ರಾಮ್‌ದೇವ್ ಧಾರ್ಷ್ಟ್ಯಕ್ಕೆ ಸುಪ್ರೀಂ ಕೋರ್ಟ್ ಪಾಠ ಕಲಿಸಲಿದೆಯೇ?

ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ರಾಮ್‌ದೇವ್ ಮತ್ತು ಪತಂಜಲಿ ಆಡಳಿತ ನಿರ್ದೇಶಕ ಆಚಾರ್ಯ ಬಾಲಕೃಷ್ಣ ಇಬ್ಬರಿಗೂ ಸುಪ್ರೀಂ ಕೋರ್ಟ್ ಸಮನ್ಸ್ ನೀಡಿದೆ. ಪತಂಜಲಿ ಸಂಸ್ಥೆಯ ದಾರಿ ತಪ್ಪಿಸುವ ಜಾಹೀರಾತು ವಿಚಾರದಲ್ಲಿನ ನ್ಯಾಯಾಂಗ ನಿಂದನೆ ನೊಟೀಸ್‌ಗೂ ಉತ್ತರಿಸದೆ ಧಾರ್ಷ್ಟ್ಯ ತೋರಿದ್ದಕ್ಕಾಗಿ ಈ ಇಬ್ಬರೂ ಮುಂದಿನ ವಿಚಾರಣೆಗೆ ಖುದ್ದು ಹಾಜರಾಗುವಂತೆ ನ್ಯಾ. ಹಿಮಾ ಕೊಹ್ಲಿ ಮತ್ತು ಅಹ್ಸಾನುದ್ದೀನ್ ಅಮಾನುಲ್ಲಾ ಅವರಿದ್ದ ಪೀಠ ಸೂಚಿಸಿದೆ.

Update: 2024-03-21 04:46 GMT

ನಾವು ಪ್ರಶ್ನಾತೀತರು, ನಾವು ಹೇಳಿದ್ದೇ ಕಾನೂನು, ನಾವು ಆಡಿದ್ದೇ ಆಟ ಎಂದುಕೊಂಡ ಒಬ್ಬೊಬ್ಬರಿಗೇ ಈ ದೇಶದ ಸರ್ವೋಚ್ಚ ನ್ಯಾಯಾಲಯ ಅವರ ಸ್ಥಾನ ಏನು ಎಂಬುದನ್ನು ತೋರಿಸುತ್ತಿದೆ.

ಈಗ ಈ ಬಾಬಾ ರಾಮ್‌ದೇವ್ ಸರದಿ.

ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ರಾಮ್‌ದೇವ್ ಮತ್ತು ಪತಂಜಲಿ ಆಡಳಿತ ನಿರ್ದೇಶಕ ಆಚಾರ್ಯ ಬಾಲಕೃಷ್ಣ ಇಬ್ಬರಿಗೂ ಸುಪ್ರೀಂ ಕೋರ್ಟ್ ಸಮನ್ಸ್ ನೀಡಿದೆ. ಪತಂಜಲಿ ಸಂಸ್ಥೆಯ ದಾರಿ ತಪ್ಪಿಸುವ ಜಾಹೀರಾತು ವಿಚಾರದಲ್ಲಿನ ನ್ಯಾಯಾಂಗ ನಿಂದನೆ ನೊಟೀಸ್‌ಗೂ ಉತ್ತರಿಸದೆ ಧಾರ್ಷ್ಟ್ಯ ತೋರಿದ್ದಕ್ಕಾಗಿ ಈ ಇಬ್ಬರೂ ಮುಂದಿನ ವಿಚಾರಣೆಗೆ ಖುದ್ದು ಹಾಜರಾಗುವಂತೆ ಸುಪ್ರೀಂ ಕೋರ್ಟ್ ಸೂಚಿಸಿದೆ.

ಆಯುರ್ವೇದದ ಹೆಸರಲ್ಲಿ ಜನರ ದಾರಿ ತಪ್ಪಿಸುವ ಜಾಹೀರಾತು ನೀಡುತ್ತಿದೆ ಎಂದು ಆರೋಪಿಸಿ ಪತಂಜಲಿ ವಿರುದ್ಧ ಭಾರತೀಯ ವೈದ್ಯಕೀಯ ಸಂಸ್ಥೆ ಸುಪ್ರೀಂ ಕೋರ್ಟ್ ಗೆ ಅರ್ಜಿ ಸಲ್ಲಿಸಿತ್ತು.

ಅರ್ಜಿ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್ ದ್ವಿಸದಸ್ಯ ಪೀಠ, ಪತಂಜಲಿ ಆಯುರ್ವೇದ ಸಂಸ್ಥೆಯ ಔಷಧಿಗಳ ಪ್ರಚಾರದ ಜಾಹೀರಾತುಗಳ ಮೇಲೆ ಮಧ್ಯಂತರ ಆದೇಶದ ಮೂಲಕ ನಿರ್ಬಂಧ ಹೇರಿತ್ತು. ಇಲೆಕ್ಟ್ರಾನಿಕ್ ಅಥವಾ ಮುದ್ರಣ ಮಾಧ್ಯಮಗಳಲ್ಲಿ ಜಾಹೀರಾತು ನೀಡದಂತೆ ನ್ಯಾಯಪೀಠ ಖಡಕ್ ನಿರ್ದೇಶನ ನೀಡಿತ್ತು. ಇನ್ನು ಮುಂದೆ ಈ ರೀತಿಯಾದರೆ, ಸುಳ್ಳು ಜಾಹೀರಾತು ನೀಡುವ ಪ್ರತೀ ಉತ್ಪನ್ನದ ಮೇಲೂ 1 ಕೋಟಿ ರೂ. ದಂಡ ವಿಧಿಸಬೇಕಾಗುತ್ತದೆ ಎಂದು ಕೂಡ ಆಗ ಕೋರ್ಟ್ ಎಚ್ಚರಿಸಿತ್ತು.

ಆದರೆ ದೇಶದ ಸರಕಾರವೇ ತನ್ನ ಜೇಬಿನಲ್ಲಿದೆ ಎಂಬ ಭಾವನೆಯಲ್ಲಿರುವ ರಾಮ್‌ದೇವ್ ಸುಪ್ರೀಂ ಕೋರ್ಟ್ ಆದೇಶವನ್ನೇ ಧಿಕ್ಕರಿಸಿದ್ದರು. ಈಗ ತನ್ನ ನೋಟಿಸ್‌ಗೆ ಉತ್ತರಿಸದ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ವ್ಯಗ್ರವಾಗಿದೆ. ಬಾಬಾ ರಾಮ್‌ದೇವ್ ಮತ್ತು ಆಚಾರ್ಯ ಬಾಲಕೃಷ್ಣ ಕೋರ್ಟ್‌ಗೆ ಖುದ್ದು ಹಾಜರಾಗಬೇಕೆಂದು ನ್ಯಾ. ಹಿಮಾ ಕೊಹ್ಲಿ ಮತ್ತು ಅಹ್ಸಾನುದ್ದೀನ್ ಅಮಾನುಲ್ಲಾ ಅವರಿದ್ದ ಪೀಠ ಸೂಚಿಸಿದೆ.

ಈಗ ಪತಂಜಲಿ ಪರ ವಾದ ಮಂಡಿಸಿದ ದೇಶದ ಅತ್ಯಂತ ಪ್ರತಿಷ್ಠಿತ ವಕೀಲ ಮುಕುಲ್ ರೊಹ್ಟಗಿ ಕೂಡಾ ಸುಪ್ರೀಂ ಕೋರ್ಟ್‌ನಲ್ಲಿ ಮುಜುಗರ ಎದುರಿಸುವಂತಾಗಿದೆ.

ಭಾರತೀಯ ವೈದ್ಯಕೀಯ ಸಂಘದ (ಐಎಂಎ) 2022ರ ಆಗಸ್ಟ್‌ನಲ್ಲಿ ಸಲ್ಲಿಸಿದ್ದ ಅರ್ಜಿಯಲ್ಲಿ ಹಲವು ಆರೋಪಗಳಿದ್ದವು.

1.ಅಲೋಪಥಿ ಮತ್ತು ಆಧುನಿಕ ವೈದ್ಯ ಪದ್ಧತಿಗಳ ವಿರುದ್ಧ ವ್ಯವಸ್ಥಿತವಾಗಿ ರಾಮ್‌ದೇವ್ ತಪ್ಪು ಮಾಹಿತಿ ಹರಡುತ್ತಿದ್ದಾರೆ ಎಂಬ ಆರೋಪ.

2.ಪತಂಜಲಿಯಿಂದ ಜನರನ್ನು ತಪ್ಪು ದಾರಿಗೆಳೆಯುವ ಜಾಹೀರಾತುಗಳು. ಅವುಗಳಲ್ಲಿ, ಕಾಯಿಲೆ ಗುಣಪಡಿಸುವುದಾಗಿ ಸುಳ್ಳು ಹೇಳಲಾಗುತ್ತದೆ ಎಂಬ ಆರೋಪ.

3.ಅರ್ಜಿಯಲ್ಲಿ, 2022ರ ಜುಲೈನಲ್ಲಿ ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾಗಿದ್ದ ಪತಂಜಲಿ ಜಾಹೀರಾತು ಉಲ್ಲೇಖ. ಅದು, ಅಲೋಪಥಿ ಗೊಂದಲಗಳನ್ನು ಹಬ್ಬಿಸುತ್ತಿದೆ ಎಂದು ಆರೋಪಿಸುವ ಜಾಹೀರಾತು. ಫಾರ್ಮಾ ಕಂಪೆನಿಗಳು ಮತ್ತು ಔಷಧ ಉದ್ಯಮದಿಂದ ನಿಮ್ಮನ್ನೂ ದೇಶವನ್ನೂ ರಕ್ಷಿಸಿಕೊಳ್ಳಿ ಎಂಬ ಒಕ್ಕಣೆಯಿರುವ ಜಾಹೀರಾತು.

4.ರೋಗ ಗುಣಪಡಿಸುವುದಾಗಿ ಆಧಾರ ರಹಿತವಾಗಿ ಹೇಳಿಕೊಳ್ಳುವುದು ಡ್ರಗ್ಸ್ ಆ್ಯಂಡ್ ಮಿರಾಕಲ್ ರೆಮಿಡೀಸ್ ಆ್ಯಕ್ಟ್ ಮತ್ತು ಗ್ರಾಹಕ ಸಂರಕ್ಷಣಾ ಕಾಯ್ದೆಗೆ ವಿರುದ್ಧ ಎಂದು ವಾದಿಸಿತ್ತು ಐಎಂಎ.

5.ರಾಮ್‌ದೇವ್ ಹೇಳಿಕೆಗಳ ವಿವರವನ್ನೂ ಅರ್ಜಿ ಒಳಗೊಂಡಿತ್ತು. ಅಲೋಪಥಿಯ ಬಗ್ಗೆ ಕೆಟ್ಟದಾಗಿ ಟೀಕಿಸಿದ್ದ ಹೇಳಿಕೆ, ಕೋವಿಡ್ ವೇಳೆ ಅಲೋಪಥಿ ಔಷಧದಿಂದಾಗಿ ಜನರು ಸಾಯುತ್ತಿದ್ಧಾರೆ ಎಂಬ ಆಧಾರರಹಿತ ಹೇಳಿಕೆ.

6.ಕೋವಿಡ್ ಲಸಿಕೆ ವಿರುದ್ಧ ತಪ್ಪು ಮಾಹಿತಿ ಮತ್ತು ದಾರಿ ತಪ್ಪಿಸುವ ಹೇಳಿಕೆ ನೀಡಿದ್ದ ಆರೋಪವೂ ರಾಮ್‌ದೇವ್ ಮೇಲಿತ್ತು.

7.ಕೋವಿಡ್ ವೇಳೆ ಆಕ್ಸಿಜನ್ ಸಿಗದೆ ಪರದಾಡಿದವರ ಬಗ್ಗೆ ರಾಮ್‌ದೇವ್ ಅಪಹಾಸ್ಯ ಮಾಡಿದ್ದರು ಎಂಬ ಆರೋಪವೂ ಇತ್ತು.

ಆದರೆ ಇಂತಹ ವ್ಯಕ್ತಿಗೆ ಮೋದಿ ಸರಕಾರ ರಿಯಾಯಿತಿ ಕೊಡುತ್ತಲೇ ಬಂದಿದೆ. ಹಾಗಾಗಿ ಸುಪ್ರೀಂ ಕೋರ್ಟ್ ಸೂಚನೆಯನ್ನೂ ಅಲಕ್ಷಿಸುವ ಮಟ್ಟಿಗೆ ಅವರು ಬೆಳೆದುಬಿಟ್ಟಿದ್ದಾರೆ.

ಇಲ್ಲಿ ಗಮನಿಸಬೇಕಿರುವುದು, ಮೋದಿ ಮತ್ತು ರಾಮ್‌ದೇವ್ ಇಬ್ಬರೂ ಹಿಂದುತ್ವ ಬಲಪಂಥೀಯ ವಾದದ ಮೂಲಕ ಮುನ್ನೆಲೆಗೆ ಬಂದವರು. ಇಬ್ಬರೂ ಒಬ್ಬರ ನೆರವಿನಿಂದ ಮತ್ತೊಬ್ಬರು ಯಶಸ್ಸು ಸಾಧಿಸಿದವರು. ಮೋದಿ ಬೆಳವಣಿಗೆಗೆ ಬಾಬಾ ರಾಮ್‌ದೇವ್ ಕೊಡುಗೆ ಬಗ್ಗೆ ‘ನ್ಯೂಯಾರ್ಕ್ ಟೈಮ್ಸ್’ ದೊಡ್ಡದೊಂದು ಲೇಖನವನ್ನೇ 2018ರಲ್ಲಿ ಪ್ರಕಟಿಸಿತ್ತು.

2010ರ ಬಳಿಕ ರಾಮ್‌ದೇವ್ ಅತ್ಯಂತ ವ್ಯವಸ್ಥಿತವಾಗಿ ಹಿಂದುತ್ವದ ಪ್ರಮುಖ ಧ್ವನಿಯಾಗಿ ಬಿಂಬಿತವಾಗಿಬಿಟ್ಟಿರುವುದು ಗೊತ್ತೇ ಇದೆ.

2014ರ ಚುನಾವಣೆಗೆ ಮೊದಲು ಹಾಗೂ ಚುನಾವಣಾ ಪ್ರಚಾರದ ವೇಳೆ ಮೋದಿ ಪರ ಅಲೆ ನಿರ್ಮಿಸುವಲ್ಲಿ ರಾಮ್‌ದೇವ್ ಪಾತ್ರ ದೊಡ್ಡದಿತ್ತು ಎಂಬುದೂ ರಹಸ್ಯವೇನಲ್ಲ.

ಮೊದಲು ಯೋಗದ ಹೆಸರಿನಲ್ಲಿ ಟಿವಿ ಶೋ ಮೂಲಕ ಮಿಂಚುತ್ತಿದ್ದ ರಾಮ್‌ದೇವ್ ಅದೇ ಜನಪ್ರಿಯತೆಯನ್ನು ಬಳಸಿಕೊಂಡು ಯುಪಿಎ ಸರಕಾರದ ಕೊನೆ ಹಂತದಲ್ಲಿ ಭ್ರಷ್ಟಾಚಾರದ ವಿರುದ್ಧ, ಕಪ್ಪು ಹಣದ ವಿರುದ್ಧ ಮಾತಾಡಲು ಪ್ರಾರಂಭಿಸಿದರು. ಅಣ್ಣಾ ಹಝಾರೆ ಜೊತೆ ಭ್ರಷ್ಟಾಚಾರ ವಿರೋಧಿ ಆಂದೋಲನದಲ್ಲಿ ಕಾಣಿಸಿಕೊಂಡರು. ಟಿವಿ ಚಾನಲ್‌ಗಳು ಈ ವ್ಯಕ್ತಿಗೆ ಇನ್ನಿಲ್ಲದ ಪ್ರಚಾರ ಕೊಟ್ಟವು. ಇವರ ಹೇಳಿಕೆಗಳು, ಕಾರ್ಯಕ್ರಮಗಳು ಗಂಟೆಗಟ್ಟಲೆ ನೇರ ಪ್ರಸಾರವಾಗುತ್ತಿದ್ದವು. ಆಗ ಇದೊಂದು ವ್ಯವಸ್ಥಿತ ಅಪಪ್ರಚಾರ ಅಭಿಯಾನ, ಇದರ ಹಿಂದೆ ಇರುವುದು ಬೇರೆಯೇ ರಾಜಕೀಯ ಅಜೆಂಡಾ ಎಂಬುದು ಹೆಚ್ಚಿನವರಿಗೆ ಗೊತ್ತಾಗಲಿಲ್ಲ.

ಅದೇ ಹೊತ್ತಲ್ಲಿ ಬಿಜೆಪಿಯೊಳಗೆ ಮೋದಿ ರಾಷ್ಟ್ರೀಯ ನಾಯಕರಾಗಿ ಬಿಂಬಿಸಿಕೊಳ್ಳುತ್ತಿದ್ದರು. ಕೊನೆಗೆ ಅವರೇ ಪ್ರಧಾನಿ ಅಭ್ಯರ್ಥಿಯಾದರು. ಆಗ ಬೇರೆ ಬೇರೆ ಸಂದರ್ಭಗಳಲ್ಲಿ ಮೋದಿಯೊಂದಿಗೆ ಕಾಣಿಸಿಕೊಂಡು, ಅವರನ್ನು ಹಾಡಿ ಹೊಗಳಿ, ತನ್ನ ಯೋಗ ಅಭಿಮಾನಿಗಳನ್ನು, ದೇಶದ ಮತದಾರರನ್ನು ಇವರು ಮೋದಿ ಕಡೆಗೆ ತಿರುಗಿಸಿದರು.

2014ರ ಚುನಾವಣೆಯಲ್ಲಿ ಬಿಜೆಪಿ ಪರ ಪ್ರಚಾರ ಮಾಡಿದ್ದಕ್ಕೆ ಅಮಿತ್ ಶಾ ಬಹಿರಂಗವಾಗಿಯೇ ಬಾಬಾ ರಾಮ್‌ದೇವ್‌ಗೆ ಥ್ಯಾಂಕ್ಸ್ ಹೇಳಿದ್ದರು. ಕೇಂದ್ರದಲ್ಲಿ ನರೇಂದ್ರ ಮೋದಿ ಸರಕಾರ ರಚನೆಗೆ ರಾಮ್‌ದೇವ್ ಕೊಡುಗೆ ಗಣನೀಯ ಎಂದಿದ್ದರು.

ಮೋದಿ ಪ್ರಧಾನಿಯಾಗಿದ್ದೇ ತಡ, ರಾಮ್‌ದೇವ್ ಉಳಿದೆಲ್ಲವನ್ನೂ ಬದಿಗಿಟ್ಟು ಅತ್ಯಂತ ವೇಗವಾಗಿ ಬೃಹತ್ ಉದ್ಯಮ ಸಾಮ್ರಾಜ್ಯವನ್ನೇ ಸ್ಥಾಪಿಸಿ ಬಿಟ್ಟರು.

ಮೋದಿ ಅಧಿಕಾರಕ್ಕೆ ಬಂದಾಗಿನಿಂದಲೂ ರಾಮ್‌ದೇವ್ ಕಂಪೆನಿ ಬಿಜೆಪಿ ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ಸುಮಾರು 46 ಮಿಲಿಯನ್ ಡಾಲರ್‌ಗೂ ಹೆಚ್ಚಿನ ರಿಯಾಯಿತಿಗಳನ್ನು ಪಡೆದಿರುವ ಬಗ್ಗೆ ರಾಯ್ಟರ್ಸ್ ವರದಿ ಹೇಳಿದೆ. ಹಾಗೆಯೇ, ಆತ ಶೆಲ್ ಕಂಪೆನಿಗಳ ಮೂಲಕ ದಿಲ್ಲಿಗೆ ಸಮೀಪದ, ಹರ್ಯಾಣದ ಮಂಗರ್ ಗ್ರಾಮದಲ್ಲಿ ಕೋಟ್ಯಂತರ ಮೌಲ್ಯದ ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ತೊಡಗಿರುವ ವಿಚಾರವನ್ನು ರಿಪೋರ್ಟರ್ಸ್ ಕಲೆಕ್ಟಿವ್ ತನಿಖಾ ವರದಿ ಬಯಲು ಮಾಡಿದೆ.

ಕಳೆದ 15 ವರ್ಷಗಳಿಗೂ ಹೆಚ್ಚಿನ ಕಾರ್ಪೊರೇಟ್ ಮತ್ತು ಭೂದಾಖಲೆಗಳನ್ನು ರಿಪೋರ್ಟರ್ಸ್ ಕಲೆಕ್ಟಿವ್ ಪರಿಶೀಲಿಸಿದ್ದು, ಇದು ಸಂಶಯಾಸ್ಪದ ಶೆಲ್ ಕಂಪೆನಿಗಳು ಹಾಗೂ ಭೂಮಿಯ ಅಂತಿಮ ಖರೀದಿದಾರ ಕಂಪೆನಿಯಾಗಿರುವ ಪತಂಜಲಿ ನಡುವಿನ ಸ್ಪಷ್ಟ ಸಂಪರ್ಕವನ್ನು ಬಯಲಾಗಿಸಿದೆ. ಪತಂಜಲಿ ಸಮೂಹವು ವಿವಿಧ ಶೆಲ್ ಕಂಪೆನಿಗಳ ಮೂಲಕ ಮಂಗರ್ ಗ್ರಾಮದಲ್ಲಿ 123 ಎಕರೆಗೂ ಹೆಚ್ಚು ಭೂಮಿಯನ್ನು ಹೊಂದಿರುವುದನ್ನು ಹರ್ಯಾಣದ ಇತ್ತೀಚಿನ ಡಿಜಿಟಲ್ ಭೂ ದಾಖಲೆಗಳು ಮತ್ತು ಕಾರ್ಪೊರೇಟ್ ದಾಖಲೆಗಳು ಬಹಿರಂಗಪಡಿಸುತ್ತದೆ ಎಂದು ವರದಿ ಹೇಳಿದೆ. ಅರಣ್ಯ ಸಂರಕ್ಷಣಾ ಕಾಯ್ದೆಯ ತಿದ್ದುಪಡಿ ಬಳಿಕ ಬಾಬಾ ರಾಮ್‌ದೇವ್ ಪಾಲಿಗೆ ಇನ್ನಷ್ಟು ಅನುಕೂಲವಾಗಿದೆ ಎಂಬುದರ ಕಡೆ ವರದಿ ಗಮನ ಸೆಳೆದಿದೆ.

ಕಪ್ಪುಹಣ ನಿರ್ಮೂಲನೆ ಮಾಡುವುದಾಗಿ ಪ್ರತಿಪಾದಿಸಿದ್ದ ನರೇಂದ್ರ ಮೋದಿಯವರಿಗೆ ಬೆಂಬಲಿಸುತ್ತಲೇ ತನ್ನ ಉದ್ಯಮವನ್ನು ರಾಮ್‌ದೇವ್ ಬೆಳೆಸಿದ್ದನ್ನು ಕೂಡ ವರದಿ ಪ್ರಸ್ತಾಪಿಸಿದೆ. 2011ರಿಂದ 2014ರ ಅವಧಿಯಲ್ಲಿ ಮೋದಿ ಪರವಾಗಿ ಸಕ್ರಿಯವಾಗಿ ಪ್ರಚಾರ ಮಾಡಿದ್ದನ್ನೂ, ಅಣ್ಣಾ ಹಝಾರೆ ನೇತೃತ್ವದ ಭ್ರಷ್ಟಾಚಾರ ವಿರೋಧಿ ಆಂದೋಲನವನ್ನು ಬೆಂಬಲಿಸಿದ್ದನ್ನೂ ವರದಿ ಉಲ್ಲೇಖಿಸಿದೆ.

ಬಿಜೆಪಿ ಅಧಿಕಾರ ಹಿಡಿದ ನಂತರ ರಾಮದೇವ್ ಉದ್ಯಮದ ಏರುಗತಿ ಜೋರಾಗಿದ್ದು ಕೂಡ ಕಣ್ಣು ಕುಕ್ಕುವಷ್ಟು ಮಟ್ಟಿಗಿದೆ. ಹಣಕಾಸು ದಾಖಲಾತಿಗಳ ಪ್ರಕಾರ, ಅವರ ಉದ್ಯಮದಲ್ಲಿನ ಆದಾಯ ಮಾರ್ಚ್ 2013ರಲ್ಲಿ ಸುಮಾರು 156 ಮಿಲಿಯನ್ ಡಾಲರ್ ಇದ್ದದ್ದು ಮಾರ್ಚ್ 2015ರಲ್ಲಿ 322 ಮಿಲಿಯನ್ ಡಾಲರ್‌ಗಿಂತಲೂ ಹೆಚ್ಚಿತ್ತು. 2017ರ ಹೊತ್ತಿಗೆ ಆದಾಯ ಸುಮಾರು 1.6 ಶತಕೋಟಿ ಡಾಲರ್‌ಗೆ ಏರಿದ್ದನ್ನು ಅವರೇ ಹೇಳಿಕೊಂಡಿದ್ದ ವರದಿಗಳಿವೆ.

ಯೋಗ ಮಾಡಿಸುತ್ತಿದ್ದ ಹಾಗೂ ಸಾಮಾಜಿಕ, ಧಾರ್ಮಿಕ ಸಂದೇಶ ನೀಡುತ್ತಿದ್ದ ವ್ಯಕ್ತಿ ಮೋದಿ ಅಧಿಕಾರಕ್ಕೆ ಬಂದ ಮೇಲೆ ದೇಶದ ಅತ್ಯಂತ ದೊಡ್ಡ ಉದ್ಯಮಿಗಳಲ್ಲಿ ಒಬ್ಬನಾಗಿ ಬದಲಾಗಿಬಿಟ್ಟರು.

ಕೊರೋನ ಕಾಲದಲ್ಲಿ ರಾಮ್‌ದೇವ್ ತನ್ನ ಕಂಪೆನಿ ಉತ್ಪಾದಿಸಿರುವ ಕೊರೊನಿಲ್ ಎಂಬ ಔಷಧ ಕೊರೋನಕ್ಕೆ ರಾಮ ಬಾಣ ಎಂದರು. ಮೋದಿ ಸರಕಾರದ ಆರೋಗ್ಯ ಸಚಿವರೇ ಮುಂದೆ ನಿಂತು ಆ ಔಷಧಕ್ಕೆ ಪ್ರಚಾರ ನೀಡಿದರು. ಅಷ್ಟೇ ಅಲ್ಲ ಆಗ ಸರಕಾರದ ಚಿಕಿತ್ಸಾ ಮಾರ್ಗಸೂಚಿಗಳನ್ನೇ ಈ ರಾಮ್ ದೇವ್ ಅಪಹಾಸ್ಯ ಮಾಡಿದ್ದರು. ಅಲೋಪಥಿ ಔಷಧಗಳಿಂದ ಜನರು ಸಾಯುತ್ತಿದ್ದಾರೆ ಎಂದು ಅಪಪ್ರಚಾರ ಮಾಡಿದ್ದರು.

ಅದರ ಬಗ್ಗೆ ಐಎಂಎ ತೀವ್ರ ಅಸಮಾಧಾನ ವ್ಯಕ್ತಪಡಿಸಿತ್ತು. ಕೋವಿಡ್ ಅನ್ನು ಕೊರೊನಿಲ್ ಗುಣಪಡಿಸುವುದಾದರೆ ಸರಕಾರ ಕೋವಿಡ್ ಲಸಿಕೆಗಾಗಿ 35 ಸಾವಿರ ಕೋಟಿ ಖರ್ಚು ಯಾಕೆ ಮಾಡುತ್ತಿದೆ? ಎಂದು ಅದು ಕೇಳಿತ್ತು. ಆ ಔಷಧದ ಬಗ್ಗೆ ಸ್ಪಷ್ಟ ಪುರಾವೆ ಇಲ್ಲದಿರುವಾಗ ಆರೋಗ್ಯ ಮಂತ್ರಿ ಅದನ್ನು ಪ್ರಚಾರ ಮಾಡುವುದು ಸೂಕ್ತವೇ? ಎಂದು ಕೇಳಿತ್ತು. ಕೊನೆಗೆ ಆತನ ಕೊರೊನಿಲ್ ಯಾವುದೇ ಸೂಕ್ತ ಪರೀಕ್ಷೆಗಳನ್ನು ನಡೆಸದೆ ಮಾರುಕಟ್ಟೆಗೆ ಬಂದಿರುವ ನಕಲಿ ಔಷಧಿ ಎಂಬುದು ಸಾಬೀತಾಯಿತು. ಆದರೆ ಅಷ್ಟು ದೊಡ್ಡ ಮೋಸಕ್ಕೆ ಅವರ ವಿರುದ್ಧ ಯಾವುದೇ ಕ್ರಮವಾಗಲೇ ಇಲ್ಲ.

ಬಿಜೆಪಿ ಹಾಗೂ ಮೋದಿ ಜೊತೆಗಿನ ಆತನ ಸಖ್ಯ ಆತನ ಉದ್ಯಮ ಸಾಮ್ರಾಜ್ಯವನ್ನು ಬೆಳೆಸುತ್ತಲೇ ಇದೆ. ಈಗ ಅವರು ಸಾವಿರಾರು ಕೋಟಿ ರೂಪಾಯಿಗಳ ಉದ್ಯಮ ಸಾಮ್ರಾಜ್ಯದ ಒಡೆಯ. ಸಾವಿರಾರು ಎಕರೆ ಭೂಮಿಯ ಬೇನಾಮಿ ಮಾಲಕ. ಈಗ ರಾಮ್‌ದೇವ್ ಕಪ್ಪು ಹಣ ವಾಪಸ್ ತರುವ ಬಗ್ಗೆ, ಭ್ರಷ್ಟಾಚಾರದ ಬಗ್ಗೆ ಮಾತೇ ಆಡುವುದಿಲ್ಲ. ಏಕೆಂದರೆ ಸ್ವತಃ ಆತನೇ ದೊಡ್ಡ ಕಪ್ಪು ಹಣದ ಕುಳವಾಗಿ ಮಾರ್ಪಾಡಾಗಿದ್ದು, ಮಹಾ ಭ್ರಷ್ಟ ನೀತಿಗಳನ್ನು ಅಳವಡಿಸಿಕೊಂಡ ಉದ್ಯಮಿಯಾಗಿದ್ದಾರೆ.

ರಾಮ್‌ದೇವ್‌ರನ್ನು ಪ್ರಶ್ನಿಸಬೇಕಾದ ದೇಶದ ಪ್ರಮುಖ ಚಾನೆಲ್‌ಗಳು ಹಾಗೂ ಪತ್ರಿಕೆಗಳು ಆತ ಕೊಡುವ ಜಾಹೀರಾತುಗಳಿಗೆ ಮುಗಿಬಿದ್ದು ಅವರಿಗೆ ಬೇಕಾಬಿಟ್ಟಿ ಪ್ರಚಾರ ಕೊಡುತ್ತಿವೆ. ರಾಮ್‌ದೇವ್‌ನಿಂದಲೇ ಕೋಟಿ ಕೋಟಿ ರೂಪಾಯಿಯ ಜಾಹೀರಾತು ಬಾಚುವ ಈ ಮಾಧ್ಯಮಗಳು ರಾಮ್‌ದೇವ್‌ಗೆ ಪ್ರಶ್ನೆ ಕೇಳುವುದಾದರೂ ಹೇಗೆ?

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಪ್ರವೀಣ್ ಎನ್.

contributor

Similar News