ಒಬಿಸಿ ಮೀಸಲಾತಿ ಅರ್ಹತಾ ವಿರೋಧಿಯೇ?
ಹೋದಲ್ಲಿ ಬಂದಲ್ಲಿ ನಮ್ಮ ಮಹಾನ್ ಪ್ರಭುಗಳು, ವಿವೇಚನಾ ರಹಿತವಾಗಿ ಅಲ್ಪಸಂಖ್ಯಾತ ಮುಸಲ್ಮಾನರಿಗೆ ಇತರ ಹಿಂದುಳಿದ ವರ್ಗದ ಮೀಸಲಾತಿ ಕೋಟಾ ಕಿತ್ತು ವಿರೋಧ ಪಕ್ಷಗಳು ಕೊಡುತ್ತವೆಂದು ಬೊಬ್ಬೆ ಹಾಕುತ್ತಾರಲ್ಲಾ, ಹಾಗಾದರೆ ಇವರೇಕೆ, ಮೀಸಲಾತಿಯ ಪ್ರಯೋಜನ ಪಡೆಯುವ ಪರಿಶಿಷ್ಟರು ಮತ್ತು ಹಿಂದುಳಿದ ವರ್ಗಗಳನ್ನು ವಂಚಿಸಿ, ಕಾರ್ಯದರ್ಶಿ ಮಟ್ಟದ ಅಧಿಕಾರಿಗಳನ್ನು ನೇರವಾಗಿ ಆಯ್ಕೆ ಮಾಡಿದ್ದಾರೆ? ಬಹುಶಃ ಈ ಕೃತ್ಯ ಬಾಬಾ ಸಾಹೇಬರು ಆಸ್ಥೆ ವಹಿಸಿ ರಚಿಸಿದ ಸಂವಿಧಾನವನ್ನು ಕ.ಬು.ಗೆ ಎಸೆಯುವ ಮುನ್ಸೂಚನೆ ಇದ್ದರೂ ಇರಬಹುದಲ್ಲವೇ?
ಮೀಸಲಾತಿಯು ಅರ್ಹತಾ ವಿರೋಧಿ ಎಂದು ವಾದಿಸಲಾಗುತ್ತಿದೆ. ಮೀಸಲಾತಿ ಇನ್ನೂ ಪರಿಪೂರ್ಣತೆ ಪಡೆಯದ ಕಾಲಘಟ್ಟದಲ್ಲಿ ಹೆಚ್ಚಿನ ಆಕ್ಷೇಪಣೆಗಳು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಸೀಮಿತವಾದಂತೆ, ಅವುಗಳ ವಿರುದ್ಧ ಕೇಳಿ ಬರುತ್ತಿದ್ದವು. ಒಕ್ಕೂಟ ಸರಕಾರದ ಹುದ್ದೆಗಳಿಗೆ ಅನ್ವಯಿಸುವಂತೆ ಹಿಂದುಳಿದ ವರ್ಗಗಳಿಗೆ ಅಂತಹ ಪ್ರಯೋಜನವನ್ನು ನೀಡಿರದ ಕಾಲವದು. ಸಂವಿಧಾನ ಜಾರಿಗೆ ಬಂದು ಹಲವು ದಶಕಗಳೇ ಕಳೆದಿದ್ದರೂ ಬಡಪಾಯಿ ಹಿಂದುಳಿದ ವರ್ಗಗಳಿಗೆ ಮಾತ್ರ ಮೀಸಲಾತಿ ಸೌಭಾಗ್ಯ ದೊರಕಿರಲಿಲ್ಲ. ಮೀಸಲಾತಿ ಎಂಬುದು ಅವಶ್ಯವಾಗಿ ಅರ್ಹತೆಗೆ ವಿರುದ್ಧವಿದೆ ಎಂದು ಭಾವಿಸಲಾಗಿತ್ತು. ವಿಶ್ವವಿದ್ಯಾನಿಲಯಗಳ ಶಿಕ್ಷಣ ಕುರಿತ ಪ್ರವೇಶಕ್ಕೆ ಸಂಬಂಧಿಸಿದಂತೆ ಎಂ.ಆರ್. ಬಾಲಾಜಿ vs ಮೈಸೂರು ರಾಜ್ಯ- (ಎಐಆರ್ 1963 ಎಸ್ಸಿ 649) ಪ್ರಕರಣದಲ್ಲಿ ನ್ಯಾ.ಗಜೇಂದ್ರಗಡಕರ್ ಅವರು ಮೀಸಲಾತಿಯ ಅನಿವಾರ್ಯ ಪರಿಣಾಮವು ಅರ್ಹತೆಯನ್ನು ಕುಗ್ಗಿಸುತ್ತದೆ ಎಂಬ ಅಭಿಪ್ರಾಯ ಹೊಂದಿದ್ದರು. ಸಮಾಜದ ದುರ್ಬಲ ವರ್ಗಕ್ಕೆ ಹೆಚ್ಚಿನ ಸಂಖ್ಯೆಯ ಸ್ಥಾನಗಳ ಮೀಸಲಾತಿ ಅಥವಾ ವಿದ್ಯಾರ್ಥಿ ವೇತನ ಕಾರ್ಯಕ್ಷಮತೆಯ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂಬ ಅಟಾರ್ನಿ ಜನರಲ್ ಅವರ ವಾದವನ್ನು ಮನ್ನಿಸಲು ಘನ ನ್ಯಾಯಾಧೀಶರು ಒಪ್ಪಲಿಲ್ಲ. ಅಟಾರ್ನಿ ಜನರಲ್ ಅವರು ಹಿಂದುಳಿದ ವರ್ಗಗಳ ಆಯೋಗದ ವರದಿಯ ಮೇಲೆ ಹಲವು ದಶಕಗಳಿಂದ ಮದ್ರಾಸ್, ಆಂಧ್ರ, ತಿರುವಾಂಕೂರ್- ಕೊಚ್ಚಿನ್ ಮತ್ತು ಮೈಸೂರು ರಾಜ್ಯಗಳಲ್ಲಿ ಮೀಸಲಾತಿ ಕೋಟಾದಲ್ಲಿ ಅಭ್ಯರ್ಥಿಗಳನ್ನು ನೇಮಕಮಾಡುವ ವ್ಯವಸ್ಥೆಯು ಚಾಲ್ತಿಯಲ್ಲಿದ್ದ ಸಂದರ್ಭದಲ್ಲಿ ಯಾವುದೇ ಆಕ್ಷೇಪಣೆ ಅಥವಾ ದೂರುಗಳು ಬಂದಿಲ್ಲ ಎಂದು ವಾದ ಮಂಡಿಸಿದರು.ಮೀಸಲಾತಿಯ ಅರ್ಹತೆ ವಿರೋಧಿಯ ಈ ಪ್ರಭಾವಿತ ಅಂಶಗಳನ್ನು ಜಾನಕೀ ಪ್ರಸಾದ್ vs ಜಮ್ಮು ಮತ್ತು ಕಾಶ್ಮೀರ (ಎಐಆರ್ 1973 ಎಸ್ಸಿ 930) ಪ್ರಕರಣದಲ್ಲಿ ಮತ್ತೆ ವ್ಯಕ್ತಪಡಿಸಲಾಗಿದೆ, ಇದರಲ್ಲಿ ಕಡಿಮೆ ಅರ್ಹತೆ ಹೊಂದಿರುವ ವ್ಯಕ್ತಿಗಿಂತ ಹೆಚ್ಚು ಅರ್ಹತೆ ಇರುವ ವ್ಯಕ್ತಿಗೆ ಆದ್ಯತೆ ನೀಡುವುದು ಮೀಸಲಾತಿಯ ಕಲ್ಪನೆಯಲ್ಲಿ ಸೂಚ್ಯವಾಗಿದೆ ಎಂದು ಗಮನಿಸಲಾಗಿದೆ. ಕೇರಳ ರಾಜ್ಯ vs ಎನ್.ಎಂ. ಥಾಮಸ್(ಎಐಆರ್ 1976 ಎಸ್ಸಿ 490) ಪ್ರಕರಣದಲ್ಲಿ ಇದೇ ದೃಷ್ಟಿ ಹೊಂದಲಾಗಿದೆ. ಮೇಲಿನ ಅಭಿಪ್ರಾಯವನ್ನು ಒಪ್ಪದ ನ್ಯಾ.ಸುಬ್ಬರಾವ್ ಕೂಡ ಟಿ.ದೇವದಾಸನ್ vs ಭಾರತ ಒಕ್ಕೂಟ(ಎಐಆರ್ 1964 ಎಸ್ ಸಿ 179) ಪ್ರಕರಣದಲ್ಲಿ ತಮ್ಮ ಅಸಮ್ಮತಿ ಟಿಪ್ಪಣಿಯಲ್ಲಿ ಮೀಸಲಾತಿಯ ಸ್ವರೂಪದಲ್ಲಿ ಸ್ವಲ್ಪಮಟ್ಟಿಗಾದರೂ ಗುಣಮಟ್ಟವನ್ನು ತಗ್ಗಿಸುವುದು ಅನಿವಾರ್ಯ ಎಂದು ಒಪ್ಪಿಕೊಂಡಿದ್ದರು. ಆದರೆ ನಿಗದಿತ ಕನಿಷ್ಠ ವಿದ್ಯಾರ್ಹತೆಗಳನ್ನು ಗಮನದಲ್ಲಿಟ್ಟುಕೊಂಡು ಅವಕಾಶ ನೀಡಿದರು.
1970ರ ದಶಕದ ಮಧ್ಯ ಭಾಗದಿಂದ ನ್ಯಾಯಾಂಗದ ದೃಷ್ಟಿಕೋನದಲ್ಲಿ ಬದಲಾವಣೆಯನ್ನು ಗಮನಿಸಬಹುದಾಗಿದೆ. ಈ ಅವಧಿಯ ವೇಳೆಗೆ ಕೆಲವು ಪ್ರಾಯೋಗಿಕ ದೃಷ್ಟಿಕೋನವು ಅರ್ಹತೆಗೆ ಆದ್ಯತೆ ನೀಡಿದೆ. ನ್ಯಾ.ಕೃಷ್ಣ ಅಯ್ಯರ್ ಅವರು ಮೀಸಲಾತಿ ಅರ್ಹತೆ ವಿರೋಧಿ ಎಂಬ ಅನಿಸಿಕೆಯನ್ನು ಕೇರಳ ರಾಜ್ಯ vs ಎನ್.ಎಂ. ಥಾಮಸ್ ಪ್ರಕರಣದಲ್ಲಿ ಸ್ಪಷ್ಟವಾಗಿ ಖಂಡಿಸಿದರು. ನ್ಯಾ. ಕೃಷ್ಣ ಅಯ್ಯರ್ ಅವರು ಈ ದಿಸೆಯಲ್ಲಿ ಹೀಗೆ ಹೇಳಿದ್ದಾರೆ:
‘‘ದಕ್ಷತೆ ಎಂದರೆ ಉತ್ತಮ ಸರಕಾರದ ವಿಷಯದಲ್ಲಿ ಕೇವಲ ಪರೀಕ್ಷೆಗಳ ಅಂಕಗಳಲ್ಲ; ಆದರೆ ಜನರಿಗೆ ಜವಾಬ್ದಾರಿಯುತ ಮತ್ತು ಸ್ಪಂದಿಸುವ ಸೇವೆ. ಅಸ್ತವ್ಯಸ್ತವಾಗಿರುವ ಪ್ರತಿಭೆ ಸಾರ್ವಜನಿಕ ಆಡಳಿತದಲ್ಲಿ ದೊಡ್ಡ ಅಪಾಯವಾಗಿದೆ. ದಕ್ಷತೆಯ ಶಕ್ತಿ ಅಧಿಕಾರಶಾಹಿಯ ಅಂತರಂಗದಲ್ಲಿ ಸೇರುವ ಮತ್ತು ಹೊಣೆಗಾರಿಕೆಯ ಪ್ರಕ್ರಿಯೆಯನ್ನು ಒಳಗೊಂಡಿರುತ್ತದೆ....’’. ಘನ ನ್ಯಾಯಾಧೀಶರಾದ ಕೃಷ್ಣ ಅಯ್ಯರ್ ಪರೀಕ್ಷಾ ವ್ಯವಸ್ಥೆಯ ಲೋಪವನ್ನು ಎತ್ತಿ ತೋರಿಸಿದ್ದಾರೆ. ‘‘ನಮ್ಮ ಪರೀಕ್ಷಾ ವ್ಯವಸ್ಥೆ, ನೆನಪಿನ ಶಕ್ತಿಯ ಅರ್ಹತೆಯು ಪಾರಂಗತನನ್ನಾಗಿ ಮಾಡುತ್ತದೆ ಮತ್ತು ಸೃಜನಶೀಲತೆಯನ್ನು ದೇಶ ಭ್ರಷ್ಟವಾಗಿಸಿ ಗಡಿ ಪಾರು ಮಾಡುತ್ತದೆ’’ ಎನ್ನುತ್ತಾರೆ ಅವರು. ನ್ಯಾ.ಕೃಷ್ಣ ಅಯ್ಯರ್ ಅವರು ನ್ಯಾ.ಚಿನ್ನಪ್ಪ ರೆಡ್ಡಿ ಅವರ ವಾದಗಳೊಂದಿಗೆ ಧ್ವನಿಗೂಡಿಸಿ ಕೆ.ಸಿ. ವಸಂತ್ ಕುಮಾರ್ vs ಕರ್ನಾಟಕ ರಾಜ್ಯ (ಎಐಅರ್ 1985 ಎಸ್ಸಿ 1,495) ಪ್ರಕರಣದಲ್ಲಿ ಸಮಾಜದ ನೈಜ ಸ್ಥಿತಿಯ ಸಮಸ್ಯೆಗೆ ಸ್ಪಂದಿಸಿದರು.
ಘನ ನ್ಯಾಯಾಧೀಶರಾದ ಚಿನ್ನಪ್ಪ ರೆಡ್ಡಿ ಹೀಗೆ ಹೇಳಿದ್ದಾರೆ:
‘‘ಪರೀಕ್ಷೆಯಲ್ಲಿ ಕೇವಲ ಅಂಕಗಳನ್ನು ಗಳಿಸುವುದು ಅಗತ್ಯವಾಗಿ ಉತ್ತಮ ಆಡಳಿತಗಾರನನ್ನು ಗುರುತಿಸುವುದಿಲ್ಲ, ಒಬ್ಬ ದಕ್ಷ ಆಡಳಿತಗಾರ, ಇತರ ಗುಣಗಳ ನಡುವೆ ಸಹಾನುಭೂತಿಯಿಂದ ಅರ್ಥಮಾಡಿಕೊಳ್ಳುವ ಮತ್ತು ಧೈರ್ಯದಿಂದ ನಿಭಾಯಿಸುವ ಸಾಮರ್ಥ್ಯವನ್ನು ಹೊಂದಿದವನಾಗಿರಬೇಕು. ದುರ್ಬಲ ವರ್ಗದ ಜನರನ್ನು ಒಳಗೊಂಡಿರುವ ಬೃಹತ್ ಜನಸಂಖ್ಯೆಯ ಸಮಸ್ಯೆಗಳನ್ನು ಧೈರ್ಯದಿಂದ ನಿಭಾಯಿಸುವವರಾಗಬೇಕು ಮತ್ತು ಆ ವರ್ಗಗಳಿಗೆ ಸೇರಿದವರಿಗಿಂತ ಉತ್ತಮರು ಯಾರು?’’ ಎಂದೂ ಪ್ರಶ್ನಿಸುವವರು.
ನ್ಯಾ.ಚಿನ್ನಪ್ಪ ರೆಡ್ಡಿಯವರು ಕೆಲವು ಗಂಭೀರ ಮತ್ತು ವಾಸ್ತವಿಕ ಪ್ರಶ್ನೆಗಳನ್ನು ಮುಂದಿಟ್ಟಿದ್ದಾರೆ:
‘‘ಸ್ವಾತಂತ್ರ್ಯ ಬಂದು 35 (ಈಗ 75) ವರ್ಷಗಳು ಕಳೆದರೂ ಪರಿಶಿಷ್ಟ ಜಾತಿಗಳ ಸ್ಥಿತಿ ಏಕೆ ಹೆಚ್ಚು ಸುಧಾರಿಸಲಿಲ್ಲ ಎಂದು ನಮ್ಮನ್ನು ನಾವೇಕೆ ಕೇಳಿಕೊಳ್ಳಬಾರದು? ಜಿಲ್ಲೆಯ ಆಡಳಿತಾಧಿಕಾರಿಗಳು ಮತ್ತು ರಾಜ್ಯದ ಮತ್ತು ಕೇಂದ್ರದ ಅಧಿಕಾರಿಗಳು ಈ ವರ್ಗಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ನೇಮಕ ಮಾಡಲ್ಪಟ್ಟಿದ್ದರೆ ಪರಿಸ್ಥಿತಿ ವಿಭಿನ್ನವಾಗಿರಬಹುದಿತ್ತು ಎಂದು ಕೇಳುವುದು ನ್ಯಾಯ ಸಮ್ಮತವಾದ ಪ್ರಶ್ನೆ ಅಲ್ಲವೇ?’’
ಇಂದಿರಾ ಸಹಾನಿ vs ಭಾರತ ಒಕ್ಕೂಟ(ಎಐಆರ್ 2000 ಎಸ್ಸಿ 498) ಪ್ರಕರಣದಲ್ಲಿ ಸಮಸ್ಯೆಯನ್ನು ಮತ್ತೊಮ್ಮೆ ಹೊಸ ಸ್ಫೂರ್ತಿಯೊಂದಿಗೆ ಕೈಗೆತ್ತಿಕೊಳ್ಳಲಾಯಿತು. ಅರ್ಜಿದಾರರ ಪರವಾಗಿ ವಕೀಲರು, ‘‘ಸಂರಕ್ಷಣೆ ಅಥವಾ ಮೀಸಲಾತಿ ಎಂದರೆ ಕಡಿಮೆ ಅರ್ಹತೆಯುಳ್ಳ ವ್ಯಕ್ತಿಗಳ ನೇಮಕಾತಿ ಎಂದರ್ಥ, ಇದು ಆಡಳಿತದಲ್ಲಿ ದಕ್ಷತೆಯನ್ನು ಕುಂಠಿತಗೊಳಿಸುತ್ತದೆ’’ ಎಂದು ವಾದಿಸಿದರು. ಘನ ನ್ಯಾಯಮೂರ್ತಿಗಳಾದ ಖನಿಯಾ, ವೆಂಕಟರಾಮಯ್ಯ, ಅಹಮದಿ, ಜೀವನ್ ರೆಡ್ಡಿ, ಪಾಂಡಿಯನ್ ಮತ್ತು ತೊಮ್ಮನ್ ಅವರು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಕುರಿತು ಉಲ್ಲೇಖಿಸುವ ಸಂವಿಧಾನದ ವಿಧಿ 335ರ ಅಗತ್ಯತೆಯ ಹಿನ್ನೆಲೆಯಲ್ಲಿ ಇತರ ಹಿಂದುಳಿದ ವರ್ಗಗಳ ಮೀಸಲಾತಿಗೆ ಸಮಾನವಾಗಿ ಅನ್ವಯಿಸುತ್ತದೆ. ಆದ್ದರಿಂದ ಅದನ್ನು ಅರ್ಹತೆ ಅಥವಾ ಮೆರಿಟ್ ವಿರೋಧಿ ಎಂದು ಪರಿಗಣಿಸಲಾಗುವುದಿಲ್ಲ ಎಂದು ಅಭಿಪ್ರಾಯಪಟ್ಟರು. ಆದರೆ ಅವರು ಅರ್ಹತೆ ಮತ್ತು ನಿದರ್ಶನಗಳ ಬಗ್ಗೆ ವಿವರವಾಗಿ ಚರ್ಚಿಸಿಲ್ಲ. ಅವರು ಕೆಲವು ಸೇವೆಗಳು ಮತ್ತು ಹುದ್ದೆಗಳಿಗೆ ಮೀಸಲಾತಿ ನಿಯಮಕ್ಕೆ ವಿನಾಯಿತಿ ಇದೆ ಎಂದು ಒಪ್ಪಿದರು. ನ್ಯಾ.ಸಾವಂತ್ ಮಾತ್ರ ಈ ಸಮಸ್ಯೆಯನ್ನು ಉದಾಹರಣೆಗಳೊಂದಿಗೆ ಸುದೀರ್ಘವಾಗಿ ಚರ್ಚಿಸಿರುವುದರಿಂದ ಅವರ ಅಭಿಪ್ರಾಯಗಳನ್ನು ನಿರಂತರವಾಗಿ ಚರ್ಚಿಸುವುದು ಉತ್ತಮ. ‘‘ಮೀಸಲಾತಿ ಪ್ರಸ್ತಾಪ ಬಂದಾಗಲೆಲ್ಲ ದಕ್ಷತೆಯ ವಿಶೇಷ ಪ್ರಯೋಜನ ಬಾಯಲ್ಲಿ ತುಂಬಿರುತ್ತದೆ’’ ಎಂಬ ನ್ಯಾಯಮೂರ್ತಿ ಚಿನ್ನಪ್ಪ ರೆಡ್ಡಿ ಅವರ ಮಾತುಗಳನ್ನು ಒಪ್ಪಬಹುದು. ನ್ಯಾ.ಸಾವಂತ್ ಅವರು ಅರ್ಹರಿಗೆ ತಕ್ಕ ಉತ್ತರ ನೀಡಿದರು. ಹಿಂದುಳಿದ ವರ್ಗಗಳಿಗೆ ಭಾಗವಹಿಸುವ ಅವಕಾಶವನ್ನು ನಿರಾಕರಿಸುವವರನ್ನು ಖಂಡಿಸಿದರು. ಅವರು ‘‘ಯಥಾಸ್ಥಿತಿಯ ಪರಿಣಾಮಗಳು ದೇಶಕ್ಕೆ ವಿಸ್ಮಯಕಾರಿ ಮತ್ತು ವಿನಾಶಕಾರಿಯಾಗಿದೆ. ಎಲ್ಲಾ ರಂಗಗಳಲ್ಲಿ ದೇಶದ ಹಿಂದುಳಿದಿರುವಿಕೆಗೆ ಪ್ರಮುಖ ಕಾರಣವೆಂದರೆ ಪ್ರತಿಶತ 75ಕ್ಕಿಂತ ಹೆಚ್ಚು ಜನಸಂಖ್ಯೆಯ ಅವಕಾಶವನ್ನು ನಿರಾಕರಿಸುವುದೇ ಆಗಿದೆ’’ ಎಂದರು ಮತ್ತು ಅವರು ಎಚ್ಚರಿಕೆಯ ತಿಳುವಳಿಕೆಯನ್ನೂ ನೀಡಿದರು- ‘‘ಬಹುಪಾಲು ಜನಸಂಖ್ಯೆಯ ನಿಜವಾದ ಅಧಿಕಾರದಲ್ಲಿ ಅದರ ಪಾಲನ್ನು ನಿರಾಕರಿಸಿದರೆ ನೈಜ ಪ್ರಜಾಪ್ರಭುತ್ವ ಅಸ್ತಿತ್ವದಲ್ಲಿಲ್ಲ ಎಂದೇ ಹೇಳಬೇಕಾಗುತ್ತದೆ’’. ಅವರ ಅಭಿಪ್ರಾಯದಲ್ಲಿ ‘‘ಸಮಾಜದ ಎಲ್ಲಾ ವರ್ಗದವರಿಗೂ ಅಂತಹ ಅವಕಾಶವಿದ್ದರೆ, ಈ ದೇಶದ ಎಲ್ಲಾ ಕ್ಷೇತ್ರಗಳಲ್ಲಿ ಮತ್ತು ಜೀವನದ ನಡಿಗೆಯಲ್ಲಿನ ಸಾಧನೆಗಳು ಇನ್ನೂ ಹಲವು ಪಟ್ಟು ಹೆಚ್ಚಾಗುತ್ತವೆ. ಇದು ಕೇವಲ ವಾಕ್ಚಾತುರ್ಯವಲ್ಲ; ವಾಸ್ತವಿಕ ಅಂದಾಜು ಎಂದು ಇತಿಹಾಸದಿಂದ ಸಾಬೀತಾಗಿದೆ’’ ಎಂದು ಬಿ.ಆರ್. ಅಂಬೇಡ್ಕರ್ ಅವರ ಉದಾಹರಣೆಯನ್ನು ಉಲ್ಲೇಖಿಸಿ ನ್ಯಾ.ಸಾವಂತ್ ಸ್ಪಷ್ಟಪಡಿಸಿದ್ದಾರೆ -
‘‘ನಮಗೆ ಪುರಾಣ ಅಥವಾ ಐತಿಹಾಸಿಕವಾಗಿ ಹಸ್ತಾಂತರವಾಗಿರುವುದನ್ನು ನಂಬಬಹುದಾದರೆ ‘ಮಹಾಭಾರತ’ ಮಹಾಕಾವ್ಯವನ್ನು ಮೀನುಗಾರ ಮಹಿಳೆಯಿಂದ ಜನಿಸಿದ ವ್ಯಾಸರು ಬರೆದಿದ್ದಾರೆ; ‘ರಾಮಾಯಣ’ವನ್ನು ಬುಡಕಟ್ಟು ಜನಾಂಗಕ್ಕೆ ಸೇರಿದ ವಾಲ್ಮೀಕಿ ಬರೆದಿದ್ದಾರೆ. ಬುದ್ಧಿವಂತಿಕೆ, ಗ್ರಹಿಕೆ, ಪಾತ್ರ, ಪಾಂಡಿತ್ಯ ಮತ್ತು ಪ್ರತಿಭೆ ಸಮಾಜದ ಯಾವುದೇ ವರ್ಗದ ಏಕಸ್ವಾಮ್ಯವಲ್ಲ ಎಂಬುದನ್ನು ಈ ಕೆಲವು ನಿದರ್ಶನಗಳಿಂದ ಉದಾಹರಿಸಬಹುದು. ಅವಕಾಶ ಸಿಕ್ಕರೆ ಜೀವನದಲ್ಲಿ ಅತ್ಯಂತ ಕೆಳಸ್ತರದಿಂದ ಬಂದವರು ಸಮಾಜದಲ್ಲಿ ಉನ್ನತ ಸ್ಥಾನಕ್ಕೆ ಏರಬಹುದು. ಈ ಎಲ್ಲಾ ಶತಮಾನಗಳಲ್ಲಿ ಬಹು ಸಂಖ್ಯಾತರಿಗೆ ಅವಕಾಶಗಳ ಕೊರತೆಯಿಂದ ಈ ದೇಶ ಎಷ್ಟು ಕಳೆದುಕೊಂಡಿದೆ ಎಂದು ಯಾರಾದರೂ ಊಹಿಸಬಹುದು’’.
ನ್ಯಾಯಮೂರ್ತಿ ಸಾವಂತ್ ಅವರು ಮುಂದುವರಿದು ಹೇಳುತ್ತಾರೆ: ‘‘.... ಏಕೀಕರಣದಿಂದ ದೇಶದ ಏಕತೆಯನ್ನು ಸಾಧಿಸುವುದಕ್ಕಿಂತ ಹೆಚ್ಚು ಬಲವಾದ ಗುರಿ ಇರಲಾರದು. ಪ್ರಾತಿನಿಧ್ಯವಿಲ್ಲದೆ ದೇಶದ ಆಡಳಿತವು ನಿಷ್ಪಕ್ಷಪಾತವಾಗಿ ಮತ್ತು ದಕ್ಷವಾಗಿ ನಡೆಯಲು ಸಾಧ್ಯವಿಲ್ಲ. ಇದು ಎಲ್ಲಾ ಸಾಮಾಜಿಕ ಗುಂಪುಗಳು, ಹಿತಾಸಕ್ತಿಗಳು, ಅಭಿಪ್ರಾಯಗಳು, ಸಾಮಾಜಿಕ ಅನುಭವಗಳ ನೆರವು ಮತ್ತು ಸಹಾಯವಿಲ್ಲದೆ ಸಮಾಜದ ಎಲ್ಲಾ ವರ್ಗಗಳು ವ್ಯವಹಾರಗಳಲ್ಲಿ ಮತ್ತು ಆಡಳಿತದಲ್ಲಿ ಸಮಾನ ಮತ್ತು ಪರಿಣಾಮಕಾರಿ ಧ್ವನಿಯನ್ನು ಹೊಂದಿರದ ಹೊರತು ಪ್ರಜಾಪ್ರಭುತ್ವ ಅಥವಾ ಏಕತೆ ದೇಶದಲ್ಲಿ ನಿಜವಾಗುವುದಿಲ್ಲ’’. - ಹೀಗೆ ನ್ಯಾಯಾಲಯಗಳು ಸೋದಾಹರಣವಾಗಿ ಮೀಸಲಾತಿಯನ್ನು ಸಮರ್ಥಿಸಿಕೊಂಡಿವೆ.
ದಕ್ಷತೆ ಅಥವಾ ಪ್ರತಿಭೆ ಹುದ್ದೆಗಳ ನೇಮಕಕ್ಕೆ ಮಾನದಂಡವಾಗಿರಬೇಕು; ಯಾವುದೇ ಉಪಚಾರ ತತ್ವದ ಅಡಿಯಲ್ಲಿ ಮೀಸಲಾತಿ ಇರಕೂಡದು ಎಂಬುದು ಸ್ವಾತಂತ್ರ್ಯೋತ್ತರ ಭಾರತದಲ್ಲಿ ಮೀಸಲಾತಿಯನ್ನು ಪರಿಚಯಿಸುವಾಗ ಕಂಡುಬಂದ ದೃಶ್ಯ. ಆದರೆ ಆರ್ಥಿಕವಾಗಿ ದುರ್ಬಲರಾದವರಿಗೆ ಮೀಸಲಾತಿಯನ್ನು ಕೊಟ್ಟ ನಂತರ, ಅಂತಹವರ ಧ್ವನಿ ಕ್ಷೀಣವಾಗಿದೆ. ಮೇಲ್ಜಾತಿ-ಮೇಲ್ವರ್ಗಗಳು ಆಂತರ್ಯದಲ್ಲಿ ಮೀಸಲಾತಿಯನ್ನು ವಿರೋಧಿಸಿದರೂ, ಬಹಿರಂಗದಲ್ಲಿ ವಿರೋಧಿಸುವ ನೈತಿಕತೆಯನ್ನೇ ಕಳೆದುಕೊಂಡಿವೆ ಎಂಬುದೂ ಸುಳ್ಳಲ್ಲ. ಶೇ. 10ರ ಮೀಸಲಾತಿಯನ್ನು ಕೊಟ್ಟ ನಂತರವಂತೂ ಮೀಸಲಾತಿಗೆ ವಿರೋಧವೇ ಇಲ್ಲದಂತಾಗಿರುವುದನ್ನು ನಾವು ನೋಡಬಹುದು.
ಕೆಲವು ದಿನಗಳ ಹಿಂದೆ ಕೇಂದ್ರ ಸರಕಾರವು ಪ್ರತಿಭೆ ಅಥವಾ ದಕ್ಷತೆಗೆ ಅವಕಾಶ ಕೊಡುವ ನೆಪದಲ್ಲಿ ಸರಕಾರದ ಕಾರ್ಯದರ್ಶಿ ಮಟ್ಟದ ಕೆಲವು ಅಧಿಕಾರಿಗಳನ್ನು ಮೇಲ್ವರ್ಗ- ಮೇಲ್ಜಾತಿಗಳಿಂದಲೇ ನೇರ ನೇಮಕಗೊಳಿಸಿದ್ದು ಮಾತ್ರ ನ್ಯಾಯಾಲಯಗಳು ಮೀಸಲಾತಿಯನ್ನು ಆಧಾರ ಸಹಿತ ಸಮರ್ಥಿಸಿಕೊಂಡಿರುವುದಕ್ಕೆ ಸರಕಾರ ಕೊಟ್ಟ ಬಲವಾದ ಪೆಟ್ಟಲ್ಲವೇ? ನ್ಯಾಯಾಲಯದ ಆದೇಶಗಳಿದ್ದರೂ ಇಂತಹ ಉದ್ಧಟತನದ ಸರಕಾರದ ಮನೋಗತವನ್ನು ರಣಹೇಡಿ ವಿರೋಧಪಕ್ಷದವರು ಸಹ ಪ್ರಶ್ನಿಸಲಾಗದ ದುಃಸ್ಥಿತಿ ಮರುಕ ಹುಟ್ಟಿಸುತ್ತದೆ. ಬಹುತೇಕ ವಿರೋಧ ಪಕ್ಷದವರಿಗೂ ಮೇಲ್ಜಾತಿ- ಮೇಲ್ವರ್ಗದವರ ಬಗ್ಗೆ ಇರುವ ಮತ ರಾಜಕೀಯದ ಭಯವೇ ಕಾರಣ. ಸಂವಿಧಾನ ದತ್ತಕ ಮೀಸಲಾತಿ ವಿರೋಧಿತನ ಪ್ರಸಕ್ತ ಸರಕಾರದ ಆಂತರ್ಯದಲ್ಲಿ ಯಾವ ಮಟ್ಟದಲ್ಲಿ ಮಡುಗಟ್ಟಿದೆ ಎಂಬುದನ್ನು ತಿಳಿಯಲು ಯಾವ ವೈಜ್ಞಾನಿಕ ಉಪಕರಣವೂ ಬೇಕಾಗಿಲ್ಲ. ಹೋದಲ್ಲಿ ಬಂದಲ್ಲಿ ನಮ್ಮ ಮಹಾನ್ ಪ್ರಭುಗಳು, ವಿವೇಚನಾ ರಹಿತವಾಗಿ ಅಲ್ಪಸಂಖ್ಯಾತ ಮುಸಲ್ಮಾನರಿಗೆ ಇತರ ಹಿಂದುಳಿದ ವರ್ಗದ ಮೀಸಲಾತಿ ಕೋಟಾ ಕಿತ್ತು ವಿರೋಧ ಪಕ್ಷಗಳು ಕೊಡುತ್ತವೆಂದು ಬೊಬ್ಬೆ ಹಾಕುತ್ತಾರಲ್ಲಾ, ಹಾಗಾದರೆ ಇವರೇಕೆ, ಮೀಸಲಾತಿಯ ಪ್ರಯೋಜನ ಪಡೆಯುವ ಪರಿಶಿಷ್ಟರು ಮತ್ತು ಹಿಂದುಳಿದ ವರ್ಗಗಳನ್ನು ವಂಚಿಸಿ, ಕಾರ್ಯದರ್ಶಿ ಮಟ್ಟದ ಅಧಿಕಾರಿಗಳನ್ನು ನೇರವಾಗಿ ಆಯ್ಕೆ ಮಾಡಿದ್ದಾರೆ? ಬಹುಶಃ ಈ ಕೃತ್ಯ ಬಾಬಾ ಸಾಹೇಬರು ಆಸ್ಥೆ ವಹಿಸಿ ರಚಿಸಿದ ಸಂವಿಧಾನವನ್ನು ಕ.ಬು.ಗೆ ಎಸೆಯುವ ಮುನ್ಸೂಚನೆ ಇದ್ದರೂ ಇರಬಹುದಲ್ಲವೇ? ಸಂಘಿಗಳ ಗುಪ್ತ ಕಾರ್ಯಸೂಚಿಯನ್ನು ಬಲ್ಲವರಾರು?