ರಾಹುಲ್ ಗಾಂಧಿಯವರ ತಾತ್ವಿಕ ಹೋರಾಟವನ್ನು ‘ಇಂಡಿಯಾ’ ಒಕ್ಕೂಟ ತಾರ್ಕಿಕ ಅಂತ್ಯಕ್ಕೆ ತಲುಪಿಸೀತೇ?

ಭಾರತ ಜೋಡೊ ನ್ಯಾಯ ಯಾತ್ರೆ ಮುಗಿದಿದೆ. ರಾಹುಲ್ ಗಾಂಧಿ ಕಾಂಗ್ರೆಸ್‌ಗೆ, ವಿಪಕ್ಷ ಒಕ್ಕೂಟಕ್ಕೆ ಯಾವುದಕ್ಕಾಗಿ ಹೋರಾಡಬೇಕು? ಹೇಗೆ ಹೋರಾಡಬೇಕು ಎಂಬ ಒಂದು ಸ್ಪಷ್ಟತೆಯನ್ನು ಕೊಟ್ಟಿದ್ದಾರೆ. ಅದಕ್ಕೊಂದು ಹೊಸ ರೂಪವನ್ನೂ ಕೊಟ್ಟಿದ್ದಾರೆ. ಆದರೆ ಅದನ್ನು ಅವರ ಪಕ್ಷ ಮತ್ತು ವಿಪಕ್ಷಗಳ ಒಕ್ಕೂಟ ಎಷ್ಟರ ಮಟ್ಟಿಗೆ ಸ್ವೀಕರಿಸುತ್ತದೆ ಎಂಬುದು ಬಹಳ ಮುಖ್ಯ.

Update: 2024-03-19 05:15 GMT
Editor : Thouheed | Byline : ವಿನಯ್ ಕೆ.

ರಾಹುಲ್ ಗಾಂಧಿಯವರ ಭಾರತ ಜೋಡೊ ನ್ಯಾಯ ಯಾತ್ರೆ ಪೂರ್ಣಗೊಂಡಿದೆ. ಈ ಯಾತ್ರೆ ಮುಂಬೈಯಲ್ಲಿ ಕೊನೆಗೊಳ್ಳುವಾಗ ಅದು ಹಲವು ಸಂಕೇತಗಳನ್ನು ಒಳಗೊಂಡಿತ್ತು ಮತ್ತು ಆ ಸಂಕೇತಗಳು ನ್ಯಾಯ ಯಾತ್ರೆಯ ಹಾದಿಯಲ್ಲಿ ಇತಿಹಾಸ ಮತ್ತು ವರ್ತಮಾನವನ್ನು ಜೋಡಿಸುವಂತೆ ಇದ್ದವು.

ರಾಹುಲ್ ಅವರ ಈ ಯಾತ್ರೆ ಇವತ್ತಿನ ರಾಜಕಾರಣದಲ್ಲಿ ಚುನಾವಣೆಯ ಉದ್ದೇಶವನ್ನೂ ಮೀರಿ ಒಂದು ತತ್ವದ ಆದರ್ಶದ ರೂಪಕವಾಗಿ ಬೆಳೆದಿದೆ. ಎರಡು ಹಂತದ ಭಾರತ ಜೋಡೊ ಯಾತ್ರೆ ಬಳಿಕ ರಾಹುಲ್ ಸಂಪೂರ್ಣ ಹೊಸ ರಾಷ್ಟ್ರೀಯ ನಾಯಕರಾಗಿ ಬೆಳೆದು ನಿಂತಿದ್ದಾರೆ. ಅವರ ಮಾತುಗಳಲ್ಲಿ, ನಿಲುವು ಅತ್ಯಂತ ಸ್ಪಷ್ಟವಾಗಿದೆ, ನೇರವಾಗಿದೆ, ನಿಖರವಾಗಿದೆ. ಅಲ್ಲಿ ಯಾವುದೇ ಗೊಂದಲಕ್ಕೆ ಅವಕಾಶವೇ ಇಲ್ಲ. ಇನ್ನು ದೇಶದಲ್ಲಿರುವ ಅತ್ಯಂತ ಬಲಿಷ್ಠ ಸರಕಾರ ಹಾಗೂ ನಾಯಕರಿಗೆ ನೇರ ಸವಾಲು ಹಾಕುವ ನಾಯಕ ತಾನೇ ಎಂಬುದನ್ನೂ ಅವರು ಸಾಬೀತುಪಡಿಸಿದ್ದಾರೆ. ನೇರವಾಗಿ ಪ್ರಧಾನಿಗೇ ಅವರು ಸವಾಲು ಹಾಕಿದ್ದಾರೆ. ಪ್ರಧಾನಿ ಯಾರಿಗಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಸ್ಪಷ್ಟವಾಗಿ ಹೇಳಿಬಿಟ್ಟಿದ್ದಾರೆ. ಈ ದೇಶದ ಸಮಸ್ಯೆಗಳು ಏನೇನು? ಅದಕ್ಕಿರುವ ಪರಿಹಾರೋಪಾಯಗಳು ಏನು ಎಂಬುದನ್ನೂ ಅತ್ಯಂತ ವಿವರವಾಗಿಯೇ ಅವರು ಜನರ ಮುಂದಿಟ್ಟಿದ್ದಾರೆ.

ಆದರೆ ಅದು ದೇಶದ ಜನರಿಗೆ ಮನವರಿಕೆಯಾಗಬಲ್ಲುದೆ? ಯಾತ್ರೆಯುದ್ದಕ್ಕೂ ಮತ್ತು ಮುಂಬೈನಲ್ಲಿನ ಸಮಾರೋಪದಲ್ಲಿಯೂ ರಾಹುಲ್ ಆಡಿದ ಮಾತುಗಳು, ಬಿಜೆಪಿಗೆ ರಾಹುಲ್ ಹಾಕಿದ ಸವಾಲುಗಳ ಹಿಂದಿನ ಪ್ರಾಮಾಣಿಕತೆ ಈ ದೇಶದ ಜನರಿಗೆ ಅರ್ಥವಾಗಬಲ್ಲುದೆ?

ರಾಹುಲ್ ಒಂದು ದೊಡ್ಡ ಹೋರಾಟವನ್ನು ಈ ಮೂಲಕ ಸಂಕೇತಿಸಿದ್ದಾರೆ. ಬಿಜೆಪಿಗೆ ಸವಾಲು ಹಾಕಲು ಸರ್ವ ಪ್ರಯತ್ನ ಮಾಡಿದ್ದಾರೆ. ಈಗ ಆ ಹೋರಾಟವನ್ನು ತಾರ್ಕಿಕ ಅಂತ್ಯಕ್ಕೆ ತಲುಪಿಸುವುದು ಅವರ ಪಕ್ಷ ಹಾಗೂ ವಿಪಕ್ಷ ಒಕ್ಕೂಟದ ಕೈಯಲ್ಲಿದೆ.

ರಾಹುಲ್ ಗಾಂಧಿಯವರ ಭಾರತ ಜೋಡೊ ನ್ಯಾಯ ಯಾತ್ರೆ ಕೊನೆಗೊಂಡಿರುವುದು ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರ ಸ್ಮಾರಕವಾದ ಮುಂಬೈಯ ದಾದರ್‌ಚೈತ್ಯಭೂಮಿಯಲ್ಲಿ. ಯಾತ್ರೆಯನ್ನು ರಾಹುಲ್ ಅವರು ಅಲ್ಲಿ ಪೂರ್ಣಗೊಳಿಸಿರುವುದು, ಸಂವಿಧಾನ ಪೀಠಿಕೆಯನ್ನು ಓದಿ ಡಾ.ಅಂಬೇಡ್ಕರ್ ಅವರಿಗೆ ಗೌರವ ಸಲ್ಲಿಸುವುದರೊಂದಿಗೆ.ಅದರ ಮೂಲಕ, ನ್ಯಾಯ ಎನ್ನುವುದು ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವದ ಮತ್ತೊಂದು ಹೆಸರೆಂಬುದನ್ನು ಮತ್ತೊಮ್ಮೆ ಅಲ್ಲಿಯೂ ಪ್ರತಿಪಾದಿಸಲಾಗಿದೆ.

ಅದಕ್ಕೂ ಮೊದಲು ರವಿವಾರ ಬೆಳಗ್ಗೆ ರಾಹುಲ್ ಅವರು ದಕ್ಷಿಣ ಮುಂಬೈನ ಮಹಾತ್ಮಾ ಗಾಂಧಿ ಅವರ ನಿವಾಸವಾದ ಮಣಿ ಭವನದಿಂದ ಆಗಸ್ಟ್ ಕ್ರಾಂತಿ ಮೈದಾನದವರೆಗೆ ನ್ಯಾಯ ಸಂಕಲ್ಪ ಪಾದಯಾತ್ರೆ ನಡೆಸಿದರು.

ಮಹಾತ್ಮಾ ಗಾಂಧಿಯವರು ಮುಂಬೈನಲ್ಲಿ ಇದ್ದಾಗಲೆಲ್ಲ ಮಣಿ ಭವನದಲ್ಲಿ ಉಳಿದುಕೊಳ್ಳುತ್ತಿದ್ದರು.

ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ 1942ರಲ್ಲಿ ಮುಂಬೈನ ಕ್ರಾಂತಿ ಮೈದಾನದಲ್ಲಿ ಕ್ವಿಟ್ ಇಂಡಿಯಾ ಚಳವಳಿ ಆರಂಭವಾಗಿತ್ತು.

ಸಮಾರೋಪ ರ್ಯಾಲಿಗೂ ಮೊದಲು ರಾಹುಲ್ ಅವರು ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆಗೆ ಪುಷ್ಪ ನಮನ ಸಲ್ಲಿಸಿದರು. ಬಳಿಕ ಶಿವಸೇನಾ ಸಂಸ್ಥಾಪಕ ಬಾಳ್ ಠಾಕ್ರೆ ಅವರ ಸ್ಮಾರಕಕ್ಕೆ ಭೇಟಿ ನೀಡಿ ನಮನ ಸಲ್ಲಿಸಿದರು.

ವಿಶ್ವದ ಅತಿದೊಡ್ಡ ಕೊಳಗೇರಿ ಪ್ರದೇಶ ಎಂದೇ ಹೇಳಲಾಗುವ ಧಾರಾವಿಯಲ್ಲಿ ಜನರ ಜೊತೆ ಮಾತಾಡಿದ ಅವರು ‘‘ಧಾರಾವಿ ಭಾರತದ ಕೌಶಲ್ಯ ರಾಜಧಾನಿ’’ ಎಂದು ಬಣ್ಣಿಸಿದರು. ‘‘ಈಗ ದೇಶದಲ್ಲಿ ನಡೆಯುತ್ತಿರುವುದು ಕೌಶಲ ಹಾಗೂ ದಲ್ಲಾಳಿಗಳ ನಡುವಿನ ಹೋರಾಟ’’ ಎಂದೂ ಹೇಳಿದರು.

ಸಾಮಾಜಿಕ ಕಾರ್ಯಕರ್ತರನ್ನು ಉದ್ದೇಶಿಸಿ ಮಾತಾಡಿದ ರಾಹುಲ್, ‘‘ನಿಮ್ಮ ವಿರುದ್ಧ ಮಾತ್ರವಲ್ಲ ಇನ್ನೊಬ್ಬನ ವಿರುದ್ಧದ ಅನ್ಯಾಯವನ್ನೂ ವಿರೋಧಿಸಿ. ಚಳವಳಿ ಅಂದರೆ ನಮ್ಮ ನೋವನ್ನು ಬಿಟ್ಟು ಪಕ್ಕದವನ ನೋವನ್ನು ನೋಡಿ ಅದಕ್ಕಾಗಿ ಹೋರಾಡುವುದು’’ ಎಂದರು.

ರಾಹುಲ್ ಗಾಂಧಿ ತಮ್ಮ ಭಾರತ ಜೋಡೊ ನ್ಯಾಯ ಯಾತ್ರೆಯನ್ನು ಶಿವಾಜಿ ಪಾರ್ಕ್‌ನಲ್ಲಿನ ರ್ಯಾಲಿಯೊಂದಿಗೆ ಕೊನೆಗೊಳಿಸುವಾಗ ಅಲ್ಲಿ ‘ಇಂಡಿಯಾ’ ಮೈತ್ರಿಕೂಟದ ಶಕ್ತಿ ಪ್ರದರ್ಶನವೂ ಆಯಿತು.

ಭಾರೀ ದೊಡ್ಡ ಸಂಖ್ಯೆಯಲ್ಲಿ ಜನ ಸೇರಿದ್ದ ಸಮಾವೇಶದಲ್ಲಿ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್, ಆರ್‌ಜೆಡಿ ನಾಯಕ ತೇಜಸ್ವಿ ಯಾದವ್, ಉದ್ಧವ್ ಠಾಕ್ರೆ, ಶರದ್ ಪವಾರ್, ನ್ಯಾಷನಲ್ ಕಾನ್ಫರೆನ್ಸ್ ನಾಯಕ ಫಾರೂಕ್‌ಅಬ್ದುಲ್ಲಾ, ಮೆಹಬೂಬ ಮುಫ್ತಿ, ಎಎಪಿ ನಾಯಕ ಸೌರಭ್ ಭಾರದ್ವಾಜ್, ಸಿಪಿಐ ಪ್ರಧಾನ ಕಾರ್ಯದರ್ಶಿ ದೀಪಾಂಕರ್ ಭಟ್ಟಾಚಾರ್ಯ, ಜಾರ್ಖಂಡ್ ಸಿಎಂ ಚಂಪಾಯಿ ಸೊರೇನ್, ಜಾರ್ಖಂಡ್ ಮಾಜಿ ಸಿಎಂ ಹೇಮಂತ್ ಸೊರೇನ್ ಪತ್ನಿ ಕಲ್ಪನಾ ಸೊರೇನ್ ಪಾಲ್ಗೊಂಡಿದ್ದರು. ‘ಇಂಡಿಯಾ’ ಮೈತ್ರಿಕೂಟದ ವಿಚಾರದಲ್ಲಿ ಇದೊಂದು ಬಹಳ ಮಹತ್ವಪೂರ್ಣವಾದ ಸನ್ನಿವೇಶವೂ ಆಗಿ ಕಂಡಿತು.

ಆದರೆ ಎಸ್‌ಪಿ ಮುಖ್ಯಸ್ಥ ಅಖಿಲೇಶ್ ಭಾಗವಹಿಸಿರಲಿಲ್ಲ. ಆದರೆ ಅವರೊಂದು ಪತ್ರ ಬರೆದು ಇಂತಹದೊಂದು ಯಾತ್ರೆ ಕೈಗೊಂಡಿದ್ದಕ್ಕೆ ರಾಹುಲ್ ಗಾಂಧಿ ಅವರನ್ನು ಅಭಿನಂದಿಸಿದ್ದಾರೆ. ರಾಹುಲ್ ಒಬ್ಬ ಅತ್ಯಂತ ಅಪರೂಪದ ವ್ಯಕ್ತಿ, ಇದೊಂದು ಅಸಾಮಾನ್ಯ ಕೆಲಸ ಎಂದು ಪ್ರಶಂಸಿಸಿದ್ದಾರೆ.

ಯಾತ್ರೆ ಸಮಾರೋಪದ ರ್ಯಾಲಿಯಲ್ಲಿ ರಾಹುಲ್ ಅವರೊಡನೆ ಸೋದರಿ ಪ್ರಿಯಾಂಕಾ ಗಾಂಧಿ, ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಇದ್ದರು. ಪ್ರಕಾಶ್ ಅಂಬೇಡ್ಕರ್ ಪಾಲ್ಗೊಂಡಿದ್ದರು.

ರ್ಯಾಲಿಯಲ್ಲಿ ಮಾತನಾಡಿದ ರಾಹುಲ್ ಗಾಂಧಿ ಅವರು ಮೋದಿ ವಿರುದ್ದ ತೀವ್ರ ವಾಗ್ದಾಳಿ ನಡೆಸಿದರು. ಪ್ರಧಾನಿಗೆ ನೇರ ಸವಾಲು ಹಾಕಿದರು.

‘‘ರಾಜನ ಆತ್ಮ ಇವಿಎಂನಲ್ಲಿದೆ. ಇವಿಎಂ ಮತ್ತು ಈ.ಡಿ., ಸಿಬಿಐ, ಐಟಿ ಹೀಗೆ ದೇಶದ ಪ್ರತಿಯೊಂದು ಸಂಸ್ಥೆಗಳಲ್ಲಿ ರಾಜನ ಆತ್ಮವಿದೆ’’ ಎಂದು ನೇರವಾಗಿಯೇ ಹೇಳಿದರು.

‘‘ಇಂದು ಮಾಧ್ಯಮಗಳು ದೇಶದ ಪ್ರಮುಖ ಸಮಸ್ಯೆಗಳಾದ ನಿರುದ್ಯೋಗ, ಹಣದುಬ್ಬರ, ರೈತರ ಸಮಸ್ಯೆ, ಅಗ್ನಿವೀರ್ ಸಮಸ್ಯೆಯನ್ನು ಪ್ರಸ್ತಾಪಿಸುವುದಿಲ್ಲ. ಈ ಎಲ್ಲಾ ಸಮಸ್ಯೆಗಳು ಇಂದು ಮಾಧ್ಯಮಗಳಲ್ಲಿ ಕಾಣಿಸುವುದೇ ಇಲ್ಲ. ಹೀಗಾಗಿ ಈ ಸಮಸ್ಯೆಗಳ ಬಗ್ಗೆ ಜನರ ಗಮನ ಸೆಳೆಯಲು ನಾವು 4,000 ಕಿ.ಮೀ. ನಡೆಯಬೇಕಾಯಿತು’’ ಎಂದು ರಾಹುಲ್ ಗಾಂಧಿ ಹೇಳಿದರು.

ವಿಪಕ್ಷ ನಾಯಕರನ್ನು ಹೆದರಿಸಿ, ಬೆದರಿಸಿ, ಕತ್ತು ಹಿಡಿದು ಬಿಜೆಪಿಗೆ ಸೇರಿಸಿಕೊಳ್ಳಲಾಗುತ್ತಿದೆ ಎಂದು ಹೇಳಿದರು ರಾಹುಲ್ ಗಾಂಧಿ.

‘‘ಮೊದಲ ಬಾರಿ ಬಿಜೆಪಿ ಸರಕಾರ ಬಂದಾಗ, ಅರುಣ್ ಜೇಟ್ಲಿ ನನ್ನ ಬಳಿ ಬಂದಿದ್ದರು. ಒಂದು ಕೊಠಡಿಯಲ್ಲಿ ಕುಳಿತು ನಾವು ಮಾತನಾಡಿದೆವು. ಅರುಣ್ ಜೇಟ್ಲಿ ನನ್ನ ಬಳಿ ಭೂಕಬಳಿಕೆ ವಿಚಾರದಲ್ಲಿ ಮಾತನಾಡಬಾರದು. ಮಾತನಾಡಿದರೆ ನಿಮ್ಮ ಮೇಲೆ ಕೇಸು ದಾಖಲಿಸುತ್ತೇವೆ ಎಂದು ಹೇಳಿದರು. ನಾನು ಅದಕ್ಕೆಲ್ಲ ಹೆದರುವವನಲ್ಲ, ಕೇಸು ದಾಖಲಿಸಿ ಎಂದು ಹೇಳಿದೆ. ಬಳಿಕ ಈ.ಡಿ.ಯವರು ಬಂದರು. 50 ಗಂಟೆಗಳ ಕಾಲ ನನ್ನನ್ನು ಕೂರಿಸಿದರು. ಒಬ್ಬ ಈ.ಡಿ. ಅಧಿಕಾರಿ ನನ್ನಲ್ಲಿ ‘ರಾಹುಲ್, ನೀವು ಯಾರಿಗೂ ಹೆದರುವವರಲ್ಲ. ನೀವು ನರೇಂದ್ರ ಮೋದಿಯವರನ್ನು ಸೋಲಿಸಬಹುದು’ ಎಂದು ಹೇಳಿದ್ದರು’’ ಎಂದರು.

ಬಿಜೆಪಿ ನೇತೃತ್ವದ ಕೇಂದ್ರ ಸರಕಾರ ಪ್ರತಿಪಕ್ಷಗಳ ವಿರುದ್ಧ ಕೇಂದ್ರೀಯ ಸಂಸ್ಥೆಗಳು ಮತ್ತು ಇವಿಎಂಗಳನ್ನು ಬಳಸುತ್ತಿದೆ ಎಂದು ರಾಹುಲ್ ಆರೋಪಿಸಿದರು. ಆಡಳಿತ ಪಕ್ಷವು ಇವಿಎಂಗಳು, ಈ.ಡಿ. ಮತ್ತು ಸಿಬಿಐ ಇಲ್ಲದೆ ಲೋಕಸಭೆ ಚುನಾವಣೆಯಲ್ಲಿ ಗೆಲ್ಲಲು ಸಾಧ್ಯವಿಲ್ಲ ಎಂದು ರಾಹುಲ್ ವಾಗ್ದಾಳಿ ನಡೆಸಿದರು.

ಭಾರತದಲ್ಲಿ ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣ ತೆರೆಯಲು ವರ್ಷಗಳು ಬೇಕು. ಆದರೆ ಒಂದು ಮದುವೆ ನಿಶ್ಚಿತಾರ್ಥಕ್ಕಾಗಿ ಕೇವಲ 10 ದಿನಗಳಲ್ಲಿ ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣ ತೆರೆಯಬಹುದು. ಇದು ಒಳ್ಳೆಯ ಬೆಳವಣಿಗೆಯೇ. ಆದರೆ ಉಳಿದ ಪ್ರದೇಶಗಳಲ್ಲಿ ಏನು ಸಮಸ್ಯೆ. ಅಲ್ಲಿಯೂ ಬೇಗನೇ ತೆರೆಯಬಹುದಲ್ಲವೇ ಎಂದು ರಾಹುಲ್ ಪ್ರಶ್ನಿಸಿದರು.

‘‘ಇದು ದ್ವೇಷಿಸುವ ದೇಶವಲ್ಲ. ಪ್ರೀತಿಸುವ ದೇಶ. ದ್ವೇಷದ ಬಜಾರಿನಲ್ಲಿ ಪ್ರೀತಿಯ ಅಂಗಡಿ ತೆರೆಯಲು ನಮ್ಮ ಮೊದಲ ಯಾತ್ರೆಯಲ್ಲಿ ಹೇಳಿದ್ದೆವು. ಅದು ಆಗಬೇಕು. ದ್ವೇಷದ ಬಜಾರಿನಲ್ಲಿ ಪ್ರೇಮದ ಅಂಗಡಿ ತೆರೆಯಿರಿ’’ ಎಂದು ರಾಹುಲ್ ಕೇಳಿಕೊಂಡರು.

ಭಾರತ ಜೋಡೊ ನ್ಯಾಯ ಯಾತ್ರೆ ಮುಗಿದಿದೆ. ರಾಹುಲ್ ಗಾಂಧಿ ಕಾಂಗ್ರೆಸ್‌ಗೆ, ವಿಪಕ್ಷ ಒಕ್ಕೂಟಕ್ಕೆ ಯಾವುದಕ್ಕಾಗಿ ಹೋರಾಡಬೇಕು? ಹೇಗೆ ಹೋರಾಡಬೇಕು ಎಂಬ ಒಂದು ಸ್ಪಷ್ಟತೆಯನ್ನು ಕೊಟ್ಟಿದ್ದಾರೆ. ಅದಕ್ಕೊಂದು ಹೊಸ ರೂಪವನ್ನೂ ಕೊಟ್ಟಿದ್ದಾರೆ. ಆದರೆ ಅದನ್ನು ಅವರ ಪಕ್ಷ ಮತ್ತು ವಿಪಕ್ಷಗಳ ಒಕ್ಕೂಟ ಎಷ್ಟರ ಮಟ್ಟಿಗೆ ಸ್ವೀಕರಿಸುತ್ತದೆ ಎಂಬುದು ಬಹಳ ಮುಖ್ಯ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ವಿನಯ್ ಕೆ.

contributor

Similar News