ಆದಿತ್ಯನಾಥ್‌ರನ್ನು ಕೆಳಗಿಳಿಸಲು ದಿಲ್ಲಿಯಲ್ಲಿ ತಯಾರಿ ನಡೆದಿದೆಯೇ?

ಯುಪಿಯಲ್ಲಿನ ಸೋಲಿಗೆ ತಾನು ಕೊರಳು ಕೊಡುವುದಕ್ಕಂತೂ ಆದಿತ್ಯನಾಥ್ ತಯಾರಿಲ್ಲ ಎಂಬುದು ಸ್ಪಷ್ಟ. ಅದಕ್ಕಾಗಿಯೇ ಅವರು ‘‘ಅತಿಯಾದ ಆತ್ಮವಿಶ್ವಾಸದಿಂದ ಬಿಜೆಪಿಗೆ ಸೋಲಾಗಿದೆ’’ ಎಂದು ದಿಲ್ಲಿ ನಾಯಕರನ್ನು ತಿವಿದಂತೆ ಮಾತಾಡಿರುವುದು. ಮಹಾರಾಷ್ಟ್ರದಲ್ಲಿಯೂ ಬಿಜೆಪಿ ಸರಿಯಾಗಿಯೇ ಏಟು ತಿಂದಿದೆ. ಹರ್ಯಾಣದ ಫಲಿತಾಂಶ ಕೂಡ ಬಿಜೆಪಿ ಪಾಲಿಗೆ ವಿರುದ್ಧವಾಗಿತ್ತು. ಇಷ್ಟಾಗಿಯೂ ಯುಪಿ ಸೋಲಿನ ಮೇಲೆಯೇ ಬಿಜೆಪಿ ಹೆಚ್ಚು ಗಂಭೀರವಾಗಿರುವುದಕ್ಕೆ ಕಾರಣ ಮೋದಿ-ಶಾ ಜೋಡಿಗೆ ಆದಿತ್ಯನಾಥ್ ಬೇಡವಾಗಿರುವುದೇ ಆಗಿದೆ.

Update: 2024-07-18 06:29 GMT

ಯುಪಿಯಲ್ಲಿ ಇದು ಬದಲಾವಣೆಯ ಕಾಲವೇ? ಅಂತಹ ಸಂಕೇತಗಳು 2024ರ ಲೋಕಸಭೆ ಚುನಾವಣೆ ಬಳಿಕ ನಿಧಾನವಾಗಿ ಸಿಗತೊಡಗಿರುವುದು ಸುಳ್ಳಲ್ಲ.

‘‘ಸರಕಾರಕ್ಕಿಂತ ಸಂಘಟನೆ ಮುಖ್ಯ’’ ಎಂದು ಹೇಳುವ ಮೂಲಕ ಆದಿತ್ಯನಾಥ್‌ಗೆ ತಿವಿದಿದ್ದರು ಯುಪಿ ಡಿಸಿಎಂ ಕೇಶವ ಪ್ರಸಾದ್ ಮೌರ್ಯ. ಅವರು ದಿಲ್ಲಿಯಲ್ಲಿ ಮಂಗಳವಾರ ತಡರಾತ್ರಿ ನಡ್ಡಾ ಅವರನ್ನು ಭೇಟಿಯಾಗಿರುವುದು ಈಗಿನ ಮಹತ್ವದ ಬೆಳವಣಿಗೆ.ಇಬ್ಬರೂ ಒಂದು ಗಂಟೆಯಷ್ಟು ದೀರ್ಘ ಸಮಯ ಚರ್ಚೆ ನಡೆಸಿರುವುದಾಗಿ ವರದಿಗಳು ಹೇಳುತ್ತಿವೆ.

ಇದಕ್ಕೂ ಮೊದಲು ಸ್ವತಃ ಬಿಜೆಪಿ ಶಾಸಕ ರಮೇಶ್ ಮಿಶ್ರಾ 2027ರಲ್ಲಿ ಬಿಜೆಪಿಗೆ ತುಂಬ ಕಷ್ಟದ ಸ್ಥಿತಿಯಿದೆ ಎಂದಿರುವುದು ಗಮನಿಸಬೇಕಾದ ವಿಚಾರ. ಪಕ್ಷದ ಕೇಂದ್ರ ವರಿಷ್ಠರು ಬಹು ದೊಡ್ಡ ತೀರ್ಮಾನ ತೆಗೆದುಕೊಳ್ಳಬೇಕಾದ ಹೊತ್ತು ಇದು ಎಂದೂ ಅವರು ಹೇಳಿದ್ದಾರೆ.

ಶಾಸಕನೊಬ್ಬ ಮುಖ್ಯಮಂತ್ರಿಯನ್ನು ಬಿಟ್ಟು ನೇರ ದಿಲ್ಲಿ ವರಿಷ್ಠರಲ್ಲಿ ಹೀಗೆ ಹೇಳಿಕೊಂಡಿರುವುದರ ಹಿನ್ನೆಲೆ ಏನಿದ್ದಿರಬಹುದು?

ಊಹಿಸುವುದು ಕಷ್ಟವೇನಲ್ಲ.

ಉತ್ತರ ಪ್ರದೇಶದ ಬಿಜೆಪಿಯಲ್ಲಿ ಒಂದು ಅಭಿಯಾನ ಶುರುವಾಗಿದೆ. ಸಿಎಂ ಆದಿತ್ಯನಾಥ್ ಅವರು ಠಾಕೂರ್ ವಾದಿಯಾಗಿದ್ದಾರೆ ಎಂಬ ಆರೋಪವನ್ನು ಈ ಅಭಿಯಾನದ ಮೂಲಕ ಮಾಡಲಾಗುತ್ತಿದೆ.

ಆದಿತ್ಯನಾಥ್ ನೇಮಿಸಿರುವ ಮುಖ್ಯ ಕಾರ್ಯದರ್ಶಿ ಠಾಕೂರ್ ಸಮುದಾಯದವರಾಗಿದ್ದಾರೆ. ಅವರು ನೇಮಿಸಿರುವ ಕಾನೂನು ಸುವ್ಯವಸ್ಥೆ ಎಡಿಜಿ ಠಾಕೂರ್, ಅವರ ಸುತ್ತ ಇರುವವರೆಲ್ಲರೂ ಠಾಕೂರ್‌ಗಳೇ ಆಗಿದ್ದಾರೆ.

ಲೋಕಸಭೆ ಚುನಾವಣೆ ವೇಳೆ ಸಾರಂಗ್ಪುರದಲ್ಲಿ ನಡೆದ ಠಾಕೂರ್‌ಗಳ ಸಮಾವೇಶ ಆದಿತ್ಯನಾಥ್‌ಗೆ ಜಯಕಾರ ಹಾಕಿತ್ತು. ಮಾತ್ರವಲ್ಲ, ‘ಮೋದಿ ಗೋ ಬ್ಯಾಕ್’ ಎಂಬ ಘೋಷಣೆಯೂ ಅಲ್ಲಿ ಮೊಳಗಿತ್ತು.

ಈ ವಿಚಾರ ಕೇಂದ್ರ ವರಿಷ್ಠರ ನಡುವೆ ಚರ್ಚೆಯಾಗಿದೆ.ಹೇಗಾದರೂ ಆದಿತ್ಯನಾಥ್ ಅವರನ್ನು ಕೆಳಗಿಳಿಸಿ, ಹೊರತಳ್ಳುವ ತಯಾರಿ ನಡೆಯುತ್ತಿರುವ ಹಾಗಿದೆ. ಬಿಜೆಪಿಯ ಮತ್ತೊಬ್ಬ ನಾಯಕ ಮೂರ್ತಿ ಸಿಂಗ್, ಬಿಜೆಪಿ ಸರಕಾರದ ಮೇಲೆಯೇ ಭ್ರಷ್ಟಾಚಾರದ ಆರೋಪ ಹೊರಿಸಿದ್ದಾರೆ.

‘‘ಕೆಳಮಟ್ಟದ ಅಧಿಕಾರಿಗಳೂ ಮಾತು ಕೇಳುತ್ತಿಲ್ಲ. ಎಲ್ಲರೂ ಲೂಟಿಯಲ್ಲಿ ತೊಡಗಿದ್ದಾರೆ, ನನ್ನ ಇಷ್ಟು ವರ್ಷಗಳ ರಾಜಕೀಯ ಜೀವನದಲ್ಲೇ ಇಂತಹ ಭ್ರಷ್ಟಾಚಾರವನ್ನು ಕಂಡಿರಲಿಲ್ಲ’’ ಎಂದು ಪಕ್ಷದ ಹಿರಿಯ ನಾಯಕನೇ ಹೇಳಿ ಬಿಟ್ಟಿದ್ದಾರೆ.

ಇವೆಲ್ಲವೂ, ಯುಪಿ ಬಿಜೆಪಿಯಲ್ಲಿ ಆದಿತ್ಯನಾಥ್ ವಿರುದ್ಧ ದೊಡ್ಡ ಮಟ್ಟದ್ದೇ ವ್ಯೆಹ ತಯಾರಾಗಿದೆ ಎಂಬುದರ ಸೂಚನೆಯೇ ಆಗಿದೆ.

ಲೋಕಸಭೆ ಚುನಾವಣೆಯಲ್ಲಿನ ಸೋಲಿನ ಹಿನ್ನೆಲೆಯಲ್ಲಿ ನಡೆದ ಯುಪಿ ಬಿಜೆಪಿಯ ಕಾರ್ಯಕಾರಿಣಿಯಲ್ಲಿ ಸೋಲಿಗೆ ಹೊಣೆ ಯಾರು ಎಂಬ ಪ್ರಶ್ನೆ ಎದ್ದಿತ್ತು.

ಆ ಬೈಠಕ್‌ನಲ್ಲಿ ದಿಲ್ಲಿಯಿಂದ ಬಿ.ಎಲ್. ಸಂತೋಷ್ ಕೂಡ ಪಾಲ್ಗೊಂಡಿದ್ದರು. ಸಂತೋಷ್ ಎದುರಲ್ಲಿಯೇ ರಾಜ್ಯ ನಾಯಕರು ಬಹಿರಂಗವಾಗಿ ಆದಿತ್ಯನಾಥ್‌ಗೆ ವಿರುದ್ಧವಾಗಿ ನಿಂತು ಮಾತಾಡಿದ್ದೂ ಆಗಿದೆ. ಅದೇ ಸಭೆಯಲ್ಲಿ ‘‘ನಮ್ಮ ಅತಿ ಆತ್ಮವಿಶ್ವಾಸದಿಂದಾಗಿ ಸೋಲಾಯಿತು’’ ಎಂದು ಆದಿತ್ಯನಾಥ್ ಹೊಣೆಯನ್ನು ದಿಲ್ಲಿಗೆ ವರ್ಗಾಯಿಸಿದ್ದೂ ಆಗಿದೆ.

ಇದೆಲ್ಲವನ್ನೂ ನೋಡಿದರೆ ಮುಂದಿನ ಅಸೆಂಬ್ಲಿ ಚುನಾವಣೆಯ ಒಳಗಾಗಿ ಆದಿತ್ಯನಾಥ್‌ರನ್ನು ಯುಪಿ ಸಿಎಂ ಹುದ್ದೆಯಿಂದ ಕೆಳಗಿಳಿಸಲು ಸಿದ್ಧತೆ ನಡೆಯುತ್ತಿರುವ ಹಾಗೆ ಕಾಣಿಸುತ್ತವೆ.

ದಿಲ್ಲಿ ವರಿಷ್ಠರಿಗೆ ಯುಪಿಯ ಬಿಜೆಪಿ ನಾಯಕ ಕೇಶವ ಪ್ರಸಾದ್ ಮೌರ್ಯ ಬಗ್ಗೆ ಒಲವಿದೆ ಎನ್ನುವುದು ನಿಜ. ಅವರು ಕಾರ್ಯಕಾರಿಣಿಯಲ್ಲಿ ಮಾತನಾಡಿ, ಸರಕಾರಕ್ಕಿಂತ ಸಂಘಟನೆ ದೊಡ್ಡದು ಎಂದಿರುವುದು ಕೂಡ ಆದಿತ್ಯನಾಥ್ ವಿರುದ್ಧದ ಮಾತು ಎಂದೇ ವಿಶ್ಲೇಷಿಸಲಾಗುತ್ತಿದೆ.

ಆದಿತ್ಯನಾಥ್ ಬುಲ್ಡೋಜರ್ ನೀತಿ ಸೇರಿದಂತೆ ಹಲವಾರು ಕ್ರಮಗಳನ್ನು ಬಿಜೆಪಿ ನಾಯಕರೇ ವಿರೋಧಿಸಿ ಹೇಳಿಕೆ ನೀಡಿದ್ದೂ ಇದೆ ಮತ್ತು ಅವರು ಯಾರೊಂದಿಗೂ ಚರ್ಚಿಸದೆ ತನಗೆ ತೋಚಿದ್ದನ್ನೇ ಮಾಡುತ್ತಾರೆ ಎಂಬುದು ಕೂಡ ಬಿಜೆಪಿ ನಾಯಕರ ಆಕ್ಷೇಪ ವಾಗಿದೆ.

ಅಂತೂ ಇದೆಲ್ಲದರ ಹಿನ್ನೆಲೆಯಲ್ಲಿ ದಿಲ್ಲಿ ವರಿಷ್ಠರ ಬಾಣ ಆದಿತ್ಯನಾಥ್ ಕಡೆ ತಿರುಗಿದೆ ಎಂಬುದಂತೂ ನಿಜ. ಆದರೆ ಆದಿತ್ಯನಾಥ್ ಅವರನ್ನು ಕೆಳಗಿಳಿಸುವುದು ಅಷ್ಟು ಸುಲಭವೇ? 2022ರಲ್ಲಿಯೂ ಆದಿತ್ಯನಾಥ್ ಅವರನ್ನು ಕೆಳಗಿಳಿಸುವ ಯತ್ನ ನಡೆದಿತ್ತು. ಆದರೆ ಅದು ವಿಫಲವಾಯಿತು. 2024ರ ಲೋಕಸಭಾ ಚುನಾವಣೆಯಲ್ಲಿ ಬೇರೆ ಕೆಲವು ರಾಜ್ಯಗಳಲ್ಲಿಯೂ ಬಿಜೆಪಿ ದೊಡ್ಡ ಸೋಲನ್ನೇ ಕಂಡಿದೆಯಾದರೂ, ಯುಪಿಯಲ್ಲಿ ಕಂಡಷ್ಟು ಹೀನಾಯ ಸೋಲುಗಳಲ್ಲ ಅವು. ಇದನ್ನು ನೆಪವಾಗಿಟ್ಟುಕೊಂಡು ಆದಿತ್ಯನಾಥ್‌ರನ್ನು ಮಟ್ಟ ಹಾಕಲು ನೋಡಲಾಗುತ್ತಿದ್ದರೂ ಆದಿತ್ಯನಾಥ್ ಹಿಂದೆ ಈಗಲೂ ಆರೆಸ್ಸೆಸ್ ಗಟ್ಟಿಯಾಗಿ ನಿಲ್ಲಲಿದೆಯೇ ಎಂಬ ಪ್ರಶ್ನೆಯೂ ಇದೆ ಅಥವಾ ಈಗಾಗಲೇ ಬಿಜೆಪಿಯಲ್ಲಿ ಶಿವರಾಜ್ ಸಿಂಗ್ ಚೌಹಾಣ್, ವಸುಂಧರಾ ರಾಜೇ, ನಿತಿನ್ ಗಡ್ಕರಿ, ರಾಜನಾಥ್ ಸಿಂಗ್ ಅಂಥವರನ್ನೆಲ್ಲ ಬದಿಗೆ ಸರಿಸಲಾಗಿರುವಂತೆಯೇ ಆದಿತ್ಯನಾಥ್ ಅವರನ್ನೂ ಬದಿಗೆ ಸರಿಸಲಾಗುವುದೆ?

ಇದು, ಯುಪಿ ಮೇಲೆ ಹಿಡಿತ ಸಾಧಿಸಲು ಬಯಸಿರುವ ಮೋದಿ-ಶಾ ಜೋಡಿ ಮತ್ತು ಯುಪಿಯಲ್ಲಿನ ಸ್ಥಾನ ಭದ್ರವಾಗಿಸಿಕೊಳ್ಳುವ ಯತ್ನದಲ್ಲಿರುವ ಆದಿತ್ಯನಾಥ್ ನಡುವಿನ ನೇರ ಸಂಘರ್ಷವಾಗಲಿದೆಯೇ?

ಆತ್ಮವಿಶ್ವಾಸ ಅಗತ್ಯ ಎಂದು ಜೆಪಿ ನಡ್ಡಾ ಒಂದೆಡೆ ಹೇಳುತ್ತಿದ್ದರೆ, ಇನ್ನೊಂದೆಡೆ ಅತಿಯಾದ ಆತ್ಮವಿಶ್ವಾಸದಿಂದ ನಾವು ಚುನಾವಣೆ ಸೋತೆವು ಎಂದು ಆದಿತ್ಯನಾಥ್ ತಿರುಗೇಟು ಕೊಟ್ಟಿದ್ದಾರೆ.

ಯುಪಿ ಸೋಲಿಗೆ ಈಗ ಆದಿತ್ಯನಾಥ್ ಕಡೆ ಬೆರಳು ಮಾಡುತ್ತಿರುವವರಿಗೆ ಒಂದು ಸತ್ಯ ಗೊತ್ತಿರಬೇಕಾಗುತ್ತದೆ. ಏನೆಂದರೆ, ಲೋಕಸಭೆ ಚುನಾವಣೆಯಲ್ಲಿ ಆದಿತ್ಯನಾಥ್ ಪಾತ್ರ ಏನಿತ್ತು?

ಅಭ್ಯರ್ಥಿಗಳು ಆದಿತ್ಯನಾಥ್ ಅವರಿಗೆ ಬೇಕಾದವರಾಗಿರಲಿಲ್ಲ. ಇಡೀ ಚುನಾವಣಾ ತಂತ್ರಗಾರಿಕೆ ದಿಲ್ಲಿಯಲ್ಲಿ ತಯಾರಾಗಿತ್ತು. ದುಡ್ಡಿನ ವಿಚಾರದ ಉಸ್ತುವಾರಿಯೆಲ್ಲವೂ ಗುಜರಾತಿನವರ ಕೈಯಲ್ಲಿತ್ತು.ಕಡೆಗೆ ರಾಜ್ಯದೆಲ್ಲೆಡೆ ಪೋಸ್ಟರುಗಳಲ್ಲೂ ಮೋದಿ ಒಬ್ಬರೇ ಮಿಂಚುತ್ತಿದ್ದರು.

‘‘ಡಬಲ್ ಎಂಜಿನ್‌ನ ಒಂದು ಇಂಜಿನ್ ಯಾವುದೇ ಬಿಜೆಪಿ ಪೋಸ್ಟರ್‌ನಲ್ಲಿ ಕಾಣಿಸುತ್ತಲೇ ಇಲ್ಲ’’ ಎಂದು ಅಖಿಲೇಶ್ ಯಾದವ್ ಲೇವಡಿ ಮಾಡಿದ ಬಳಿಕವೇ ಆದಿತ್ಯನಾಥ್ ಅವರು ಪೋಸ್ಟರ್‌ಗಳಲ್ಲಿ ಕಾಣಿಸಿಕೊಂಡಿದ್ದರು. ಈಗ ಆದಿತ್ಯನಾಥ್ ಅವರನ್ನು ಕೆಳಗಿಳಿಸುವ ತಯಾರಿಯೊಂದು ಯುಪಿಯಲ್ಲಿಯೂ, ದಿಲ್ಲಿಯಲ್ಲಿಯೂ ನಡೆದಿರುವಾಗ, 2017ರಲ್ಲಿ ಆದಿತ್ಯನಾಥ್ ಯುಪಿ ಸಿಎಂ ಹುದ್ದೆಗೆ ಏರಿದ್ದು ಹೇಗೆ ಎಂಬುದನ್ನೊಮ್ಮೆ ಅವಲೋಕಿಸಬೇಕು.

ಆಗ ಮನೋಜ್ ಸಿನ್ಹಾ ಅವರನ್ನು ಸಿಎಂ ಮಾಡುವ ತಯಾರಿ ನಡೆದಿತ್ತು. ಈ ಬಗ್ಗೆ ಮೋದಿಯವರಿಂದ ಶಾಗೆ ಸಂದೇಶ ಹೋಗಿತ್ತು. ಈ ವಿಚಾರವನ್ನು ನಂತರ ಮುರಳಿ ಮನೋಹರ್ ಜೋಶಿ ಮೂಲಕ ಆರೆಸ್ಸೆಸ್‌ಗೆ ತಲುಪಿಸಲಾಗಿತ್ತು. ಸಿನ್ಹಾ ಅವರನ್ನು ಸಿಎಂ ಮಾಡುವ ಇಂಗಿತದ ಬಗ್ಗೆ ಆರೆಸ್ಸೆಸ್ ಜೊತೆ ಜೋಶಿ ಮಾತನಾಡಿದ್ದರು. ಆ ವೇಳೆ ಆರೆಸ್ಸೆಸ್ ಬೈಠಕ್ ಕೇರಳದಲ್ಲಿ ನಡೆಯುತ್ತಿತ್ತು.

ಸರಕಾರ ಮತ್ತು ಆರೆಸ್ಸೆಸ್ ನಡುವೆ ಹೊಂದಾಣಿಕೆಗೆ ಕೃಷ್ಣಗೋಪಾಲ್ ಯತ್ನಿಸಿದ್ದರು. ಕಡೆಗೆ ಆರೆಸ್ಸೆಸ್ ಆದಿತ್ಯನಾಥ್ ಪರವಾಗಿ ನಿಂತಿತ್ತು. ಅಯೋಧ್ಯೆಗಾಗಿ ಹೋರಾಡಿದ್ದ ನಾಯಕ ಎಂದು ಆರೆಸ್ಸೆಸ್ ಆದಿತ್ಯನಾಥ್ ಅವರನ್ನು ಗುರುತಿಸಿತ್ತು.

ಮೋದಿ 2014ರಿಂದ 2019ರವರೆಗೂ ಅಯೋಧ್ಯೆ ವಿಚಾರವಾಗಿ ಮಾಡಿದ್ದೇನೂ ಇರಲಿಲ್ಲ ಎಂಬುದು ವಾಸ್ತವ. ಪ್ರಣಾಳಿಕೆಯಲ್ಲಿ ಕೂಡ ರಾಮಮಂದಿರ ಆಗ ಒಂದು ಸಾಲಿನ ವಿಷಯ ಮಾತ್ರವಾಗಿತ್ತು.

ಐದು ಬಾರಿ ಸಂಸದರಾಗಿರುವ ಆದಿತ್ಯನಾಥ್‌ಗಿಂತ ಉತ್ತಮ ನಾಯಕ ಸಿಎಂ ಹುದ್ದೆಗೆ ಯಾರಿದ್ದಾರೆ ಎಂದು ಕೇಳುವ ಮೂಲಕ ಆರೆಸ್ಸೆಸ್ ಆದಿತ್ಯನಾಥ್ ಪರ ನಿಂತಿತ್ತು. ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡುವ ಅನಿವಾರ್ಯತೆ ಮೋದಿ-ಶಾ ಜೋಡಿಗೆ ಎದುರಾಗಿತ್ತು. ಹೀಗೆ ಸಂಘದ ಬಲದಿಂದ ಆದಿತ್ಯನಾಥ್ ಯುಪಿ ಸಿಎಂ ಆಗಿದ್ದರು.

2022ರಲ್ಲಿ ಆದಿತ್ಯನಾಥ್ ಅವರನ್ನು ಕೆಳಗಿಳಿಸುವ ಯತ್ನಗಳು ನಡೆದಿದ್ದಾಗಲೂ ತಕ್ಷಣ ಆದಿತ್ಯನಾಥ್ ಬೆನ್ನಿಗೆ ನಿಂತದ್ದು ಆರೆಸ್ಸೆಸ್ ಮತ್ತು ಆದಿತ್ಯನಾಥ್ ಕುರ್ಚಿಯನ್ನು ಅದು ಉಳಿಸಿತ್ತು. ಈಗಲೂ ಮತ್ತೊಮ್ಮೆ ಆರೆಸೆಸ್ ಆದಿತ್ಯನಾಥ್ ಬೆಂಬಲಕ್ಕೆ ಬಂದು ನಿಲ್ಲುವುದೇ? ಎಂಬುದು ಈಗಿರುವ ಪ್ರಶ್ನೆ.

ಯುಪಿಯಲ್ಲಿನ ಸೋಲಿಗೆ ತಾನು ಕೊರಳು ಕೊಡುವುದಕ್ಕಂತೂ ಆದಿತ್ಯನಾಥ್ ತಯಾರಿಲ್ಲ ಎಂಬುದು ಸ್ಪಷ್ಟ. ಅದಕ್ಕಾಗಿಯೇ ಅವರು ‘‘ಅತಿಯಾದ ಆತ್ಮವಿಶ್ವಾಸದಿಂದ ಬಿಜೆಪಿಗೆ ಸೋಲಾಗಿದೆ’’ ಎಂದು ದಿಲ್ಲಿ ನಾಯಕರನ್ನು ತಿವಿದಂತೆ ಮಾತಾಡಿರುವುದು.

ಮಹಾರಾಷ್ಟ್ರದಲ್ಲಿಯೂ ಬಿಜೆಪಿ ಸರಿಯಾಗಿಯೇ ಏಟು ತಿಂದಿದೆ. ಹರ್ಯಾಣದ ಫಲಿತಾಂಶ ಕೂಡ ಬಿಜೆಪಿ ಪಾಲಿಗೆ ವಿರುದ್ಧವಾಗಿತ್ತು. ಇಷ್ಟಾಗಿಯೂ ಯುಪಿ ಸೋಲಿನ ಮೇಲೆಯೇ ಬಿಜೆಪಿ ಹೆಚ್ಚು ಗಂಭೀರವಾಗಿರುವುದಕ್ಕೆ ಕಾರಣ ಮೋದಿ-ಶಾ ಜೋಡಿಗೆ ಆದಿತ್ಯನಾಥ್ ಬೇಡವಾಗಿರುವುದೇ ಆಗಿದೆ. ಆದಿತ್ಯನಾಥ್ ಅವರನ್ನು ಹುದ್ದೆಯಲ್ಲಿ ಉಳಿಸುವುದು ದಿಲ್ಲಿ ಮಂದಿಗೆ ಬೇಕಿಲ್ಲ ಎಂಬುದು ಆರೆಸ್ಸೆಸ್‌ಗೂ ಗೊತ್ತಿದೆ.

ಆದಿತ್ಯನಾಥ್ ಆರೆಸ್ಸೆಸ್ ಗರಡಿಯಲ್ಲಿ ಬೆಳೆದವರಲ್ಲ. ಅವರಿಗೂ ಆರೆಸ್ಸೆಸ್‌ಗೂ ಅಲ್ಲಲ್ಲಿ ಒಂದಿಷ್ಟು ಅಂತರ ಈಗಲೂ ಇದೆ. ಆದರೆ ಬಹಳಷ್ಟು ವಿಷಯಗಳಲ್ಲಿ ಆದಿತ್ಯನಾಥ್ ಹಾಗೂ ಆರೆಸ್ಸೆಸ್ ನಡುವೆ ಬಾಂಧವ್ಯ ಕೂಡ ಇದೆ. ಆದರೆ ಈ ನಡುವೆಯೇ ಮಹಾರಾಷ್ಟ್ರ ಮತ್ತು ಹಯಾರ್ಣದಲ್ಲಿ ಇನ್ನು ಮೂರೇ ತಿಂಗಳಲ್ಲಿ ಚುನಾವಣೆ ನಡೆಯಲಿರುವುದರಿಂದ, ಆಟ ಸ್ವಲ್ಪ ಮುಂದಕ್ಕೆ ಹೋಗಬಹುದು.

ಹೀಗಿರುವಾಗಲೇ ಗಮನಿಸಬೇಕಾದ ಒಂದು ಸಂಗತಿಯೆಂದರೆ, ಯುಪಿಯಲ್ಲಿನ ಅಸೆಂಬ್ಲಿ ಚುನಾವಣೆಯಲ್ಲಾಗಲೀ, ಲೋಕಸಭೆ ಚುನಾವಣೆಯಲ್ಲಾಗಲೀ ಮೋದಿ ಮುಖವನ್ನು ತೋರಿಸಲಾಗಿದ್ದರೂ ಆದಿತ್ಯನಾಥ್ ತಮ್ಮ ಪ್ರಭಾವವಿರುವ ಗೋರಖ್‌ಪುರದ ಎಲ್ಲ ಸೀಟುಗಳನ್ನೂ ಗೆದ್ದುಕೊಂಡು ಬಂದಿದ್ದಾರೆ. ಆದರೆ ವಾರಣಾಸಿ ಸುತ್ತಮುತ್ತ ಬಿಜೆಪಿಗೆ ಗೆಲ್ಲಲಾಗಲಿಲ್ಲ ಎಂಬುದಕ್ಕೆ ಯಾರು ಹೊಣೆ? ಕೆಲವು ವರದಿಗಳ ಪ್ರಕಾರ ಆದಿತ್ಯನಾಥ್ ಪ್ರಚಾರಕ್ಕೆ ಹೋಗದೆ ಇರುತ್ತಿದ್ದರೆ ವಾರಣಾಸಿಯಲ್ಲೇ ಮೋದಿ ಮುಗ್ಗರಿಸುವ ಸಾಧ್ಯತೆ ಇತ್ತು.

ಹಾಗಾದರೆ ಇಲ್ಲಿ ಆಪತ್ತಿನ ಸೂಚನೆ ದಿಲ್ಲಿಗೋ ಅಥವಾ ಲಕ್ನೋಗೊ? ಯೋಗಿ ವಿರುದ್ಧ ಬೆರಳು ಮಾಡುವವರು ಬಿಜೆಪಿ ಸೋಲಿಗೆ ಮೋದಿ ಕಡೆಗೂ ಬೆರಳು ಮಾಡಬೇಕಲ್ಲವೆ? ಇಂಥ ರಾಜಕೀಯ ಸನ್ನಿವೇಶದಲ್ಲಿ ಮೋದಿ ಮತ್ತು ಆದಿತ್ಯನಾಥ್ ಇಬ್ಬರೂ ಎದುರುಬದುರಾದ ಹಾಗಿದೆ.

ಮೂರು ತಿಂಗಳ ಬಳಿಕ ಮೂರು ರಾಜ್ಯಗಳ ವಿಧಾನಸಭೆ ಚುನಾವಣೆಗಳಲ್ಲಿ ಫಲಿತಾಂಶ ಬಿಜೆಪಿಗೆ ವಿರುದ್ಧವಾಗಿ ಬಂದರೆ, ಆಗ ಎಲ್ಲ ಬೆರಳುಗಳೂ ದಿಲ್ಲಿಯ ಕಡೆಗೆ ತಿರುಗಲಿವೆ ಎಂಬುದೂ ಅಷ್ಟೇ ನಿಜ.

ಮೋದಿ-ಶಾ ಜೋಡಿಗೆ ತಮ್ಮ ನೇತೃತ್ವದ ಬಿಜೆಪಿಯ ಅಸ್ತಿತ್ವದ ಪ್ರಶ್ನೆ ಎದುರಿಗಿರುವಾಗ, ಆದಿತ್ಯನಾಥ್ ಮತ್ತು ಆರೆಸ್ಸೆಸ್ ಸವಾಲಾಗುವ ಸಾಧ್ಯತೆಯಿದೆಯೇ? ಮತ್ತು ಈ ಮುಖಾಮುಖಿ, ಈ ಸಂಘರ್ಷ ಬಿಜೆಪಿಯನ್ನು ಎಲ್ಲಿಗೆ ತೆಗೆದುಕೊಂಡು ಹೋಗಬಹುದು? ಆರೆಸ್ಸೆಸ್ ಆಸರೆಯ ಅಗತ್ಯ ತನಗಿಲ್ಲವೆನ್ನುವ ಬಿಜೆಪಿಯ ಮುಂದಿನ ಹೋರಾಟ ಹೇಗೆ?

Writer - ವಾರ್ತಾಭಾರತಿ

contributor

Editor - Mushaveer

contributor

Byline - ಪಿ.ಎಚ್. ಅರುಣ್

contributor

Similar News