ಎ ಡಿವಿಜನ್‌ನಲ್ಲಿ ಚಾಂಪಿಯನ್ ಪಟ್ಟಕ್ಕೇರಿದ ಮಹಿಳಾ ಫುಟ್ಬಾಲ್ ಕ್ಲಬ್

ಯುನೈಟೆಡ್ ಎಫ್‌ಸಿ ಕೊಡಗು ತಂಡದ ಮುಖ್ಯ ತರಬೇತುದಾರನಾಗಿ ಸಂಸ್ಥಾಪಕ ಎಚ್.ಎಚ್. ಹರೀಶ್ ಹಾಗೂ ಸಹ ತರಬೇತುದಾರನಾಗಿ ಗೋಣಿಕೊಪ್ಪಲಿನ ಎಸ್.ಅರವಿಂದ್ ಕಾರ್ಯ ನಿರ್ವಹಿಸುತ್ತಿದ್ದಾರೆ. ಯುನೈಟೆಡ್ ಎಫ್‌ಸಿ ಕೊಡಗು ತಂಡದಲ್ಲಿ ಸೀಗೆಹೊಸೂರು ಗ್ರಾಮದ ಪುಲಿಯಂಡ ಮಾನಸ ಜೋಯಪ್ಪ, ಕುಶಾಲನಗರದ ನಂದಿನಿ ಎಂ.ವಿ., ಮಾಯುಮುಡಿ ಗ್ರಾಮದ ಎಂ. ಪ್ರಜ್ಞಾ ಪೂಣಚ್ಚ ಹಾಗೂ ಮರಗೋಡುವಿನ ಸುಶ್ಮಿತಾ ಎಂ.ವಿ. ಸ್ಥಾನ ಪಡೆದಿದ್ದಾರೆ.

Update: 2024-03-21 06:32 GMT

ಮಡಿಕೇರಿ: ಕ್ರೀಡಾ ತವರು ಕೊಡಗು ಜಿಲ್ಲೆಯಲ್ಲಿ ಇತ್ತೀಚಿನ ವರ್ಷಗಳಲ್ಲಿ ಬಹುತೇಕರು ಫುಟ್ಬಾಲ್ ಕ್ರೀಡೆಯತ್ತ ಹೆಚ್ಚು ಆಸಕ್ತಿ ವಹಿಸಿದ್ದಾರೆ. ಅದಲ್ಲದೆ ಜಿಲ್ಲೆಯಲ್ಲಿ ಕಾಲ್ಚೆಂಡು ಆಟ ವೇಗವಾಗಿ ಬೆಳೆಯುತ್ತಿದೆ.

ಜಿಲ್ಲೆಯ ವೀರಾಜಪೇಟೆ ತಾಲೂಕಿನ ಪಾಲಿಬೆಟ್ಟದ ಕ್ಯಾಪ್ಟನ್ಸ್ ಇಲೆವೆನ್ ತಂಡದಲ್ಲಿ ಆಡಿ ಫುಟ್ಬಾಲ್ ಆಟ ಕಲಿತು, ಬೆಂಗಳೂರಿನಲ್ಲಿ ನಕ್ಷತ್ರ ಫುಟ್ಬಾಲ್ ಅಕಾಡಮಿ ಸ್ಥಾಪಿಸಿ, ಮೂರು ವರ್ಷಗಳ ಹಿಂದೆ ಕೊಡಗು ಜಿಲ್ಲೆಯ ಇತಿಹಾಸದಲ್ಲೇ ಮೊದಲ ಬಾರಿಗೆ ಮಹಿಳಾ ಫುಟ್ಬಾಲ್ ಕ್ಲಬ್ ಸ್ಥಾಪಿಸಿರುವ ಎಚ್.ಎಚ್. ಹರೀಶ್ ಅವರ ಯುನೈಟೆಡ್ ಎಫ್‌ಸಿ ಕೊಡಗು ಮಹಿಳಾ ಫುಟ್ಬಾಲ್ ಕ್ಲಬ್ ಇದೀಗ ಹೊಸ ಇತಿಹಾಸವನ್ನು ಸೃಷ್ಟಿಸಿದ್ದು,ಕರ್ನಾಟಕ ರಾಜ್ಯ ಫುಟ್ಬಾಲ್ ಸಂಸ್ಥೆಯ ಅಧೀನದಲ್ಲಿ ಬೆಂಗಳೂರಿನಲ್ಲಿ ನಡೆಯುವ ಪ್ರತಿಷ್ಠಿತ ಫುಟ್ಬಾಲ್ ಲೀಗ್‌ಗಳಲ್ಲಿ ಒಂದಾಗಿರುವ ಕರ್ನಾಟಕ ಸೂಪರ್ ಡಿವಿಶನ್ ಫುಟ್ಬಾಲ್ ಲೀಗ್ ಅರ್ಹತೆ ಪಡೆದುಕೊಂಡಿದೆ.

ಇತ್ತೀಚೆಗೆ ಮುಕ್ತಾಯಗೊಂಡ ಎ ಡಿವಿಷನ್ ಮಹಿಳಾ ಫುಟ್ಬಾಲ್ ಲೀಗ್‌ನಲ್ಲಿ ಯುನೈಟೆಡ್ ಎಫ್‌ಸಿ ಕೊಡಗು ತಂಡವು ಚಾಂಪಿಯನ್ ಪಟ್ಟವನ್ನು ಪಡೆದುಕೊಳ್ಳುವುದರ ಮೂಲಕ ಇದೇ ಮೊದಲ ಬಾರಿಗೆ ಸೂಪರ್ ಡಿವಿಶನ್ ಫುಟ್ಬಾಲ್ ಪಂದ್ಯಾವಳಿಗೆ ಆಯ್ಕೆಯಾಗಿದೆ.

2021ರಲ್ಲಿ ಯುನೈಟೆಡ್ ಎಫ್‌ಸಿ ಕೊಡಗು ತಂಡವು ಎ ಡಿವಿಶನ್‌ಗೆ ಪಾದರ್ಪಣೆ ಮಾಡಿತ್ತು.ಕೊಡಗು ಜಿಲ್ಲೆಯ ಇತಿಹಾಸದಲ್ಲಿ ಮೊದಲ ಬಾರಿಗೆ ಎ ಡಿವಿಶನ್ ಲೀಗ್‌ನಲ್ಲಿ ಆಡಿದ ಹೆಗ್ಗಳಿಕೆಯೂ ಯುನೈಟೆಡ್ ಎಫ್‌ಸಿ ಕೊಡಗು ತಂಡಕ್ಕೆ ಸಲ್ಲುತ್ತದೆ. ಸತತ ಮೂರು ವರ್ಷಗಳ ಪ್ರಯತ್ನದಿಂದ ಯುನೈಟೆಡ್ ಎಫ್‌ಸಿ ಕೊಡಗು ತಂಡವು ರಾಜ್ಯದ ಪ್ರತಿಷ್ಠಿತ ಸೂಪರ್ ಡಿವಿಶನ್ ಮಹಿಳಾ ಲೀಗ್ ಪಂದ್ಯಾವಳಿಗೆ ಅರ್ಹತೆ ಪಡೆದು ಕೊಂಡಿರುವುದು ಕ್ರೀಡಾ ತವರು ಕೊಡಗು ಜಿಲ್ಲೆಯ ಫುಟ್ಬಾಲ್ ಇತಿಹಾಸದಲ್ಲಿ ಹೊಸ ಮೈಲಿಗಲ್ಲಾಗಿದೆ.

ಕಷ್ಟಗಳನ್ನು ಮೆಟ್ಟಿನಿಂತು ಯುನೈಟೆಡ್ ಕೊಡಗು ಎಫ್‌ಸಿ ಸ್ಥಾಪನೆ

2021ರಲ್ಲಿ ಸ್ಥಾಪನೆಯಾದ ಯುನೈಟೆಡ್ ಎಫ್‌ಸಿ ಕೊಡಗು ಮಹಿಳಾ ಫುಟ್ಬಾಲ್ ಕ್ಲಬ್ ಬೆಂಗಳೂರಿನ ಪ್ರತಿಷ್ಠಿತ ಫುಟ್ಬಾಲ್ ಕ್ಲಬ್‌ಗಳ ಮಧ್ಯೆ ಬೆಳೆದು ಬಂದಿರುವುದು ಹೆಮ್ಮೆಯ ವಿಷಯವಾಗಿದೆ. ಕೊಡಗಿನಿಂದ ಬೆಂಗಳೂರಿನಲ್ಲಿ ನಡೆಯುವ ರಾಜ್ಯಮಟ್ಟದ ಲೀಗ್ ಪಂದ್ಯಾವಳಿಯಲ್ಲಿ ಸ್ವಂತ ತಂಡವನ್ನು ಕಟ್ಟಿ ತರಬೇತಿ ನೀಡಿ, ಭಾಗವಹಿಸುವುದು ಕಷ್ಟಸಾಧ್ಯ. ದೊಡ್ಡ ಆರ್ಥಿಕ ಸಂಪನ್ಮೂಲದ ಅಗತ್ಯವೂ ಇದೆ. ಆದರೆ ಎಲ್ಲ ಸವಾಲುಗಳನ್ನು ಮೆಟ್ಟಿನಿಂತು ಎಚ್.ಎಚ್. ಹರೀಶ್ ಅವರು ಯುನೈಟೆಡ್ ಎಫ್‌ಸಿ ಕೊಡಗು ಮಹಿಳಾ ತಂಡವನ್ನು ಕಟ್ಟಿ ಬೆಂಗಳೂರಿನಲ್ಲಿ ಹೊಸ ಫುಟ್ಬಾಲ್ ಇತಿಹಾಸವನ್ನು ಸೃಷ್ಟಿಸಿದ್ದಾರೆ.

ಸತತ ಗೆಲುವು, ಚಾಂಪಿಯನ್ ಪಟ್ಟ

ಫೆಬ್ರವರಿ 5 ರಿಂದ 28ರವರೆಗೆ ಬೆಂಗಳೂರಿನ ರಾಜ್ಯ ಫುಟ್ಬಾಲ್ ಸಂಸ್ಥೆಯ ಮೈದಾನದಲ್ಲಿ ನಡೆದ ಎ ಡಿವಿಶನ್ ಲೀಗ್‌ನಲ್ಲಿ ಯುನೈಟೆಡ್ ಎಫ್‌ಸಿ ಕೊಡಗು ತಂಡವು 5 ಪಂದ್ಯಗಳನ್ನು ಗೆದ್ದು ಒಂದು ಪಂದ್ಯವನ್ನು ಡ್ರಾ ಮಾಡಿ ಚಾಂಪಿಯನ್ ಪಟ್ಟವನ್ನು ಅಲಂಕರಿಸುವುದರ ಮೂಲಕ ಬೆಂಗಳೂರಿನ ಫುಟ್ಬಾಲ್‌ನಲ್ಲಿ ಹೊಸ ಇತಿಹಾಸ ಬರೆದಿದೆ.

ಸದುಪಯೋಗ ಪಡೆದುಕೊಳ್ಳದ ಜಿಲ್ಲೆಯ ಮಹಿಳಾ ಆಟಗಾರ್ತಿಯರು

ಕೊಡಗು ಜಿಲ್ಲೆಯಲ್ಲಿ ಮಹಿಳಾ ಫುಟ್ಬಾಲ್ ಕ್ಲಬ್‌ಗಳಿಲ್ಲ. ಜಿಲ್ಲೆಯಲ್ಲಿ ಮಹಿಳೆಯರ ಫುಟ್ಬಾಲ್ ತಂಡಗಳ ನಡುವೆ ಯಾವುದೇ ಪಂದ್ಯಾಟಗಳು ನಡೆಯುತ್ತಿಲ್ಲ. ಇದೆಲ್ಲವನ್ನೂ ಮನಗಂಡು ಯುನೈಟೆಡ್ ಎಫ್‌ಸಿ ಕೊಡಗು ಮಹಿಳಾ ಫುಟ್ಬಾಲ್ ಕ್ಲಬ್ ಸ್ಥಾಪಿಸಿರುವ ಹರೀಶ್ ಅವರು ಕೊಡಗು ಜಿಲ್ಲೆಯ ಯುವ ಮಹಿಳಾ ಫುಟ್ಬಾಲ್ ಆಟಗಾರ್ತಿಯರಿಗೆ ಉತ್ತಮ ವೇದಿಕೆ ಒದಗಿಸಿದ್ದಾರೆ. ಆದರೆ, ಜಿಲ್ಲೆಯ ಮಹಿಳಾ ಫುಟ್ಬಾಲ್ ಆಟಗಾರ್ತಿಯರು ನಿರೀಕ್ಷಿತ ಮಟ್ಟದಲ್ಲಿ ಸ್ಪಂದಿಸದಿರುವುದು ಬೇಸರ ಸಂಗತಿಯಾಗಿದೆ.

ಮಂಗಳೂರಿನ ನಾಲ್ವರು, ಬೆಳಗಾವಿ 5, ಉತ್ತರ ಕನ್ನಡ 2,ಹುಬ್ಬಳ್ಳಿ 1,ಧಾರವಾಡ 1,ಬೆಂಗಳೂರು 1 ಹಾಗೂ ಪಂಜಾಬ್ ರಾಜ್ಯದಿಂದ ಓರ್ವ ಮಹಿಳಾ ಆಟಗಾರ್ತಿ ಯುನೈಟೆಡ್ ಎಫ್‌ಸಿ ಕೊಡಗು ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಕೊಡಗು ಜಿಲ್ಲೆಯ ಮಹಿಳಾ ಆಟಗಾರರಿಗೆ ಮೊದಲ ಆದ್ಯತೆ ನೀಡಲಾಗುವುದೆಂದು ತಂಡದ ಮುಖ್ಯ ತರಬೇತುದಾರ ಹಾಗೂ ಸಂಸ್ಥಾಪಕ ಎಚ್.ಎಚ್. ಹರೀಶ್ ತಿಳಿಸಿದ್ದಾರೆ.

ಯುನೈಟೆಡ್ ಎಫ್‌ಸಿ ಕೊಡಗು ಮಹಿಳಾ ಫುಟ್ಬಾಲ್ ಕ್ಲಬ್ ಎ ಡಿವಿಶನ್ ಲೀಗ್‌ನಲ್ಲಿ ಚಾಂಪಿಯನ್ ಆಗುವುದರ ಮೂಲಕ ಕರ್ನಾಟಕ ಸೂಪರ್ ಡಿವಿಶನ್‌ಗೆ ಆಯ್ಕೆಯಾಗಿದೆ. ಮಹಿಳಾ ಆಟಗಾರರಿಗೆ ಎಲ್ಲ ರೀತಿಯ ಉಚಿತ ವಸತಿ ಸೌಕರ್ಯ ನೀಡಲಾಗುತ್ತಿದೆ. ಕೊಡಗು ಜಿಲ್ಲೆಯ ಮಹಿಳಾ ಆಟಗಾರರಿಗೆ ಮೊದಲ ಆದ್ಯತೆ ನೀಡಲಾಗುವುದು. ಆದರೆ ಜಿಲ್ಲೆಯ ಮಹಿಳಾ ಫುಟ್ಬಾಲ್ ಆಟಗಾರ್ತಿಯರು ಮುಂದೆ ಬರುತ್ತಿಲ್ಲ. ಕೊಡಗು ಜಿಲ್ಲೆಯಲ್ಲಿ ಅತ್ಯುತ್ತಮ ಮಹಿಳಾ ಫುಟ್ಬಾಲ್ ಆಟಗಾರ್ತಿಯರು ಇದ್ದಾರೆ. ರಾಜ್ಯಮಟ್ಟದ ಲೀಗ್ ಪಂದ್ಯಾವಳಿಯಲ್ಲಿ ಸಂಪೂರ್ಣ ಕೊಡಗಿನ ಆಟಗಾರ್ತಿಯರನ್ನೊಳಗೊಂಡ ಯುನೈಟೆಡ್ ಎಫ್‌ಸಿ ಕೊಡಗು ತಂಡವನ್ನು ಕಟ್ಟಬೇಕೆಂಬ ಕನಸು ಹೊಂದಿದ್ದೇನೆ. ಕೊಡಗು ಜಿಲ್ಲಾ ಫುಟ್ಬಾಲ್ ಅಸೋಸಿಯೇಷನ್ ಉತ್ತಮ ರೀತಿಯ ಸಹಕಾರ ನೀಡುತ್ತಿದೆ.

-ಎಚ್.ಎಚ್. ಹರೀಶ್ ಪಾಲಿಬೆಟ್ಟ, ಯುನೈಟೆಡ್ ಎಫ್‌ಸಿ ತಂಡದ ಸ್ಥಾಪಕ

ಯುನೈಟೆಡ್ ಎಫ್‌ಸಿ ಕೊಡಗು ಮಹಿಳಾ ಫುಟ್ಬಾಲ್ ಕ್ಲಬ್ ಈ ಬಾರಿ ಎ ಡಿವಿಶನ್ ಲೀಗ್ ನಲ್ಲಿ ಚಾಂಪಿಯನ್ ಪಟ್ಟವನ್ನು ಪಡೆದುಕೊಂಡು, ಸೂಪರ್ ಡಿವಿಶನ್‌ಗೆ ಆಯ್ಕೆಯಾಗಿದೆ.ಕೊಡಗು ಜಿಲ್ಲೆಗೆ ಮಾತ್ರ ಸೀಮಿತಗೊಂಡರೆ ಫುಟ್ಬಾಲ್‌ನಲ್ಲಿ ಸಾಧನೆ ಮಾಡಲು ಸಾಧ್ಯವಿಲ್ಲ. ಜಿಲ್ಲೆಯ ಯುವ ಮಹಿಳಾ ಫುಟ್ಬಾಲ್ ಆಟಗಾರ್ತಿಯರಿಗೆ ಯುನೈಟೆಡ್ ಎಫ್‌ಸಿ ಕೊಡಗು ತಂಡ ಉತ್ತಮ ವೇದಿಕೆಯಾಗಿದೆ. ಆಟಗಾರರಿಗೆ ಯಾವುದೇ ಖರ್ಚಿಲ್ಲದೆ ಅತ್ಯುತ್ತಮ ವಸತಿಯೊಂದಿಗೆ, ಅಂತರ್‌ರಾಷ್ಟ್ರೀಯ ಮಟ್ಟದ ತರಬೇತಿಯನ್ನು ನೀಡುತ್ತಿದ್ದಾರೆ. ಸೂಪರ್ ಡಿವಿಶನ್ ಲೀಗ್‌ನಲ್ಲಿ ಚಾಂಪಿಯನ್ ಪಟ್ಟವನ್ನು ಅಲಂಕರಿಸುವ ವಿಶ್ವಾಸ ಹೊಂದಿದ್ದೇವೆ.

-ಎಂ.ವಿ. ನಂದಿನಿ ಕುಶಾಲನಗರ, ಯುನೈಟೆಡ್ ಎಫ್‌ಸಿ ಕೊಡಗು ಆಟಗಾರ್ತಿ

Writer - ವಾರ್ತಾಭಾರತಿ

contributor

Editor - jafar sadik

contributor

Byline - ಕೆ.ಎಂ.ಇಸ್ಮಾಯಿಲ್ ಕಂಡಕರೆ

contributor

Similar News