ಅಸಂಬದ್ಧ ‘ಅಭಿವೃದ್ಧಿ’ಗೆ ಪ್ರಕೃತಿಯ ಪ್ರತೀಕಾರ

Update: 2024-08-03 08:48 GMT

ಧಾರಾಕಾರ ಮಳೆ ಸುರಿಯುತ್ತಿದೆ, ಮಳೆ ನೀರಿನ ಜೊತೆ ಅಲ್ಲಲ್ಲಿ ಕಣ್ಣೀರಿನ ಹನಿಗಳೂ ಸುರಿಯುತ್ತಿವೆ, ಜಲ ಪ್ರವಾಹ, ಭೂಕುಸಿತದಂತಹ ಪ್ರಾಕೃತಿಕ ದುರಂತಗಳು ಹೆಚ್ಚಾಗುತ್ತಿವೆ. ತಾಳ್ಮೆಯಿಂದ ಇದ್ದ ಪ್ರಕೃತಿಯನ್ನು ಕೆಣಕಿಸಿ, ಕೆಡಿಸಿ, ಕತ್ತರಿಸಿ ಕಟುಕರಾದುದಕ್ಕೆ ಪ್ರಕೃತಿ ಮಾತೆಯ ಪ್ರತೀಕಾರವು ನಮ್ಮನ್ನು ಆವರಿಸುತ್ತಿದೆ. ನಮ್ಮ ಬದುಕಿಗೇ ಸದಾ ಚೇತನಾ ಶಕ್ತಿ ನೀಡುತ್ತಿರುವ ಪಶ್ಚಿಮ ಘಟ್ಟವನ್ನು ಯಾವುದೋ ಅಸಂಬದ್ಧ ‘ಅಭಿವೃದ್ಧಿ’ ಎಂಬ ನೆಪಗಳಿಂದ ಇಷ್ಟ ಬಂದಂತೆ ಕತ್ತರಿಸಿ ಹಾಕಿದ ಪ್ರತಿಫಲವೇ ಇಂದು ಆಗುತ್ತಿರುವ ಭೂಕುಸಿತಗಳಿಗೆ ಕಾರಣ. ಯಾವುದೋ ರಾಜಕಾರಣಿ ಹವಾ ನಿಯಂತ್ರಿತ ಕೊಠಡಿಯಲ್ಲಿ ಕುಳಿತು, ಯಾವುದೋ ಜ್ಞಾನರಹಿತ ವಿಜ್ಞಾನಿಗಳ ಸುಳ್ಳು ಮಾಹಿತಿಗಳನ್ನು ಪಡೆದು ಕೊಂಡು, ಯಾವುದೋ ಅವೈಜ್ಞಾನಿಕ ಯೋಜನೆಗಳಿಗೆ ಸಹಿ ಹಾಕಿದರೆ ಅದರ ಆಚೆ ಯಾರೋ ಬಡ, ಮುಗ್ಧರು ಜೀವ ಕಳೆದು ಕೊಳ್ಳುವಂತಹ ಹೀನಾಯ ಪರಿಸ್ಥಿತಿಯಲ್ಲಿ ನಾವಿದ್ದೇವೆ. ಪಶ್ಚಿಮ ಘಟ್ಟದ ಧಾರಣಾ ಶಕ್ತಿಯನ್ನು ಅಳೆಯದೆ, ಯೋಜನೆಯ ಸಾಧಕ ಬಾಧಕಗಳನ್ನು ಅರಿಯದೆ, ಕೇವಲ ಹಣಗಳಿಸುವ ಯೋಜನೆಗಳನ್ನು ಬಲಾತ್ಕಾರದಿಂದ ಮಾಡಿದ ಪರಿಣಾಮ ಯಾವುದೋ ಅಮಾಯಕ ಮನೆಗಳಲ್ಲಿ ಸಾವು, ನೋವುಗಳ ಕಣ್ಣೀರಾಗಿ, ಮಕ್ಕಳು ಅನಾಥರಾಗಿ, ಹೆಂಗಸರು ವಿಧವೆಯರಾಗಿ ಸರ್ವಸ್ವವನ್ನೂ ಕಳೆದುಕೊಂಡು ಬಿಡುವಂತಹ ಈ ನೀಚ ಪರಿಸ್ಥಿತಿಯನ್ನು ಕೇಳುವವರೇ ಇಲ್ಲದಂತಾಗಿದೆ. ಇನ್ನೂ ಎಷ್ಟು ಕಣ್ಣೀರು ಹರಿಯಬೇಕು? ದುರಂತ ಆಗಿರುವ ಸ್ಥಳಕ್ಕೆ ರಾಜಕಾರಣಿಗಳು ಬಂದು ಪರಿಶೀಲನೆ, ಪರಿಹಾರ ನೀಡಿದ ಕೂಡಲೇ ಸತ್ತ ಜೀವಗಳು ವಾಪಸ್ ಜೀವಂತ ಆಗಿ ಬರುವುದೇ? ಭೂಕುಸಿತ ಎಂಬ ದುರಂತವಾಗುವ ಯಾವುದೇ ಯೋಜನೆಗಳನ್ನು ಇನ್ನು ಶಾಶ್ವತವಾಗಿ ಮಾಡುವುದಿಲ್ಲ ಎಂಬ ಭರವಸೆ ಯಾವ ರಾಜಕಾರಣಿಗಳಿಂದಲೂ ಬರುತ್ತಿಲ್ಲ. ಪರಿಹಾರವೆಂದು ನೀಡಿದುದರಲ್ಲೂ ಲೂಟಿ ಹೊಡೆಯುವ ಅಧಿಕಾರಿಗಳಿಗೆ ಯಾವಾಗ ಅಂತ್ಯ? ದುರಂತಗಳು ಸುದ್ದಿಯಾಗುತ್ತವೆ ಮತ್ತೆ ಮರೆಯಾಗುತ್ತವೆ.ಆದರೆ ದುರಂತ ಆಗಿರುವ ಮನೆಗಳವರ ವೇದನೆ, ರೋದನ?!?!

ಎತ್ತಿನ ಹೊಳೆ ಎಂಬ ಹಣದ ಹೊಳೆ ಯೋಜನೆಯನ್ನು ಆರಂಭಿಸುವಾಗ ಇಡೀ ರಾಜ್ಯವೇ ಈ ಯೋಜನೆ ಬೇಡವೆಂದು ತಿರಸ್ಕರಿಸಿತು, ವೈಜ್ಞಾನಿಕ ವರದಿಯೂ ಈ ಯೋಜನೆ ಬೇಡವೆಂದು ಹೇಳಿತು. ಆದರೂ ಹಠದಿಂದ ಈ ಯೋಜನೆಯನ್ನು ರಾಜಕೀಯ ವ್ಯವಸ್ಥೆಯ ಮೂರೂ ಪಕ್ಷಗಳವರು ತಮ್ಮ ಧನದಾಸೆಯ ಲಾಭಕ್ಕಾಗಿ ಮಾಡಿದರು. ಸಾವಿರ, ಸಾವಿರ ಕೋಟಿ ಹಣವನ್ನು ಯೋಜನೆಗೆ ಸುರಿಯಲಾಯಿತು. ಇಂದು ಈ ಯೋಜನೆಯ ಅಧಿಕಾರಿಗಳಿಗೆ, ಗುತ್ತಿಗೆದಾರರಿಗೆ, ರಾಜಕಾರಣಿಗಳಿಗೆ ಆರ್ಥಿಕ ಲಾಭವಾಯಿತೇ ಹೊರತು ಯಶಸ್ಸಿನ ಫಲಿತಾಂಶ ಶೂನ್ಯ. ಇಡೀ ಶಿರಾಡಿ ಘಾಟಿಯುದ್ದಕ್ಕೂ ಒಂದಷ್ಟು ಭೂಕುಸಿತ, ಖಾಸಗಿ ತೋಟ, ಕೃಷಿ ಭೂಮಿ ನಾಶವಾಗುತ್ತಾ ಇವೆ. ಯಾವ ನೀರಾವರಿ ಯೋಜನೆ ಎಂದು ಇದನ್ನು ಆರಂಭಿಸಿದ್ದರೋ ನೀರು ಹರಿಯದೆ ಕೇವಲ ಹಣದ ಸೂಟ್‌ಕೇಸ್‌ಗಳು ಸೂಕ್ತ ಜಾಗವನ್ನು ಸೇರಿಕೊಂಡವು. ಎತ್ತಿನ ಹೊಳೆ ಯೋಜನೆಯ ಕಾಮಗಾರಿಯಿಂದಲೇ ಇಂದು ಪಶ್ಚಿಮ ಘಟ್ಟದಲ್ಲಿ ಭೂಕುಸಿತವಾಗುತ್ತಿರುವುದು. ಮೊನ್ನೆ ಹಾರ್ಲೆ, ಕುಂಬರಡಿ ಪ್ರದೇಶದಲ್ಲಿ ಭೂಕುಸಿತ ಆದಾಗ ಎತ್ತಿನ ಹೊಳೆಯ ಯಾರೋ ಇಂಜಿನಿಯರ್ ಬಂದು ಈ ಭೂಕುಸಿತಕ್ಕೂ, ಎತ್ತಿನ ಹೊಳೆ ಯೋಜನೆಗೂ ಸಂಬಂಧವೇ ಇಲ್ಲ ಅನ್ನುತ್ತಾರಂತೆ. ಅಲ್ಲಿ ಕುಸಿದಿರುವ ಮಣ್ಣಿನ ಒಳಗೆ ಎತ್ತಿನ ಹೊಳೆ ಯೋಜನೆಯ ಪೈಪ್ ಕಾಣುತ್ತಾ ಇದೆ, ಮೇಲ್ಗಡೆ ಎತ್ತಿನ ಹೊಳೆ ಯೋಜನೆಯ ಕರೆಂಟ್ ಲೈನ್ ಕೂಡಾ ಕಾಣುತ್ತಿದೆ. ಆ ಅಧಿಕಾರಿಯ ಮೂತಿಯನ್ನು ಆ ಪೈಪ್‌ಗೆ ತಿಕ್ಕಿ ತೀಡಿದರೆ ಅರ್ಥವಾಗುತಿತ್ತು. ಎತ್ತಿನ ಹೊಳೆ ಯೋಜನೆ ಆರಂಭವಾಗಿ 12 ವರ್ಷಗಳೇ ಸಾಗಿತು, ಪ್ರತೀ ಬಜೆಟ್‌ನಲ್ಲಿ ಹಣ ಬರುತ್ತಾ ಇದೆ, ಇನ್ನೂ 25 ವರ್ಷ ಕಾಮಗಾರಿ ಆಗುತ್ತಲೇ ಇರುತ್ತದೆ, ಕಾಮಗಾರಿಯ ಸುವರ್ಣ ಮಹೋತ್ಸವ ಸಂಭ್ರಮವೂ ಆಗಬಹುದು. ಆದರೆ ಈ ಯೋಜನೆಯ ಯಶಸ್ಸು ಅಂದರೆ ನಿರಂತರವಾಗಿ ಪಶ್ಚಿಮ ಘಟ್ಟದಲ್ಲಿ ಭೂಕುಸಿತ, ಶೋಲಾರಣ್ಯದ ನಾಶ, ನೇತ್ರಾವತಿಗೆ ಹೊಡೆತ, ಜನ ಪ್ರತಿನಿಧಿಗಳಿಗೆ ವೋಟು, ಸೀಟು, ನೋಟಿನ ಮೂಟೆ ಅಷ್ಟೇ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ದಿನೇಶ್ ಹೊಳ್ಳ

contributor

Similar News