ಒಡಿಶಾ: ಬಿಜೆಪಿ, ಬಿಜೆಡಿಗೆ ಕಾಂಗ್ರೆಸ್ ಪೈಪೋಟಿ ನೀಡೀತೇ?
ಒಡಿಶಾದಲ್ಲಿ ಬಿಜು ಜನತಾದಳದ್ದೇ ಪ್ರಾಬಲ್ಯ. ಬಿಜೆಪಿ ಅಲ್ಲಿ ತನ್ನ ನೆಲೆಯನ್ನು ಭದ್ರಪಡಿಸಿಕೊಳ್ಳುತ್ತಿದೆ. ಆದರೆ ಎರಡು ದಶಕಗಳಿಗಿಂತ ಹೆಚ್ಚು ಸಮಯದಿಂದ ರಾಜ್ಯದಲ್ಲಿ ತೀವ್ರ ಕುಸಿತ ಕಂಡಿರುವ ಕಾಂಗ್ರೆಸ್ ಎದುರು ದೊಡ್ಡ ಸವಾಲು ಇದೆ. ಇಂಡಿಯಾ ಮೈತ್ರಿಕೂಟದಲ್ಲಿ ಬಿಜೆಡಿ ಇಲ್ಲ. ಅದು ಎನ್‌ಡಿಎ ಮೈತ್ರಿಕೂಟದಲ್ಲೂ ಇಲ್ಲವಾದರೂ, ಅದರೊಂದಿಗೆ ನಿಕಟವಾಗಿದೆ. ಈ ವಿಚಾರವೂ ಕಾಂಗ್ರೆಸ್ ಪಾಲಿಗೆ ಸವಾಲಾಗಿದೆ. ಈ ಸಲ ಬಲ ಹೆಚ್ಚಿಸಿಕೊಳ್ಳುವ ವಿಶ್ವಾಸದಲ್ಲಿ ಕಾಂಗ್ರೆಸ್ ಇದ್ದರೂ, ಚುನಾವಣೆಗೆ ಅದು ತಯಾರಾಗುವ ರೀತಿ ಹೇಗಿರಲಿದೆ ಎಂಬುದನ್ನು ಕಾದು ನೋಡಬೇಕಿದೆ.
ಸರಣಿ- 12
ಒಟ್ಟು 21 ಲೋಕಸಭಾ ಕ್ಷೇತ್ರಗಳಿರುವ ಒಡಿಶಾ ರಾಜ್ಯದ ಜನಸಂಖ್ಯೆ 4.19 ಕೋಟಿ. ಅದರಲ್ಲಿ ಹಿಂದೂಗಳು ಒಟ್ಟು ಜನಸಂಖ್ಯೆಯ ಶೇ.93.63ರಷ್ಟಿದ್ದರೆ, ಕ್ರೈಸ್ತರು ಶೇ.2.77, ಮುಸ್ಲಿಮರು ಶೇ.2.17. ಉಳಿದಂತೆ ಸಿಖ್ಖರು, ಬೌದ್ಧರು, ಜೈನರಿದ್ದಾರೆ.
ಒಡಿಶಾದ ಪ್ರಮುಖ ರಾಜಕೀಯ ಪಕ್ಷಗಳು: ಬಿಜು ಜನತಾ ದಳ (ಬಿಜೆಡಿ), ಕಾಂಗ್ರೆಸ್ ಮತ್ತು ಬಿಜೆಪಿ.
2019ರ ಚುನಾವಣೆಯಲ್ಲಿ ಬಿಜೆಡಿ 12, ಬಿಜೆಪಿ 8 ಹಾಗೂ ಯುಪಿಎ 1 ಸೀಟು ಗೆದ್ದಿದ್ದವು.
ಆದರೆ 2014ರ ಚುನಾವಣೆಯಲ್ಲಿ 20 ಸೀಟುಗಳನ್ನು ಬಿಜೆಡಿಯೇ ಗೆದ್ದಿತ್ತು. ಬಿಜೆಪಿ 1 ಸ್ಥಾನದಲ್ಲಿ ಮಾತ್ರ ಗೆಲುವು ಸಾಧಿಸಿತ್ತು.
ಈ ಬಾರಿ ಭಾರೀ ಗೆಲುವನ್ನು ಸಾಧಿಸುವ ವಿಶ್ವಾಸವನ್ನು ಬಿಜೆಪಿ ವ್ಯಕ್ತಪಡಿಸುತ್ತಿದೆ.
21 ಸ್ಥಾನಗಳಲ್ಲಿ ಕನಿಷ್ಠ 15ರಲ್ಲಿ ಬಿಜೆಪಿ ಗೆಲುವು ಸಾಧಿಸಲಿದೆ, ಶೇ.45ರಷ್ಟು ಮತಗಳನ್ನು ಗಳಿಸಲಿದೆ ಎಂದು ಪಕ್ಷದ ನಾಯಕರು ಹೇಳಿಕೊಳ್ಳುತ್ತಿದ್ದಾರೆ.
2014ರಲ್ಲಿ ಬಿಜೆಪಿ ಪಡೆದ ಮತ ಪ್ರಮಾಣ ಶೇ.22
2019ರ ಚುನಾವಣೆಯಲ್ಲಿ ಅದು ಶೇ.38ಕ್ಕೆ ಏರಿಕೆಯಾಗಿತ್ತು.
ಈ ಬಾರಿ ಶೇ.45ಕ್ಕೆ ಮುಟ್ಟಲಿದೆ ಎಂಬುದು ಬಿಜೆಪಿ ಲೆಕ್ಕಾಚಾರ.
2019ರ ಚುನಾವಣೆಯಲ್ಲಿ ಬಿಜೆಡಿ ಶೇ.42ರಷ್ಟು ಮತಗಳನ್ನು ಪಡೆದಿತ್ತು.
ಕಳೆದ 23 ವರ್ಷಗಳಿಂದ ಒಡಿಶಾದಲ್ಲಿ ಕಾಂಗ್ರೆಸ್ ಅಧಿಕಾರದಿಂದ ಹೊರಗುಳಿದಿದೆ. 2024ರ ಚುನಾವಣೆಯಲ್ಲಿ ರಾಜ್ಯದಲ್ಲಿ ತನ್ನ ನೆಲೆ ಕಂಡುಕೊಳ್ಳುವ ನಿಟ್ಟಿನಲ್ಲಿ ಅದು ಯತ್ನಿಸುತ್ತಿದೆ.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ ಮತ್ತು ಇತರ ಹಿರಿಯ ನಾಯಕರೊಂದಿಗೆ ಬುಧವಾರ ದಿಲ್ಲಿಯಲ್ಲಿ ಸಭೆ ನಡೆಸಿ ಮುಂಬರುವ ಚುನಾವಣೆಯ ಕಾರ್ಯತಂತ್ರದ ಕುರಿತು ಚರ್ಚಿಸಿದ್ದಾರೆ. ಪಕ್ಷದ ಒಡಿಶಾ ಘಟಕದ ನಾಯಕರೂ ಪಕ್ಷ ಮರಳಿ ಪ್ರಾಬಲ್ಯ ಸಾಧಿಸಲಿದೆ ಎಂಬ ವಿಶ್ವಾಸ ಹೊಂದಿದ್ದಾರೆ.
ದಿಲ್ಲಿಯಲ್ಲಿನ ಸಭೆಯಲ್ಲಿ ಒಡಿಶಾ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಶರತ್ ಪಟ್ನಾಯಕ್ ಸೇರಿದಂತೆ ರಾಜ್ಯದ ಹಲವು ನಾಯಕರು ಇದ್ದರು.
ಭ್ರಷ್ಟಾಚಾರ, ನಿರುದ್ಯೋಗ ಮತ್ತು ಯಾವುದೇ ರಂಗದಲ್ಲಿ ಪ್ರಗತಿಯ ಸಂಪೂರ್ಣ ಕೊರತೆ - ಹೀಗೆ ಹಲವು ಸಮಸ್ಯೆಗಳು ಒಡಿಶಾವನ್ನು ಕಾಡುತ್ತಿವೆ ಎಂಬುದನ್ನು ಕಾಂಗ್ರೆಸ್ ಚುನಾವಣಾ ವಿಚಾರವಾಗಿಸಲಿದೆ.
ಬಿಜೆಡಿ ಮತ್ತು ಬಿಜೆಪಿ ಒಂದೇ ನಾಣ್ಯದ ಎರಡು ಮುಖಗಳು, ಅವೆರಡೂ ಸಮಾನ ಭ್ರಷ್ಟ ಪಕ್ಷಗಳಾಗಿವೆ ಎಂದು ಜನರೆದುರು ಹೇಳುವುದು ಕಾಂಗ್ರೆಸ್ ಉದ್ದೇಶವಾಗಿದೆ.
ಜನರಿಗೆ ಬಿಜೆಪಿ ಮತ್ತು ಬಿಜೆಡಿಯ ಬಂಡವಾಳ ಗೊತ್ತಾಗಿದೆ. ಈ ಬಾರಿ ಅವೆರಡನ್ನೂ ಜನರು ತಿರಸ್ಕರಿಸಲಿದ್ದಾರೆ. ಕಾಂಗ್ರೆಸ್ ಪಾಲಿಗೆ ಈ ಬಾರಿ ಉತ್ತಮ ಅವಕಾಶವಿದೆ ಎಂಬುದು ಪಕ್ಷದ ನಾಯಕರ ವಿಶ್ವಾಸ. ಬಿಜೆಡಿ ಮತ್ತು ಬಿಜೆಪಿ ವಿರುದ್ಧ ಪಕ್ಷ ತನ್ನ ಹೋರಾಟ ತೀವ್ರಗೊಳಿಸಲಿದೆ ಎಂದು ಶರತ್ ಪಟ್ನಾಯಕ್ ಹೇಳಿದ್ದಾರೆ.
ಆದರೆ, ರಾಜ್ಯ ಕಾಂಗ್ರೆಸ್ ನಾಯಕರ ಆಶಾವಾದದ ಹೊರತಾಗಿಯೂ, ರಾಜ್ಯದಲ್ಲಿ ಅದರ ದಾಖಲೆ ಏನೇ ಇದ್ದರೂ, ಅದರೆದುರಿನ ಹಾದಿ ಸುಲಭವಾಗಿಲ್ಲ ಎಂಬುದೂ ವಾಸ್ತವ.
ಬಣ ವೈಷಮ್ಯಗಳಿಂದ ನರಳುತ್ತಿರುವ ಒಡಿಶಾ ಕಾಂಗ್ರೆಸ್, 2000ದಿಂದಲೂ ಸತತವಾಗಿ ಕುಸಿತ ಕಾಣುತ್ತಲೇ ಬಂದಿದೆ.
2009ರಲ್ಲಿ ಏಕಕಾಲದಲ್ಲಿ ನಡೆದ ಚುನಾವಣೆಯಲ್ಲಿ ಬಿಜೆಡಿ 103 ವಿಧಾನಸಭೆ ಮತ್ತು 14 ಲೋಕಸಭೆ ಸ್ಥಾನಗಳನ್ನು ಗೆದ್ದರೆ, ಕಾಂಗ್ರೆಸ್ 27 ವಿಧಾನಸಭೆ ಮತ್ತು ಆರು ಲೋಕಸಭೆ ಸ್ಥಾನಗಳನ್ನು ಮಾತ್ರ ಗೆದ್ದಿತ್ತು.
ಆಗ ಬಿಜೆಪಿ ಕೇವಲ 6 ವಿಧಾನಸಭೆ ಸ್ಥಾನಗಳನ್ನು ಮಾತ್ರ ಗೆದ್ದಿತ್ತು ಮತ್ತು ಒಂದೇ ಒಂದು ಲೋಕಸಭಾ ಸ್ಥಾನವನ್ನೂ ಗಳಿಸುವುದು ಅದಕ್ಕೆ ಸಾಧ್ಯವಾಗಿರಲಿಲ್ಲ.
2009ರಲ್ಲಿ ಒಡಿಶಾದ ಲೋಕಸಭಾ ಸ್ಥಾನಗಳಲ್ಲಿ ಕಾಂಗ್ರೆಸ್ ಮತ ಗಳಿಕೆ ಪ್ರಮಾಣ ಶೇ.32.75 ಇದ್ದದ್ದು, 2014ರ ಚುನಾವಣೆಯಲ್ಲಿ ಶೇ.26ಕ್ಕೆ ಇಳಿಯಿತು.
2014ರಲ್ಲಿ ಲೋಕಸಭೆಯ ಒಂದೇ ಒಂದು ಸ್ಥಾನವನ್ನೂ ಗೆಲ್ಲುವುದು ಕಾಂಗ್ರೆಸ್‌ಗೆ ಸಾಧ್ಯವಾಗಲಿಲ್ಲ. 2019ರ ಚುನಾವಣೆಯಲ್ಲಂತೂ ಕಾಂಗ್ರೆಸ್ ತಳವನ್ನು ಮುಟ್ಟಿತು.
ಒಡಿಶಾದಲ್ಲಿ ಕಾಂಗ್ರೆಸ್‌ನ ಈ ಕ್ಷೀಣಿಸುವಿಕೆಯ ಪ್ರಮುಖ ಲಾಭ ಪಡೆದದ್ದು ಬಿಜೆಪಿ.
2019ರಲ್ಲಿ ಬಿಜೆಪಿ ಲೋಕಸಭಾ ಬಲವನ್ನು 1 ಸ್ಥಾನದಿಂದ 8ಕ್ಕೆ ಏರಿಸಿಕೊಂಡಿತ್ತು.
ರಾಜ್ಯದಲ್ಲಿ ಕಾಂಗ್ರೆಸ್ ಸೋಲಿನ ಆರಂಭಿಕ ದಿನಗಳಲ್ಲಿ ಹೆಚ್ಚು ಲಾಭ ಮಾಡಿಕೊಂಡಿದ್ದು ಬಿಜೆಡಿ. ಆದರೆ ಅನಂತರ ಬಿಜೆಪಿಗೆ ಲಾಭವಾಗತೊಡಗಿತು. ಕಾಂಗ್ರೆಸ್‌ಗೆ ನಿಷ್ಠರಾಗಿದ್ದವರ ಮತಗಳು ಬಿಜೆಪಿ ಪಾಲಾಗತೊಡಗಿದ್ದವು.
2019ರ ನಂತರವಂತೂ ಕಾಂಗ್ರೆಸ್ ಅವನತಿಯ ಹಾದಿಯಲ್ಲಿದ್ದು, ಅದು ಚೇತರಿಸಿಕೊಳ್ಳುವ ಸಾಧ್ಯತೆ ಇಲ್ಲ. ಇನ್ನೊಂದೆಡೆ ಬಿಜೆಡಿ ವಿರುದ್ಧ ಆಡಳಿತ ವಿರೋಧಿ ಅಲೆಯಿದೆ. ಇದರಿಂದ ಬಿಜೆಪಿಗೆ ಲಾಭವಾಗಲಿದೆ ಎಂಬುದು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಭೃಗು ಬಕ್ಸಿಪಾತ್ರ ಅಭಿಪ್ರಾಯ.
2017ರಲ್ಲಿ ರಾಜ್ಯದಲ್ಲಿ ನಡೆದ ಪಂಚಾಯತ್ ಚುನಾವಣೆಯಲ್ಲಿ, 2012ರಲ್ಲಿ ಬರೀ 36 ಜಿಪಂಗಳಲ್ಲಿದ್ದ ಬಿಜೆಪಿ, 297ಕ್ಕೆ ಏರುವುದರೊಂದಿಗೆ ದೊಡ್ಡ ಲಾಭವನ್ನು ತನ್ನದಾಗಿಸಿಕೊಂಡಿತ್ತು.
ಕಾಂಗ್ರೆಸ್ ಜನಪ್ರಿಯತೆಯ ತೀವ್ರ ಕುಸಿತದಿಂದಾಗಿ ಅದರ ಒಟ್ಟು ಜಿಲ್ಲಾ ಪರಿಷತ್ ಸ್ಥಾನಗಳು 126ರಿಂದ 60ಕ್ಕೆ ಕುಸಿದವು.
2022ರಲ್ಲಿ ಕಾಂಗ್ರೆಸ್ ಜಿಪಂ ಸ್ಥಾನಗಳು 37ಕ್ಕೆ ಕುಸಿದಾಗ ಬಿಜೆಡಿ ದಾಖಲೆಯ 766 ಜಿಲ್ಲಾ ಪರಿಷತ್ ಸ್ಥಾನಗಳನ್ನು ಪಡೆದುಕೊಂಡಿತ್ತು.
ಆಗ ಬಿಜೆಪಿ ಕೂಡ ಭಾರೀ ಆಘಾತ ಕಂಡಿತ್ತು. ಅದರ ಜಿಪಂ ಸ್ಥಾನಗಳು 297ರಿಂದ 42ಕ್ಕೆ ಕುಸಿದವು.
ಸತತ ಐದು ಬಾರಿ ಗೆದ್ದು ಎರಡು ದಶಕಕ್ಕೂ ಹೆಚ್ಚು ಕಾಲದಿಂದ ಸಿಎಂ ಆಗಿರುವ ಬಿಜೆಡಿಯ ನವೀನ್ ಪಟ್ನಾಯಕ್ ಅವರು ಈಗ ಪಕ್ಷವನ್ನು ಬಹುತೇಕ ಮಾಜಿ ಐಎಎಸ್ ಅಧಿಕಾರಿ ತಮಿಳು ನಾಡು ಮೂಲದ ವಿ.ಕೆ. ಪಾಂಡ್ಯನ್ ಸುಪರ್ದಿಗೆ ಕೊಟ್ಟು ಬಿಟ್ಟ ಹಾಗಿದೆ. ಪಾಂಡ್ಯನ್ ಅವರೇ ಪಟ್ನಾಯಕ್ ಅವರ ರಾಜಕೀಯ ಉತ್ತರಾಧಿಕಾರಿ ಎಂದೂ ಪ್ರಚಾರ ಇದೆ.
ಆದರೆ ಕಳೆದ ತಿಂಗಳು ನಡೆದ ಪಕ್ಷದ ಸಭೆಯಲ್ಲಿ ತಾನು ಮುಂಬರುವ ಲೋಕಸಭಾ ಹಾಗೂ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಪಾಂಡ್ಯನ್ ಹೇಳಿದ್ದಾರೆ. ಆದರೂ ಪಕ್ಷದ ಸಂಪೂರ್ಣ ನಿಯಂತ್ರಣ ಅವರ ಕೈಯಲ್ಲೇ ಇದೆ. ಎರಡೂ ಚುನಾವಣೆಗೆ ಅಭ್ಯರ್ಥಿ ಆಯ್ಕೆಯಲ್ಲಿ ಹಾಗೂ ಚುನಾವಣಾ ರಣತಂತ್ರ ಹೆಣೆಯುವಲ್ಲಿ ಅವರೇ ಮುಖ್ಯ ಪಾತ್ರ ವಹಿಸಲಿದ್ದಾರೆ ಎಂಬುದು ಈಗ ಓಪನ್ ಸೀಕ್ರೆಟ್.
ಜನವರಿ 23ರಿಂದ ಮಾರ್ಚ್ 5ರವರೆಗೆ ಬಿಜೆಪಿ ರಾಜ್ಯದ ಮೂಲೆಮೂಲೆಗೆ ತಲುಪುವ ಪ್ರಚಾರ ಅಭಿಯಾನ ನಡೆಸುತ್ತಿದೆ. ಸತತ ಆರನೇ ಬಾರಿ ನವೀನ್ ಪಾಟ್ನಾಯಕ್ ಅವರೇ ಸಿಎಂ ಆಗಿ ಆಯ್ಕೆಯಾಗುವಂತೆ ನಾನು ಶ್ರಮಿಸುತ್ತೇನೆ ಎಂದು ಹೇಳಿದ್ದಾರೆ ಪಾಂಡ್ಯನ್. ಲೋಕಸಭೆಯಲ್ಲೂ ಸೀಟು ಹೆಚ್ಚಿಸಿಕೊಳ್ಳಲು ಅವರ ಬಳಿ ಪ್ಲ್ಯಾನ್ ಇಲ್ಲದಿರಲ್ಲ.
ಒಡಿಶಾದಲ್ಲಿ ಕಾಂಗ್ರೆಸ್‌ನ ದೊಡ್ಡ ಮಟ್ಟದ ಹಿನ್ನಡೆಗೆ ಆಂತರಿಕ ಕಲಹಗಳು ನೇರ ಕಾರಣ ಎನ್ನಲಾಗುತ್ತದೆ.
ಚುನಾವಣೆಯಲ್ಲಿ ಒಗ್ಗಟ್ಟಿನಿಂದ ಹೋಗಲಾಗದ ಸ್ಥಿತಿಯಲ್ಲಿ ಕಾಂಗ್ರೆಸ್ ಇದೆ. ಒಡಿಶಾ ಕಾಂಗ್ರೆಸ್‌ನಲ್ಲಿ ಆಂತರಿಕ ಕಚ್ಚಾಟ ಬೇಗ ಕೊನೆಗೊಳ್ಳುವ ಸಾಧ್ಯತೆಯಿಲ್ಲ ಎಂದೇ ವಿಶ್ಲೇಷಕರು ಹೇಳುತ್ತಾರೆ.
ಪಕ್ಷಕ್ಕೆ ದೊಡ್ಡ ಹಾನಿಯನ್ನು ಉಂಟುಮಾಡಿರುವ ಈ ಸಮಸ್ಯೆಯನ್ನು ಪರಿಣಾಮಕಾರಿಯಾಗಿ ಪರಿಹರಿಸದ ಹೊರತು ರಾಜ್ಯದಲ್ಲಿ ಪಕ್ಷ ಮೇಲೇಳುವುದು ಕಷ್ಟ ಎಂಬ ಮಾತುಗಳಿವೆ.
ಒಂದು ವೇಳೆ ಕಾಂಗ್ರೆಸ್ ಇದೆಲ್ಲ ಬಿಕ್ಕಟ್ಟುಗಳನ್ನು ಮೀರಿ, ಮತ ಗಳಿಕೆಯಲ್ಲಿ ಮೊದಲೆರಡು ಸ್ಥಾನಗಳಲ್ಲಿರುವ ಬಿಜೆಡಿ ಮತ್ತು ಬಿಜೆಪಿಗೆ ಪ್ರಬಲ ಪೈಪೋಟಿ ನೀಡಿದ್ದೇ ಆದಲ್ಲಿ, ಆಗ ಬಿಜೆಪಿಗೆ ಕಷ್ಟವಾಗಲಿದೆ ಎಂಬುದು ವಿಶ್ಲೇಷಕರ ಮಾತು.