ಮುಸ್ಲಿಮ್ ಜನಸಂಖ್ಯೆ ಮತ್ತು ಪ್ರಧಾನಿಯವರ ಹತಾಶ ಸುಳ್ಳು
2022ರಲ್ಲಿ ನರೇಂದ್ರ ಮೋದಿ ನೇತೃತ್ವದ ಸರಕಾರವೇ ಪ್ರಕಟಿಸಿದ 5ನೇ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ (NFHS-5) ಪ್ರಕಾರ, ಭಾರತದಲ್ಲಿ ಮುಸ್ಲಿಮರ ಫರ್ಟಿಲಿಟಿ ದರವು ಬಹಳ ಕ್ಷಿಪ್ರ ಗತಿಯಲ್ಲಿ ಕುಸಿಯುತ್ತಿದೆ. 1998-99ರಲ್ಲಿ 3.6ದಷ್ಟಿದ್ದ ಮುಸ್ಲಿಮರ ಫರ್ಟಿಲಿಟಿ ದರವು 2019-21ರ ಹೊತ್ತಿಗೆ ಅಂದರೆ ಎರಡು ದಶಕಗಳ ಅವಧಿಯಲ್ಲಿ 2.36ಕ್ಕೆ ಕುಸಿದಿತ್ತು. 1993ರ ಫರ್ಟಿಲಿಟಿ ಸಂಬಂಧಿತ ಅಂಕಿ ಅಂಶಗಳಿಗೆ ಹೋಲಿಸಿದರೆ ಈ ಕುಸಿತವು ಶೇ. 50ಕ್ಕಿಂತಲೂ ಅಧಿಕವಾಗಿತ್ತು.
ಭಾಗ- 2
ಫರ್ಟಿಲಿಟಿ ದರ
ವಿವಿಧ ಸಮುದಾಯಗಳ ಜನಸಂಖ್ಯೆಯ ಹೆಚ್ಚಳ ಅಥವಾ ಕುಸಿತದ ಲೆಕ್ಕಾಚಾರದಲ್ಲಿ ವಿವಿಧ ವರ್ಗಗಳ ವರ್ತಮಾನ ಜನಸಂಖ್ಯೆ ಎಷ್ಟು ಎಂಬುದಕ್ಕಿಂತ ಅವರಲ್ಲಿ ಫರ್ಟಿಲಿಟಿ ದರ ಎಷ್ಟಿತ್ತು, ಎಷ್ಟಿದೆ ಮತ್ತು ಎಷ್ಟಾಗಲಿದೆ ಎಂಬ ಅಂಶವು ಅತ್ಯಧಿಕವಾಗಿ ಪರಿಗಣನೆಗೆ ಯೋಗ್ಯವಾಗಿರುತ್ತದೆ.
2008ರಲ್ಲಿ ಪ್ರಕಟವಾದ ವಿಶ್ವ ಬ್ಯಾಂಕ್ ವರದಿಯೊಂದರ ಪ್ರಕಾರ 1970ರಲ್ಲಿ ಭಾರತದಲ್ಲಿ ಫರ್ಟಿಲಿಟಿ (ಒಬ್ಬ ಸರಾಸರಿ ಮಹಿಳೆ ತನ್ನ ಜೀವಮಾನದಲ್ಲಿ ಹೆರಬಹುದಾದ ಮಕ್ಕಳ ಸರಾಸರಿ ಸಂಖ್ಯೆ) ದರ 5.6ರಷ್ಟಿತ್ತು. 2008ರಲ್ಲಿ ಈ ದರವು 2.8ಕ್ಕೆ ಕುಸಿದಿತ್ತು.
2022ರಲ್ಲಿ ನರೇಂದ್ರ ಮೋದಿ ನೇತೃತ್ವದ ಸರಕಾರವೇ ಪ್ರಕಟಿಸಿದ 5ನೇ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ (NFHS-5) ಪ್ರಕಾರ, ಭಾರತದಲ್ಲಿ ಮುಸ್ಲಿಮರ ಫರ್ಟಿಲಿಟಿ ದರವು ಬಹಳ ಕ್ಷಿಪ್ರ ಗತಿಯಲ್ಲಿ ಕುಸಿಯುತ್ತಿದೆ. 1998-99ರಲ್ಲಿ 3.6ದಷ್ಟಿದ್ದ ಮುಸ್ಲಿಮರ ಫರ್ಟಿಲಿಟಿ ದರವು 2019-21ರ ಹೊತ್ತಿಗೆ ಅಂದರೆ ಎರಡು ದಶಕಗಳ ಅವಧಿಯಲ್ಲಿ 2.36ಕ್ಕೆ ಕುಸಿದಿತ್ತು. 1993ರ ಫರ್ಟಿಲಿಟಿ ಸಂಬಂಧಿತ ಅಂಕಿ ಅಂಶಗಳಿಗೆ ಹೋಲಿಸಿದರೆ ಈ ಕುಸಿತವು ಶೇ. 50ಕ್ಕಿಂತಲೂ ಅಧಿಕವಾಗಿತ್ತು.
NFHS ವರದಿಯ ಪ್ರಕಾರವೇ, ಇತರ ಹಲವೆಡೆಗಳಿಗೆ ಹೋಲಿಸಿದರೆ ಅತ್ಯಧಿಕ ಮುಸ್ಲಿಮ್ ಬಾಹುಳ್ಯವಿರುವ ಅಸ್ಸಾಮ್ ರಾಜ್ಯದಲ್ಲಿ 2005-06ರಲ್ಲಿ 3.6ರಷ್ಟಿದ್ದ ಮುಸ್ಲಿಮರ ಫರ್ಟಿಲಿಟಿ ದರವು 2019-20ರಲ್ಲಿ ಅಂದರೆ ಕೇವಲ ಒಂದೂವರೆ ದಶಕಗಳ ಅವಧಿಯಲ್ಲಿ 2.4ಕ್ಕೆ ಕುಸಿದಿತ್ತು.
ರಾಜ್ಯಗಳನ್ನು ಪ್ರತ್ಯೇಕವಾಗಿ ಸಮೀಕ್ಷಿಸಿದರೆ ಹಲವು ರಾಜ್ಯಗಳಲ್ಲಿ ತೀರಾ ವಿಶಿಷ್ಟ ಸ್ಥಿತಿ ಕಂಡು ಬರುತ್ತದೆ. ಉದಾ: ಕೇರಳ ಮತ್ತು ತಮಿಳುನಾಡಿನಲ್ಲಿ ಮುಸ್ಲಿಮರ ಫರ್ಟಿಲಿಟಿ ದರವು ಬಿಹಾರ ಮತ್ತು ರಾಜಸ್ಥಾನದ ಹಿಂದೂಗಳ ಫರ್ಟಿಲಿಟಿ ದರಕ್ಕಿಂತ ಗಣನೀಯವಾಗಿ ಕಡಿಮೆ ಇದೆ.
ಗೋವಾ ರಾಜ್ಯದಲ್ಲಿ 2005-06ರಲ್ಲಿ ಹಿಂದೂಗಳ ಫರ್ಟಿಲಿಟಿ ದರ 1.7 ಮತ್ತು ಮುಸ್ಲಿಮರ ಫರ್ಟಿಲಿಟಿ ದರ 2.4ರಷ್ಟಿತ್ತು. 2019-20ರಲ್ಲಿ ಗೋವಾದ ಹಿಂದೂಗಳ ಫರ್ಟಿಲಿಟಿ ದರ 1.5ಕ್ಕೆ ಕುಸಿದಿದ್ದರೆ ಮುಸ್ಲಿಮರ ಫರ್ಟಿಲಿಟಿ ದರವು 1.2ಕ್ಕೆ ಕುಸಿದಿತ್ತು. ಅಂದರೆ ಅಲ್ಲಿ ಮುಸ್ಲಿಮರ ಫರ್ಟಿಲಿಟಿ ಪ್ರಮಾಣದಲ್ಲಿ ಶೇ. 50 ಕುಂಠಿತವಾಗಿತ್ತು. ಹಲವು ರಾಜ್ಯಗಳಲ್ಲಿ ಮುಸ್ಲಿಮರ ಫರ್ಟಿಲಿಟಿ ದರದ ಕುಸಿತ ಎಷ್ಟು ತೀವ್ರವಾಗಿದೆಯೆಂದರೆ ಮುಸ್ಲಿಮ್ ಸಮಾಜದೊಳಗಿನ ಬಜರಂಗಿಗಳು ಭಾರತದಲ್ಲಿ ಮುಸ್ಲಿಮ್ ಸಮಾಜದ ಅಸ್ತಿತ್ವ ಅಪಾಯದಲ್ಲಿದೆ, ಮುಸ್ಲಿಮರು ನಿರ್ನಾಮವಾಗುವ ಸಾಧ್ಯತೆ ಇದೆ ಎಂದೆಲ್ಲ ಹೇಳಿ ಮುಸ್ಲಿಮರಲ್ಲಿ ಅಭದ್ರತೆ ಹುಟ್ಟಿಸುವುದಕ್ಕೆ ಈ ಮಾಹಿತಿಗಳನ್ನು ದುರುಪಯೋಗಪಡಿಸಿಕೊಳ್ಳುವ ಸಾಧ್ಯತೆಗಳೂ ಇವೆ!
ಗಮ್ಮತ್ತಿನ ಇನ್ನೊಂದು ಸಂಗತಿ ಏನೆಂದರೆ ಜನಸಂಖ್ಯೆಯ ಬಗ್ಗೆ ಇಷ್ಟೆಲ್ಲಾ ಮಾತನಾಡುವ ಮತ್ತು ಹೆಚ್ಚು ಮಕ್ಕಳನ್ನು ಹುಟ್ಟಿಸುವುದು ಅಪರಾಧ ಎಂಬಂತೆ ಹಂಗಿಸುವ ನಮ್ಮ ಸಾಕ್ಷಾತ್ ಪ್ರಧಾನಮಂತ್ರಿಯವರ ತಾಯಿಗೆ ಆರು ಮಕ್ಕಳಿದ್ದರು.
ಕುಟುಂಬದ ಗಾತ್ರ
2015ರಲ್ಲಿ ಪ್ರಕಟವಾದ 68ನೇ ಸುತ್ತಿನ ನ್ಯಾಷನಲ್ ಸ್ಯಾಂಪಲ್ ಸರ್ವೇ (NSS) ವರದಿಯಲ್ಲಿ ದೇಶದ ವಿವಿಧ ಸಮುದಾಯಗಳ ಕುಟುಂಬದ ಸರಾಸರಿ ಗಾತ್ರ ಅಥವಾ ಕುಟುಂಬದ ಸದಸ್ಯರ ಸರಾಸರಿ ಸಂಖ್ಯೆಯ ಕುರಿತು ಒದಗಿಸಲಾದ ಮಾಹಿತಿ ಹೀಗಿದೆ:
ಪ್ರಸ್ತುತ ಪಟ್ಟಿಯಿಂದ ತಿಳಿಯುವಂತೆ ಭಾರತೀಯ ಮುಸ್ಲಿಮರ ಕುಟುಂಬದ ಗಾತ್ರವು ಹಿಂದೂಗಳಿಗಿಂತ ದೊಡ್ಡದಿರುವುದು ನಿಜ. ಆದರೆ ಅದು ಹತ್ತಿಪ್ಪತ್ತು ಪಾಲು ದೊಡ್ಡದೇನೂ ಇಲ್ಲ. ನಿಜವಾಗಿ ಹಿಂದೂಗಳಿಗೆ ಹೋಲಿಸಿದರೆ ಮುಸ್ಲಿಮರ ಕುಟುಂಬದಲ್ಲಿ ಪೂರ್ಣ ಪ್ರಮಾಣದ ಒಬ್ಬ ಅಧಿಕ ಸದಸ್ಯನೂ ಇಲ್ಲ. ಸದಸ್ಯರ ಸಂಖ್ಯೆಯಲ್ಲಿರುವ ವ್ಯತ್ಯಾಸ ಕೇವಲ 0.7ರಷ್ಟು ಮಾತ್ರ.
ವಿವಾಹದ ವಯಸ್ಸು
ಜನಸಂಖ್ಯೆಯ ಏರಿಳಿತದಲ್ಲಿ ಪ್ರಮುಖ ಪಾತ್ರ ವಹಿಸುವ ಹಲವು ಅಂಶಗಳಲ್ಲಿ ಒಂದು ವಿವಾಹದ ವಯಸ್ಸು. ಹೆಣ್ಣು ಮಕ್ಕಳಿಗೆ ತೀರಾ ಸಣ್ಣ ವಯಸ್ಸಿನಲ್ಲಿ ವಿವಾಹ ಮಾಡಿಸುವ ಸಂಪ್ರದಾಯವಿರುವ ಸಮಾಜಗಳಲ್ಲಿ ಮಕ್ಕಳ ಜನದ ಪ್ರಮಾಣ ಅಧಿಕವಿರುತ್ತದೆ. ವಿವಾಹದ ವಯಸ್ಸು ಹೆಚ್ಚುತ್ತಾ ಹೋದಂತೆ ಸಂತಾನೋತ್ಪತ್ತಿಯ ಪ್ರಮಾಣ ಕಡಿಮೆಯಾಗುತ್ತಾ ಹೋಗುತ್ತದೆ.
1901ರಿಂದ 2011 ಭಾರತದಲ್ಲಿ ನಡೆದಿರುವ ಹಲವು ಜನಗಣತಿಗಳಿಂದ ದೊರೆತ ಮಾಹಿತಿಗಳ ಆಧಾರದಲ್ಲಿ ನಡೆಸಲಾದ ಒಂದು ಲೆಕ್ಕಾಚಾರದ ಪ್ರಕಾರ 1901ರಲ್ಲಿ ಭಾರತದಲ್ಲಿ ಒಬ್ಬ ಹೆಣ್ಣುಮಗಳಿಗೆ ವಿವಾಹವಾಗುವ ಸರಾಸರಿ ವಯಸ್ಸು 13.1 ವರ್ಷವಾಗಿತ್ತು. ಕ್ರಮೇಣ ಈ ರಂಗದಲ್ಲಿ ಸಾಕಷ್ಟು ಸುಧಾರಣೆಯಾಗಿ 2011ರ ಹೊತ್ತಿಗೆ ಭಾರತೀಯ ಹೆಣ್ಣಿಗೆ ವಿವಾಹವಾಗುವ ಸರಾಸರಿ ವಯಸ್ಸು 20.8 ವರ್ಷಕ್ಕೆ ಮುಟ್ಟಿತು.
ಇದು ಕೇವಲ ಯಾವುದಾದರೂ ಕಾನೂನಿನಿಂದಾಗಿ ಬಂದ ಬದಲಾವಣೆಯಲ್ಲ. ಶಿಕ್ಷಣ, ಸಂಪನ್ನತೆ, ನಗರೀಕರಣ, ಆರೋಗ್ಯ ಪ್ರಜ್ಞೆ ಮತ್ತು ಹಕ್ಕು-ಅಧಿಕಾರ ಹೆಚ್ಚಿದಂತೆ ಹೆರಿಗೆಗಳ ಪ್ರಮಾಣ, ಬಹು ಪತ್ನಿತ್ವದ ಪ್ರಮಾಣ ಕಡಿಮೆಯಾಗುತ್ತಾ ಹೋಗುತ್ತದೆ.
ವಿವಾಹದ ಸರಾಸರಿ ವಯಸ್ಸು ಕೂಡಾ ಯಾರ ಧರ್ಮ ಯಾವುದೆಂಬುದನ್ನು ಮಾತ್ರ ನೋಡಿ, ಸರಳಗಣಿತದ ಆಧಾರದಲ್ಲಿ ಲೆಕ್ಕ ಹಾಕಬಹುದಾದಷ್ಟು ಸರಳ ವಿಷಯವೇನಲ್ಲ. ಅದರಲ್ಲೂ ಪ್ರಾಂತೀಯ ಪರಂಪರೆ, ಜಾತಿ, ಗ್ರಾಮ, ನಗರ, ಶಿಕ್ಷಣ ಮಟ್ಟ, ಆರ್ಥಿಕ ಸ್ಥಿತಿ ಇತ್ಯಾದಿ ಅಂಶಗಳ ತೀವ್ರ ಪ್ರಭಾವವಿರುತ್ತದೆ. ಗ್ರಾಮೀಣ ಮಹಿಳೆಯರಲ್ಲಿ ವಿವಾಹದ ಸರಾಸರಿ ವಯಸ್ಸು 18.1 ವರ್ಷ ಇದ್ದರೆ ನಗರಗಳಲ್ಲಿ ಅದು 19.8 ವರ್ಷದಷ್ಟಿರುತ್ತದೆ. ಎಂದೂ ಶಾಲೆಗೇ ಹೋಗಿಲ್ಲದ ಹೆಣ್ಮಕ್ಕಳ ವಿವಾಹದ ಸರಾಸರಿ 17.2 ವರ್ಷ ಇದ್ದರೆ 12 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವರ್ಷಗಳ ಕಾಲ ಶಿಕ್ಷಣ ಪಡೆದಿರುವ ಮಹಿಳೆಯರ ವಿವಾಹದ ವಯಸ್ಸು 22.7 ವರ್ಷವಾಗಿರುತ್ತದೆ. ಆರ್ಥಿಕವಾಗಿ ತೀರಾ ಬಡ ಸ್ಥಿತಿಯಲ್ಲಿರುವ ಮಹಿಳೆಯರ ವಿವಾಹದ ಸರಾಸರಿ ವಯಸ್ಸು 17.4 ವರ್ಷವಿದ್ದರೆ, ತುಂಬಾ ಅನುಕೂಲಸ್ಥ ಹೆಣ್ಣುಮಕ್ಕಳ ವಿವಾಹದ ಸರಾಸರಿ ವಯಸ್ಸು 20.8 ವರ್ಷಗಳಾಗಿರುತ್ತವೆ.
ಇಲ್ಲಿ ಒಂದು ಸ್ವಾರಸ್ಯಕರ ಅಂಶವೇನೆಂದರೆ 2015-16 ರ NFHS ವರದಿಯನುಸಾರ ಭಾರತದಲ್ಲಿ ಹಿಂದೂ ಹೆಣ್ಣುಮಕ್ಕಳಿಗೆ ವಿವಾಹವಾಗುವ ಸರಾಸರಿ ವಯಸ್ಸು 18.5 ವರ್ಷ. ಇದಕ್ಕೆ ಹೋಲಿಸಿದರೆ ಮುಸ್ಲಿಮ್ ಹೆಣ್ಣುಮಕ್ಕಳಿಗೆ ವಿವಾಹವಾಗುವ ಸರಾಸರಿ ವಯಸ್ಸು ಸ್ವಲ್ಪ ಹೆಚ್ಚು, ಅಂದರೆ 18.6 ವರ್ಷ. ಈ ದೃಷ್ಟಿಯಿಂದ ಜನಸಂಖ್ಯಾ ನಿಯಂತ್ರಣಕ್ಕೆ ಮುಸ್ಲಿಮರ ಕೊಡುಗೆ ಹಿಂದೂಗಳಿಗಿಂತ ದೊಡ್ಡದು.
ಬಹುಪತ್ನಿತ್ವ
ಜನಸಂಖ್ಯಾವೃದ್ಧಿಗೆ ಕೊಡುಗೆ ನೀಡುವ ಪ್ರಮುಖ ಅಂಶಗಳಲ್ಲಿ ಒಂದು ಬಹು ಪತ್ನಿತ್ವ ಎಂದು ನಂಬಲಾಗಿದೆ. ಈ ಹಿನ್ನೆಲೆಯಲ್ಲಿ ಮುಸ್ಲಿಮರಲ್ಲಿ ಬಹುಪತ್ನಿತ್ವ ತೀರಾ ಸಾಮಾನ್ಯವಾಗಿದೆ, ಹೆಚ್ಚಿನ ಮುಸ್ಲಿಮರು ನಾಲ್ಕು ನಾಲ್ಕು ಹೆಣ್ಣುಮಕ್ಕಳನ್ನು ವಿವಾಹವಾಗುತ್ತಾರೆ ಎಂಬ ದಟ್ಟ ಪ್ರಚಾರ ನಡೆದಿದ್ದು ಭಾರತದಲ್ಲಿ ಜನಸಂಖ್ಯೆಯ ಹೆಚ್ಚಳಕ್ಕೆ ಇದೊಂದು ಪ್ರಮುಖ ಕಾರಣ ಎಂದು ಜನರನ್ನು ನಂಬಿಸುವ ಕಠಿಣ ಶ್ರಮ ನಡೆದಿದೆ.
3ನೇ NFHS ಸಮೀಕ್ಷೆ (2005-06) ನಡೆದಾಗ ಭಾರತದಲ್ಲಿ, ತಮ್ಮ ಪತಿಗೆ ಇನ್ನೊಬ್ಬ ಪತ್ನಿ ಅಥವಾ ಪತ್ನಿಯರು ಇದ್ದಾರೆ ಎಂದು ಹೇಳಿಕೊಳ್ಳುವ ಎಲ್ಲ ಧರ್ಮಗಳ ಮಹಿಳೆಯರ ಒಟ್ಟು ಸಂಖ್ಯೆ ಶೇ. 1.9 ಇತ್ತು. 4ನೇ NFHS ಸಮೀಕ್ಷೆ ನಡೆದಾಗ (2015-16) ಈ ಸಂಖ್ಯೆ ಶೇ. 1.6ಕ್ಕೆ ಕುಸಿದಿತ್ತು ಮತ್ತು 5ನೇ NFHS (2019-21) ಪ್ರಕಟವಾದಾಗ ಈ ಸಂಖ್ಯೆ ಇನ್ನಷ್ಟು ಕುಸಿದು ಶೇ. 1.4ನ್ನು ತಲುಪಿತ್ತು. ಅಂದರೆ ಸುಮಾರು ಒಂದೂವರೆ ದಶಕದ ಅವಧಿಯಲ್ಲಿ ಒಂದಕ್ಕಿಂತ ಅಧಿಕ ಪತ್ನಿ ಇರುವವರ ಸಂಖ್ಯೆ ಗಣನೀಯವಾಗಿ ತಗ್ಗಿತ್ತು.
ಇಲ್ಲಿ ಒಂದು ಸ್ವಾರಸ್ಯಕರ ಅಂಶವೇನೆಂದರೆ 2015-16ರ NFHS ವರದಿಯನುಸಾರ ಭಾರತದಲ್ಲಿ ಹಿಂದೂ ಹೆಣ್ಣುಮಕ್ಕಳಿಗೆ ವಿವಾಹವಾಗುವ ಸರಾಸರಿ ವಯಸ್ಸು 18.5 ವರ್ಷ. ಇದಕ್ಕೆ ಹೋಲಿಸಿದರೆ ಮುಸ್ಲಿಮ್ ಹೆಣ್ಣುಮಕ್ಕಳಿಗೆ ವಿವಾಹವಾಗುವ ಸರಾಸರಿ ವಯಸ್ಸು ಸ್ವಲ್ಪ ಹೆಚ್ಚು, ಅಂದರೆ 18.6 ವರ್ಷ. ಈ ದೃಷ್ಟಿಯಿಂದ ಜನಸಂಖ್ಯಾ ನಿಯಂತ್ರಣಕ್ಕೆ ಮುಸ್ಲಿಮರ ಕೊಡುಗೆ ಹಿಂದೂಗಳಿಗಿಂತ ದೊಡ್ಡದು.
ಈ ರೀತಿ, ಭಾರತದಲ್ಲಿ ಬಹುವಿವಾಹ ನಡೆಸುವವರ ಸಂಖ್ಯೆ ಈಗಾಗಲೇ ತೀರಾ ಕಡಿಮೆ ಇದೆ ಮತ್ತು ಅಂತಹ ವಿವಾಹಗಳ ಸಂಖ್ಯೆ ಕ್ರಮೇಣ ಕಡಿಮೆಯಾಗುತ್ತಿದೆ ಎಂಬುದನ್ನು ಒಪ್ಪಿಕೊಂಡ ಬಳಿಕವೂ, ಈ ರೀತಿ ಒಂದಕ್ಕಿಂತ ಹೆಚ್ಚು ವಿವಾಹವಾಗುವವರೆಲ್ಲಾ ಮುಸ್ಲಿಮರೇ? ಎಂಬ ಪ್ರಶ್ನೆ ತಲೆ ಎತ್ತುತ್ತದೆ.
ನಿಜವಾಗಿ ಭಾರತದಲ್ಲಿ ಮುಸಲ್ಮಾನರಿಗೆ ಒಂದಕ್ಕಿಂತ ಹೆಚ್ಚಿನ ವಿವಾಹವಾಗುವುದಕ್ಕೆ ಕಾನೂನಿನ ಅನುಮತಿ ಇದೆ. ಇತರ ಧರ್ಮಗಳ ಅನುಯಾಯಿಗಳಿಗೆ ಅಂತಹ ಅನುಮತಿ ಇಲ್ಲ. ಆದರೂ ಇತರ ಸಮಾಜಗಳಲ್ಲಿ ಬಹುಪತ್ನಿತ್ವದ ಪ್ರಕರಣಗಳು ಗಣ್ಯವಾಗಿ ಕಂಡು ಬಂದಿವೆ. ಭಾರತ ಸರಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧೀನವಿರುವ ಇಂಟರ್ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಪಾಪ್ಯುಲೇಷನ್ ಸಯನ್ಸಸ್ (IIPS) ಸಂಸ್ಥೆಯ ಹರಿಹರ ಸಾಹೂ, ಆರ್. ನಾಗರಾಜನ್ ಮತ್ತು ಚೈತಾಲಿ ಮಂಡಲ್ ಅವರು 5ನೇ ಓಈಊS ಸಮೀಕ್ಷೆಯ ಡೇಟಾದ ಆಧಾರದಲ್ಲಿ ನಡೆಸಿದ ಒಂದು ಅಧ್ಯಯನದಿಂದ ತಿಳಿದು ಬಂದಿರುವಂತೆ, ಭಾರತದಲ್ಲಿ ಬಹುಪತ್ನಿತ್ವ ಅತ್ಯಧಿಕ ಪ್ರಮಾಣದಲ್ಲಿ (ಶೇ. 2.1) ಕಂಡು ಬರುತ್ತಿರುವುದು ಕ್ರೈಸ್ತ ಸಮುದಾಯದಲ್ಲಿ. ಈ ವಿಷಯದಲ್ಲಿ ಮುಸ್ಲಿಮರು ಶೇ. 1.9 ಪ್ರಾತಿನಿಧ್ಯದೊಂದಿಗೆ ಎರಡನೆಯ ಸ್ಥಾನದಲ್ಲಿ ಮತ್ತು ಶೇ. 1.3 ಪ್ರಕರಣಗಳೊಂದಿಗೆ ಹಿಂದೂಗಳು ಮೂರನೆಯ ಸ್ಥಾನದಲ್ಲಿದ್ದಾರೆ. ಅಂದರೆ ಬಹುಪತ್ನಿತ್ವದ ವಿಷಯದಲ್ಲಿ ಹಿಂದೂಗಳು ಮತ್ತು ಮುಸ್ಲಿಮರ ನಡುವೆ ಇರುವ ಅಂತರ ಕೇವಲ ಶೇ. 0.6 ಮಾತ್ರ. ಇನ್ನೊಂದು ಗಮನಾರ್ಹ ಸಂಗತಿಯೇನೆಂದರೆ ಓಈಊS-5ರ ಪ್ರಕಾರ ಬಹುಪತ್ನಿತ್ವದ ಅತ್ಯಧಿಕ (ಶೇ. 2.5) ಪ್ರಕರಣಗಳು ಕಂಡು ಬಂದಿರುವುದು, ನಿರ್ದಿಷ್ಟ ಜಾತಿ-ಧರ್ಮಗಳನ್ನು ಪ್ರಸ್ತಾಪಿಸದೆ ಇರುವ ‘others’ ಎಂಬ ಪ್ರವರ್ಗದಲ್ಲಿ. ದೇಶದ ಇತರ ಭಾಗಗಳಿಗೆ ಹೋಲಿಸಿದರೆ, ಈಶಾನ್ಯ ಭಾರತದಲ್ಲಿ ಬಹುಪತ್ನಿತ್ವದ ಪ್ರಕರಣಗಳು ಅಧಿಕವಾಗಿವೆ. ತ್ರಿಪುರಾದಲ್ಲಿ ಬಹುಪತ್ನಿತ್ವದ ಪ್ರಮಾಣ ಶೇ. 2 ಇದ್ದರೆ, ಮೇಘಾಲಯದಲ್ಲಿ ಶೇ. 6.1ರಷ್ಟಿದೆ. ಈ ರಾಜ್ಯಗಳಲ್ಲಿ ಮುಸ್ಲಿಮರ ಉಪಸ್ಥಿತಿ ನಗಣ್ಯ.
ಮೋದಿಯವರ ಪಾಶವೀ ದೃಷ್ಟಿಯಲ್ಲಿ ಆರೋಪಿಗಳು ಮುಸ್ಲಿಮರಾಗಿರುವುದರಿಂದ ಭಾರತದಲ್ಲಿ ಮುಸ್ಲಿಮ್ ಬಾಹುಳ್ಯವಿರುವ ಪ್ರದೇಶಗಳನ್ನೇ ನಿರ್ದಿಷ್ಟವಾಗಿ ಗುರಿಯಾಗಿಸಿ ನೋಡುವುದಾದರೆ, ಬಹುತೇಕ ಶೇ. 100 ಮುಸ್ಲಿಮರೇ ಇರುವ ಲಕ್ಷದ್ವೀಪ್‌ನಲ್ಲಿ ಬಹುಪತ್ನಿತ್ವದ ಪ್ರಮಾಣ ಕೇವಲ ಶೇ. 0.5 ಮಾತ್ರ. ಇದು ದಕ್ಷಿಣದ ಕಥೆಯಾದರೆ ಉತ್ತರದಲ್ಲಿ ಭಾರೀ ಮುಸ್ಲಿಮ್ ಬಾಹುಳ್ಯವಿರುವ ಕಾಶ್ಮೀರದಲ್ಲಿ ಬಹುಪತ್ನಿತ್ವದ ಪ್ರಮಾಣ ಇನ್ನೂ ಕಡಿಮೆ- ಅಂದರೆ ಕೇವಲ ಶೇ. 0.4
ಫರ್ಟಿಲಿಟಿ ದರದಂತೆ ಬಹುಪತ್ನಿತ್ವದ ಪ್ರಮಾಣ ಕೂಡಾ ಕೇವಲ ಧರ್ಮದ ಆಧಾರದಲ್ಲಿ ನಿರ್ಧಾರವಾಗುವುದಿಲ್ಲ. ಉದಾ: ಹೆಣ್ಣುಮಕ್ಕಳು ಕಡಿಮೆ ಶಿಕ್ಷಿತರಾಗಿರುವಲ್ಲಿ ಬಹುಪತ್ನಿತ್ವ ಅಧಿಕ (ಶೇ. 2.4)ವಾಗಿರುತ್ತದೆ ಮತ್ತು ಹೆಚ್ಚು ಶಿಕ್ಷಿತ ಹೆಣ್ಣುಮಕ್ಕಳಿರುವಲ್ಲಿ ಅದರ ಪ್ರಮಾಣ ತುಂಬಾ ಕಡಿಮೆ (ಶೇ. 0.3) ಇರುತ್ತದೆ. ಹಾಗೆಯೇ ಗ್ರಾಮೀಣ ಪ್ರದೇಶಗಳಲ್ಲಿ ಬಹುಪತ್ನಿತ್ವದ ಪ್ರಮಾಣ ಅಧಿಕವಿರುತ್ತದೆ(ಶೇ. 1.6) ಮತ್ತು ನಗರ ಪ್ರದೇಶಗಳಲ್ಲಿ ಕಡಿಮೆ (ಶೇ. 0.6) ಇರುತ್ತದೆ. ದಾರಿದ್ರ್ಯ ಹೆಚ್ಚಿರುವಲ್ಲಿ ಬಹುಪತ್ನಿತ್ವದ ಪ್ರಕರಣಗಳು ಹೆಚ್ಚಿರುತ್ತವೆ - (ಶೇ. 2.4) ಮತ್ತು ಅದೇ ವೇಳೆ ಸಂಪನ್ನ ವರ್ಗಗಳಲ್ಲಿ ಅದರ ಪ್ರಮಾಣ ತುಂಬಾ ಕಡಿಮೆ (ಶೇ. 0.5) ಇರುತ್ತದೆ.
(ಮುಂದುವರಿಯುವುದು)