ಅಲ್ಪಸಂಖ್ಯಾತ ಇಲಾಖೆಯ ಯೋಜನೆಗಳಿಗೆ ಸದ್ದಿಲ್ಲದೆ ಕತ್ತರಿ!

Update: 2024-07-25 07:40 GMT

ಅಲ್ಪಸಂಖ್ಯಾತರ ಬಗೆಗಿನ ಅಸಹಿಷ್ಣುತೆ ಮತ್ತು ದ್ವೇಷದ ಮನಸ್ಥಿತಿಯ ಮುಂದುವರಿಕೆಯೇ ಮಂಗಳವಾರ ಮಂಡಿಸಲಾದ ಮೋದಿ ಸರಕಾರದ ಬಜೆಟ್‌ನಲ್ಲಿ ಕಾಣುತ್ತಿದೆ. ಒಂದೆಡೆ, ಅಲ್ಪಸಂಖ್ಯಾತ ಇಲಾಖೆಗೆ ಬಜೆಟ್ ಪಾಲು ಹೆಚ್ಚಿದಂತೆ ಕಂಡರೂ, ಇನ್ನೊಂದೆಡೆ ಸದ್ದಿಲ್ಲದೆ ಯೋಜನೆಗಳು ಇಲ್ಲವಾಗುತ್ತಿವೆ.

ಮೋದಿ ಮೂರನೇ ಸರಕಾರದ ಮೊದಲ ಬಜೆಟ್‌ನಲ್ಲಿ ಅಲ್ಪಸಂಖ್ಯಾತರಿಗೆ ಏನೇನು ಕೊಡಲಾಗಿದೆ, ಏನೇನು ಕಡಿತ ಮಾಡಲಾಗಿದೆಯೆಂದು ನೋಡುವುದಾದರೆ,

ಅಲ್ಪಸಂಖ್ಯಾತರ ವ್ಯವಹಾರಗಳ ಖಾತೆಯ ಬಜೆಟ್‌ನಲ್ಲಿ ಸಣ್ಣ ಪ್ರಮಾಣದ ಏರಿಕೆಯಾಗಿದ್ದರೂ, ಕಾರ್ಯಕ್ರಮಗಳು ಮಾತ್ರ ಕಣ್ಮರೆಯಾಗಿವೆ.

ಸಚಿವಾಲಯದ ಒಟ್ಟು ಬಜೆಟ್ ಶೇ.2.7ರಷ್ಟು, ಅಂದರೆ ರೂ. 3,098 ಕೋಟಿಯಿಂದ ರೂ. 3,183 ಕೋಟಿಗೆ ಏರಿಕೆಯಾಗಿರುವುದೇನೊ ನಿಜ. ಆದರೆ, ಹೆಚ್ಚಿನ ಅಲ್ಪಸಂಖ್ಯಾತ ಯೋಜನೆಗಳು ಕಡಿತಗೊಂಡಿವೆ.

ಅಲ್ಪಸಂಖ್ಯಾತರ ಯೋಜನೆಗಳು ಕಡಿತಗೊಂಡಿದ್ದರೆ ಅಲ್ಪಸಂಖ್ಯಾತರ ವ್ಯವಹಾರಗಳ ಖಾತೆಯ ಬಜೆಟ್‌ನಲ್ಲಿ ಸಣ್ಣ ಪ್ರಮಾಣದ ಏರಿಕೆಯಾಗಿದ್ದು ಹೇಗೆ?

ಅದಕ್ಕೆ ಉತ್ತರ ‘ಪ್ರಧಾನ ಮಂತ್ರಿ ಜನ ವಿಕಾಸ ಕಾರ್ಯಕ್ರಮ’ ಯೋಜನೆಗೆ300 ಕೋಟಿ ರೂ. ಹೆಚ್ಚಿಸಲಾಗಿದೆ. ಇದು ದೇಶಾದ್ಯಂತ 1,300 ಅಲ್ಪಸಂಖ್ಯಾತ ಬಾಹುಳ್ಯ ಪ್ರದೇಶಗಳಲ್ಲಿ ಕುಂಠಿತ ಅಭಿವೃದ್ಧಿಯನ್ನು ಸರಿಪಡಿಸಲು ಬಳಕೆಯಾಗುವ ಯೋಜನೆ.

ಇದರ ಮೂಲಕ ಅಲ್ಪಸಂಖ್ಯಾತರ ಖಾತೆಯ ಬಜೆಟ್ ಹೆಚ್ಚಿಸಿದಂತೆ ತೋರಿಸಿ ಅಲ್ಪಸಂಖ್ಯಾತರಿಗೆ ನೇರವಾಗಿ ನೆರವಾಗುವ ಯೋಜನೆಗಳಿಗೆ ಕತ್ತರಿ ಹಾಕಲಾಗಿದೆ.

2022-23ಕ್ಕೆ ಹೋಲಿಸಿದರೆ 2023-24ರಲ್ಲಿ ಅಲ್ಪಸಂಖ್ಯಾತ ಬಜೆಟ್ ಹಂಚಿಕೆಯಲ್ಲಿ ಶೇ.೩೮ರಷ್ಟು ಕಡಿತ ಮಾಡಲಾಗಿತ್ತು. ಹಲವಾರು ವಿದ್ಯಾರ್ಥಿವೇತನಗಳು ಮತ್ತು ಕೌಶಲ್ಯಾಭಿವೃದ್ಧಿ ಯೋಜನೆಗಳ ಅನುದಾನದಲ್ಲಿ ಭಾರೀ ಕಡಿತವಾಗಿತ್ತು.

ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಮಾತ್ರ ಈ ಸಲದ ಬಜೆಟನ್ನು ಎಲ್ಲಾ ವರ್ಗಗಳ ಕನಸಿನ ಬಜೆಟ್ ಎಂದು ಹೇಳಿದ್ದಾರೆ.ಆದರೆ ವಾಸ್ತವ ಹಾಗಿದೆಯೆ?

ಈ ಬಜೆಟ್‌ನಲ್ಲಿ ಮೆಟ್ರಿಕ್ ನಂತರದ ವಿದ್ಯಾರ್ಥಿವೇತನ 1,065 ಕೋಟಿ ರೂ.ಗಳಿಂದ 1,145 ಕೋಟಿ ರೂ.ಗೆ ಏರಿದೆ ಎಂಬುದು ನಿಜ.

11 ಮತ್ತು 12ನೇ ತರಗತಿಯಲ್ಲಿ ಓದಲು, ತಾಂತ್ರಿಕ ಮತ್ತು ವೃತ್ತಿಪರ ಕೋರ್ಸ್‌ಗಳನ್ನು ಮಾಡಲು ಅಲ್ಲದೆ ಮಾನ್ಯತೆ ಪಡೆದ ಸಂಸ್ಥೆಗಳಲ್ಲಿ ಪದವಿಪೂರ್ವ ಮತ್ತು ಉನ್ನತ ಅಧ್ಯಯನಗಳಿಗೆ ಅರ್ಹತೆ ಪಡೆದವರಿಗೆ ಈ ಸ್ಕಾಲರ್‌ಶಿಪ್ ನೀಡಲಾಗುತ್ತದೆ.

ಇದೇ ವೇಳೆ, ಕೌಶಲಾಭಿವೃದ್ಧಿ ಮತ್ತು ಜೀವನೋಪಾಯ ಯೋಜನೆಗಳಲ್ಲಿ ಕಡಿತವಾಗಿದೆ.

ಕಳೆದ ವರ್ಷ ನೀಡಲಾಗಿದ್ದ 64.4 ಕೋಟಿ ರೂ.ಗೆ ಹೋಲಿಸಿದರೆ ಅದು ಈ ಸಲ ೩ ಕೋಟಿ ರೂ.ಗೆ ಇಳಿದಿದೆ.

ರಾಷ್ಟ್ರೀಯ ಅಲ್ಪಸಂಖ್ಯಾತರ ಅಭಿವೃದ್ಧಿ ಮತ್ತು ಹಣಕಾಸು ನಿಗಮಕ್ಕೆ ಹಂಚಿಕೆ ಮಾಡಬೇಕಿದ್ದ ಮೊತ್ತವನ್ನು ಕೂಡ ಈ ಬಾರಿ ನಿಗದಿಪಡಿಸಿಲ್ಲ. ಕಳೆದ ಬಾರಿ ೬೧ ಕೋಟಿ ರೂ.ಒದಗಿಸಲಾಗಿತ್ತು.

ಇನ್ನೊಂದೆಡೆ, ಶಿಕ್ಷಣ ಸಬಲೀಕರಣದ ಅನುದಾನವನ್ನು ರೂ. 1,689 ಕೋಟಿ ಯಿಂದ 1,575 ಕೋಟಿಗೆ ಇಳಿಸಲಾಗಿದೆ.

ಮೆಟ್ರಿಕ್ ಪೂರ್ವ ವಿದ್ಯಾರ್ಥಿ ವೇತನ ಕಳೆದ ವರ್ಷ ೪೩೩ ಕೋಟಿ ರೂ. ಇದ್ದದ್ದು ಈ ಸಲ 326.2 ಕೋಟಿ ರೂ.ಗೆ ಇಳಿದಿದೆ.

ಮೌಲಾನಾ ಆಝಾದ್ ರಾಷ್ಟ್ರೀಯ ಫೆಲೋಶಿಪ್ ೯೬ ಕೋಟಿ ರೂ.ಯಿಂದ ೪೫ ಕೋಟಿ ರೂ.ಗೆ ಇಳಿದಿದೆ.

ಇನ್ನು ಉಚಿತ ಕೋಚಿಂಗ್ ಮತ್ತು ಸಂಬಂಧಿತ ಯೋಜನೆಗಳಿಗೆ ಕಳೆದ ಬಾರಿ ೩೦ ಕೋಟಿ ರೂ. ನಿಗದಿಯಾಗಿದ್ದರೆ, ಈ ಸಲ ಕೇವಲ 10 ಕೋಟಿ ರೂ. ಮಾತ್ರ ಒದಗಿಸಲಾಗಿದೆ.

ವಿದೇಶದಲ್ಲಿ ಶಿಕ್ಷಣಕ್ಕಾಗಿ ನೀಡುವ ಶೈಕ್ಷಣಿಕ ಸಾಲದ ಮೇಲಿನ ಬಡ್ಡಿ ಸಬ್ಸಿಡಿಯನ್ನು 21 ಕೋಟಿಯಿಂದ ರೂ. 15.3 ಕೋಟಿಗೆ ಇಳಿಸಲಾಗಿದೆ.

ಅಲ್ಪಸಂಖ್ಯಾತರ ಅಭಿವೃದ್ಧಿ ಯೋಜನೆಗಳ ಸಂಶೋಧನೆ, ಪ್ರಚಾರ, ಮೇಲ್ವಿಚಾರಣೆ ಮತ್ತು ಮೌಲ್ಯಮಾಪನದಂತಹ ವಿಶೇಷ ಕಾರ್ಯಕ್ರಮಗಳಲ್ಲಿ ಹೇಳಿಕೊಳ್ಳುವ ಯಾವ ಬದಲಾವಣೆಯೂ ಆಗಿಲ್ಲ. ಅಲ್ಪಸಂಖ್ಯಾತರ ಸಂಸ್ಕೃತಿ ಮತ್ತು ಪರಂಪರೆ ಸಂರಕ್ಷಣೆಗಾಗಿರುವ ‘ಹಮಾರಿ ಧರೋಹರ್’ ಕಾರ್ಯಕ್ರಮಕ್ಕೆ ಹಿಂದಿನ ವರ್ಷ 10 ಲಕ್ಷ ರೂ.ಗಳನ್ನು ನೀಡಲಾಗಿತ್ತು. ಈ ಬಾರಿ ಯಾವುದೇ ಮೊತ್ತವನ್ನು ನೀಡಲಾಗಿಲ್ಲ.

ಕಾನೂನು ಮತ್ತು ನಿಯಂತ್ರಣ ಸಂಸ್ಥೆಗಳ ನಿಧಿಯನ್ನು 2 ಕೋಟಿ ರೂ.ಗಳಷ್ಟು ಕಡಿಮೆ ಮಾಡಲಾಗಿದೆ. ರಾಷ್ಟ್ರೀಯ ಅಲ್ಪಸಂಖ್ಯಾತರ ಆಯೋಗದ ಬಜೆಟ್ ನಲ್ಲಿ 1 ಕೋಟಿ ರೂ. ಕಡಿತವಾಗಿದೆ. ಭಾಷಾ ಅಲ್ಪಸಂಖ್ಯಾತರ ವಿಶೇಷಾಧಿಕಾರಿಯ ಬಜೆಟ್ ನಲ್ಲೂ 1 ಕೋಟಿ ರೂ. ಕಡಿತವಾಗಿದೆ.

ಪ್ರಧಾನ ಮಂತ್ರಿ ಜನ ವಿಕಾಸ ಕಾರ್ಯಕ್ರಮದ ಹಂಚಿಕೆಯನ್ನು ಮಾತ್ರ ೬೦೦ ಕೋಟಿ ರೂ.ಗಳಿಂದ ೯೧೦ ಕೋಟಿ ರೂ.ಗೆ ಹೆಚ್ಚಿಸಲಾಗಿದೆ. ಮೊದಲೇ ಹೇಳಿದ ಹಾಗೆ ಇದು ನೇರವಾಗಿ ಅಲ್ಪಸಂಖ್ಯಾತರಿಗೆ ಸಿಗುವ ನಿಧಿಯಲ್ಲ. ಅಲ್ಪಸಂಖ್ಯಾತರ ಬಾಹುಳ್ಯ ಇರುವ ಪ್ರದೇಶಗಳ ಅಭಿವೃದ್ಧಿಗೆ ಸಹಾಯ ಮಾಡುವ ನಿಧಿ.

ಈ ಹಿಂದೆ ಭಾರೀ ಪ್ರಮಾಣದ ನಿಧಿ ಕಡಿತವಾದಾಗ, ಮದ್ರಸಾಗಳು ಮತ್ತು ಅಲ್ಪಸಂಖ್ಯಾತರ ಶಿಕ್ಷಣ ಯೋಜನೆ ಕಳೆದ ವರ್ಷ ಶೇ.೯೩ರಷ್ಟು ಕುಸಿತ ಕಂಡಿತ್ತು. ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯಕ್ಕೆ ಬಜೆಟ್ ಹಂಚಿಕೆಯಲ್ಲಿ ಉಂಟಾಗುತ್ತಿರುವ ಕಡಿತ ಶೈಕ್ಷಣಿಕ ಯೋಜನೆಗಳ ಮೇಲೆ ಗಂಭೀರ ಪರಿಣಾಮ ಉಂಟುಮಾಡುತ್ತದೆ.

ಕಳೆದ ಬಾರಿಯ ಬಜೆಟ್‌ಗೆ ಮೊದಲೇ ಅಲ್ಪಸಂಖ್ಯಾತರಿಗಿದ್ದ ಎರಡು ಶೈಕ್ಷಣಿಕ ಯೋಜನೆಗಳನ್ನು ನಿಲ್ಲಿಸಿ, ಉಳಿದ ಐದು ಯೋಜನೆಗಳ ಅನುದಾನವನ್ನು ಭಾರೀ ಪ್ರಮಾಣದಲ್ಲಿ ಕಡಿತ ಮಾಡಲಾಗಿತ್ತು.

2014ರಲ್ಲಿ ಮೋದಿ ಸರಕಾರದ ಮೊದಲ ಬಜೆಟ್‌ಗೆ ಹೋಲಿಸಿದರೆ ಅಲ್ಪಸಂಖ್ಯಾತ ಸಚಿವಾಲಯದ ಹಂಚಿಕೆ ಕಳೆದ ವರ್ಷದ ಬಜೆಟ್‌ನಲ್ಲಿ ಶೇ.17ರಷ್ಟು ಕುಸಿತ ಕಂಡಿದೆ.

ಮೋದಿ ಸರಕಾರದ ೯ ವರ್ಷಗಳಲ್ಲಿಯೇ ಕಳೆದ ವರ್ಷ ಅತ್ಯಧಿಕ ಮೊತ್ತ ನಿಗದಿಪಡಿಸಲಾಗಿತ್ತು. ಆದರೆ ವೆಚ್ಚವಾದದ್ದು ಅರ್ಧಕ್ಕಿಂತ ಕಡಿಮೆ, ಅಂದರೆ ಶೇ.48 ಮಾತ್ರ.

ಕೇಂದ್ರದ ಮತ್ತೊಂದು ಯೋಜನೆ ‘ಪಡೋ ಪರದೇಶ್’ ಯೋಜನೆ ಮೊದಲೇ ರದ್ದುಗೊಂಡಿದೆ. ಅಲ್ಪಸಂಖ್ಯಾತ ವಿದ್ಯಾರ್ಥಿಗಳು ವಿದೇಶದಲ್ಲಿ ಅಧ್ಯಯನ ಮಾಡಲು ಎರವಲು ಪಡೆದ ಶಿಕ್ಷಣ ಸಾಲಗಳ ಮೇಲಿನ ಬಡ್ಡಿ ಸಬ್ಸಿಡಿಯನ್ನು ನೀಡುವ ಯೋಜನೆ ಅದಾಗಿತ್ತು.

ವಿದ್ಯಾರ್ಥಿಗಳಿಗೆ ಮಾಸಿಕ 1,000 ರೂ.ವರೆಗೆ ನೀಡುತ್ತಿದ್ದ ಮೆಟ್ರಿಕ್ ಪೂರ್ವ ವಿದ್ಯಾರ್ಥಿವೇತನವನ್ನು 1ರಿಂದ ೮ನೇ ತರಗತಿಗಳಿಗೆ ರದ್ದುಗೊಳಿಸಲಾಗಿತ್ತು. ಆದರೆ ೯ ಮತ್ತು 10ನೇ ತರಗತಿಗಳಿಗೆ ಸ್ಕಾಲರ್ ಶಿಪ್ ಮುಂದುವರಿದಿದೆ.

ತೋರಿಕೆಗೆ ಮಾತ್ರವೇ ಹೆಚ್ಚಿದಂತೆ ಕಾಣುವ ಮೋದಿ ಸರಕಾರದ ಅಲ್ಪಸಂಖ್ಯಾತರ ಖಾತೆಯ ಬಜೆಟ್ ಪಾಲು ವಾಸ್ತವದಲ್ಲಿ ಆ ಸಮುದಾಯಕ್ಕೆ ಸಿಗಬೇಕಾದ ಸೌಲಭ್ಯಗಳು, ಸಹಾಯಗಳನ್ನು ಒಂದೊಂದಾಗಿ ಕಡಿತಗೊಳಿಸುತ್ತಿದೆ.

ಇತ್ತೀಚಿನ ವರ್ಷಗಳಲ್ಲಿ ಅಂಥ ಸ್ಥಿತಿ ಸತತವಾಗಿ ಮುಂದುವರಿದಿದೆ ಎಂಬುದು ಕಳವಳಕಾರಿ ವಿಚಾರ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಪ್ರವೀಣ್ ಎನ್.

contributor

Similar News