ಸೆಬಿ ಅಧ್ಯಕ್ಷರ ನೇಮಕ ಯಾರ ಸೂಚನೆಯ ಮೇರೆಗೆ ನಡೆದಿತ್ತು?

‘‘ಇದು ಹಗರಣವಲ್ಲ. ಇದು ಮೋದಿ, ಅದಾನಿ, ಶಾ ಇವರೆಲ್ಲರೂ ಮಾಡಿರುವ ವಿಶ್ವಾಸಘಾತುಕತನ. ಅರ್ಹರು, ಗೌರವಾನ್ವಿತರು ಎಂಬ ಕಾರಣಕ್ಕೆ ಸೆಬಿ ಮುಖ್ಯಸ್ಥೆಯ ನೇಮಕವಾಗಲಿಲ್ಲ, ಬದಲಾಗಿ ಅವರು ತಮ್ಮ ಮಾತು ಕೇಳುವವರು ಎಂಬ ಕಾರಣಕ್ಕೆ ನೇಮಿಸಲಾಗಿದೆ’’ ಎಂದಿದ್ದಾರೆ ಸುಬ್ರಮಣಿಯನ್ ಸ್ವಾಮಿ. ಸೆಬಿ ಮುಖ್ಯಸ್ಥೆ ತಮ್ಮ ತಪ್ಪನ್ನು ಒಪ್ಪಿಕೊಳ್ಳಬೇಕಾಗಿದೆ. ಮಾಡಿದ ತಪ್ಪಿಗಾಗಿ ಪಶ್ಚಾತ್ತಾಪ ಪಡಬೇಕಾಗಿದೆ ಎಂಬುದು ಸ್ವಾಮಿ ಅಭಿಪ್ರಾಯ.

Update: 2024-08-14 08:59 GMT

ಭಾರತದ ಇಡೀ ಷೇರು ಮಾರುಕಟ್ಟೆಯ ನಿಯಂತ್ರಕ ಸಂಸ್ಥೆ ಎಂದ ಮೇಲೆ ಅದು ವಿಶ್ವಾಸಾರ್ಹವಾಗಿರಬೇಕಿತ್ತು. ಆದರೆ ಸೆಬಿ ಮೇಲೆಯೇ ಈಗ ಬಹಳ ದೊಡ್ಡ ಆರೋಪ ಬಂದು ಕೂತಿದೆ.

ಯಾವ ಅದಾನಿ ಸಮೂಹದ ವಿಚಾರವಾಗಿ ಕಳೆದ ವರ್ಷ ಹಿಂಡನ್‌ಬರ್ಗ್ ವಂಚನೆಯ ಗಂಭೀರ ಆರೋಪ ಮಾಡಿತ್ತೋ ಅದೇ ಅದಾನಿಗೆ ಸಂಬಂಧಿಸಿದ ಕಂಪೆನಿಯಲ್ಲಿ ಸೆಬಿ ಮುಖ್ಯಸ್ಥೆ ಮಾಧವಿ ಬುಚ್ ಮತ್ತು ಅವರ ಪತಿ ಧವಲ್ ಬುಚ್ ಇಬ್ಬರದೂ ಹೂಡಿಕೆಯಿದೆ ಎಂಬ ಬಹಳ ಗಂಭೀರ ಆರೋಪವನ್ನು ಈಗ ಹಿಂಡನ್‌ಬರ್ಗ್ ಮಾಡಿದೆ.

ಈಗ ಯಥಾ ಪ್ರಕಾರ ಅದನ್ನು ವಿದೇಶಿ ಕಂಪೆನಿ ಎಂದು ಜರೆಯುವುದು, ದೇಶವನ್ನು ಅಸ್ಥಿರಗೊಳಿಸುವ ಕೆಲಸವಾಗುತ್ತಿದೆ ಎಂದೆಲ್ಲ ಭಾವನಾತ್ಮಕ ಆರೋಪ ಮಾಡುತ್ತ ಜನರನ್ನು ಯಾಮಾರಿಸುವುದು ನಡೆದಿದೆ.

ಆದರೆ ವಾಸ್ತವವೇನು? ಯಾಕೆ ಇಂಥದೊಂದು ಗಂಭೀರ ಆರೋಪ ಬಂದಿರುವಾಗ, ಅದೂ ಈ ದೇಶದ ವಿಶ್ವಾಸಾರ್ಹ ಸಂಸ್ಥೆಯಾಗಿರಬೇಕಾದ ಸೆಬಿ ಮೇಲೆಯೇ, ಸೆಬಿ ಮುಖ್ಯಸ್ಥೆಯ ವಿರುದ್ಧವೇ ಬಂದಿರುವಾಗ ಸರಕಾರ ಸುಮ್ಮನೆ ಕೂತಿದೆ?

ಅದೇ ತಮ್ಮನ್ನು ಪ್ರಶ್ನಿಸುವ ಮಾಧ್ಯಮ ಸಂಸ್ಥೆಯ ಮೇಲಾದರೆ, ವಿದೇಶಿ ಮಾಧ್ಯಮದಲ್ಲಿನ ಒಂದು ವರದಿಯನ್ನು ಆಧರಿಸಿ ಯುದ್ಧೋಪಾದಿಯಲ್ಲಿ ಸರಕಾರ ತನ್ನ ಏಜೆನ್ಸಿಗಳ ಮೂಲಕ ದಾಳಿ ನಡೆಸುತ್ತದೆ. ಯಾರದೋ ಮೂಲಕ ಹೇಳಿಕೆ ಪಡೆದು, ಅದರ ಆಧಾರದ ಮೇಲೆ ಒಂದು ರಾಜ್ಯದ ಸಿಎಂ ಅನ್ನು ಬಂಧಿಸಿ ಜೈಲಿನಲ್ಲಿರಿಸುವುದಕ್ಕೆ ಸರಕಾರ ಹಿಂದೆ ಮುಂದೆ ನೋಡುವುದಿಲ್ಲ. ಆದರೆ ಇಲ್ಲೇಕೆ ಹೀಗೆ ಮೌನ? ಇಲ್ಲೇಕೆ ಹೀಗೆ ನಿಷ್ಕ್ರಿಯತೆ?

ಅದಾನಿ ಗ್ರೂಪ್ ಬಳಸಿರುವ ಕಂಪೆನಿಯಲ್ಲಿ ಸೆಬಿ ಮುಖ್ಯಸ್ಥೆ ಮತ್ತು ಅವರ ಪತಿ ಹೂಡಿಕೆ ವಿಚಾರವಾಗಿ ಆರೋಪ ಬಂದ ಮೇಲೂ ಪ್ರಧಾನಿ ಮೋದಿಯಿಂದಾಗಲೀ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಂದಾಗಲೀ ಹೇಳಿಕೆಯಿಲ್ಲ. ತನಿಖೆಗಾದರೂ ಆದೇಶ ನೀಡಬೇಕಿತ್ತಲ್ಲವೆ? ಸರಕಾರ ಅದನ್ನೂ ಮಾಡಿಲ್ಲ. ಏನು ಮಾಡುತ್ತಿದೆ ಸರಕಾರ ಹಾಗಾದರೆ?

ಹಿಂಡನ್‌ಬರ್ಗ್ ವರದಿ ವಿಚಾರವಾಗಿ ಸರಕಾರ ಮಧ್ಯಪ್ರವೇಶಿಸು ವುದಿಲ್ಲ ಎಂಬ ವರದಿಗಳಿವೆ. ಆದರೆ ದೇಶಾದ್ಯಂತ ಹೂಡಿಕೆದಾರರಿಗೆ ಮೋದಿ ಸರಕಾರದ ಈ ನಡೆ ಸಂದೇಹಾಸ್ಪದವಾಗಿ ಕಾಣಿಸಿದೆ.

ಈ ಇಡೀ ವಿದ್ಯಮಾನದ ಬಗ್ಗೆ ಬಿಜೆಪಿ ಹಿರಿಯ ನಾಯಕ ಸುಬ್ರಮಣಿಯನ್ ಸ್ವಾಮಿಯವರೇ ಬಹಳ ಕಟುವಾದ ಕೆಲವು ವಿಚಾರಗಳನ್ನು ಹೇಳಿದ್ದಾರೆ.

ಹಿರಿಯ ಪತ್ರಕರ್ತ ಅಜಿತ್ ಅಂಜುಮ್ ಅವರ ಯೂಟ್ಯೂಬ್ ಚಾನೆಲ್‌ಗಾಗಿ ಪತ್ರಕರ್ತೆ ನೀಲೂ ವ್ಯಾಸ್ ಅವರು ಸುಬ್ರಮಣಿಯನ್ ಸ್ವಾಮಿಯವರೊಡನೆ ಇದೆಲ್ಲದರ ಬಗ್ಗೆ ಕೇಳಿದ್ದಾರೆ.

‘‘ಹಿಂಡನ್‌ಬರ್ಗ್ ಎಂದ ಕೂಡಲೇ ಅದು ವಿದೇಶಿ ಎನ್ನಲಾಗುತ್ತದೆ. ಆದರೆ ಅದು ದಾಖಲೆಗಳನ್ನು, ಅಂಕಿ ಅಂಶಗಳನ್ನು ಇಟ್ಟು ಹೇಳುತ್ತಿದೆ. ಹಾಗಾಗಿ ಇದರ ಬಗ್ಗೆ ಸುಪ್ರೀಂ ಕೋರ್ಟ್ ಪರಿಣಿತರ ಸಮಿತಿ ರಚಿಸಿ ಪರಿಶೀಲನೆಗೆ ಸೂಚಿಸಬೇಕು. ವರದಿ ಪಡೆಯಬೇಕು. ಆನಂತರ 2ಜಿ ಸ್ಪೆಕ್ಟ್ರಮ್ ವಿಚಾರದಲ್ಲಿ ಹೇಗೆ ಮಾಡಲಾಗಿತ್ತೋ ಅದೇ ರೀತಿಯ ಕ್ರಮಕ್ಕೆ ಇಲ್ಲಿಯೂ ಮುಂದಾಗಬೇಕು’’ ಎಂಬುದು ಸುಬ್ರಮಣಿಯನ್ ಸ್ವಾಮಿ ಅಭಿಪ್ರಾಯ.

ಈ ವರದಿಯಲ್ಲಿ ಹಿಂಡನ್‌ಬರ್ಗ್ ಅದಾನಿಯನ್ನು ಗುರಿ ಮಾಡಿಲ್ಲವಾದರೂ, ಸೆಬಿ ಅಧ್ಯಕ್ಷೆ ಮಾಧವಿ ಬುಚ್ ಅವರು ಅದಾನಿ ಕಂಪೆನಿಯ ಅವ್ಯವಹಾರದಲ್ಲಿ ಪಾಲುದಾರರಾಗಿದ್ದಾರೆ ಎಂದು ಗಂಭೀರ ಆರೋಪ ಮಾಡಿದೆ.

ಸೆಬಿ, ಅದಾನಿ ಸಮೂಹ ಮತ್ತು ಮೋದಿ ಸರಕಾರದ ನಡುವಿನ ಸಂಬಂಧ ಇಲ್ಲಿ ಕಾಣಿಸುತ್ತಿದೆ ಎಂದಿದ್ದಾರೆ ಸುಬ್ರಮಣಿಯನ್ ಸ್ವಾಮಿ.

ಹಿಂಡನ್‌ಬರ್ಗ್ ವರದಿ ಆರೋಪವನ್ನು ಅನುಮಾನಿಸುವವರು ಬಹಳ ಜನ ಇದ್ದಾರೆ. ಪರಿಣಿತರೇ ಎಲ್ಲ ದಾಖಲೆಗಳ ಆಧಾರದಲ್ಲಿ ವರದಿ ತಯಾರಿಸಿ, ಆ ವರದಿ ಹೇಳುತ್ತಿರುವುದರ ಸತ್ಯಾಸತ್ಯತೆ ತಿಳಿಯಬೇಕು ಮತ್ತು ಕೋರ್ಟ್‌ನಲ್ಲಿ ಇದರ ವಿಚಾರಣೆ ನಡೆಯಬೇಕು ಎಂಬುದು ಸ್ವಾಮಿ ಪ್ರತಿಪಾದನೆ.

ಸೆಬಿ ಮುಖ್ಯಸ್ಥೆ ಮತ್ತು ಅವರ ಪತಿ ಹಿಂಡನ್‌ಬರ್ಗ್ ವರದಿಯಲ್ಲಿನ ಆರೋಪಗಳನ್ನೆಲ್ಲ ನಿರಾಕರಿಸಿದ್ದಾರೆ.

ಆದರೆ ಸ್ವಾಮಿ ಪ್ರಕಾರ, ‘‘ಅವರೇನು ಹೇಳುತ್ತಿದ್ದಾರೆ ಎನ್ನುವುದು ಈಗ ಮುಖ್ಯವಲ್ಲ, ಸ್ವತಂತ್ರ ಪರಿಣಿತರ ತಂಡದಿಂದ ಪರಿಶೀಲನೆ ಆಗಬೇಕು ಮತ್ತು ಸತ್ಯ ಏನೆಂಬುದನ್ನು ಅದೇ ಹೇಳಬೇಕು’’ ಎಂದು.

ಹಿಂಡನ್‌ಬರ್ಗ್ ವರದಿ ಪಕ್ಕಾ ಹೌದೋ ಅಲ್ಲವೋ ಅನ್ನುವುದನ್ನು ಆ ಸ್ವತಂತ್ರ ಪರಿಣಿತರ ತಂಡವೇ ಕಂಡುಕೊಳ್ಳುವುದು ಸಾಧ್ಯವಿರುವಾಗ ಯಾರದೇ ಹೇಳಿಕೆಯನ್ನು ನೆಚ್ಚಬೇಕಿಲ್ಲ ಎಂಬ ಅಂಶವನ್ನು ಬಹಳ ಸ್ಪಷ್ಟವಾಗಿ ಸ್ವಾಮಿ ಹೇಳಿದ್ದಾರೆ.

ಮಾಹಿತಿ ಪಡೆಯಲು ಆರ್‌ಟಿಐ ಬಳಸಬಹುದು. ತನಿಖೆ ಮಾಡಲೇಬೇಕೆಂದಾದರೆ ಬೇಕಾದಷ್ಟು ದಾರಿಗಳಿವೆ ಎಂದಿದ್ದಾರೆ.

ಸರಕಾರ ಈ ವರದಿ ಸುಳ್ಳು ಎಂದು ಬಿಂಬಿಸುವ ಯತ್ನ ಮಾಡುತ್ತಿರುವಾಗಲೇ, ಸೆಬಿ ಮುಖ್ಯಸ್ಥೆಯನ್ನು ರಕ್ಷಿಸುವ ಯತ್ನದಲ್ಲಿಯೂ ತೊಡಗಿದೆಯೇ ಎಂಬ ಅನುಮಾನಗಳು ಮೂಡುತ್ತವೆ.

ಸರಕಾರದ ವಿಶ್ವಾಸಾರ್ಹತೆ ಕಡಿಮೆಯಾಗಿರುವುದರ ಬಗ್ಗೆ ಸ್ವಾಮಿ ಅವರೇ ಹೇಳುತ್ತಿದ್ದಾರೆ.

ಸುಬ್ರಮಣಿಯನ್ ಸ್ವಾಮಿ ಅವರು ಈ ವರದಿಯನ್ನು ಅತ್ಯಂತ ಒಳ್ಳೆಯ ವರದಿ ಎಂದೇ ಹೇಳುತ್ತಿದ್ಧಾರೆ. ನೂರಕ್ಕೆ ನೂರು ಅದರಲ್ಲಿ ಸತ್ಯವಿದೆ ಎಂದೇ ಅವರು ಹೇಳುತ್ತಿದ್ದಾರೆ.

ಆದರೆ ವಿದೇಶಿ ಕಂಪೆನಿ ಎಂದು ಹೇಳುತ್ತ, ಅದರ ವರದಿಯೂ ಸುಳ್ಳು ಎಂದು ಹೇಳಿ ಲಾಭ ಪಡೆಯುವವರು ಬಹಳ ಮಂದಿಯಿದ್ದಾರೆ ಎಂಬುದು ಸ್ವಾಮಿ ಅಭಿಪ್ರಾಯ.

ಸೆಬಿಗೆ ಕಳೆದ 15 ವರ್ಷಗಳಿಂದಲೂ ಒಳ್ಳೆಯ ಹೆಸರಿಲ್ಲ ಎನ್ನುವುದು ಸ್ವಾಮಿ ಆರೋಪ. ತನ್ನಂಥವರು ಅದನ್ನು ಒಪ್ಪುವುದು ಸಾಧ್ಯವಿಲ್ಲ ಎಂದಿದ್ದಾರೆ ಅವರು.

ಸೆಬಿ ಮುಖ್ಯಸ್ಥೆಯ ನೇಮಕವಾದದ್ದೇ ಅದಾನಿ ಸೂಚನೆ ಮೇರೆಗೆ ಎಂಬ ಮಾತೂ ಇದೆ. ಅದನ್ನು ನಿಜವೆನ್ನುವ ಸ್ವಾಮಿ, ಇನ್ನೂ ಒಂದು ಮುಖ್ಯ ವಿಚಾರ ಹೇಳುತ್ತಾರೆ.

ಅದಾನಿ ಸೂಚನೆ ಮೇರೆಗೆ ಆಯಿತು ಅನ್ನುವುದಕ್ಕಿಂತಲೂ, ಅದಾನಿ ಮಾತನ್ನು ಮೋದಿ ಕೇಳುತ್ತಾರಲ್ಲ ಎಂಬುದು ಸ್ವಾಮಿ ತಕರಾರು.

ಅದಾನಿ ಮಾತನ್ನು ಮೋದಿ ಕೇಳುತ್ತಾರೆ. ಅಮಿತ್ ಶಾ ಕೇಳುತ್ತಾರೆ. ಎಲ್ಲರೂ ಗುಜರಾತಿಗಳು ಎನ್ನುತ್ತಾರೆ ಸ್ವಾಮಿ.

‘‘ಪ್ರಧಾನಿ ಮೋದಿ ಯಾಕೆ ಈ ವರದಿ ವಿಚಾರವಾಗಿ, ಸ್ಪಷ್ಟವಾಗಿ ಹೇಳುವುದಿಲ್ಲ?’’ ಎಂಬುದು ಸ್ವಾಮಿ ಪ್ರಶ್ನೆ.

‘‘ಹಿಂಡನ್‌ಬರ್ಗ್ ವರದಿಯನ್ನು ಒಪ್ಪುತ್ತಾರೋ ನಿರಾಕರಿಸುತ್ತಾರೋ ಎಂಬುದಾದರೂ ಬಗೆಹರಿಯಬೇಕಲ್ಲವೆ? ಚರ್ಚೆಯಾಗಬೇಕಲ್ಲವೆ? ಯಾವುದನ್ನೂ ಅವರು ಮಾಡುತ್ತಿಲ್ಲ’’ ಎಂದಿದ್ದಾರೆ ಸ್ವಾಮಿ.

‘‘ಸೆಬಿ ಮುಖ್ಯಸ್ಥೆ ಈ ವರದಿ ಬಂದ ಬಳಿಕ ಇಷ್ಟು ಹೊತ್ತಿಗೆ ರಾಜೀನಾಮೆ ಕೊಟ್ಟಿರಬೇಕಿತ್ತು. ಕೊಟ್ಟಿಲ್ಲ. ಮೋದಿ ಮತ್ತು ಇಡೀ ಮೋದಿ ಸರಕಾರವೇ ಅದಾನಿ ನಿಯಂತ್ರಣದಲ್ಲಿದೆ. ನಾನು ಅದಾನಿಗೆ ಸಲಾಂ ಹೇಳುತ್ತೇನೆ’’ ಎಂದು ಸ್ವಾಮಿ ವ್ಯಂಗ್ಯವಾಡಿದ್ದಾರೆ.

ಮೋದಿ ಸರಕಾರವೇ ಸೆಬಿ ಮುಖ್ಯಸ್ಥೆಯ ರಕ್ಷಣೆಗೆ ನಿಂತಿದೆ. ಯಾಕೆಂದರೆ, ಸೆಬಿ ಮುಖ್ಯಸ್ಥೆ ಸಿಕ್ಕಿಹಾಕಿಕೊಂಡರೆ, ಮೋದಿ ಮತ್ತು ಅದಾನಿ ಇಬ್ಬರೂ ಸಿಕ್ಕಿಹಾಕಿಕೊಳ್ಳುತ್ತಾರೆ ಎಂಬುದು ಸ್ವಾಮಿ ಅಭಿಪ್ರಾಯ.

‘‘ಇದು ಹಗರಣವಲ್ಲ. ಇದು ಮೋದಿ, ಅದಾನಿ, ಶಾ ಇವರೆಲ್ಲರೂ ಮಾಡಿರುವ ವಿಶ್ವಾಸಘಾತುಕತನ. ಅರ್ಹರು, ಗೌರವಾನ್ವಿತರು ಎಂಬ ಕಾರಣಕ್ಕೆ ಸೆಬಿ ಮುಖ್ಯಸ್ಥೆಯ ನೇಮಕವಾಗಲಿಲ್ಲ, ಬದಲಾಗಿ ಅವರು ತಮ್ಮ ಮಾತು ಕೇಳುವವರು ಎಂಬ ಕಾರಣಕ್ಕೆ ನೇಮಿಸಲಾಗಿದೆ’’ ಎಂದಿದ್ದಾರೆ ಸ್ವಾಮಿ.

ಸೆಬಿ ಮುಖ್ಯಸ್ಥೆ ತಮ್ಮ ತಪ್ಪನ್ನು ಒಪ್ಪಿಕೊಳ್ಳಬೇಕಾಗಿದೆ. ಮಾಡಿದ ತಪ್ಪಿಗಾಗಿ ಪಶ್ಚಾತ್ತಾಪ ಪಡಬೇಕಾಗಿದೆ ಎಂಬುದು ಸ್ವಾಮಿ ಅಭಿಪ್ರಾಯ.

ಬಿಜೆಪಿಯವರೇ ಆದ ಸ್ವಾಮಿ, ಮೋದಿ ಸರಕಾರ ವಿಶ್ವಾಸಾರ್ಹತೆಯನ್ನು ಕಳೆದುಕೊಂಡಿರುವುದರ ಬಗ್ಗೆ, ಅದರಿಂದಾಗಿಯೇ ಕಳೆದ ಚುನಾವಣೆಯಲ್ಲಿ ಜನರಿಂದ ತಿರಸ್ಕೃತಗೊಂಡಿರುವ ಬಗ್ಗೆ ಹೇಳಿದ್ದಾರೆ.

ಹೇಗೆ ಈ ಇಡೀ ವ್ಯವಹಾರ ಒಬ್ಬರ ಬೆನ್ನಲ್ಲೊಬ್ಬರು ಸಿಕ್ಕಿಹಾಕಿಕೊಳ್ಳುವ ಹಾಗಿದೆ ಮತ್ತು ಅದಕ್ಕಾಗಿಯೇ ಹೇಗೆ ಒಬ್ಬರನ್ನೊಬ್ಬರು ರಕ್ಷಿಸುವ ಕಸರತ್ತಿನಲ್ಲಿ ತೊಡಗಿದ್ದಾರೆ ಎಂಬ ಸೂಕ್ಷ್ಮವನ್ನು ಸುಬ್ರಮಣಿಯನ್ ಸ್ವಾಮಿ ಅವರು ತಮ್ಮ ಮಾತುಗಳಲ್ಲಿ ಮನವರಿಕೆ ಮಾಡಿಕೊಟ್ಟಿದ್ದಾರೆ.

ಹಿಂಡನ್‌ಬರ್ಗ್ ವರದಿಯಲ್ಲಿ ಇದೆ ಎನ್ನಲಾಗುವ ಸತ್ಯವನ್ನು ಅಡಗಿಸಲು, ಅದನ್ನು ವಿದೇಶಿ ಕಂಪೆನಿ, ದೇಶವನ್ನು ಅಸ್ಥಿರಗೊಳಿಸುವ ಯತ್ನ ಎಂದೆಲ್ಲ ಹೇಳುತ್ತ ನಿರಾಕರಿಸುವ ಪ್ರಯತ್ನ ಒಂದೆಡೆ ನಡೆದಿದೆ.

ಆದರೆ, ಆ ವರದಿಯಲ್ಲಿ ಸತ್ಯವಿದೆ ಮತ್ತು ಅದನ್ನು ಖಚಿತಪಡಿಸುವ ದೇಶೀ ವರದಿಯೊಂದು ಈಗ ನಮ್ಮಲ್ಲಿನ ಪರಿಣಿತರ ಮೂಲಕ ತಯಾರಾಗಬೇಕಿದೆ ಎಂಬುದು ಸುಬ್ರಮಣಿಯನ್ ಸ್ವಾಮಿ ಒತ್ತಾಯ.

ಸುಬ್ರಮಣಿಯನ್ ಸ್ವಾಮಿ ಆರ್ಥಿಕ ವಿಷಯಗಳ ತಜ್ಞರು, ಹಿಂದುತ್ವದ ಪ್ರಬಲ ಪ್ರತಿಪಾದಕರು, ಆರೆಸ್ಸೆಸ್‌ನ ಬೆಂಬಲವೂ ಇರುವವರು. ಅವರೇ ಈಗ ಮೋದಿ ಸರಕಾರ ವಿಶ್ವಾಸಾರ್ಹತೆ ಕಳಕೊಂಡಿದೆ ಎಂದು ಹೇಳುತ್ತಿದ್ದಾರೆ.

ಇದು ಮೋದಿ, ಅದಾನಿ, ಶಾ ಇವರೆಲ್ಲರೂ ಮಾಡಿರುವ ವಿಶ್ವಾಸಘಾತುಕತನ ಎಂದಿದ್ದಾರೆ ಸ್ವಾಮಿ. ಆದರೆ ಮೋದಿ ಸರಕಾರ ಮಾತ್ರ ಇಷ್ಟು ದೊಡ್ಡ ಆರೋಪ ಬಂದ ಮೇಲೂ ಮಾತಾಡುತ್ತಿಲ್ಲ. ಬಿಜೆಪಿ, ಸಂಘ ಪರಿವಾರ ಹೇಳುವಂತೆ ಹಿಂಡನ್‌ಬರ್ಗ್ ವರದಿ ಸುಳ್ಳು ಎಂದು ಸಾಬೀತುಪಡಿಸಲಾದರೂ ಒಂದು ತನಿಖೆ ನಡೆಯಬೇಕಲ್ಲವೇ? ಅಷ್ಟಕ್ಕೂ ಸೆಬಿ ಮುಖ್ಯಸ್ಥೆ ಮೇಲೆ ಗುರುತರ ಆರೋಪ ಬಂದರೆ ಬಿಜೆಪಿ ಯಾಕೆ ಅವರ ರಕ್ಷಣೆಗೆ ಹೋಗಬೇಕು? ಆಕೆಯ ರಾಜೀನಾಮೆ ಪಡೆದು ತನಿಖೆ ಮಾಡಿ ಸತ್ಯ ಏನೆಂದು ಕಂಡುಕೊಳ್ಳಬಹುದಲ್ಲವೇ?

ಸೆಬಿ ಮುಖ್ಯಸ್ಥೆಯ ವಿರುದ್ಧದ ಆರೋಪಗಳ ತನಿಖೆಗೆ ಒಂದಿಡೀ ದಿನವೂ ಬೇಕಾಗಿಲ್ಲ, ಮೂರ್ನಾಲ್ಕು ಗಂಟೆಗಳಲ್ಲಿ ಎಲ್ಲವನ್ನೂ ಕಂಡು ಹಿಡಿಯಬಹುದು ಅಂತಾರೆ ಹಿರಿಯ ಪತ್ರಕರ್ತರು ಹಾಗೂ ತಜ್ಞರು. ಹಾಗಾದರೆ ಸತ್ಯ ಕಂಡು ಹಿಡಿಯಲು ಇರುವ ಅಡೆತಡೆಯಾದರೂ ಏನು?

ಸುಬ್ರಮಣಿಯನ್ ಸ್ವಾಮಿಯವರು ಹೇಳುವಂತೆ ಅಂತಿಮವಾಗಿ ಹೊರಬೀಳಬಹುದಾದ ಸತ್ಯಗಳು ಎಷ್ಟು ಭಯಂಕರವಾಗಿರಬಹುದು? ಅದೆಂತಹ ವಿಶ್ವಾಸಘಾತದ ಕಠೋರ ಸತ್ಯವಾಗಿರಬಹುದು?

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಚಂದ್ರಕಾಂತ್ ಎನ್.

contributor

Similar News