ಆನ್‌ಲೈನ್ ಗೇಮಿಂಗ್ ಎಂಬ ಅತ್ಯಂತ ಅಪಾಯಕಾರಿ ವ್ಯಸನಕ್ಕೆ ಬಲಿಯಾಗುತ್ತಿರುವ ದೇಶದ ಯುವಜನತೆ

Update: 2024-09-25 06:05 GMT

ಸೆಲೆಬ್ರಿಟಿಗಳು ತಾವು ಆಡದ ಆನ್‌ಲೈನ್ ಜೂಜಿಗೆ ದುಡ್ಡು ಹಾಕುವಂತೆ ತಮ್ಮ ಅಭಿಮಾನಿಗಳನ್ನು ಸೆಳೆಯುತ್ತಿದ್ದರೆ, ಅದೆಷ್ಟೋ ಮಂದಿ ಲಾಭದ ಆಸೆಯಲ್ಲಿ ಲಕ್ಷಗಟ್ಟಲೆ, ಕೋಟಿಗಟ್ಟಲೆ ಹಣ ಕಳೆದುಕೊಂಡು, ಜೀವನದುದ್ದಕ್ಕೂ ಪಶ್ಚಾತ್ತಾಪ ಪಡುವ ದುಃಸ್ಥಿತಿ ಇವತ್ತು ಸೃಷ್ಟಿಯಾಗಿದೆ.

ಹಿಮಾಂಶು ಎಂಬ ಮಿಡಲ್ ಕ್ಲಾಸ್ ಕುಟುಂಬದ ಹುಡುಗ ಆನ್‌ಲೈನ್ ಗೇಮಿಂಗ್‌ನಲ್ಲಿ 96 ಲಕ್ಷ ರೂ. ಕಳೆದುಕೊಂಡಿರುವ ಪ್ರಸಂಗ ಅಂಥ ಒಂದು ಉದಾಹರಣೆ ಮಾತ್ರ.

ಇವತ್ತು ಆನ್‌ಲೈನ್ ಬೆಟ್ಟಿಂಗ್ ಆ್ಯಪ್‌ಗಳು ಹಾಗೂ ಗೇಮ್‌ಗಳು ಯುವಜನರ ಸರ್ವನಾಶಕ್ಕೇ ನಿಂತುಬಿಟ್ಟಿವೆ.

ಅವು ಯುವಕರ ತಲೆತುಂಬ ಆವರಿಸಿಕೊಳ್ಳುವಂತಾಗಲು ಅವರೇ ಆರಾಧಿಸಿರುವ ನೆಚ್ಚಿನ ಸೆಲೆಬ್ರಿಟಿಗಳೇ ಕಾರಣರಾಗುತ್ತಿದ್ದಾರೆ.

ಸೆಲೆಬ್ರಿಟಿಗಳಿಗೇನೋ ಜಾಹೀರಾತಿನಿಂದ ಹಣ ಸಿಗುತ್ತದೆ. ಅದಕ್ಕಾಗಿ ಅವರು ಹಾಗೂ ಮತ್ತದೆಷ್ಟೋ ನಕಲಿ ಇನ್‌ಫ್ಲುಯೆನ್ಸರ್‌ಗಳು ಯುವಜನರ ಜೀವನದೊಂದಿಗೆ ಚೆಲ್ಲಾಟವಾಡುತ್ತಿದ್ದಾರೆ. ಜಾಹೀರಾತುಗಳಿಗೆ ಕೋಟ್ಯಂತರ ಹಣ ಪಡೆಯುವ ಈ ಸೆಲೆಬ್ರಿಟಿಗಳು ಟಿವಿ, ಇಂಟರ್ನೆಟ್‌ನಲ್ಲಿ ಬೆಟ್ಟಿಂಗ್ ಸಲಹೆ ನೀಡುತ್ತಾರೆ. ತಮ್ಮನ್ನು ನಂಬುವ ಜನರನ್ನು, ಅಭಿಮಾನಿಗಳನ್ನೆಲ್ಲ ಬೆಟ್ಟಿಂಗ್‌ಗೆ ವ್ಯಸನಿಗಳನ್ನಾಗಿಸಿಬಿಡುತ್ತಾರೆ.

ಈ ಕ್ರಿಕೆಟಿಗರು, ಬಾಲಿವುಡ್ ನಟರು ಸ್ವತಃ ತಮ್ಮ ಆರೋಗ್ಯದ ಬಗ್ಗೆ, ದುಡ್ಡಿನ ಬಗ್ಗೆ ಇನ್ನಿಲ್ಲದ ಕಾಳಜಿ ವಹಿಸುತ್ತಾರೆ. ಆದರೆ ತಾವು ಆಡದ ಜೂಜಿಗೆ ದುಡ್ಡು ಹಾಕುವಂತೆ ತಮ್ಮ ಅಭಿಮಾನಿಗಳನ್ನು ಸೆಳೆಯುತ್ತಾರೆ.

ಆ ಮೂಲಕ ತಮ್ಮ ಜೇಬು ತುಂಬಿಸಿಕೊಳ್ಳುತ್ತಾರೆ.

ಕ್ರಿಕೆಟಿಗರು, ನಟರ ಥಳಕು ಬಳುಕಿನ ವಿಲಾಸಿ ಜೀವನ ನೋಡಿ ಆಸೆಗೆ ಬೀಳುವ ಯುವಜನರು ಅವರು ಹೇಳಿದ ಹಾಗೆ ಬೆಟ್ಟಿಂಗ್‌ಗೆ ದುಡ್ಡು ಹಾಕಿದರೆ ನಾವೂ ಅವರ ಹಾಗೆ ವಿಲಾಸಿ ಜೀವನ ನಡೆಸಬಹುದು ಅನ್ನುವ ಭ್ರಮೆಗೆ ಬೀಳುತ್ತಾರೆ. ಅವರು ಹೇಳಿದರೆಂದು ನಂಬಿ, ಅವರ ಸಲಹೆಯನ್ನು ಫಾಲೋ ಮಾಡುತ್ತ ಅನೇಕರು ಹೋಗಿ ಸಿಕ್ಕಿಹಾಕಿಕೊಳ್ಳುವುದು ಈ ಬೆಟ್ಟಿಂಗ್ ಕಂಪೆನಿಗಳ ಭಯಂಕರ ಬಲೆಯಲ್ಲಿ.

ಅದೆಷ್ಟೋ ಮಂದಿ ಲಾಭದ ಆಸೆಯಲ್ಲಿ ಲಕ್ಷಗಟ್ಟಲೆ, ಕೋಟಿಗಟ್ಟಲೆ ಹಣ ಕಳೆದುಕೊಂಡು, ಜೀವನದುದ್ದಕ್ಕೂ ಪಶ್ಚಾತ್ತಾಪ ಪಡುವ ದುಃಸ್ಥಿತಿ ಇವತ್ತು ಸೃಷ್ಟಿಯಾಗಿದೆ.

ಹಿಮಾಂಶು ಎಂಬ ಮಿಡಲ್ ಕ್ಲಾಸ್ ಕುಟುಂಬದ ಹುಡುಗ ಆನ್‌ಲೈನ್ ಗೇಮಿಂಗ್‌ನಲ್ಲಿ 96 ಲಕ್ಷ ರೂ. ಕಳೆದುಕೊಂಡಿರುವ ಪ್ರಸಂಗ ಅಂಥ ಒಂದು ಉದಾಹರಣೆ ಮಾತ್ರ.

ಆನ್‌ಲೈನ್ ಗೇಮಿಂಗ್ ಚಟ ಹಿಮಾಂಶು ಜೀವನವನ್ನೇ ಸರ್ವನಾಶ ಮಾಡಿಬಿಟ್ಟಿದೆ. ಆತ ತನ್ನ ಬದುಕಿನಲ್ಲಿ ನಡೆದದ್ದನ್ನು ಚಾನೆಲ್ ಶೋ ಒಂದರಲ್ಲಿ ಬಿಡಿಸಿ ಬಿಡಿಸಿ ಇಟ್ಟಿದ್ದಾನೆ.

ಜೆಇಇ ಮೇನ್ಸ್‌ನಂಥ ಕಠಿಣ ಪರೀಕ್ಷೆಯಲ್ಲಿ ಅರ್ಹತೆ ಪಡೆದಿದ್ದ ಹಿಮಾಂಶು, ಆನ್‌ಲೈನ್ ಗೇಮಿಂಗ್‌ಗೆ ಎಷ್ಟು ವ್ಯಸನಿಯಾಗಿದ್ದನೆಂದರೆ, ತನ್ನ ಇಂಜಿನಿಯರಿಂಗ್ ಅಧ್ಯಯನಕ್ಕಾಗಿ ಮೀಸಲಿಟ್ಟಿದ್ದ ಫೀಸ್ ಹಣವನ್ನೆಲ್ಲ ಆನ್‌ಲೈನ್ ಜೂಜಿನಲ್ಲಿ ಕಳೆದುಕೊಂಡುಬಿಟ್ಟ.

ಶಿಕ್ಷಕಿಯಾಗಿರುವ ಆತನ ತಾಯಿ, ತನ್ನ ಮಗನ ಈ ಗೀಳಿನ ಬಗ್ಗೆ ತಿಳಿದಾಗ ನಿಜಕ್ಕೂ ಆಘಾತ ಅನುಭವಿಸುತ್ತಾರೆ. ಕಡೆಗೆ ಆತನೊಂದಿಗೆ ಮಾತನಾಡುವುದನ್ನೇ ನಿಲ್ಲಿಸಿಬಿಡುತ್ತಾರೆ. ಆತನ ಸಹೋದರನ ಜೊತೆಗಿನ ಆತ್ಮೀಯತೆಯೂ ಇಲ್ಲವಾಗುತ್ತದೆ.

‘‘ಇಂದು ರಸ್ತೆಯಲ್ಲಿ ನನಗೆ ಏನಾದರೂ ಸಂಭವಿಸಿದರೂ ಯಾರೂ ನನ್ನನ್ನು ನೋಡಲು ಬರುವುದಿಲ್ಲ’’ಎಂದು ಆತ ಹೇಳುವುದನ್ನು ನೋಡಿದರೆ ಆತ ಮುಟ್ಟಿರುವ ಅವಸ್ಥೆ ಬಗ್ಗೆ ಕರುಳು ಚುರ್ ಎನ್ನುತ್ತದೆ.

ಈ ಗೀಳು ಆತನ ಫೀಸಿನ ಹಣವನ್ನು ಮಾತ್ರ ಹಾಳು ಮಾಡಲಿಲ್ಲ, ಬದಲಾಗಿ ಹಣಕ್ಕಾಗಿ ಕಂಡಕಂಡವರನ್ನೆಲ್ಲ ವಂಚಿಸುವ ಕ್ರಿಮಿನಲ್ ಬುದ್ಧಿಯನ್ನೂ ಅವನಲ್ಲಿ ಬೆಳೆಸಿಬಿಟ್ಟಿತು. ಜೂಜಿನಲ್ಲಿ ಕಳೆದುಕೊಂಡ ಬಹಳಷ್ಟು ಹಣ ಆತ ಜನರನ್ನು ವಂಚಿಸಿ ಗಿಟ್ಟಿಸಿಕೊಂಡದ್ದೆಂದು ಶೋನಲ್ಲಿ ಹೇಳಿಕೊಂಡಿದ್ದಾನೆ. ಅವಮಾನದಿಂದ, ತಪ್ಪು ಮಾಡಿದ್ದೇನೆ ಎಂಬ ಭಾವನೆಯಿಂದ ಆತ್ಮಹತ್ಯೆಗೂ ಯತ್ನಿಸಿದ್ದಾಗಿ ಹಿಮಾಂಶು ಒಪ್ಪಿಕೊಂಡಿದ್ದಾನೆ.

ಆತನ ಈ ಕಥೆ ಬೆಟ್ಟಿಂಗ್ ಆ್ಯಪ್‌ಗಳ ಕರಾಳ ವಾಸ್ತವವನ್ನು ಹೇಳುತ್ತವೆ. ಗೆಲ್ಲುವ ಕನಸು ಅಥವಾ ಲಾಭದ ಆಸೆ ಅನೇಕರ ಪಾಲಿಗೆ ದುಃಸ್ವಪ್ನವಾಗುತ್ತದೆ ಎಂಬುದಕ್ಕೆ ಹಿಮಾಂಶು ಕಥೆಯೇ ಸಾಕ್ಷಿ.

ಅಷ್ಟಕ್ಕೂ ಹಿಮಾಂಶು ಈ ಚಟ ಅಂಟಿಸಿಕೊಂಡದ್ದು ಹೇಗೆ?

ಟಿವಿಯಲ್ಲಿ ಜಾಹೀರಾತನ್ನು ನೋಡಿದ ನಂತರ ಆ ಗೀಳಿಗೆ ಬಿದ್ದಿರುವುದಾಗಿ ಹಿಮಾಂಶು ಹೇಳಿಕೊಂಡಿದ್ದಾನೆ. ಯುಪಿಯಲ್ಲಿ ಒಬ್ಬ ಪೊಲೀಸ್ ಆತನನ್ನು ಆಟವಾಡಲು ಕರೆದು ಹಣವನ್ನು ಕಳೆದುಕೊಂಡಾಗ, ಏಳು ದಿನಗಳ ತನಕ ಠಾಣೆಯಲ್ಲಿ ಇರಿಸಿಕೊಂಡು ಚಿತ್ರಹಿಂಸೆ ನೀಡಿದ್ದರ ಬಗ್ಗೆಯೂ ಹಿಮಾಂಶು ಹೇಳಿದ್ದಾನೆ.

ಈ ವೀಡಿಯೊ ಹಂಚಿಕೊಂಡಿರುವ ಖ್ಯಾತ ಯೂಟ್ಯೂಬರ್ ಧ್ರುವ್ ರಾಠಿ, ಸೆಲೆಬ್ರೆಟಿಗಳು, ಪ್ರಭಾವಿಗಳು ಜೂಜಿನಲ್ಲಿ ಸಿಲುಕಿಸಿ ಯುವಕರ ಜೀವನವನ್ನು ಹೇಗೆ ಹಾಳುಗೆಡವುತ್ತಿದ್ದಾರೆ ಎಂಬುದಕ್ಕೆ ಇದು ಉದಾಹರಣೆ ಎಂದಿದ್ದಾರೆ.

ಆನ್‌ಲೈನ್ ಗೇಮಿಂಗ್‌ಗಳನ್ನು ಪ್ರಮೋಟ್ ಮಾಡುವ ಸೆಲೆಬ್ರಿಟಿಗಳು ಭಾರತದ ಯುವಕರ ಜೀವನವನ್ನೇ ಹಾಳು ಮಾಡುತ್ತಿದ್ದಾರೆ. ಈ ಗೇಮ್ ಆಡಿ ಎಂದು ಒತ್ತಡ ಹೇರುತ್ತಿಲ್ಲ ಎಂದೇನೋ ಅವರು ಹೇಳುತ್ತಾರಾದರೂ, ಯುವಕರ ಮೇಲೆ ಪ್ರಭಾವ ಬೀರುವವರು ಅವರೇ ಆಗಿರುತ್ತಾರೆ ಎಂದು ರಾಠಿ ಹೇಳುತ್ತಾರೆ.

ಸ್ಪೇನ್, ಇಟಲಿ, ನೆದರ್‌ಲ್ಯಾಂಡ್, ಆಸ್ಟ್ರೇಲಿಯ ಸೇರಿದಂತೆ ವಿಶ್ವದ ಬಹುತೇಕ ಅಭಿವೃದ್ಧಿಯಾದ ದೇಶಗಳಲ್ಲಿ ಸೆಲೆಬ್ರಿಟಿಗಳ ಮೂಲಕ ಈ ಜೂಜಿನ ಆ್ಯಪ್‌ಗಳ ಪ್ರಚಾರ ಮಾಡುವುದು ನಿಷೇಧವಾಗಿದೆ. ಟಿವಿಯಲ್ಲಿಯೂ ಈ ಜಾಹೀರಾತು ತೋರಿಸುವುದು ಬ್ಯಾನ್ ಆಗಿದೆ. ಆದರೆ ನಮ್ಮ ದೇಶದಲ್ಲಿ ಯಾವುದೇ ನಿಷೇಧವಿಲ್ಲ. ಸೆಲೆಬ್ರಿಟಿಗಳು ಈ ಆ್ಯಪ್‌ಗಳ ಪ್ರಚಾರ ಮಾಡುತ್ತಾರೆ. ನಿಮ್ಮಲ್ಲಿ ಇಂತಹ ಆ್ಯಪ್‌ಗಳಿದ್ದರೆ ಇಂದೇ ಡಿಲೀಟ್ ಮಾಡಿ. ನೀವು ಯಾವ ಜಾಲದಲ್ಲಿ ಸಿಲುಕುತ್ತಿದ್ದೀರಿ ಎಂಬುದು ನಿಮಗೇ ತಿಳಿದಿಲ್ಲ ಎಂದು ರಾಠಿ ಎಚ್ಚರಿಕೆ ನೀಡಿದ್ದಾರೆ.

ಫ್ಯಾಂಟಸಿ ಗೇಮ್ಸ್ ಹೆಸರಲ್ಲಿ ಯುವಜನರನ್ನು ಆನ್ ಲೈನ್ ಜೂಜಿನ ಚಟಕ್ಕೆ ಹಾಕಿ ಅದೆಷ್ಟೋ ಜನರನ್ನು ದಿವಾಳಿ ಎಬ್ಬಿಸಿರುವ ಡ್ರೀಮ್ ಇಲೆವೆನ್ ಈಗ ಭಾರತೀಯ ಕ್ರಿಕೆಟ್ ತಂಡದ ಅಧಿಕೃತ ಪ್ರಾಯೋಜಕ.

ಯುವಜನರು ಆರಾಧಿಸುವ ಕ್ರಿಕೆಟ್ ಸ್ಟಾರ್‌ಗಳು ಎದೆ ಮೇಲೆ ಡ್ರೀಮ್ ಇಲೆವೆನ್ ಎಂದು ಹಾಕಿಕೊಂಡು ಆಟವಾಡಿದರೆ ಅದೆಷ್ಟು ಯುವಜನ ಅದನ್ನು ನೋಡಿ ಆನ್ ಲೈನ್ ಜೂಜಿನ ಚಟಕ್ಕೆ ಬೀಳುವುದಿಲ್ಲ?

ವಿಶ್ವದಲ್ಲೇ ಅತ್ಯಂತ ಶ್ರೀಮಂತ ಕ್ರೀಡಾ ಸಂಸ್ಥೆಯಾದ ಬಿಸಿಸಿಐಗೆ ಪ್ರಾಯೋಜಕತ್ವ ಪಡೆಯಲು ಇಂತಹ ಆನ್ ಲೈನ್ ಗೇಮ್ಸ್‌ಗಳ ಚಟ ಹಿಡಿಸುವ ಕಂಪೆನಿಗಳು ಯಾಕೆ ಬೇಕು?

ಟಿವಿಯಲ್ಲಿನ ಜಾಹೀರಾತುಗಳನ್ನು ನೋಡಿದ ನಂತರ ಅನೇಕ ವಿದ್ಯಾವಂತರು ಸಹ ಈ ಅಪಾಯಕಾರಿ ಜಾಲದಲ್ಲಿ ಸಿಕ್ಕಿಹಾಕಿಕೊಳ್ಳುತ್ತಿದ್ದಾರೆ. ತಪ್ಪು ಮಾಡಿದೆವು ಎಂಬುದು ಮನವರಿಕೆಯಾದಾಗ ಅವರು ಅದರಿಂದ ಹೊರಬರಲು ಪ್ರಯತ್ನಿಸುತ್ತಾರೆ. ಆದರೆ ಹೊರಬರಲು ಸಾಧ್ಯವಾಗದೆ ತಾವು ಗಳಿಸಿದ್ದನ್ನೆಲ್ಲ ಕಳೆದುಕೊಳ್ಳುತ್ತಾರೆ. ಕುಟುಂಬ, ಸಮಾಜದ ಜೊತೆಗಿನ ಅವರ ಸಂಬಂಧಗಳು ಮುರಿದುಹೋಗುತ್ತಿವೆ. ಎಲ್ಲರೂ ಅವರಿಂದ ದೂರವಾಗುತ್ತಿದ್ದಾರೆ. 20-25ರ ಹರೆಯದಲ್ಲಿಯೇ ಬದುಕು ಹಳಿ ತಪ್ಪಿ ಹಾಳಾಗುತ್ತಿದೆ.

ಸೆಲೆಬ್ರಿಟಿಗಳು ಹೇಳಿದ್ದನ್ನು ಕೇಳಿ ಹಾಳಾಗಿರುವುದು ಒಬ್ಬ ಹಿಮಾಂಶುವೇನೂ ಅಲ್ಲ. ಅಂಥ ಅನೇಕ ಹಿಮಾಂಶುಗಳು ಬೀದಿಗಳಲ್ಲಿ ಅಲೆದಾಡುತ್ತಿದ್ದಾರೆ. ಸಾಲಗಾರರಿಂದ ತಪ್ಪಿಸಿಕೊಂಡು ಓಡುತ್ತಿದ್ದಾರೆ. ಕಡೆಗೆ ಬದುಕನ್ನೇ ಮುಗಿಸಿಕೊಳ್ಳುತ್ತಿದ್ದಾರೆ. ಆದರೆ ಸರಕಾರ ಅಥವಾ ಯಾರೂ ಅವರ ಬಗ್ಗೆ ಕಾಳಜಿ ವಹಿಸುತ್ತಿಲ್ಲ.

ಸರಕಾರ ಆನ್‌ಲೈನ್ ಜೂಜಾಟವನ್ನು ನಿಲ್ಲಿಸಲು ಯಾವುದೇ ಕ್ರಮಗಳನ್ನು ತೆಗೆದುಕೊಳ್ಳುತ್ತಿಲ್ಲ. ಜನರಲ್ಲಿ ಅರಿವು ಮೂಡಿಸಲೂ ಯಾವುದೇ ಪ್ರಯತ್ನಗಳನ್ನು ಮಾಡುತ್ತಿಲ್ಲ.

2023ರ ಆರಂಭದಲ್ಲಿ, ಕೇಂದ್ರ ಗ್ರಾಹಕ ಸಂರಕ್ಷಣಾ ಪ್ರಾಧಿಕಾರವು ಬೆಟ್ಟಿಂಗ್ ಮತ್ತು ಜೂಜಾಟ ಸೇರಿದಂತೆ ಗೇಮಿಂಗ್‌ನಂತಹ ಕಾನೂನುಬಾಹಿರ ಚಟುವಟಿಕೆಗಳ ಜಾಹೀರಾತು, ಪ್ರಚಾರ ನಿಷೇಧಿಸುವ ಕಟ್ಟುನಿಟ್ಟಿನ ಸಲಹೆಯನ್ನು ನೀಡಿತು.

ಅದರ ಹೊರತಾಗಿಯೂ, ಗೇಮಿಂಗ್ ನೆಪದಲ್ಲಿ, ಆನ್‌ಲೈನ್ ಬೆಟ್ಟಿಂಗ್ ಪ್ಲಾಟ್‌ಫಾರ್ಮ್‌ಗಳು ಮತ್ತು ಆ್ಯಪ್‌ಗಳು ನೇರವಾಗಿ ಬೆಟ್ಟಿಂಗ್ ಮತ್ತು ಜೂಜಾಟದ ಜಾಹೀರಾತುಗಳ ಬಲೆ ಹೆಣೆದಿವೆ. ಸರಕಾರ ಎಲ್ಲವನ್ನೂ ನೋಡಿಕೊಂಡು ಸುಮ್ಮನೆ ಕುಳಿತಿದೆ.

ಇವತ್ತು ದೇಶದಲ್ಲಿ ಆನ್‌ಲೈನ್ ಬೆಟ್ಟಿಂಗ್ ಮಾರುಕಟ್ಟೆ 21 ಸಾವಿರ ಕೋಟಿ ರೂ.ಗೂ ಹೆಚ್ಚು ಮೌಲ್ಯದ್ದಾಗಿದೆ.

ಭಾರತದಲ್ಲಿ ಆನ್‌ಲೈನ್ ಗೇಮಿಂಗ್ ಮಾರುಕಟ್ಟೆ 2022 ರಲ್ಲಿ 2.6 ಶತಕೋಟಿ ಡಾಲರ್ ಅಂದರೆ 21 ಸಾವಿರ ಕೋಟಿ ರೂ. ಮೌಲ್ಯ ಹೊಂದಿತ್ತು. ಇದರಿಂದ ಸರಕಾರಕ್ಕೆ ಸಿಗುವ ಲಾಭವೂ ದೊಡ್ಡದು.

2029ರ ವೇಳೆಗೆ ಭಾರತದಲ್ಲಿ ಆನ್‌ಲೈನ್ ಕ್ರೀಡಾ ಬೆಟ್ಟಿಂಗ್ ಮಾರುಕಟ್ಟೆಯಲ್ಲಿ ಬಳಕೆದಾರರ ಸಂಖ್ಯೆ 1.89 ಕೋಟಿ ತಲುಪುವ ನಿರೀಕ್ಷೆಯಿದೆ ಎಂದು ಹಲವು ವರದಿಗಳು ತಿಳಿಸಿವೆ.

ಆನ್‌ಲೈನ್ ಗೇಮಿಂಗ್, ಕ್ಯಾಸಿನೊ ಮತ್ತು ಕುದುರೆ ರೇಸಿಂಗ್‌ಗಳ ಮೇಲೆ ಸರಕಾರ ಶೇ.28 ಜಿಎಸ್‌ಟಿ ವಿಧಿಸುತ್ತದೆ.

ಬೆಟ್ಟಿಂಗ್ ದಂಧೆ ತಡೆಯಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಲಾಗಿದ್ದರೂ ಸತ್ಯ ಬೇರೆಯೇ ಇದೆ ಎಂಬುದನ್ನು ಅರ್ಥ ಮಾಡಿಕೊಳ್ಳುವುದು ಕಷ್ಟವೇನಲ್ಲ. ಸರಕಾರಕ್ಕೆ ನಿಜವಾಗಿಯೂ ಜನರ ಬಗ್ಗೆ ಕಾಳಜಿ ಇದ್ದಿದ್ದರೆ, ಸಾರ್ವಜನಿಕ ಜೂಜು ಕಾಯ್ದೆ, 1867ರ ಅಡಿಯಲ್ಲಿ ಅನೇಕ ಕಂಪೆನಿಗಳು, ಕ್ರಿಕೆಟಿಗರು, ಬಾಲಿವುಡ್ ತಾರೆಗಳು ಮತ್ತು ಪ್ರಭಾವಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಬೇಕಿತ್ತು. ಜನರಲ್ಲಿ ಅರಿವು ಮೂಡಿಸಲು ಮತ್ತು ಈ ಅಪಾಯಕಾರಿ ಕೂಪದಲ್ಲಿ ಬೀಳದಿರಲು ಎಚ್ಚರಿಸಬಹುದಿತ್ತು.

ರಾಜಕೀಯ ನಾಯಕರು ಕೂಡ ಜನರಿಗೆ ಮನವಿ ಮಾಡುತ್ತಿದ್ದರು. ಆದರೆ ಆನ್‌ಲೈನ್ ಗೇಮಿಂಗ್ ಬೆಟ್ಟಿಂಗ್‌ನಿಂದ ಜನರನ್ನು ತಡೆಯಲು ಸರಕಾರ ಏನನ್ನೂ ಮಾಡುತ್ತಿಲ್ಲ. ಸರಕಾರಕ್ಕೆ ಅದನ್ನು ತಡೆಯುವುದೂ ಬೇಕಿಲ್ಲ ಮತ್ತು ಅದರ ಬಗ್ಗೆ ಅದಕ್ಕೆ ಯೋಚನೆಯೇ ಇಲ್ಲ.

ಆದರೆ, ಈ ನಿಟ್ಟನಲ್ಲಿ ತಮಿಳುನಾಡು ಸರಕಾರದ ನಡೆ ಮಹತ್ವದ್ದಾಗಿದೆ. ತಮಿಳುನಾಡು ಆನ್‌ಲೈನ್ ಗೇಮಿಂಗ್‌ಗಾಗಿ ಹೊಸ ನಿಯಮಾವಳಿಗಳನ್ನು ಪರಿಚಯಿಸಲು ಸಿದ್ಧವಾಗಿದೆ.

ಕಳೆದ ವರ್ಷ ಸ್ಥಾಪಿಸಲಾದ ತಮಿಳುನಾಡು ಆನ್‌ಲೈನ್ ಗೇಮಿಂಗ್ ಅಥಾರಿಟಿ, ಮಧ್ಯರಾತ್ರಿಯಿಂದ ಮುಂಜಾನೆ 5ರವರೆಗೆ ಆನ್‌ಲೈನ್ ಗೇಮಿಂಗ್ ಅನ್ನು ನಿಷೇಧಿಸಲು ಶಿಫಾರಸು ಮಾಡಿದೆ. ದೈನಂದಿನ ಆಟದ ಮಿತಿ ನಾಲ್ಕು ಗಂಟೆ ಮಾತ್ರ ಇರುತ್ತದೆ ಮತ್ತು ಪ್ರತೀ ಆಟ ಎರಡು ತಾಸುಗಳನ್ನು ಮೀರದಂತೆ ನಿರ್ಬಂಧಿಸಲಾಗುತ್ತದೆ.

ಪ್ರಸ್ತಾವಿತ ನಿಯಮಗಳ ಪ್ರಕಾರ, ಆಟಗಾರರು ಗೇಮಿಂಗ್ ಪ್ಲಾಟ್‌ಫಾರ್ಮ್‌ಗಳಲ್ಲಿ ದಿನಕ್ಕೆ 5,000 ಮತ್ತು ತಿಂಗಳಿಗೆ 20,000ಕ್ಕಿಂತ ಹೆಚ್ಚು ಖರ್ಚು ಮಾಡದಂತೆ ನಿರ್ಬಂಧಿಸುವ ಸಾಧ್ಯತೆಗಳಿವೆ. ಈ ಪ್ಲಾಟ್‌ಫಾರ್ಮ್‌ಗಳಲ್ಲಿ ನೋಂದಣಿಗಳಿಗೆ ಆಧಾರ್ ಪರಿಶೀಲನೆ ಕಡ್ಡಾಯಗೊಳಿಸುವ ಸಾಧ್ಯತೆಯೂ ಇದೆ. ತಮಿಳುನಾಡು ಸರಕಾರದ ಈ ಕ್ರಮಗಳು ಜಾರಿಯಾಗಲು ಆನ್‌ಲೈನ್ ಗೇಮಿಂಗ್ ಲಾಬಿಗಳು ಬಿಡುತ್ತವೆಯೇ ಎಂಬುದು ಪ್ರಶ್ನೆ.

ಆಲ್ಕೊಹಾಲ್ ಅಪಾಯಕಾರಿ ಎನ್ನುತ್ತಾರೆ. ಆದರೆ ಆನ್‌ಲೈನ್ ಗೇಮಿಂಗ್ ಆಲ್ಕೊಹಾಲ್‌ಗಿಂತಲೂ ಅಪಾಯಕಾರಿ ವ್ಯಸನ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ಚಂದ್ರಕಾಂತ್ ಎನ್.

contributor

Similar News