ಸಹ್ಯಾದ್ರಿ ತಪ್ಪಲಿನ ಹಾಲ್ನೊರೆಯ ಜಲಪಾತಗಳಿವು ಪ್ರವಾಸಿಗರನ್ನು ಆಕರ್ಷಿಸುತ್ತಿವೆ ಜಲಧಾರೆಗಳು

Update: 2024-07-22 09:43 GMT

ಶಿವಮೊಗ್ಗ: ಜಿಲ್ಲೆಯಲ್ಲಿ ಸುರಿಯುತ್ತಿರುವ ಪುನರ್ವಸು ಮಳೆಯಿಂದ ಸಹ್ಯಾದ್ರಿ ಗಿರಿಶ್ರೇಣಿಗಳಲ್ಲಿನ ಧುಮ್ಮಿಕ್ಕುವ ಜಲಧಾರೆಗಳಿಗೆ ಜೀವಕಳೆ ಬಂದಿದೆ. ಜಿಲ್ಲೆಯ ಆಗುಂಬೆ, ಕೊಡಚಾದ್ರಿ, ಜೋಗ ಸೇರಿದಂತೆ ವಿವಿಧೆಡೆ ಪ್ರಕೃತಿಯ ಒಡಲಲ್ಲಿ ಹಾಲ್ನೊರೆಯಂತೆ ಧುಮ್ಮಿಕ್ಕುವ ಜಲಪಾತಗಳು ಪ್ರವಾಸಿಗರನ್ನು ತನ್ನತ್ತ ಕೈಬೀಸಿ ಕರೆಯುತ್ತಿವೆ.

ವಿಶ್ವವಿಖ್ಯಾತ ಜೋಗ:

ಶರಾವತಿ ನದಿಯಿಂದ ಉಕ್ಕಿ ಹರಿಯುವಾಗ ನಯಗಾರದಂತೆ ಮೈದುಂಬಿ ಹರಿಯುವ ವಿಶ್ವ ವಿಖ್ಯಾತ ಜೋಗ ಜಲಪಾತ ಪ್ರವಾಸಿಗರನ್ನು ತನ್ನತ್ತ ಆಕರ್ಷಿಸುತ್ತಿದೆ. ಮುಂಗಾರು ಮಳೆ ಆರಂಭವಾಗುತ್ತಿದ್ದಂತೆ ಜೋಗ ಜಲಪಾತದ ನಾಲ್ಕು ಕವಲುಗಳಲ್ಲಿ ನೀರು ಧುಮ್ಮಿಕ್ಕುವುದನ್ನು ನೋಡುವುದೇ ಸೊಬಗು.

ರಾಜ, ರೋರರ್, ರಾಣಿ, ರಾಕೇಟ್ ಕವಲುಗಳಿಂದ ರಾಜ ಗಾಂಭೀರ್ಯದಿಂದ ಭೋರ್ಗರೆಯುವ ಸದ್ದಿನಿಂದ ಆಕಾಶಕ್ಕೆ ಚಿಮ್ಮುವ ಹಾಲ್ನೊರೆಯಂತಹ ನೀರು ಬಿಳಿ ಮೋಡಗಳ ಹಿಂದೆ ಕಣ್ಣಾಮುಚ್ಚಾಲೆ ಆಡುತ್ತಾ ಪ್ರವಾಸಿಗರನ್ನು ಮೂಕವಿಸ್ಮಿತರನ್ನಾಗಿಸುತ್ತಿದೆ.

► ಜೋಗ ತಲುಪುವುದು ಹೇಗೆ: ಸಾಗರ ತಾಲೂಕು ತಾಳಗುಪ್ಪ ರೈಲು ನಿಲ್ದಾಣದಿಂದ 16 ಕಿ.ಮೀ., ಶಿವಮೊಗ್ಗದಿಂದ 100 ಕಿ.ಮೀ., ಹೊನ್ನಾವರದಿಂದ 56 ಕಿ.ಮೀ.,ಬೆಂಗಳೂರಿನಿಂದ 419 ಕಿ.ಮೀ.

ಮಾವಿನಗುಂಡಿ ಜಲಪಾತ

ಮಾವಿನ ಗುಂಡಿ ಜೋಗ ಜಲಪಾತದ ಸಮೀಪದಲ್ಲಿ ಧುಮ್ಮಿಕ್ಕುವ ಮತ್ತೊಂದು ಜಲಪಾತ.ಜೋಗ ಜಲಪಾತದಿಂದ 4 ಕಿ.ಮೀ. ದೂರದಲ್ಲಿದೆ. ಸುಮಾರು 800 ಅಡಿ ಆಳದಿಂದ ಪಶ್ಚಿಮ ಘಟ್ಟದ ಹಸಿರು ಸಿರಿಯ ನಡುವೆ ಬಿಳಿ ಸೀರೆಯುಟ್ಟು ಬಳುಕುತ್ತಿರುವ ಜಲಪಾತ.

► ತಲುಪುವುದು ಹೇಗೆ: ಜೋಗದಿಂದ ಹೊನ್ನಾವರ ಮಾರ್ಗದ ರಾಷ್ಟ್ರೀಯ ಹೆದ್ದಾರಿಯಲ್ಲಿ 4 ಕಿ.ಮೀ. ಕ್ರಮಿಸಿದರೆ ಮಾವಿನಗುಂಡಿ ಸರ್ಕಲ್ ಬರುತ್ತದೆ. ಇಲ್ಲಿಂದ ಸಿದ್ದಾಪುರ ತಾಲೂಕು ಕೇಂದ್ರವನ್ನು ಸಂಪರ್ಕಿಸುವ ರಾಜ್ಯ ಹೆದ್ದಾರಿಯಲ್ಲಿ ಸಾಗಿದರೆ ಅರ್ಧ ಕಿ.ಮೀ. ದೂರದಲ್ಲಿ ಎಡಭಾಗದಲ್ಲಿ ಈ ಜಲಪಾತವಿದೆ. ಶಿರಸಿ ಮೂಲಕ ಬರುವವರು ಶಿರಸಿಯಿಂದ 30 ಕಿ.ಮೀ. ದೂರ ಸಿದ್ದಾಪುರ, ಸಿದ್ದಾಪುರದಿಂದ 28 ಕಿ.ಮೀ. ದೂರದಲ್ಲಿ ಮಾವಿನಗುಂಡಿ ಜಲಪಾತ ಸಿಗುತ್ತದೆ.

ಜೋಗಿ ಗುಂಡಿ

ಕರ್ನಾಟಕದ ಚಿರಾಪುಂಜಿ ಎಂದೇ ಕರೆಯಲಾಗುವ ಆಗುಂಬೆ ಪ್ರವಾಸಿಗರ ನೆಚ್ಚಿನ ಪ್ರವಾಸಿ ತಾಣಗಳಲ್ಲಿ ಒಂದಾಗಿದೆ. ಆಗುಂಬೆಯಿಂದ 10 ಕಿ.ಮೀ. ದೂರದಲ್ಲಿರುವ ಮಲಂದೂರು ಗ್ರಾಮದಲ್ಲಿರುವ ಜೋಗಿ ಗುಂಡಿ ಆಕರ್ಷಕವಾಗಿದೆ. ಜೋಗಿ ಗುಂಡಿ ಜಲಪಾತವು ಸುಮಾರು 20 ಅಡಿ ಎತ್ತರದಿಂದ ಬೃಹತ್ ಕೊಳಕ್ಕೆ ಧುಮುಕುತ್ತದೆ. ಈ ಸ್ಥಳದಲ್ಲಿ ಧ್ಯಾನ ಮಾಡುತ್ತಿದ್ದ ಸಂತ ಜೋಗಿಯಿಂದ ಈ ಜಲಪಾತಕ್ಕೆ ಈ ಹೆಸರು ಬಂದಿದೆ ಎನ್ನಲಾಗುತ್ತಿದೆ. ಈ ಜಲಪಾತದ ವಿಶಿಷ್ಟ ಲಕ್ಷಣವೆಂದರೆ ಸಾಂಪ್ರದಾಯಿಕ ಜಲಪಾತಗಳಿಗಿಂತ ಭಿನ್ನವಾಗಿ, ಗುಹೆಯಿಂದ ಹುಟ್ಟಿಕೊಂಡಿದೆ ಮತ್ತು ಬೆಟ್ಟದ ಮೂಲಕ ಹರಿಯುತ್ತದೆ. ಈ ತೊರೆಯಿಂದ ಬರುವ ನೀರು ತುಂಗಭದ್ರೆಯ ಉಪನದಿಯಾದ ಮಲಪಹಾರಿ ನದಿಗೆ ಸೇರುತ್ತದೆ. ಜಲಪಾತದ ಸುತ್ತಮುತ್ತಲಿನ ಪ್ರದೇಶವು ಅದ್ಭುತವಾದ ನೈಸರ್ಗಿಕ ಸೌಂದರ್ಯವನ್ನು ಸೆರೆಹಿಡಿಯುತ್ತದೆ. ಜಲಪಾತಕ್ಕೆ ಇಳಿಯಲು ಮತ್ತು ಕೊಳದಲ್ಲಿ ಈಜಲು ಸಾಧ್ಯವಿದೆ.

ತಲಾಸಿ ಅಬ್ಬಿ ಫಾಲ್ಸ್

ಹೊಸನಗರ ತಾಲೂಕು ಯಡೂರು ಸಮೀಪದ ತಲಾಸಿ ಅಬ್ಬಿ ಜಲಪಾತದಲ್ಲಿ ಭಾರೀ ಪ್ರಮಾಣದಲ್ಲಿ ನೀರು ಧುಮುಕುತ್ತದೆ. ಹಾಲು ನೊರೆಯಂತೆ ಆಕರ್ಷಕವಾಗಿ ಧುಮ್ಮಿಕ್ಕುವ ಅಬ್ಬಿ, ತನ್ನ ಪೂರ್ಣ ಸೊಬಗನ್ನು ಪಡೆಯುವುದೇ ಮಳೆಗಾಲದಲ್ಲಿ. ಕಲ್ಲಿನ ಮೇಲಿನ ಜಾರುವಿಕೆಯಿಂದಾಗಿ ಮಳೆಗಾಲದಲ್ಲಿ ಕೊಂಚ ಅಪಾಯಕಾರಿ. ಮಾಸ್ತಿಕಟ್ಟೆ-ತೀರ್ಥಹಳ್ಳಿ ನಡುವೆ ಯಡೂರು ಸಮೀಪದ ಮುಖ್ಯ ರಸ್ತೆಯಲ್ಲಿ 600 ಮೀಟರ್ ಕಚ್ಚಾ ರಸ್ತೆಯಲ್ಲಿ ಸಾಗಿದರೆ ಜಲಪಾತ ವೀಕ್ಷಣೆ ಮಾಡಬಹುದು.

ಅಚ್ಚಕನ್ಯೆ ಫಾಲ್ಸ್

ಪಶ್ಚಿಮ ಘಟ್ಟಗಳ ಹಚ್ಚ ಹಸಿರಿನ ನಡುವೆ ಅಡಗಿರುವ ಈ ಆಕರ್ಷಕ ಜಲಪಾತವು ಸುಮಾರು 6 ರಿಂದ 7 ಅಡಿ ಎತ್ತರವನ್ನು ಹೊಂದಿದೆ. ಎಲ್ಲ ಕಡೆಗಳಲ್ಲಿ ಎಲೆಗೊಂಚಲುಗಳಿಂದ ಸುತ್ತುವರಿದಿರುವ ಬಿಳಿ ನೀರಿನ ಹರಿವು ಪ್ರವಾಸಿಗರಿಗೆ ಆಹ್ಲಾದಕರ ನೋಟವನ್ನು ಒದಗಿಸುತ್ತದೆ.

ಈ ಜಲಪಾತ ತೀರ್ಥಹಳ್ಳಿ ತಾಲೂಕಿನ ಅರಳಸುಳಿ ಸಮೀಪವಿದೆ. ತೀರ್ಥಹಳ್ಳಿ-ಹೊಸನಗರ ಹೆದ್ದಾರಿಗೆ ಸಮೀಪವಿದ್ದು,ಮುಖ್ಯ ರಸ್ತೆಯಿಂದ 2 ಕಿ.ಮೀ. ಒಳಗಿದೆ.

ಹಿಡ್ಲುಮನೆ ಫಾಲ್ಸ್

ಕೊಡಚಾದ್ರಿ ತಪ್ಪಲಿನಲ್ಲಿರುವ ಹಿಡ್ಲುಮನೆ ಫಾಲ್ಸ್ ಮಳೆಗಾಲದಲ್ಲಿ ಪ್ರವಾಸಿಗರನ್ನು ಆಕರ್ಷಿಸುತ್ತದೆ. ಕೊಡಚಾದ್ರಿ ಬೆಟ್ಟಕ್ಕೆ ಹೋಗುವ ಪ್ರವಾಸಿಗರು ಈ ಸ್ಥಳಕ್ಕೆ ಭೇಟಿ ನೀಡಬಹುದು.ಜಲಪಾತವು 6 ಅಥವಾ 7 ಜಲಪಾತಗಳ ಸರಣಿಯಾಗಿ ಹರಿಯುತ್ತದೆ. ಮಾನ್ಸೂನ್ ನಂತರದ ಅವಧಿಯಲ್ಲಿ ಅಂದರೆ ಸೆಪ್ಟೆಂಬರ್‌ನಿಂದ ಜನವರಿವರೆಗೆ ಜಲಪಾತವನ್ನು ಭೇಟಿ ಮಾಡಲು ಉತ್ತಮ ಸಮಯ. ಈ ತಿಂಗಳುಗಳಲ್ಲಿ ಹೆಚ್ಚಿನ ನೀರಿನ ಪ್ರಮಾಣದಿಂದಾಗಿ ಜಲಪಾತವು ಹೆಚ್ಚಿನ ವೇಗದೊಂದಿಗೆ ಕೆಳಕ್ಕೆ ಹರಿಯುತ್ತದೆ ಮತ್ತು ಸಂದರ್ಶಕರಿಗೆ ಉಲ್ಲಾಸಕರ ನೋಟವನ್ನು ನೀಡುತ್ತದೆ. ಜಲಪಾತವನ್ನು ತಲುಪಲು ಎರಡು ಚಾರಣ ಮಾರ್ಗಗಳಿವೆ, ಒಂದು ನಿಟ್ಟೂರು ಗ್ರಾಮದಿಂದ ಪ್ರಾರಂಭವಾಗುತ್ತದೆ ಮತ್ತು ಇನ್ನೊಂದು ಕೊಡಚಾದ್ರಿ ಶಿಖರದಿಂದ ಪ್ರಾರಂಭವಾಗುತ್ತದೆ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಶರತ್ ಪುರದಾಳ್

contributor

Similar News