ಮುಂಗಾರುಪೂರ್ವ ಮಳೆಗಾಗಿ ಕಾದಿದೆ ಉಡುಪಿ

Update: 2024-05-17 06:25 GMT

ಸಾಂದರ್ಭಿಕ ಚಿತ್ರ Photo: Shutterstock

ಉಡುಪಿ: ಕರಾವಳಿಯ ಅದರಲ್ಲೂ ಮುಖ್ಯವಾಗಿ ಉಡುಪಿ ಜಿಲ್ಲೆಯ ಜನತೆ ಮುಂಗಾರು ಪೂರ್ವ ಮಳೆ ತನ್ನೆಲ್ಲಾ ವೈಭವದೊಂದಿಗೆ ಸುರಿಯು ವುದನ್ನೇ ಚಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ.

ಮಾರ್ಚ್ ತಿಂಗಳಿಂದ ಜೂನ್ ಪ್ರಾರಂಭದವರೆಗೆ ಕರಾವಳಿಯನ್ನು ಕಾಡುವ ಬಿಸಿಗಾಳಿ(ಈ ಬಾರಿ ಸಹಿಸಲಸಾಧ್ಯ ಪ್ರಮಾಣದಲ್ಲಿ)ಯಿಂದ ಮುಕ್ತಿ ಪಡೆಯಲು, ಬಿರುಬಿಸಿಲಿನಿಂದ ಬತ್ತಿರುವ ಬಾವಿ, ಕೆರೆ, ಹೊಳೆಗಳಲ್ಲಿ ನೀರಿನ ಸೆಲೆ ಮೂಡಲು, ಕುಡಿ ಯುವ ನೀರಿಗಾಗಿ ಪಡುವ ಪಡಿಪಾಡಿಲಿನಿಂದ ಹೊರ ಬರಲು ಹಾಗೂ ಜಿಲ್ಲೆಯ ರೈತರು ಅಳಿದುಳಿದ ತಮ್ಮ ಬೇಸಾಯ ಯೋಗ್ಯ ಗದ್ದೆಯನ್ನು ಕೃಷಿಗೆ ಸಜ್ಜು ಗೊಳಿಸಲು ಮುಂಗಾರು ಪೂರ್ವ ಮಳೆಯನ್ನೇ ನಂಬಿ ಎದುರು ನೋಡುತ್ತಿದ್ದಾರೆ.

ಆದರೆ ಇತ್ತೀಚಿನ ಕೆಲವು ವರ್ಷಗಳಲ್ಲಿ ಮುಂಗಾರು ಪೂರ್ವ ಮಳೆ ಮುಂಗಾರು ಮಳೆಯಂತೆಯೇ ಜನತೆಯೊಂದಿಗೆ ಕಣ್ಣುಮುಚ್ಚಾಲೆ ಯಾಡುತ್ತಿದೆ. ಕಳೆದ ವರ್ಷ ಜಿಲ್ಲೆಯ ಜನರು ಇದರ ಅತ್ಯಂತ ಕಹಿ ಅನುಭವ ಪಡೆದಿದ್ದಾರೆ. 2023ರಲ್ಲಿ ಶೇ.74ರಷ್ಟು ಮುಂಗಾರು ಪೂರ್ವ ಮಳೆಯ ಕೊರತೆ ಅನುಭವಿಸಿದ ಜಿಲ್ಲೆಯ ಜನತೆ, ಜೂನ್ ಮೂರನೇ ವಾರದವರೆಗೂ ಮುಂಗಾರು ಮಳೆ ಜಿಲ್ಲೆಗೆ ಕಾಲಿಡಲು ಕಾಯಬೇಕಾಯಿತು. ಇವುಗಳ ನಡುವೆ ಜಿಲ್ಲೆಯ ಜನರ, ರೈತರ ಬದುಕು ಹೈರಾಣವಾಯಿತು.

ಈ ವರ್ಷವೂ ಮುಂಗಾರುಪೂರ್ವ ಮಳೆ ಜಿಲ್ಲೆಗೆ ಕೈಕೊಡುವ ಸೂಚನೆ ಕಂಡುಬರುತ್ತಿದೆ. 2021 ಹಾಗೂ 2022ನ್ನು ಹೊರತು ಪಡಿಸಿದರೆ ಕಳೆದ ಆರೇಳು ವರ್ಷಗಳಲ್ಲಿ ಮುಂಗಾರು ಪೂರ್ವ ಮಳೆ ನಿಗದಿಯಾದಂತೆ ಜಿಲ್ಲೆಯಲ್ಲಿ ಸುರಿದ ದಾಖಲೆಗಳೇ ಇಲ್ಲ.

ಕರಾವಳಿ ಭಾಗಗಳಿಗೆ ಮುಂಗಾರು ಪೂರ್ವ ಮಳೆ ಅತ್ಯಾವಶ್ಯಕ ಹಾಗೂ ಅನಿವಾರ್ಯ ಕೂಡಾ. ಮುಂಗಾರು ಪೂರ್ವ ಮಳೆ ಕೈಕೊಟ್ಟರೆ ಇಲ್ಲಿ ಕುಡಿ ಯುವ ನೀರಿಗೆ ಜನರ ಹಪಹಪಿಕೆ ಪ್ರಾರಂಭ ಗೊಳ್ಳುವುದು ಖಚಿತ.

ಕಳೆದ ಮುಂಗಾರು ಅವಧಿಯಲ್ಲಿ ಅಂದರೆ 2023ರ ಜೂನ್‌ನಿಂದ ಸೆಪ್ಟೆಂಬರ್ ತಿಂಗಳವರೆಗೆ ಜಿಲ್ಲೆಯಲ್ಲಿ ಶೇ.22ರಷ್ಟು ಕೊರತೆ ಕಾಣಿಸಿಕೊಂಡಿತ್ತು. 4,535 ಮಿ.ಮೀ. ವಾಡಿಕೆ ಮಳೆ ಬರಬೇಕಾದಲ್ಲಿ ಆಗ 3,525 ಮಿ.ಮೀ. ಮಾತ್ರ ಮಳೆಯಾಗಿತ್ತು. ಆದರೆ ಬಳಿಕದ ಹಿಂಗಾರು ಅವಧಿಯಲ್ಲಿ ಈ ಬಾರಿ ಜಿಲ್ಲೆಗೆ ಸಾಮಾನ್ಯ ಮಳೆಯಾಗಿತ್ತು. ಉಡುಪಿ ಜಿಲ್ಲೆ ಯಲ್ಲಿ ಹಿಂಗಾರು ಅವಧಿಯಲ್ಲಿ 316 ಮಿ.ಮೀ. ಮಳೆ ಯಾಗಿದ್ದರಿಂದ ಈ ವರ್ಷ ಮೇ ತಿಂಗಳ ಪ್ರಾರಂಭ ದವರೆಗೂ ಜಿಲ್ಲೆಯಲ್ಲಿ ಕುಡಿಯುವ ನೀರಿಗೆ ಹೆಚ್ಚಿನ ತೊಂದರೆಯಾಗಿಲ್ಲ ಎನ್ನುತ್ತಾರೆ ಜಿಲ್ಲೆಯ ವಿಕೋಪ ನಿರ್ವಹಣಾ ವಿಭಾಗದ ತಜ್ಞ ರವಿ ಓಜನಹಳ್ಳಿ.

2023ರಲ್ಲಿ ಶೇ.74ರಷ್ಟು ಕೊರತೆ: ಕಳೆದ ವರ್ಷ ಮೂರು ತಿಂಗಳ ಅವಧಿಯಲ್ಲಿ ಕೇವಲ 53 ಮಿ.ಮೀ. ಮಳೆಯಾಗಿದ್ದು, ಶೇ.74ರಷ್ಟು ಮಳೆಯ ಕೊರತೆ ಉಂಟಾಗಿತ್ತು. ಇದರೊಂದಿಗೆ ಮುಂಗಾರ ಸಹ ನಿರೀಕ್ಷೆಗಿಂತ ತಡವಾಗಿ ಜಿಲ್ಲೆಗೆ ಕಾಲಿರಿಸಿ ಜನರಿಗೆ ಸಾಕಷ್ಟು ತೊಂದರೆಯೂ ಆಗಿತ್ತು. ಅದೇರೀತಿ 2019ರಲ್ಲಿ ಕೇವಲ 29 ಮಿ.ಮೀ. ಮಳೆಯಾಗಿದ್ದು ಆ ವರ್ಷ ಜಿಲ್ಲೆಯಲ್ಲಿ ಶೇ.85ರಷ್ಟು ಕೊರತೆಯಾಗಿದ್ದರೆ ಮುಂದಿನ ವರ್ಷ 2020ರಲ್ಲಿ ಪರಿಸ್ಥಿತಿ ಸ್ವಲ್ಪ ಸುಧಾರಿಸಿ ಮಾರ್ಚ್, ಎಪ್ರಿಲ್ ಹಾಗೂ ಮೇ ತಿಂಗಳಲ್ಲಿ 172 ಮಿ.ಮೀ. ಮಳೆಯಾಗುವ ಮೂಲಕ ಶೇ.15ರಷ್ಟು ಕೊರತೆ ಮಾತ್ರ ಕಾಣಿಸಿಕೊಂಡಿತ್ತು.

2021-22ರಲ್ಲಿ ಅಧಿಕ ಮಳೆ: ಕರಾವಳಿ ಜಿಲ್ಲೆಗಳಿಗೆ ನಿಜವಾಗಿಯೂ ಉತ್ತಮ ಮುಂಗಾರು ಪೂರ್ವ ಮಳೆಯಾಗಿದ್ದು 2021 ಹಾಗೂ 2022ರಲ್ಲಿ. ಈ ವರ್ಷಗಳಲ್ಲಿ ಕ್ರಮವಾಗಿ ಶೇ.152 ಹಾಗೂ ಶೇ.116 ರಷ್ಟು ಅಧಿಕ ಮಳೆಯಾಗಿತ್ತು. 2021ರಲ್ಲಿ 501 ಮಿ.ಮೀ. ಮಳೆಯಾಗಿದ್ದರೆ, 2022ರಲ್ಲಿ 435 ಮಿ.ಮೀ. ಮಳೆ ಸುರಿದಿತ್ತಲ್ಲದೇ, ಜಿಲ್ಲೆಯಲ್ಲಿ ಸೊತ್ತು -ಜೀವಗಳಿಗೆ ಸಾಕಷ್ಟು ಹಾನಿಯೂ ಆಗಿತ್ತು.

2021ರಲ್ಲಿ ಇಷ್ಟೊಂದು ಪ್ರಮಾಣದಲ್ಲಿ ಮಳೆ ಸುರಿಯಲು ಆಗ ಅರಬಿ ಸಮುದ್ರದಲ್ಲಿ ಬೀಸಿದ ಚಂಡಮಾರುತವೇ ಪ್ರಧಾನ ಕಾರಣವಾ ಗಿತು. ಮೇ 15-16ರ ಸುಮಾರಿಗೆ ಬೀಸಿದ ಈ ಚಂಡಮಾರುತ ದಿಂದ ಮೇ 15ರ ಒಂದೇ ದಿನ 75 ಮಿ.ಮೀ.ನಷ್ಟು ಮಳೆಯಾಗಿತ್ತು. ಮೇ ಇಡೀ ತಿಂಗಳಲ್ಲಿ ಆಗ 300 ಮಿ.ಮೀ. ಮಳೆಯಾಗಿತ್ತು.

ಇದೀಗ ಮುಂದಿನ 15 ದಿನಗಳಲ್ಲಿ ಸಾಕಷ್ಟು ಮಳೆಯ ನಿರೀಕ್ಷೆಯಲ್ಲಿ ಜಿಲ್ಲೆಯ ಜನತೆ ಆಕಾಶ ದಿಟ್ಟಿಸುತ್ತಿದೆ. ಈ ಬಾರಿ ಉತ್ತಮ ಮುಂಗಾರಿನ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ಜೂನ್ ಮೊದಲ ವಾರದೊಳಗೆ ಅದು ಜಿಲ್ಲೆಗೆ ಕಾಲಿರಿಸಿದರೆ ಮಳೆಗಾಗಿ ಚಾತಕ ಪಕ್ಷಿಯಂತೆ ಕಾಯುತ್ತಿರುವ ರೈತ ಸಮುದಾಯಕ್ಕೆ ಅದು ಅಮೃತಧಾರೆ ಎನಿಸಬಹುದು.

ಮೇ 15ರವರೆಗೆ ಕೇವಲ 45 ಮಿ.ಮೀ. ! ಮಳೆ

ಉಡುಪಿ ಜಿಲ್ಲೆಯಲ್ಲಿ ಮಾರ್ಚ್‌ನಿಂದ ಮೇ ಕೊನೆಯವರೆಗೆ ಸಾಮಾನ್ಯವಾಗಿ ಬೀಳಬೇಕಿರುವ ಮುಂಗಾರು ಪೂರ್ವ ಮಳೆ 200 ಮಿ.ಮೀ. ಆದರೆ ಈ ಬಾರಿ ಮೇ 15ರವರೆಗೆ ಬಿದ್ದಿರುವುದು ಕೇವಲ 45 ಮಿ.ಮೀ. ಮಾತ್ರ. ಈ ಅವಧಿಯಲ್ಲಿ ಬೀಳಬೇಕಿರುವುದು 60 ಮಿ.ಮೀ. ಹೀಗಾಗಿ ಮೇ 15ರವರೆಗೆ ಜಿಲ್ಲೆಯಲ್ಲಿ ಶೇ.26ರಷ್ಟು ಕೊರತೆ ಕಂಡುಬಂದಿದೆ. ಇನ್ನುಳಿದ 15 ದಿನಗಳಲ್ಲಿ 140-150 ಮಿ.ಮೀ.ನಷ್ಟು ಮಳೆಯಾದರೆ ಮಾತ್ರ ಈ ಬಾರಿ ಸಾಮಾನ್ಯ ಮಳೆ ಎನ್ನಬಹುದು.

ಮುಂದಿನ 4-5 ದಿನಗಳ ಕಾಲ ಕರಾವಳಿ ಭಾಗದಲ್ಲಿ ಭಾರೀ ಮಳೆಯಾಗುವ ಮುನ್ಸೂಚನೆ ಯನ್ನು ಹವಾಮಾನ ಇಲಾಖೆ ನೀಡಿದ್ದು ಯೆಲ್ಲೋ ಅಲರ್ಟ್‌ನ ಎಚ್ಚರಿಕೆ ನೀಡಿದೆ. ನಿರೀಕ್ಷೆಯಂತೆ ಈ ಮಳೆ ಬಂದರೆ ಮಾತ್ರ ಮುಂದಿನ ದಿನಗಳಲ್ಲಿ ರಣಬಿಸಿಲಿನ ತಾಪ, ಬಿಸಿ ಗಾಳಿ ಹಾಗೂ ಕುಡಿಯುವ ನೀರಿನ ಕೊರತೆ ಎರಡರಿಂದಲೂ ಜಿಲ್ಲೆಯ ಜನತೆ ಪಾರಾಗಬಹುದು.

Writer - ವಾರ್ತಾಭಾರತಿ

contributor

Editor - jafar sadik

contributor

Byline - ಬಿ.ಬಿ.ಶೆಟ್ಟಿಗಾರ್

contributor

Similar News