ಮೋದಿಯವರ ಮುಗಿಯದ ಸುಳ್ಳುಗಳು!
ಸುಳ್ಳುಗಳ ಹೊರತಾಗಿ ಮೋದಿ ರಾಜಕಾರಣ ಇಲ್ಲವೇ ಇಲ್ಲವೆನ್ನುವಂತಾಗಿದೆ. ಅವರ ಸುಳ್ಳುಗಳ ಬಗ್ಗೆ ಹೇಳದೆ ಅವರ ರಾಜಕೀಯವನ್ನು ವಿಶ್ಲೇಷಿಸುವುದೂ ಸಾಧ್ಯವಿಲ್ಲವಾಗಿದೆ. 10 ವರ್ಷಗಳಿಂದ ಮೋದಿ ಪ್ರಧಾನಿಯಾಗಿದ್ದಾರೆ. ಅವರ ಬಿಜೆಪಿ ವಿಶ್ವದಲ್ಲಿಯೇ ಶ್ರೀಮಂತ ಪಕ್ಷ. ಕೋಟಿಗಟ್ಟಲೆ ದೇಣಿಗೆ ಹಣ ಅದರ ಬಳಿ ಇದೆ. ಲಕ್ಷಾಂತರ ಕಾರ್ಯಕರ್ತರಿದ್ದಾರೆ. ಇಷ್ಟಿದ್ದೂ ಮೋದಿ ವಿಪಕ್ಷದ ವಿರುದ್ಧ ಸುಳ್ಳು ಹೇಳುತ್ತ ತಿರುಗಾಡಬೇಕಾದ ಸ್ಥಿತಿ ಏಕೆ ಬಂದಿದೆ?
ಮೊದಲ ಸುತ್ತಿನ ಮತದಾನದ ಬಳಿಕ ಪ್ರಧಾನಿ ಮೋದಿ ಒಂದರ ಮೇಲೊಂದು ಸುಳ್ಳು ಹೇಳುತ್ತಿರುವುದು ನೋಡಿದರೆ ಎರಡನೇ ಸುತ್ತಿನ ಮತದಾನ ಮುಗಿದ ಬಳಿಕ ಅವರ ಬತ್ತಳಿಕೆಯಲ್ಲಿ ಇನ್ಯಾವ ಸುಳ್ಳು ಉಳಿದಿರಬಹುದು?
ಯಾವ್ಯಾವ ಸುಳ್ಳುಗಳನ್ನು ಪ್ರಧಾನಿ ಈಗಿನಿಂದ ಹೇಳಬಹುದು ಎಂದು ಊಹಿಸಿದ್ದಾರೆ ಖ್ಯಾತ ಪತ್ರಕರ್ತ ರವೀಶ್ ಕುಮಾರ್.
ಯಾವಾಗ ನೋಡಿದರೂ ಪ್ರಧಾನಿ ಇವತ್ತಿನ ವಿಷಯ ಮಾತಾಡೋದೇ ಇಲ್ಲ. ಒಂದೋ ನಲ್ವತ್ತು ವರ್ಷ ಹಿಂದಿನ ವಿಷಯ ಅಥವಾ ನಲ್ವತ್ತು ವರ್ಷ ಮುಂದಿನ ವಿಷಯವನ್ನೇ ಅವರು ಮಾತಾಡ್ತಾರೆ.
ಹಾಗಾದರೆ ಈಗಿನಿಂದ ಅವರು ಏನೇನು ಸುಳ್ಳು ಹೇಳಬಹುದು? ನಲವತ್ತು ವರ್ಷಗಳ ಹಿಂದಿನ ಯಾವ ವಿಷಯವನ್ನು ಪ್ರಸ್ತಾಪಿಸಬಹುದು ?
ಪ್ರತಿಪಕ್ಷಗಳು ಯಾವುದೇ ವಿಷಯದ ಬಗ್ಗೆ ಅವರ ಉತ್ತರವನ್ನು ಕೇಳಲು ಪ್ರಾರಂಭಿಸಿದ ತಕ್ಷಣ, ಅವರು 2047ಕ್ಕೆ ಹೋಗುತ್ತಾರೆ ಮತ್ತು ಕೆಲವೊಮ್ಮೆ 1984ಕ್ಕೆ ತಿರುಗುತ್ತಾರೆ.
ಇದುವರೆಗೂ ಅವರ ಭಾಷಣಗಳಲ್ಲಿ ಮನಮೋಹನ್ ಸಿಂಗ್ ಬಂದಿದ್ದಾರೆ, ರಾಜೀವ್ ಗಾಂಧಿ ಬಂದಿದ್ದಾರೆ, ಇಂದಿರಾ ಗಾಂಧಿ ಬಂದಿದ್ದಾರೆ, ಬಹುಶಃ ಇನ್ನು ಜವಾಹರ ಲಾಲ್ ನೆಹರೂ ಶೀಘ್ರದಲ್ಲೇ ಬರಲಿದ್ದಾರೆ.
ಸಂಪತ್ತಿನ ಮರುಹಂಚಿಕೆ ವಿಚಾರವನ್ನು ಅವರು ಕಾಂಗ್ರೆಸ್ ಪ್ರಣಾಳಿಕೆ ಜೊತೆ ಜೋಡಿಸಿಕೊಂಡು ಏನೇನೆಲ್ಲ ಹೇಳಿದರು ಎಂದು ಕೇಳಿಯಾಯಿತು. ಅದೆಲ್ಲವೂ ಸುಳ್ಳು ಎಂದು ಕಾಂಗ್ರೆಸ್ ಸತತವಾಗಿ ಖಂಡಿಸಿತು. ಆದರೆ ಅಷ್ಟಕ್ಕೆ ಸುಮ್ಮನಾಗದ ಮೋದಿ ತಮ್ಮ ಆ ಸುಳ್ಳಿಗೆ ಇನ್ನೊಂದು ಹೊಸ ಸುಳ್ಳು ಸೇರಿಸಿದರು.
ಇಂದಿರಾ ಗಾಂಧಿ ಅವರ ಹತ್ಯೆ ಬಳಿಕ ಅವರಿಗೆ ಸೇರಿದ ಆಸ್ತಿಗಳು ಹಾಗೂ ಕುಟುಂಬದ ಸ್ವತ್ತು ಸರಕಾರದ ವಶವಾಗುವುದನ್ನು ತಪ್ಪಿಸಿ ಆಸ್ತಿ ಉಳಿಸಿಕೊಳ್ಳುವ ಸಲುವಾಗಿ ರಾಜೀವ್ ಗಾಂಧಿ ಅವರು ಪಿತ್ರಾರ್ಜಿತ ಕಾನೂನನ್ನೇ ರದ್ದು ಮಾಡಿದರು ಎಂದುಬಿಟ್ಟರು. ಮೋದಿಯ ಆ ಹೇಳಿಕೆ ಕೂಡ ಸುಳ್ಳು ಎಂದು ಕಾಂಗ್ರೆಸ್ ಹೇಳಿತು.
ಹೀಗೆ ಮೋದಿ ಸುಳ್ಳುಗಳು ಮುಂದುವರಿದಿವೆ. ಅವರ ಹಿಂದಿನ ಸುಳ್ಳಿಗೂ ಹೊಸ ಸುಳ್ಳಿಗೂ ಯಾವ ಸಂಬಂಧವೂ ಇರುವುದಿಲ್ಲ.
ಇದೊಂದು ಬಗೆಯಲ್ಲಿ ‘ವಂದೇ ಭಾರತ್’ ಕುರಿತ ಸುಳ್ಳುಗಳ ಹಾಗೆ.
ಜನಸಾಮಾನ್ಯರು ಪ್ರಯಾಣಿಸುವ ಸಾವಿರಾರು ರೈಲುಗಳ ವಿಚಾರವನ್ನೆಂದೂ ಎತ್ತದ ಮೋದಿ ನಾಲ್ಕು ಜನ ಓಡಾಡುವ ನಾಲ್ಕು ವಂದೇ ಭಾರತ್ ರೈಲುಗಳೇ ಇಡೀ ಭಾರತೀಯ ರೈಲ್ವೆ ಅನ್ನುವ ಹಾಗೆ ಮಾತಾಡುವುದನ್ನೂ ನೋಡಿದ್ದೇವೆ.
ಬೇರೆ ರೈಲುಗಳ ದುರವಸ್ಥೆ ಏನಾದರೂ ಇರಲಿ, ಮೋದಿ ಸರಕಾರ ಮಾತ್ರ ಜನರಿಗೆ ವಂದೇ ಭಾರತ್ ರೈಲುಗಳ ವೀಡಿಯೊ ತೋರಿಸುತ್ತ, ಭ್ರಮೆಯ ನಶೇಯೇರಿಸುತ್ತದೆ.
ಹೀಗೆ ಮೋದಿ ಹೇಳುವ ಸುಳ್ಳುಗಳೂ ಅಷ್ಟೆ. ಸಂಪತ್ತಿನ ಮರುಹಂಚಿಕೆ ವಿಚಾರದಲ್ಲಿ ಕಾಂಗ್ರೆಸ್ ವಿರುದ್ಧ ಅವರು ಹೇಳಿರುವ ಸುಳ್ಳು ಕೂಡ ವಂದೇ ಭಾರತ್ ಸುಳ್ಳಿನ ಥರವೇ.
ದೇಶದಲ್ಲಿ ಜನ ನಿರುದ್ಯೋಗಿಗಳಾಗಿ ಒದ್ದಾಡುತ್ತಿದ್ದಾರೆ. ಬೆಲೆಯೇರಿಕೆಯಿಂದ ಜನ ಹೈರಾಣಾಗಿ ಹೋಗಿದ್ಧಾರೆ. ಅವರೆದುರು ಈ ದೇಶದ ಪ್ರಧಾನಿ ಆ ಬಗ್ಗೆ ಕಳವಳ ಪಡುವುದೇ ಇಲ್ಲ. ಬದಲಾಗಿ ಇನ್ನೂ ಅವರೆದುರು ಸುಳ್ಳು ಹೇಳಿಕೊಂಡೇ ಹತ್ತು ವರ್ಷ ಕಳೆದವರು. ಈಗ ಮತ್ತೊಂದು ಅವಧಿಗೂ ಅದೇ ಸುಳ್ಳುಗಳ ಸೇತುವೆ ಕಟ್ಟಿಕೊಂಡು ಹೋಗಲು ತಯಾರಾಗಿದ್ದಾರೆ.
ಆ ಜನಸಾಮಾನ್ಯರ, ಆ ಬಡವರ ಎದುರು, ಆ ಅಸಹಾಯಕರ ಎದುರು ಮೋದಿ ಸುಳ್ಳುಗಳ ಸತತ ಮೆರವಣಿಗೆ.
ಕಾಂಗ್ರೆಸ್ ಪ್ರಣಾಳಿಕೆ ಬಗ್ಗೆ ಮಾತಾಡುವಾಗ, ಇಂದಿರಾ ಗಾಂಧಿಯವರ ವಿಚಾರ ಏಕೆ ಬೇಕು, ರಾಜೀವ್ ಗಾಂಧಿ ವಿಚಾರ ಯಾಕೆ ಬೇಕು? ಅದಕ್ಕಿಂತಲೂ ಅವರ ಬಗ್ಗೆ ಸುಳ್ಳುಗಳನ್ನು ಹೇಳುವುದೇಕೆ?
ವಿರೋಧಿಗಳ ಬಗ್ಗೆ ಸುಳ್ಳು ಹೇಳಿಯೇ, ಅಪಪ್ರಚಾರ ಮಾಡಿಯೇ ವೋಟು ಗಿಟ್ಟಿಸಬೇಕಾದ ಸ್ಥಿತಿ ಮೋದಿಗೆ ಬಂದಿದೆಯೇ?
ಇಂದಿರಾ ಅವರು ತಮ್ಮ ಎಲ್ಲ ಆಸ್ತಿಯನ್ನು ಜವಾಹರಲಾಲ್ ನೆಹರೂ ನಿಧಿಗೆ ದಾನ ಮಾಡಿದ್ದುದಾಗಿ ಕಾಂಗ್ರೆಸ್ ತನ್ನ ಉತ್ತರದಲ್ಲಿ ಈಗಾಗಲೇ ಸ್ಪಷ್ಟಪಡಿಸಿದೆ.
ಚುನಾವಣೆ ಸೋಲಿನ ಬಳಿಕ ಇಂದಿರಾ ಗಾಂಧಿಯವರಿಗೆ ಇರಲು ಮನೆಯೂ ಇರಲಿಲ್ಲ. ಆದರೆ ಮೋದಿ ಸುಳ್ಳುಗಳು ಮಾತ್ರ ಇಂದಿರಾ ಗಾಂಧಿ ಆಸ್ತಿ ವಿಚಾರವಾಗಿ, ಅದನ್ನು ನಂತರದ ಪೀಳಿಗೆ ಅನುಭವಿಸಿತು ಎನ್ನುವ ವಿಚಾರವಾಗಿ ಬರುತ್ತಲೇ ಇವೆ.
ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಹೇಳಿದ್ದು ದೇಶದಲ್ಲಿನ ವಾಸ್ತವ ತಿಳಿಯಲು ಆಸ್ತಿ ಸರ್ವೇ ಮಾಡಲಾಗುವುದು ಎಂದು ಮಾತ್ರ.
ಆದರೆ ಕಾಂಗ್ರೆಸ್‌ನವರು ಹಿಂದೂಗಳ ಚಿನ್ನ ಬೆಳ್ಳಿ ಕಸಿದು, ಅವರ ಮಂಗಳಸೂತ್ರವನ್ನೂ ಕಸಿದು ಮುಸ್ಲಿಮರಿಗೆ ನೀಡಲಿದ್ದಾರೆ ಎನ್ನುವಲ್ಲಿಯವರೆಗೆ ಮೋದಿ ಸುಳ್ಳುಗಳು ಲಂಗು ಲಗಾಮಿಲ್ಲದೆ ಸಾಗುತ್ತವೆ ಮತ್ತು ಅದರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕಾಗಿದ್ದ ಚುನಾವಣಾ ಆಯೋಗಕ್ಕೆ ಜೀವವೇ ಇಲ್ಲ.
ಇದೇ ಮೋದಿ ಸರಕಾರ ಕೋಟಿಗಟ್ಟಲೆ ಬಡ ಕುಟುಂಬಗಳಿಗೆ ಅವರ ಚಿನ್ನವನ್ನು ಇಟ್ಟುಕೊಂಡು ಸಾಲ ಕೊಟ್ಟಿದೆ. ಆರ್‌ಬಿಐ ಹೇಳುವ ಪ್ರಕಾರ ಅಂತಹ ಒಂದೂವರೆ ಕೋಟಿ ಕುಟುಂಬಗಳ ಸಾಲ 2024ರ ಮಾರ್ಚ್‌ವರೆಗೆ ಒಂದು ಲಕ್ಷ ಕೋಟಿ ರೂ. ಇದೆ.
ಇದು ಕೇವಲ ಬ್ಯಾಂಕುಗಳಿಂದ ಪಡೆದ ಸಾಲ. ಇನ್ನು ಅಸಂಘಟಿತ ಕ್ಷೇತ್ರಗಳಿಂದ, ಶ್ರೀಮಂತರ ಬಳಿ ಚಿನ್ನ ಅಡವಿಟ್ಟು ಸಾಲ ಪಡೆದ ಲೆಕ್ಕ ನೋಡಿದರೆ ದೇಶದ ಪ್ರತೀ ನಾಲ್ಕು ಕುಟುಂಬಗಳಲ್ಲಿ ಒಂದು ಈ ರೀತಿ ಸಾಲ ಪಡೆದಿದೆ.
ಹೀಗೆ ಬಡವರ ಚಿನ್ನ ಇಟ್ಟುಕೊಂಡು ಸಾಲ ನೀಡಿರುವಾಗ ಮೋದಿ ಮಂಗಳಸೂತ್ರದ ಬಗ್ಗೆ ಮಾತಾಡುವ ಯಾವ ನೈತಿಕತೆ ಹೊಂದಿದ್ದಾರೆ ಎಂದು ಜೈರಾಮ್ ರಮೇಶ್ ಕೇಳಿದ್ದಾರೆ.
ಕಾಂಗ್ರೆಸ್ ವೆಬ್‌ಸೈಟ್ ಹೇಳುವ ಪ್ರಕಾರ, ದೇಶದಲ್ಲಿ ಸ್ವಾತಂತ್ರ್ಯಾನಂತರ ಆರ್ಥಿಕ ಸ್ಥಿತಿ ಉತ್ತಮವಿರಲಿಲ್ಲ. ಆಗ ನೆಹರೂ ಸ್ವತಃ ತನ್ನ ಸಂಪತ್ತಿನ ಶೇ.98ರಷ್ಟನ್ನು ದೇಶಕ್ಕೆ ದಾನ ಮಾಡಿದರು. ಅಂದು ಒಟ್ಟು 196 ಕೋಟಿ ರೂ. ಆಸ್ತಿಯನ್ನು ಅವರು ದೇಶಕ್ಕಾಗಿ ಕೊಟ್ಟರು. ಇವತ್ತಿನ ರೂ. 12,000 ಕೋಟಿಗೆ ಅದು ಸಮ.
ದೇಶಕ್ಕಾಗಿ ಇಷ್ಟು ದೊಡ್ಡ ತ್ಯಾಗ ಮಾಡಿದ್ದ ನೆಹರೂರನ್ನು ಇದೇ ಮೋದಿ ಮತ್ತವರ ಜನ ಕಳೆದ 10 ವರ್ಷಗಳಲ್ಲಿ ಹೇಗೆ ಹೇಗೆಲ್ಲ ಆಡಿಕೊಂಡರಲ್ಲವೆ?
ಕಳೆದ ಫೆಬ್ರವರಿಯಲ್ಲಿ ಸಂಸತ್ತಿನಲ್ಲಿ ಮೋದಿ ಸರಕಾರ ಹೇಳಿರುವ ಪ್ರಕಾರ, ಒಂದು ಕೋಟಿಗಿಂತ ಅಧಿಕ ಗಳಿಕೆ ಇರುವವರ ಸಂಖ್ಯೆ ಈ ದೇಶದಲ್ಲಿ ಕೇವಲ 2,16,000.
ದೇಶದ ಒಟ್ಟು ಜನಸಂಖ್ಯೆ 140 ಕೋಟಿ.
ಸಂಪತ್ತು ಸಾಮಾನ್ಯ ಜನರ ಕೈಯಿಂದ ಅದನ್ನು ಕಸಿದು ಮತ್ತಾರಿಗೋ ಕೊಡುತ್ತೇವೆಂದು ರಾಹುಲ್ ಆಗಲೀ ಕಾಂಗ್ರೆಸ್ ಆಗಲೀ ಎಲ್ಲೂ ಹೇಳಿಯೇ ಇಲ್ಲ.
ಕೇವಲ 25 ಶ್ರೀಮಂತರಿಗೋಸ್ಕರ ಕಳೆದ 10 ವರ್ಷಗಳಲ್ಲಿ ಮೋದಿ ಸರಕಾರ ಮಾಫಿ ಮಾಡಿದ 16 ಲಕ್ಷ ಕೋಟಿಯಲ್ಲಿ ಒಂದು ಸಣ್ಣ ಪಾಲನ್ನಾದರೂ ಬಡವರಿಗೆ ಕೊಟ್ಟಿದ್ದರೆ ಅವರ ಬದುಕು ಸುಧಾರಿಸಿಬಿಡುತ್ತಿತ್ತು ಎಂದಷ್ಟೇ ರಾಹುಲ್ ಹೇಳಿದ್ದು. ಈ ಮಾತನ್ನು ಬಿಜೆಪಿ ಪೂರ್ತಿಯಾಗಿ ತಿರುಚಿಬಿಟ್ಟಿತು.
ದೇಶದ ಕೆಲವೇ ಕೆಲವು ಜನರ ಕೈಯಲ್ಲಿ ದೇಶದ ಸಂಪತ್ತಿನ ಬಹುದೊಡ್ಡ ಪಾಲು ಇದೆ. ಅವರು ಒಂದಕ್ಕಿಂತ ನಾಲ್ಕೈದು ಐಫೋನ್‌ಗಳು, ಮೂರ್ನಾಲ್ಕು ಕಾರುಗಳು, ಬಂಗಲೆ ಎಲ್ಲ ಖರೀದಿ ಮಾಡಬಲ್ಲರು, ಮಾಡುತ್ತಿದ್ದಾರೆ.ಅಷ್ಟಾಗಿಯೂ ಅವರನ್ನೇ ಇನ್ನಷ್ಟು ಬೆಳೆಸುವ ಕೆಲಸ ಮೋದಿ ಸರಕಾರದಿಂದ ಆಗುತ್ತಿದೆಯೇ ಹೊರತು ಬಡವರ ಕಡೆ ಅವರ ದೃಷ್ಟಿಯೇ ಇಲ್ಲ.
‘ಚಾರ್ ಸೋ ಪಾರ್’, ‘ಮೋದಿ ಕಿ ಗ್ಯಾರಂಟಿ’ ಅನ್ನುವುದನ್ನು ಬಿಟ್ಟು ಮೋದಿ ಈಗ ಬರೀ ಸುಳ್ಳುಗಳ ಮೂಲಕ ಧ್ರುವೀಕರಣ ರಾಜಕಾರಣದಲ್ಲಿ ತೊಡಗಿದ್ದಾರೆ. ಇದನ್ನು ಖಂಡಿಸುವುದು ಅಗತ್ಯ ಎನ್ನುತ್ತಾರೆ ಜೈರಾಮ್ ರಮೇಶ್.
ಒಂದು ತಮಾಷೆಯನ್ನು ಗಮನಿಸಲೇಬೇಕಿದೆ.
ಏನೆಂದರೆ ಮೋದಿ ಬಿಜೆಪಿ ಪ್ರಣಾಳಿಕೆ ಬಗ್ಗೆ ಹೆಚ್ಚು ಮಾತನ್ನೇ ಆಡುವುದಿಲ್ಲ. ಅವರ ಮಾತೇನಿದ್ದರೂ ಕಾಂಗ್ರೆಸ್ ಪ್ರಣಾಳಿಕೆ ಬಗ್ಗೆ. ಮಡಿಲ ಮೀಡಿಯಾಗಳೂ ಇದನ್ನೇ ಫಾಲೋ ಮಾಡುತ್ತಿವೆ. ಕಾರಣವಿಷ್ಟೆ, ಮುಸ್ಲಿಮರ ವಿರುದ್ಧ ಮಾತಾಡಿದ ತಕ್ಷಣ ಅದು ಜನರನ್ನು ಹಿಡಿದಿಡುತ್ತದೆ, ಆಕರ್ಷಿಸುತ್ತದೆ.
ಮೋದಿ ಕೂಡ ಇಂಥದೊಂದು ತಂತ್ರಕ್ಕೆ ಜೋತುಬಿದ್ದಿರುವುದು ಮಾತ್ರವಲ್ಲ, ಮುಸ್ಲಿಮ್ ದ್ವೇಷವನ್ನು ಹರಡುವುದು ಅವರು ಮತ್ತು ಅವರ ಪಕ್ಷದವರು ನಿರಂತರವಾಗಿ ಬಳಸುತ್ತ ಬಂದಿರುವ ಅಸ್ತ್ರವೇ ಆಗಿದೆ.
ಕಳೆದ 10 ವರ್ಷಗಳಲ್ಲಿ ದೇಶದಲ್ಲಿ ಏನು ಒಳ್ಳೆಯದಾಗಿದೆ?
ಭಾರತದ ರಫ್ತು ಶೇ.3ರಷ್ಟು ಕಡಿಮೆಯಾಗಿದೆ. ಕಚ್ಚಾ ತೈಲ ಆಮದು ಶೇ.14ರಷ್ಟು ಹೆಚ್ಚಿದೆ. ಮನಮೋಹನ್ ಸಿಂಗ್ ಅವಧಿಗೆ ಹೋಲಿಸಿದರೆ ಜನರ ಆದಾಯ ಗಳಿಕೆಯ ಪ್ರಮಾಣ ಕಡಿಮೆಯಾಗಿದೆ.
ಷೇರು ಮಾರುಕಟ್ಟೆಯಿಂದ ಆಗುವ ಗಳಿಕೆಯೂ ಇಳಿದಿದೆ. ವಿದೇಶಿ ಹೂಡಿಕೆ ಕಡಿಮೆಯಾಗುತ್ತಲೇ ಇದೆ.
ಕಾಂಗ್ರೆಸ್ ತನ್ನ ಪ್ರಣಾಳಿಕೆಯ ಯುವ ನ್ಯಾಯಪತ್ರದಲ್ಲಿ ಇವತ್ತಿನ ನಿರುದ್ಯೋಗ ದರ ಶೇ.8 ಇದ್ದು, ಪದವೀಧರರಲ್ಲಿ ಶೇ.40ಕ್ಕೂ ಹೆಚ್ಚು ನಿರುದ್ಯೋಗವಿದೆ ಎಂದಿದೆ.
30 ಲಕ್ಷ ಸರಕಾರಿ ಉದ್ಯೋಗಗಳನ್ನು ಭರ್ತಿ ಮಾಡುವುದು ಅಧಿಕಾರಕ್ಕೆ ಬಂದ ತಕ್ಷಣದ ಹೆಜ್ಜೆ ಎಂದು ಕಾಂಗ್ರೆಸ್ ಹೇಳಿದೆ.
ಡಿಪ್ಲೊಮಾ ಪಡೆದ 25 ವರ್ಷದ ಒಳಗಿನವರಿಗೆ ಒಂದು ವರ್ಷದ ಅಪ್ರೆಂಟಿಸ್ ಶಿಪ್ ಮೂಲಕ ಒಂದು ಲಕ್ಷ ರೂ. ಕೊಡಲಾಗುವುದು ಎಂದಿದೆ.
ಆದರೆ ಬಿಜೆಪಿ ಪ್ರಣಾಳಿಕೆಯಲ್ಲಿ ನಿರುದ್ಯೋಗ ಕುರಿತ ಅಂಕಿಅಂಶಗಳೇ ಇಲ್ಲ. ಆದರೆ ಕಾಂಗ್ರೆಸ್ ಪ್ರಣಾಳಿಕೆ ಮುಸ್ಲಿಮ್ ಲೀಗ್ ಮನಃಸ್ಥಿತಿಯದ್ದು ಎಂದು ಟೀಕಿಸಲು ಮಾತ್ರ ಮೋದಿ ಹಿಂದೆಮುಂದೆ ನೋಡುವುದಿಲ್ಲ.
ಪ್ರಣಾಳಿಕೆಯಲ್ಲಿ ಹಿಂದೂ-ಮುಸ್ಲಿಮ್ ಎಂಬ ಶಬ್ದವೂ ಇಲ್ಲದಿರುವಾಗ ಅದು ಹೇಗೆ ಮೋದಿ ಇಂತಹ ಆಧಾರರಹಿತ ಟೀಕೆ ಮಾಡುತ್ತಾರೆ?
ಅವರು ಹೇಳಿದ್ದೆಲ್ಲವೂ ಸುಳ್ಳು ಎಂದ ತಕ್ಷಣ ಮೋದಿ ಮಾತೇ ಇಲ್ಲ. ಅದಕ್ಕೆ ಯಾವ ಉತ್ತರವೂ ಇಲ್ಲ. ಬದಲಾಗಿ ಮತ್ತೊಂದು ಸುಳ್ಳನ್ನು ಹೇಳುತ್ತ, ಜನರನ್ನು ಮತ್ತಷ್ಟು ವಂಚಿಸುತ್ತ ಹೋಗುತ್ತಾರೆ.
ಹಾಗಾಗಿಯೇ, ತಮ್ಮ ಪ್ರಣಾಳಿಕೆಯಲ್ಲಿ ಏನಿದೆ ಎಂದು ಮುಖತಃ ಕಂಡು ಮನವರಿಕೆ ಮಾಡಿಕೊಡಲು ಬಹಳ ಖುಷಿ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ಮೋದಿಗೆ ಪತ್ರ ಬರೆದಿರುವುದು.
ಮೋದಿ ಸರಕಾರ ಮಾಡುತ್ತ ಬಂದಿರುವುದಾದರೂ ಏನು? ತನಿಖಾ ಸಂಸ್ಥೆಗಳನ್ನು ವಿರೋಧಿಗಳ ವಿರುದ್ಧ ಬಳಸುವುದು, ವಿಪಕ್ಷಗಳನ್ನು ಮುಗಿಸಿಹಾಕುವ ಹುನ್ನಾರದಲ್ಲಿ ತೊಡಗಿರುವುದು ಮತ್ತು ಇದೆಲ್ಲದರ ಮೂಲಕ ಪ್ರಜಾಸತ್ತೆಯನ್ನು ಅತ್ಯಂತ ಅಪಾಯದಲ್ಲಿ ಸಿಲುಕಿಸಿರುವುದು.
ಇದೆಲ್ಲವನ್ನೂ ಮರೆಸಲು ಹೊಸ ಹೊಸ ಸುಳ್ಳುಗಳನ್ನು ಹೇಳುತ್ತ, ಜನರ ಚಪ್ಪಾಳೆ ಗಿಟ್ಟಿಸುತ್ತ, ಅವರನ್ನೇ ವಂಚಿಸುತ್ತ ಹೊರಟಿರುವುದು.
ತನಿಖಾ ಸಂಸ್ಥೆಗಳ ವಿಚಾರದಲ್ಲಿ ರಾಜಕೀಯ ಹಸ್ತಕ್ಷೇಪವೇ ಇಲ್ಲ ಎನ್ನುತ್ತಲೇ, ಇನ್ನೊಂದೆಡೆ ಅಜಿತ್ ಪವಾರ್ ಅವರನ್ನು ಎನ್‌ಸಿಪಿಯಿಂದ ಸೆಳೆದು ತಮ್ಮ ಪಕ್ಷದ ಜೊತೆಗಿನ ಸರಕಾರದ ಭಾಗವಾಗಿಸುವುದು ಮತ್ತು ಅವರು ಅವರ ಜೊತೆಗಾರರ ವಿರುದ್ಧದ ಕೇಸ್‌ಗಳನ್ನೆಲ್ಲ ಕ್ಲೋಸ್ ಮಾಡುವುದು. ಇದು ಯಾವ ಥರದ ನಾಟಕ?
ಆದರೆ ಇನ್ನೊಂದೆಡೆ ಯಾವುದೇ ಆಧಾರವಿಲ್ಲದೆ ಇದ್ದರೂ ಪ್ರತಿಪಕ್ಷ ನಾಯಕರನ್ನು, ಎರಡು ರಾಜ್ಯಗಳ ಮುಖ್ಯಮಂತ್ರಿಗಳನ್ನು ಜೈಲಿನಲ್ಲಿಡಲಾಗುತ್ತದೆ.
ಪ್ರಶ್ನಿಸುವ ಪತ್ರಕರ್ತರನ್ನು ಯಾವ ಆಧಾರವೂ ಇಲ್ಲದೆ ವರ್ಷಗಟ್ಟಲೆ ಜೈಲಿನಲ್ಲಿಡಲಾಗುತ್ತಿದೆ.
ಹೀಗೆ ನಿಧಾನವಾಗಿ ದೇಶದ ಸ್ವರೂಪವನ್ನೇ ಬದಲಿಸುವ ಎಲ್ಲ ತಯಾರಿಯೂ ಆಗುತ್ತಿದೆ. ಅದಕ್ಕೆ ಬೇಕಾದ ಪೂರ್ವಸಿದ್ಧತೆಗಳೂ ಆಗುತ್ತಿರುವ ಹಾಗಿದೆ. ಹಾಗಾಗಿಯೇ ಮೋದಿ ಸುಳ್ಳುಗಳು ಜಾಸ್ತಿಯಾಗುತ್ತಲೇ ಇವೆ.
ಸುಳ್ಳುಗಳ ಹೊರತಾಗಿ ಮೋದಿ ರಾಜಕಾರಣ ಇಲ್ಲವೇ ಇಲ್ಲವೆನ್ನುವಂತಾಗಿದೆ. ಅವರ ಸುಳ್ಳುಗಳ ಬಗ್ಗೆ ಹೇಳದೆ ಅವರ ರಾಜಕೀಯವನ್ನು ವಿಶ್ಲೇಷಿಸುವುದೂ ಸಾಧ್ಯವಿಲ್ಲವಾಗಿದೆ.
10 ವರ್ಷಗಳಿಂದ ಮೋದಿ ಪ್ರಧಾನಿಯಾಗಿದ್ದಾರೆ. ಅವರ ಬಿಜೆಪಿ ವಿಶ್ವದಲ್ಲಿಯೇ ಶ್ರೀಮಂತ ಪಕ್ಷ. ಕೋಟಿಗಟ್ಟಲೆ ದೇಣಿಗೆ ಹಣ ಅದರ ಬಳಿ ಇದೆ. ಲಕ್ಷಾಂತರ ಕಾರ್ಯಕರ್ತರಿದ್ದಾರೆ. ಇಷ್ಟಿದ್ದೂ ಮೋದಿ ವಿಪಕ್ಷದ ವಿರುದ್ಧ ಸುಳ್ಳು ಹೇಳುತ್ತ ತಿರುಗಾಡಬೇಕಾದ ಸ್ಥಿತಿ ಏಕೆ ಬಂದಿದೆ?
ವಿಶೇಷವೇನೆಂದರೆ, ಮೋದಿಯವರ ಸುಳ್ಳಿನ ಕಾರಣಕ್ಕೋ ಏನೋ, ಬಹಳಷ್ಟು ಜನರು ಕಾಂಗ್ರೆಸ್ ಪ್ರಣಾಳಿಕೆಯನ್ನು ಡೌನ್‌ಲೋಡ್ ಮಾಡಿ ಓದಿದ್ದಾರೆ. ಮೋದಿ ಹೇಳಿರುವುದಕ್ಕೂ ಅದರಲ್ಲಿ ಇರುವುದಕ್ಕೂ ಹೋಲಿಕೆ ಮಾಡಿ ಜನರು ನೋಡುತ್ತಿದ್ದಾರೆ ಎನ್ನುವುದು ಸ್ಪಷ್ಟ.
ಅಷ್ಟರಮಟ್ಟಿಗೆ ಕಾಂಗ್ರೆಸ್ ಪ್ರಣಾಳಿಕೆಗೆ ಭರ್ಜರಿ ಪ್ರಚಾರ ಕೊಟ್ಟಿದ್ದಾರೆ ಪ್ರಧಾನಿ ಮೋದಿ.
ಮೋದಿ ಏನಿದ್ದರೂ ತಮ್ಮ ಪರ ಎಂಬುದು ಶ್ರೀಮಂತರು ಸಂಭ್ರಮಿಸುವ ವಿಷಯ. ಮೂರನೇ ಬಾರಿ ಮೋದಿ ಅಧಿಕಾರಕ್ಕೆ ಬಂದರೆ ಉದ್ಯಮಿಗಳ ಮೇಲೆ ಲಗಾಮೇ ಇಲ್ಲದ ಹಾಗಾಗುತ್ತದೆ ಎಂಬುದಂತೂ ನಿಜ.
ಬಡವರನ್ನು ಮಾತ್ರ ಕೇಳುವವರೇ ಇಲ್ಲದಂತಾಗಲಿದೆ. ಧರ್ಮದ ರಾಜಕಾರಣ ಅಬ್ಬರಿಸುವಾಗ ಬಡವರ ಹಸಿವು, ಕೆಲಸವಿಲ್ಲದ ಅವರ ಸ್ಥಿತಿ ಇದೆಲ್ಲವೂ ಮೂಕರೋದನ ಮಾತ್ರವಾಗಲಿದೆ.
ಮೋದಿ ಹೊಸ ಸುಳ್ಳುಗಳನ್ನು ಕಟ್ಟಿ ಕಟ್ಟಿ ಅವರ ಮುಂದೆ ಇಡುತ್ತ ಹೋಗಲಿದ್ದಾರೆ.