ಗ್ರಾಹಕರಿಗೆ ಕಣ್ಣೀರು ತರಿಸಿದ ಈರುಳ್ಳಿ, ಬೆಳ್ಳುಳ್ಳಿ
ಹೊಸಕೋಟೆ: ಈರುಳ್ಳಿ ದರ ಮತ್ತೆ ಗಗನಕ್ಕೇರಿದ್ದು, 100ರ ಗಡಿ ಮುಟ್ಟಿದೆ. ಬೆಳೆಗಾ ರರಿಗೆ ಖುಷಿ ತಂದರೂ ಗ್ರಾಹಕರ ಕಣ್ಣಲ್ಲಿ ನೀರು ತರಿಸುತ್ತಿದೆ.
ಪ್ರತಿಯೊಂದು ತಿಂಡಿ, ಸಾಂಬಾರಿಗೆ ಬೆಳ್ಳುಳ್ಳಿ ಇಲ್ಲದಿದ್ದರೆ ರುಚಿ ಇರುವುದಿಲ್ಲ. ಆದರೆ, ಇದರ ಬೆಲೆ ಏರಿಕೆಯಾಗಿದ್ದು, ಮಹಿಳೆಯರಿಗೆ ಕೈ ಕಟ್ಟು ವಂತಾಗಿದೆ. ಹೊಟೇಲ್‌ಗಳಲ್ಲಿ ಬೆಳ್ಳುಳ್ಳಿ ಮತ್ತು ಈರುಳ್ಳಿಯಿಂದ ಸಾಕಷ್ಟು ಪದಾರ್ಥ ಗಳನ್ನು ತಯಾರಿಸುತ್ತಾರೆ. ಮಾಂಸಾಹಾರಿ ಹೊಟೇಲ್‌ಗಳಿಗೆ ಬೆಳ್ಳುಳ್ಳಿ ಬೆಲೆ ಏರಿಕೆಯ ಬರೆ ಬೀಳುವಂತೆ ಆಗಿದೆ. ಬೆಳ್ಳುಳ್ಳಿ ಸರಿಯಾದ ರೀತಿ ಬರುತ್ತಿಲ್ಲದಿರುವುದರಿಂದ ಬೆಲೆ
ಏರಿಕೆಯಾಗಿದೆ. ರಾಜ್ಯದ ಹಲವು ಕಡೆ ಈ ಬಾರಿ ಮಳೆಯಾಗುತ್ತಿ ರುವುದರಿಂದ ಬೆಳೆಗಳು ನಾಶವಾಗಿದೆ. ಹೊಸ ಬೆಳ್ಳುಳ್ಳಿ ಇನ್ನೂ 2-3ತಿಂಗಳು ಕಟಾವಿಗೆ ಬರಬೇಕಾಗಿದೆ ಎಂದು ವ್ಯಾಪಾರಸ್ಥರು ಹೇಳುತ್ತಾರೆ.
ಈರುಳ್ಳಿ ಬೆಲೆ ಏರಿಕೆ: ಈರುಳ್ಳಿ ಮತ್ತು ಬೆಳ್ಳುಳ್ಳಿ ಬೆಲೆ ಏರಿಕೆಯಿಂದ ಗ್ರಾಹಕರಲ್ಲಿ ಮತ್ತಷ್ಟು ಹೊರೆ ಬೀಳುತ್ತಿದೆ. ಹಲವು ದಿನಗಳಿಂದ ಈರುಳ್ಳಿ ಬೆಲೆ ನಿರಂತರವಾಗಿ ಏರುತ್ತಲೇ ಇದೆ. ಗ್ರಾಹಕರ ಕಣ್ಣಲ್ಲಿ ಕೊಳ್ಳುವಾಗಲೇ ನೀರು ಬರುತ್ತಿದೆ. ಗುಣಮಟ್ಟದ ಈರುಳ್ಳಿಗೆ ಮಾರುಕಟ್ಟೆಯಲ್ಲಿ ಒಂದು ಕೆ.ಜಿಗೆ 60ರಿಂದ 70 ರೂ. ಮಾರಾಟವಾಗುತ್ತಿದೆ. ಕಳೆದ ಕೆಲವು ತಿಂಗಳ ಹಿಂದೆ 100 ರೂ.ಗೆ 5 ಕೆ.ಜಿ ಮಾರಾಟವಾಗುತ್ತಿದ್ದ ಈರುಳ್ಳಿ, ಈಗ 4 ಕೆ.ಜಿಗೆ 250ರಿಂದ 260 ರೂ.ಗಳಿಗೆ ಮಾರಾಟವಾಗುತ್ತಿದೆ. ರಾಜ್ಯದ ವಿವಿಧೆಡೆ ಈ ಬಾರಿ ಮಳೆ ಆಗುತ್ತಿರುವುದರಿಂದ ಈರುಳ್ಳಿ ಸೇರಿದಂತೆ ಬೆಳೆಗಳು ನಾಶವಾಗಿರುವ ಹಿನ್ನಲೆಯಲ್ಲಿ ಬೆಲೆ ಹೆಚ್ಚಳವಾಗಿದೆ .
ಶ್ರಾವಣ ಮಾಸ ಮುಗಿಯುತ್ತಿರುವ ಬೆನ್ನಲ್ಲೇ ಬೆಳ್ಳುಳ್ಳಿ ಬೆಲೆ ಏರಿಕೆ ಆಗಿರುವುದು ಗ್ರಾಹಕರಿಗೆ ಮತ್ತಷ್ಟು ಹೊರೆ ಬೀಳುವಂತಾಗಿದೆ. ಇದೀಗ ಬೆಳ್ಳುಳ್ಳಿ ಬೆಲೆ 400 ರೂ. ದಾಟಿದೆ. ಫೆಬ್ರವರಿ ತಿಂಗಳಲ್ಲಿ 500 ರೂ. ತಲುಪಿ ಭಾರೀ ದುಬಾರಿಯಾಗಿತ್ತು.
ಶ್ರಾವಣ ಮಾಸದಲ್ಲಿ ಮಾಂಸಾಹಾರ ಸೇವಿಸುವವರ ಸಂಖ್ಯೆ ಕಡಿಮೆ ಹೀಗಾಗಿ ಹೆಚ್ಚು ಬೆಳ್ಳುಳ್ಳಿ ಕೂಡ ಬಳಸುತ್ತಿಲ್ಲ. ಶ್ರಾವಣ ಮುಗಿದು ದಸರಾ ಪ್ರಾರಂಭವಾಗುತ್ತಿದೆ. ಮನೆಗಳಲ್ಲಿ ಬೆಳ್ಳುಳ್ಳಿ ಬಳಕೆ ಹೆಚ್ಚಲಿದೆ. ಬೆಳ್ಳುಳ್ಳಿ ಬೆಲೆ ಗ್ರಾಹಕರ ಜೇಬಿಗೆ ಕತ್ತರಿ ಬೀಳುತ್ತಿದೆ. ಬೆಲೆ ಏರಿಕೆಯಿಂದಾಗಿ ಮಹಿಳೆಯರು ಅಡುಗೆಗೆ ಬೆಳ್ಳುಳ್ಳಿ ಬಳಸಲು ಹಿಂದೇಟು ಹಾಕುತ್ತಿದ್ದಾರೆ.
ಬೆಳ್ಳುಳ್ಳಿ ಸಮರ್ಪಕವಾಗಿ ಸರಬರಾಜು ಆಗುತ್ತಿಲ್ಲ. ಬೆಳ್ಳುಳ್ಳಿಯನ್ನು ಬೇರೆ ಕಡೆಯಿಂದ ಆಮದು ಮಾಡಿಕೊಳ್ಳಬೇಕಾಗಿದ್ದು, ಹೆಚ್ಚಿನ ಬೆಲೆ ಕೊಡಬೇಕಾಗುತ್ತದೆ. ಬೆಲೆ ಏರಿಕೆ ನಡುವೆ ವಾಹನಗಳಲ್ಲಿ ಬೆಳ್ಳುಳ್ಳಿ ಸರಬರಾಜು ಮಾಡಿಕೊಂಡು ವ್ಯಾಪಾರ ಮಾಡುತ್ತಿದ್ದೇವೆ. ಬೆಳ್ಳುಳ್ಳಿ ದರ ಜಾಸ್ತಿ ಆಗಿರುವುದರಿಂದ ಗ್ರಾಹಕರಿಗೆ ಚಿಲ್ಲರೆ ಬೆಳ್ಳುಳ್ಳಿ ನೀಡಲು ಕಷ್ಟವಾಗುತ್ತಿದೆ.
-ಅಕ್ಬರ್ ಖಾನ್, ತರಕಾರಿ ವ್ಯಾಪಾರಿ, ಸೂಲಿಬೆಲೆ
ಅಡುಗೆಗೆ ಈರುಳ್ಳಿ, ಬೆಳ್ಳುಳ್ಳಿ ಇಲ್ಲದಿದ್ದರೆ ರುಚಿ ಇರುವುದಿಲ್ಲ. ಪ್ರತಿಯೊಂದು ಒಗ್ಗರಣೆಗೆ ಬೆಳ್ಳುಳ್ಳಿ ಬಳಸುತ್ತೇವೆ. ಈರುಳ್ಳಿ ಬೆಳ್ಳುಳ್ಳಿ ಎಷ್ಟೇ ದುಬಾರಿಯಾದರೂ ಅನಿವಾರ್ಯವಾಗಿ ಖರೀದಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
-ರಂಜಿತಾ, ಗೃಹಿಣಿ ಚಿಕ್ಕಕೋಲಿಗ