ಮೋದಿ ರಾಜಕಾರಣಕ್ಕೆ ಮಣಿಪುರ ಎಂಬುದು ಲೆಕ್ಕಕ್ಕಿಲ್ಲದ ರಾಜ್ಯವೇ?

ಎಂಎಂಎ ಚಾಂಪಿಯನ್ ಶಿಪ್ ಗೆದ್ದ ಫೈಟರ್ ಚುಂಗ್ರೆಂಗ್ ಕೋರೆನ್ ಅವರು ಕಳೆದ ವರ್ಷ ಮೇನಲ್ಲಿ ಹಿಂಸಾಚಾರ ಸಂಭವಿಸಿದ ತಮ್ಮ ತವರು ರಾಜ್ಯಕ್ಕೆ ಭೇಟಿ ನೀಡುವಂತೆ ಪ್ರಧಾನಿ ನರೇಂದ್ರ ಮೋದಿಯಲ್ಲಿ ಭಾವನಾತ್ಮಕ ಮನವಿ ಮಾಡುವ ವೀಡಿಯೊ ವೈರಲ್ ಆಗಿದೆ. ಹಾಗೆ ಅಲ್ಲಿನ ಒಬ್ಬ ಪ್ರಜೆ ಕಣ್ಣೀರಿಟ್ಟು ಪ್ರಧಾನಿಯನ್ನು ಕೇಳಿಕೊಳ್ಳಬೇಕಾಗಿ ಬಂದಿರುವುದು ಅದೆಂತಹ ವಿಪರ್ಯಾಸ?

Update: 2024-03-14 06:02 GMT

ಮಣಿಪುರ ಸಂಘರ್ಷದಲ್ಲಿ 219 ಮಂದಿ ಬಲಿಯಾಗಿ ಹೋದರೂ, ಸಾವಿರಾರು ಮಂದಿ ನಿರಾಶ್ರಿತರಾದರೂ, ಇವತ್ತಿಗೂ ಅಲ್ಲಿನ ಮುಗ್ಧ ಸಮುದಾಯಗಳ ಬದುಕು ಅತಂತ್ರವೇ ಆಗಿದ್ದರೂ, ತಿಂಗಳುಗಟ್ಟಲೆ ಆ ಪುಟ್ಟ ರಾಜ್ಯ ಹಿಂಸೆಯಿಂದ ಬೇಯುತ್ತಿದ್ದರೂ, ಈ ದೇಶದ ಪ್ರಧಾನಿಯ ಹೃದಯ ಮಾತ್ರ ಕರಗುತ್ತಲೇ ಇಲ್ಲ.

ಮಣಿಪುರ ಹೊತ್ತಿ ಉರಿಯತೊಡಗಿದ ನಂತರ ಕಳೆದ ವರ್ಷದ ಮೇ ತಿಂಗಳಿನಿಂದ ಅಂದರೆ ಹನ್ನೊಂದು ತಿಂಗಳುಗಳಿಂದ ವಿಶ್ವದ ಇದ್ದಬಿದ್ದ ದೇಶಗಳನ್ನೆಲ್ಲ ಸುತ್ತಿಬಂದಿರುವ ಪ್ರಧಾನಿಗೆ, ಲಕ್ಷದ್ವೀಪಕ್ಕೆ ಹೋಗಿ ಫೋಟೊಶೂಟ್ ಮಾಡಿ ಬಂದ, ದ್ವಾರಕೆಯ ಅವಶೇಷಗಳನ್ನು ನೋಡಲು ಸಮುದ್ರದಾಳಕ್ಕೆ ನವಿಲುಗರಿ ಹಿಡಿದುಕೊಂಡು ಹೋಗುವ, ಅಸ್ಸಾಂ ಟೀ ತೋಟದಲ್ಲಿ ಫೋಟೊಗೆ ಪೋಸು ಕೊಡುವ ಮೋದಿಯವರಿಗೆ ಅದೇ ಮಣಿಪುರದ ಪಕ್ಕದಲ್ಲೇ ಇರುವ ಅಸ್ಸಾಮಿನ ಖಾಝಿರಂಗ ನ್ಯಾಷನಲ್ ಪಾರ್ಕ್‌ನಲ್ಲಿ ಆನೆ ಸವಾರಿ ಮಾಡಿ ಬಂದ ಮೋದಿಯವರಿಗೆ, ಜನರ ಬದುಕು ಛಿದ್ರ ಛಿದ್ರವಾಗಿರುವ ಮಣಿಪುರಕ್ಕೆ ಒಮ್ಮೆ ಹೋಗಬೇಕು, ಆ ಜನರಿಗಾಗಿ ಸಾಂತ್ವನದ ನಾಲ್ಕು ಮಾತನಾಡಬೇಕು, ಅವರ ಜೊತೆ ಕೆಲವು ನಿಮಿಷ ಕಳೆದು ಅವರ ಅಳಲನ್ನು ಕೇಳಬೇಕು ಎಂದು ಇವತ್ತಿನವರೆಗೂ ಅನ್ನಿಸಲೇ ಇಲ್ಲ.

ಹನ್ನೊಂದು ತಿಂಗಳುಗಳಿಂದ ಈ ದೇಶದ ಪ್ರಧಾನಿಗೆ ಆ ಒಂದು ರಾಜ್ಯಕ್ಕೆ ಹೋಗಲು ಅರ್ಧ ದಿನ ಸಮಯ ಸಿಗಲಿಲ್ಲ.

ಪ್ರಧಾನಿ ಮೋದಿ ಕಳೆದೆರಡು ವಾರಗಳಿಂದ ದೇಶದ ಉದ್ದಗಲಗಳಲ್ಲಿ ಬೇರೆ ಬೇರೆ ರಾಜ್ಯಕ್ಕೆ ತಿರುಗುತ್ತಿದ್ದಾರೆ. ಚುನಾವಣೆಗೆ ಮೊದಲು ಪ್ರಚಾರ ಸಿಗಬೇಕು ಅಂತ ಅಭಿವೃದ್ಧಿ ಕಾಮಗಾರಿಗಳ ಶಿಲಾನ್ಯಾಸ, ಉದ್ಘಾಟನೆ ನಡೆಸುತ್ತಿದ್ದಾರೆ. ದೊಡ್ಡ ದೊಡ್ಡ ರ್ಯಾಲಿಗಳನ್ನು ಮಾಡುತ್ತಿದ್ದಾರೆ.

ಆದರೆ, ಮಣಿಪುರಕ್ಕಾಗಿ ಮಾತ್ರ ಸಮಯವೇ ಇಲ್ಲದ ಪ್ರಧಾನಿ, ಅರುಣಾಚಲ ಪ್ರದೇಶದ ಇಟಾನಗರದಲ್ಲಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಮಣಿಪುರದ ಹಲವಾರು ಯೋಜನೆಗಳನ್ನು ಆನ್‌ಲೈನ್ ಮೂಲಕ ಉದ್ಘಾಟಿಸುತ್ತಾರೆ.ಅಷ್ಟಾದ ಮೇಲೆಯೂ, ಅಲ್ಲಿ ತಿಂಗಳುಗಳಿಂದ ನಡೆಯುತ್ತಿರುವ ಜನಾಂಗೀಯ ಹಿಂಸೆಯ ಬಗ್ಗೆ ಚಕಾರವನ್ನೂ ಪ್ರಧಾನಿ ಎತ್ತಿಲ್ಲ.ಬಹುಶಃ ದೇಶದ ಒಂದು ರಾಜ್ಯದ ಬಗ್ಗೆ ಇಂತಹ ಘೋರ ತಾತ್ಸಾರ ತೋರಿಸಿರುವ ಪ್ರಪ್ರಥಮ ಪ್ರಧಾನಿ ಮೋದಿಯೆನ್ನಬೇಕಾಗುತ್ತದೆ. ಇದು ‘ಮದರ್ ಆಫ್ ಡೆಮಾಕ್ರಸಿ’ ತನ್ನದೇ ರಾಜ್ಯವೊಂದರ ಬಗ್ಗೆ ತೋರುವ ಕಾಳಜಿಯೇ?

ಇದೇ ಹೊತ್ತಲ್ಲಿ ಎಂಎಂಎ ಚಾಂಪಿಯನ್ ಶಿಪ್ ಗೆದ್ದ ಫೈಟರ್ ಒಬ್ಬ ಪ್ರಧಾನಿಯನ್ನು ರಾಜ್ಯಕ್ಕೆ ಭೇಟಿ ನೀಡುವಂತೆ ಮನವಿ ಮಾಡುವ ವೀಡಿಯೊ ವೈರಲ್ ಆಗಿದೆ. ಹಾಗೆ ಒಬ್ಬರು ಕಣ್ಣೀರಿಟ್ಟು ಕೇಳಿಕೊಳ್ಳಬೇಕಾಗಿ ಬಂದಿರುವುದು ಅದೆಂತಹ ವಿಪರ್ಯಾಸ ?

ದೇಶದ ರಾಜ್ಯವೊಂದು ತಿಂಗಳುಗಳಿಂದ ಹಿಂಸೆಯಿಂದ ತತ್ತರಿಸಿದರೂ ಪ್ರಧಾನಿ ಅಲ್ಲಿಗೆ ಹೋಗುವುದು ಬಿಡಿ, ಅದೇ ರಾಜ್ಯದ ಯೋಜನೆಗಳ ಉದ್ಘಾಟನೆಯನ್ನು ಆನ್‌ಲೈನ್ ಮೂಲಕ ಮಾಡಿ ಆ ಹಿಂಸೆಯ ವಿಚಾರವನ್ನೇ ಮಾತಾಡುವುದಿಲ್ಲ ಎಂದರೆ ಅದೆಂತಹ ದ್ವಂದ್ವ? ಇಡೀ ದೇಶ ಸುತ್ತುತ್ತಿರುವವರಿಗೆ ಮಣಿಪುರದ ಕಾರ್ಯಕ್ರಮ ಆನ್‌ಲೈನ್‌ನಲ್ಲಿ ಮಾಡಬೇಕಾದ ಅನಿವಾರ್ಯತೆ ಏನಿತ್ತು? ಇದೆಂಥ ಪ್ರತಿಷ್ಠೆ? ಇದೆಂತಹ ಹಠ? ಅದೇಕೆ ಮಣಿಪುರದ ಜನರ ಬಗ್ಗೆ ಪ್ರಧಾನಿಗೆ, ಬಿಜೆಪಿಗೆ ಇಷ್ಟೊಂದು ತಾತ್ಸಾರ ?

ಎಂಎಂಎ ಫೈಟರ್ ಚುಂಗ್ರೆಂಗ್ ಕೋರೆನ್ ಅವರು ಕಳೆದ ವರ್ಷ ಮೇನಲ್ಲಿ ಹಿಂಸಾಚಾರ ಸಂಭವಿಸಿದ ತಮ್ಮ ತವರು ರಾಜ್ಯಕ್ಕೆ ಭೇಟಿ ನೀಡುವಂತೆ ಪ್ರಧಾನಿ ನರೇಂದ್ರ ಮೋದಿಯಲ್ಲಿ ಭಾವನಾತ್ಮಕ ಮನವಿ ಮಾಡಿದ ವೀಡಿಯೊ ಎದೆ ಕಲಕುವ ಹಾಗೆ ಮಾಡುತ್ತದೆ. ಆದರೆ ಈ ದೇಶದ ಪ್ರಧಾನಿಗೆ ಮಾತ್ರ ಅದು ತಟ್ಟುವುದೇ ಇಲ್ಲ. ಒಂದು ತೋಳಿನಲ್ಲಿ ಚಾಂಪಿಯನ್‌ಶಿಪ್ ಬೆಲ್ಟ್ ಇಟ್ಟುಕೊಂಡು, ಪಂದ್ಯದ ನಂತರ ಮಾತನಾಡಿದ ಚುಂಗ್ರೆಂಗ್ ಕೋರೆನ್, ಪ್ರಧಾನಿ ಮೋದಿಯವರಲ್ಲಿ ನನ್ನ ವಿನಮ್ರ ವಿನಂತಿ ಇದು. ಮಣಿಪುರದಲ್ಲಿ ಹಿಂಸಾಚಾರ ನಡೆಯುತ್ತಿದೆ. ಒಂದು ವರ್ಷವೇ ಆಗಿದೆ. ಜನರು ಪ್ರತಿದಿನ ಸಾಯುತ್ತಿದ್ದಾರೆ. ಎಷ್ಟೋ ಮಂದಿ ಸರಿಯಾದ ಆಹಾರ, ನೀರಿಲ್ಲದೆ ಪರಿಹಾರ ಶಿಬಿರಗಳಲ್ಲಿದ್ದಾರೆ. ಮಕ್ಕಳು ಓದಲು ಸಾಧ್ಯವಾಗುತ್ತಿಲ್ಲ. ಭವಿಷ್ಯದ ಬಗ್ಗೆ ನಮಗೆ ಚಿಂತೆಯಾಗಿದೆ. ಒಮ್ಮೆ ಮಣಿಪುರಕ್ಕೆ ಭೇಟಿ ನೀಡಿ, ರಾಜ್ಯದಲ್ಲಿ ಶಾಂತಿ ನೆಲೆಸಲಿ ಎಂದು ಆ ಫೈಟರ್ ಕಣ್ಣೀರುಗರೆಯುತ್ತಾ ಕೇಳಿಕೊಂಡಿದ್ದಾರೆ.

ಅದು ಬಹುಶಃ ಇಡೀ ಮಣಿಪುರದ ನೊಂದ ಸಮುದಾಯದ ಮಂದಿಯ ಕಣ್ಣೀರು. ಆದರೆ ಈ ದೇಶದ ಪ್ರಧಾನಿಗೆ ಅದು ತಾಕುವುದೇ ಇಲ್ಲ.

ಮಣಿಪುರಕ್ಕೆ ವರ್ಷದಿಂದ ಹೋಗದೆ ಪ್ರತಿಷ್ಠೆ ಮೆರೆಯುತ್ತಿರುವ, ಮಣಿಪುರದ ವಿಚಾರದಲ್ಲಿ ವ್ರತಸ್ಥನ ಮೌನ ತೋರಿಸುತ್ತಿರುವ ಪ್ರಧಾನಿ ಕಡೆಗೆ ವರ್ಚುವಲ್ ಮೂಲಕವಾದರೂ ಏಕೆ ಮುಖ ತೋರಿಸಬೇಕಿತ್ತು?

ಬಲಿಯಾದವರ, ದಿಕ್ಕೆಟ್ಟವರ, ನೊಂದವರ, ಕನಲಿಹೋದವರ ವಿಚಾರಕ್ಕೆ ಕನಿಕರಿಸದ ಪ್ರಧಾನಿ ಈಗ ಮಣಿಪುರಕ್ಕಾಗಿ ಮೂರೂವರೆ ಸಾವಿರ ಕೋಟಿ ರೂ. ಗಳ ಅಭಿವೃದ್ಧಿ ಯೋಜನೆಗಳನ್ನು ವರ್ಚುವಲ್ ಆಗಿ ಉದ್ಘಾಟಿಸಿದ ತಕ್ಷಣ, ಬದುಕುಗಳನ್ನೇ ಸುಟ್ಟುಹಾಕಿದ ಬೆಂಕಿ ಆರಿಹೋಗುತ್ತದೆಯೇ?

ಮಣಿಪುರದಲ್ಲಿ ಹಿಂಸಾಚಾರ ನಡೆಯುತ್ತಿದ್ದ ಹೊತ್ತಿನಲ್ಲೂ ಪ್ರಧಾನಿ ತೋರಿಸಿದ್ದು ಇದೇ ಥರದ ವರ್ತನೆಯನ್ನು. ಎಲ್ಲದಕ್ಕೂ ಸಮಯವಿದ್ದರೂ, ಮಣಿಪುರದಿಂದ ಬಂದಿದ್ದ ನಿಯೋಗವನ್ನು ಎರಡು ನಿಮಿಷ ಕಂಡು ಮಾತನಾಡುವ ಸೌಜನ್ಯವನ್ನು ಕೂಡ ಪ್ರಧಾನಿ ತೋರಿಸಿರಲಿಲ್ಲ. ಈಗ ನಡೆದುಕೊಂಡಿರುವ ರೀತಿ ಕೂಡ ಅದೇ ಬಗೆಯದ್ದು.

ಮೋದಿ ರಾಜಕಾರಣಕ್ಕೆ ನಿಜವಾಗಿಯೂ ಮಣಿಪುರ ಎಂಬುದು ಲೆಕ್ಕಕ್ಕಿಲ್ಲದ ರಾಜ್ಯವೇ?

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಪ್ರವೀಣ್ ಎನ್.

contributor

Similar News