ಮೈಸೂರು: ಸ್ಥಾನ ಗಿಟ್ಟಿಸಿಕೊಳ್ಳಲು ಕಾಂಗ್ರೆಸ್ ಆಕಾಂಕ್ಷಿಗಳ ಪೈಪೋಟಿ

Update: 2024-05-27 09:31 GMT

ಮೈಸೂರು: ವಿಧಾನಪರಿಷತ್‌ನ 12 ಸ್ಥಾನಗಳಿಗೆ ಜೂನ್‌ನಲ್ಲಿ ಚುನಾವಣೆ ನಡೆಯಲಿದ್ದು, ಮುಖ್ಯಮಂತ್ರಿ ಸಿದ್ಧರಾಮಯ್ಯ ತವರು ಜಿಲ್ಲೆಯಲ್ಲಿ ಆಕಾಂಕ್ಷಿಗಳ ದಂಡೇ ವಿಧಾನಪರಿಷತ್ ಸ್ಥಾನ ಗಿಟ್ಟಿಸಲು ಇನ್ನಿಲ್ಲದ ಪ್ರಯತ್ನ ಮಾಡುತ್ತಿದೆ.

ಸಿಎಂ ತವರು ಜಿಲ್ಲೆಯಲ್ಲಿ ವಿಧಾನಪರಿಷತ್ ಸ್ಥಾನದ ಮೇಲೆ ಕಣ್ಣಿಟ್ಟಿರುವ ಹಲವರು ಲಾಭಿಗೆ ಮುಂದಾಗಿದ್ದು, ಪಕ್ಷಕ್ಕೆ ತಮ್ಮ ಸೇವೆ, ಹಿರಿತನ, ಜಾತಿ ಆಧಾರದ ಮೇಲೆ ಆಯ್ಕೆ ಮಾಡುವಂತೆ ಒತ್ತಡ ಹೇರುತ್ತಿದ್ದಾರೆ.

ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಪುತ್ರ ಡಾ.ಯತೀಂದ್ರ ಸಿದ್ಧರಾಮಯ್ಯ ಅವರಿಗೆ ಈ ಬಾರಿ ವಿಧಾನಪರಿಷತ್‌ಗೆ ಅವಕಾಶ ಕಲ್ಪಿಸಬೇಕು ಎಂಬುದು ಎಲ್ಲರ ಒಕ್ಕೊರಲ ಅಭಿಪ್ರಾಯ. ಶಾಸಕ ಸ್ಥಾನವನ್ನು ತಂದೆಗೆ ಬಿಟ್ಟುಕೊಟ್ಟು ಪಕ್ಷದ ಗೆಲುವಿಗಾಗಿ ಶ್ರಮಿಸಿ ಪಕ್ಷ ಸಂಘಟನೆಯಲ್ಲಿ ತೊಡಗಿರುವ ಯತೀಂದ್ರ ಅವರಿಗೆ ಹೆಚ್ಚಿನ ಜವಾಬ್ದಾರಿಯನ್ನು ಕೊಟ್ಟು ಪಕ್ಷ ಸಂಘಟನೆಗೆ ಮತ್ತಷ್ಟು ಅವಕಾಶ ಕಲ್ಪಿಸಬೇಕು ಎಂಬ ಮಾತುಗಳು ಕಾರ್ಯಕರ್ತರು ಮತ್ತು ಮುಖಂಡರುಗಳ ವಲಯದಲ್ಲಿ ಕೇಳಿ ಬರುತ್ತಿದೆ.

ಮಾಜಿ ಶಾಸಕ ಎಚ್.ಪಿ.ಮಂಜುನಾಥ್, ಜಿಲ್ಲಾ ಗ್ರಾಮಾಂತರ ಕಾಂಗ್ರೆಸ್ ಅಧ್ಯಕ್ಷ ಡಾ.ಬಿ.ಜೆ.ವಿಜಯಕುಮಾರ್, ನಗರ ಕಾಂಗ್ರೆಸ್ ಅಧ್ಯಕ್ಷ ಆರ್.ಮೂರ್ತಿ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಉಪಾಧ್ಯಕ್ಷೆ ಡಾ.ಪುಷ್ಪಾ ಅಮರನಾಥ್, ವಾಲ್ಮೀಕಿ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಎಸ್.ಸಿ.ಬಸವರಾಜು, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಉಪಾಧ್ಯಕ್ಷ ಸೂರಜ್ ಹೆಗಡೆ, ವಸ್ತು ಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಅಯ್ಯೂಬ್ ಖಾನ್, ಮಾಜಿ ಮೇಯರ್ ನಾರಾಯಣ, ಕೆಪಿಸಿಸಿ ವಕ್ತಾರ ಎಚ್.ಎ.ವೆಂಕಟೇಶ್, ಕಾಂಗ್ರೆಸ್ ಮುಖಂಡ ಜೆ.ಜೆ.ಆನಂದ ಪರಿಷತ್ ಮೇಲೆ ಕಣ್ಣಿಟ್ಟಿದ್ದಾರೆ.

ಡಾ.ಬಿ.ಜೆ.ವಿಜಯಕುಮಾರ್ ಹತ್ತು ವರ್ಷಗಳಿಂದ ಜಿಲ್ಲಾ ಗ್ರಾಮಾಂತರ ಕಾಂಗ್ರೆಸ್ ಅಧ್ಯಕ್ಷರಾಗಿ ಪಕ್ಷದ ಸಂಘಟನೆಯಲ್ಲಿ ತೊಡಗಿದ್ದಾರೆ. ಯಾವುದೇ ಫಲಾಪೇಕ್ಷೆಯಿಲ್ಲದೆ ಅವರು ಪಕ್ಷದ ಕೆಲಸವನ್ನು ಮಾಡುತ್ತಿದ್ದಾರೆ. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದರು. ಕೊನೆವರೆಗೂ ಇವರ ಹೆಸರು ಮುಂಚೂಣಿಯಲ್ಲಿದ್ದು ನಂತರ ಟಿಕೆಟ್ ಕೈ ತಪ್ಪಿತು. ಇವರಿಗೆ ಮುಂದೆ ವಿಧಾನಪರಿಷತ್‌ಗೆ ಅವಕಾಶ ಕಲ್ಪಿಸಿಕೊಡುವುದಾಗಿ ಪಕ್ಷದ ಮುಖಂಡರುಗಳೇ ಭರವಸೆ ಕೊಟ್ಟಿದ್ದರು ಎಂದು ಹೇಳಲಾಗುತ್ತಿದೆ.

ಮಾಜಿ ಶಾಸಕ ಎಚ್.ಪಿ.ಮಂಜುನಾಥ್ ಕೂಡ ಪ್ರಬಲ ಪೈಪೋಟಿ ನಡೆಸುತ್ತಿದ್ದು ಸಿದ್ಧರಾಮಯ್ಯ, ಡಿ.ಕೆ.ಶಿವಕುಮಾರ್ ಅವರ ಮನವೊಲಿಸುವ ಕೆಲಸ ಮಾಡುತ್ತಿದ್ದಾರೆ.

ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಉಪಾಧ್ಯಕ್ಷೆ ಡಾ.ಪುಷ್ಪಾ ಅಮರನಾಥ್ ಕೂಡ ಮಹಿಳಾ ಕೋಟ ಮತ್ತು ದಲಿತ ಕೋಟಾದಡಿಯಲ್ಲಿ ನನಗೆ ಅವಕಾಶ ನೀಡಬೇಕು ಎಂದು ಒತ್ತಡ ಹೇರುತ್ತಿದ್ದಾರೆ. ಇವರ ಬೆಂಬಲಿಗರು ಇತ್ತೀಚೆಗೆ ಸಮಾಜ ಕಲ್ಯಾಣ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಅವರನ್ನು ಭೇಟಿ ಮನವಿ ಕೂಡ ಸಲ್ಲಿಸಿದ್ದಾರೆ.

ವಾಲ್ಮೀಕಿ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಎಸ್.ಸಿ.ಬಸವರಾಜು ಕೂಡ ತಮ್ಮ ಬೆಂಬಲಿಗರ ಮೂಲಕ ಒತ್ತಡ ಹೇರುತ್ತಿದ್ದಾರೆ. ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರಿಗೆ ಆತ್ಮೀಯರಾಗಿರುವ ಅವರು ನಾಯಕ ಕೋಟಾದಡಿಯಲ್ಲಿ ಅವಕಾಶ ಕಲ್ಪಿಸುವಂತೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವತ ಮೇಲೆ ಒತ್ತಡ ಹೇರುತ್ತಿದ್ದಾರೆ ಎಂಬ ಮಾಹಿತಿ ತಿಳಿದು ಬಂದಿದೆ.

ಇನ್ನು ವಸ್ತು ಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಅಯೂಬ್ ಖಾನ ಕೂಡ ಅಲ್ಪಸಂಖ್ಯಾತ ಕೋಟಾದಡಿಯಲ್ಲಿ ತನಗೆ ಅವಕಾಶ ನೀಡಬೇಕು ಎಂದು ಸಿಎಂ, ಡಿಸಿಎಂ ಬಳಿ ಮನವಿ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

ಇನ್ನು ಅನೇಕರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜು ಖರ್ಗೆ, ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ.ಮಹದೇವಪ್ಪರ ಮೇಲೆ ಒತ್ತಡ ಹಾಕಿ ವಿಧಾನಪರಿಷತ್ ಸ್ಥಾನ ಗಿಟ್ಟಿಸಲು ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.

ವಿಜಯಕುಮಾರ್ ಪರ ಸಭೆ

ಜಿಲ್ಲಾ ಗ್ರಾಮಾಂತರ ಕಾಂಗ್ರೆಸ್ ಅಧ್ಯಕ್ಷ ಡಾ.ಬಿ.ಜೆ.ವಿಜಯಕುಮಾರ್‌ರಿಗೆ ವಿಧಾನಪರಿಷತ್ ನಲ್ಲಿ ಸ್ಥಾನ ಕೊಡಬೇಕು ಎಂದು ಒತ್ತಾಯಿಸಿ ಪ್ರಗತಿಪರ ಸಂಘಟನೆಗಳ ವತಿಯಿಂದ ದುಂಡು ಮೇಜಿನ ಸಭೆ ನಡೆಯಿತು.

ನಗರದ ಖಾಸಗಿ ಹೋಟರಲ್‌ನಲ್ಲಿ ನಡೆದ ಸಭೆಯಲ್ಲಿ ಅನೇಕ ಪ್ರಗತಿಪರ ಚಿಂತಕರು ಭಾಗವಹಿಸಿದ್ದು, ಡಾ.ಬಿ.ಜೆ.ವಿಜಯಕುಮಾರ್ ಅವರಿಗೆ ಅವಕಾಶ ನೀಡಬೇಕು ಎಂದು ಒತ್ತಡ ಹೇರಿದ್ದಾರೆಂದು ತಿಳಿದು ಬಂದಿದೆ.

ನಾನು ಹಿಂದಿನಿಂದಲೂ ವಿಧಾನಪರಿಷತ್‌ಗೆ ಅವಕಾಶ ಕಲ್ಪಿಸಿಕೊಡುವಂತೆ ಪಕ್ಷದ ನಾಯಕರಲ್ಲಿ ಮನವಿ ಮಾಡುತ್ತಿದ್ದೆ. ಮೈಸೂರು ನಗರದಿಂದ ನನಗೊಂದು ಅವಕಾಶ ನೀಡುವಂತೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ಬಳಿ ಕೇಳಿಕೊಂಡಿದ್ದೇನೆ.

-ಅಯ್ಯೂಬ್ ಖಾನ್, ಅಧ್ಯಕ್ಷ, ವಸ್ತುಪ್ರದರ್ಶನ ಪ್ರಾಧಿಕಾರ


ವಿಧಾನಪರಿಷತ್‌ಗೆ ಅವಕಾಶ ಕಲ್ಪಿಸುವಂತೆ ನಮ್ಮ ಪಕ್ಷದ ನಾಯಕರನ್ನು ಕೇಳಿಕೊಂಡಿದ್ದೇನೆ. ನನ್ನ ಬೆಂಬಲಿಗರು ಒತ್ತಡ ಹೇರುತ್ತಿರುವುದು ಸಹಜ. ಪಕ್ಷ ಹೈಕಮಾಂಡ್ ಯಾವ ತೀರ್ಮಾನ ಕೈಗೊಳ್ಳುತ್ತದೆ ಅದಕ್ಕೆ ತಲೆಬಾಗುತ್ತೇನೆ.

-ಎಸ್.ಸಿ.ಬಸವರಾಜು, ವಾಲ್ಮೀಕಿ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ

ನಾನು ಲೋಕಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದೆ. ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡು ಸಾಕಷ್ಟು ಕೆಲಸ ಮಾಡಿದ್ದೇನೆ. ಲೋಕಸಭಾ ಟಿಕೆಟ್ ಕೈ ತಪ್ಪಿರುವುದರಿಂದ ವಿಧಾನಪರಿಷತ್‌ಗಾದರೂ ಅವಕಾಶ ಮಾಡಿಕೊಡಿ ಎಂದು ಸಿಎಂ ಸಿದ್ದರಾಮಯ್ಯ ಮತ್ತು ಪಕ್ಷದ ನಾಯಕರಲ್ಲಿ ಕೇಳಿಕೊಂಡಿದ್ದೇನೆ.

-ಜೆ.ಜೆ.ಆನಂದ, ಕಾಂಗ್ರೆಸ್ ಮುಖಂಡ

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ನೇರಳೆ ಸತೀಶ್ ಕುಮಾರ್

contributor

Similar News