ಮರಾಠರಿಗೆ ಒಬಿಸಿ ಮೀಸಲಾತಿ: ಮಹಾರಾಷ್ಟ್ರದಲ್ಲಿ ಬಿಜೆಪಿಗೆ ಹಿನ್ನಡೆಯಾಗಲಿದೆಯೆ?
ಎಲ್ಲಾ ನಿರ್ಧಾರಗಳನ್ನು ತೆಗೆದುಕೊಳ್ಳುವಲ್ಲಿ ಶಿಂದೆಯವರನ್ನು ಮುಂದೆ ಬಿಡುವ ಮೂಲಕ ಬಿಜೆಪಿ ಸುರಕ್ಷಿತ ಆಟ ಆಡಿದೆ. ಡಿಸಿಎಂ ದೇವೇಂದ್ರ ಫಡ್ನವೀಸ್ ಮರಾಠಾ ಸಮುದಾಯದೊಂದಿಗಿನ ಮಾತುಕತೆಯಲ್ಲಿ ಬಹಿರಂಗವಾಗಿ ತೊಡಗಿಸಿಕೊಂಡಿಲ್ಲ. ಶಿಂದೆಯವರ ನಿರ್ಧಾರವನ್ನು ಬಿಜೆಪಿ ಬಹಿರಂಗವಾಗಿ ಬೆಂಬಲಿಸುತ್ತಿಲ್ಲ. ರಾಜ್ಯದಲ್ಲಿ ಬಿಜೆಪಿ ಹೆಚ್ಚಾಗಿ ಒಬಿಸಿ ಮತದಾರರನ್ನು ಹೊಂದಿದೆ. ಹಾಗಾಗಿ ಇಲ್ಲಿ ಒಬಿಸಿ ಸಿಟ್ಟು ಬಿಜೆಪಿ ಬದಲು ಶಿಂದೆ ವಿರುದ್ಧವೇ ತಿರುಗಲೂಬಹುದು.
ಜನವರಿಯಲ್ಲಿ ಮುಂಬೈನ ಆಝಾದ್ ಮೈದಾನದಲ್ಲಿ ಮರಾಠಾ ಸಮುದಾಯಕ್ಕೆ ಮೀಸಲಾತಿಗೆ ಒತ್ತಾಯಿಸಿ ಅನಿರ್ದಿಷ್ಟ ಪ್ರತಿಭಟನೆ ಆಯೋಜನೆಗೊಂಡಿತ್ತು. ಪ್ರತಿಭಟನೆ ಶುರುವಾದ ಮಾರನೇ ದಿನವೇ, ಅಂದರೆ ಜನವರಿ 26ರ ರಾತ್ರಿಯ ಹೊತ್ತಿಗೆ ಮಹಾರಾಷ್ಟ್ರ ಸರಕಾರ ಅವರ ಎಲ್ಲಾ ಬೇಡಿಕೆಗಳಿಗೆ ಸಮ್ಮತಿಸಿತ್ತು ಮತ್ತು ಕರಡು ಅಧಿಸೂಚನೆ ಹೊರಡಿಸಿತ್ತು. ಮರಾಠರಲ್ಲಿನ ಕುಣಬಿ ಸಮುದಾಯಕ್ಕೆ ಒಬಿಸಿ ಕೋಟಾದಡಿಯಲ್ಲಿ ಮೀಸಲಾತಿಯ ಭರವಸೆಯನ್ನು ಸರಕಾರ ನೀಡಿತ್ತು. ಹೀಗೆ ಕೃಷಿಕ ಮರಾಠಾ ಉಪಜಾತಿಯಾದ ಕುಣಬಿಗಳು ಒಬಿಸಿ ಮೀಸಲಾತಿಗೆ ಅರ್ಹರಾದರು.
ಆದರೆ, ಶಿಂದೆೆ ನೇತೃತ್ವದ ಮಹಾರಾಷ್ಟ್ರ ಸರಕಾರದ ಈ ನಿರ್ಧಾರಕ್ಕೆ ಸಂಬಂಧಿಸಿದಂತೆ ಹಲವಾರು ಕಾನೂನು ತೊಡಕುಗಳಿವೆ. ಅವಾವುದಕ್ಕೂ ಅದು ಉತ್ತರವನ್ನು ನೀಡಲಿಲ್ಲ. ಚುನಾವಣೆ ಹತ್ತಿರವಾಗುತ್ತಿರುವ ಸಂದರ್ಭದಲ್ಲಿ ಕೇವಲ ಚುನಾವಣಾ ರಾಜಕೀಯದ ಉದ್ದೇಶದಿಂದ, ರಾಜ್ಯದ ಜನಸಂಖ್ಯೆಯ ಸುಮಾರು ಶೇ.33ರಷ್ಟಿರುವ ಮತ್ತು ರಾಜಕೀಯವಾಗಿ ಪ್ರಭಾವಿಯಾಗಿರುವ ಮರಾಠಾ ಸಮುದಾಯವನ್ನು ಸಮಾಧಾನಪಡಿಸುವ ಮಾರ್ಗವಾಗಿ ಇಂಥದೊಂದು ನಿರ್ಧಾರವನ್ನು ಅದು ಪ್ರಕಟಿಸಿದೆ.
ಆದರೆ, ವಿಶ್ಲೇಷಕರು ಹೇಳುವ ಪ್ರಕಾರ, ಈ ನಿರ್ಧಾರದಲ್ಲಿ ಅಪಾಯವಿಲ್ಲದೆ ಇಲ್ಲ. ಇದು ರಾಜ್ಯದ ಜನಸಂಖ್ಯೆಯ ಶೇ.38ರಷ್ಟಿರುವ ಒಬಿಸಿಗಳನ್ನೇ ದೂರ ಮಾಡಲೂಬಹುದು ಮತ್ತು ಅವರೆಲ್ಲ ಮಹಾರಾಷ್ಟ್ರ ಮೈತ್ರಿ ಸರಕಾರದ ಭಾಗವಾಗಿರುವ ಬಿಜೆಪಿಯ ಬೆಂಬಲಿಗರಾಗಿರುವವರು ಎಂದೇ ಹೇಳಲಾಗುತ್ತದೆ.
ಕುಣಬಿ ಸಮುದಾಯಕ್ಕೆ ಒಬಿಸಿ ಅಡಿಯಲ್ಲಿ ಮೀಸಲಾತಿ ಘೋಷಣೆಯಾಗಿ ಅವರು ಸಂಭ್ರಮಪಡುತ್ತಿದ್ದಾಗಲೇ ಒಬಿಸಿ ಸಮುದಾಯಗಳಲ್ಲಿ ಅಸಮಾಧಾನ ತಲೆದೋರಿದ್ದನ್ನು ಇಲ್ಲಿ ಗಮನಿಸಬೇಕು.
ಒಬಿಸಿ ಜನಮೋರ್ಚಾದ ಮುಖಂಡರು, ಮೀಸಲಾತಿಯನ್ನು ಮರಾಠರೊಂದಿಗೆ ಹಂಚಿಕೊಳ್ಳಲು ಹಳ್ಳಿಗಳಲ್ಲಿ ಜನರು ಹೆದರುತ್ತಿದ್ದಾರೆ. ನಮ್ಮ ಸಮುದಾಯದ ಸದಸ್ಯರಿಗೆ ಭವಿಷ್ಯದಲ್ಲಿ ಶಾಲೆಗಳು ಮತ್ತು ಕಾಲೇಜುಗಳಲ್ಲಿ ಕೆಲಸ ಸಿಗುತ್ತದೆಯೇ ಎಂಬ ಚಿಂತೆ ಸಮುದಾಯದ ಜನರಲ್ಲಿ ಶುರುವಾಗಿದೆ ಎನ್ನುತ್ತಿದ್ದಾರೆ.
ಒಬಿಸಿ ಸಮುದಾಯದ ಈ ಆತಂಕಕ್ಕೆ ಮುಖ್ಯ ಕಾರಣ ಮರಾಠರು ಪ್ರಭಾವಿಗಳು ಎಂಬುದೇ ಆಗಿದೆ. ಮರಾಠರು ರಾಜಕೀಯವಾಗಿ ಪ್ರಬಲವಾಗಿರುವ, ಮಹಾರಾಷ್ಟ್ರದ ಭೂಮಾಲಕ ಸಮುದಾಯವಾಗಿದ್ದು, ಈಚೆಗೆ ಕೃಷಿ ಆದಾಯ ಕುಗ್ಗುತ್ತಿರುವ ಹಿನ್ನೆಲೆಯಲ್ಲಿ ಸ್ವಲ್ಪ ಒತ್ತಡಕ್ಕೆ ಒಳಗಾಗುತ್ತಿದ್ದಾರೆ. 2021ರಲ್ಲಿ ಉನ್ನತ ಶಿಕ್ಷಣ ಮತ್ತು ಸರಕಾರಿ ಉದ್ಯೋಗಗಳಲ್ಲಿ ಆ ಸಮುದಾಯಕ್ಕೆ ಶೇ.16ರ ಮೀಸಲಾತಿ ನೀಡುವ ರಾಜ್ಯ ಸರಕಾರದ ನಿರ್ಧಾರವನ್ನು ಸುಪ್ರೀಂ ಕೋರ್ಟ್ ತಳ್ಳಿಹಾಕಿತ್ತು. ಅದು ಹಿಂದುಳಿದ ಸಮುದಾಯವಲ್ಲ ಎಂಬುದು ಅದರ ಹಿಂದಿನ ಕಾರಣವಾಗಿತ್ತು.
ಈಗ ಮರಾಠಾ ಸಮುದಾಯವನ್ನು ಒಬಿಸಿ ಅಡಿಯಲ್ಲಿ ತರುವ ಅಧಿಸೂಚನೆಗೆ ಪ್ರಮುಖ ವಿರೋಧ ಮಹಾರಾಷ್ಟ್ರ ಸರಕಾರದಲ್ಲೇ ವ್ಯಕ್ತವಾಗಿದೆ. ರಾಜ್ಯದ ಪ್ರಮುಖ ಒಬಿಸಿ ನಾಯಕರಲ್ಲಿ ಒಬ್ಬರಾದ ಛಗನ್ ಭುಜಬಲ್ ಮತ್ತು ಶಿಂದೆ ಸರಕಾರದ ಮಂತ್ರಿಯೊಬ್ಬರು ಕುಣಬಿ ಸಮುದಾಯದ ಮರಾಠರಿಗೆ ಮೀಸಲಾತಿ ನೀಡುವ ನಿರ್ಧಾರ, ಮರಾಠಾ ಸಮುದಾಯದವರು ಒಬಿಸಿ ಕೋಟಾದಡಿಯಲ್ಲಿ ಲಾಭ ಪಡೆಯುವುದಕ್ಕೆ ಹಿಂಬಾಗಿಲ ಪ್ರವೇಶವಾಗಿದೆ ಎಂದು ಟೀಕಿಸಿದ್ದಾರೆ. ಭುಜಬಲ್ ಈಗ ಇಡೀ ಒಬಿಸಿ ಸಮುದಾಯವನ್ನು ಸರಣಿ ಪ್ರತಿಭಟನೆಗೆ ಸಜ್ಜುಗೊಳಿಸುತ್ತಿದ್ದಾರೆ.
ಮರಾಠರಿಗೆ ಮೀಸಲಾತಿ ನೀಡುವ ಹಿಂದಿನ ಪ್ರಯತ್ನಗಳು ಕೂಡ ಪದೇ ಪದೇ ತೊಡಕು ಎದುರಿಸಿವೆ. ಅದಕ್ಕೆ ಕಾರಣ, ರಾಜ್ಯದ ಇತರ ಸಮುದಾಯಗಳಾದ ಒಬಿಸಿಗಳು ಅಥವಾ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳಿಗೆ ಹೋಲಿಸಿದರೆ ಮರಾಠರು ಸಾಕಷ್ಟು ಶ್ರೀಮಂತಿಕೆ ಮತ್ತು ಸಬಲೀಕರಣ ಹೊಂದಿದವರಾಗಿದ್ದಾರೆ ಎಂಬುದು.
ಹೀಗಾಗಿಯೇ, ಎಲ್ಲಾ ಮರಾಠರನ್ನು ಒಬಿಸಿ ವರ್ಗದ ಅಡಿಯಲ್ಲಿ ಕುಣಬಿಗಳು ಎಂದು ಗುರುತಿಸಲು ಆ ಸಮುದಾಯದ ನಾಯಕರು ಒತ್ತಾಯಿಸತೊಡಗಿದ್ದಾರೆ. ಆದರೆ, ಈಗಾಗಲೇ ಗೊತ್ತಾಗಿರುವಂತೆ, ಅದಕ್ಕೆ ಕಾನೂನು ತೊಡಕುಗಳಿವೆ ಮತ್ತು ಸಂಕೀರ್ಣವಾದ ಜಾತಿ ಇತಿಹಾಸ ಕೂಡ ಮತ್ತೊಂದು ಅಡ್ಡಿಯಾಗಿದ್ದು, ಅಂಥದೊಂದು ಮರುವರ್ಗೀಕರಣ ಕಷ್ಟಕರವಾಗಿದೆ.
ಕುಣಬಿಗಳು ಮಹಾರಾಷ್ಟ್ರ, ಕರ್ನಾಟಕ, ಗೋವಾ, ಕೇರಳ ಮತ್ತು ಆಂಧ್ರಪ್ರದೇಶದಾದ್ಯಂತ ಹರಡಿರುವ ಸಣ್ಣ ಭೂ ಹಿಡುವಳಿ ಮತ್ತು ಕಡಿಮೆ ಆದಾಯವನ್ನು ಹೊಂದಿರುವ ಬಹುಪಾಲು ಕೃಷಿ ಸಮುದಾಯ. ಒಂದೆರಡು ಶತಮಾನಗಳ ಹಿಂದೆ, ಮರಾಠವಾಡದ ನಿಜಾಮ್ ದೊರೆಗಳು ಕುಣಬಿಗಳನ್ನು ಮರಾಠರ ಉಪಜಾತಿ ಎಂದು ಗುರುತಿಸಿ ಅವರಿಗೆ ಗುರುತಿನ ದಾಖಲೆಗಳನ್ನು ನೀಡಿದ್ದರು. 2004ರಲ್ಲಿ ಆ ಕುಣಬಿ ದಾಖಲೆಗಳನ್ನು ಹೊಂದಿದ್ದ ಮರಾಠರನ್ನು ಮಹಾರಾಷ್ಟ್ರದ ಒಬಿಸಿ ಪಟ್ಟಿಯಲ್ಲಿ ಸೇರಿಸಲಾಯಿತು ಮತ್ತು ಅವರಿಗೆ ಮೀಸಲಾತಿ ನೀಡಲಾಯಿತು.
ಈಗ ಮಹಾರಾಷ್ಟ್ರ ಸರಕಾರ ಜನವರಿ 26ರಂದು ಹೊರಡಿಸಿರುವ ಕರಡು ಅಧಿಸೂಚನೆ, ಋಷಿ-ಸೋಯಾರೆ ವಂಶದ ಅಥವಾ ಕುಣಬಿಗಳ ರಕ್ತಸಂಬಂಧಿಗಳಿಗೆ ಮೀಸಲಾತಿ ಪಡೆಯಲು ಅವಕಾಶ ನೀಡಿದೆ. ಕುಣಬಿ ವಂಶದ ಪುರಾವೆ ಹೊಂದಿರುವ ವ್ಯಕ್ತಿಗೆ ಅಂಥ ಅವಕಾಶ ದೊರೆಯಲಿದೆ. ಅದರ ಆಧಾರದ ಮೇಲೆ ಸರಕಾರ ವ್ಯಕ್ತಿಯ ಸಂಬಂಧಿಕರಿಗೆ ಕುಣಬಿ ಪ್ರಮಾಣಪತ್ರವನ್ನು ನೀಡುತ್ತದೆ. ಕುಣಬಿಗಳೊಂದಿಗೆ ಬಂಧುತ್ವ ಹೊಂದಲು ಸರಕಾರವು ಜಿಲ್ಲಾ ಮತ್ತು ತಾಲೂಕು ಮಟ್ಟದಲ್ಲಿ ಶಿಬಿರಗಳನ್ನು ಸ್ಥಾಪಿಸಲು ಸಹಾಯ ಮಾಡಬೇಕೆಂದು ಸಮುದಾಯ ಒತ್ತಾಯಿಸಿದೆ. ಆ ಬೇಡಿಕೆಗೂ ಸರಕಾರ ಸದ್ಯ ಒಪ್ಪಿಗೆ ನೀಡಿದೆ.
ಈ ಮಧ್ಯೆ, ಮಹಾರಾಷ್ಟ್ರ ಸರಕಾರ ಮರಾಠಾ ಸಮುದಾಯದ ಆರ್ಥಿಕ ಹಿಂದುಳಿದಿರುವಿಕೆಯನ್ನು ತೋರಿಸುವ ಡೇಟಾವನ್ನು ಕ್ರೋಡೀಕರಿಸಲು ತರಾತುರಿಯಲ್ಲಿ ಜಾತಿ ಆಧಾರಿತ ಜನಗಣತಿಯನ್ನು ನಡೆಸುತ್ತಿದೆ. ಹಿಂದಿನ ಹಲವು ಆಯೋಗಗಳು ಮರಾಠರನ್ನು ಹಿಂದುಳಿದವರೆಂದು ಗುರುತಿಸಲು ನಿರಾಕರಿಸಿರುವುದನ್ನೂ ಇಲ್ಲಿ ಗಮನಿಸಬೇಕು.
ಜನಗಣತಿಯ ಗುಣಮಟ್ಟ ಪ್ರಶ್ನಾರ್ಹವಾಗಿದೆ ಎಂಬುದನ್ನು ಸರಕಾರದಲ್ಲಿರುವವರೇ ಒಪ್ಪಿಕೊಂಡಿದ್ದಾರೆ. ಅನೇಕ ಕುಟುಂಬಗಳು ತಮ್ಮ ಡೇಟಾವನ್ನು ಹಂಚಿಕೊಳ್ಳಲು ನಿರಾಕರಿಸಿವೆ ಎಂದು ಸಮೀಕ್ಷೆ ನಡೆಸುತ್ತಿರುವ ಅಧಿಕಾರಿಗಳು ಹೇಳಿದ್ದಾರೆ ಮತ್ತು ಅನೇಕ ಮರಾಠರು ತಮ್ಮನ್ನು ಬಡವರೆಂದು ಬಿಂಬಿಸುವ ಸಲುವಾಗಿ ತಪ್ಪು ಡೇಟಾವನ್ನು ನೀಡಬಹುದು ಎಂಬುದು ಒಬಿಸಿ ಸಮುದಾಯದ ಸಂಘಟನೆಗಳಲ್ಲಿರುವವರ ಆತಂಕವಾಗಿದೆ.
ಮೀಸಲಾತಿಯ ಬೇಡಿಕೆ ವಿದರ್ಭ ಮತ್ತು ಮರಾಠವಾಡ ಪ್ರದೇಶಗಳಲ್ಲಿ ಪ್ರಬಲವಾಗಿದೆ. ಅಲ್ಲಿ ಕೃಷಿ ಬಿಕ್ಕಟ್ಟು ಹಲವಾರು ಸಮುದಾಯಗಳನ್ನು ಬಡತನಕ್ಕೆ ತಳ್ಳಿದೆ. ವಿದರ್ಭದಲ್ಲಿ ಹೆಚ್ಚಿನ ಮರಾಠರು ಕುಣಬಿ ಪ್ರಮಾಣಪತ್ರಗಳನ್ನು ಹೊಂದಿದ್ದರೆ, ಮರಾಠವಾಡದಲ್ಲಿ ಅನೇಕರು ಹೊಂದಿಲ್ಲ. ಋಷಿ-ಸೋಯಾರೆ ಸಮುದಾಯವನ್ನು ಕುಣಬಿ ಎಂದು ಗುರುತಿಸುವ ಸರಕಾರದ ನಿರ್ಧಾರ ಲಕ್ಷಗಟ್ಟಲೆ ಮಂದಿ ಒಬಿಸಿ ಕೋಟಾವನ್ನು ಪಡೆಯಲು ಕಾರಣವಾಗಲಿದೆ ಎಂದು ಹೇಳಲಾಗುತ್ತಿದೆ.
ಇದೇ ವಿಚಾರವೇ ಈಗ ಒಬಿಸಿಗಳನ್ನು ಆತಂಕಕ್ಕೆ ತಳ್ಳಿದೆ. ಹಲವಾರು ಒಬಿಸಿ ನಾಯಕರು ಈ ನಿರ್ಧಾರದ ವಿರುದ್ಧ ರಾಜಕೀಯ ಮತ್ತು ಕಾನೂನು ಹೋರಾಟಗಳಿಗೆ
ಸಜ್ಜಾಗುತ್ತಿದ್ದಾರೆ. ಈಗಾಗಲೇ ಸರಕಾರದ ಅಧಿಸೂಚನೆಯನ್ನು ಪ್ರಶ್ನಿಸಿ ಬಾಂಬೆ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಾಗಿದೆ. ಇನ್ನಷ್ಟು ಅರ್ಜಿಗಳು ಸಲ್ಲಿಕೆಯಾಗುವ ನಿರೀಕ್ಷೆಯಿದೆ.
ಇದುವರೆಗೆ 57 ಲಕ್ಷ ಕುಣಬಿ ಪ್ರಮಾಣಪತ್ರಗಳು ಪತ್ತೆಯಾಗಿವೆ ಎಂಬ ಸರಕಾರದ ಹೇಳಿಕೆಯನ್ನು ಪ್ರಶ್ನಿಸಿ ಬಾಂಬೆ ಹೈಕೋರ್ಟ್ ಮೆಟ್ಟಿಲೇರಲು ಒಬಿಸಿ ನಾಯಕರು ಯೋಜಿಸಿದ್ದಾರೆ. 54 ಲಕ್ಷ ಕುಣಬಿ ದಾಖಲೆಗಳು ಪತ್ತೆಯಾಗಿವೆ ಎಂದು ಸರಕಾರ ಆರಂಭದಲ್ಲಿ ಹೇಳಿತ್ತು. ಕೆಲವೇ ದಿನಗಳಲ್ಲಿ ಆ ಸಂಖ್ಯೆ 57 ಲಕ್ಷಕ್ಕೆ ಏರಿದೆ. ಈ ಹಲವು ದಾಖಲೆಗಳು ಎಲ್ಲಿಂದ ಪತ್ತೆಯಾದವು ಎಂಬುದು ಒಬಿಸಿ ನಾಯಕರ ಪ್ರಶ್ನೆಯಾಗಿದೆ.
ಮರಾಠವಾಡದಲ್ಲಿ ಕೇವಲ 28,000 ಕುಣಬಿ ದಾಖಲೆಗಳು ಪತ್ತೆಯಾಗಿವೆ ಎಂಬುದು ಅವರ ವಾದ. ಕುಣಬಿ ಪ್ರಮಾಣಪತ್ರ ಪಡೆಯುವ ಮಾನದಂಡಗಳನ್ನು ಸಡಿಲಗೊಳಿಸುವ ಸರಕಾರದ ನಿರ್ಧಾರ ಹೆಚ್ಚಿನ ಜನಸಂಖ್ಯೆಯನ್ನು ಮೀಸಲಾತಿಯ ಅಡಿಯಲ್ಲಿ ತರುತ್ತದೆ ಎಂಬುದು ಒಬಿಸಿ ನಾಯಕರ ಆತಂಕ. ಅದರಿಂದಾಗಿ ಬಹುತೇಕ ಇಡೀ ಮರಾಠಿ ಸಮುದಾಯವೇ ಮೀಸಲಾತಿ ಪ್ರಯೋಜನ ಪಡೆಯಲಿದೆ ಎಂದು ಅವರು ಹೇಳುತ್ತಿದ್ದಾರೆ.
ಮರಾಠರು ವಾಸ್ತವವಾಗಿ ರಾಜಕೀಯವಾಗಿ ಪ್ರಬಲರಾಗಿದ್ದಾರೆ ಎಂಬುದನ್ನು ಬಹಳಷ್ಟು ಆಯೋಗಗಳು ಈಗಾಗಲೇ ದೃಢಪಡಿಸಿವೆ. ಹಾಗಿರುವಾಗ ಮರಾಠರನ್ನು ಹಿಂದುಳಿದವರು ಎಂಬ ಹಣೆಪಟ್ಟಿ ಕಟ್ಟುವ ಅಗತ್ಯವೇನಿದೆ ಎಂಬುದು ಅವರ ಪ್ರಶ್ನೆ.
ಅವರ ಮಾತಿಗೆ ಸಮರ್ಥನೆಯಾಗಿ ಕೆಲವು ಅಂಕಿಅಂಶಗಳನ್ನು ನೋಡುವುದಾದರೆ, 2019ರ ಲೋಕಸಭೆ ಚುನಾವಣೆಯಲ್ಲಿ 48 ಸ್ಥಾನಗಳಲ್ಲಿ 21 ಮರಾಠರು, 4 ಕುಣಬಿಗಳು ಮತ್ತು 13 ಒಬಿಸಿ ಅಭ್ಯರ್ಥಿಗಳು ಗೆದ್ದಿದ್ದಾರೆ. ಉಳಿದಂತೆ ಮುಸ್ಲಿಮರು, ಬ್ರಾಹ್ಮಣರು, ಎಸ್‌ಸಿ ಮತ್ತು ಎಸ್‌ಟಿ ಅಭ್ಯರ್ಥಿಗಳು ಗೆದ್ದಿದ್ದಾರೆ.
ಉದ್ಯೋಗಗಳು ಮತ್ತು ಶಿಕ್ಷಣದಲ್ಲಿಯೂ ಅವರು ಮೀಸಲಾತಿ ಲಾಭ ಪಡೆಯುತ್ತಿದ್ದಂತೆ ತಮ್ಮ ಸಮುದಾಯದ ಬಹುಪಾಲನ್ನು ಅವರೇ ತಿಂದುಹಾಕಲಿದ್ದಾರೆ ಎಂಬುದು ಒಬಿಸಿ ನಾಯಕರ ಆತಂಕ. ಮರಾಠರು ಒಬಿಸಿ ಅಡಿಯಲ್ಲಿ ಬಂದರೆ, ಗ್ರಾಮ ಪಂಚಾಯತ್ ಚುನಾವಣೆಗಳಲ್ಲಿನ ತಮ್ಮ ಪ್ರಾತಿನಿಧ್ಯವೂ ಕಡಿಮೆಯಾಗಬಹುದು ಎಂಬುದು ಕೂಡ ಅವರ ಮತ್ತೊಂದು ಭಯ. 2022ರಲ್ಲಿ ಮಹಾರಾಷ್ಟ್ರದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಒಬಿಸಿಗಳಿಗೆ ಶೇ.27 ಮೀಸಲಾತಿಗೆ ಸುಪ್ರೀಂ ಕೋರ್ಟ್ ಒಪ್ಪಿತ್ತು. ಆದರೂ ಇದುವರೆಗೂ ಅದನ್ನು ಜಾರಿಗೆ ತರಲಾಗಿಲ್ಲ ಎಂಬ ಆರೋಪವನ್ನೂ ಒಬಿಸಿ ನಾಯಕರು ಮುಂದಿಡುತ್ತಿದ್ದಾರೆ.
ಈ ನಡುವೆ, ಮರಾಠರಿಗೆ ಮೀಸಲಾತಿಯನ್ನು ನಾವು ವಿರೋಧಿಸುವುದಿಲ್ಲ. ಒಬಿಸಿ ಕೋಟಾದಲ್ಲಿ ಪಾಲು ಕಿತ್ತುಕೊಳ್ಳದಿರುವವರೆಗೂ ಯಾವುದೇ ತಕರಾರು ಇಲ್ಲ. ಸರಕಾರ ನಮ್ಮ ಕೋಟಾವನ್ನು ಶೇ.10ರಷ್ಟು ಹೆಚ್ಚಿಸಿದರೆ ಸಮುದಾಯಕ್ಕೆ ಮೀಸಲಾತಿ ಹಂಚಿಕೆಗೆ ಯಾವುದೇ ತೊಂದರೆಯಾಗುವುದಿಲ್ಲ ಎಂಬ ವಾದವನ್ನೂ ಮಹಾರಾಷ್ಟ್ರದ ಒಬಿಸಿ ಮಹಾಸಭಾದ ನಾಯಕರು ಇಟ್ಟಿದ್ದಾರೆ.
ಪ್ರಸ್ತುತ, ಮಹಾರಾಷ್ಟ್ರದ ಶೇ.62 ಮೀಸಲಾತಿಯಲ್ಲಿ ಪರಿಶಿಷ್ಟ ಜಾತಿಗಳಿಗೆ ಶೇ.13, ಪರಿಶಿಷ್ಟ ಪಂಗಡಗಳಿಗೆ ಶೇ.7, ಒಬಿಸಿಗಳಿಗೆ ಶೇ.19 ಮತ್ತು ಆರ್ಥಿಕವಾಗಿ ದುರ್ಬಲವಾಗಿರುವ ವರ್ಗಕ್ಕೆ ಶೇ.10 ಎಂದು ವಿಂಗಡಿಸಲಾಗಿದೆ. ಉಳಿದ ಶೇ.13ನ್ನು ವಿಶೇಷ ಹಿಂದುಳಿದ ವರ್ಗಗಳು, ವಿಮುಕ್ತ ಜಾತಿ ಎಂದು ವರ್ಗೀಕರಿಸಲಾದ ಸಮುದಾಯಗಳು ಮತ್ತು ಅಲೆಮಾರಿ ಬುಡಕಟ್ಟುಗಳಿಗೆ ನೀಡಲಾಗಿದೆ.
ಈಗ ಮರಾಠರಿಗೆ ಮೀಸಲಾತಿ ನೀಡುವ ಸರಕಾರದ ನಿರ್ಧಾರದ ರಾಜಕೀಯ ಪರಿಣಾಮಗಳು ಏನಿರಬಹುದು? ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಗಳು ಬರುತ್ತಿರುವ ಹಿನ್ನೆಲೆಯಲ್ಲಿ ಒಬಿಸಿ ಸಮುದಾಯ ಸಿಟ್ಟಿಗೆದ್ದರೆ ಬಿಜೆಪಿ ಎದುರಿಸಬೇಕಾದ ಪರಿಣಾಮಗಳು ಏನಿರಬಹುದು?
ವಂಚಿತ್ ಬಹುಜನ ಅಘಾಡಿ ನಾಯಕ ಮತ್ತು ಭಾರತ ಒಕ್ಕೂಟದ ಸದಸ್ಯ ಪ್ರಕಾಶ್ ಅಂಬೇಡ್ಕರ್ ಅವರು ಚುನಾವಣೆಯಲ್ಲಿ ಒಬಿಸಿಗಳ ಮತದಾನದ ಮಾದರಿಯಲ್ಲಿ ಬದಲಾವಣೆಯ ಭವಿಷ್ಯ ನುಡಿದಿದ್ದಾರೆ. ಒಬಿಸಿಗಳು ಮರಾಠರಿಗೆ ಮತ ಹಾಕಲು ಹೋಗುವುದಿಲ್ಲ ಎಂಬುದು ಅವರ ನಿಲುವು.
ಪ್ರಕಾಶ್ ಅಂಬೇಡ್ಕರ್ ಅವರ ಪಕ್ಷವು ಮರಾಠರಿಗೆ ಪ್ರಯೋಜನಗಳನ್ನು ವಿರೋಧಿಸದಿದ್ದರೂ, ಅವರು ಸಮುದಾಯಕ್ಕೆ ಪ್ರತ್ಯೇಕ ಮೀಸಲಾತಿ ಕೋಟಾಕ್ಕಾಗಿ ವಾದಿಸಿದ್ದಾರೆ. ಇವರ ಊಟದ ತಟ್ಟೆಯೂ ಅವರ ಊಟದ ತಟ್ಟೆಯೂ ಬೇರೆ ಇರಬೇಕಾದ ಅಗತ್ಯವಿದೆ. ಇಬ್ಬರೂ ಒಂದೇ ತಟ್ಟೆಯಿಂದ ಹಂಚಿಕೊಳ್ಳಬೇಕಾಗಿಲ್ಲ ಎಂಬುದು ಅವರ ಅಭಿಪ್ರಾಯ.
ಮರಾಠರಿಗೆ ಮೀಸಲಾತಿಯನ್ನು ಘೋಷಿಸುವ ಮೂಲಕ ಏಕನಾಥ ಶಿಂದೆ ಅವರು ಮರಾಠಾ ನಾಯಕರಾಗಿ ಹೊರಹೊಮ್ಮಿದ್ದಾರೆ. ಅವರು ನೂರಕ್ಕೆ ನೂರರಷ್ಟು ಬಡ ಮರಾಠಾ ಮತಗಳನ್ನು ಪಡೆಯುತ್ತಾರೆ. ಆದರೆ ಒಬಿಸಿ ಸಮುದಾಯದಲ್ಲಿ ಬಿಜೆಪಿ ತನ್ನ ಮತದಾರರ ನೆಲೆಯನ್ನು ಕಳೆದುಕೊಳ್ಳಬಹುದು ಎನ್ನುತ್ತಾರೆ ಪ್ರಕಾಶ್ ಅಂಬೇಡ್ಕರ್.
ಹಾಗಾಗಿ, ಮರಾಠರು ಮೀಸಲಾತಿ ಪಡೆದರೂ ಮತ್ತು ಪಡೆಯದಿದ್ದರೂ ಎರಡೂ ಸಂದರ್ಭಗಳಲ್ಲಿ ಬಿಜೆಪಿ ಸೋಲು ಖಚಿತ ಎಂಬುದು ಅವರ ಅಭಿಪ್ರಾಯ.
ಜೆಎನ್‌ಯು ರಾಜಕೀಯ ಅಧ್ಯಯನ ಕೇಂದ್ರದ ಅಧ್ಯಾಪಕ ಹರೀಶ್ ವಾಂಖೆಡೆ ಪ್ರಕಾರ, ಶಿಂದೆ ನಿರ್ಧಾರ ಮೇಲ್ವರ್ಗದವರಲ್ಲದಿದ್ದರೂ ಕಾರ್ಮಿಕ ವರ್ಗದ ಮರಾಠರ ಮತಗಳನ್ನು ಕ್ರೋಢಿಕರಿಸಲು ನೆರವಾಗಲಿದೆ. ಶಿಂದೆೆ ಲೋಕಸಭೆ ಚುನಾವಣೆವರೆಗೂ ಸಮಯ ಪಡೆದಿದ್ದಾರೆ. ಮೀಸಲಾತಿಯ ಭರವಸೆಯನ್ನು ಕೊಟ್ಟಿದ್ದೇನೊ ಆಗಿದೆ. ಆದರೆ ಅದು ಅಂತಿಮವಾಗಿ ನ್ಯಾಯಾಂಗ ಪರಿಶೀಲನೆಗೆ ಒಳಪಡುತ್ತದೆ. ಮೀಸಲಾತಿಯ ಸಾಂವಿಧಾನಿಕ ಸಿಂಧುತ್ವವನ್ನು ನ್ಯಾಯಾಲಯ ಪ್ರಶ್ನಿಸುತ್ತದೆ ಎಂಬುದು ಶಿಂದೆೆ ಅವರಿಗೆ ಗೊತ್ತಿದೆ.
ಎಲ್ಲಾ ನಿರ್ಧಾರಗಳನ್ನು ತೆಗೆದುಕೊಳ್ಳುವಲ್ಲಿ ಶಿಂದೆಯವರನ್ನು ಮುಂದೆ ಬಿಡುವ ಮೂಲಕ ಬಿಜೆಪಿ ಸುರಕ್ಷಿತ ಆಟ ಆಡಿದೆ ಎಂಬುದು ವಾಂಖೆಡೆ ಅವರ ಅಭಿಪ್ರಾಯ. ಡಿಸಿಎಂ ದೇವೇಂದ್ರ ಫಡ್ನವೀಸ್ ಮರಾಠಾ ಸಮುದಾಯದೊಂದಿಗಿನ ಮಾತುಕತೆಯಲ್ಲಿ ಬಹಿರಂಗವಾಗಿ ತೊಡಗಿಸಿಕೊಂಡಿಲ್ಲ. ಅವರು ಬೇರೆ ನಾಯಕರನ್ನು ಇಲ್ಲಿ ಮುಂದಿಟ್ಟಿದ್ದಾರೆ. ಶಿಂದೆಯವರ ನಿರ್ಧಾರವನ್ನು ಬಿಜೆಪಿ ಬಹಿರಂಗವಾಗಿ ಬೆಂಬಲಿಸುತ್ತಿಲ್ಲ. ರಾಜ್ಯದಲ್ಲಿ ಬಿಜೆಪಿ ಹೆಚ್ಚಾಗಿ ಒಬಿಸಿ ಮತದಾರರನ್ನು ಹೊಂದಿದೆ. ಹಾಗಾಗಿ ಇಲ್ಲಿ ಒಬಿಸಿ ಸಿಟ್ಟು ಬಿಜೆಪಿ ಬದಲು ಶಿಂದೆೆ ವಿರುದ್ಧವೇ ತಿರುಗಲೂಬಹುದು ಎನ್ನುತ್ತಾರೆ ವಾಂಖೆಡೆ.
ಇದೆಲ್ಲದರ ನಡುವೆ, ಒಬಿಸಿ ನಾಯಕರು ಮುಂದಿನ ಚುನಾವಣೆಯಲ್ಲಿ ಮರಾಠರಿಗೆ ಮತ ಹಾಕುವ ನಿಟ್ಟಿನ ಸ್ಪಷ್ಟ ನಿರ್ಧಾರಕ್ಕೆ ಬರತೊಡಗಿದ್ದಾರೆ. ಸಮುದಾಯವೇನಿದ್ದರೂ ತನ್ನ ಅಭ್ಯರ್ಥಿಯ ಬೆಂಬಲಕ್ಕೆ ಒಗ್ಗಟ್ಟಾಗಿ ನಿಲ್ಲಲಿದೆ ಎಂಬ ನಿಲುವನ್ನು ಒಬಿಸಿ ನಾಯಕರು ವ್ಯಕ್ತಪಡಿಸುತ್ತಿದ್ದಾರೆ.
(scroll.in)