ಮೈಸೂರು: ಈಡೇರದ ಭರವಸೆಗಳು ಹಾಲಿ ಸಂಸದರಿಗೆ ಮುಳುವಾದೀತೇ?
ಮೈಸೂರು ಲೋಕಸಭಾ ಕ್ಷೇತ್ರದಲ್ಲಿ ಕಳೆದೆರಡು ಚುನಾವಣೆಗಳನ್ನು ಬಿಜೆಪಿ ಗೆದ್ದಿದೆ. ಈ ಬಾರಿ ಜೆಡಿಎಸ್ ಜೊತೆ ಮೈತ್ರಿ ಇರುವುದರಿಂದ ಬಿಜೆಪಿ ಅಭ್ಯರ್ಥಿಯೋ ಜೆಡಿಎಸ್ ಅಭ್ಯರ್ಥಿಯೋ ಎಂಬುದು ನಿರ್ಧಾರವಾಗಬೇಕಿದೆ. ಕ್ಷೇತ್ರದಲ್ಲಿ ಕಾಂಗ್ರೆಸ್ ಬಗ್ಗೆ ಮತದಾರರ ಒಲವು ಸದ್ಯಕ್ಕೆ ಹೆಚ್ಚೇ ಇದೆ ಎನ್ನಲಾಗುತ್ತಿದೆ. ಕಾಂಗ್ರೆಸ್‌ನಿಂದ ಘಟಾನುಘಟಿಗಳೇ ಆಕಾಂಕ್ಷಿಗಳಾಗಿದ್ದಾರೆ. ಅಂತಿಮವಾಗಿ ಅಖಾಡ ಹೇಗೆ ರೂಪುಗೊಳ್ಳಲಿದೆ ಎಂಬುದನ್ನು ನೋಡಬೇಕಿದೆ.
ಸರಣಿ- 20
ಮೈಸೂರು ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಸಾಕ್ಷರತೆ ಪ್ರಮಾಣ ಶೇ.67.65. ಈ ವ್ಯಾಪ್ತಿಯಲ್ಲಿ ಬರುವ ವಿಧಾನಸಭಾ ಕ್ಷೇತ್ರಗಳು 8. ಅವೆಂದರೆ, ಮಡಿಕೇರಿ, ವಿರಾಜಪೇಟೆ, ಪಿರಿಯಾಪಟ್ಟಣ, ಹುಣಸೂರು, ಚಾಮುಂಡೇಶ್ವರಿ, ಕೃಷ್ಣರಾಜ, ಚಾಮರಾಜ ಹಾಗೂ ನರಸಿಂಹರಾಜ. 5 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಶಾಸಕರಿದ್ದಾರೆ. 2ರಲ್ಲಿ ಜೆಡಿಎಸ್ ಹಾಗೂ ಒಂದರಲ್ಲಿ ಬಿಜೆಪಿ ಶಾಸಕರಿದ್ದಾರೆ.
ಮೈಸೂರು ಲೋಕಸಭಾ ಕ್ಷೇತ್ರದ ಒಟ್ಟು ಅಂದಾಜು ಮತದಾರರು 24,00,000
ಹಿಂದಿನ ಚುನಾವಣೆಗಳ ಫಲಿತಾಂಶ ನೋಡುವುದಾದರೆ 2009ರಲ್ಲಿ ಕಾಂಗ್ರೆಸ್‌ನ ಎಚ್. ವಿಶ್ವನಾಥ್ ಗೆಲುವು ಕಂಡಿದ್ದರೆ, 2019, 2014 ಎರಡೂ ಚುನಾವಣೆಗಳಲ್ಲಿ ಬಿಜೆಪಿಯ ಪ್ರತಾಪ ಸಿಂಹ ಗೆಲುವು ಸಾಧಿಸಿದ್ದಾರೆ.
ಹಿಂದಿನ ಚುನಾವಣೆಗಳಲ್ಲಿನ ಮತ ಹಂಚಿಕೆ ವಿವರ:
2019 ಬಿಜೆಪಿಗೆ ಶೇ.52.27, ಕಾಂಗ್ರೆಸ್ ಗೆ ಶೇ.41.75
2014 ಬಿಜೆಪಿಗೆ ಶೇ.43.45, ಕಾಂಗ್ರೆಸ್ ಗೆ ಶೇ.40.72
2009 ಕಾಂಗ್ರೆಸ್ ಗೆ ಶೇ.36.43, ಬಿಜೆಪಿಗೆ ಶೇ.35.64
ಮೈಸೂರು ಲೋಕಸಭಾ ಕ್ಷೇತ್ರದಿಂದ ಮೊದಲ ಸಂಸದರನ್ನು ಕಳಿಸಿದ್ದು ಕಿಸಾನ್ ಮಜ್ದೂರ್ ಪ್ರಜಾ ಪಾರ್ಟಿ. 1952ರಲ್ಲಿ ಮೊತ್ತ ಮೊದಲ ಬಾರಿಗೆ ಎಂ.ಎಸ್.ಗುರುಪಾದಸ್ವಾಮಿ ಆಯ್ಕೆಯಾಗುವ ಮೂಲಕ ಲೋಕಸಭೆಯಲ್ಲಿ ತಮ್ಮ ಛಾಪನ್ನು ಮೂಡಿಸಿದ್ದರು.
ಒಟ್ಟು 17 ಚುನಾವಣೆಗಳಲ್ಲಿ 12 ಚುನಾವಣೆಗಳನ್ನು ಕಾಂಗ್ರೆಸ್ ಗೆದ್ದಿದೆ. ಉಳಿದಂತೆ ಕಿಸಾನ್ ಮಜ್ದೂರ್ ಸಭಾ ಒಮ್ಮೆ ಹಾಗೂ 4 ಬಾರಿ ಬಿಜೆಪಿ ಗೆಲುವು. 1998ರಲ್ಲಿ ಇಲ್ಲಿ ಮೊದಲ ಬಾರಿಗೆ ಬಿಜೆಪಿ ತನ್ನ ನೆಲೆ ಕಂಡುಕೊಂಡಿತು.
ಮೈಸೂರು ಜಿಲ್ಲೆಯಿಂದ ಅತ್ಯಂತ ಪ್ರಭಾವಿ ಘಟಾನುಘಟಿ ರಾಜಕಾರಣಿಗಳೇ ಲೋಕಸಭೆ ಪ್ರವೇಶಿಸಿ ಮೈಸೂರು ಜಿಲ್ಲೆಯ ಅಭಿವೃದ್ಧಿಗೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ.
ಮೊದಲ ಸಂಸದ ಎಂ.ಎಸ್.ಗುರುಪಾದಸ್ವಾಮಿ ಅವರ ನಂತರ ಎಂ.ಶಂಕರಯ್ಯ, ತುಳಸೀದಾಸ್ ದಾಸಪ್ಪ, ಎಂ.ರಾಜಶೇಖರ ಮೂರ್ತಿ, ಶ್ರೀಕಂಠದತ್ತ ನರಸಿಂಹರಾಜ ಒಡೆಯರ್, ಚಂದ್ರಪ್ರಭಾ ಅರಸ್, ಸಿ.ಎಚ್.ವಿಜಯಶಂಕರ್, ಅಡಗೂರು ಎಚ್.ವಿಶ್ವನಾಥ್ ಮೈಸೂರು ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸಿದ್ದಾರೆ. ಪ್ರತಾಪ ಸಿಂಹ ಇಲ್ಲಿನ ಹಾಲಿ ಸಂಸದ.
ಮೈಸೂರು ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಮೈಸೂರು ನಗರದ ಕೃಷ್ಣರಾಜ, ಚಾಮರಾಜ, ನರಸಿಂಹರಾಜ ಕ್ಷೇತ್ರಗಳು ಒಳಗೊಂಡು, ಗ್ರಾಮಾಂತರ ಭಾಗದ ಹುಣಸೂರು, ಪಿರಿಯಾಪಟ್ಟಣ, ಕೆ.ಆರ್.ನಗರ ಮತ್ತು ಚಾಮುಂಡೇಶ್ವರಿ ಕ್ಷೇತ್ರಗಳು ಒಳಗೊಂಡಿದ್ದವು.
2008ರಲ್ಲಿ ಕ್ಷೇತ್ರ ಮರು ವಿಂಗಡಣೆಯಾದ ನಂತರ ಮೈಸೂರು ಲೋಕಸಭಾ ಕ್ಷೇತ್ರಕ್ಕೆ ಕೊಡಗು ಜಿಲ್ಲೆಯ ಮಡಿಕೇರಿ ಮತ್ತು ವಿರಾಜಪೇಟೆ ಎರಡು ಕ್ಷೇತ್ರಗಳನ್ನು ಸೇರ್ಪಡೆಗೊಳಿಸಿ, ಕೆ.ಆರ್. ನಗರವನ್ನು ಮಂಡ್ಯ ಲೋಕಸಭಾ ಕ್ಷೇತ್ರಕ್ಕೆ ಸೇರಿಸಲಾಗಿದೆ.
ಮೈಸೂರು ಲೋಕಸಭಾ ಕ್ಷೇತ್ರದಿಂದ ಆಯ್ಕೆಯಾಗಿ ಕೇಂದ್ರದಲ್ಲಿ ಅನೇಕ ಖಾತೆಗಳನ್ನು ನಿಭಾಯಿಸಿ ರಾಜ್ಯ ಸಚಿವರಾಗಿ ಮತ್ತು ದೇಶದ ಕ್ಯಾಬಿನೆಟ್ ದರ್ಜೆಯ ಪೆಟ್ರೋಲಿಯಂ ಸಚಿವರಾಗಿ ಎಂ.ಎಸ್.ಗುರುಪಾದಸ್ವಾಮಿ ಕರ್ತವ್ಯ ನಿರ್ವಹಿಸಿ, ಸಾಮಾನ್ಯರು ಕೂಡ ಪೆಟ್ರೋಲ್ ಬಂಕ್ ಮಾಲಕರಾಗಬಹುದು ಎಂಬುದನ್ನು ತೋರಿಸಿಕೊಟ್ಟು ಮೈಸೂರು ಜಿಲ್ಲೆಯ ಹೆಮ್ಮೆಗೆ ಕಾರಣರಾಗಿದ್ದಾರೆ.
ಅವರ ಅವಧಿಯಲ್ಲಿ ಪೆಟ್ರೋಲ್ ಮತ್ತು ಸೀಮೆ ಎಣ್ಣೆ ಡೀಲರ್ ಶಿಪ್‌ಗಳ ಪರವಾನಿಗೆ ಪಡೆದ ಸಾಕಷ್ಟು ಕುಟುಂಬಗಳು ಉತ್ತಮ ಮಟ್ಟ ತಲುಪಿವೆ ಎಂದರೆ ತಪ್ಪಾಗಲಾರದು. ಅವರು ನಾಲ್ಕು ಬಾರಿ ರಾಜ್ಯ ಸಭಾ ಸದಸ್ಯರಾಗಿ ಮತ್ತು ರಾಜ್ಯ ಸಭೆಯ ವಿರೋಧ ಪಕ್ಷದ ನಾಯಕರಾಗಿ ಕರ್ತವ್ಯ ನಿರ್ವಹಿಸಿದ್ದಾರೆ.
ಮೈಸೂರು ಲೋಕಸಭಾ ಕ್ಷೇತ್ರದಿಂದ ಆಯ್ಕೆಯಾಗಿದ್ದ ತುಳಸಿದಾಸ್ ದಾಸಪ್ಪ ಕೂಡ ಚರಣ್‌ಸಿಂಗ್ ಸರಕಾರದಲ್ಲಿ ಕೇಂದ್ರದ ರಾಜ್ಯ ದರ್ಜೆ ಸಚಿವರಾಗಿ ಕೆಲಸ ನಿರ್ವಹಿಸಿದ್ದರು.
ಮೈಸೂರು ಭಾಗದ ಪ್ರಭಾವಿ ಲಿಂಗಾಯತ ನಾಯಕ ಎಂ. ರಾಜಶೇಖರ ಮೂರ್ತಿ ಅವರು ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸಿ ಭಾರತದ ಅನೇಕ ಇಲಾಖೆಗಳು ಮತ್ತು ಬೋರ್ಡ್‌ಗಳ ಸದಸ್ಯರಾಗಿ ಕರ್ತವ್ಯ ನಿರ್ವಹಿಸಿ ಮೂರು ಬಾರಿ ರಾಜ್ಯ ಸಭಾ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ.
ಶ್ರೀಕಂಠದತ್ತ ನರಸಿಂಹ ರಾಜ ಒಡೆಯರ್ ಅವರು ಮೂರು ಬಾರಿ ಮೈಸೂರು ಲೋಕಸಭಾ ಸದಸ್ಯರಾಗಿ ಆಯ್ಕೆಯಾಗಿ ತಮ್ಮದೇ ಆದ ಛಾಪನ್ನು ಮೂಡಿಸಿದ್ದಾರೆ.
ಮಾಜಿ ಮುಖ್ಯಮಂತ್ರಿ ದಿ.ಡಿ.ದೇವರಾಜ ಅರಸು ಅವರ ಪುತ್ರಿ ಚಂದ್ರಪ್ರಭಾ ಅವರು ಮೈಸೂರು ಲೋಕಸಭಾ ಸದಸ್ಯರಾಗಿ ಆಯ್ಕೆಯಾಗಿದ್ದು ವಿಶೇಷ.
ಪ್ರತಾಪ ಸಿಂಹ ಪರಿಚಯ ಮೈಸೂರು ಭಾಗದ ಜನರಿಗೆ ಅಷ್ಟಾಗಿ ಇರಲಿಲ್ಲ. ಬಿಜೆಪಿ, ಪ್ರಧಾನಿ ಮೋದಿ ಅಲೆ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಜನಪ್ರಿಯತೆ ಮೇಲೆ ಮೊದಲ ಚುನಾವಣೆಯಲ್ಲಿ ಗೆಲುವು ಸಾಧಿಸಿದರು.
ಎರಡನೇ ಬಾರಿಯೂ ಬಿಜೆಪಿ, ಮೋದಿ, ಯಡಿಯೂರಪ್ಪ ಜೊತೆಗೆ ಜಾತಿ ಲೆಕ್ಕಾಚಾರಗಳು ಅವರ ಗೆಲುವಿಗೆ ಕಾರಣವಾಯಿತು ಎಂಬ ವಿಶ್ಲೇಷಣೆಗಳಿವೆ.
ಮೊದಲ ಬಾರಿ ಸಂಸದರಾಗಿ ಆಯ್ಕೆಯಾದಾಗ ಸಾಮಾನ್ಯವಾಗಿ ಕೇಂದ್ರ ಸರಕಾರದಿಂದ ನೀಡುತ್ತಿದ್ದ ಅನುದಾನಗಳ ಬಳಕೆಯನ್ನಷ್ಟೇ ಮಾಡಿದರು ವಿನಃ ಹೇಳಿಕೊಳ್ಳುವ ಯಾವ ಕೆಲಸವನ್ನೂ ಮಾಡಲಿಲ್ಲ. ಮೈಸೂರು ಸಂಸದರಾದಾಗಿನಿಂದಲೂ ತಮ್ಮ ವಿವಾದಾತ್ಮಕ ಹಾಗೂ ಪ್ರಚೋದನಕಾರಿ ಹೇಳಿಕೆಗಳ ಮೂಲಕ ಸುದ್ದಿಯಲ್ಲಿದ್ದುದೇ ಜಾಸ್ತಿ.
ಈಡೇರದ ಭರವಸೆಗಳು
ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ, ಹುಣಸೂರು ಭಾಗದ ಬಹುತೇಕ ಜನರು ತಂಬಾಕು ಬೆಳೆಯನ್ನೇ ಆಶ್ರಯಿಸಿದ್ದಾರೆ. ಈ ಭಾಗದಲ್ಲಿ ತಂಬಾಕು ಮಾರಾಟ ಕೇಂದ್ರವೂ ಇದೆ. ಆದರೆ ತಂಬಾಕು ಬೆಳೆಗೆ ಸೂಕ್ತ ಬೆಲೆ ಕೊಡಿಸುವಲ್ಲಿ ಸಂಸದರು ವಿಫಲರಾಗಿದ್ದಾರೆ.
ಕೊಡಗಿನಲ್ಲಿ ಕಾಫಿ ಬೆಳೆಗಾರರು ಹೆಚ್ಚು ಇದ್ದು, ಕಾಫಿ ಬೆಳೆಗೂ ಸೂಕ್ತ ಬೆಲೆ ಒದಗಿಸುವಲ್ಲಿ ಕೇಂದ್ರ ಸರಕಾರದ ಗಮನ ಸೆಳೆಯುವಲ್ಲಿ ಸಂಸದ ಪ್ರತಾಪ ಸಿಂಹ ವಿಫಲರಾಗಿದ್ದಾರೆ. ಮೈಸೂರು ವಿಮಾನ ನಿಲ್ದಾಣದ ರನ್‌ವೇ ಹೆಚ್ಚಳಕ್ಕೆ ಕಳೆದ 9 ವರ್ಷಗಳಿಂದಲೂ ಏನನ್ನೂ ಮಾಡಿಲ್ಲ.
ರನ್‌ವೇಗಳ ಹೆಚ್ಚಳ ಸಂಬಂಧ ರೈತರ ಭೂಮಿ ವಶಕ್ಕೆ ಪಡೆಯುವಲ್ಲಿ ರೈತ ಸಂಘಟನೆಗಳ ವಿರೋಧ ಕಟ್ಟಿಕೊಂಡಿದ್ದಾರೆ. ಭೂಮಿಯನ್ನು ಯಾವುದೇ ಕಾರಣಕ್ಕೂ ಕೊಡುವುದಿಲ್ಲ ಎಂದು ರೈತರು ಹಠಕ್ಕೆ ಬಿದ್ದಿದ್ದಾರೆ. ವಿಮಾನದಿಂದ ರೈತರು, ಬಡವರಿಗೆ ಅನುಕೂಲವಿಲ್ಲ. ನಾವು ಭೂಮಿಯನ್ನು ಕೊಡುವುದಿಲ್ಲ ಎಂದು ಹೇಳುತ್ತಿದ್ದಾರೆ. ಆದರೆ ಅವರೆಲ್ಲರನ್ನೂ ವಿಶ್ವಾಸಕ್ಕೆ ಪಡೆದು ಅಭಿವೃದ್ಧಿ ಮಾಡುವಲ್ಲಿ ಸಂಸದ ವಿಫಲರಾಗಿದ್ದಾರೆ ಎನ್ನಲಾಗುತ್ತಿದೆ.
ಮೊದಲ ಬಾರಿಗೆ ಸಂಸದರಾದ ಸಂದರ್ಭದಲ್ಲಿ ನೀಡಿದ್ದ ಮೈಸೂರು-ಮಡಿಕೇರಿಗೆ ಹೊಸ ರೈಲು ಮಾರ್ಗದ ಭರವಸೆ ಬರೀ ಭರವಸೆಯಾಗಿಯೇ ಉಳಿದಿದೆ.
ಸ್ಪಪಕ್ಷದವರ ವಿರೋಧ
ಸಂಸದ ಪ್ರತಾಪ ಸಿಂಹ ಅಭಿವೃದ್ಧಿ ಮೂಲಕ ಹೆಚ್ಚು ಸುದ್ದಿಯಾಗುವ ಬದಲು ಸ್ವಪಕ್ಷದವರಿಂದಲೇ ವಿರೋಧ ಮತ್ತು ವಿವಾದಾತ್ಮಕ ಹೇಳಿಕೆಗಳಿಂದಲೇ ಹೆಚ್ಚು ಹೆಚ್ಚು ಸುದ್ದಿಯಾಗಿದ್ದಾರೆ.
ಸಂಸದರಾದ ಮೊದಲ ದಿನದಿಂದಲೂ ತನ್ನದೇ ನಡೆಯಬೇಕು ಎಂಬ ಹಠಕ್ಕೆ ಬಿದ್ದಿರುವ ಸಂಸದ ಪ್ರತಾಪ ಸಿಂಹ ಸ್ವಪಕ್ಷದ ಹಿರಿಯ ನಾಯಕರು ಮಾಜಿ ಶಾಸಕರುಗಳಾದ ಎಸ್.ಎ. ರಾಮದಾಸ್, ಎಲ್.ನಾಗೇಂದ್ರ, ಹರ್ಷವರ್ಧನ್, ಮಾಜಿ ಸಚಿವ ಸಿ.ಎಚ್.ವಿಜಯಶಂಕರ್ ಅವರೊಂದಿಗೆ ವಿರೋಧ ಕಟ್ಟಿಕೊಂಡಿದ್ದಾರೆ.
ಮಾಜಿ ಶಾಸಕ ಎಸ್.ಎ. ರಾಮದಾಸ್ ಅವರೊಂದಿಗೆ ಸೋಯೇಜ್ ಫಾರಂನಲ್ಲಿ ಕಸ ಸಂಗ್ರಹ ಘಟಕ ಸ್ಥಾಪನೆ ವಿಚಾರದಲ್ಲಿ ದೊಡ್ಡ ರಂಪಾಟವನ್ನೇ ಮಾಡಿಕೊಂಡಿದ್ದರು. ರಾಮದಾಸ್ ಅವರ ಅಭಿವೃದ್ಧಿ ಕೆಲಸಗಳಿಗೆ ಇವರೇ ತೊಡಕಾಗಿದ್ದರು.
ಶಾಸಕರ ಅನುದಾನದಲ್ಲಿ ಎಸ್.ಎ. ರಾಮದಾಸ್ ಅವರು ಬಸ್ ಶೆಲ್ಟರ್ ನಿರ್ಮಾಣ ಮಾಡಿದಾಗಲೂ ಗುಂಬಜ್ ಮಾದರಿಯಲ್ಲಿದೆ ಅದನ್ನು ತೆರವುಗೊಳಿಸಬೇಕು. ಇಲ್ಲದಿದ್ದರೆ ಅದನ್ನು ಬುಲ್ಡೋಜರ್ ತಂದು ಡೆಮಾಲಿಷ್ ಮಾಡುವುದಾಗಿ ಹೇಳಿಕೆ ನೀಡುವ ಮೂಲಕ ರಾಮದಾಸ್ ವಿರೋಧ ಕಟ್ಟಿಕೊಂಡಿದ್ದರು. ಇದರ ಜೊತೆಗೆ 2023ರ ವಿಧಾನಸಭಾ ಚುನಾವಣೆಯಲ್ಲಿ ಎಸ್.ಎ. ರಾಮದಾಸ್ ಅವರಿಗೆ ಬಿಜೆಪಿ ಟಿಕೆಟ್ ತಪ್ಪಲು ಕಾರಣರಾಗಿದ್ದಾರೆ ಎಂಬ ಆರೋಪವೂ ಕೇಳಿಬಂದಿದೆ.
ನಂಜನಗೂಡು ಶಾಸಕರಾಗಿದ್ದ ಹರ್ಷವರ್ಧನ್ ಅವರ ಜೊತೆ ಕೊರೋನ ಸಂದರ್ಭದಲ್ಲಿ ಸಂಘರ್ಷ ಮಾಡಿಕೊಂಡಿದ್ದರು. ಅದರ ಜೊತೆಗೆ ಹುಚ್ಚಗಣಿ ಮಾರಮ್ಮ ದೇವಸ್ಥಾನ ತೆರವುಗೊಳಿಸಿದ ವಿಚಾರದಲ್ಲೂ ಇಬ್ಬರ ನಡುವೆ ಸಾಕಷ್ಟು ವಾದ ವಿವಾದಗಳು ಏರ್ಪಟ್ಟಿತ್ತು. ಹಾಗಾಗಿ ಅವರು ಸಂಸದ ಪ್ರತಾಪ ಸಿಂಹ ಅವರಿಗೆ ಕಂಟಕವಾಗಿದ್ದಾರೆ.
ಚಾಮರಾಜ ಕ್ಷೇತ್ರದಲ್ಲಿ ಈ ಹಿಂದೆ ಶಾಸಕರಾಗಿದ್ದ ಎಲ್. ನಾಗೇಂದ್ರ ಅವರು ಗ್ಯಾಸ್ ಪೈಪ್ ಲೈನ್ ಅಳವಡಿಕೆ ವಿಚಾರದಲ್ಲಿ ತಮ್ಮ ಅನುಮತಿ ಪಡೆಯದೆ ನಗರಪಾಲಿಕೆಯವರು ರಸ್ತೆಗಳನ್ನು ಅಗೆಯುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು. ಈ ವಿಚಾರವಾಗಿ ಮಧ್ಯ ಪ್ರವೇಶಿಸಿದ ಪ್ರತಾಪ ಸಿಂಹ ಎಲ್. ನಾಗೇಂದ್ರ ಅವರ ಜೊತೆಗೆ ಬಹಿರಂಗವಾಗಿ ವಿರೋಧ ಕಟ್ಟಿಕೊಂಡಿದ್ದರು.
ಮಾಜಿ ಸಚಿವ ಸಿ.ಎಚ್.ವಿಜಯಶಂಕರ್ ಅವರು ಕಾಂಗ್ರೆಸ್ ಸೇರಿ ಕಳೆದ ಲೋಕಸಭಾ ಚುನಾವಣೆಯಲ್ಲಿ ಪ್ರತಾಪ ಸಿಂಹ ಅವರ ವಿರುದ್ಧ ಸೋಲನ್ನು ಕಂಡಿದ್ದರು. ಈ ವೇಳೆ ಸಂಸದ ಪ್ರತಾಪ ಸಿಂಹ ಅವರ ವಿರುದ್ಧವೂ ಏಕವಚನದಲ್ಲಿ ಹೇಳಿಕೆಗಳನ್ನು ನೀಡಿ ಅವರ ವಿರೋಧವನ್ನೂ ಕಟ್ಟಿಕೊಂಡಿದ್ದಾರೆ.
ಇದರ ಜೊತೆಗೆ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಈ ಮೂವರು ಶಾಸಕರಲ್ಲದೆ ಮೈಸೂರು-ಕೊಡಗು ಭಾಗದ ಬಿಜೆಪಿ ಅಭ್ಯರ್ಥಿಗಳ ಪರ ಕೆಲಸ ಮಾಡಲಿಲ್ಲ ಎಂಬ ಆರೋಪವೂ ಇವರ ಮೇಲಿದೆ.
ಕಳೆದ ಚಳಿಗಾಲದ ಅಧಿವೇಶನದ ಸಂದರ್ಭದಲ್ಲಿ ಲೋಕಸಭೆಯ ವೀಕ್ಷಕರ ಗ್ಯಾಲರಿಯಿಂದ ಸದನಕ್ಕೆ ಹಾರಿ ಹೊಗೆ ಬಾಂಬ್ ಸಿಡಿಸಿದ್ದ ಆರೋಪಿಗಳಿಬ್ಬರಿಗೆ ಪಾಸ್ ನೀಡಿದ ಆರೋಪದ ಮೇಲೆ ಪ್ರತಾಪ ಸಿಂಹರನ್ನು ತನಿಖೆಗೊಳಪಡಿಸಬೇಕು ಎಂದು ಕಾಂಗ್ರೆಸ್ ನಾಯಕರು ಒತ್ತಾಯಿಸಿದ್ದರು. ಇದೇ ವೇಳೆ ಸ್ವಪಕ್ಷ ಬಿಜೆಪಿಯವರೇ ಪ್ರತಾಪ ಸಿಂಹ ಪರ ಹೇಳಿಕೆ ನೀಡಲು ಮುಂದಾಗದೆ ದೂರವುಳಿದಿದ್ದರು. ಇದರಿಂದಾಗಿ ಪ್ರತಾಪ ಸಿಂಹ ತೀವ್ರ ಮುಜುಗರಕ್ಕೆ ಒಳಗಾಗಿದ್ದರು.
ಜಾತಿ ಲೆಕ್ಕಾಚಾರ
ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಒಕ್ಕಲಿಗ ಸಮುದಾಯದ ಮತಗಳೇ ಅಧಿಕವಾಗಿದ್ದು, ಕುರುಬ ಸಮುದಾಯದ ಮತಗಳು ನಿರ್ಣಾಯಕವಾಗಿವೆ.
ದಲಿತ, ಹಿಂದುಳಿದ ಮತ್ತು ಇತರ ವರ್ಗಗಳ ಮತಗಳನ್ನು ಯಾರು ಹೆಚ್ಚು ಪಡೆಯುತ್ತಾರೋ ಅವರ ಗೆಲುವು ನಿಶ್ಚಿತವಾಗಿದೆ. ಲಿಂಗಾಯತ ಮತಗಳು ಮತ್ತು ಒಕ್ಕಲಿಗ ಮತಗಳು ನಿರ್ದಿಷ್ಟ ಪಕ್ಷಕ್ಕೆ ಬಂದರೆ ಆ ಪಕ್ಷದ ಅಭ್ಯರ್ಥಿಗಳು ಗೆಲುವು ಸಾಧಿಸುವ ಸಾಧ್ಯತೆ ಇದೆ.
ಟಿಕೆಟ್ ಆಕಾಂಕ್ಷಿಗಳು
ಕಾಂಗ್ರೆಸ್ ಪಕ್ಷದಿಂದ ಪ್ರಮುಖವಾಗಿ ಮಾಜಿ ಸಂಸದ ವಿಧಾನಪರಿಷತ್ ಸದಸ್ಯ ಎಚ್.ವಿಶ್ವನಾಥ್, ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಪುತ್ರ, ಮಾಜಿ ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ, ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ.ಬಿ.ಜೆ.ವಿಜಯಕುಮಾರ್ ಸೇರಿದಂತೆ 16 ಮಂದಿ ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ.
ಬಿಜೆಪಿಯಿಂದ ಹಾಲಿ ಸಂಸದ ಪ್ರತಾಪ ಸಿಂಹ ಅವರೇ ಅಭ್ಯರ್ಥಿಯಾಗಬಹುದಾದರೂ, ಬಿಜೆಪಿ-ಜೆಡಿಎಸ್ ಮೈತ್ರಿ ಹಿನ್ನೆಲೆಯಲ್ಲಿ ಕ್ಷೇತ್ರವನ್ನು ಜೆಡಿಎಸ್ ಕೇಳುತ್ತಿದೆ. ಒಂದು ವೇಳೆ ಕ್ಷೇತ್ರ ಜೆಡಿಎಸ್ ಪಾಲಾದರೆ ಮಾಜಿ ಸಚಿವ ಸಾ.ರಾ.ಮಹೇಶ್ ಅಭ್ಯರ್ಥಿಯಾಗುವ ಸಾಧ್ಯತೆ ಇದೆ.
ಕ್ಷೇತ್ರದಲ್ಲಿ ಅತೀ ಹೆಚ್ಚು ಮತದಾರರ ಒಲವು ಸದ್ಯದ ಮಟ್ಟಿಗೆ ಕಾಂಗ್ರೆಸ್ ಕಡೆ ಇದೆ. ಅಭಿವೃದ್ಧಿ ವಿಚಾರಕ್ಕಿಂತ ಜಾತಿ ಮತ್ತು ಹಣಬಲ ಈ ಚುನಾವಣೆಯಲ್ಲಿ ಹೆಚ್ಚು ಕೆಲಸ ಮಾಡಲಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ಹಾಲಿ ಸಂಸದರ ಬಗ್ಗೆ ಅಷ್ಟೇನೂ ಮತದಾರರಿಗೆ ಒಲವಿಲ್ಲ ಎಂಬ ಮಾತುಗಳು ಕೇಳಿಬರುತ್ತಿದ್ದು. ಅವರಿಗೆ ಈ ಬಾರಿ ಬಿಜೆಪಿ ಟಿಕೆಟ್ ಕೈತಪ್ಪಿದರೂ ಅಚ್ಚರಿಯಿಲ್ಲ ಎಂದೂ ಹೇಳಲಾಗುತ್ತಿದೆ.