ಸಿದ್ದಾಪುರ: ಕಾವೇರಿ ನದಿಪಾತ್ರದಲ್ಲಿ ಪ್ರವಾಹದ ಭೀತಿ
ಮಡಿಕೇರಿ : ಕೊಡಗು ಜಿಲ್ಲೆಯ ವೀರಾಜಪೇಟೆ ತಾಲೂಕಿನ ಸಿದ್ದಾಪುರ ವ್ಯಾಪ್ತಿಯ ಕಾವೇರಿ ನದಿಪಾತ್ರದಲ್ಲಿ ಮತ್ತೊಂದು ಪ್ರವಾಹದ ಕಾರ್ಮೋಡ ಆತಂಕ ಸೃಷ್ಟಿಸಿದೆ. 2018, 2019ರ ಆಘಾತದಿಂದ ಇನ್ನೂ ಚೇತರಿಸಿಕೊಳ್ಳದ ಇಲ್ಲಿನ ನಿವಾಸಿಗಳು ಈಗ ಮತ್ತೆ ಕಂಗೆಟ್ಟು ಕುಳಿತಿದ್ದಾರೆ. ಜಿಲ್ಲಾಡಳಿತ ಕಾಳಜಿ ಕೇಂದ್ರ ಆರಂಭಿಸಿದ್ದರೂ ಸ್ಥಳೀಯರ ಶಾಶ್ವತ ಪರಿಹಾರದ ಕನಸು ಇನ್ನೂ ಕನಸಾಗಿಯೇ ಉಳಿದಿದೆ.
ವೀರಾಜಪೇಟೆ ತಾಲೂಕಿನ ಸಿದ್ದಾಪುರ ವ್ಯಾಪ್ತಿಯ ಕರಡಿಗೋಡು, ಗುಹ್ಯ ಹಾಗೂ ಕುಶಾಲ ನಗರ ತಾಲೂಕಿನ ನೆಲ್ಲಿಹುದಿಕೇರಿಯ ಬೆಟ್ಟದ ಕಾಡು, ಬರಡಿ, ಕುಂಬಾರಗುಂಡಿಯ ನದಿ ದಡದ ಗ್ರಾಮಗಳು ಪ್ರತಿ ಮಳೆಗಾಲದಲ್ಲೂ ಕಾವೇರಿಯ ಪ್ರವಾಹದಲ್ಲಿ ಮುಳುಗುವುದು ಸಾಮಾನ್ಯ ಎಂಬಂತಾಗಿದೆ. ಈ ವರ್ಷವೂ ಜಿಲ್ಲೆಯಲ್ಲಿ ವರುಣನ ಆರ್ಭಟ ಮುಂದುವರಿದಿದೆ. ನಿರಂತರ ಮಳೆಯಿಂದಾಗಿ ಸಿದ್ದಾಪುರ ಸುತ್ತಮುತ್ತ ಗ್ರಾಮಗಳ ನದಿ-ತೊರೆಗಳು ಉಕ್ಕಿ ಹರಿಯುತ್ತಿದೆ. ನದಿಯಂಚಿನ ಪ್ರದೇಶಗಳಲ್ಲಿ ಪ್ರವಾಹ ಭೀತಿ ಉಂಟಾಗಿದೆ. ಈ ಹಿನ್ನೆಲೆಯಲ್ಲಿ ಸಿದ್ದಾಪುರದ ಸ್ವರ್ಣ ಮಾಲ ಮಂಟಪ, ನೆಲ್ಲಿಹುದಿಕೇರಿಯ ಸ್ಥಳೀಯ ಸರಕಾರಿ ಶಾಲೆ ಹಾಗೂ ಸಮುದಾಯ ಭವನದಲ್ಲಿ ಕಾಳಜಿ ಕೇಂದ್ರ ತೆರೆಯಲಾಗಿದೆ.
ಕಾಳಜಿ ಕೇಂದ್ರದಲ್ಲಿರುವ ಸಂತ್ರಸ್ತರಿಗೆ ಜಿಲ್ಲಾಡಳಿತ ಈಗಾಗಲೇ ಅಗತ್ಯ ಸೌಲಭ್ಯ ಒದಗಿಸಿದೆ. ಎರಡೂ ತಾಲೂಕಿನ ತಹಶೀಲ್ದಾರ್, ಕಂದಾಯ ಇಲಾಖೆ ಅಧಿಕಾರಿಗಳು ಸ್ಥಳದಲ್ಲಿ ಮೊಕ್ಕಾಂ ಹೂಡಿ ಮುಂಜಾಗ್ರತಾ ಕ್ರಮ ಕೈಗೊಂಡಿದ್ದಾರೆ. ನದಿ ದಡದಲ್ಲಿ ವಾಸವಿರುವ 200ಕ್ಕೂ ಹೆಚ್ಚು ಕುಟುಂಬಗಳಿಗೆ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ನೋಟಿಸ್ ಕೂಡ ನೀಡಲಾಗಿದೆ. ಪ್ರತಿ ವರ್ಷ ಪ್ರವಾಹದ ಸಂದರ್ಭ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಭರವಸೆಯ ಮಾತುಗಳನ್ನಾಡಿ ಹೋದರೆ ಅವರು ಮತ್ತೆ ಕಾಣಿಸಿಕೊಳ್ಳುವುದು ಮತ್ತೊಂದು ಮಳೆಗಾಲದಲ್ಲಿ. ಶಾಶ್ವತ ಪರಿಹಾರದ ಬಗ್ಗೆ ಚಿಂತನೆ ಹರಿಸಿಬೇಕಾದವರು ಬಡವರ ಬದುಕಿನಲ್ಲಿ ಚೆಲ್ಲಾಟ ಆಡುತ್ತಾರೆ ಎಂದು ಗ್ರಾಮಸ್ಥರು ಆರೋಪಿಸುತ್ತಿದ್ದಾರೆ.
ಶೆಡ್‌ಗಳಲ್ಲೇ ಜೀವನ
2018, 2019ರ ಪ್ರವಾಹದಲ್ಲಿ ಮನೆ ಕಳೆದುಕೊಂಡ ಸಂತ್ರಸ್ತರು ಈ ಹಿಂದೆ ತಮ್ಮ ಮನೆ ಗಳಿದ್ದ ಜಾಗದಲ್ಲಿ ಪ್ಲಾಸ್ಟಿಕ್ ಹೊದಿಕೆಯ ಶೆಡ್‌ಗಳನ್ನು ನಿರ್ಮಿಸಿಕೊಂಡು ಜೀವನ ಸಾಗಿಸುತ್ತಿದ್ದಾರೆ. ನೂರಾರು ಮನೆಗಳಲ್ಲಿ ಗೋಡೆ ಬಿರುಕು ಬಿಟ್ಟು ವಾಸಕ್ಕೆ ಯೋಗ್ಯವಲ್ಲದ ಸ್ಥಿತಿಯಲ್ಲಿವೆ. ಕೆಲ ಸಂತ್ರಸ್ತರು ಬಾಡಿಗೆ ಮನೆಯಲ್ಲಿ ವಾಸವಾಗಿದ್ದಾರೆ. ಇದುವರೆಗೂ ಬಾಡಿಗೆ ಹಣವೂ ಸರಕಾರದಿಂದ ಸಿಕ್ಕಿಲ್ಲ. ಸಿದ್ದಾಪುರದ ಗುಹ್ಯ, ಕರಡಿಗೋಡು, ನೆಲ್ಯಹುದಿಕೇರಿಯ ಬರಡಿ, ಬೆಟ್ಟದಕಾಡು ಮುಂತಾದ ಪ್ರದೇಶಗಳಲ್ಲಿ ಪ್ರತಿ ವರ್ಷ ಪ್ರವಾಹ ಉಂಟಾಗುತ್ತಿದ್ದು, ಇಲ್ಲಿನ ನಿವಾಸಿಗಳ ಜೀವಕ್ಕೆ ರಕ್ಷಣೆ ಇಲ್ಲದಂತಾಗಿದೆ. ನದಿ ದಡದಲ್ಲಿ ಸೂರು ಕಟ್ಟಿಕೊಂಡು ವಾಸಿಸುತ್ತಿರುವುದು ಹೆಚ್ಚಾಗಿ ಬಡವರ್ಗದ ಜನರೇ ಆಗಿದ್ದಾರೆ. ಇದರಿಂದ ಸ್ವಂತ ಜಾಗ ಖರೀದಿಸಿ ಮನೆ ಕಟ್ಟಲು ಸಾಧ್ಯವಾಗದೆ ಸಂಕಟದಲ್ಲಿ ಬೇರೆ ಮಾರ್ಗವಿಲ್ಲದೆ ನದಿದಡದಲ್ಲೇ ಜೀವನ ಸಾಗಿಸಬೇಕಾದ ಅನಿವಾರ್ಯತೆ ಇವರದ್ದು, ಮಳೆಗಾಲದ ಪ್ರವಾಹಕ್ಕೆ ನೀರು ನುಗ್ಗುವ ಸಂದರ್ಭದಲ್ಲಿ ಮನೆ ವಸ್ತುಗಳೊಂದಿಗೆ ಕಾಳಜಿ ಕೇಂದ್ರಕ್ಕೆ ತೆರಳುವ ಸ್ಥಳೀಯರು ಪ್ರವಾಹದ ಬಳಿಕ ಹಿಂತಿರುಗುತ್ತಾರೆ.
ಎಂಟು ಎಕರೆ ಜಾಗ ತೆರವು
ನೆಲ್ಲಿಹುದಿಕೇರಿ ವ್ಯಾಪ್ತಿಯ ಸಂತ್ರಸ್ತರಿಗೆ ಅಭ್ಯತ್ ಮಂಗಲ ಗ್ರಾಮದಲ್ಲಿ ಒತ್ತುವರಿಯಾಗಿದ್ದ 8 ಎಕರೆ ಜಾಗವನ್ನು ಜಿಲ್ಲಾಡಳಿತ ತೆರವುಗೊಳಿಸಿ ಪುನರ್ವಸತಿ ಕಲ್ಪಿಸಲು ಮೀಸಲಿಟ್ಟಿತ್ತು. ಆದರೆ, ವರ್ಷಗಳು ಉರುಳಿದರೂ ನಿವೇಶನ ಹಂಚಿಕೆ ಆಗಿಲ್ಲ. ಸಂತ್ರಸ್ತರಿಗೆ ನೀಡಲು ಗುರುತಿಸಿರುವ ಜಾಗ ನಿರ್ವಹಣೆ ಇಲ್ಲದೆ ಗಿಡಗಂಟಿ ಬೆಳೆದು ಕಾಡಿನಂತಾಗಿದೆ. ನಿವೇಶನಕ್ಕೆ ಸಂಬಂಧಿಸಿದಂತೆ ಯಾವುದೇ ಕೆಲಸ ನಡೆದಿಲ್ಲ.
ಸರಕಾರಕ್ಕೆ ಪ್ರಸ್ತಾವ
ಸಿದ್ದಾಪುರ ವ್ಯಾಪ್ತಿಯ ಸಂತ್ರಸ್ತರಿಗೆ ಮಾಲ್ದಾರೆಯ ಸರ್ವೇ ನಂ.72/15ರ ಸುಮಾರು 10.60 ಎಕರೆ ಖಾಸಗಿ ಜಾಗ ಖರೀದಿ ಸುವ ಪ್ರಸ್ತಾವವನ್ನು ಸರಕಾರಕ್ಕೆ ಕಳುಹಿಸಲಾಗಿದೆ. ಆದರೆ, ಜಿಲ್ಲಾಡಳಿತ ಇದುವರೆಗೂ ಪೈಸಾರಿ ಜಾಗವನ್ನು ಗುರುತಿಸಿ ನಿವೇಶನ ನೀಡಲು ಯಾವುದೇ ಕ್ರಮ ಕೈಗೊಂಡಿಲ್ಲ.
----
ಪ್ರತಿ ವರ್ಷ ಮಳೆ ಸಂದರ್ಭ ಈ ಭಾಗದ ಗ್ರಾಮಗಳಲ್ಲಿ ಪ್ರವಾಹ ಭೀತಿಗೆ ಒಳಗಾಗುತ್ತಿದ್ದು, ಅಧಿಕಾರಿ ಹಾಗೂ ಜನಪ್ರತಿನಿಧಿನಗಳು ಭರವಸೆ ಮಾತ್ರ ನೀಡಿ ಹೋಗುತ್ತಾರೆ. ನಂತರ ಮತ್ತೊಂದು ಮಳೆಗೆ ಕಾಣಿಸಿಕೊಳ್ಳುತ್ತಾರೆ. ಸರಕಾರಗಳ ಇಚ್ಛಾಶಕ್ತಿಯ ಕೊರತೆಯಿಂದ ನಿವಾಸಿಗಳಿಗೆ ಶಾಶ್ವತವಾಗಿ ಸೂರು ಕಲ್ಪಿಸುವಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆ.
- ಪಿ.ಆರ್.ಭರತ್,
ಪ್ರವಾಹ ಸಂತ್ರಸ್ತರ ಹೋರಾಟ ಸಮಿತಿಯ ಅಧ್ಯಕ್ಷ
----
ಗುಹ್ಯ, ಕರಡಿ ಗೋಡು ನದಿ ದಡದ 193 ನೋಟಿಸ್ ನೀಡ ಲಾಗಿದ್ದು, ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ಸೂಚನೆ ನೀಡಲಾಗಿದೆ. ಸಿದ್ದಾಪುರದ ಸ್ವರ್ಣಮಾಲ ಮಂಟಪದಲ್ಲಿ ಜಿಲ್ಲಾಡಳಿ ತದಿಂದ ಕಾಳಜಿ ಕೇಂದ್ರ ತೆರೆಯಲಾಗಿದೆ. ಕರಡಿಗೋಡು ಗ್ರಾಮದ 25 ಕುಟುಂಬಗಳನ್ನು ಸ್ಥಳಾಂತರಿಸಲಾಗಿದೆ. ಅಗತ್ಯ ಸೌಲಭ್ಯಗಳನ್ನು ಕಲ್ಪಿಸಲಾಗಿದೆ
- ರಾಮಚಂದ್ರ, ವೀರಾಜಪೇಟೆ ತಹಶೀಲ್ದಾರ್