ಬಿಸಿಲ ಬೇಗೆಗೆ ಬತ್ತಿದ ಕೆರೆಗಳು

Update: 2024-05-06 11:04 GMT

ಕೋಲಾರ: ಬೇಸಿಗೆಯ ಬಿಸಿಲಿನ ತಾಪಕ್ಕೆ ಬಯಲು ಸೀಮೆ ಕೋಲಾರ ಜಿಲ್ಲೆ ತತ್ತರಿಸಿದೆ. ಜಿಲ್ಲೆಯ ಜೀವನಾಡಿಯಾಗಿರುವ ಸಣ್ಣ ಕೆರೆಗಳು ಅಕ್ಷರಶಃ ಬತ್ತಿ ಬೆಂಗಾಡಾಗಿದೆ.

ಬರದ ನಾಡು ಎಂಬ ಹಣೆಪಟ್ಟಿ ಹೊತ್ತ ಕೋಲಾರ ಜಿಲ್ಲೆಯ ಅಂತರ್ಜಲ ವೃದ್ಧಿಗೆ ಬೆಂಗಳೂರಿನ ತ್ಯಾಜ್ಯ ನೀರನ್ನು ಕೆ.ಸಿ.ವ್ಯಾಲಿ ಯೋಜನೆ ಅಡಿಯಲ್ಲಿ ಕೆರೆಗಳಿಗೆ ತುಂಬಿಸಲಾಗಿತ್ತು. ಇದರಿಂದ ಎರಡು ವರ್ಷಗಳಿಂದ ಜಿಲ್ಲೆಯ ಅಂತರ್ಜಲ ಚೇತರಿಕೆ ಕಂಡಿತ್ತು. ಆದರೆ, ಇಂದು ಯಥಾಸ್ಥಿತಿಗೆ ಕೋಲಾರ ಜಿಲ್ಲೆ ಮರಳಿದೆ.

ಕೆ.ಸಿ.ವ್ಯಾಲಿಯಿಂದ ಕೋಲಾರಕ್ಕೆ ನೀರು ಹರಿಯಬೇಕಾದರೆ ಬೆಂಗಳೂರಿನಲ್ಲಿ ಮಳೆ ಸುರಿಯಬೇಕು. ಬೆಂಗಳೂರು ಜನತೆ ಹೆಚ್ಚು ನೀರು ಬಳಸಿದಾಗ, ಹೆಚ್ಚು ಕೊಳಚೆ ನೀರು ಕಾಲುವೆಗೆ ಹರಿಯುವುದು, ಆಗ ನೀರನ್ನು ಎರಡನೇ ಹಂತದ ಶುದ್ಧೀಕರಣಕ್ಕೆ ಒಳಪಡಿಸಿ ಕೋಲಾರ ಜಿಲ್ಲೆಯ ಕೆರೆಗಳಿಗೆ ಹರಿಸಲಾಗುತ್ತದೆ. ಆದರೆ, ಒಂದು ವರ್ಷದಿಂದ ಕೆ.ಸಿ.ವ್ಯಾಲಿ ನೀರು ಜಿಲ್ಲೆಯ ಕೆರೆಗಳಿಗೆ ಹರಿಯುತ್ತಿಲ್ಲ ಎಂದು ಕೆ.ಸಿ.ವ್ಯಾಲಿ ನೀರು ಹರಿಯುವ ಮಾರ್ಗದ ಕೆರೆಗಳ ಸುತ್ತ ಮುತ್ತಲಿನ ಗ್ರಾಮಗಳ ರೈತರು ಹೇಳುತ್ತಾರೆ.

ಮೂರು ತಿಂಗಳಿನಿಂದ ಜಿಲ್ಲೆಯಾದ್ಯಂತ ಬಿಸಿಲು ಕಾದು ಕೆರೆಗಳು ಬತ್ತಿ ಹೋಗಿವೆ, ಗಿಡ ಮರಗಳು ಒಣಗಿವೆ. ಜಾನುವಾರುಗಳು ಮೇವಿಲ್ಲದೆ ಅಲೆದಾಡುತ್ತಿವೆ. ಪ್ರಾಣಿ ಪಕ್ಷಿಗಳು ದಿಕ್ಕುಪಾಲಾಗಿವೆ. ಜನತೆಗೆ ಕುಡಿಯುವ ನೀರಿನ ಸಮಸ್ಯೆ ಉಲ್ಬಣವಾಗಿದೆ.

ದೂರಾಲೋಚನೆ ಇಲ್ಲದೆ ತಾತ್ಕಾಲಿಕ ಪರಿಹಾರದ ಕಡೆ ಗಮನಹರಿಸಿ, ಶಾಶ್ವತ ಯೋಜನೆಗಳನ್ನು ಮರೆತರೆ ಏನಾಗಬಾರದೋ ಅದೇ ಪರಿಸ್ಥಿತಿ ಇಂದು ಜಿಲ್ಲೆಗೆ ಬಂದೊದಗಿದೆ. ಒಟ್ಟಿನಲ್ಲಿ ಸುಡು ಬಿಸಿಲಿನ ತಾಪಕ್ಕೆ ಬಯಲು ಸೀಮೆ ಕೋಲಾರ ಜಿಲ್ಲೆ ಅಕ್ಷರಶಃ ತತ್ತರಿಸಿ ಹೋಗಿದೆ. ಸಾಮಾನ್ಯವಾಗಿ ಜಿಲ್ಲೆಯ ಸರಾಸರಿ ತಾಪಮಾನ 18 ಡಿಗ್ರಿ ಯಿಂದ 28 ಡಿಗ್ರಿ ಇರುತ್ತದೆ. ಅಪರೂಪಕ್ಕೆ 30ರ ಗಡಿ ದಾಟುತ್ತಿತ್ತು. ಆದರೆ ಈಗ ಪ್ರತಿ ದಿನದ ತಾಪಮಾನ 36 ರಿಂದ 38 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗುತ್ತಿದೆ. ನೀರಿನ ಸಮಸ್ಯೆ ಬಿಗಡಾಯಿಸುವ ಮುನ್ನ ಈ ಸಮಸ್ಯೆಗೆ ಸರಕಾರ ಯಾವ ರೀತಿ ಪರಿಹಾರ ಕಂಡುಕೊಳ್ಳಬಹುದು ಎಂದು ಕಾದು ನೋಡಬೇಕಿದೆ.

ಕೆ.ಸಿ.ವ್ಯಾಲಿ ನೀರನ್ನು ನಂಬಿಕೊಂಡು, ಎತ್ತಿನಹೊಳೆ ಹಾಗೂ ಮೇಕೆದಾಟು ಯೋಜನೆ ಬಗ್ಗೆ ಅಸಡ್ಡೆ ತೋರುತ್ತಿರುವ ಸರಕಾರ ಈಗ ಜಿಲ್ಲೆಯ ಜನರಿಗೆ ಹೇಗೆ? ನೀರು ಒದಗಿಸುತ್ತದೆ. ಅಂತರ್ಜಲ ಮಟ್ಟ ಮತ್ತೆ ಕುಸಿಯುತ್ತಿದೆ, ಮತ್ತೆ ಕೊಳವೆಬಾವಿ ಕೊರೆಯಲು ಸರಕಾರ ಮುಂದಾಗಬೇಕಾದ ಅನಿವಾರ್ಯತೆ ಎದುರಾಗಿದೆ. ಕುಡಿಯುವ ನೀರಿನ ಸಮಸ್ಯೆ ಬಿಗಡಾಯಿಸುವ ಮುನ್ನ ಎಚ್ಚರ ವಹಿಸುವುದು ಒಳ್ಳೆಯದು. ತಪ್ಪಿದರೆ ಮುಂದೆ ಆಗುವ ಅನಾಹುತಗಳಿಗೆ ಜಿಲ್ಲಾಡಳಿತ ಹೊಣೆಯಾಗಬೇಕಾಗುತ್ತದೆ.

► ನಳಿನಿಗೌಡ,

ಜಿಲ್ಲಾಧ್ಯಕ್ಷೆ, ರಾಜ್ಯ ರೈತ ಸಂಘ ಕೋಲಾರ

ಜಿಲ್ಲೆಯಲ್ಲಿ ಮಳೆಯ ಕೊರತೆಯಿಂದ ಹಾಗೂ ಕೆಸಿ ವ್ಯಾಲಿ ನೀರು ಹರಿಯುತ್ತಿಲ್ಲವಾದ ಕಾರಣಕ್ಕೆ ನೀರಿನ ಶೇಖರಣೆಯಲ್ಲಿ ಸ್ವಲ್ಪ ವ್ಯತ್ಯಯವಾಗಿದೆ. ಕೆರೆಗಳು ಬತ್ತಿ ಹೋಗಿವೆ. 3 ವರ್ಷಗಳಿಂದ ಉತ್ತಮವಾಗಿ ಮಳೆಯಾಗಿರುವ ಕಾರಣ ಅಂತರ್ಜಲ ವೃದ್ಧಿಯಾಗಿದ್ದು, ಕೊಳವೆಬಾವಿಗಳಲ್ಲಿ ನೀರು ಲಭ್ಯವಿದೆ. ಇನ್ನೂ 3 ತಿಂಗಳು ಕುಡಿಯುವ ನೀರಿನ ಸಮಸ್ಯೆ ಇಲ್ಲ, ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡುವ ಪರಿಸ್ಥಿತಿ ಇಲ್ಲ, ಇಷ್ಟು ದಿನ ಬಳಕೆಯಾಗದೆ ಇದ್ದ ಕೊಳವೆಬಾವಿಗಳಲ್ಲಿ ನೀರು ಲಭ್ಯವಿದೆ. ಮೂರು ತಿಂಗಳ ನಂತರ ಕೊರತೆ ಉಂಟಾದರೆ ಹೊಸ ಕೊಳವೆಬಾವಿ ಕೊರೆಯಬೇಕಾಗುತ್ತದೆ. ಸದ್ಯಕ್ಕೆ ನೀರಿನ ಸಮಸ್ಯೆ ಇಲ್ಲ.

► ಪದ್ಮಾ ಬಸವಂತಪ್ಪ, ಜಿಪಂ ಸಿಇಒ

Writer - ವಾರ್ತಾಭಾರತಿ

contributor

Editor - Thouheed

contributor

Byline - ಸಿ.ವಿ.ನಾಗರಾಜ್. ಕೋಲಾರ

contributor

Similar News