ವಿವಿಪ್ಯಾಟ್ ಮತಗಳ ಸ್ಯಾಂಪಲ್ ಮಾತ್ರ ಎಣಿಸುವುದರ ಬಗ್ಗೆ ದೇವಸಹಾಯಮ್ ಅವರ ತೀವ್ರ ಆಕ್ಷೇಪವೇಕೆ?
ಇವಿಎಂ ಜೊತೆ ಎಲ್ಲ ವಿವಿ ಪ್ಯಾಟ್ ಗಳನ್ನು ಎಣಿಸಬೇಕು ಎಂಬ ಮನವಿ ಬಗ್ಗೆ ಸುಪ್ರೀಮ್ ಕೋರ್ಟ್ ನೋಟಿಸ್ ಜಾರಿಗೊಳಿಸಿದೆ. ನಿವೃತ್ತ ಐಎಎಸ್ ಅಧಿಕಾರಿ ಎಂ.ಜಿ. ದೇವಸಹಾಯಮ್ ಅವರು ಸಿಟಿಜನ್ಸ್ ಕಮಿಷನ್ ಆನ್ ಎಲೆಕ್ಷನ್ ಮೂಲಕ ಈ ದಿಸೆಯಲ್ಲಿ ಬಹುದೊಡ್ಡ ಹೋರಾಟ ನಡೆಸಿದ್ದಾರೆ. ಸಿಟಿಜನ್ಸ್ ಕಮಿಷನ್ ಆನ್ ಎಲೆಕ್ಷನ್ ವಿವಿಪ್ಯಾಟ್‌ಗಳ ಬಗ್ಗೆ ತನಿಖೆಯನ್ನೇ ನಡೆಸಿದೆ. ಸುಪ್ರೀಂ ಕೋರ್ಟ್‌ನ ಮಾಜಿ ನ್ಯಾಯಾಧೀಶ ನ್ಯಾಯಮೂರ್ತಿ ಮದನ್ ಲೋಕೂರ್ ಅವರ ನೇತೃತ್ವದಲ್ಲಿ ಈ ತನಿಖೆ ನಡೆದಿತ್ತು. ಅನೇಕ ತಜ್ಞರು ಆ ಆಯೋಗದಲ್ಲಿದ್ದರು. ಪ್ರಸಕ್ತ ವ್ಯವಸ್ಥೆಯನ್ನು ಬದಲಾಯಿಸುವಂತೆ ಅದರ ವರದಿಯಲ್ಲಿ ಶಿಫಾರಸು ಮಾಡಲಾಗಿದ್ದು, ಈ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ. ಅಸೋಸಿಯೇಷನ್ ಆಫ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್) ಮತ್ತು ದೇವಸಹಾಯಮ್ ವಿವಿಪ್ಯಾಟ್ ವಿಚಾರವಾಗಿ, ಅದರಲ್ಲೂ ಮುಖ್ಯವಾಗಿ ಎಲ್ಲ ವಿವಿಪ್ಯಾಟ್ ಮತಗಳ ಎಣಿಕೆ ಸೇರಿದಂತೆ ಹಲವಾರು ಬೇಡಿಕೆಗಳೊಂದಿಗೆ ನ್ಯಾಯಾಲಯದ ಮೊರೆ ಹೋಗಿದ್ದಾರೆ. ನಾಗರಿಕರ ಮೂಲಭೂತ ಹಕ್ಕಿನ ಪ್ರಶ್ನೆಯನ್ನು ಇದರಲ್ಲಿ ಎತ್ತಲಾಗಿದೆ. ಕೇವಲ ಇವಿಎಂ ಮತಗಳ ಎಣಿಕೆ ಮಾಡುವುದರಿಂದ ಚುನಾವಣೆ ಅಪೂರ್ಣವಾಗುತ್ತದೆ. ವಿವಿಪ್ಯಾಟ್‌ಗಳ ಮತಗಳ ಎಣಿಕೆ ಆಗಬೇಕು ಎಂಬುದು ದೇವಸಹಾಯಮ್ ಅವರ ಪ್ರಬಲ ಪ್ರತಿಪಾದನೆಯಾಗಿದೆ. ‘ದಿ ನ್ಯೂಸ್ ಮಿನಿಟ್’ನ ಧನ್ಯ ರಾಜೇಂದ್ರನ್ ಅವರೊಂದಿಗಿನ ಸಂದರ್ಶನದಲ್ಲಿ ಅವರು ಹೇಳಿರುವ ಕೆಲವು ವಿಚಾರಗಳು ಇಲ್ಲಿವೆ.
ವಿವಿಪ್ಯಾಟ್ ಮತಗಳ ಸ್ಯಾಂಪಲ್ ಅನ್ನು ಮಾತ್ರ ಎಣಿಸುವುದರ ಬಗ್ಗೆ ನಿವೃತ್ತ ಐಎಎಸ್ ಅಧಿಕಾರಿ ಎಂ.ಜಿ. ದೇವಸಹಾಯಮ್ ಅವರ ತೀವ್ರ ಆಕ್ಷೇಪವಿದೆ. ಮತದಾರರು ತಮ್ಮ ಆಯ್ಕೆಯ ಅಭ್ಯರ್ಥಿಯ ಪಕ್ಷದ ಚಿಹ್ನೆಯ ಎದುರಿನ ಬಟನ್ ಒತ್ತುತ್ತಾರೆ. ಆದರೆ ಅದೇನಾಗುತ್ತದೆ ಎಂಬುದು ಮಾತ್ರ ಅವರಿಗೆ ಗೊತ್ತಾಗುವುದಿಲ್ಲ, ಖಚಿತವಾಗುವುದೂ ಇಲ್ಲ. ವಿವಿಪ್ಯಾಟ್ ಸ್ಲಿಪ್ ಕೆಲ ಕ್ಷಣ ಕಾಣಿಸಿಕೊಂಡು ಇಲ್ಲವಾಗುತ್ತದೆ.ವಿವಿಪ್ಯಾಟ್ ಸ್ಲಿಪ್ ನಿಜವಾದ ಮತವಾಗಿರುತ್ತದೆ. ಅದರ ಎಣಿಕೆ ಆಗಬೇಕು ಎಂಬುದು ಅವರ ಒತ್ತಾಯ.
ಚುನಾವಣೆ ನಡೆಸಲು ತಿಂಗಳುಗಟ್ಟಲೆ ತೆಗೆದುಕೊಳ್ಳುವ ಚುನಾವಣಾ ಆಯೋಗ ಮತ ಎಣಿಕೆಗೆ ಯಾಕೆ ಒಂದು ದಿನ ಹೆಚ್ಚು ತೆಗೆದುಕೊಳ್ಳಲು ಮನಸ್ಸು ಮಾಡುವುದಿಲ್ಲ? ಇದು ಅವರ ಪ್ರಶ್ನೆ.
ಅದಕ್ಕೆ ಎರಡು ದಿನವೂ ಬೇಕಿಲ್ಲ. ನಮ್ಮ ಅನುಭವದ ಪ್ರಕಾರ 24 ಗಂಟೆಗಳಿಗಿಂತ ಹೆಚ್ಚು ಸಮಯ ಹಿಡಿಯಲಾರದು. ಇನ್ನು ಸಮಯ ತೆಗೆದುಕೊಂಡರೂ ತೊಂದರೆಯಿಲ್ಲ ಎಂಬುದು ಅವರ ಅಭಿಪ್ರಾಯ.
ವಿವಿಪ್ಯಾಟ್ ಸ್ಲಿಪ್ ಮತದಾರನಿಗೆ ಕಾಣಿಸಿಕೊಂಡ ಬಳಿಕ ಮತಪೆಟ್ಟಿಗೆಗೆ ಬೀಳುತ್ತದೆ. ಆದರೆ ಅದನ್ನು ಮತದಾರ ಒಮ್ಮೆ ಪರಿಶೀಲಿಸಿ ನಂತರ ತಾನೇ ನೇರವಾಗಿ ಮತಪೆಟ್ಟಿಗೆಗೆ ಹಾಕಲು ಅವಕಾಶ ನೀಡುವಂತೆ ಆದೇಶ ಹೊರಡಿಸಬೇಕು ಎಂದು ಕೂಡ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಲಾಗಿರುವ ಅರ್ಜಿಯಲ್ಲಿ ಕೋರಲಾಗಿದೆ. ಆ ಬೇಡಿಕೆ ಯಾಕೆಂಬುದಕ್ಕೂ ದೇವಸಹಾಯಮ್ ಉತ್ತರ ಕೊಟ್ಟಿದ್ದಾರೆ.
ಅವರ ಪ್ರಕಾರ, ಅದು ಪ್ರಜಾಪ್ರಭುತ್ವದ ತತ್ವಕ್ಕೋಸ್ಕರ. ಚುನಾವಣಾ ಪ್ರಕ್ರಿಯೆ ಅನ್ನುವುದು ಪ್ರಜಾಪ್ರಭುತ್ವಕ್ಕಾಗಿ ಇದೆಯೇ ಹೊರತು ರಾಜಕೀಯ ಪಕ್ಷವೊಂದರ ಗೆಲುವಿಗಾಗಿ ಅಲ್ಲ. ಪ್ರಜಾಪ್ರಭುತ್ವದಲ್ಲಿ ಮತದಾರನೇ ಸಾರ್ವಭೌಮ. ಚುನಾವಣೆ ಎನ್ನುವುದು ಜಾತ್ರೆಯಲ್ಲ. ಮತದಾರ ತನ್ನ ಸಾರ್ವಭೌಮತೆಯನ್ನು ತನ್ನ ಪ್ರತಿನಿಧಿಗೆ ಹಸ್ತಾಂತರಿಸುವ ಪ್ರಕ್ರಿಯೆ ಚುನಾವಣೆ. ಹಾಗಾಗಿ ಮತದಾರನಿಗೆ ತಾನು ಹಾಕಿದ ಮತ ತನ್ನ ಆಯ್ಕೆಯ ವ್ಯಕ್ತಿಗೇ ಬಿದ್ದಿದೆಯೇ ಎಂದು ಖಚಿತವಾಗುವುದು ಮುಖ್ಯ. ಈಗಿನ ವ್ಯವಸ್ಥೆಯಲ್ಲಿ ಅದು ಇಲ್ಲವಾಗಿದೆ. ಹಾಗಾಗಿ ಅದರ ಬಗ್ಗೆ ಬೇಡಿಕೆ ಇಡಲಾಗಿದೆ.
ಈಗ ಒಂದು ಕ್ಷೇತ್ರದ ಕೇವಲ ಐದು ವಿವಿಪ್ಯಾಟ್ ಮಾತ್ರ ಎಣಿಕೆಗೆ ತೆಗೆದುಕೊಳ್ಳಲಾಗುತ್ತದೆ. ಆದರೆ ಎಲ್ಲ ವಿವಿಪ್ಯಾಟ್ ಮತಗಳ ಎಣಿಕೆಯಾಗಬೇಕು ಎನ್ನುವುದು ಮತ್ತೊಂದು ಬೇಡಿಕೆ. ಅದರ ಹಿನ್ನೆಲೆಯನ್ನೂ ಅವರು ವಿವರಿಸಿದ್ದಾರೆ.
ಸೆಕ್ಷನ್ 56ರ ನಿಯಮವೇ ಹೇಳುತ್ತದೆ - ವಿವಿಪ್ಯಾಟ್ ಸ್ಲಿಪ್ ಮಾತ್ರವೇ ನಿಜವಾದ ಮತ. ಇವಿಎಂನಲ್ಲಿ ದಾಖಲಾಗುವ ಮತ ಕಣ್ಣಿಗೆ ಕಾಣಿಸದ ಎಲೆಕ್ಟ್ರಾನಿಕ್ ಮೆಮೊರಿ. ಆದರೆ ವಿವಿಪ್ಯಾಟ್ ಸ್ಲಿಪ್ ಅನ್ನು ಮತದಾರ ನೋಡಬಹುದಾಗಿದೆ. ಹಾಗಾಗಿ ಅದನ್ನು ಎಣಿಸಬೇಕು.
ವಿವಿ ಪ್ಯಾಟ್ ಅಂದರೆ ವೋಟರ್ ವೆರಿಫೈಡ್ ಪೇಪರ್ ಆಡಿಟ್ ಟ್ರಯಲ್ (ವಿವಿಪಿಎಟಿ) ಪೇಪರ್ ಸ್ಲಿಪ್. ಅದೇ ನಿಜವಾದ ಮತ. ಕಣ್ಣಿಗೆ ಕಾಣುವುದನ್ನು ಎಣಿಸಬೇಕೇ ಹೊರತು ಕಾಣದ್ದರ ಲೆಕ್ಕ ಕೊಡುವುದಲ್ಲ. ಸ್ಲಿಪ್ ಅನ್ನೇ ಮತದಾರನಿಗೆ ಕೊಡಬೇಕು. ಅಲ್ಲಿಗೆ ಮುಖ್ಯ ಸಮಸ್ಯೆ ಮತ್ತು ತಕರಾರು ನಿವಾರಣೆಯಾಗುತ್ತದೆ. ಮತದಾರ ಆ ಸ್ಲಿಪ್ ತೆಗೆದುಕೊಂಡು ನೋಡಿ, ನಂತರ ಅದನ್ನು ಮತಪೆಟ್ಟಿಗೆಗೆ ಹಾಕುವ ವ್ಯವಸ್ಥೆ ಬೇಕು. ಕೊನೆಗೆ ಅದು ಎಣಿಕೆಯಾಗಬೇಕು.
ಚುನಾವಣಾ ಪ್ರಕ್ರಿಯೆಗೆ ಎರಡು, ಎರಡೂವರೆ ತಿಂಗಳು ತೆಗೆದುಕೊಳ್ಳುತ್ತೀರಿ. ಆದರೆ ಎಣಿಕೆಗೆ ಎರಡು ದಿನ ಯಾಕಾಗದು?
ತಾವು ಹಾಕಿದ ಮತಗಳು ಪೂರ್ತಿಯಾಗಿ ಎಣಿಕೆಯಾಗುತ್ತಿವೆ. ಜನಾದೇಶವನ್ನು ಯಾರೋ ಎಲ್ಲೋ ಕದಿಯುವುದಕ್ಕೆ ಅವಕಾಶವಿಲ್ಲ ಎಂಬುದು ಜನರಿಗೂ ಸಮಾಧಾನ ಕೊಡುವ ಸಂಗತಿಯಾಗುತ್ತದೆ. ಈಗ ಜನರಲ್ಲಿ ಇರುವ ಅನುಮಾನವೇ ಅದು.
ಚುನಾವಣಾ ಆಯೋಗದಲ್ಲಿ ಕಳೆದ ಕನಿಷ್ಠ 6 ವರ್ಷಗಳಿಂದ ಪಾರದರ್ಶಕತೆಯೇ ಇಲ್ಲವಾಗಿದೆ ಎಂಬುದು ದೇವಸಹಾಯಮ್ ಅವರ ಗಂಭೀರ ಆರೋಪ. 2018ರಿಂದ ಚುನಾವಣಾ ಆಯೋಗದ ಮಂದಿ ಯಾರೊಂದಿಗೂ ಸಂವಾದ ಮಾಡುವುದೇ ಇಲ್ಲ. ನಾಗರಿಕ ಸಂಘಟನೆಗಳು, ರಾಜಕೀಯ ಪಕ್ಷಗಳು, ವಿಪಕ್ಷಗಳು ಯಾರೊಂದಿಗೂ ಅದು ಸಂವಹನ ಮಾಡುವುದಿಲ್ಲ.
ಆಯೋಗ ಏನಿದ್ದರೂ ಪ್ರಧಾನಿ ಕಚೇರಿಯೊಂದಿಗೆ ಮಾತ್ರ ಸಂವಹನ ಇಟ್ಟುಕೊಂಡಿದೆ. ಅದು ಪಿಎಂಒದ ಅತ್ಯಂತ ವಿಧೇಯಕ ಸೇವಕ ಆಗಿಬಿಟ್ಟಿದೆ. ಪಿಎಂಒ ಆದೇಶವನ್ನು ಮಾತ್ರ ಅದು ತೆಗೆದುಕೊಳ್ಳುತ್ತದೆ ಎಂದಿದ್ದಾರೆ ದೇವಸಹಾಯಮ್.
ನನ್ನಂಥ ಹಿರಿಯ ಸಿವಿಲ್ ಸರ್ವೆಂಟ್ ಜೊತೆಗೂ ಅದು ಸಂವಹನ ಮಾಡುವುದಿಲ್ಲ ಎಂಬುದು ಅವರ ತಕರಾರು.
ಒಮ್ಮೆ ಚುನಾವಣೆ ಘೋಷಣೆಯಾಯಿತೆಂದರೆ ಎಲ್ಲಾ ಸರಕಾರಿ ಉದ್ಯೋಗಿಗಳು, ಇಡೀ ವ್ಯವಸ್ಥೆ ಚುನಾವಣಾ ಆಯೋಗದ ವ್ಯಾಪ್ತಿಯಲ್ಲಿರುತ್ತದೆ. ಎಣಿಕೆ ಮಾಡಿಸಲಿ. ಎಣಿಕೆ ಹೆಚ್ಚು ದಿನ ತೆಗೆದುಕೊಳ್ಳುತ್ತದೆ ಎಂಬ ಆಕ್ಷೇಪವೇ ಬೇಕಿಲ್ಲ ಎನ್ನುತ್ತಾರೆ. ಪೇಪರ್ ಬ್ಯಾಲೆಟ್‌ಗೆ ಹೋಗುವುದಾದರೆ ಅದು ಇನ್ನೂ ಸುಲಭ ಎಂದೂ ಅವರು ಹೇಳುತ್ತಾರೆ.
ವಿವಿಪ್ಯಾಟ್ ಪೂರ್ಣ ಎಣಿಕೆಗೆ ಒತ್ತಾಯಿಸುತ್ತಿರುವುದರ ಹಿಂದಿನ ಭಯ ಏನು? ಎಂಬ ಪ್ರಶ್ನೆಗೆ, ಅದು ಭಯ ಎಂದಲ್ಲ ಎನ್ನುತ್ತಾರೆ ಅವರು.
ಫಲಿತಾಂಶ ತಿರುಚಲಾಗುವ ಭಯ ಇರುವ ವಿಚಾರ ಬೇರೆ. ಆದರೆ ಇಲ್ಲಿನದು ಹಾಕಿದ ಮತ ನೋಡುವುದಕ್ಕೆ ಸಿಗಬೇಕು ಮತ್ತು ಎಣಿಕೆಯಾಗಬೇಕು ಎಂಬುದು. ಇದನ್ನು ಮಾಡದಿದ್ದರೆ ಚುನಾವಣಾ ಆಯೋಗ ಏನು ಮಾಡಿದಂತಾಯಿತು?
ಆಯೋಗ ಯಾವುದೇ ಪಕ್ಷದ ಚುನಾವಣೆ ನಡೆಸುತ್ತಿಲ್ಲ.ಮತದಾರ ತನ್ನ ಮತವನ್ನು ಅತ್ಯಂತ ಪಾರದರ್ಶಕ ವ್ಯವಸ್ಥೆಯಲ್ಲಿ ಚಲಾಯಿಸುವುದಕ್ಕೆ ಅನುಕೂಲ ಮಾಡಿಕೊಡುವುದು ಮತ್ತು ಅವನಿಗೆ ತನ್ನ ಮತ ಕಳವಾಗಿಲ್ಲ ಎಂಬ ಖಾತರಿಯನ್ನು ಒದಗಿಸುವುದು ಚುನಾವಣಾ ಆಯೋಗದ ಕರ್ತವ್ಯ. ಸ್ಲಿಪ್ ಎಣಿಸುವುದಕ್ಕೆ ನಿಮಗಿರುವ ಸಮಸ್ಯೆ ಏನು? ನೀವು ಜನತೆಯ ಸೇವಕರು ಎನ್ನುತ್ತಾರೆ ಅವರು.
ಮತದಾರರ ಪಟ್ಟಿಯಿಂದ ಹೆಸರುಗಳನ್ನೇ ಇಲ್ಲವಾಗಿಸಿ ಗೆಲ್ಲಲು ಆಧಾರ್ ಕಾರ್ಡ್ ಒಂದು ಅಸ್ತ್ರವಾಗುತ್ತಿದೆ ಎಂಬುದನ್ನೂ ದೇವಸಹಾಯಮ್ ಹೇಳುತ್ತಾರೆ.
ಅಲ್ಪಸಂಖ್ಯಾತರು, ವಿಶೇಷ ಚೇತನರು, ನಿರಾಶ್ರಿತ ಮಂದಿ ಇಂಥವರ ವಿಚಾರದಲ್ಲಿ ಇದು ಹೆಚ್ಚಾಗಿ ನಡೆಯುತ್ತಿದೆ.
ಇವಿಎಂ ವಂಚನೆ ಜನಾದೇಶವನ್ನೇ ದಮನಿಸುವಂಥದ್ದು. ಇದರ ಎದುರು ಚುನಾವಣಾ ಬಾಂಡ್ ಹಗರಣವೂ ದೊಡ್ಡ ವಿಚಾರವಲ್ಲ. 7 ಸಾವಿರ ಕೋಟಿ ರೂ. ದೊಡ್ಡದಲ್ಲ. ಕಳೆದ ಚುನಾವಣೆಯಲ್ಲಿ ಬಿಜೆಪಿಯೊಂದೇ 35 ಸಾವಿರ ಕೋಟಿ ರೂ. ಖರ್ಚು ಮಾಡಿದೆ.
ಅಲ್ಲಿ ಬರೀ ಹಣದ ವಿಚಾರ ಇದೆ. ಇಲ್ಲಿ ಚುನಾವಣಾ ಫಲಿತಾಂಶವನ್ನೇ ತಿರುಚುವ ಸಾಧ್ಯತೆ ಇರುವುದು ದುರಂತ.
ಮತಪತ್ರಗಳು ಬರಬೇಕು. ಪ್ರಜಾಪ್ರಭುತ್ವದಲ್ಲಿ ನಂಬಿಕೆಯಿರುವ ಬಹುತೇಕ ದೇಶಗಳು ಮತಪತ್ರ ಪದ್ಧತಿಯತ್ತ ಹೋಗುತ್ತಿವೆ. ಚುನಾವಣಾ ಆಯೋಗ ಅದನ್ನು ಮಾಡಲಾರದು, ಉದ್ದೇಶಪೂರ್ವಕವಾಗಿಯೇ ಆಯೋಗ ಅದನ್ನು ಮಾಡುತ್ತಿಲ್ಲ. ಆಯೋಗಕ್ಕೆ ಹೇಳಬಹುದಾದದ್ದು ಸುಪ್ರೀಂ ಕೋರ್ಟ್ ಮಾತ್ರ. ಆದರೆ ಸುಪ್ರೀಂ ಕೋರ್ಟ್ ಕೂಡ ಈ ಸಮಸ್ಯೆಯನ್ನು ಅರ್ಥ ಮಾಡಿಕೊಳ್ಳುತ್ತಿಲ್ಲ ಎನ್ನುವುದು ದುರಂತ ಎನ್ನುತ್ತಾರೆ.
ಈಗ ವಿಚಾರಣೆಗೆ ಬಂದಿರುವ ಅರ್ಜಿಯನ್ನು ಸಲ್ಲಿಸಿದ್ದು ಕಳೆದ ವರ್ಷದ ಮಾರ್ಚ್‌ನಲ್ಲಿ ಎಂಬುದನ್ನು ಅವರು ಹೇಳುತ್ತಾರೆ.
ದೇವಸಹಾಯಮ್ ಅವರ ಪ್ರಕಾರ ಸಾಂವಿಧಾನಿಕವಾಗಿ, ಇವಿಎಂ ಮೂಲಕ ನಡೆಸಲಾಗುವ ಚುನಾವಣೆ ಅಸಾಂವಿಧಾನಿಕ. ಆರ್ಟಿಕಲ್ 324 ಪ್ರಕಾರ, ಚುನಾವಣೆ ನಡೆಸುವ, ನಿಯಂತ್ರಿಸುವ ಮತ್ತು ಮೇಲ್ವಿಚಾರಣೆ ಮಾಡುವ ಜವಾಬ್ದಾರಿ ಚುನಾವಣಾ ಆಯೋಗದ್ದು. ಮತಪತ್ರ ವ್ಯವಸ್ಥೆಯಾದರೆ ಚುನಾವಣಾ ಆಯೋಗ ಪೂರ್ತಿ ನಿಯಂತ್ರಣ ಹೊಂದಿರುತ್ತದೆ. ಈಗ ನಿಯಂತ್ರಣವೇ ಮತ್ತೆಲ್ಲೋ ಇದೆ. ಇದು ಪೂರ್ತಿಯಾಗಿ ಸರಕಾರದ ಹತೋಟಿಯಲ್ಲಿದೆ. ಇವಿಎಂ ತಯಾರಿಸುವ ಕಂಪೆನಿಯ ಮಂಡಳಿ ನಿರ್ದೇಶಕರೆಲ್ಲರೂ ಬಿಜೆಪಿಯವರು. ಚುನಾವಣಾ ಆಯೋಗಕ್ಕೆ ನಿಯಂತ್ರಣವೇ ಇಲ್ಲ.
ಚುನಾವಣಾ ಆಯೋಗಕ್ಕೆ ನಿಯಂತ್ರಣವೇ ಇಲ್ಲವೆಂದಾದರೆ ಅಂಥ ಚುನಾವಣೆ ಅಸಾಂವಿಧಾನಿಕ ಎಂಬುದು ದೇವಸಹಾಯಮ್ ಮಾತು.
ದೇಶದ ಪರಮೋಚ್ಚ ನ್ಯಾಯಾಲಯ ಈಗಲಾದರೂ ಈ ಗಂಭೀರ ಮನವಿಯನ್ನು, ಅದರ ಹಿಂದಿರುವ ಕಳಕಳಿಯನ್ನು ಅರ್ಥ ಮಾಡಿಕೊಳ್ಳುವುದೇ ಎಂಬುದು ಈಗಿರುವ ಪ್ರಶ್ನೆ.