ಮಲೆನಾಡಿನ ಕಾಡಾನೆಗಳ ಹೆಸರುಗಳೇ ಸ್ವಾರಸ್ಯಕರ

Update: 2024-03-18 08:50 GMT

ಹಾಸನ: ಕಾಡಾನೆ ಮತ್ತು ಮಾನವ ಸಂಘರ್ಷ ಹಾಸನ ಜಿಲ್ಲೆಯಲ್ಲಿ ಮಿತಿಮೀರಿದೆ. ಕಾಡಾನೆಗಳು ಈ ವರೆಗೆ 80ಕ್ಕೂ ಹೆಚ್ಚು ಜನರನ್ನು ಕೊಂದಿದೆ. ಮನುಷ್ಯರ ದ್ವೇಷಕ್ಕೆ 30ಕ್ಕೂ ಹೆಚ್ಚು ಕಾಡಾನೆಗಳು ಹತ್ಯೆಗೀಡಾಗಿವೆ.

ಈ ಸಂಘರ್ಷದ ಮಧ್ಯೆ ಕಾಡಾನೆಗಳನ್ನು ಗುರುತಿಸಲು ಅರಣ್ಯ ಇಲಾಖೆ ಮತ್ತು ಸ್ಥಳಿಯರು ಇಟ್ಟಿರುವ ಹೆಸರುಗಳು ಸ್ವಾರಸ್ಯಕರವಾಗಿವೆ. ಭೀಮ, ಓಲ್ಡ್ ಮಕನಾ, ನ್ಯೂಮಕಾನ, ಕರಡಿ, ಕಾಂತಿ, ಭುವನೇಶ್ವರಿ, ಬೀಟಮ್ಮ 1, ಬೀಟಮ್ಮ 2, ಓಲ್ಡ್ ಬೆಲ್ಟ್, ತಣ್ಣೀರು, ವಿಕ್ರಾಂತ್, ಮೌಂಟೈನ್, ಕ್ಯಾಪ್ಟನ್, ಸೀಗೆ, ಪೆನ್ಸಿಲ್ ಕೋರೆ, ಚೋಟಾ ಭೀಮ್, ಅಡಕ ಬಡಕಾ, ಗುಂಡಾ,ಬೈರ, ಗುಮ್ಮ, ಮತ್ತೋರು, ಸ್ಟಾಲಿನ್, ಹೀಗೆ ಅನೇಕ ಹೆಸರುಗಳಿವೆ.

ಕಾಡಾನೆಗಳ ಚಲನವಲನಗಳನ್ನು ಗುರುತಿಸಲು ಅರಣ್ಯ ಇಲಾಖೆಯು ಕಾಡಾನೆಗಳಿಗೆ ವಿಶಿಷ್ಟ ಹೆಸರಿಡುತ್ತಾ ಬಂದಿದೆ. ಕಾಡಾನೆಗಳ ಚಲನವಲನ ಹಾಗೂ ಅದರ ಆಕಾರ, ಬಣ್ಣ , ಎತ್ತರ, ಕೋರೆ, ನಡವಳಿಕೆಗಳ ಆಧಾರದಲ್ಲಿ ಹೆಸರಿಡಲಾಗುತ್ತದೆ.

ಕೆಲವು ಸಂದರ್ಭಗಳಲ್ಲಿ ಕಾಡಾನೆಗಳಿಗೆ ಕಾಲರ್ ಐಡಿ ಹಾಕುವ ಹಾಗೂ ಹಿಡಿಯುವ ಕಾರ್ಯಾಚರಣೆ, ಕಾಡಾನೆಗಳ ಮೂಲ ವಾಸಸ್ಥಾನ, ಏಕಾಂಗಿಯಾಗಿ ಸಂಚರಿಸುವ, ಅತಿ ದಾಂಧಲೆ ನಡೆಸುವ ಹಾಗೂ ಅತಿ ಚುರುಕಾಗಿರುವ ಹಾಗೂ ವಿವಿಧ ಗುಂಪುಗಳ ನಾಯಕತ್ವವನ್ನು ವಹಿಸುವ ಹಾಗೂ ಕಾಡಾನೆಗಳ ಆಕಾರದ ಆಧಾರದಲ್ಲಿ ಹಲವು ಕಾಡಾನೆಗಳಿಗೆ ಹೆಸರಿಡಲಾಗಿದೆ.



ಭೀಮ

ಭೀಮ: ಅತಿ ಬಲಿಷ್ಠವಾದ ಗಂಡಾನೆ ಭೀಮ ಏಕಾಂಗಿಯಾಗಿ ಸಂಚರಿಸುತ್ತದೆ. ಎತ್ತರ ಹಾಗೂ ಗಾತ್ರವನ್ನು ಆಧರಿಸಿ ಭೀಮ ಎಂದು ನಾಮಕರಣ ಮಾಡಲಾಗಿತ್ತು. ಇದರ ಬಲಗಾಲಿಗೆ ತೀವ್ರವಾದ ಗಾಯವಾದ ಸಂದರ್ಭದಲ್ಲಿ ಚಿಕಿತ್ಸೆ ನೀಡಲು ಹಿಡಿಯುವ ಸಮಯದಲ್ಲಿ ಅರಣ್ಯ ಇಲಾಖೆಯ ಶಾರ್ಪ್ ಶೂಟರ್ ವೆಂಕಟೇಶ್ ಅವರನ್ನು ಕೊಂದಿತ್ತು.ಮಲೆನಾಡು ಭಾಗದಲ್ಲಿ ಒಟ್ಟು 10 ಜನರನ್ನು ಕೊಂದಿದ್ದ ಭೀಮನನ್ನು ಹಿಡಿದು ಸ್ಥಳಾಂತರಿಸಲಾಗಿತ್ತು, ನಂತರ ಮಂಡ್ಯದಲ್ಲಿ ಇಬ್ಬರನ್ನೂ ಹತ್ಯೆಮಾಡಿತ್ತು, ಇದನ್ನು ಸರೆಹಿಡಿದು ಶಿಬಿರದಲ್ಲಿಟ್ಟು ಪಳಗಿಸಲಾಗಿದೆ.

ಓಲ್ಡ್ ಮಕನಾ 

ಓಲ್ಡ್ ಮಕನಾ: ಈ ಕಾಡಾನೆ ಒಂಟಿ ಮನೆಗಳ ಮೇಲೆ ನಿರಂತರವಾಗಿ ದಾಳಿ ನಡೆಸುತ್ತಿತ್ತು. ಅಕ್ಕಿ ತಿನ್ನುವುದು, ಸೊಂಡಿಲಿನಿಂದ ಮನೆಗಳ ಪದಾರ್ಥಗಳನ್ನು ಎಳೆದು ದಾಂಧಲೆ ಮಾಡುತ್ತಿತ್ತು. ಇದನ್ನು ಹಿಡಿದು ಸ್ಥಳಾಂತರಿಸಲಾಗಿದೆ.

ನ್ಯೂ ಮಕಾನ: ಓಲ್ಡ್ ಮಕನಾ ಸ್ಥಳಾಂತರ ಮಾಡಿದ ನಂತರ ಮತ್ತೊಂದು ಕಾಡಾನೆ ಇದೇ ಸ್ಥಳದಲ್ಲಿ ದಾಂಧಲೆ ನಡೆಸುತ್ತಿತ್ತು, ಅರಣ್ಯ ಇಲಾಖೆ ಈ ಆನೆಗೆ ನ್ಯೂ ಮಕನಾ ಎಂದು ಹೆಸರಿಟ್ಟಿದೆ.

ಕರಡಿ

 ಕರಡಿ: ತುಸು ಕಪ್ಪಗಿದ್ದು, ಕರಡಿ ರೀತಿಯ ವರ್ತಿಸುವುದರಿಂದ ಈ ಕಾಡಾನೆಗೆ ಕರಡಿ ಎಂದು ಹೆಸರಿಡಲಾಗಿದೆ. ಇಬ್ಬರನ್ನು ಕೊಂದಿದೆ ಇತ್ತೀಚೆಗೆ ಒಬ್ಬರು ಪಾರಾಗಿದ್ದರು.

ಕಾಂತಿ

ಕಾಂತಿ: ಅತಿ ಸುಂದರವಾಗಿ ಪ್ರಜ್ವಲಿಸುತ್ತಿದ್ದ ಹೆಣ್ಣು ಕಾಡಾನೆಗೆ ಅರಣ್ಯ ಇಲಾಖೆ ಕಾಂತಿ ಎಂದು ಹೆಸರಿಟ್ಟಿದೆ. ಹೆಣ್ಣಾನೆಯಾದರೂ ಕಾಡಾನೆಗಳ ತಂಡವನ್ನು ಲೀಡ್ ಮಾಡುತ್ತಿತ್ತು. ಕಾಂತಿ ಕಾಡಾನೆಗೆ ಕಾಲರ್ ಐಡಿ ಹಾಕಿದ ಕೆಲವು ತಿಂಗಳುಗಳ ನಂತರ ಮೃತಪಟ್ಟಿತ್ತು.

ಭುವನೇಶ್ವರಿ

 ಭುವನೇಶ್ವರಿ: ಕನ್ನಡ ರಾಜ್ಯೋತ್ಸವ ದಿನ ಈ ಹೆಣ್ಣಾನೆಗೆ ಅರಣ್ಯ ಇಲಾಖೆ ಕಾಲರ್ ಐಡಿ ಅಳವಡಿಸಿದ್ದರಿಂದ ಭುವನೇಶ್ವರಿ ಎಂಬ ಹೆಸರನ್ನು ಇಡಲಾಗಿದೆ.

ಬೀಟಮ್ಮ

ಬೀಟಮ್ಮ 1 ಮತ್ತು 2: ಸಕಲೇಶಪುರ ತಾಲೂಕು ಹಾಲೇಬೇಲೂರಿನ ಬೀಟಮ್ಮ ದೇವಸ್ಥಾನದ ಸಮೀಪ ಅರಣ್ಯ ಇಲಾಖೆ ಎರಡು ಕಾಡಾನೆಗಳಿಗೆ ಕಾಲರ್ ಐಡಿಯನ್ನು ಅಳವಡಿಸಿದ ಹಿನ್ನೆಲೆಯಲ್ಲಿ ಈ ಕಾಡಾನೆಗೆ ಬೀಟಮ್ಮ 1 ಮತ್ತು ಬೀಟಮ್ಮ 2 ಎಂದು ಹೆಸರಿಡಲಾಗಿದೆ.

ಓಲ್ಡ್ ಬೆಲ್ಟ್: ಪ್ರಪ್ರಥಮವಾಗಿ ಈ ಹೆಣ್ಣು ಕಾಡಾನೆಗೆ ಅರಣ್ಯ ಇಲಾಖೆ ಕಾಲರ್ ಐಡಿ ಅಳವಡಿಸಿದ್ದು, ಈ ಹಿನ್ನೆಲೆಯಲ್ಲಿ ಓಲ್ಡ್ ಬೆಲ್ಟ್ ಎಂದು ಹೆಸರಿಟ್ಟಿದೆ.

ತಣ್ಣೀರು

 ತಣ್ಣೀರು: ಈ ಕಾಡಾನೆ ಶಾಂತಿಯುತವಾಗಿ ಇರುತ್ತಿದ್ದರಿಂದ ತಣ್ಣೀರು ಎಂದು ಹೆಸರಿಡಲಾಗಿತ್ತು.

ವಿಕ್ರಾಂತ್: ಅತ್ಯಂತ ಚುರುಕಾಗಿರುವ ಈ ಆನೆ ಅತ್ಯಂತ ಬಲಿಷ್ಟವಾಗಿದೆ. ಪಾದರಸದಂತೆ ಸಂಚಾರ ಮಾಡುವುದಿಂದ ಈ ಕಾಡಾನೆಗೆ ಅರಣ್ಯ ಇಲಾಖೆ ವಿಕ್ರಾಂತ್ ಎಂಬ ಹೆಸರಿಟ್ಟಿದೆ. ಈ ಕಾಡಾನೆ ಕಾಫಿ ತೋಟದಲ್ಲಿ ಗಿಡಕ್ಕೆ ಹಾಕುವ ಸುಣ್ಣವನ್ನು ಸಹ ಮೈಮೇಲೆ ಹಾಕಿಕೊಂಡು ಸಂಚರಿಸುತ್ತದೆ.

ಮೌಂಟೈನ್( ಭೀಷ್ಮ): ಇಪ್ಪತ್ತು ವರ್ಷಗಳ ಹಿಂದೆ ಈ ಆನೆ ಪರ್ವತದ ಬಳಿ ಕಾಣಿಸಿಕೊಂಡಿದ್ದರಿಂದ ಮೌಂಟೇನ್ ಎಂದು ಕರೆಯಲಾಗುತ್ತಿದೆ. ಪ್ರಸ್ತುತ ಅರಣ್ಯ ಇಲಾಖೆಯ ಶಿಬಿರದಲ್ಲಿದ್ದು, ಇದೀಗ ಈ ಕಾಡಾನೆಗೆ ಭೀಷ್ಮ ಎಂದು ಅರಣ್ಯ ಇಲಾಖೆ ಮರು ನಾಮಕರಣ ಮಾಡಿದೆ.

ಕ್ಯಾಪ್ಟನ್

 ಕ್ಯಾಪ್ಟನ್: ಕಾಡಾನೆಗಳ ಗುಂಪಿನ ನಾಯಕತ್ವವನ್ನು ಈ ಕಾಡಾನೆ ವಹಿಸಿಕೊಂಡಿರುವುದರಿಂದ ಕ್ಯಾಪ್ಟನ್ ಎಂದು ಹೆಸರಿಸಲಾಗಿದೆ.

ಸೀಗೆ

ಸೀಗೆ: ಹಾಸನದ ಸೀಗೆ ಗುಡ್ಡದಲ್ಲಿ ಕಾಣಿಸಿಕೊಂಡ ಈ ಗಂಡು ಕಾಡಾನೆಗೆ ಸೀಗೆ ಎಂದು ಕರೆಯಲಾಗುತ್ತದೆ.

ಪೆನ್ಸಿಲ್ ಕೋರೆ: ಈ ಗಂಡಾನೆಗೆ ಪೆನ್ಸಿಲ್‌ನಂತೆ ಚೂಪು ಕೋರೆ ಇರುವುದರಿಂದ ಅರಣ್ಯ ಇಲಾಖೆ ಈ ಕಾಡಾನೆಗೆ ಪೆನ್ಸಿಲ್ ಕೋರೆ ಎಂಬ ಹೆಸರನ್ನು ಇಟ್ಟಿದೆ.

ಚೋಟಾ ಭೀಮ್: ಈ ಗಂಡು ಕಾಡಾನೆ ಚಿಕ್ಕ ವಯಸ್ಸಿನದ್ದಾಗಿರುವುದರಿಂದ ಈ ಕಾಡಾನೆಗೆ ಚೋಟಾ ಭೀಮ್ ಎಂದು ನಾಮಕರಣ ಮಾಡಲಾಗಿದೆ.

ಅಡಕ ಬಡಕಾ: ಕಾಡಾನೆಯ ಕೋರೆಗಳು ಸಮಾನವಾಗಿ ಇರದೇ ಒಂದು ಉದ್ದ ಮತ್ತೊಂದು ಗಿಡ್ಡ ಇರುವುದರಿಂದ ಈ ಕಾಡಾನೆಯನ್ನು ಅಡಕವಬಡಕಾ ಎಂಬ ಅರಣ್ಯ ಇಲಾಖೆ ಹೆಸರಿಟ್ಟಿದೆ.

ಗುಂಡಾ

ಸ್ಟಾಲಿನ್ : ಕೊಡಗು ಭಾಗದ ಈ ಕಾಡಾನೆ ಸಕಲೇಶಪುರ ಪ್ರದೇಶದಲ್ಲಿ ಅಪರೂಪಕ್ಕೆ ಕಂಡು ಬರುತ್ತದೆ. ಸ್ವಭಾವದಲ್ಲಿ ಕೋಪಿಷ್ಟವಾಗಿದೆ. ಈ ಕಾಡಾನೆಗೆ ಸಾರ್ವಜನಿಕರು ಸ್ಟಾಲಿನ್ ಎಂದು ಹೆಸರಿಸಿದ್ದರು.

ಬೈರ 

ನೋಡಲು ವಿಕಾರವಾಗಿರುವ ಕಾಡಾನೆಗೆ ಗುಮ್ಮ ಎಂದು, ಹೆಸರಿಸಲಾಗಿದೆ. ಮೂಡುಗೆರೆ ಬಾರ್ಡರ್‌ನಲ್ಲಿ ಕಂಡುಬರುವ ಒಂದು ಕಾಡಾನೆಗೆ ಬೈರ ಎನ್ನುತ್ತಾರೆ. ಮತ್ತೂರು ಎಂಬ ಹೆಸರಿನ ಕಾಡಾನೆ ಇದೆ. ಹಾಸನ ಜಿಲ್ಲೆಯ ಮಲೆನಾಡು ಭಾಗದಲ್ಲಿ 80ಕ್ಕೂ ಹೆಚ್ಚು ಕಾಡಾನೆಗಳು ವಿವಿಧೆಡೆ ಸಂಚರಿಸುತ್ತಿದ್ದು ಕೆಲವೇ ಕೆಲವು ಬಲಶಾಲಿಯಾದ, ಗುಂಪುಗಳ ನಾಯಕತ್ವ ವಹಿಸುವ ಹಾಗೂ ಪುಂಡ ಕಾಡಾನೆಗಳಿಗೆ ಮಾತ್ರ ಅರಣ್ಯ ಇಲಾಖೆ ನಾಮಕರಣ ಮಾಡಿದೆ.


ಕಾಡಾನೆಗಳ ವರ್ತನೆ, ಆಕಾರ, ಪತ್ತೆಯಾದ ಸ್ಥಳದ ಆಧಾರದ ಮೇಲೆ ಕಾಡಾನೆಗಳಿಗೆ ಹೆಸರನ್ನು ಇಡಲಾಗುತ್ತದೆ. ಕಾಡಾನೆಗಳು ಸಾಮಾನ್ಯವಾಗಿ ಒಂದೆ ಒಂದು ಕಡೆಯಿರುವುದಿಲ್ಲ. ನಾಮಕರಣ ಮಾಡುವುದರಿಂದ ಗುಂಪನ್ನು ಗುರುತಿಸಲು ಸಹಾಯವಾಗುತ್ತದೆ.

-ಶಿಲ್ಪಾ, ಸಕಲೇಶಪುರ ವಲಯ ಅರಣ್ಯಾಧಿಕಾರಿ

Writer - ವಾರ್ತಾಭಾರತಿ

contributor

Editor - jafar sadik

contributor

Byline - ಮಲ್ನಾಡ್ ಮೆಹಬೂಬ್

contributor

Similar News