ರಾಜ್ಯಕ್ಕೆ ಈಗ ಒಂದು ಸಮಗ್ರ ಭಾಷಾ ನೀತಿಯ ಅವಶ್ಯಕತೆಯಿದೆ
ತಮ್ಮ ಸಾರಥ್ಯದ ಸರಕಾರದಲ್ಲಿ ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆಯ ಸಾರಥ್ಯ ವಹಿಸಿರುವ ಸಚಿವರು ಹಾಗೂ ಶಾಲಾ ಶಿಕ್ಷಣ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುವ ಹಿರಿಯ ಅಧಿಕಾರಿಗಳು, ಪೂರ್ವ- ಪ್ರಾಥಮಿಕದಿಂದಲೇ ಗ್ರಾಮ ಪಂಚಾಯತ್‌ಗೊಂದು ಆಂಗ್ಲ ಮಾಧ್ಯಮ ಶಾಲೆ ಮಾಡುತ್ತೇವೆಂದು ಪದೇ ಪದೇ ಹೇಳುತ್ತಿದ್ದಾರೆ ಮತ್ತು ಕ್ರಿಯಾ ಯೋಜನೆಗಳನ್ನು ತಯಾರಿಸುತ್ತಿರುವುದಾಗಿ ಪತ್ರಿಕೆಗಳಲ್ಲಿ ಹೇಳಿಕೆ ನೀಡುತ್ತಿದ್ದಾರೆ. ಈ ಹಿಂದೆ ಕ್ಲಸ್ಟರ್‌ಗೊಂದು ಶಾಲೆ ಮಾಡುವ ಮೂಲಕ ಸಾವಿರಾರು ಅಂಗನವಾಡಿ ಹಾಗೂ ಸರಕಾರಿ ಶಾಲೆಗಳನ್ನು ಮುಚ್ಚಲು ಹೊರಟಿದ್ದ ಕಾರಣ, ತಮ್ಮ ನೇತೃತ್ವದ ಸರಕಾರ ರಾಷ್ಟ್ರೀಯ ಶಿಕ್ಷಣ ನೀತಿ-2020ನ್ನು ರದ್ದು ಮಾಡಿದೆ. ಈಗ ಸಚಿವರು ರದ್ದಾಗಿರುವ ನೀತಿಯನ್ನು ನಿಷ್ಠೆಯಿಂದ ಜಾರಿ ಮಾಡುತ್ತಿದ್ದಾರೆಂದರೆ ಇದರ ಅರ್ಥವಾದರೂ ಏನು?
ಆತ್ಮೀಯ ಸರ್,
ತಾವು ಸಾಮಾಜಿಕ ನ್ಯಾಯ ಮತ್ತು ಸಂವಿಧಾನದ ಆಶಯಗಳಲ್ಲಿ ಇಟ್ಟಿರುವ ನಂಬಿಕೆ ಹಾಗೂ ವಿಶ್ವಾಸ ಅನನ್ಯವಾದದ್ದು. ಸಮಾಜವಾದಿ ಚಿಂತನೆಯ ಮತ್ತು ಸಾಮಾಜಿಕ ಬದ್ಧತೆಯುಳ್ಳ ಕೆಲವೇ ರಾಜಕಾರಣಿಗಳಲ್ಲಿ ನೀವು ಅಗ್ರಗಣ್ಯರು. ಕನ್ನಡ ನಾಡು-ನುಡಿಯ ವಿಷಯ ಬಂದಾಗ, ತಾವು ತೋರಿದ ಬದ್ಧತೆ ಮತ್ತು ಕಾಳಜಿ ಕನ್ನಡ, ಕನ್ನಡಿಗ ಮತ್ತು ಕರ್ನಾಟಕದ ಭವಿಷ್ಯಕ್ಕೆ ಸಾಟಿಯಿಲ್ಲದ ಕೊಡುಗೆ ನೀಡಿದೆ. ಈ ಕಾರಣದಿಂದಲೇ, ನನ್ನಂಥವರಿಗೆ ನಿಮ್ಮ ಬಗ್ಗೆ ಅಪಾರವಾದ ಗೌರವ ಮತ್ತು ಭರವಸೆಯಿದೆ. ತಾವು ಉತ್ಪ್ರೇಕ್ಷೆ ಎಂದು ಭಾವಿಸದಿದ್ದರೆ, ದೇಶದಲ್ಲಿ, ಅದರಲ್ಲೂ ವಿಶೇಷವಾಗಿ ಕರ್ನಾಟಕದಲ್ಲಿ ತಮ್ಮ ರಾಜಕೀಯ ಅವಧಿ ಮುಗಿದ ನಂತರ ಈ ಎಲ್ಲಾ ಮೌಲ್ಯಗಳು ಏನಾಗಬಹುದೆಂಬ ಆತಂಕ ಸಹಜವಾಗಿಯೇ ನನ್ನಲ್ಲಿ ಮತ್ತು ನನ್ನಂಥ ಅನೇಕರಲ್ಲಿ ಮನೆಮಾಡಿದೆ.
ಇನ್ನು ವಿಷಯಕ್ಕೆ ಬರುವುದಾದರೆ, ಕರ್ನಾಟಕದಲ್ಲಿನ ಕನ್ನಡ ಹಾಗೂ ಕನ್ನಡಿಗರ ಅಭಿವೃದ್ಧಿ ಅಲ್ಲಿನ ಕಲಿಕಾ (ಶಿಕ್ಷಣ) ವ್ಯವಸ್ಥೆಯನ್ನು ಅವಲಂಬಿಸಿದೆ ಎನ್ನುವ ನನ್ನ ಬಲವಾದ ನಂಬಿಕೆಯನ್ನು ಪುನರುಚ್ಚರಿಸುತ್ತಾ, ಒಂದು ನಾಡಿನ ಸಾಮಾಜಿಕ -ಆರ್ಥಿಕ-ರಾಜಕೀಯ-ಸಾಂಸ್ಕೃತಿಕ ಬೆಳವಣಿಗೆ ಮತ್ತು ಆ ಮೂಲಕ ಕನ್ನಡಿಗರ ಅರ್ಥಪೂರ್ಣ ಬದುಕಿಗೆ ಅಲ್ಲಿನ ಕಲಿಕಾ ವ್ಯವಸ್ಥೆ ನಿರ್ಣಾಯಕ ಪಾತ್ರ ವಹಿಸುತ್ತದೆ ಎಂಬುದರ ಬಗ್ಗೆ ಪದೇ ಪದೇ ಚರ್ಚಿಸುವ ಅವಶ್ಯಕತೆ ಇಲ್ಲವೆಂದು ಭಾವಿಸುತ್ತೇನೆ.
ತಾಯ್ನುಡಿ ಒಂದು ನಾಡಿನ ಅನನ್ಯತೆ, ಸಂಸ್ಕೃತಿ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಬುನಾದಿ ಎಂಬುದು ಸಾರ್ವತ್ರಿಕ ಸತ್ಯ. ತಾಯ್ನುಡಿಯನ್ನು ಗುರುತಿಸಿ ಮೌಲೀಕರಿಸಿ ಉಳಿಸಿ- ಬೆಳೆಸಲು ಬೆಂಬಲಿಸದ ಸರಕಾರಗಳು, ನಾಡಿನ ಸರ್ವತೋಮುಖ ಅಭಿವೃದ್ಧಿಯ ಬಗ್ಗೆ ಕೇವಲ ತೋರಿಕೆಯ ಪ್ರಯತ್ನಗಳನ್ನು ಮಾಡುತ್ತಿವೆ ಎಂದೇ ಭಾವಿಸಬೇಕಾಗುತ್ತದೆ. ಕಾರಣ, ಬದುಕಿನ ಭಾಗವಾಗಿರುವ ತನ್ನ ಕುಟುಂಬದ ತಾಯಿಯನ್ನೇ ಪ್ರೀತಿಸಿ ಗೌರವಿಸಿ ಆಧರಿಸದ ನಾಯಕ/ನಾಯಕತ್ವ, ರಾಜ್ಯದ ಜನತೆಯ ಬದುಕನ್ನು ಕಟ್ಟಿಕೊಡಲು ಹೇಗೆ ತಾನೆ ಸಾಧ್ಯ!
ಸಂವಹನ ಮತ್ತು ಬದುಕಿಗಾಗಿ ತಾಯ್ನುಡಿ ಹೊರತಾದ ಯಾವುದೇ ಭಾಷೆಗಳನ್ನು ಕಲಿಯುವುದು /ಕಲಿಸುವುದು ತಪ್ಪಲ್ಲವೆಂದು ಖಚಿತವಾಗಿ ಹೇಳುತ್ತಲೇ, ಅಂತಹ ಪ್ರಯತ್ನಗಳು ನಮ್ಮಮಾತೃ ಭಾಷೆಯನ್ನೇ ಮೂಲೆಗುಂಪಾಗಿಸುವ ಕಾರ್ಯಕ್ಕೆ ಸಾಕ್ಷಿಯಾಗಬಾರದು. ನಮ್ಮ ತಾಯ್ನುಡಿಯ ಬಗ್ಗೆ ನಾವು ಹೆಮ್ಮೆ ಕಾಳಜಿ, ಸಂರಕ್ಷಣೆ ಮತ್ತು ಉಳಿಸಿ- ಬೆಳೆಸುವಲ್ಲಿ ಒಂದು ಸ್ಪಷ್ಟ ನಿಲುವು ಮತ್ತು ನೀಲಿ ನಕಾಶೆಯನ್ನು ರಾಜ್ಯ ಹೊಂದಿರಬೇಕಾಗುತ್ತದೆ. ರಾಜ್ಯಕ್ಕೆ ಒಂದು ಸಮಗ್ರ ಭಾಷಾ ನೀತಿಯ ಅವಶ್ಯಕತೆ ಈಗ ಹಿಂದೆಂದಿಗಿಂತಲೂ ತುರ್ತು ಅಗತ್ಯ ವಿದೆ. ಅದು ಸಾಧ್ಯವಾಗುವುದಾದರೆ ತಮ್ಮಂಥವರ ಆಡಳಿತ ಅವಧಿಯಲ್ಲಿಯೇ ಆಗಬೇಕು ಎಂಬುದು ನನ್ನ ನಿಲುವು.
ಮೇಲಿನ ಅಂಶಗಳನ್ನು ನೇರ ನುಡಿಯಲ್ಲಿ ಹೇಳಬೇಕಾದ ಅನಿವಾರ್ಯತೆ ಏಕೆಂದರೆ, ಆಂಗ್ಲ ಭಾಷಾ ಮಾಧ್ಯಮ ಮತ್ತು ಆಂಗ್ಲ ಭಾಷೆ ಕಲಿಕೆಯ ಬಗ್ಗೆ ಕಳೆದ ಎರಡು ದಶಕಗಳಿಂದ ನಿರಂತರವಾಗಿ ಚರ್ಚೆಯಾಗುತ್ತಿದೆ. ಜಗತ್ತಿನ ಎಲ್ಲಾ ಭಾಷಾ ತಜ್ಞರು ಮತ್ತು ಶಿಕ್ಷಣ ತಜ್ಞರು ಒಪ್ಪಿರುವ ಒಂದು ಸಾರ್ವತ್ರಿಕ ಸತ್ಯವೆಂದರೆ, ಮಕ್ಕಳು ತಮ್ಮ ಮಾತೃ ಭಾಷೆಯನ್ನು ಪ್ರಭುತ್ವದ ಮಟ್ಟಕ್ಕೆ ಕಲಿಯದೆ, ಯಾವುದೇ ಎರಡನೇ ಭಾಷೆಯನ್ನು ಕಲಿಯಲು ಸಾಧ್ಯವಿಲ್ಲವೆಂಬ ಕಟುಸತ್ಯ. ಜೊತೆಗೆ, ಮಕ್ಕಳು ಒಂದು ಭಾಷೆಯನ್ನು ಪ್ರಭುತ್ವದ ಮಟ್ಟಕ್ಕೆ ಕಲಿಯುವುದು ಅದನ್ನು ಒಂದು ಭಾಷೆಯನ್ನಾಗಿ ಕಲಿತಾಗ ಮಾತ್ರವೇ ಹೊರತು ಮಾಧ್ಯಮವನ್ನಾಗಿಯಲ್ಲ ಎಂದು ಸಂಶೋಧನೆಗಳು ಸಾಬೀತುಪಡಿಸಿವೆ.
ಈ ವಿಷಯಕ್ಕೆ ಸಂಬಂಧಿಸಿದಂತೆ ನಾನು ಎರಡು ಸಂಶೋಧನಾಧಾರಿತ ಉದಾಹರಣೆಗಳನ್ನು ತಮ್ಮ ಮುಂದೆ ಮಂಡಿಸಬಯುಸುತ್ತೇನೆ: ಒಂದು, ಯುನೆಸ್ಕೋ ವಿಶ್ವಾದ್ಯಂತ ನಡೆಸಿರುವ ಅಧ್ಯಯನಗಳು ಹೀಗೆ ಹೇಳುತ್ತವೆ: ‘‘ಭಾಷೆ ಮತ್ತು ಕಲಿಕೆಯ ಬಗ್ಗೆ ನಮಗಿರುವ ಹಲವು ಬಗೆಯ ತಪ್ಪು ಕಲ್ಪನೆಗಳು ನಮ್ಮ ನಿರ್ಧಾರಗಳಿಗೆ ಅಡ್ಡನಿಂತಿವೆ. ಈ ತಪ್ಪು ಕಲ್ಪನೆಗಳನ್ನು ಬಹಿರಂಗಪಡಿಸಿದಾಗ ಮಾತ್ರ ಜನಸಾಮಾನ್ಯರ ಕಣ್ಣು ತೆರೆಸಲು ಸಾಧ್ಯವಾಗುತ್ತದೆ. ಅಂತಹ ಕೆಲವು ಬಹು ದೊಡ್ಡ ಮಿಥ್ಯೆಗಳೆಂದರೆ, ಯಾವುದೇ ವಿದೇಶಿ ಭಾಷೆಯನ್ನು (ನಮ್ಮ ಸಂದರ್ಭದಲ್ಲಿ ಆಂಗ್ಲ ಭಾಷೆ) ಕಲಿಯಲು ಉತ್ತಮ ಮಾರ್ಗವೆಂದರೆ ಅದನ್ನು ಬೋಧನಾ ಮಾಧ್ಯಮವಾಗಿ ಬಳಸಬೇಕೆಂಬುದು. ಇನ್ನೊಂದು, ವಿದೇಶಿ ಭಾಷೆಯನ್ನು ಕಲಿಯಬೇಕಾದರೆ ಸಾಧ್ಯವಾದಷ್ಟು ಬೇಗ ಪ್ರಾರಂಭಿಸಬೇಕು ಎಂಬ ಕಾತುರತೆ.
ಮೂರನೆಯದು, ವಿದೇಶಿ ಭಾಷೆಯನ್ನು ಕಲಿಯಲು ಮಾತೃ ಭಾಷೆಯು ಅಡ್ಡಿಯಾಗುತ್ತದೆ’’ ಎಂಬುದು (UNESCO, 2008, Improving the Quality of Mother Tongue-Based Literacy and Learning, pp.2,https://unesdoc.unesco.org/ark:/48223/pf0000177738 ). ಸ್ಪಷ್ಟವಾಗಿ ಈ ಎಲ್ಲ ಮಿಥ್ಯೆಗಳು ಸತ್ಯಕ್ಕಿಂತ ಹೆಚ್ಚು ಸುಳ್ಳು ಮತ್ತು ಆಧಾರರಹಿತ ತಪ್ಪು ಕಲ್ಪನೆಯಿಂದ ಕೂಡಿವೆ. ಹೀಗಿದ್ದಾಗ್ಯೂ, ನಮ್ಮ ನೀತಿ ನಿರೂಪಕರು ಮತ್ತು ಕಾರ್ಯಾಂಗಗಳ ಮುಖಸ್ಥರು ಈ ಮಿಥ್ಯೆಗಳ ಆಧಾರದಲ್ಲಿಯೇ ತೀರ್ಮಾನ ಕೈಗೊಳ್ಳುತ್ತಾರೆ. ಕರ್ನಾಟಕದಲ್ಲಿಯೂ ಅದೇ ಬಗೆಯ ತೀರ್ಮಾನಗಳಾಗುತ್ತಿವೆ.
ಎರಡು, ವಿಶ್ವಾದ್ಯಂತ ಇಂಗ್ಲಿಷ್ ಕಲಿಸಲು ಕಾರ್ಯನಿರ್ವ ಹಿಸುವ ಬ್ರಿಟಿಷ್ ಸಂಸ್ಥೆಯಾದ ಬ್ರಿಟಿಷ್ ಕೌನ್ಸಿಲ್, ಈ ವಿಷಯದ ಕುರಿತು ಹೀಗೆ ಹೇಳುತ್ತದೆ: ‘‘ಆಂಗ್ಲ ಭಾಷೆಯಲ್ಲಿ ಪರಿಣತಿ ಸಾಧಿಸಲು ಇಂಗ್ಲಿಷನ್ನು ಒಂದು ಭಾಷೆಯನ್ನಾಗಿ ಕಲಿಸುವುದಕ್ಕಿಂತ ಬೋಧನಾ ಮಾಧ್ಯಮ ವಾಗಿ ಕಲಿಸುವುದು ಖಚಿತವಾದ ಮಾರ್ಗ ಎಂಬ ಅಭಿಪ್ರಾಯವನ್ನು ಬೆಂಬಲಿಸಲು ಅತ್ಯಂತ ಕಡಿಮೆ ಅಥವಾ ಯಾವುದೇ ಪುರಾವೆಗಳಿಲ್ಲ. ಇಂಗ್ಲಿಷನ್ನು ಒಂದು ಭಾಷಾ ವಿಷಯವನ್ನಾಗಿ ಕಲಿಸಿದಾಗ ಮಾತ್ರ ನಾವು ಆಂಗ್ಲ ಭಾಷೆಯ ಗುಣಮಟ್ಟ ಹಾಗೂ ನಿರರ್ಗಳತೆಯನ್ನು ಸಾಧಿಸಲು ಸಾಧ್ಯ. ತಜ್ಞರ ಅಂದಾಜಿನ ಪ್ರಕಾರ, ಎಲ್ಲಾ ಪಠ್ಯಕ್ರಮದಾದ್ಯಂತ (ಎಲ್ಲಾ ವಿಷಯಗಳ) ಕಲಿಕೆಯನ್ನು ಬೆಂಬಲಿಸಲು ಅಗತ್ಯವಿರುವ ಅರಿವಿನ ಮತ್ತು ಶೈಕ್ಷಣಿಕ ಭಾಷಾ ಪ್ರಾವೀಣ್ಯತೆಯನ್ನು (Cognitive and Academic Language Proficiency -CALP) ಅಭಿವೃದ್ಧಿಪಡಿಸಲು ಕನಿಷ್ಠ ವಿದ್ಯಾರ್ಥಿಗಳಿಗೆ ಆರರಿಂದ ಎಂಟು ವರ್ಷಗಳು ಬೇಕಾಗುತ್ತವೆ. ಆರಂಭಿಕ ಹಂತದಲ್ಲಿಯೇ ಆಂಗ್ಲ ಮಾಧ್ಯಮದ ಶಿಕ್ಷಣವು ಮಕ್ಕಳ ಕಲಿಕೆಯನ್ನು ದುರ್ಬಲಗೊಳಿಸುತ್ತದೆ ಮತ್ತು ಶೈಕ್ಷಣಿಕ ಸಾಧನೆಯನ್ನು ಸೀಮಿತಗೊಳಿಸುತ್ತದೆ.’’ (English Language and the Medium of Instruction in Basic Education..., 2017, p.3 https://www.teachingenglish.org.uk/sites/teacheng/files/K068_EMI_position_low-and_middle-income_countries_Final.pdf).
ಮಾತೃಭಾಷೆ, ಮಾಧ್ಯಮ ಹಾಗೂ ಕಲಿಕೆ ಕುರಿತಾದ ಸಂಶೋಧನೆ ಆಧಾರಿತ ಪುರಾವೆಗಳು ಹೀಗಿದ್ದರೂ, ಈ ವಿಷಯದ ಬಗ್ಗೆ ಸರಕಾರಗಳು ನಿರಂತರವಾಗಿ ಗೊಂದಲದ ನೀತಿ ಮತ್ತು ತೀರ್ಮಾನಗಳನ್ನು ಕೈಗೊಳ್ಳುತ್ತಿರುವುದು ನನ್ನನ್ನು ನಿರಾಶೆಗೊಳಿಸಿದೆ. ಇಂದು ನಮ್ಮ ಶಾಲೆಗಳು ನಮ್ಮ ಮಾತೃ ಭಾಷೆಯಾದ ಕನ್ನಡ ಭಾಷೆಯನ್ನು ಬುನಾದಿ ಹಂತವಾದ ಸರಕಾರಿ ಕಿರಿಯ/ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಪ್ರಭುತ್ವದ ಮಟ್ಟಕ್ಕೆ ಕಲಿಸಲು ಸೋಲುತ್ತಿರುವುದು ನಾವೆಲ್ಲರೂ ಬಹಳ ಗಂಭೀರವಾಗಿ ಯೋಚಿಸಬೇಕಾದ ವಿಷಯವಾಗಿದೆ. ತಾಯ್ನುಡಿಯನ್ನು ಶಿಕ್ಷಣದ ಪ್ರಾರಂಭಿಕ ಹಂತದಿಂದಲೇ ಪ್ರಭುತ್ವದ ಮಟ್ಟಕ್ಕೆ ಕಲಿಯಬೇಕಾದ ಮತ್ತು ಜ್ಞಾನಾರ್ಜನೆಯ ಭಾಗವಾಗಿ ಉಳಿದೆಲ್ಲ ವಿಷಯಗಳನ್ನು ಅಥವಾ ಆಂಗ್ಲ ಭಾಷೆಯು ಸೇರಿದಂತೆ ಯಾವುದೇ ಎರಡನೇ ಭಾಷೆಯನ್ನು ಚೆನ್ನಾಗಿ ಕಲಿಯಬೇಕಾದರೆ, ತನ್ನ ತಾಯ್ನುಡಿಯಲ್ಲಿ ಪ್ರಭುತ್ವದ ಮಟ್ಟಕ್ಕೆ ಕಲಿತಾಗ ಮಾತ್ರ ಎಂಬುದನ್ನು ಪುನರುಚ್ಚರಿಸಬೇಕಿದೆ.
ಈ ಬಗೆಯ ಕಲಿಕಾ ವ್ಯವಸ್ಥೆ ಮಾತ್ರ ಒಂದು ಜ್ಞಾನಾಧಾರಿತ ಸಮಾಜವನ್ನು ಕಟ್ಟಿಕೊಡಬಲ್ಲದು ಎಂಬುದನ್ನು ಹಲವು ರಾಷ್ಟ್ರಗಳು ಸಾಬೀತು ಮಾಡಿವೆ. ಉದಾಹರಣೆಗೆ, ಆರ್ಗನೈಸೇಶನ್ ಫಾರ್ ಎಕನಾಮಿಕ್ ಕೋಆಪರೇಷನ್ ಡೆವಲಪ್‌ಮೆಂಟ್-ಒಇಸಿಡಿಯ ಶಿಕ್ಷಣ ಮತ್ತು ಕೌಶಲ್ಯಗಳ ನಿರ್ದೇಶನಾಲಯವು ಪ್ರೋಗ್ರಾಂ ಫಾರ್ ಇಂಟರ್‌ನ್ಯಾಷನಲ್ ಸ್ಟೂಡೆಂಟ್ ಅಸೆಸ್‌ಮೆಂಟ್- PISA ಮೂಲಕ, ಅಭಿವೃದ್ಧಿ ಹೊಂದಿದ ಕೈಗಾರಿಕಾ ರಾಷ್ಟ್ರಗಳ 15 ವರ್ಷ ವಯಸ್ಸಿನ ಮಕ್ಕಳ ಓದುವಿಕೆ, ವಿಜ್ಞಾನ ಮತ್ತು ಗಣಿತದಲ್ಲಿ ಸಾಮರ್ಥ್ಯವನ್ನು ಸಾಮಾನ್ಯ ಪರೀಕ್ಷೆಯ ಮೂಲಕ ಪರೀಕ್ಷಿಸಿದೆ. 2022ರಲ್ಲಿ ಪ್ರಪಂಚದಾದ್ಯಂತ 80ಕ್ಕೂ ಹೆಚ್ಚು ದೇಶಗಳು ಭಾಗವಹಿಸಿದ್ದ ಈ ಮೌಲ್ಯಾಂಕದ ಮೊದಲ ಹತ್ತು ಅಗ್ರಗಣ್ಯ ಶ್ರೇಯಾಂಕದ ಪಟ್ಟಿಯಲ್ಲಿ ಆಂಗ್ಲ ಭಾಷೆಯನ್ನು ಮಾತೃಭಾಷೆಯನ್ನಾಗಿ ಮಾತನಾಡುವ ಯಾವ ದೇಶಗಳೂ ಇಲ್ಲವೆಂಬುದು ಮಹತ್ವದ ಸಂಗತಿಯಾಗಿದೆ.
ಭಾರತವೂ ಸೇರಿದಂತೆ ಜಗತ್ತಿನ ವಿವಿಧ ಭಾಗದಲ್ಲಿನ ಭಾಷಾ ಸಂಶೋಧನೆಗಳು, ಪ್ರಾರಂಭಿಕವಾಗಿ ತಾಯ್ನುಡಿಯನ್ನು ಪ್ರಭುತ್ವದ ಮಟ್ಟಕ್ಕೆ ಕಲಿಸುವುದು, ಕಲಿಯುವುದು ಜ್ಞಾನಾರ್ಜನೆಯ ದೃಷ್ಟಿಯಿಂದ ಬುನಾದಿಯೆಂಬುದನ್ನು ನಿರೂಪಿಸಿವೆ. ಜೊತೆಗೆ, ತಾಯ್ನುಡಿ ಭಾಷೆಯ ಭದ್ರ ಬುನಾದಿ ಜ್ಞಾನಾರ್ಜನೆಗೆ ಮಾತ್ರವಲ್ಲದೆ ಅನನ್ಯತೆ, ಸಾಂಸ್ಕೃತಿಕ ಗುರುತು, ಸ್ವಾಭಿಮಾನ, ಸ್ವಂತಿಕೆ, ಸೃಜನಶೀಲತೆ, ತಾರ್ಕಿಕ ಪ್ರಕ್ರಿಯೆ, ವಿಮರ್ಶಾತ್ಮಕ ಚಿಂತನೆ, ಸ್ವತಂತ್ರ ತೀರ್ಮಾನ ಕೈಗೊಳ್ಳುವ ಸಾಮರ್ಥ್ಯ, ಅಭಿವ್ಯಕ್ತಿ ಸ್ವಾತಂತ್ರ್ಯ ಇತ್ಯಾದಿಗಳನ್ನು ಬಾಲ್ಯದಿಂದಲೇ ಮಕ್ಕಳಲ್ಲಿ ಬೆಳೆಸಲು ಸಹಾಯಕವಾಗುತ್ತದೆ ಎಂಬುದನ್ನು ಪ್ರಾಯೋಗಿಕವಾಗಿ ನಿರೂಪಿಸಿವೆ.
ವಾಸ್ತವಿಕತೆ ಹೀಗಿರುವಾಗ, ತಮ್ಮ ಸಾರಥ್ಯದ ಸರಕಾರದಲ್ಲಿ ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆಯ ಸಾರಥ್ಯ ವಹಿಸಿರುವ ಸಚಿವರು ಹಾಗೂ ಶಾಲಾ ಶಿಕ್ಷಣ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುವ ಹಿರಿಯ ಅಧಿಕಾರಿಗಳು, ಪೂರ್ವ- ಪ್ರಾಥಮಿಕದಿಂದಲೇ ಗ್ರಾಮ ಪಂಚಾಯತ್‌ಗೊಂದು ಆಂಗ್ಲ ಮಾಧ್ಯಮ ಶಾಲೆ ಮಾಡುತ್ತೇವೆಂದು ಪದೇ ಪದೇ ಹೇಳುತ್ತಿದ್ದಾರೆ ಮತ್ತು ಕ್ರಿಯಾ ಯೋಜನೆಗಳನ್ನು ತಯಾರಿಸುತ್ತಿರುವುದಾಗಿ ಪತ್ರಿಕೆಗಳಲ್ಲಿ ಹೇಳಿಕೆ ನೀಡುತ್ತಿದ್ದಾರೆ. ಈ ಹಿಂದೆ ಕ್ಲಸ್ಟರ್‌ಗೊಂದು ಶಾಲೆ ಮಾಡುವ ಮೂಲಕ ಸಾವಿರಾರು ಅಂಗನವಾಡಿ ಹಾಗೂ ಸರಕಾರಿ ಶಾಲೆಗಳನ್ನು ಮುಚ್ಚಲು ಹೊರಟಿದ್ದ ಕಾರಣ, ತಮ್ಮ ನೇತೃತ್ವದ ಸರಕಾರ ರಾಷ್ಟ್ರೀಯ ಶಿಕ್ಷಣ ನೀತಿ-2020ನ್ನು ರದ್ದು ಮಾಡಿದೆ. ಈಗ ಸಚಿವರು ರದ್ದಾಗಿರುವ ನೀತಿಯನ್ನು ನಿಷ್ಠೆಯಿಂದ ಜಾರಿ ಮಾಡುತ್ತಿದ್ದಾರೆಂದರೆ ಇದರ ಅರ್ಥವಾದರೂ ಏನು? ಎಂದು ಗೊಂದಲವಾಗುತ್ತಿದೆ.
ಇಡೀ ಜಗತ್ತಿನಲ್ಲಿ ಕನಿಷ್ಠ 5ನೇ ತರಗತಿಯವರೆಗಾದರೂ ಶಿಕ್ಷಣ ಮಾತೃಭಾಷಾ ಮಾಧ್ಯಮದಲ್ಲಿರಬೇಕೆಂಬುದು ಸಾರ್ವತ್ರಿಕ ಒಮ್ಮತ. ಆದರೆ, ಮಾನ್ಯ ಸಚಿವರು ಪೂರ್ವಪ್ರಾಥಮಿಕದಿಂದಲೇ ಆಂಗ್ಲ ಮಾಧ್ಯಮವನ್ನು ಪ್ರಾರಂಭಿಸುವುದಾಗಿ ತಿಳಿಸಿದ್ದಾರೆ. ಇದು ಅವೈಜ್ಞಾನಿಕ ಮತ್ತು ಮಕ್ಕಳು ಮಾತೃಭಾಷೆಯಲ್ಲಿ ಸೃಜನಾತ್ಮಕವಾಗಿ ಕಲಿಯುವ ಅವಕಾಶವನ್ನು ಕಸಿಯುವ ಮತ್ತು ಮಾತೃಭಾಷೆಯನ್ನು ಕಡೆಗಣಿಸುವ ಹುನ್ನಾರವಲ್ಲದೆ ಮತ್ತೇನು ಎಂದು ಕೇಳಲೇಬೇಕಾದ ಸ್ಥಿತಿ ಎದುರಾಗಿದೆ. ಅದಕ್ಕಾಗಿ ಕ್ಷಮೆ ಇರಲಿ.
ತಮ್ಮ ಮೊದಲ ಅವಧಿಯಲ್ಲಿ (2013-2018), ಮಾನ್ಯ ಕಿಮ್ಮನೆ ರತ್ನಾಕರ್‌ರವರು ಶಿಕ್ಷಣ ಸಚಿವರಾಗಿದ್ದಾಗ ಮಕ್ಕಳ ಶಿಕ್ಷಣ ಹಕ್ಕು ಕಾಯ್ದೆಯ ಪ್ರಕರಣ 29(ಎಫ್)ಗೆ ತಿದ್ದುಪಡಿ ಮಾಡುವ ಮಸೂದೆಯನ್ನು ಎರಡೂ ಸದನಗಳಲ್ಲಿ ಮಂಡಿಸಿ ರಾಷ್ಟ್ರಪತಿಯವರ ಅಂಗೀಕಾರಕ್ಕೆ ಕಳಿಸಿದ್ದರು. ಕನಿಷ್ಠ ಎಂಟನೇ ತರಗತಿಯವರೆಗೆ ಶಿಕ್ಷಣ ಮಾಧ್ಯಮ ಮಾತೃ ಭಾಷೆಯಲ್ಲಿರಬೇಕೆಂಬ ಆಶಯವನ್ನು ಎರಡೂ ಸದನಗಳು ಒಪ್ಪಿ ತೀರ್ಮಾನಿಸಿದ ಮಸೂದೆಯನ್ನು ರಾಷ್ಟ್ರಪತಿಯವರಿಂದ ಅಂಗೀಕಾರ ಪಡೆಯುವ ಕೆಲಸದ ಅನುಪಾಲನೆಯನ್ನು ನಮ್ಮ ಅಧಿಕಾರಿಗಳು ಮಾಡಲೇ ಇಲ್ಲ. ಇದು ನೀತಿ ಹಾಗೂ ನಿರೂಪಣೆಯ ಪರಮಾಧಿಕಾರ ಹೊಂದಿರುವ ಶಾಸಕಾಂಗಕ್ಕೆ ತೋರಿದ ಅಗೌರವ. ಜೊತೆಗೆ, ರಾಜ್ಯ ಮಂಡಳಿ ಪಠ್ಯಕ್ರಮಕ್ಕೆ ಸಂಯೋಜನೆಯಾಗದ ಇತರ ಶಾಲೆಗಳಲ್ಲಿ, ಕನ್ನಡವನ್ನು ಕಡ್ಡಾಯ ವಾಗಿ ಪ್ರಥಮ ಅಥವಾ ದ್ವಿತೀಯ ಭಾಷೆಯನ್ನಾಗಿ ಕಲಿಸಲು ಕನ್ನಡ ಕಲಿಕಾ ಅಧಿನಿಯಮ-2015ನ್ನು ಸದನದಲ್ಲಿ ಅಂಗೀಕರಿಸಿ ಜಾರಿಗೊಳಿಸಲಾಗಿದೆ. ಆದರೆ, ಅದರ ಕಡ್ಡಾಯ ಜಾರಿ ಮತ್ತು ಮೇಲುಸ್ತುವಾರಿ ಯಾರಿಗೂ ಬೇಡವಾಗಿದೆ.
ತಾಯ್ನುಡಿಯಲ್ಲಿನ ಕಲಿಕೆ ಸೃಜನಶೀಲತೆ ಮತ್ತು ಬುದ್ಧಿವಂತಿಕೆಯ ಹಿಂದೆ ಜ್ಞಾನ ಮೀಮಾಂಸೆಯ ಒಂದು ವೈಚಾರಿಕತೆ ಮತ್ತು ಪ್ರಮಾಣೀಕರಿಸಿದ ಚೌಕಟ್ಟಿದೆ. ಕಲಿಕೆಯ ನಿಜ ಉದ್ದೇಶ ಕಂಠಪಾಠವಲ್ಲ. ಬದಲಿಗೆ, ಮಕ್ಕಳು ತಾವು ಕಲಿತ ವಿಷಯವನ್ನು ಮನನ ಮಾಡಿಕೊಂಡು ವಿಷಯವನ್ನು ಮತ್ತಷ್ಟು ಆಳವಾಗಿ ಕಲಿಯಲು ಆಸಕ್ತಿ ತೋರಿಸುವುದು. ಕಲಿತ ವಿಷಯಗಳನ್ನು ವಿಮರ್ಶಿಸಿ ವಿಶ್ಲೇಷಿಸುವುದು ಮತ್ತು ಮಥಿಸಿ ಹೊಸ ವಿಷಯ/ವಿಚಾರಗಳನ್ನು ಕಂಡುಹಿಡಿಯುವ ಮೂಲಕ ಅನ್ವಯಿಸುವುದು ಇದು ಜ್ಞಾನವನ್ನು ಕಟ್ಟಿಕೊಡುವ ಮೂಲ ಪ್ರಕ್ರಿಯೆ. ಈ ಪ್ರಕ್ರಿಯೆ ಕಲಿಕೆಯ ಪ್ರಾಥಮಿಕ ಹಂತದಿಂದಲೇ ಪ್ರಾರಂಭವಾಗಬೇಕು. ಜಗತ್ತಿನಾದ್ಯಂತ ಭಾಷಾ ಶಾಸ್ತ್ರಜ್ಞರು ಹಾಗೂ ಮನಶಾಸ್ತ್ರಜ್ಞರು ನಡೆಸಿರುವ ಆಳವಾದ ಸಂಶೋಧನೆಗಳ ಫಲಿತಾಂಶವೆಂದರೆ ಅರಿವಿನ (Cognitive) ಬೆಳವಣಿಗೆ ಗರಿಷ್ಠವಾಗಿ ಮಗುವಿಗೆ 2 ವರ್ಷದಿಂದ 12 ವರ್ಷ ತುಂಬುವುದರ ಒಳಗೆ ರೂಪಿತವಾಗುತ್ತದೆ.
ಈ ಕಾರಣದಿಂದ, ಮಕ್ಕಳ ಪ್ರಾರಂಭಿಕ ಕಲಿಕೆ ಮತ್ತು ಕಲಿಕೆಯ ಭಾಷೆ ನಿರ್ಣಾಯಕ ಪಾತ್ರ ವಹಿಸುತ್ತದೆ. ಬಹು ಮುಖ್ಯವಾಗಿ ಕಲಿಕೆಯ ಭಾಷೆಯು ಮಾತೃಭಾಷೆಯಾಗಿರಬೇಕು. ಮಗುವಿಗೆ ಗೊತ್ತಿರದ ಭಾಷೆಯಲ್ಲಿ ಕಲಿಕೆ ಪ್ರಾರಂಭವಾದರೆ, ಮಗುವಿನ ಪೂರ್ಣ ಬೌದ್ಧಿಕ ಬೆಳವಣಿಗೆ ಸಾಧ್ಯವಾಗದೆ ಆಸಕ್ತಿ ಕುಂದಿ ಮಗು ಕೇವಲ ಕಂಠಪಾಠಕ್ಕೆ ಜೋತು ಬೀಳುತ್ತದೆ. ಜೊತೆಗೆ ಮಗು ಜ್ಞಾನವನ್ನು ಪೂರ್ಣವಾಗಿ ಗ್ರಹಿಸಲಾಗದೆ ಮತ್ತು ಗ್ರಹಿಸಿದ ವಿಷಯವನ್ನು ಕುರಿತು ಆಳವಾಗಿ ಚಿಂತಿಸಲಾಗದೆ ಸೃಜನಶೀಲತೆಯನ್ನು ಕಳೆದುಕೊಂಡು ಯಾಂತ್ರಿಕ ಕಲಿಕೆಗೆ ಸೀಮಿತವಾಗುತ್ತದೆ. ಪರಿಣಾಮ ಮಕ್ಕಳು ಜ್ಞಾನದ ಅನ್ವೇಷಕರಾಗುವ ಬದಲು ಕಂಠಪಾಠ/ಉರುಹೊಡೆಯುವ ಯಂತ್ರಗಳಾಗುತ್ತಾರೆ. ಕ್ರಮೇಣವಾಗಿ ಸ್ವಂತಿಕೆ-ಸೃಜನಾತ್ಮಕತೆಯಿಲ್ಲದ ನೀರಸ ಶಿಕ್ಷಣದಲ್ಲಿ ಆಸಕ್ತಿ ಕಳೆದುಕೊಂಡು ಶಾಲೆಯ ಬಗ್ಗೆ ಉತ್ಸಾಹ, ಶ್ರದ್ಧೆ ಇಲ್ಲದೆ ಬಲವಂತದ ಅನಿವಾರ್ಯ ಹೊರೆ ಎಂದು ಭಾವಿಸುತ್ತಾರೆ. ಬಹುತೇಕ ಮಕ್ಕಳು ಶಾಲೆ ತೊರೆಯುತ್ತಾರೆ. ಶಿಕ್ಷಣ ಜ್ಞಾನಾರ್ಜನೆಯ ಸಾಧನವಾಗುವ ಬದಲು ಮಾಹಿತಿ ಸಂಗ್ರಹಣೆಯ ಯಾಂತ್ರಿಕ ಪ್ರಕ್ರಿಯೆಯಾಗುತ್ತದೆ. ಜ್ಞಾನ ಮೀಮಾಂಸೆಯ ಮೂಲ ಉದ್ದೇಶವೇ ಮೂಲೆಗುಂಪಾಗುತ್ತದೆ.
ಈ ಎಲ್ಲಾ ಅಂಶಗಳ ಹಿನ್ನೆಲೆಯಲ್ಲಿ, ನಾನು ತಮ್ಮ ಮುಂದೆ ವಿನಯಪೂರ್ವಕವಾಗಿ ಕೆಳಗಿನ ಹಕ್ಕೊತ್ತಾಯಗಳನ್ನು ಮಂಡಿಸುತ್ತೇನೆ.
1. ಮುಂದಿನ ಶೈಕ್ಷಣಿಕ ವರ್ಷದಿಂದ ಪೂರ್ವ ಪ್ರಾಥಮಿಕ ದಿಂದಲೇ 3,000 ಆಂಗ್ಲ ಮಾಧ್ಯಮ ಶಾಲೆಗಳನ್ನು ಪ್ರಾರಂಭಿಸುವ ಸಚಿವರ ತೀರ್ಮಾನವನ್ನು ಹಿಂದಕ್ಕೆ ಪಡೆಯಬೇಕು,
2. 1,000 ಶಾಲೆಗಳಲ್ಲಿ ಉಭಯ ಮಾಧ್ಯಮ(ಆಂಗ್ಲ-ಕನ್ನಡ)ವನ್ನು ಪ್ರಾರಂಭಿಸುವ ತೀರ್ಮಾನವನ್ನು ಕೈ ಬಿಡಬೇಕು.
3. ಪೂರ್ವ ಪ್ರಾಥಮಿಕದಿಂದಲೇ ಪಂಚಾಯತ್‌ಗೊಂದು ಸಾರ್ವಜನಿಕ ಶಾಲೆ ಮಾಡುವ ಬದಲು 2009, 2013, 2015ರ ನಮ್ಮ ಶಿಫಾರಸಿನಂತೆ ಮತ್ತು 2017ರ ಸರಕಾರಿ ಶಾಲೆಗಳ ಸಬಲೀಕರಣ ವರದಿಯ ತೀರ್ಮಾನದಂತೆ ಪೂರ್ವ-ಪ್ರಾಥಮಿಕದಿಂದ 4ನೇ ತರಗತಿಯವರೆಗೆ ಬುನಾದಿ ಪ್ರಾಥಮಿಕ ಶಿಕ್ಷಣವನ್ನು ಆಯಾ ಹಳ್ಳಿ/ಹಟ್ಟಿ/ಹಾಡಿ/ಹುಂಡಿ ಇತ್ಯಾದಿಗಳಲ್ಲಿ ಉಳಿಸಿಕೊಂಡು 5ರಿಂದ 12ನೇ ತರಗತಿಯವರೆಗೆ ಗ್ರಾಮ ಪಂಚಾಯತ್ ಮತ್ತು ನಗರದ ವಾರ್ಡ್ ಹಂತದಲ್ಲಿ ಕೇಂದ್ರೀಯ ಶಾಲೆಯ ಮಾದರಿಯಲ್ಲಿ ಸುಸಜ್ಜಿತ ರಾಜೀವ್ ಗಾಂಧಿ (ಮೊದಲಿಗೆ ನವೋದಯ ಶಾಲೆಗಳ ಪ್ರಸ್ತಾವನೆಯನ್ನು ಶಿಕ್ಷಣ ನೀತಿಯಲ್ಲಿ ಅಳವಡಿಸಿದವರು) ಸಾರ್ವಜನಿಕ ನವೋದಯ ಶಾಲೆಗಳನ್ನು ಪ್ರಾರಂಭಿಸಲು ಮುಂದಿನ ನಾಲ್ಕು ವರ್ಷಗಳಿಗೆ ಕ್ರಿಯಾ ಯೋಜನೆ ತಯಾರಿಸಬೇಕು.
4. 2015ರಲ್ಲಿ ಎರಡೂ ಸದನಗಳಲ್ಲಿ ಮಂಡನೆಯಾಗಿ ರಾಷ್ಟ್ರಪತಿಯವರ ಒಪ್ಪಿಗೆಗಾಗಿ ನನೆಗುದಿಗೆ ಬಿದ್ದಿರುವ ಕನ್ನಡ ಮಾಧ್ಯಮ ಮಸೂದೆಗೆ ಒಪ್ಪಿಗೆ ಪಡೆಯಲು ಶೀಘ್ರ ಕ್ರಮವಹಿಸಬೇಕು. ಅಗತ್ಯವಿದ್ದಲ್ಲಿ, ಒಬ್ಬ ಅಧಿಕಾರಿಯನ್ನು ನಿಯೋಜಿಸಬೇಕು
5. ಕನ್ನಡವನ್ನು ಕಡ್ಡಾಯವಾಗಿ ಪ್ರಥಮ ಅಥವಾ ದ್ವಿತೀಯ ಭಾಷೆಯನ್ನಾಗಿ ಕಲಿಸಲು ರೂಪಿಸಿರುವ ಕನ್ನಡ ಕಲಿಕಾ ಅಧಿನಿಯಮ 2015ನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲು ಒಂದು ಕ್ರಿಯಾಯೋಜನೆ ರೂಪಿಸಬೇಕು.
6. ತಮ್ಮ ಮೊದಲ ಅವಧಿಯಲ್ಲಿ (2017) ಕನ್ನಡ ಅಭಿವೃದ್ಧಿ ಪ್ರಾಧಿಕಾರ ಸಲ್ಲಿಸಿರುವ ಸರಕಾರಿ ಶಾಲೆಗಳ ಸಬಲೀಕರಣ ವರದಿಯನ್ನು ಸದನದಲ್ಲಿ ಮಂಡಿಸಿ ಜಾರಿಗೊಳಿಸಲು ಕ್ರಮವಹಿಸಬೇಕು.
7. ಕೊನೆಯದಾಗಿ, ಸರಕಾರಿ ಅನುದಾನಿತ ಮತ್ತು ಅನುದಾನರಹಿತ ಕನ್ನಡ ಶಾಲೆಗಳ ಸಬಲೀಕರಣಕ್ಕಾಗಿ ಒಂದು ಪ್ರತ್ಯೇಕ ಪ್ರಾಧಿಕಾರ ರಚಿಸಬೇಕು.