಡಿದು ದೇವೇಂದ್ರ ಫಡ್ನವೀಸ್ ಮುಖ್ಯಮಂತ್ರಿ ಪಟ್ಟಕ್ಕೇರಿದರು.

ಮರಾಠರ ಇನ್ನಿಲ್ಲದ ಒತ್ತಡದ ಕಾರಣ ಫಡ್ನವೀಸ್ ಸರಕಾರ ಹಿಂದುಳಿದ ವರ್ಗಗಳ ಆಯೋಗದ ಅಂದಿನ ಅಧ್ಯಕ್ಷರಾಗಿದ್ದ ಎಂ.ಜಿ.ಗಾಯಕ್ವಾಡ್ ಅವರನ್ನು 2017ರಲ್ಲಿ ವರದಿ ಕೇಳಿತು. ಮರಾಠಾ ಸಮುದಾಯದ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಸ್ಥಿತಿ ಗತಿಗಳನ್ನು ಅಧ್ಯಯನ ಮಾಡಿ ಆಯೋಗ ಪೂರಕ ಅಂಕಿ ಅಂಶಗಳೊಡನೆ ನವೆಂಬರ್ 2018ರಲ್ಲಿ ಮರಾಠಾ ಸಮುದಾಯ ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದಿದೆ ಎಂದು ವರದಿ ನೀಡಿತು. ವರದಿ ಶೇ.16ರಷ್ಟು ಕೋಟಾ ನಿಗದಿಪಡಿಸಲು ಸಹ ಶಿಫಾರಸು ಮಾಡಿತ್ತು. ತತ್ಸಂಬಂಧ ಮಹಾರಾಷ್ಟ್ರ ಸರಕಾರ 2018ರಲ್ಲಿ ಕಾಯ್ದೆಯೊಂದನ್ನು ರೂಪಿಸಿ ಮರಾಠರಿಗೆ ಉದ್ಯೋಗ ಮತ್ತು ಶಿಕ್ಷಣದಲ್ಲಿ ಮೀಸಲಾತಿಗೆ ಅರ್ಹತೆ ದೊರಕಿಸಿ ಕೊಟ್ಟಿತು.

ಸಹಜವಾಗಿ ಮುಂಬೈ ಉಚ್ಚ ನ್ಯಾಯಾಲಯದಲ್ಲಿ ಪ್ರಶ್ನಿಸಲಾಗಿ, ಉಚ್ಚ ನ್ಯಾಯಾಲಯ ಮೀಸಲಾತಿಯನ್ನು ಎತ್ತಿ ಹಿಡಿಯಿತಾದರೂ ಮೀಸಲಾತಿ ಕೋಟಾವನ್ನು ಮಾತ್ರ ಶೇ.12ಕ್ಕೆ ಇಳಿಸಿತು. ಮೇಲೆ ತಿಳಿಸಿರುವಂತೆ ಸರ್ವೋಚ್ಚ ನ್ಯಾಯಾಲಯದ 9 ಮಂದಿ ನ್ಯಾಯಾಧೀಶರ ಸಾಂವಿಧಾನಿಕ ಪೀಠ ಮುಂಬೈ ನ್ಯಾಯಾಲಯದ ಆದೇಶವನ್ನು ತಳ್ಳಿಹಾಕಿ ಸಮರ್ಥನೆ ಮತ್ತು ಆಧಾರಗಳ ಮೂಲಕ ಮೀಸಲಾತಿ ಅಸಿಂಧು ಎಂದಿತು. ಆಯೋಗ ಸಂಗ್ರಹಿಸಿರುವ ದತ್ತಾಂಶಗಳು ಮರಾಠಾ ಸಮುದಾಯ ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದಿದೆ ಎಂದು ಸಾಬೀತು ಮಾಡಲು ಯಾವ ದಾಖಲೆಗಳು ಪೂರಕವಾಗಿಲ್ಲ ಮತ್ತು ಅಳವಡಿಸಿಕೊಂಡಿರುವ ಮಾನದಂಡಗಳೂ ಕೂಡ ಸಮರ್ಥವಾಗಿಲ್ಲ, ಅಲ್ಲದೆ ಇಂದ್ರ ಸಹಾನಿ ಪ್ರಕರಣದಲ್ಲಿ ಮೀಸಲಾತಿ ಕೋಟಾವನ್ನೂ ಶೇ.50ಕ್ಕೆ ಮಿತಿಗೊಳಿಸಿದೆ. ಒಟ್ಟಾರೆ ಮೀಸಲಾತಿ ಮಿತಿಯನ್ನು ಮೀರಿ ಹೋಗಲಾಗಿದೆ. ಪ್ರಕರಣದಲ್ಲಿ, ಸರ್ವೋಚ್ಚ ನ್ಯಾಯಾಲಯ ತೀರ್ಪಿಗೆ ತಕ್ಕಂತೆ ಅನೇಕ ದೃಷ್ಟಾಂತಗಳನ್ನೂ ಕೂಡ ನೀಡಿದೆ.

ಗಮನಿಸಬೇಕಾದ ಅಂಶವೆಂದರೆ ಅನುಚ್ಛೇದ 16 (4)ರನ್ವಯ, ಯಾವುದೇ ವರ್ಗ- ಜಾತಿಗಳು ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದಿದ್ದರೂ ಸರಕಾರ ಮತ್ತು ಸರಕಾರದ ಅಂಗ ಸಂಸ್ಥೆಗಳ ನೇಮಕ ಮತ್ತು ಹುದ್ದೆಗಳಲ್ಲಿ ಸಾಕಷ್ಟು ಪ್ರಾತಿನಿಧ್ಯ ಪಡೆದುಕೊಂಡಿದ್ದಲ್ಲಿ ಅಂಥಾ ವರ್ಗ-ಜಾತಿಗಳನ್ನು ಹಿಂದುಳಿದ ವರ್ಗವೆಂದು ಪರಿಗಣಿಸಿ ಮೀಸಲಾತಿ ಕೋಟಾ ನಿಗದಿಪಡಿಸಲು ಸಾಧ್ಯವಿಲ್ಲ. ಸರ್ವೋಚ್ಚ ನ್ಯಾಯಾಲಯ ತೀರ್ಪಿನಲ್ಲಿ ಈ ಎಲ್ಲಾ ಅಂಶಗಳನ್ನು ವಿಶದ ಪಡಿಸಿದೆ. ಮಹಾರಾಷ್ಟ್ರ ಸರಕಾರ ಸರ್ವೋಚ್ಚ ನ್ಯಾಯಾಲಯದ ತೀರ್ಪಿನ ವಿರುದ್ಧ ಸಲ್ಲಿಸಿದ್ದ ಪುನರ್ ಪರಿಶೀಲನಾ ಅರ್ಜಿ ಕೂಡ ಅನೂರ್ಜಿತಗೊಂಡಿದೆ.

ಸರ್ವೋಚ್ಚ ನ್ಯಾಯಾಲಯ ಸ್ಪಷ್ಟ ತೀರ್ಪು ನೀಡಿದಾಗ್ಯೂ ಮರಾಠಾ ಸಮುದಾಯದ ನೇತಾರರು, ಪದೇ ಪದೇ ಮೀಸಲಾತಿಗಾಗಿ ಬೇಡಿಕೆ ಇಡುವುದು ಅನುಚಿತ ಹಾಗೂ ಅನ್ಯಾಯದ ಪರಮಾವಧಿ ಎಂದೇ ಹೇಳಬೇಕು. ಈ ಬೇಡಿಕೆ ನಿನ್ನೆ ಮೊನ್ನೆಯದಲ್ಲ ಮೂರು-ನಾಲ್ಕು ದಶಕಗಳ ಹಿಂದಿನಿಂದಲೂ, ಬೇಡಿಕೆಯನ್ನು ಮುಂದಿರಿಸಿಕೊಂಡು ಯಾವುದೇ ಪಕ್ಷದ ಸರಕಾರವಿದ್ದರೂ, ಪ್ರಜಾಪ್ರಭುತ್ವ ರೀತಿಯಲ್ಲಿ ಆಯ್ಕೆಯಾದ ಸರಕಾರವೊಂದನ್ನು ಜನಬಾಹುಳ್ಯ ವಿದೆಯೆಂಬ ಗರ್ವದಿಂದ ತರಗೆಲೆಯಂತೆ ಆಡಿಸುವುದು ತಕ್ಕ ವಿಧಾನವಲ್ಲ.

ಮರಾಠಾ ಸಮುದಾಯ ರಾಜ್ಯದಲ್ಲಿ ಸುಮಾರು 3ನೇ ಒಂದು ಭಾಗದಷ್ಟು ಇದೆ ಎಂದು ಹೇಳಲಾಗಿದೆ. ಅವರಲ್ಲಿ ಭೂ ಮಾಲಕರು, ರೈತರು ಮತ್ತು ಸೇನಾನಿಗಳು ಹೀಗೆ ಆ ಜಾತಿಯಲ್ಲಿರುವ ವೃತ್ತಿಪರರು. ಕುಣಬಿ ಎಂಬುದು ಜಾತಿಯೋ ಅಥವಾ ಉಪ ಜಾತಿಯೋ ತಿಳಿದು ಬಂದಿಲ್ಲ. ಅದು ಮರಾಠಾ ಜಾತಿಯ ಉಪಜಾತಿಯೋ ಅಥವಾ ಮರಾಠಾ ಎಂಬುದು ಕುಣಬಿಯ ಉಪ ಜಾತಿಯೋ ಎಂಬುದೂ ಕೂಡ ತಕ್ಷಣಕ್ಕೆ ತಿಳಿದಿಲ್ಲ. ಮರಾಠಾ ಕ್ಷತ್ರಿಯರಲ್ಲಿ ಬೋಂಸ್ಲೆ, ಮೋರೆ, ಶಿರ್ಕೆ, ದೇಶಮುಖ್ ಮತ್ತು ಜಾದವ್ ಮುಂತಾದ ಉಪನಾಮ ಹೊಂದಿದವರಿದ್ದಾರೆ. ಆದರೆ ಉಳಿದವರು ಕುಣಬಿಗಳಾಗಿದ್ದು ಅವರೆಲ್ಲರೂ ಪ್ರಮುಖವಾಗಿ ವ್ಯವಸಾಯಗಾರರು ಎಂದು ತಿಳಿದುಬಂದಿದೆ. ಮರಾಠಾ ಸಾಮ್ರಾಜ್ಯಗಳು ಪತನವಾಗುವ ತನಕ ಕ್ಷತ್ರಿಯ-ಕುಣಬಿಗಳು ನಡುವಿನ ವ್ಯತ್ಯಾಸ ಇದ್ದೇ ಇತ್ತು. ಪ್ರಸಕ್ತ ಹೆಚ್ಚಿನ ಮರಾಠರೆಲ್ಲರೂ ವ್ಯವಸಾಯ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವರು. ಮರಾಠಿ ಒಂದು ಭಾಷೆಯಾಗಿದ್ದು ಮಹಾರಾಷ್ಟ್ರದಾದ್ಯಂತ ಬಹಳಷ್ಟು ಜಾತಿಗಳು ಅದನ್ನು ಮಾತೃ ಭಾಷೆಯಾಗಿ ಬಳಸುತ್ತಿವೆ. ಒಂದು ವಿಷಯವಂತೂ ಸತ್ಯ ಭಾರತದಲ್ಲಿ ಮರಾಠಾ ಬಹು ಸಂಖ್ಯಾತ ಜಾತಿಗಳಲ್ಲಿ ಒಂದಾಗಿದೆ. ಅದು ರಾಜ್ಯ ಮತ್ತು ರಾಷ್ಟ್ರೀಯ ರಾಜಕಾರಣದಲ್ಲಿ ಅಪಾರ ಪ್ರಭಾವ ಬೀರಿದೆ. ಸ್ವಾತಂತ್ರ್ಯ ಬಂದ ದಿನದಿಂದಲೂ ಮಹಾರಾಷ್ಟ್ರ ಸರಕಾರವನ್ನು ಈವರೆಗೂ ಸುಮಾರು 32 ವರ್ಷಗಳ ಕಾಲ ಮರಾಠರೇ ಮುಖ್ಯಮಂತ್ರಿಗಳಾಗಿ ರಾಜ್ಯಭಾರ ಮಾಡಿದ್ದಾರೆ. ಸುಮಾರು 12 ಮಂದಿ ಮರಾಠಾ ಮುಖ್ಯಮಂತ್ರಿಗಳಾಗಿ ಹೋಗಿದ್ದಾರೆ. ಹಾಲಿ ಇರುವ ಏಕನಾಥ ಶಿಂದೆ ಕೂಡ ಮರಾಠಾ ಸಮುದಾಯಕ್ಕೆ ಸೇರಿದವರೇ ಆಗಿದ್ದಾರೆ.

ಮರಾಠವಾಡ ಪ್ರದೇಶದಲ್ಲಿ ಮಾತ್ರ ಅವರಲ್ಲಿ ಬಡತನವಿದ್ದರೂ ಅದೊಂದೇ ಸಾಮಾಜಿಕ ಮತ್ತು ಶೈಕ್ಷಣಿಕ ಮೀಸಲಾತಿಗೆ ಅರ್ಹತೆ ಪಡೆಯಲಾರದು ಎಂಬುದು ಬಹಳ ಮುಖ್ಯ. ಈ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ಸರಕಾರಕ್ಕೆ ಮರಾಠವಾಡ ಪ್ರಾಂತದಲ್ಲಿ ಮರಾಠರಿಗೆ ಕುಣಬಿ ಜಾತಿ ದೃಢೀಕರಣ ಪತ್ರ ನೀಡುವ ಉದ್ದೇಶವಿದೆ ಎಂದು ಹೇಳಲಾಗಿದೆ. ಏಕೆಂದರೆ ಕುಣಬಿಗಳು ಈಗಾಗಲೇ ಹಿಂದುಳಿದ ವರ್ಗ ಎಂದು ಪರಿಗಣಿಸಲ್ಪಟ್ಟು ಪಟ್ಟಿಯಲ್ಲಿದ್ದಾರೆ. ಕೆಲವು ತಿಂಗಳ ಹಿಂದೆ ಈ ನಿಟ್ಟಿನಲ್ಲಿ ಸರಕಾರದ ಆದೇಶವೂ ಆಗಿತ್ತು ಕೂಡ. ಮನೋಜ್ ಜಾರಂಗೆ ಪಾಟೀಲ್ ಎಂಬ ಹೋರಾಟಗಾರ ಮರಾಠಿಗರಿಗೆ ಮೀಸಲಾತಿ ಸೌಲಭ್ಯ ಕಲ್ಪಿಸುವವರೆಗೆ ಚಳವಳಿಯಿಂದ ಹಿಂದೆ ಸರಿಯುವುದಿಲ್ಲ ಎಂದು ಸರಕಾರವನ್ನು ಎಚ್ಚರಿಸಿದ್ದರು. ಜೊತೆಗೆ ತೀವ್ರವಾದ ಹೋರಾಟವನ್ನು ಹಮ್ಮಿಕೊಳ್ಳುವ ಬೆದರಿಕೆಯನ್ನೂ ಹಾಕಿದ್ದರು. ಅದರಂತೆ ಆಮರಣಾಂತ ಉಪವಾಸ ಸಹ ಕೈಗೊಂಡರು.

ಮಹಾರಾಷ್ಟ್ರದಲ್ಲಿ ಮರಾಠರ ಹೋರಾಟ ಹಿಂಸಾತ್ಮಕ ಸ್ವರೂಪ ಪಡೆದುಕೊಂಡು ಅದು ಸರ್ವೋಚ್ಚ ನ್ಯಾಯಾಲಯದೊಡನೆ ನ್ಯಾಯಾಂಗ ಕದನಕ್ಕೆ ದಾರಿ ಮಾಡಿ ಕೊಟ್ಟಂತಾಗಿದೆ. ಅದರ ಫಲಿತಾಂಶವೆಂದರೆ ನ್ಯಾಯಾಲಯ ಅದನ್ನು ಅಸಾಂವಿಧಾನಿಕ ಎಂದು ಎತ್ತಿ ತೋರಿಸಿದೆ. ಪರಿಹಾರ ರೂಪದ ಕ್ಯೂರೆಟೀವ್ ಮನವಿಯನ್ನು ಮಹಾರಾಷ್ಟ್ರ ಸರಕಾರ ಸಲ್ಲಿಸಿದೆ. ಅದು ವಿಚಾರಣೆಗೆ ಬಾಕಿ ಇದೆ.

ಇತ್ತ ಮಹಾರಾಷ್ಟ್ರದಲ್ಲಿ ಯಾವುದೇ ಪಕ್ಷ ಅಧಿಕಾರಕ್ಕೆ ಬರಲಿ ಮರಾಠಾ ಸಮುದಾಯವೆಂದರೆ ಎಲ್ಲರಿಗೂ ಒಂಥರಾ ದಿಗಿಲು. ಯಾವ ಪಕ್ಷದ ಸರಕಾರವಾದರೂ ಮರಾಠರನ್ನು ಎದುರು ಹಾಕಿಕೊಳ್ಳಲು ತಯಾರಿರುವುದಿಲ್ಲ. ಅದು ಹಿಂದಿನಿಂದಲೂ ನಡೆದುಕೊಂಡು ಬಂದ ರಾಜಕೀಯ ತೃಷೆ. ಹೀಗಾಗಿ ಈ ವಿಷಯದಲ್ಲಿ ಪಕ್ಷ ಯಾವುದೇ ಆಗಲಿ ಎಲ್ಲವೂ ಒಂದೇ.

ಮರಾಠರಿಗೆ ಮೀಸಲಾತಿ ಪಡೆದೇ ತೀರಬೇಕೆಂಬ ಒಂದು ರೀತಿಯ ಛಲ ಅವರನ್ನು ಆವರಿಸಿಕೊಂಡಿದೆ. ಅದಕ್ಕಾಗಿ ಯಾವ ಸ್ವರೂಪದ ಚಳವಳಿಯನ್ನಾದರೂ ಮಾಡಲು ಅವರು ಸಿದ್ಧ. ಹೋರಾಟ ತೀವ್ರವಾದಂತೆಲ್ಲ ಅಧಿಕಾರ ಹಿಡಿದಿರುವ ಪಕ್ಷಕ್ಕೆ ಮುಂಬರುವ ಲೋಕಸಭಾ ಚುನಾವಣೆಯ ಭಯ. ರಾಜ್ಯದಲ್ಲಿ ಬಹುದೊಡ್ಡ ಸಮುದಾಯ ಒಂದರ ವಿರೋಧ ಕಟ್ಟಿಕೊಳ್ಳಲು ಸಾಧ್ಯವಾಗದ ಏಕನಾಥ ಶಿಂದೆ ಸರಕಾರ ಮರಾಠಾ ಸಮುದಾಯದವರ ಬೇಡಿಕೆಯನ್ನು ಈಡೇರಿಸಲು ಅನ್ಯಮಾರ್ಗವಿಲ್ಲದೆ ಒಪ್ಪಿಕೊಂಡುಬಿಟ್ಟಿತು.

ಆ ಒಪ್ಪಿಗೆಯ, ಪ್ರತಿಫಲವೇ ಫೆಬ್ರವರಿ 20, 2024ರಂದು ಮಹಾರಾಷ್ಟ್ರದ ವಿಧಾನಸಭೆ ಮತ್ತು ವಿಧಾನ ಪರಿಷತ್ತು ಮರಾಠಾ ಸಮುದಾಯಕ್ಕೆ ಪ್ರತ್ಯೇಕವಾಗಿ ಶೇ.10ರಷ್ಟು ಮೀಸಲು ಮಸೂದೆಗೆ ಸರ್ವಾನುಮತದಿಂದ ಅಂಗೀಕಾರ ನೀಡಿದವು. ಸದ್ಯ ಮಹಾರಾಷ್ಟ್ರದಲ್ಲಿ ಹಿಂದುಳಿದ ವರ್ಗಗಳಿಗೆ ಶೇ. 52ರಷ್ಟು ಮೀಸಲಾತಿ ಕೋಟಾ ನಿಗದಿಯಾಗಿದೆ. ಇದೇ ಸಂದರ್ಭದಲ್ಲಿ ‘‘ಮಹಾರಾಷ್ಟ್ರದಲ್ಲಿ ಅಸ್ತಿತ್ವದಲ್ಲಿರುವ ಒಬಿಸಿ ಕೋಟಾವನ್ನು ಮುಟ್ಟದೆ ಮರಾಠಾ ಸಮುದಾಯಕ್ಕೆ ಮೀಸಲಾತಿ ನೀಡಲು ನಾವು ಬಯಸಿದ್ದೇವೆ. ಈ ಸಮುದಾಯದವರು ಸುಮಾರು 40 ವರ್ಷಗಳಿಂದ ಮೀಸಲಾತಿ ಪ್ರಯೋಜನಕ್ಕಾಗಿ ಹೋರಾಟ ನಡೆಸುತ್ತಿದ್ದಾರೆ’’ ಎಂದು ಮುಖ್ಯಮಂತ್ರಿ ಹೇಳಿದ್ದಾರೆ. ಈ ಮಾತಿನಿಂದ ಒಂದು ತಾಂತ್ರಿಕ ಅಂಶ ಎದ್ದು ಕಾಣುತ್ತದೆ. ಮರಾಠಾ ಸಮುದಾಯಕ್ಕೆ ಪ್ರತ್ಯೇಕ ಮೀಸಲಾತಿ ಕೊಟ್ಟ ಹಾಗಿದೆ. ಆದರೆ ಯಾವುದೇ ಒಂದು ಜಾತಿಯನ್ನು ವರ್ಗ ಎಂದು ಪರಿಗಣಿಸಿ ಮೀಸಲಾತಿ ಕೊಡಲು ಸಂವಿಧಾನದಲ್ಲಿ ಅವಕಾಶವಿಲ್ಲ. ಇದಕ್ಕೆ ಸಾಕ್ಷಿಯಾಗಿ ತಮಿಳುನಾಡಿನ ಒನ್ನಿಯಾರ್ ಸಮುದಾಯದ ಪ್ರತ್ಯೇಕ ಮೀಸಲಾತಿಯನ್ನು ಸರ್ವೋಚ್ಚ ನ್ಯಾಯಾಲಯ ತಳ್ಳಿ ಹಾಕಿತ್ತು.

ಮಹಾರಾಷ್ಟ್ರ ರಾಜ್ಯದಲ್ಲಿ ಪ್ರಸಕ್ತ ಮೀಸಲಾತಿ ಪ್ರಮಾಣ ಶೇ.52ರಷ್ಟಿದೆ. ಇದರಲ್ಲಿ ಪರಿಶಿಷ್ಟ ಜಾತಿ ಶೇ.13, ಪರಿಶಿಷ್ಟ ಪಂಗಡ ಶೇ.7, ಒಬಿಸಿ ಶೇ.19, ವಿಶೇಷ ಹಿಂದುಳಿದ ವರ್ಗ ಶೇ.2, ವಿಮುಕ್ತ ಜಾತಿಗೆ ಶೇ.3, ಅಲೆಮಾರಿ ಬುಡಕಟ್ಟು (ಬಿ) ಶೇ. 2.5, ಅಲೆಮಾರಿ ಬುಡಕಟ್ಟು (ಸಿ), ಧನಗರ್ ಶೇ. 3.5, ಅಲೆಮಾರಿ ಬುಡಕಟ್ಟು (ಡಿ)ವಂಜರಿ ಶೇ. 2ರಷ್ಟು ಮೀಸಲಾತಿ ಹೊಂದಿವೆ. ಹೀಗಾಗಿ ಮರಾಠಾ ಸಮುದಾಯವು ಸೇರಿದಂತೆ ಒಟ್ಟಾರೆ ಶೇ. 62ರಷ್ಟು ಮೀಸಲಾತಿಯನ್ನು ಮಹಾರಾಷ್ಟ್ರ ರಾಜ್ಯ ಪಡೆದಿದೆ.

‘‘ಮಹಾರಾಷ್ಟ್ರ ಸರಕಾರವು ಮರಾಠಾ ಸಮುದಾಯಕ್ಕೆ ಶೇ. 10 ಅಥವಾ ಶೇ 20ರಷ್ಟು ಮೀಸಲಾತಿ ನೀಡಿದೆ ಎನ್ನುವುದು ಮುಖ್ಯವಲ್ಲ. ಆ ಮೀಸಲು ಇತರ ಹಿಂದುಳಿದ ವರ್ಗಗಳ ಅಡಿಯಲ್ಲಿ ಇರಬೇಕೇ ಹೊರತು ಪ್ರತ್ಯೇಕವಾಗಿ ಅಲ್ಲ’’ ಎಂದು ಮರಾಠಾ ಮೀಸಲಾತಿ ಹೋರಾಟಗಾರ ಮನೋಜ್ ಜರಾಂಗೆ ಪಾಟೀಲ್ ಹೇಳಿದ್ದಾರೆ. ಅಷ್ಟೇ ಅಲ್ಲದೆ ಮತ್ತೆ ಕೆಲವು ಅಂಶಗಳಿವೆ. ‘‘ಅವುಗಳ ಬಗ್ಗೆ ಮುಂದೆ ಸರಕಾರ ತೆಗೆದುಕೊಳ್ಳುವ ತೀರ್ಮಾನವನ್ನು ಆಧರಿಸಿ ಆಂದೋಲನ ಹಾದಿಯನ್ನು ನಿರ್ಧರಿಸುತ್ತೇನೆ’’ ಎಂದಿದ್ದಾರೆ.

ಮಹಾರಾಷ್ಟ್ರ ಸರಕಾರ ಮರಾಠಾ ಸಮುದಾಯಕ್ಕೆ ಒದಗಿಸಿರುವ ಮೀಸಲಾತಿ, ಅದೊಂದೇ ಜಾತಿಗೆ ಅನ್ವಯಿಸಿದೆಯೇ ಅಥವಾ ಬೇರೆ ಯಾವುದಾದರೂ ಜಾತಿಯೊಳಗೆ ಸೇರಿಸಿ ವರ್ಗ ಎಂದು ಪರಿಗಣಿಸಿದೆಯೇ ಎಂಬುದು ವರದಿಯಾಗಿಲ್ಲ. ಪ್ರತ್ಯೇಕ ಜಾತಿಗೆ ಮೀಸಲಾತಿ ನೀಡಲು ಬರುವುದಿಲ್ಲ. ಜೊತೆಗೆ ಸರ್ವೋಚ್ಚ ನ್ಯಾಯಾಲಯ ವಿಧಿಸಿರುವ ಶೇ. 50ರ ಮಿತಿ ಮೀರಿರುವುದು ಕೂಡ ಅದೇ ನ್ಯಾಯಾಲಯ ವಿಧಿಸಿರುವ ಷರತ್ತಿಗೆ ವಿರುದ್ಧವಾಗಿದೆ. ಇವೆಲ್ಲಕ್ಕೂ ಮಿಗಿಲಾಗಿ, 2021ರಲ್ಲಿಯೇ ಸರ್ವೋಚ್ಚ ನ್ಯಾಯಾಲಯ ಸಕಾರಣಗಳೊಡನೆ ಮರಾಠಾ ಸಮುದಾಯವನ್ನು ಹಿಂದುಳಿದ ವರ್ಗವೆಂದು ಪರಿಗಣಿಸಲು ಬರುವುದಿಲ್ಲ ಎಂದು ಆಜ್ಞಾಪಿಸಿದೆ.

ಇದೊಂದು ರಾಜಕೀಯ ತೀರ್ಮಾನವಲ್ಲದೆ ಮತ್ತೇನೂ ಅಲ್ಲ. ಪದೇ ಪದೇ ಸರಕಾರವು ಚಂಡಿ ಹಿಡಿದಂತೆ ನ್ಯಾಯಾಲಯವೇ ‘ಅನ್ಯಾಯ’ ಎಂದು ಸ್ಪಷ್ಟಪಡಿಸಿರುವ ವಿಷಯವೊಂದನ್ನು ಹಿಡಿದುಕೊಂಡು ಮಕ್ಕಳಂತೆ ಆಟವಾಡುತ್ತಿರುವುದು ಶೋಭೆ ತರುವ ವಿಷಯವಲ್ಲ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಕೆ.ಎನ್. ಲಿಂಗಪ್ಪ

contributor

Similar News