ಮುಂಗಾರು ಮಳೆ: ಚುರುಕುಗೊಂಡ ಕೃಷಿ ಚಟುವಟಿಕೆ

Update: 2024-07-01 09:56 GMT

ಅವಿಭಜಿತ ಕಾರ್ಕಳ ತಾಲೂಕು ವ್ಯಾಪ್ತಿಯಲ್ಲಿ ಈ ಬಾರಿ ವಾಡಿಕೆಯಂತೆ ಮುಂಗಾರು ಮಳೆ ಚುರುಕುಗೊಂಡಿದ್ದು, ಕೃಷಿ ಚಟುವಟಿಕೆ ಪ್ರಗತಿಯಲ್ಲಿದೆ. ಆದರೆ ಕೃಷಿ ಕೂಲಿ ಕಾರ್ಮಿಕರ ಕೊರತೆ ಎದ್ದು ಕಾಣುತ್ತಿದೆ.

ಗದ್ದೆಗಳಲ್ಲಿ ಕೃಷಿ ಕಾರ್ಮಿಕರ ಜೊತೆ ಉಳುಮೆಗಾಗಿ ಉತ್ತರ ಕರ್ನಾಟಕ ಹಾಗೂ ಹೊರ ರಾಜ್ಯಗಳಿಂದ ಉಳುಮೆಯಂತ್ರಗಳು ಟ್ರಾಕ್ಟರ್‌ಗಳು ಕೃಷಿ ಕಾರ್ಯದಲ್ಲಿ ತೊಡಗಿಸಿಕೊಂಡಿದೆ.

ಕಾರ್ಕಳ ಹೆಬ್ರಿ ತಾಲೂಕು ವ್ಯಾಪ್ತಿಯ ಎಲ್ಲಾ ರೈತ ಸಂಪರ್ಕ ಕೇಂದ್ರಗಳ ವ್ಯಾಪ್ತಿಯಲ್ಲಿ ರೈತರಿಗೆ ಎಂ4, ಸತ್ಯ ಕೆಂಪು ಮುಕ್ತಿ ಬೀಜಗಳನ್ನು ಹಂಚಲಾಗಿದೆ. ಇತ್ತೀಚಿನ ವರ್ಷಗಳಲ್ಲಿ ರೈತರು ಹೆಚ್ಚಾಗಿ ಸಾವಯವ ಕೃಷಿಗೆ ಒತ್ತು ನೀಡುತ್ತಿದ್ದು, ಹಟ್ಟಿಗೊಬ್ಬರಗಳನ್ನೇ ಬಳಸುತ್ತಿದ್ದಾರೆ. ಆದರೆ ಎಲ್ಲಾ ಕೃಷಿಪತ್ತಿನ ಸೊಸೈಟಿಗಳಲ್ಲಿ ಯೂರಿಯಾ ಮತ್ತಿತರ ರಸಗೊಬ್ಬರಗಳನ್ನೂ ದಾಸ್ತಾನು ಇರಿಸಲಾಗಿದೆ.

ರೈತರಿಗೆ ಸಹಾಯಧನದ ಅಡಿಯಲ್ಲಿ ಬಿತ್ತನೆ ಬೀಜ ನೀಡಲಾಗುತ್ತಿದ್ದು, 90 ಶೇಕಡಾದಷ್ಟು ರೈತರಿಗೆ ಫಾರ್ಮರ್ ಐಡಿಗಳನ್ನು ವಿತರಿಸಲಾಗಿದ್ದು, ಐಡಿ ಮೂಲಕವೇ ಭತ್ತದ ಬೀಜಗಳ ಪೂರೈಕೆ ಮಾಡಲಾಗುತ್ತಿದೆ.

ಕರಾವಳಿ ಭಾಗದಲ್ಲಿ ಕುಚ್ಚಲಕ್ಕಿಯನ್ನು ಹೆಚ್ಚಾಗಿ ಬಳಸುವ ಕಾರಣ ಕುಚ್ಚಲಕ್ಕಿ ತಳಿಗಳ ಬಿತ್ತನೆಗೆ ಕೃಷಿ ಇಲಾಖೆ ರೈತರಿಗೆ ಉತ್ತೇಜನ ನೀಡುತ್ತಿದೆ. ಈ ಬಾರಿ ಕಾರ್ಕಳ ತಾಲೂಕಿನ ಕಾರ್ಕಳ ಹಾಗೂ ಅಜೆಕಾರು ರೈತ ಸಂಪರ್ಕ ಕೇಂದ್ರಗಳಲ್ಲಿ ಭದ್ರ (ಎಂಒ 4 ತಳಿ) ಎಂಒ 16 (ಉಮಾ) ತಳಿ ಸಹ್ಯಾದ್ರಿ ಕೆಂಪು ಮುಕ್ತಿ ಬಿತ್ತನೆ ಬೀಜಗಳು ಇವೆ. ಒಟ್ಟು 180.40 ಕ್ವಿಂಟಾಲ್ ಬಿತ್ತನೆ ಬೀಜ ಸರಬರಾಜು ಮಾಡಲಾಗಿದ್ದು, 75.40 ಕ್ವಿಂಟಾಲ್ ಬಿತ್ತನೆ ಬೀಜ ವಿತರಣೆ ಮಾಡಲಾಗಿದೆ.

ಕಾರ್ಕಳ ಹೋಬಳಿಯಲ್ಲಿ ಭದ್ರ ತಳಿ 65 ಕ್ವಿ. ಸರಬರಾಜಾಗಿದ್ದು 49 ಕ್ವಿಂಟಾಲ್ ವಿತರಣೆ ಮಾಡಲಾಗಿದೆ. ಉಮಾ ತಳಿ 10.20 ಕ್ವಿಂಟಾಲ್ ಸರಬರಾಜಾಗಿದ್ದು 0.9 ಕ್ವಿಂಟಾಲ್ ವಿತರಣೆ ಮಾಡಲಾಗಿದೆ., ಸಹ್ಯಾದ್ರಿ ಕೆಂಪು ಮುಕ್ತಿ 25. ಕ್ವಿಂಟಾಲ್ ಸರಬರಾಜು ಮಾಡಲಾಗಿದ್ದು, 4 ಕ್ವಿಂಟಾಲ್ ವಿತರಣೆ ಮಾಡಲಾಗಿದೆ.

ಅಜೆಕಾರು ಹೋಬಳಿಯಲ್ಲಿ ಭದ್ರ ತಳಿ 60 ಕ್ವಿ. ಸರಬರಾಜಾಗಿದೆ. ಈ ಭಾಗದ ರೈತರು ಕುಚ್ಚಲಕ್ಕಿಯ ತಳಿಗಳನ್ನು ಬೆಳೆಸುತ್ತಿದ್ದು, ಭದ್ರ (ಎಂಒ 4 ತಳಿ) ಎಂಒ 16 (ಉಮಾ) ತಳಿ, ಸಹ್ಯಾದ್ರಿ ಕೆಂಪು ಮುಕ್ತಿ ಬಿತ್ತನೆಗಳನ್ನೆ ರೈತರು ಮಜಲು ಗದ್ದೆಗಳಲ್ಲಿ ಬೆಳೆಯುತ್ತಿದ್ದಾರೆ.

ಕಾರ್ಕಳ ಹಾಗೂ ಹೆಬ್ರಿ ತಾಲೂಕಿಗೆ ಅನುಗುಣವಾಗಿ ಮೇ ತಿಂಗಳಾಂತ್ಯಕ್ಕೆ 573 ಟನ್ ಬೇಡಿಕೆ ಇದ್ದು, 655.62 ಟನ್ ವಿವಿಧ ಶ್ರೇಣಿಯ ರಸಗೊಬ್ಬರಗಳು ದಾಸ್ತಾನಿರಿಸಲಾಗಿದೆ.

ಭದ್ರ (ಎಂಒ 4 ತಳಿ) ಹಾಗೂ ಸಹ್ಯಾದ್ರಿ ಕೆಂಪು ಮುಕ್ತಿ ಕೆ.ಜಿ.ಯೊಂದಕ್ಕೆ 55.5 ರೂ. ದರ ನಿಗದಿ ಪಡಿಸಿದ್ದು, ಸರಕಾರದ 8 ರೂ. ಸಹಾಯ ಧನದೊಂದಿಗೆ ರೈತರಿಗೆ ಕೆ.ಜಿ.ಯೊಂದಕ್ಕೆ 47.5ರಂತೆ 25 ಕೆ.ಜಿ. ಬಿತ್ತನೆ ಬೀಜ ನೀಡಲಾಗುತ್ತಿದೆ. ಉಮಾ ಕೆ.ಜಿ.ಯೊಂದಕ್ಕೆ 39.25 ರೂ.ನಂತೆ ಸಬ್ಸಿಡಿಯೊಂದಿಗೆ ಲಭ್ಯವಾಗುತ್ತಿದೆ

ಕಾರ್ಕಳ ಹಾಗೂ ಹೆಬ್ರಿ ತಾಲೂಕುಗಳಲ್ಲಿ ಸುಮಾರು 7,000 ಎಕರೆ ಪ್ರದೇಶದಲ್ಲಿ ಭತ್ತ ಬಿತ್ತನೆ ಮಾಡುವ ಕೆಲಸ ನಡೆಯುತ್ತಿದೆ. ಊರಿನ ಕೂಲಿ ಕಾರ್ಮಿಕರು ಮಳೆಯಲ್ಲಿ ಕೃಷಿ ಚಟುವಟಿಕೆಗೆ ಉತ್ಸಾಹ ತೋರದ ಕಾರಣ ಕೃಷಿ ಮಾಡಲು ಉತ್ತರ ಕರ್ನಾಟಕ ಹಾಗೂ ಹೊರ ರಾಜ್ಯದ ಕೂಲಿ ಕಾರ್ಮಿಕರನ್ನು ಅವಲಂಬಿಸಬೇಕಾದ ಅನಿವಾರ್ಯತೆ ನಿರ್ಮಾಣವಾಗಿದೆ. ಕೃಷಿ ಕೂಲಿಯಾಳುಗಳ ಕೊರತೆ ಒಂದೆಡೆಯಾದರೆ ಮತ್ತೊಂದು ಕಡೆ ಕೂಲಿ ಕಾರ್ಮಿಕರ ಸಂಬಳ ಕೂಡ ಹೆಚ್ಚಳವಾಗಿದೆ. ಕೃಷಿ ಕೂಲಿಯಾಳುಗಳಿಗೆ ನಿತ್ಯ 600-800 ವರೆಗೆ ದಿನಗೂಲಿ ನೀಡಬೇಕಾಗುತ್ತದೆ.

ಮಳೆಗಾಲ ಪ್ರಾರಂಭವಾಯಿತೆಂದರೆ ಉತ್ತರ ಕರ್ನಾಟಕದ ಕೂಲಿ ಕಾರ್ಮಿಕರು ಕೂಡ ತಮ್ಮ ಊರಿಗೆ ಕೃಷಿ ಕೆಲಸಕ್ಕಾಗಿ ಹಿಂದಿರುಗುತ್ತಾರೆ. ಇದರಿಂದಾಗಿ ಕೃಷಿಕರು ಕೃಷಿ ಭೂಮಿಯನ್ನು ಹಡಿಲು ಬಿಡುವಂತಾಗಿದೆ. ಅದರಲ್ಲೂ ಕೆಲವೆಡೆಗಳಲ್ಲಿ ಕೃಷಿಯಿಂದ ವಿಮುಖರಾಗಿ ತೋಟಗಾರಿಕೆ ಬೆಳೆಗಳತ್ತ ಒಲವು ತೋರುತ್ತಿದ್ದಾರೆ.

ಯುವಕರು ಹಿಂದೇಟು ಹಾಕುವ ಕಾರಣ ಕೃಷಿ ಚಟುವಟಿಕೆಗಳು ಹಿರಿಯರ ಮೇಲೆ ಅವಲಂಬಿತಗೊಂಡಿದೆ. ನಗರ ಪ್ರದೇಶಗಳಲ್ಲಿ ವಾಸಿಸುವ ಯುವ ಸಮುದಾಯ ಕೃಷಿ ಭೂಮಿಯನ್ನು ವಾಣಿಜ್ಯ ಉದ್ದೇಶಗಳಿಗೆ ಬಳಸುತ್ತಿರುವುದು ಕಂಡುಬರುತ್ತಿದೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ಮುಹಮ್ಮದ್ ಶರೀಫ್ ಕಾರ್ಕಳ

contributor

Similar News