ಮಿಜಾನ್ ಲೋಪೆಝ್ ಎಂಬ ಸೋಲರಿಯದ ಮಹಾ ದೈತ್ಯ
ಮಿಜಾನ್ ಲೋಪೆಝ್ !
ಒಂದೇ ಕ್ರೀಡೆಯಲ್ಲಿ ಸತತವಾಗಿ ಐದು ಬಾರಿ ಒಲಿಂಪಿಕ್ಸ್ ಚಿನ್ನ ಗೆದ್ದ ಮೊದಲ ಕ್ರೀಡಾಪಟು!
ಇನ್ನು ಹದಿಮೂರು ದಿನಗಳಿಗೆ ತನ್ನ 42ನೇ ಹುಟ್ಟುಹಬ್ಬ ಆಚರಿಸಿಕೊಳ್ಳಲಿರುವ ಮಿಜಾನ್, ಐದನೇ ಒಲಿಂಪಿಕ್ಸ್ ಚಿನ್ನ ಗೆಲ್ಲುವ ಮೂಲಕ ಕುಸ್ತಿಗೆ ವಿದಾಯ ಹೇಳಿದ್ದಾರೆ. ಕ್ಯೂಬಾ ದೇಶದ ಪಿನಾರ್ ದೆಲ್ ರಿಯೋ ಎಂಬ ಪುಟ್ಟ ಪಟ್ಟಣದಲ್ಲಿ ಒಲಿಂಪಿಕ್ ಪದಕ ವಿಜೇತ ಕುಸ್ತಿ ಪಟು ಮೈಕಲ್ ಲೋಪೆಝ್ ತಮ್ಮನಾಗಿ ಹುಟ್ಟಿದರು.
ಹೆರಾಡೂರದ ದೈತ್ಯ (ಜೈಂಟ್ ಆಫ್ ಹೆರಾಡೂರ), ದಿ ಟೆರಿಬಲ್ (ಎಲ್ ಟೆರಿಬಲ್ - ಭಯಾನಕ) ಎಂಬ ಎಲ್ಲಾ ವಿಶೇಷಣ - ಬಿರುದುಗಳಿಂದ ಬಣ್ಣಿಸಲ್ಪಡುವ ಮಿಜಾನ್ ಲೋಪೆಝ್, ಮೊತ್ತ ಮೊದಲಬಾರಿಗೆ 2004ರ ಅಥೆನ್ಸ್ ಒಲಿಂಪಿಕ್ಸ್‌ನಲ್ಲಿ ಐದನೇ ಸ್ಥಾನ ಪಡೆಯುವ ಮೂಲಕ ಒಲಿಂಪಿಕ್ಸ್ ಅಭಿಯಾನ ಆರಂಭಿಸಿದರು. ಆಗ 22ನೇ ವಯಸ್ಸಿನ ಯುವ ಕುಸ್ತಿಪಟು ಆಗಿದ್ದ ಮಿಜಾನ್ ಲೋಪೆಝ್ ಪದಕ ಗೆಲ್ಲದಿದ್ದರೂ, ಘಟಾನುಘಟಿ ಕುಸ್ತಿಪಟುಗಳ ಗಮನಸೆಳೆದರು. ಮುಂದಿನ ಒಲಿಂಪಿಕ್ಸ್‌ನಲ್ಲಿ (2008-ಬೀಜಿಂಗ್) ಚಿನ್ನದ ಪದಕ ಗೆದ್ದ ಮಿಜಾನ್ ಆನಂತರ ತಿರುಗಿ ನೋಡಿದ್ದೇ ಇಲ್ಲ. 2012, 2016, 2020 ಮತ್ತು ಈಗ 2024ರಲ್ಲಿ ಚಿನ್ನದ ಪದಕವನ್ನು ಗೆದ್ದು ಈ ಸಾಧನೆ ಮಾಡಿರುವ ಏಕೈಕ ಕ್ರೀಡಾಪಟುವಾಗಿ ಇತಿಹಾಸ ನಿರ್ಮಿಸಿದರು.
2006, 2011, 2017ರ ವಿಶ್ವ ಚಾಂಪಿಯನ್‌ಶಿಪ್ ಫೈನಲ್ಸ್ ಸೋತಿದ್ದು ಬಿಟ್ಟರೆ, ಮಿಜಾನ್ ಅವರು ವಿಶ್ವಕಪ್, ವಿಶ್ವ ಚಾಂಪಿಯನ್‌ಷಿಪ್, ಪಾನ್ ಅಮೆರಿಕನ್ ಚಾಂಪಿಯನ್‌ಶಿಪ್‌ಗಳಲ್ಲಿ ಸೋಲರಿಯದ ಸರದಾರ.
ತನ್ನ ಫಾರ್ಮಿನ ಉತ್ತುಂಗದಲ್ಲಿ ಇರುವಾಗಲೇ, ಮುಂದಿನ ಪೀಳಿಗೆಯ ಆಟಗಾರರು ಮೆರೆಯಬೇಕು ಎಂದು ಕುಸ್ತಿ ತ್ಯಜಿಸಿದ್ದು ಶ್ಲಾಘನೀಯ ವಿಚಾರ.
ಕುಸ್ತಿಯ ವಿಚಾರಕ್ಕೆ ಬಂದಾಗ ಯಾರು ಸರ್ವಶ್ರೇಷ್ಠ ಕುಸ್ತಿಪಟು ಎನ್ನುವ ಚರ್ಚೆ ನಡೆದಾಗ ಕಡೆಯಲ್ಲಿ ಕಾಣಿಸಿಕೊಳ್ಳುವ ಹೆಸರುಗಳು ರಶ್ಯದ ಅಲೆಕ್ಸಾಂಡರ್ ಕೆರ್ಲಿನ್ ಮತ್ತು ಮಿಜಾನ್ ಲೋಪೆಝ್.
ಅಲೆಕ್ಸಾಂಡರ್ ಕೆರ್ಲಿನ್ ವಿವಿಧ ತಂಡಗಳನ್ನು ಪ್ರತಿನಿಧಿಸಿ ಸತತ ನಾಲ್ಕು ಒಲಿಂಪಿಕ್ಸ್ ಚಿನ್ನ ಗೆದ್ದವರು, ಹದಿಮೂರು ವರ್ಷ ಸತತವಾಗಿ ಸೋಲರಿಯದ ಸಾಹಸಿಯಾಗಿ ಮೆರೆದವರು; ತನ್ನ ಕಡೆಯ ಒಲಿಂಪಿಕ್ಸ್ ಫೈನಲ್‌ನಲ್ಲಿ ಅಮೆರಿಕದ ರುಲಾನ್ ಗಾರ್ಡ್‌ನರ್ ವಿರುದ್ಧ ಅಚ್ಚರಿಯಾಗಿ ಸೋತವರು. ಸೋತ ನಂತರ ಕುಸ್ತಿಗೆ ವಿದಾಯ ಹೇಳಿದವರು. ಈಗ ರಾಜಕಾರಣಿ, ಸಂಸದರಾಗಿದ್ದಾರೆ.
ಮಿಜಾನ್ ತನ್ನ ಸಣ್ಣ ವಯಸ್ಸಿನಿಂದಲೇ ಮಹಾ ಬಲಿಷ್ಠ ಕುಸ್ತಿಪಟುಗಳನ್ನು ಎದುರಿಸಿ, ಸೋಲಿಸಿ ತನ್ನ ಕುಸ್ತಿ ಜೀವನ ರೂಪಿಸಿಕೊಂಡವರು. ಎರಡು ದಶಕಗಳ ಕಾಲ, ಎರಡು ವಿಭಿನ್ನ ತಲೆಮಾರಿನ ಕುಸ್ತಿ ಪಟುಗಳನ್ನು ಎದುರಿಸಿ, ಸೋಲಿಸಿ, ಮೊದಲ ಶ್ರೇಣಿಯ ಕುಸ್ತಿಪಟುವಾಗಿ ಚಾಲ್ತಿಯಲ್ಲಿ ಇರುವುದು ನಿಜಕ್ಕೂ ಬಹಳ ದೊಡ್ಡ ಸಾಧನೆಯೇ!
ಅತ್ಯಂತ ಹೆಚ್ಚಿನ ದೈಹಿಕ ಸಾಮರ್ಥ್ಯ ಮತ್ತು ಕ್ಷಮತೆ ಬೇಡುವ ಸೂಪರ್ ಹೆವಿವೇಟ್ ವಿಭಾಗದಲ್ಲಿ ಇಪ್ಪತ್ತು ವರ್ಷಗಳ ಕಾಲ ಕುಸ್ತಿಯಲ್ಲಿ ರಾಜನಾಗಿ ಮೆರೆಯುವುದು ಸಾಮಾನ್ಯ ಸಂಗತಿಯಲ್ಲ! ಬಹುಶಃ ಇಷ್ಟೊಂದು ದೈಹಿಕ ಸಾಮರ್ಥ್ಯ ಮತ್ತು ಕ್ಷಮತೆ ಹೊಂದುವ ಕುಸ್ತಿಪಟುಗಳು ಇನ್ನು ಮುಂದೆ ಕಾಣಸಿಗುವುದು ಬಹಳ ಕಷ್ಟ. ಹಾಗಾಗಿ ಅಲೆಕ್ಸಾಂಡರ್ ಕೆರ್ಲಿನ್ ಮತ್ತು ಮಿಜಾನ್ ಲೋಪೆಝ್ ಇಬ್ಬರೂ ಶ್ರೇಷ್ಠರೇ.
ಮಿಜಾನ್ ಲೋಪೆಝ್ ಐದು ಒಲಿಂಪಿಕ್ಸ್ ಚಿನ್ನ, ಐದು ವಿಶ್ವ ಚಾಂಪಿಯನ್‌ಶಿಪ್, ಮೂರು ವಿಶ್ವ ಕಪ್ ಮತ್ತು ಒಂಭತ್ತು ಪಾನ್ ಅಮೆರಿಕನ್ ಚಾಂಪಿಯನ್‌ಶಿಪ್ ಗೆದ್ದಿದ್ದಾರೆ. ಇಷ್ಟೆಲ್ಲಾ ಸಾಧನೆ ಮಾಡಿದರೂ ಅತ್ಯಂತ ವಿನೀತ ವರ್ತನೆಯಿಂದ ಮತ್ತು ಸರಳತೆಯಿಂದ ಕ್ರೀಡಾಪಟುಗಳಿಗೆ ಮಾದರಿಯಾಗಿದ್ದಾರೆ.
ಇಪ್ಪತ್ತು ವರ್ಷಗಳ ಕಾಲ ಕುಸ್ತಿ ಜಗತ್ತು ಆಳಿದ ಮಹಾ ದೈತ್ಯ ಮಿಜಾನ್ ಲೋಪೆಝ್ ಅವರ ಮುಂದಿನ ಜೀವನ ಸುಖಕರವಾಗಿರಲಿ!