22 ನೇ ವರ್ಷದ ಸಂಭ್ರಮದಲ್ಲಿರುವ ವಾರ್ತಾಭಾರತಿಯ ಬಗ್ಗೆ ಗಣ್ಯರ, ಓದುಗರ ಅಭಿಪ್ರಾಯಗಳು
ಕನ್ನಡ ಮಾಧ್ಯಮ ರಂಗದಲ್ಲಿ ಹೊಸ ಇತಿಹಾಸ
2003ರಲ್ಲಿ ತೀರಾ ಸೀಮಿತ ಸೌಲಭ್ಯಗಳೊಂದಿಗೆ ಆರಂಭಗೊಂಡ ‘ವಾರ್ತಾಭಾರತಿ’ ಅತ್ಯಲ್ಪ ಅವಧಿಯಲ್ಲೇ ಕರ್ನಾಟಕದ ಅತ್ಯುತ್ತಮ ದಿನಪತ್ರಿಕೆಗಳಲ್ಲಿ ಒಂದಾಗಿ ಗುರುತಿಸಿಕೊಂಡಿದೆ ಎಂಬುದು ಬಹಳ ಸಂತೋಷದ ವಿಚಾರ. ಮಂಗಳೂರು ಮತ್ತಿತರ ಕಡೆ ಬಂದಾಗ ಪತ್ರಿಕೆಯನ್ನು ನೋಡಿದ್ದೇನೆ ಮತ್ತು ಕರ್ನಾಟಕದ ಆಪ್ತರ ಮೂಲಕ ‘ವಾರ್ತಾಭಾರತಿ’ಯ ಸುದ್ದಿಗಳ ಬಗ್ಗೆಯೂ ತಿಳಿಯುತ್ತೇನೆ. ವೈವಿಧ್ಯಮಯ ವರದಿಗಳಿಂದಾಗಿ ಕನ್ನಡ ಭಾಷೆಯಲ್ಲಿ ಹೊಸದೊಂದು ಮಾಧ್ಯಮ ಸಂಸ್ಕೃತಿಯನ್ನು ರೂಪಿಸಲು ವಾರ್ತಾಭಾರತಿಗೆ ಸಾಧ್ಯವಾಯಿತು ಎಂದು ತಿಳಿದುಕೊಂಡಿದ್ದೇನೆ. ಇದು ಎಲ್ಲರೂ ಹೆಮ್ಮೆ ಪಡುವಂತಹ ಸಾಧನೆಯಾಗಿದೆ. ಇಂತಹ ಪತ್ರಿಕೆಗಳ ಅಸ್ತಿತ್ವ ಹಾಗೂ ಬೆಳವಣಿಗೆ ಪ್ರಜಾಪ್ರಭುತ್ವ ಮತ್ತು ಸಾಮಾಜಿಕ ಸೌಹಾರ್ದದಲ್ಲಿ ನಂಬಿಕೆಯಿರಿಸಿದ ಎಲ್ಲರ ಅವಶ್ಯಕತೆಯಾಗಿದೆ.ಮುಂದಿನ ದಿನಗಳಲ್ಲಿ ಇನ್ನಷ್ಟು ಉತ್ತಮವಾಗಿ ಆಜವಾಬ್ದಾರಿ ನಿರ್ವಹಿಸಲು ‘ವಾರ್ತಾಭಾರತಿ’ಗೆ ಸಾಧ್ಯವಾಗಲಿ.
<ಕಾಂತಪುರಂ ಎ.ಪಿ.ಅಬೂಬಕ್ಕರ್ ಮುಸ್ಲಿಯಾರ್, ಭಾರತದ ಗ್ರ್ಯಾಂಡ್ ಮುಫ್ತಿ
ಜಾತ್ಯತೀತ ಮನಸ್ಸುಗಳನ್ನು ಬೆಸೆದಿದೆ
‘ವಾರ್ತಾಭಾರತಿ’ ಪತ್ರಿಕೆಯು ಕನ್ನಡಿಗರ ಅದರಲ್ಲೂ ಜಾತ್ಯತೀತ ಮನಸ್ಸುಗಳನ್ನು ಬೆಸೆಯುವ ಮಾಧ್ಯಮವಾಗಿ ಮೂಡಿ ಬರುತ್ತಿರುವುದನ್ನು ಕಳೆದ ಹಲವು ವರ್ಷಗಳಿಂದ ಗಮನಿಸುತ್ತಿದ್ದೇನೆ. ದಕ್ಷಿಣ ಕನ್ನಡ ಜಿಲ್ಲಾ ಖಾಝಿಯಾಗಿ ಹೊಣೆಗಾರಿಕೆ ವಹಿಸಿಕೊಂಡ ದಿನದಿಂದ ಇಲ್ಲಿನ ಮುಸ್ಲಿಮರು, ಜಾತ್ಯತೀತ ಮನಸ್ಸಿನ ಜನರು ‘ವಾರ್ತಾಭಾರತಿ’ ಪತ್ರಿಕೆಯೊಂದಿಗೆ ಬೆಳೆಸಿಕೊಂಡ ನಂಟನ್ನು ನಾನು ತೀರಾ ಹತ್ತಿರದಿಂದ ಕಂಡಿದ್ದೇನೆ. ಸುದ್ದಿಯನ್ನು ಯಥಾವತ್ತಾಗಿ ನೀಡುವುದರಲ್ಲಿ ‘ವಾರ್ತಾಭಾರತಿ’ ಮುಂಚೂಣಿಯಲ್ಲಿದೆ. ತಪ್ಪು ಯಾರೇ ಮಾಡಲಿ ಅದನ್ನು ಮುಲಾಜಿಲ್ಲದೆ ‘ವಾರ್ತಾಭಾರತಿ’ ಎತ್ತಿ ತೋರಿಸುತ್ತದೆ. ಜನರ ಮಧ್ಯೆ ಸೌಹಾರ್ದದ ರಾಯಭಾರಿಯಾಗಿಯೂ ‘ವಾರ್ತಾಭಾರತಿ’ ಕಾರ್ಯನಿರ್ವಹಿಸುತ್ತಿದೆ. ತನ್ನ ದಿಟ್ಟ ಹೆಜ್ಜೆಯ ಮೂಲಕ ಜನಾನುರಾಗಿಯಾಗಿರುವ ವಾರ್ತಾಭಾರತಿ ಸತ್ಯಪಥದಲ್ಲಿ ಸಾಗಲಿ ಎಂದು ಹಾರೈಸುವೆ.
<ಅಲ್ಹಾಜ್ ತ್ವಾಖಾ ಅಹ್ಮದ್ ಮುಸ್ಲಿಯಾರ್, ಖಾಝಿ ದ.ಕ.ಜಿಲ್ಲೆ
ಜನರ ನಾಡಿಮಿಡಿತ ಅರಿತಿದೆ
ನಾನು ‘ವಾರ್ತಾಭಾರತಿ’ಯ ನಿತ್ಯ ಓದುಗ. ಪತ್ರಿಕೆಯ ಆರಂಭದ ದಿನದಿಂದ ಹಿಡಿದು ಈವರೆಗೆ ಒಂದು ದಿನವೂ ತಪ್ಪದೇ ಓದಿದ ಹೆಮ್ಮೆ ನನಗಿದೆ. ಅಧಿಕಾರದಲ್ಲಿದ್ದಾಗ ಎಷ್ಟೇ ಒತ್ತಡವಿದ್ದರೂ ಪತ್ರಿಕೆಯನ್ನು ಬಿಡುವು ಮಾಡಿಕೊಂಡು ಓದುತ್ತಿದ್ದೆ. ಒಂದಕ್ಷರ ಬಿಡದೆ ಓದಿದ ಬಳಿಕವೇ ಮನಸ್ಸಿಗೆ ನೆಮ್ಮದಿ. ‘ವಾರ್ತಾಭಾರತಿ’ ಕೇವಲ ದಿನಪತ್ರಿಕೆಯಲ್ಲ. ಜನರ ನಾಡಿಮಿಡಿತ ಅರಿತುಕೊಂಡ ಪ್ರಬಲ ಮಾಧ್ಯಮ. ಈಗಂತೂ ಆಧುನಿಕ ತಂತ್ರಜ್ಞಾನ ಬಳಸಿಕೊಂಡು ಕ್ಷಣ ಕ್ಷಣದ ಸುದ್ದಿ-ಮಾಹಿತಿಯನ್ನು ಹಂಚಿಕೊಳ್ಳುವ ಮೂಲಕ ಜನಸಾಮಾನ್ಯರ ಧ್ವನಿಯಾಗಿದೆ. ಬಂಡವಾಳಶಾಹಿಗಳ ಮರ್ಜಿಗೆ ಬಲಿಯಾಗದೆ ರೈತರ, ದಿನಗೂಲಿ ಕೆಲಸಗಾರರ, ಕಾರ್ಮಿಕರ, ಮಹಿಳೆಯರ, ವಿದ್ಯಾರ್ಥಿಗಳ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸುವ ಪತ್ರಿಕೆಯ ಕಾಳಜಿಯನ್ನು ಮೆಚ್ಚಲೇಬೇಕಾಗಿದೆ. ಎನ್‌ಆರ್‌ಸಿ ಸಂದರ್ಭ ಅಲ್ಪಸಂಖ್ಯಾತ ಮುಸ್ಲಿಮರ ಜೊತೆ ಪತ್ರಿಕೆ ನಿಂತಿರುವುದನ್ನು ಮರೆಯಲು ಸಾಧ್ಯವಿಲ್ಲ.
<ಹಾಜಿ ಕೆ.ಎಸ್.ಮುಹಮ್ಮದ್ ಮಸೂದ್, ಅಧ್ಯಕ್ಷರು, ಮುಸ್ಲಿಮ್ ಸೆಂಟ್ರಲ್ ಕಮಿಟಿ.ದ.ಕ.ಮತ್ತು ಉಡುಪಿ ಜಿಲ್ಲೆ
ಕಳಚಿದ ಕೊಂಡಿಗಳ ಬೆಸೆಯುತ್ತಿರುವ ನೇಕಾರ
ಪತ್ರಿಕೆಗಳು ಸಂವಹನದ ಜತೆಗೆ ಜನರಲ್ಲಿ ವೈಚಾರಿಕ ಅರಿವು ಮೂಡಿಸುವುದು ಮುಖ್ಯ. ಈ ನಿಟ್ಟಿನಲ್ಲಿ ಸಮಾಜದ ಅರಿವು ಹಾಗೂ ಸಾಮರಸ್ಯಕ್ಕೆ ಪೂರಕವಾಗಿ ಕಳೆದ ಎರಡು ದಶಕಗಳಿಂದ ಪತ್ರಿಕಾ ಧರ್ಮ ಪಾಲಿಸುತ್ತಿರುವ ‘ವಾರ್ತಾಭಾರತಿ’ ನಾನು ದಿನನಿತ್ಯ ಓದುವ ಪತ್ರಿಕೆ. ಸತ್ಯ ಬಹಳಷ್ಟು ಸಂದರ್ಭಗಳಲ್ಲಿ ಓದಲು ಅಹಿತವಾಗಿರುತ್ತದೆ. ಸುಳ್ಳಿನ ಮಾರುಕಟ್ಟೆಯಲ್ಲಿ ಸತ್ಯದ ಮಾರಾಟ ಸುಲಭದ ಕಾರ್ಯವಲ್ಲ. ನಾಡಿನ ಅಂತರಾತ್ಮವನ್ನು ಕಾಡಿದ ಹಲವು ಘಟನೆಗಳ ಸಂದರ್ಭಗಳಲ್ಲಿ ವಿಷಯದ ನೈಜತೆಯನ್ನು ಅನಾವರಣ ಮಾಡಿದ ಕೀರ್ತಿ ‘ವಾರ್ತಾಭಾರತಿ’ಗೆ ಸಲ್ಲಬೇಕು. ಶತಮಾನಗಳಿಂದ ಅಕ್ಷರ ಸಂಸ್ಕೃತಿಯ ಅಂಚಿಗೆ ತಳ್ಳಲ್ಪಟ್ಟಿದ್ದ ಸಮುದಾಯದ ನಡುವೆ, ಜನ್ಮ ತಾಳಿದ ‘ವಾರ್ತಾಭಾರತಿ’, ಇಂದು ನಾಡಿನೆಲ್ಲೆಡೆ ಅಕ್ಷರದ ಹಣತೆಯನ್ನು ಬೆಳಗುತ್ತಾ ‘ಜನದನಿಯ ಸಾರಥಿ’ಯಾಗಿ ಮುನ್ನಡೆಯುತ್ತಿದೆ. ಪತ್ರಿಕೆಯ ಸಂಪಾದಕೀಯ ಬರಹಗಳು, ಮನೋಜ್ಞವಾದ ಅಂಕಣಗಳು, ವೈಚಾರಿಕ ಲೇಖನಗಳು ಕನ್ನಡದ ಮನಸ್ಸುಗಳಲ್ಲಿ ಸದಭಿರುಚಿಯ ಜತೆಗೆ ಸಮಕಾಲೀನ ವಿಷಯಗಳ ಬಗ್ಗೆ ಸಾರ್ವಜನಿಕ ನಿಲುವು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿವೆ. ಮಡಿಲ ಮಾಧ್ಯಮಗಳ ಆರ್ಭಟದ ನಡುವೆಯೂ ತಪ್ಪು ಮಾಡಿದಾಗ ಆಡಳಿತದ ಕಿವಿ ಹಿಂಡುವ ನೈತಿಕತೆಯನ್ನು ಉಳಿಸಿಕೊಂಡಿರುವುದು ‘ವಾರ್ತಾಭಾರತಿ’ಯ ಹೆಗ್ಗಳಿಕೆ. ಪತ್ರಿಕೆಗಳು ಉದ್ಯಮವಾಗಿ ಪ್ರತಿಬಿಂಬಿತವಾಗಿರುವ ಇಂದಿನ ದಿನಗಳಲ್ಲಿ, ವ್ಯವಸ್ಥೆಯೊಂದಿಗೆ ರಾಜಿಯಾಗದೆ, ತನ್ನ ಆರಂಭಿಕ ನಿಲುವಿನಿಂದ ಹಿಂದೆ ಸರಿಯದೆ ಮೌಲ್ಯಾಧಾರಿತ ಪತ್ರಿಕೋದ್ಯಮವನ್ನೇ ನೆಚ್ಚಿಕೊಂಡಿರುವ ‘ವಾರ್ತಾಭಾರತಿ’ ಇನ್ನಷ್ಟು ಸದೃಢವಾಗಿ ಬೆಳೆಯಲಿ ಎಂದು ಆಶಿಸುತ್ತೇನೆ. ಹಿಂದುಳಿದ, ಅಲ್ಪಸಂಖ್ಯಾತ, ಶೋಷಿತರ ಧ್ವನಿಯಾಗಿರುವ ‘ವಾರ್ತಾಭಾರತಿ’, ಬುದ್ಧ, ಬಸವಣ್ಣ, ಅಂಬೇಡ್ಕರ್, ಕುವೆಂಪು, ನಾರಾಯಣ ಗುರುಗಳ ಸಮ ಸಮಾಜದ ಕಲ್ಪನೆಯನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಪ್ರತಿದಿನ ತನ್ನ ಅಳಿಲು ಸೇವೆ ಸಲ್ಲಿಸುತ್ತಿದೆ.
<ಸಿದ್ದರಾಮಯ್ಯ, ಮುಖ್ಯಮಂತ್ರಿ
ಜನದನಿಯ ಸಾರಥಿಯಾಗಿರುವ ‘ವಾರ್ತಾಭಾರತಿ’
ಕರುನಾಡಿನ ಕರಾವಳಿಯಲ್ಲಿ ತಯಾರಾಗುವ ಉಪ್ಪುರಾಜ್ಯದ ಎಲ್ಲರ ಊಟದ ತಟ್ಟೆಯಲ್ಲಿ ಸ್ಥಾನ ಪಡೆದಂತೆ ವಾರ್ತಾಭಾರತಿಯು ಕರ್ನಾಟಕದ ಎಲ್ಲ ವರ್ಗದ, ಸಮುದಾಯದ ನೋವು ನಲಿವುಗಳಿಗೆ ಸ್ಥಾನ ಕೊಟ್ಟಿದೆ. ‘ನನ್ನನ್ನು ಎಲ್ಲರೂ ಪ್ರೀತಿಸಲಿ ಎನ್ನುವುದು ಪತ್ರಕರ್ತನ ಧ್ಯೇಯ ಆಗಿರಬಾರದು. ಅವನ ಜೀವನದ ಒಂದೇ ಒಂದು ಗುರಿ ಸತ್ಯದ ಹುಡುಕಾಟ ಹಾಗೂ ಅದನ್ನು ಜಗತ್ತಿಗೆ ತಿಳಿಯಪಡಿಸುವುದು’ ಎಂಬುದು ಅಮೆರಿಕದ ಪತ್ರಕರ್ತ ಬೆಂಜಮಿನ್ ಅವರ ಮಾತು. ಅಂದರೆ ಮಾಧ್ಯಮಗಳು ಸತ್ಯದ ಪರವಾಗಿ, ಸುಳ್ಳಿನ ವಿರುದ್ಧದ ಹೋರಾಟದಲ್ಲಿ ಮುಂಚೂಣಿಯಲ್ಲಿ ಇರಲೇಬೇಕು ಹಾಗೂ ರಾಷ್ಟ್ರ ಮತ್ತು ರಾಜ್ಯ ನಿರ್ಮಾಣದ ಪಾಲುದಾರರಾಗಿರಬೇಕು ಎಂಬುದು ನನ್ನ ಅಭಿಪ್ರಾಯ. ನನ್ನ ಈ ಮಾತಿಗೆ ಪುಷ್ಟಿಕೊಡುವಂತೆ ‘ಸತ್ಯ ಎಲ್ಲೆಡೆಗೆ’ ಎಂಬುದು ‘ವಾರ್ತಾಭಾರತಿ’ ದಿನಪತ್ರಿಕೆಯ ಧ್ಯೇಯ ವಾಕ್ಯವಾಗಿದೆ. 21 ವರ್ಷಗಳ ಕಾಲ ನಿರ್ಭೀತವಾಗಿ ಕನ್ನಡಿಗರ ದನಿಯಾಗಿ ‘ವಾರ್ತಾಭಾರತಿ’ ಸತ್ಯ, ಶುದ್ಧವಾದ ಸುದ್ದಿಯನ್ನು ಸರಳ, ಆಕರ್ಷಕ ಮತ್ತು ಸ್ಪಷ್ಟ ಭಾಷೆಯಲ್ಲಿ ಜನಸಾಮಾನ್ಯರಿಗೆ ತಲುಪಿಸುತ್ತಿದೆ. ವಾರ್ತಾಭಾರತಿ ಪತ್ರಿಕೆಯಲ್ಲಿ ಬರುವ ಅನೇಕ ವರದಿಗಳು, ವಿಶ್ಲೇಷಣೆಗಳು, ಅಂಕಿ ಅಂಶಗಳು ಅನೇಕ ಬಾರಿ ನನಗೆ ಹಾಗೂ ನಮ್ಮ ಸರಕಾರಕ್ಕೆ ಜನಪರವಾಗಿ ಕೆಲಸ ಮಾಡಲು ಸಹಕಾರಿಯಾಗಿವೆ. ‘ಸತ್ಯವೊಂದೇ ಕೊನೆಯಲ್ಲಿ ಗೆಲ್ಲುವುದು‘ ಎನ್ನುವ ಮಾತಿದೆ. ಅದರಂತೆ ಜನಪರವಾದ ಮಾಧ್ಯಮಗಳಿಗೆ ಮಾತ್ರ ದೀರ್ಘ ಆಯುಷ್ಯ. ಈ ಕಾರಣಕ್ಕೆ ‘ವಾರ್ತಾಭಾರತಿ’ ವಿಭಿನ್ನವಾಗಿ ನಿಲ್ಲುತ್ತದೆ. ಸಾಮಾಜಿಕ ಜಾಲತಾಣದ ವರ್ತುಲದಲ್ಲಿ ಇಡೀ ಜಗತ್ತು ಸಿಲುಕಿಕೊಂಡಿದೆ. ಇಲ್ಲಿ ಬರುವ ಯಾವ ಸುದ್ದಿ ಸತ್ಯ, ಸುಳ್ಳು ಎಂದು ಅಂದಾಜಿಸುವ ಹೊತ್ತಿಗೆ ಸುಳ್ಳು ಊರನ್ನೆಲ್ಲಾ ಸುತ್ತಿಕೊಂಡು ಬಂದಿರುತ್ತದೆ. ಇಂತಹ ಸಂದರ್ಭದಲ್ಲಿ ದಿಟ್ಟ ಪತ್ರಿಕೆಗಳು ನಮ್ಮನ್ನು ಸದಾ ಎಚ್ಚರದ ಸ್ಥಿತಿಯಲ್ಲಿ ಇಡಬೇಕು. ಈ ಕೆಲಸವನ್ನು ‘ವಾರ್ತಾಭಾರತಿ’ ಮಾಡುತ್ತಿದೆ.ಯಾವುದೇ ಸಿದ್ಧಾಂತಗಳಿಗೆ ಜೋತು ಬೀಳದೆ ಆಳುವ ಸರಕಾರಗಳನ್ನು, ಜನರ ಜವಾಬ್ದಾರಿಗಳನ್ನು ಎಚ್ಚರಿಸುವ ಕೆಲಸ ಮಾಡುತ್ತಿರುವ ಪತ್ರಿಕೆ ಇನ್ನಷ್ಟು ಎತ್ತರಕ್ಕೆ ಬೆಳೆಯಲಿ ಎಂದು ಆಶಿಸುತ್ತೇನೆ.
<ಡಿ.ಕೆ.ಶಿವಕುಮಾರ್, ಉಪಮುಖ್ಯಮಂತ್ರಿ
ಓದುಗರ ಮನಸ್ಸು ಗೆದ್ದ ಪತ್ರಿಕೆ
‘ವಾರ್ತಾಭಾರತಿ’ಯು 21 ವರ್ಷ ಪೂರೈಸಿ 22ನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿರುವುದು ಹೆಮ್ಮೆಯ ವಿಚಾರ. 2 ದಶಕಗಳ ತನ್ನ ದೀರ್ಘ ಅವಧಿಯಲ್ಲಿ ಸರ್ವರಿಗೂ ವಸ್ತುನಿಷ್ಠ ವರದಿಗಳನ್ನು ನೀಡುವ ಮೂಲಕ ಸತ್ಯದ ವಿಚಾರಗಳನ್ನು ‘ವಾರ್ತಾಭಾರತಿ’ ಬೆಳಕಿಗೆ ತಂದಿದೆ. ವರದಿಯ ಜೊತೆಗೆ ಸಮಾಜದ ಮತ್ತು ಎಲ್ಲ ಧರ್ಮೀಯರನ್ನು ಬೆಸೆಯುವಲ್ಲಿಯೂ ಯಶಸ್ವಿಯಾಗಿದೆ. ತನ್ನ ಪ್ರಾಮಾಣಿಕತೆ ಮತ್ತು ಬದ್ಧತೆಯಿಂದ ವಾರ್ತಾಭಾರತಿಯು ಸರ್ವ ಓದುಗರ ಮನಸ್ಸನ್ನು ಗೆದ್ದಿದೆ ಎಂದು ಪತ್ರಿಕೆಯ ಒಬ್ಬ ನಿತ್ಯ ಓದುಗನಾಗಿ ನಾನು ಹೇಳಬಲ್ಲೆ. ಪ್ರಾಮಾಣಿಕತೆ ಮತ್ತು ಬದ್ಧತೆಯಿಂದ ಸರ್ವ ಓದುಗರ ಮನಸ್ಸನ್ನು ‘ವಾರ್ತಾಭಾರತಿ’ ಗೆದ್ದಿರುವುದು ದೊಡ್ಡ ಮಟ್ಟದ ಯಶಸ್ಸು ಮತ್ತು ಮೈಲುಗಲ್ಲು. ಯಾವುದೇ ಫಲಾಪೇಕ್ಷೆಯಿಲ್ಲದೇ ವಸ್ತುನಿಷ್ಠ ವರದಿಯ ಮೂಲಕ ಕೃಷಿಕರ, ಕಾರ್ಮಿಕರ, ಮಹಿಳೆಯರ, ವಿದ್ಯಾರ್ಥಿಗಳ ಸಮಸ್ಯೆಗಳಿಗೆ ಧ್ವನಿಯಾಗಿರುವ ‘ವಾರ್ತಾಭಾರತಿ’ ಜನಪರ ಹೋರಾಟಗಳಿಗೆ ಸದಾ ಬೆಂಬಲವಾಗಿ ನಿಂತಿರುವುದನ್ನು ತೀರಾ ಹತ್ತಿರದಿಂದ ಬಲ್ಲೆ. ರಾಜ್ಯದ ಜನರ ನಾಡಿ ಮಿಡಿತವನ್ನು ಅರಿತಿರುವ ‘ವಾರ್ತಾಭಾರತಿ’ ಮುಂದೆಯೂ ಸತ್ಯದ ಪಥದಲ್ಲಿ ಸಾಗಲಿ ಎಂದು ಈ ಸಂದರ್ಭ ಹಾರೈಸುವೆ.
<ಯು.ಟಿ.ಖಾದರ್ ಫರೀದ್, ಸ್ಪೀಕರ್-ಕರ್ನಾಟಕ ವಿಧಾನಸಭೆ
ಸತ್ಯ ಸುದ್ದಿಗಳ ವಾಹಕ
ವಾರ್ತಾ ಭಾರತಿ ಕನ್ನಡ ದೈನಿಕ ಯಶಸ್ವೀ 21 ವರ್ಷಗಳನ್ನು ಪೂರ್ಣಗೊಳಿಸಿ 22ನೇ ವರ್ಷಕ್ಕೆ ಕಾಲಿಡುತ್ತಿರುವುದು ಇಡೀ ಕರ್ನಾಟಕದ ಪಾಲಿಗೆ ಅತ್ಯಂತ ಸಂತೋಷದ ವಿಚಾರ. ಧ್ವನಿ ಇಲ್ಲದವರ ಧ್ವನಿಯಾಗಿ, ಸತ್ಯ ಎಲ್ಲೆಡೆಗೆ ತಲುಪಿಸುವ ಧ್ಯೇಯದೊಂದಿಗೆ, ಸೌಹಾರ್ದ ಬಂಧುತ್ವ ಹರಡುವ ಉದ್ದೇಶದೊಂದಿಗೆ ಅಸ್ತಿತ್ವಕ್ಕೆ ಬಂದ ‘ವಾರ್ತಾಭಾರತಿ’ ಅದೆಷ್ಟೋ ಸವಾಲುಗಳನ್ನು, ಅಡೆತಡೆಗಳನ್ನು ದಾಟಿ ಈಗ ಈ ಹಂತಕ್ಕೆ ಬಂದು ತಲುಪಿದೆ. ಈ ಹಾದಿಯಲ್ಲಿ ಅದು ಸದಾ ಈ ನಾಡಿನ ಎಲ್ಲ ದುರ್ಬಲ ವರ್ಗಗಳ ಪಾಲಿನ ನಿಜವಾದ ಧ್ವನಿಯಾಗಿ, ಸತ್ಯದ ವಾಹಕನಾಗಿ ಸೇವೆ ಸಲ್ಲಿಸುತ್ತಾ ಬಂದಿದೆ. ಮುದ್ರಣ, ಡಿಜಿಟಲ್ ಹಾಗೂ ದೃಶ್ಯ ಮಾಧ್ಯಮಗಳ ಮೂಲಕ ಪ್ರತಿದಿನ ಲಕ್ಷಾಂತರ ಜನರಿಗೆ ಸತ್ಯವನ್ನು ತಲುಪಿಸುತ್ತಿದೆ. ‘ವಾರ್ತಾ ಭಾರತಿ’ಯ ಓದುಗನಾಗಿ, ಹಿತೈಷಿಯಾಗಿ ಇದು ನನಗೆ ಅತ್ಯಂತ ಹೆಮ್ಮೆಯ ಕ್ಷಣವಾಗಿದೆ. ಇದು ಹೀಗೇ ಮುಂದುವರಿದು ಪ್ರತಿದಿನ ಕೋಟ್ಯಂತರ ಜನರಿಗೆ ತಲುಪುವಂತಾಗಲಿ. ‘ವಾರ್ತಾಭಾರತಿ’ಯ ಪ್ರಧಾನ ಸಂಪಾದಕರು ಹಾಗೂ ಇಡೀ ಬಳಗಕ್ಕೆ ಹಾರ್ದಿಕ ಅಭಿನಂದನೆಗಳು.
<ಝಕರಿಯಾ ಬಜ್ಪೆ, ಸಿಇಒ-ಅಲ್ ಮುಝೈನ್, ಸೌದಿ ಅರೇಬಿಯ
ದುರ್ಬಲ ವರ್ಗಗಳ ಧ್ವನಿ
‘ವಾರ್ತಾಭಾರತಿ’ ನಾನು ಪ್ರತಿದಿನ ತಪ್ಪದೇ ಓದುವ ನನ್ನ ಅತ್ಯಂತ ಅಚ್ಚುಮೆಚ್ಚಿನ ದಿನಪತ್ರಿಕೆ. ಸತ್ಯ ಎಲ್ಲೆಡೆಗೆ ಎಂಬ ಅದರ ಧ್ಯೇಯ ವಾಕ್ಯ ಹಾಗೂ ಜನದನಿಯ ಸಾರಥಿ ಎಂಬ ಅದರ ಘೋಷ ವಾಕ್ಯ ಎರಡಕ್ಕೂ ಅನ್ವರ್ಥವಾಗಿ ಪ್ರತಿದಿನ, ಪ್ರತಿ ಕ್ಷಣ ಜಾಗತಿಕ ಕನ್ನಡಿಗರನ್ನು ತಲುಪುತ್ತಿರುವ ಸಮರ್ಥ, ಸತ್ಯ ಮಾಧ್ಯಮ ವಾರ್ತಾ ಭಾರತಿ. ತನ್ನ ಧ್ಯೇಯ, ಉದ್ದೇಶ ಹಾಗೂ ಸಿದ್ಧಾಂತದೊಂದಿಗೆ ಎಂದೂ ರಾಜಿ ಮಾಡಿಕೊಳ್ಳದೆ ಎಲ್ಲ ಕಷ್ಟ-ನಷ್ಟಗಳನ್ನು ಸಹಿಸಿಕೊಂಡು ಇವತ್ತು ನಾಡಿನ ಪ್ರಮುಖ ಮಾಧ್ಯಮ ಸಂಸ್ಥೆಯಾಗಿ ‘ವಾರ್ತಾಭಾರತಿ’ ಬೆಳೆದು ನಿಂತಿದೆ. ಮುದ್ರಣ ಮಾಧ್ಯಮ ಮಾತ್ರವಲ್ಲದೆ ಡಿಜಿಟಲ್ ಹಾಗೂ ದೃಶ್ಯ ಮಾಧ್ಯಮಗಳಲ್ಲೂ ‘ವಾರ್ತಾಭಾರತಿ’ ಗಳಿಸಿರುವ ಅಪಾರ ಜನಮನ್ನಣೆ ಅದರ ನಿತ್ಯ ಓದುಗ ಹಾಗೂ ಹಿತೈಷಿಯಾಗಿ ನನಗೆ ಅತ್ಯಂತ ಖುಷಿಯ ವಿಚಾರ. ದುರ್ಬಲ ವರ್ಗಗಳ ಧ್ವನಿಯಾಗಿ ‘ವಾರ್ತಾಭಾರತಿ’ ಇನ್ನೂ ಹತ್ತಾರು ದಶಕಗಳ ಕಾಲ ಬೆಳೆಯಲಿ, ಇಡೀ ದೇಶಕ್ಕೆ ಅದರ ವ್ಯಾಪ್ತಿ ಹಬ್ಬಲಿ ಎಂದು ಹಾರೈಸುತ್ತೇನೆ. ವಾರ್ತಾಭಾರತಿಯ ಇಡೀ ಬಳಗಕ್ಕೆ ಹಾರ್ದಿಕ ಅಭಿನಂದನೆಗಳು.
<ಡಾ.ರೊನಾಲ್ಡ್ ಕೊಲಾಸೊ, ಅನಿವಾಸಿ ಭಾರತೀಯ ಉದ್ಯಮಿ, ಕೊಡುಗೈ ದಾನಿ
ಸಂವಿಧಾನದ ರಕ್ಷಕ
‘ವಾರ್ತಾಭಾರತಿ’ ಕನ್ನಡ ದೈನಿಕ ಯಶಸ್ವಿ 21 ವರ್ಷಗಳನ್ನು ಪೂರ್ಣಗೊಳಿಸಿ 22ನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿದೆ.ಇದು ನಮಗೆಲ್ಲರಿಗೂ ಅತೀವ ಸಂತಸದ ವಿಷಯ. ‘ವಾರ್ತಾಭಾರತಿ’ ನಿಜಾರ್ಥದಲ್ಲಿ ಜನದನಿಯ ಸಾರಥಿಯಾಗಿದೆ.
ಅದು ಸದಾ ಸತ್ಯವನ್ನು, ನ್ಯಾಯವನ್ನು, ಸೌಹಾರ್ದವನ್ನು, ಸಹೋದರತೆಯನ್ನು ಸಾರುವ ಮಾಧ್ಯಮವಾಗಿದೆ. ಸುಳ್ಳು ಹಾಗೂ ದ್ವೇಷವನ್ನು ಸದಾ ವಿರೋಧಿಸುವ ಮಾಧ್ಯಮ ‘ವಾರ್ತಾಭಾರತಿ’. ಡಿಜಿಟಲ್ ಮೀಡಿಯಾದಲ್ಲೂ ‘ವಾರ್ತಾಭಾರತಿ’ಢ ಗಳಿಸಿರುವ ಅಪಾರ ಜನಪ್ರಿಯತೆ ಅದ್ಭುತವಾಗಿದೆ. ದೇಶದ ಸಂವಿಧಾನದ ಆಶಯಗಳನ್ನು ಎತ್ತಿ ಹಿಡಿಯುವ ವಾರ್ತಾ ಭಾರತಿ ಇನ್ನಷ್ಟು ದಶಕಗಳನ್ನು ಅತ್ಯಂತ ಯಶಸ್ವಿಯಾಗಿ ಪೂರ್ಣಗೊಳಿಸಲಿ.
<ಕೆ.ಎಸ್.ಶೇಕ್ ಕರ್ನಿರೆ, ಉಪಾಧ್ಯಕ್ಷರು, ಎಕ್ಸ್‌ಪರ್ಟೈಸ್, ಸೌದಿ ಅರೇಬಿಯಾ
ಸತ್ಯ ಎತ್ತಿ ಹಿಡಿಯಲಿ
ಮಂಗಳೂರಿನಿಂದ ಆರಂಭಗೊಂಡು, ಸತ್ಯ ಮತ್ತು ಸಾಮಾಜಿಕ ನ್ಯಾಯದ ಪರ ನಿಂತು, ಬೆಂಗಳೂರು, ಶಿವಮೊಗ್ಗದಿಂದಲೂ ಪ್ರಕಟವಾಗುತ್ತಿರುವ ನಮ್ಮ ನೆಚ್ಚಿನ ಪತ್ರಿಕೆ 21 ವರ್ಷಗಳನ್ನು ಪೂರೈಸಿ, 22ನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿರುವುದು ಸಂತಸ ಮತ್ತು ಅಭಿಮಾನದ ಸಂಗತಿ. ಮುಂಬರುವ ವರ್ಷಗಳಲ್ಲಿ ಜನದನಿಯ ಸಾರಥಿಯ ಪಯಣ ಕರ್ನಾಟಕದಾದ್ಯಂತ ಸಾಗಿ, ಸತ್ಯವನ್ನು ಎತ್ತಿ ಹಿಡಿಯಲಿ ಎಂಬುದು ನಮ್ಮೆಲ್ಲರ ಹಾರೈಕೆ.
<ಮೈಕಲ್ ಡಿಸೋಜ, ಎನ್ನಾರೈ ಉದ್ಯಮಿ, ಪ್ರವರ್ತಕರು, ವಿಶನ್ ಕೊಂಕಣಿ
ಜನಸಾಮಾನ್ಯರ ಸಂಗಾತಿ
ದೇಶದ 90 ಶೇ. ಮಾಧ್ಯಮಗಳು ಬಂಡವಾಳಶಾಹಿಗಳ ಹಿಡಿತದಲ್ಲಿವೆ. ಈ ಕಾರಣಕ್ಕಾಗಿಯೇ ಅಂತಹ ಮಾಧ್ಯಮಗಳು ಉಳ್ಳವರ ಪರ ವಹಿಸುತ್ತಿವೆ. ಆದರೆ ‘ವಾರ್ತಾಭಾರತಿ’ಯು ಜನಸಾಮಾನ್ಯರ ಬೆಂಬಲದಿಂದ ಮೂಡಿ ಬಂದ ಪತ್ರಿಕೆ. ಆದುದರಿಂದ ಪತ್ರಿಕೆಯು ಜನಸಾಮಾನ್ಯರ ಸಂಗಾತಿಯಂತಿದೆ. ಧ್ವನಿ ಇಲ್ಲದವರ, ದಮನಿತರ ಪರ ಸುದ್ದಿಗಳು ಕೇವಲ ‘ವಾರ್ತಾಭಾರತಿ’ಯಲ್ಲಿ ಮಾತ್ರ ಕಾಣಲು ಸಾಧ್ಯ. ಕನ್ನಡದ ಇತರ ಪತ್ರಿಕೆಗಳಲ್ಲಿನ ಸುದ್ದಿಗಳು ಏಕರೂಪದಲ್ಲಿ ಇದ್ದರೆ ‘ವಾರ್ತಾಭಾರತಿ’ಯಲ್ಲಿನ ಸುದ್ದಿಗಳು ಭಿನ್ನವಾಗಿರುತ್ತದೆ. ತಳ ಸಮುದಾಯದ ಪ್ರತಿನಿಧಿಯಾಗಿರುವ ‘ವಾರ್ತಾಭಾರತಿ’ ಇನ್ನಷ್ಟು ಬೆಳೆಯಲಿ.
-<ಡಾ.ಪದ್ಮಶ್ರೀ ಟಿ. - ಉಪನ್ಯಾಸಕರು, ಡಾ.ಬಿ.ಆರ್.ಅಂಬೇಡ್ಕರ್ ಸಂಶೋಧನಾ ಹಾಗೂ ವಿಸ್ತರಣ ಕೇಂದ್ರ ಮಾನಸಗಂಗೋತ್ರಿ, ಮೈಸೂರು
ಜನರ-ಸರಕಾರದ ನಡುವಿನ ಸೇತುವೆ
ಎರಡು ದಶಕಗಳಿಂದ ನಿರ್ಭೀತ ಪತ್ರಿಕೋದ್ಯಮ ನಡೆಸುತ್ತಿರುವ ‘ವಾರ್ತಾಭಾರತಿ’ ಜನಸಾಮಾನ್ಯರು ಹಾಗೂ ಸರಕಾರದ ನಡುವಿನ ಸೇತುವೆಯಾಗಿ ಕಾರ್ಯನಿರ್ವಹಿಸುತ್ತಿದೆ. ಪತ್ರಿಕೆಯ ಸಂಪಾದಕೀಯವು ಸರಕಾರ ಹಾಗೂ ಅಧಿಕಾರಿಗಳನ್ನು ನಿರಂತರವಾಗಿ ಎಚ್ಚರಿಸುತ್ತಿದೆ. ಪತ್ರಿಕೆಯಲ್ಲಿನ ವಿಶೇಷ ವರದಿಗಳು ಅದೆಷ್ಟೋ ಅವಕಾಶ ವಂಚಿತರಿಗೆ ಆಶಾಕಿರಣವಾಗಿದೆ.
<ಮಾರುತಿ ಗಂಜಗಿರಿ, ರಾಜ್ಯ ಪ್ರಧಾನ ಕಾರ್ಯದರ್ಶಿ, ಬಾಂಸೇಫ ಮತ್ತು ಯೂನಿಟಿ ಆಫ್ ಮೂಲನಿವಾಸಿ ಬಹುಜನ ಸಂಘಟನೆ, ಹೊಸದಿಲ್ಲಿ ಕರ್ನಾಟಕ ರಾಜ್ಯ ಘಟಕ ಬೆಂಗಳೂರು.
ಅಭಿವ್ಯಕ್ತಿ ಸ್ವಾತಂತ್ರ್ಯದ ಮುಖವಾಣಿ
‘ವಾರ್ತಾಭಾರತಿ’ ಕಳೆದ 2 ದಶಕಗಳಿಂದ ಕರ್ನಾಟಕದಲ್ಲಿ ನಿರಂತರವಾಗಿ ಜನರ ಧ್ವನಿಯಾಗಿ ಪ್ರಜಾಪ್ರಭುತ್ವದ ಕಾವಲುಗಾರನಾಗಿ ಅಭಿವ್ಯಕ್ತಿ ಸ್ವಾತಂತ್ರ್ಯದ ಮುಖವಾಣಿಯಾಗಿದೆ. ಪ್ರಭುತ್ವವನ್ನು ಎಚ್ಚರಿಸುತ್ತಾ ದೇಶದಲ್ಲಿ ಶಾಂತಿ, ಸೌಹಾರ್ದವನ್ನು ಉಳಿಸುವ ನಿಟ್ಟಿನಲ್ಲಿ ಜನರ ಹೆಮ್ಮೆಯ ಪತ್ರಿಕೆಯಾಗಿ ಮುಂದೆ ಸಾಗುತ್ತಿದೆ.
ಜನರ ಸಮಸ್ಯೆಗಳನ್ನು ಅರಿತು ದಿಟ್ಟವರದಿ ಮುಖಾಂತರ ಸರಕಾರಗಳ ಗಮನಕ್ಕೆ ತಂದು ಪರಿಹಾರಗಳನ್ನು ದೊರಕಿಸಿ ಕೊಡುವ ನಿಟ್ಟಿನಲ್ಲಿ ಪತ್ರಿಕೆ ಕೆಲಸ ಮಾಡಿದೆ. ಜನಪ್ರತಿನಿಧಿಗಳ ಭ್ರಷ್ಟಾಚಾರ, ಬೇಜವಾಬ್ದಾರಿಗಳನ್ನು ಜನತೆಯ ಮುಂದಿಟ್ಟಿದೆ. ನಾಡಿನ ಪ್ರಜ್ಞಾವಂತ ಲೇಖಕರನ್ನು ಜನತೆಗೆ ಪರಿಚಯಿಸುವ ಮೂಲಕ ಸಮಾನತೆಯ ಅವಕಾಶಗಳನ್ನು ಒದಗಿಸಿದೆ.
<ಎಲ್.ಎಚ್.ಅರುಣ್‌ಕುಮಾರ್, ದಾವಣಗೆರೆ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ
ನಾಡಿನ ನಾಡಿಮಿಡಿತ
ದೇಶ-ವಿದೇಶಗಳ ಆಗುಹೋಗುಗಳ ಸುದ್ದಿ ಸಮಾಚಾರಗಳಲ್ಲದೆ ದೀನ ದಲಿತರ, ಸಮಾಜದ ಕಟ್ಟಕಡೆಯ ಸಮುದಾಯಗಳ ನೋವುಗಳಿಗೆ ಸಕಾಲದಲ್ಲಿ ಸ್ಪಂದಿಸುವ ‘ವಾರ್ತಾಭಾರತಿ’ ನನ್ನ ಮೆಚ್ಚಿನ ಪತ್ರಿಕೆಗಳಲ್ಲಿ ಒಂದು. ಕೊರಗರು ಸೇರಿದಂತೆ ಸಮಾಜದ ಕಟ್ಟಕಡೆಯ ಜನರ ನೋವು, ನಲಿವುಗಳನ್ನು ಸಮಾಜದ ಮುಂದಿಡುತ್ತಾ, ಸಮಸ್ಯೆಗಳನ್ನು ಆಳುವವರ ಗಮನಕ್ಕೆ ತರುವುದರ ಮೂಲಕ ನಾಡಿಮಿಡಿತವಾಗಿ ಜನಜನಿತವಾಗಿದೆ. ಪತ್ರಿಕೆಯು ಹೆಚ್ಚು ಪುಟಗಳೊಂದಿಗೆ ಇನ್ನಷ್ಟು ಸುದ್ದಿ, ವೈಚಾರಿಕ, ವೈಜ್ಞಾನಿಕ ವಿಚಾರಗಳನ್ನು ತೆರೆದಿಡುವ ಕೆಲಸ ಮಾಡಬೇಕು ಎನ್ನುವುದು ಪತ್ರಿಕೆಯ ಓದುಗನಾದ ನನ್ನ ಅಭಿಲಾಷೆ. ಪತ್ರಿಕೆಯು ಇನ್ನಷ್ಟು ಹೊಸತನದೊಂದಿಗೆ ಓದುಗರನ್ನು ತಲುಪಲಿ ಎಂಬ ಕಾಳಜಿಯೊಂದಿಗೆ ಪತ್ರಿಕೆ ಹಾಗೂ ಅದರ ಬಳಗಕ್ಕೆ ಕೊರಗ ಸಮುದಾಯದ ಪರವಾಗಿ ಹಾರ್ದಿಕ ಶುಭಾಶಯಗಳು.
<ಎಂ. ಸುಂದರ, ಅಧ್ಯಕ್ಷರು, ಕೊರಗರ ಸಂಘ, ದ.ಕ . ಜಿಲ್ಲೆ.
ದಿಟ್ಟ ವರದಿಗಳು ನಿರಂತರವಾಗಲಿ
ವಾರ್ತಾಭಾರತಿ ಪತ್ರಿಕೆ ಜನಪರ ಕಾಳಜಿ ಹೊಂದಿರುವ, ಭ್ರಷ್ಟಾಚಾರ ಮತ್ತು ಅನ್ಯಾಯದ ವಿರುದ್ಧ ಧ್ವನಿ ಎತ್ತುವ, ಅತ್ಯಂತ ಪ್ರಾಮಾಣಿಕ ಹಾಗೂ ನಿಷ್ಠೆಯಿಂದ ಕಾರ್ಯ ನಿರ್ವಹಿಸುವ, ಯಾವುದೇ/ಯಾರದೇ ಮುಲಾಜಿಗೂ ಒಳಗಾಗದೆ ಸತ್ಯವನ್ನೇ ವರದಿ ಮಾಡುವ ಪತ್ರಿಕೆ. ಇಂತಹ ಪತ್ರಿಕೆ ಇಂದು 22ನೇ ವರ್ಷಕ್ಕೆ ಕಾಲಿಡುತ್ತಿರುವುದು ಹೆಮ್ಮೆ ಹಾಗೂ ಸಂತೋಷದ ವಿಚಾರ. ಪತ್ರಿಕೆಯ ದಿಟ್ಟ ವರದಿಗಳು ನಿರಂತರವಾಗಲಿ.
<ಡಾ.ಎಂ.ಸಿ.ಮಹೇಶ್ ಕುಮಾರ್, ಗಣಿತಶಾಸ್ತ್ರ ಸಹ ಪ್ರಾಧ್ಯಾಪಕರು ಸರಕಾರಿ ಪ್ರಥಮ ದರ್ಜೆ ಕಾಲೇಜು, ಕೆ.ಆರ್.ಪುರ, ಬೆಂಗಳೂರು
ಸರಕಾರಗಳನ್ನು ಎಚ್ಚರಿಸುತ್ತಿದೆ
ಸಂವಿಧಾನದ ಆಶಯಗಳು ಈಡೇರಬೇಕಾದರೆ ಪ್ರಜಾಪ್ರಭುತ್ವದ ಮೌಲ್ಯಗಳು ಗಟ್ಟಿಗೊಳ್ಳಬೇಕು. ಅದಕ್ಕೆ ಪೂರಕವಾಗಿ ಮಾಧ್ಯಮಗಳು ಕೆಲಸ ನಿರ್ವಹಿಸಬೇಕಾಗುತ್ತದೆ. ಸದ್ಯ ಪ್ರಜಾಪ್ರಭುತ್ವದ ಉಳಿವಿಗೆ ಶ್ರಮಿಸಬೇಕಾದ ಅಗತ್ಯವಿದ್ದು, ಆ ನಿಟ್ಟಿನಲ್ಲಿ ವಾರ್ತಾಭಾರತಿ ಕನ್ನಡ ದಿನ ಪತ್ರಿಕೆ ಕೆಲಸ ಮಾಡುತ್ತಿದೆ.
ಜನರಿಂದ ಆಯ್ಕೆಯಾದ ಜನಪ್ರತಿನಿಧಿಗಳು, ಸರಕಾರಗಳು ಪ್ರಜಾಪ್ರಭುತ್ವದ ನೀತಿಗಳಿಗೆ ಅನುಸಾರವಾಗಿ ಜನರ ಒಳಿತಿಗಾಗಿ ಕಾರ್ಯನಿರ್ವಹಿಸಬೇಕು. ಸರಕಾರಗಳು ದಿಕ್ಕುತಪ್ಪಿದಾಗ ಸಂವಿಧಾನದ ನಾಲ್ಕನೇ ಅಂಗವಾದ ಪತ್ರಿಕಾ ರಂಗ ಸರಕಾರಗಳನ್ನು ಎಚ್ಚರಿಸುವ ಕೆಲಸಗಳನ್ನು ಮಾಡಬೇಕಾಗುತ್ತದೆ. ಆ ಕೆಲಸವನ್ನು ‘ವಾರ್ತಾಭಾರತಿ’ ನಿರ್ಭೀತಿಯಿಂದ ಮಾಡುತ್ತಿರುವುದು ಗಮನಾರ್ಹ. ಪತ್ರಿಕೆಗಳು ಕೇವಲ ಸರಕಾರಗಳು ನೀಡುವ ಹೇಳಿಕೆಗಳನ್ನು ಮಾತ್ರ ಪ್ರಚಾರಮಾಡದೆ, ಸರಕಾರಗಳು ಮಾಡಬೇಕಾದ ಕೆಲಸಗಳ ಬಗ್ಗೆಯೂ ಬೆಳಕು ಚೆಲ್ಲಬೇಕಾಗುತ್ತದೆ. ಪತ್ರಿಕೆಯು ಪ್ರಗತಿಪರ ಆಲೋಚನೆಗಳನ್ನು ಇಟ್ಟುಕೊಂಡಿದ್ದು, ಎಷ್ಟೇ ಸಂಕಷ್ಟಗಳು ಎದುರಾದರೂ ಪತ್ರಿಕಾ ಧರ್ಮಕ್ಕೆ ಧಕ್ಕೆಯಾಗದ ರೀತಿಯಲ್ಲಿ ಪ್ರಕಟಗೊಳ್ಳುತ್ತಿದೆ.
<ರಾಘವೇಂದ್ರ ಎಸ್., ತುಮಕೂರು
ಬಹುತ್ವದ ನಿಜದನಿ
ನನಗೆ ‘ವಾರ್ತಾಭಾರತಿ’ ಪರಿಚಯವಾದದ್ದು 2005ರಲ್ಲಿ. ಮೊದಲ ಓದಿನಲ್ಲೇ ಪತ್ರಿಕೆ ನನ್ನನ್ನು ಸೆಳೆಯಿತು. ಕೋಲಾರದಲ್ಲೇ ಕೆಲವೇ ಸ್ಟಾಲ್‌ಗಳಲ್ಲಿ ‘ವಾರ್ತಾಭಾರತಿ’ ಸಿಗುತ್ತಿತ್ತು. ಪತ್ರಿಕೆ ಸಿಗದ ದಿನ ರೈತ ಸಂಘದ ಆಫೀಸ್‌ಗೋ, ಸಾರ್ವಜನಿಕ ಗ್ರಂಥಾಲಯಕ್ಕೋ ಹೋಗಿ ಓದುತ್ತಿದ್ದೆ. ಕೆಲ ದಿನಗಳ ನಂತರ ‘ವಾರ್ತಾಭಾರತಿ’ ಕೋಲಾರದ ಎಲ್ಲ ಕಡೆಯೂ ಸಿಗತೊಡಗಿತು. ಅಂದಿನಿಂದ ಇಂದಿಗೂ ನನ್ನ ಪ್ರತಿನಿತ್ಯದ ಓದು-ಚಿಂತನ-ಸಂಶೋಧನೆ ಯಾನದಲ್ಲಿ ವಾರ್ತಾಭಾರತಿಯೂ ಜೊತೆಗಿದೆ. ಪೂರ್ವಾಗ್ರಹಪೀಡಿತ ಪತ್ರಿಕೆಗಳು ಯಾವುದನ್ನು ನಿರ್ಲಕ್ಷ್ಯ ಮಾಡಿದ್ದವೋ ಅಂತಹ ವರದಿಗಳತ್ತ ಗಮನ ನೀಡಿದ ‘ವಾರ್ತಾಭಾರತಿ’ಯು ನಿರ್ಲಕ್ಷಿತರ ಪರ ಧ್ವನಿಯಾಯಿತು. ‘ವಾರ್ತಾಭಾರತಿ’ಯ ಸಂಪಾದಕೀಯ, ಲೇಖನಗಳು, ಜನಾಭಿಪ್ರಾಯಗಳು ಮತ್ತು ಸುದ್ದಿಗಳು ನಿಖರತೆ ಹಾಗೂ ಸಮಚಿತ್ತತೆಯಿಂದ ಕೂಡಿದ ಕಾರಣ, ಪ್ರತೀ ದಿನವೂ ಪತ್ರಿಕೆಯನ್ನು ಓದಬೇಕಿನಿಸುತ್ತದೆ. ಇತರ ಪತ್ರಿಕೆಗಳಲ್ಲಿ ಚರ್ಚಿತಗೊಳ್ಳದ ಬಹುಮುಖ್ಯ ಸಮಕಾಲೀನ ಸಂಗತಿಗಳಿಗೆ ‘ವಾರ್ತಾಭಾರತಿ’ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಿದೆ. ಈ ಕಾರಣಕ್ಕಾಗಿ ‘ವಾರ್ತಾಭಾರತಿ’ಯ ಮೇಲೆ ವಿಶೇಷ ಗೌರವ ಮೂಡುತ್ತಿದೆ.
<ಡಾ.ಕುಪ್ಪನಹಳ್ಳಿ ಎಂ.ಭೈರಪ್ಪ, ಕನ್ನಡ ಸಹಾಯಕ ಪ್ರಾಧ್ಯಾಪಕರು, ಕೆ.ನಾರಾಯಣಪುರ, ಬೆಂಗಳೂರು.
ಪತ್ರಿಕಾ ರಂಗದ ಘನತೆಗೆ ಮೆರುಗು
ದಮನಿತ, ಶೋಷಿತ ವರ್ಗಗಳ ಧ್ವನಿಯಾಗಿ ಕರ್ತವ್ಯ ನಿರ್ವಹಿಸುವ ಮೂಲಕ ‘ವಾರ್ತಾಭಾರತಿ’ ಪತ್ರಿಕಾರಂಗದ ಘನತೆಯನ್ನು ಎತ್ತಿಹಿಡಿದಿದೆ. ಕಳೆದ ಹತ್ತು ವರ್ಷಗಳಿಂದ ನಾನು ‘ವಾರ್ತಾಭಾರತಿ’ ಪತ್ರಿಕೆಯನ್ನು ತಪ್ಪದೇ ಓದುತ್ತಿದ್ದೇನೆ. ಈ ಪತ್ರಿಕೆ ಓದುವ ಗೀಳು ಹಚ್ಚಿದ ಮೇಲೆ ಸಾಕಷ್ಟು ವಿಷಯಗಳು ಲಭ್ಯವಾಗಿವೆ. ಪ್ರತಿಯೊಂದು ಮಾಹಿತಿಗಳು, ಅಂಕಣ ಮತ್ತು ಸುದ್ದಿಗಳು ವಿಷಯಾಧಾರಿತವಾಗಿರುತ್ತದೆ. ‘ವಾರ್ತಾಭಾರತಿ’ ಇತರ ಪತ್ರಿಕೆಗಳಿಗಿಂತ ಭಿನ್ನವಾಗಿ ಮೂಡಿ ಬರುತ್ತಿದೆ. ಸಮಾಜದ ಕಟ್ಟಕಡೆಯ ಸಮುದಾಯಗಳ ಬಗ್ಗೆಯೂ ವಿಶೇಷ ಕಾಳಜಿಯನ್ನು ಹೊಂದಿ ದಲಿತ, ಆದಿವಾಸಿ, ಶೋಷಿತ ಸಮುದಾಯಗಳ ಗಟ್ಟಿ ಧ್ವನಿಯಾಗಿದೆ. ದಲಿತ, ದಮನಿತರ ಬದುಕಿನಲ್ಲಿ ಬೆಳಕು ಮೂಡಿಸುವ ನಿಟ್ಟಿನಲ್ಲಿ ‘ವಾರ್ತಾಭಾರತಿ’ ನಿರಂತರ ದುಡಿಯುತ್ತಿದೆ.
<ಕುಮಾರಿ ಎಚ್., ಪ್ರೌಢಶಾಲೆ ಸಹ ಶಿಕ್ಷಕಿ, ನಂಜನಗೂಡು, ಮೈಸೂರು ಜಿಲ್ಲೆ.
ಓದುಗರೇ ಬೆನ್ನೆಲುಬು
‘ವಾರ್ತಾಭಾರತಿ’ ಮಾಧ್ಯಮ ಕ್ಷೇತ್ರ ಭಿನ್ನ ಪ್ರಯೋಗ. ಯಾವುದೇ ರಾಜಕೀಯ ಪಕ್ಷದ ಅಡಿಯಾಳಾಗದೇ ನಿರ್ಭೀತಿಯಿಂದ ಪ್ರಸಾರಗೊಳ್ಳುತ್ತಿರುವ ‘ವಾರ್ತಾಭಾರತಿ’ಗೆ ಓದುಗರೇ ಬೆನ್ನೆಲುಬು. ಸ್ಥಳೀಯ ಸುದ್ದಿಯಿಂದ ಹಿಡಿದು ವಿದೇಶದ ಸುದ್ದಿಗಳೂ ‘ವಾರ್ತಾಭಾರತಿ’ಯಲ್ಲಿ ಲಭ್ಯ. ಜಾನಪದ ಕಲೆ, ಗುಡ್ಡಗಾಡು ಪ್ರದೇಶದ ಸಮಸ್ಯೆ ಬಗೆಹರಿಸುವಲ್ಲಿ ಹೆಚ್ಚಿನ ಕಾಳಜಿ ವಹಿಸುವ ಪತ್ರಿಕೆ ‘ವಾರ್ತಾಭಾರತಿ’ಯಾಗಿದೆ.
<ಸಿ.ಎಂ. ನರಸಿಂಹಮೂರ್ತಿ, ಅಂತರ್‌ರಾಷ್ಟ್ರೀಯ ಜಾನಪದ ಕಲಾವಿದ- ಚಾಮರಾಜನಗರ
ನೊಂದವರ ಧ್ವನಿ
ಸಮಾಜದಲ್ಲಿ ದೌರ್ಜನ್ಯಕ್ಕೊಳಗಾದ, ನೊಂದವರ, ಶೋಷಿತರ ಪರ ಧ್ವನಿಯಾಗಿ ‘ವಾರ್ತಾಭಾರತಿ’ ಕಾರ್ಯನಿರ್ವಹಿಸುತ್ತಿದೆ. ಉಳ್ಳವರ ಪರ ಹಲವು ಪತ್ರಿಕೆಗಳಿದ್ದರೂ ‘ವಾರ್ತಾಭಾರತಿ’ ಮಾತ್ರ ಶೋಷಿತರ ಪರ ನಿಂತಿದೆ. ಸಮಾಜದ ಕಟ್ಟಕಡೆಯ ವ್ಯಕ್ತಿಯ ಸಮಸ್ಯೆಗಳ ಬಗ್ಗೆಯೂ ಬೆಳಕು ಚೆಲ್ಲುವ ‘ವಾರ್ತಾಭಾರತಿ’ಯನ್ನು ತಳ ಸಮುದಾಯದ ಜನರೇ ಹೆಚ್ಚಾಗಿ ನೆಚ್ಚಿಕೊಂಡಿದ್ದಾರೆ.
<ಸಂತೋಷ ಜಾಬೀನ್, ಸಾಮಾಜಿಕ ಕಾರ್ಯಕರ್ತ, ಕಲಬುರಗಿ.
ಕನ್ನಡ ಪತ್ರಿಕೋದ್ಯಮದ ‘ವೈಚಾರಿಕ ಬೆಳಕು’
ಕನ್ನಡ ಪತ್ರಿಕೋದ್ಯಮ ಇತಿಹಾಸದ-ಸಮಕಾಲೀನ ಸಂದರ್ಭದಲ್ಲಿ ‘ವಾರ್ತಾಭಾರತಿ’ ದೈನಿಕವು ನಿಜದ ನೇರಕ್ಕೆ ನಡೆದು, ಪ್ರಜಾಸತ್ತಾತ್ಮಕ ಮೌಲ್ಯ, ಸಂಸ್ಕೃತಿಯ ರಕ್ಷಣೆಗೆ ರಾಜಿ ಇಲ್ಲದ ಹೋರಾಟ ನಡೆಸುತ್ತಿರುವುದು ಶ್ಲಾಘನೀಯ. ‘ವಾರ್ತಾಭಾರತಿ’ಯಲ್ಲಿ ಪ್ರತಿನಿತ್ಯ ಪ್ರಕಟವಾಗುತ್ತಿರುವ ವಸ್ತುನಿಷ್ಠ ವರದಿಗಳು, ವೈಚಾರಿಕ ಲೇಖನಗಳು, ವಿಶ್ಲೇಷಣೆಗಳು ಸಂಸದೀಯ ಪ್ರಜಾಸತ್ತೆಯ ತಳಪಾಯವಾದ ಸಾಮಾಜಿಕ ಪ್ರಜಾಪ್ರಭುತ್ವವನ್ನು ವಿಸ್ತಾರಗೊಳಿಸುವ, ಜೀವಂತವಾಗಿಡುವ ಮಹಾನ್ ಕರ್ತವ್ಯವನ್ನು ನಿರ್ವಹಿಸುತ್ತಿದೆ. ಇದರ ಪರಿಣಾಮವಾಗಿ ಜನಸಾಮಾನ್ಯರಲ್ಲಿ ವೈಚಾರಿಕ, ರಾಜಕೀಯ ಜಾಗೃತಿ, ಸಮೂಹ ಹಿತಾಸಕ್ತಿ, ಸಾಮಾಜಿಕ ಸಾಮರಸ್ಯದ ಭಾವಗಳು ನೆಲೆಯೂರಲು ಸಾಧ್ಯವಾಗುತ್ತಿದೆ. ಇಂತಹ ಹಲವಾರು ಸದುದ್ದೇಶಗಳನ್ನು ಸಕ್ರಿಯಗೊಳಿಸಿರುವ ‘ವಾರ್ತಾಭಾರತಿ’ಯ ಕೊಡುಗೆ ಎಲ್ಲ ಕಾಲಕ್ಕೂ ವಿಶಿಷ್ಟ ಎನಿಸಿಕೊಳ್ಳುತ್ತದೆ. ಕನ್ನಡ ಪತ್ರಿಕೋದ್ಯಮದ ವೈಚಾರಿಕ ಬೆಳಕು ‘ವಾರ್ತಾಭಾರತಿ’ಗೆ ಸಮಾಜದ ಪ್ರೋತ್ಸಾಹ ಸದಾ ಇರಲಿ.
<ಪ್ರೊ.ಹುಲ್ಕೆರೆ ಮಹಾದೇವ, , ಸಂಸ್ಕೃತಿ ಚಿಂತಕ, ಮಂಡ್ಯ
ಹಲವು ಹೋರಾಟಗಳಿಗೆ ಸಾಕ್ಷಿ
ನಾನು ಕಳೆದ 15 ವರ್ಷದಿಂದ ವಾರ್ತಾಭಾರತಿಯ ನಿತ್ಯ ಓದುಗಳು. ಈ ಪತ್ರಿಕೆಯನ್ನು ಓದುವುದು ಎಂದರೆ ಅದೇನೊ ಖುಷಿ. ಜನಸಾಮಾನ್ಯರ ನಾಡಿಮಿಡಿತವನ್ನು ಚೆನ್ನಾಗಿ ಅರ್ಥೈಸಿ ಯಾವ ಮಾಹಿತಿಯನ್ನು ಕೊಡಬೇಕೋ ಅದನ್ನು ಮಾತ್ರ ಕೊಡುತ್ತಿದೆ. ಯಾವುದೇ ರಾಜಕೀಯ ಪಕ್ಷದ ಒತ್ತಡಕ್ಕೆ ಮಣಿಯದೇ ತನ್ನತನವನ್ನು ಉಳಿಸಿಕೊಂಡಿದೆ. ನಮ್ಮ ಹಲವಾರು ಹೋರಾಟಗಳಿಗೆ ಸಾಕ್ಷಿಯಾಗಿದ್ದು ಕೂಡಾ ವಾರ್ತಾಭಾರತಿ ಪತ್ರಿಕೆ. ಸುರತ್ಕಲ್ ಟೋಲ್ ಗೇಟ್ ಹೋರಾಟಕ್ಕೆ 35 ದಿನಗಳ ಕಾಲ ನಮ್ಮೊಂದಿಗಿದ್ದು ಪ್ರತೀ ದಿನವೆಂಬತೆ ಸುದ್ದಿಯನ್ನು ಪ್ರಸಾರ ಮಾಡಿರುವುದನ್ನು ಓರ್ವ ಹೋರಾಟಗಾರ್ತಿಯಾಗಿರುವ ನನಗೆ ಮರೆಯಲು ಸಾಧ್ಯವಿಲ್ಲ. ಕೆಲವು ಕೋಮುವಾದಿ ಮನಸ್ಥಿತಿಗಳ ಕೊಂಕು ಮಾತುಗಳಿಗೆ ಕಿವಿ ಕೊಡದೆ ಜನಪರವಾಗಿ ನಿಂತು ನನ್ನ ಗೆಳತಿಗೆ ಸಾಮಾಜಿಕ ಜಾಲತಾಣದಲ್ಲಿ ಅವಾಚ್ಯವಾಗಿ ನಿಂದಿಸಿದಾಗ ಪತ್ರಿಕೆಯು ನನ್ನ ಗೆಳತಿಯ ಪರವಾಗಿ ನಿಂತು ಆಕೆ ಹಾಗೂ ನನ್ನನ್ನು ಸಂದರ್ಶನ ಮಾಡಿದ ನೆನಪು ಈಗಲೂ ಇದೆ. ಪತ್ರಿಕೆಯ ತನ್ನ ಘನತೆಯ ಜೊತೆಗೆ ಪತ್ರಿಕಾ ಧರ್ಮವನ್ನು ಉಳಿಸಿಕೊಂಡಿರುವುದು ಹೆಮ್ಮೆಯ ವಿಚಾರ.
<ಅಸುಂತಾ ಡಿಸೋಜ ಬಜಾಲ್, ಹೋರಾಟಗಾರ್ತಿ
ವಾರ್ತಾಭಾರತಿ ಜನ ಸಾಮಾನ್ಯರ ಪತ್ರಿಕೆ
ದೈನಂದಿನ ಸುದ್ದಿಗಳನ್ನು ಜನರಿಗೆ ತಲುಪಿಸುವ ‘ವಾರ್ತಾಭಾರತಿ’ ಪತ್ರಿಕಾ ಧರ್ಮವನ್ನು ಪ್ರಾಮಾಣಿಕವಾಗಿ ಉಳಿಸಿಕೊಂಡಿದೆ. ಪ್ರಸಕ್ತ ದಿನಗಳಲ್ಲಿ ದಿನಪತ್ರಿಕೆ ಓದುಗರ ಸಂಖ್ಯೆ ಕಡಿಮೆಯಾಗುತ್ತಿರುವ ಕಾಲಮಾನದಲ್ಲಿ ‘ವಾರ್ತಾಭಾರತಿ’ಯಲ್ಲಿ ಪ್ರಕಟವಾಗುತ್ತಿರುವ ಅಂಕಣಗಳು ಓದಲು ಪ್ರೇರೇಪಿಸುವಂತಿವೆ. ‘ವಾರ್ತಾಭಾರತಿ’ಯಲ್ಲಿ ಬರುವ ವಸ್ತುನಿಷ್ಠ ವರದಿಯು ನಂಬಿಕೆಗೆ ಅರ್ಹವಾಗಿದೆ. ತಾನು ನಂಬಿರುವ ಆದರ್ಶದಲ್ಲಿ ರಾಜಿ ಮಾಡಿಕೊಳ್ಳದೆ ಪ್ರಭುತ್ವವನ್ನು ವಿಮರ್ಶಿಸುವ ಮತ್ತು ಪ್ರಶ್ನಿಸುವ ರೀತಿ ಇತರ ಪತ್ರಿಕೆಗೂ ‘ವಾರ್ತಾಭಾರತಿ’ಗೂ ಇರುವ ಭಿನ್ನತೆಯನ್ನು ತೋರಿಸುತ್ತದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಾಲ್ಕನೇ ಅಂಗವಾದ ಮಾಧ್ಯಮ ಸಾಲಿನಲ್ಲಿ ಬರುವ ಪತ್ರಿಕೆಗಳ ಸಾಲಲ್ಲಿ ‘ವಾರ್ತಾಭಾರತಿ’ ಬಲಿಷ್ಠ ಪ್ರಜಾಪ್ರಭುತ್ವ ವ್ಯವಸ್ಥೆ ರೂಪುಗೊಳ್ಳಲು ಪ್ರಾಮಾಣಿಕ ಪ್ರಯತ್ನ ಮಾಡುತ್ತಿದೆ. ಇದು ಜನ ಸಾಮಾನ್ಯರ ಪತ್ರಿಕೆಯಾಗಿ ಮೂಡಿ ಬರಲು ಪ್ರಮುಖ ಕಾರಣ ಇದರಲ್ಲಿ ಬರುವ ವಿವಿಧ ಸ್ತರದ ಸುದ್ದಿಗಳು, ನಿಖರತೆ. ಮುಂದಿನ ದಿನಗಳಲ್ಲಿ ‘ವಾರ್ತಾಭಾರತಿ’ ಓದುಗರ ಸಂಖ್ಯೆ ಇನ್ನಷ್ಟು ವಿಸ್ತರಿಸುವಂತಾಗಲಿ.
<ಅಸ್ಲಂ ಹೈಕಾಡಿ ಆಡಳಿತಾಧಿಕಾರಿ, ಸಾಲಿಹಾತ್ ಸಮೂಹ ಶಿಕ್ಷಣ ಸಂಸ್ಥೆಗಳು ಹೂಡೆ, ಉಡುಪಿ.
ಜನಪರ ಕಾಳಜಿಯೇ ‘ವಾರ್ತಾಭಾರತಿ’ಯ ಧ್ಯೇಯ
ಪ್ರಚಲಿತ ಪತ್ರಿಕೋದ್ಯಮದಲ್ಲಿ ತನ್ನ ಅಸ್ತಿತ್ವಕ್ಕಾಗಿ ಸದಾ ವಾಣಿಜ್ಯ ಹಿತಾಸಕ್ತಿ, ಅಧಿಕಾರಶಾಹಿಗಳ ಪರವಾಗಿ ನಿಲ್ಲದೆ ಭಿನ್ನದಾರಿಯಲ್ಲಿ ನಡೆದು ‘ವಾರ್ತಾಭಾರತಿ’ ಹೊಸದೊಂದು ಟ್ರೆಂಡ್ ಸೃಷ್ಟಿಸಿದೆ. ಜನಪರ ಕಾಳಜಿಯೇ ತನ್ನ ಧ್ಯೇಯ ಎಂದು ಸದಾ ದೀನ ದಲಿತರ, ನೊಂದವರ, ದಮನಿತರ, ಅನ್ಯಾಯಕ್ಕೊಳಗಾದವರ, ಹೋರಾಟಗಾರರ ಪರ ವರದಿ ಮಾಡುತ್ತಾ ಬಂದಿದೆ. ಸಂಪಾದಕೀಯ, ಪ್ರತಿದಿನದ ದಿನಚರಿ ಎಂಬಂತೆ ಹೊಸ ಲೇಖನ ಹೊಸ ಕಾಲಂಗಳನ್ನು ಪ್ರಕಟಿಸುತ್ತ ಇತರ ಪತ್ರಿಕೆಗಳು ಕೂಡಾ ಈ ದೃಷ್ಟಿಯಲ್ಲಿ ವಿಚಾರ ಮಾಡುವಂತೆ ಮಾಡಿದೆ ಎಂದರೆ ತಪ್ಪಾಗಲಾರದು. 22ನೇ ವರ್ಷಕ್ಕೆ ಕಾಲಿಡುತ್ತಿರುವ ಈ ಶುಭ ಸಂದರ್ಭದಲ್ಲಿ ಪತ್ರಿಕೆ ಇನ್ನಷ್ಟು ಹೊಳಪನ್ನು ಹೆಚ್ಚಿಸಿಕೊಳ್ಳಲಿ ಎಂದು ಹಾರೈಸುವೆ.
<ಲೋಯ್ ಕರ್ವಾಲೋ, ಉದ್ಯಮಿ ಕುಂದಾಪುರ.
ಸ್ವಸ್ಥ ಸಮಾಜ ನಿರ್ಮಾಣಕ್ಕೆ ‘ವಾರ್ತಾಭಾರತಿ’ ಅಗತ್ಯ
ನಾನು ಕಳೆದ 20 ವರ್ಷಗಳಿಂದ ನಿರಂತರವಾಗಿ ‘ವಾರ್ತಾಭಾರತಿ’ ಓದುತ್ತಿದ್ದೇನೆ. ಇದರಲ್ಲಿ ಪ್ರಕಟವಾಗುವ ರಾಜಕೀಯ, ರಾಷ್ಟ್ರೀಯ, ಪ್ರಾದೇಶಿಕ, ಅಂತರ್‌ರಾಷ್ಟ್ರೀಯ ಸುದ್ದಿಗಳು ಬಹಳ ಉತ್ತಮವಾಗಿ ಮೂಡಿ ಬರುತ್ತಿವೆ. ನನ್ನ ಕಚೇರಿಗೆ ‘ವಾರ್ತಾಭಾರತಿ’ ಬರುತ್ತಿದ್ದು, ಕಚೇರಿಗೆ ಆಗಮಿಸುವವರು ಇದನ್ನು ಓದಿ ಒಳ್ಳೆಯ ಅಭಿಪ್ರಾಯ ವ್ಯಕ್ತಪಡಿಸುವುದನ್ನು ಕಂಡಿದ್ದೇನೆ. ಇದರಲ್ಲಿ ಮೂಡಿಬರುವ ಸಂಪಾದಕೀಯ ಎಲ್ಲರೂ ಓದುವಂತಹದ್ದೇ, ಓದಲೇಬೇಕಾದುದು. ಸ್ವಸ್ಥ ಸಮಾಜ ನಿರ್ಮಾಣಕ್ಕೆ ‘ವಾರ್ತಾಭಾರತಿ’ಯಂತಹ ಸುದ್ದಿ ಪತ್ರಿಕೆಗಳ ಅಗತ್ಯ ಇದೆ.
<ಫ್ರಾಂಕಿ ಫ್ರಾನ್ಸಿಸ್ ಕುಟ್ಟಿನ್ಹ, ಪೂರ್ವಅಧ್ಯಕ್ಷರು, ಜೆಸಿಐ ಮಂಗಳಗಂಗೋತ್ರಿ ಕೊಣಾಜೆ
ಸಾಮಾಜಿಕ ಜವಾಬ್ದಾರಿ ಹೊತ್ತ ಪತ್ರಿಕೆ
ಒಂದು ಪತ್ರಿಕೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾವ ರೀತಿ ಕಾರ್ಯನಿರ್ವಹಿಸಬಹುದು ಎಂಬುದಕ್ಕೆ ‘ವಾರ್ತಾಭಾರತಿ’ ಸ್ಪಷ್ಟ ನಿದರ್ಶನ. ರಾಜಕೀಯ ಮತ್ತು ಸಾಮಾಜಿಕ ಸಂದಿಗ್ಧತೆಯ ಸಂದರ್ಭದಲ್ಲಿ ‘ವಾರ್ತಾಭಾರತಿ’ಯು ಅತ್ಯಂತ ಜವಾಬ್ದಾರಿಯಿಂದ ಪ್ರಕಟಗೊಳ್ಳುತ್ತಿರುವ ಪತ್ರಿಕೆಯಾಗಿದೆ. ನಾನು ಗಮನಿಸಿದಂತೆ ಈ ಪತ್ರಿಕೆಯಲ್ಲಿ ಊಹಾಪೋಹದ ಸುದ್ದಿಗೆ ಅವಕಾಶವಿಲ್ಲ. ರಾಜಕೀಯ ವಿಚಾರಗಳ ಜೊತೆಗೆ ಸಾಂಸ್ಕೃತಿಕ ವಿಚಾರಗಳಿಗೂ ಆದ್ಯತೆ ನೀಡುತ್ತಿರುವ ಪತ್ರಿಕೆ, ಸಾಮಾಜಿಕ ಬದಲಾವಣೆಗೆ ಕಾರಣವಾಗಬಹುದಾದ ಸಣ್ಣ ಸಣ್ಣ ವಿಷಯಗಳಿಗೂ ಮಹತ್ವ ನೀಡಿ ಪ್ರಕಟಿಸುತ್ತಿದೆ. ಸರಕಾರದ ಮತ್ತು ಅಧಿಕಾರಿಗಳ ಜನವಿರೋಧಿ ನೀತಿಯನ್ನು ತೀವ್ರವಾಗಿ ಖಂಡಿಸುತ್ತಿರುವ ‘ವಾರ್ತಾಭಾರತಿ’, ರಾಜಕಾರಣಿಗಳಲ್ಲಿ ಮತ್ತು ಸಾರ್ವಜನಿಕ ಬದುಕಿನಲ್ಲಿರುವವರನ್ನು ಎಚ್ಚರಿಸುವ ಕೆಲಸ ಮಾಡುತ್ತಿದೆ. ಶಿಕ್ಷಣ, ಕೈಗಾರಿಕೆ, ವಾಣಿಜ್ಯ ವ್ಯವಹಾರ ಮತ್ತು ಕರ್ನಾಟಕದ ಸಂಸ್ಕೃತಿಯ ಬಗ್ಗೆಯೂ ಉತ್ತಮ ವರದಿ ಮತ್ತು ಲೇಖನಗಳನ್ನು ಪ್ರಕಟಿಸುತ್ತಿರುವುದರಿಂದ ಪತ್ರಿಕೆ ಬಹಳ ಜನಪ್ರಿಯವಾಗಿದೆ. ಭಾಷೆ ಸರಳವಾಗಿ ಎಲ್ಲರಿಗೂ ಅರ್ಥವಾಗುವ ಶೈಲಿಯಲ್ಲಿರುವುದೂ ಈ ಪತ್ರಿಕೆಯ ಜನಪ್ರಿಯತೆಗೆ ಸಾಕ್ಷಿಯಾಗಿದೆ.
<ಪ್ರೊ.ಡಿ.ವಿ.ಪರಮಶಿವಮೂರ್ತಿ, ಕುಲಪತಿ, ಕನ್ನಡ ವಿಶ್ವವಿದ್ಯಾನಿಲಯ, ಹಂಪಿ
ಮಾರಿಕೊಂಡ ಮಾಧ್ಯಮಗಳ ನಡುವೆ ಅವಕಾಶ ವಂಚಿತರ ಧ್ವನಿ
ಜಾತಿವಾದಿಗಳ ಸಾರ್ವಭೌಮತ್ವವನ್ನು ಪೋಷಿಸಿಕೊಂಡು ನೊಂದವರ ಅಳಲನ್ನು ಮರೆಮಾಚುತ್ತಾ, ಉಳ್ಳವರ ಹಿತ ಕಾಯುವ, ಮಾರಿಕೊಂಡ, ಮಡಿವಂತ ಮಾಧ್ಯಮಗಳ ನಡುವೆ, ಅವಕಾಶ ವಂಚಿತರ ದನಿಯಾಗಿ ಮಾಧ್ಯಮ ಜಗತ್ತಿಗೆ ಗೌರವ ತಂದು ಕೊಟ್ಟ ‘ವಾರ್ತಾಭಾರತಿ’ ಪತ್ರಿಕೆ ಎರಡು ದಶಕಗಳ ಪತ್ರಿಕೋದ್ಯಮ ಪಯಣದ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿಭಾಯಿಸುತ್ತಿದೆ. ಸಂವಿಧಾನದ ಆಶಯಗಳನ್ನು ಎತ್ತಿಹಿಡಿಯುವುದರಲ್ಲಿ ರಾಜಿಯಾಗದೆ, ನಿರ್ಭೀತಿಯಿಂದ ವಿಚಾರಗಳನ್ನು ಸಮಾಜಕ್ಕೆ ತಲುಪಿಸುತ್ತಿದೆ. ಮಾಧ್ಯಮಗಳೆಲ್ಲ ಇಷ್ಟೇ ಎಂದು ನಿರಾಸೆಗೆ ಒಳಗಾಗಿರುವ ಈ ಸಂದರ್ಭದಲ್ಲಿ, ‘ವಾರ್ತಾಭಾರತಿ’ ಜನರಿಗೆ ವಿಶ್ವಾಸವನ್ನು ತಂದುಕೊಟ್ಟಿದೆ. ‘ವಾರ್ತಾಭಾರತಿ’ಯ ಸಂಪಾದಕೀಯವನ್ನು ಒಂದು ವಾರ ಓದಿದರೆ ಸಾಕು ಇಡೀ ರಾಜ್ಯ ಮತ್ತು ದೇಶದಲ್ಲಿ ಏನು ನಡೆಯುತ್ತಿದೆ, ದೇಶ ಎತ್ತ ಸಾಗುತ್ತಿದೆ ಎನ್ನುವುದರ ಮಾಹಿತಿ ಸಿಗುತ್ತದೆ. ಕೋಮುವಾದಿ ಶಕ್ತಿಗಳನ್ನು ನೇರವಾಗಿ ಎದುರಿಸುತ್ತಿರುವ ಪತ್ರಿಕೆ ಯಾವುದಾದರೂ ಇದೆ ಎಂದರೆ ಅದು ‘ವಾರ್ತಾಭಾರತಿ’. ಪತ್ರಿಕೆಯಲ್ಲಿ ಪ್ರಕಟವಾಗುವ ಲೇಖನಗಳು ಪ್ರಚಲಿತ ವಿದ್ಯಮಾನಗಳ ಅರಿವು ನೀಡುತ್ತದೆ. ‘ವಾರ್ತಾಭಾರತಿ’ ಸಂವಿಧಾನದ ಆಶಯಗಳನ್ನು ಪೂರೈಸುವ ನಿಟ್ಟಿನಲ್ಲಿ ಎಲ್ಲಿಯೂ ರಾಜಿಯಾಗದೆ, ಪತ್ರಿಕೋದ್ಯಮದ ಆಶಯಕ್ಕೆ ಧಕ್ಕೆಯಾಗದೆ, ಜನರಿಗೆ ನಿರಾಸೆಯಾಗದ ರೀತಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವುದು ಸಂತೋಷದ ಸಂಗತಿ. ಈ ಅಪೂರ್ವ ಸಂದರ್ಭದಲ್ಲಿ ಕನ್ನಡಿಗರ ವಿಶ್ವಾಸಾರ್ಹತೆಗಳಿಸಿದ ವಾರ್ತಾಭಾರತಿ ಪತ್ರಿಕಾ ಬಳಗಕ್ಕೆ ಸಂವಿಧಾನವಾದಿಗಳ ಪರವಾಗಿ ಅಭಿನಂದನೆ ಸಲ್ಲಿಸುತ್ತೇನೆ.
<ಚಂದ್ರು ಪೆರಿಯಾರ್, ಸಂಶೋಧನಾ ವಿದ್ಯಾರ್ಥಿ -ಬೆಂವಿವಿ
‘ವಾರ್ತಾಭಾರತಿ’ ಇತರ ಪತ್ರಿಕೆಗಳಿಗೂ ಮಾದರಿಯಾಗಲಿ
ಮಾಧ್ಯಮಗಳು ಸಮಾಜದ ಕನ್ನಡಿ. ಸಮಾಜದಲ್ಲಿನ ತಪ್ಪುಗಳನ್ನು ಸರಿಪಡಿಸಿ ಅದರ ಸೌಂದರ್ಯವನ್ನು ಹೆಚ್ಚಿಸುವುದೇ ಮಾಧ್ಯಮಗಳ ಜವಾಬ್ದಾರಿ. ಇತ್ತೀಚಿನ ದಿನಗಳಲ್ಲಿ ಜನರಿಗೆ ಸತ್ಯ ತಿಳಿಸುತ್ತಿರುವ ಏಕೈಕ ಪತ್ರಿಕೆ ಎಂದರೆ ಅದು ‘ವಾರ್ತಾಭಾರತಿ’. ಓದುಗ ಪತ್ರಿಕೆಯಿಂದ ನಿರೀಕ್ಷಿಸುವುದು ಸತ್ಯವನ್ನು ಮಾತ್ರ. ಆ ಸತ್ಯವನ್ನು ‘ವಾರ್ತಾಭಾರತಿ’ಯಲ್ಲಿ ನೋಡಲು ಸಾಧ್ಯ. ಇದೊಂದು ಅಲ್ಪಸಂಖ್ಯಾತರ ಪತ್ರಿಕೆ, ಕೇವಲ ಮುಸ್ಲಿಮರ ವಿಚಾರಗಳನ್ನು ಮಾತ್ರ ಮುನ್ನೆಲೆಗೆ ತರುತ್ತದೆ ಎನ್ನುವ ಅಭಿಪ್ರಾಯ ಕೆಲವರಲ್ಲಿ ಇದೆ. ಆದರೆ ಈ ಅಭಿಪ್ರಾಯವನ್ನು ಹೇಳುವವರು ಯಾರೂ ಪತ್ರಿಕೆ ಓದುವವರಲ್ಲ. ‘ವಾರ್ತಾಭಾರತಿ’ ಪತ್ರಿಕೆ ಓದಿದರೆ ಬಹುಶಃ ಅವರಿಗೆ ಈ ಅಭಿಪ್ರಾಯ ಖಂಡಿತವಾಗಿಯೂ ಬರುವುದಿಲ್ಲ. ಒಂದು ಜಾತಿ, ಧರ್ಮಕ್ಕೆ ಮಾತ್ರ ಸೀಮಿತವಾಗಿ ಕೆಲಸ ಮಾಡದೇ, ಸಂವಿಧಾನದ ಆಶಯಗಳನ್ನು ಉಳಿಸುವ ನಿಟ್ಟಿನಲ್ಲಿ ಪತ್ರಿಕೆ ಕೆಲಸ ಮಾಡುತ್ತಿದೆ. ಈ ಪತ್ರಿಕೆಯ ಕಾರ್ಯ ಇತರ ಪತ್ರಿಕೆಗಳಿಗೆ ಮಾದರಿಯಾಗಬೇಕು. ಯಾವುದೇ ರಾಜಕೀಯ ಪಕ್ಷಕ್ಕೆ ಅಂಟಿಕೊಳ್ಳದೆ, ರಾಜಕೀಯ ಪಕ್ಷಗಳು ತಪ್ಪು ಮಾಡಿದಾಗ ಅದನ್ನು ಟೀಕಿಸುವ ಮತ್ತು ಪ್ರಶ್ನಿಸುವ, ಸುದ್ದಿಯಲ್ಲಿ ರಾಜಿಯಾಗದೆ, ಇದ್ದಿದ್ದನ್ನು ಇದ್ದಹಾಗೆ ಪ್ರಕಟಿಸುತ್ತಿರುವುದು ಪತ್ರಿಕೆಯ ಬದ್ಧತೆಯನ್ನು ತೋರಿಸುತ್ತದೆ. ಪತ್ರಿಕೆಯ ಜನಪರತೆ ಹೀಗೇ ಮುಂದುವರಿಯಲಿ.
<ನಾಗೇಶ್ ಅರಳಕುಪ್ಪೆ, ವಿಚಾರವಾದಿಗಳ ವೇದಿಕೆಯ ಸಂಚಾಲಕ
ಸುಳ್ಳಿನ ನಡುವೆ ಸತ್ಯ ಹುಡುಕುವ ಸಾಧನ
ಚಿಕ್ಕವನಿದ್ದಾಗ ಪತ್ರಿಕೆಯಲ್ಲಿ ಬಂದಿದ್ದೆಲ್ಲ ಸತ್ಯ ಎಂದು ನಂಬುತ್ತಿದ್ದೆ. ನಂತರ ಬಹುತೇಕ ಪತ್ರಿಕೆಗಳು ಜನರಿಗೆ ಕೇವಲ ಸುದ್ದಿ ತಿಳಿಸುವ ಮಾಧ್ಯಮಗಳಲ್ಲ, ಅವುಗಳಿಗೂ ಒಂದು ಸಿದ್ಧಾಂತ, ಅಜೆಂಡಾ, ಪಕ್ಷ, ನಾಯಕ ಇದ್ದಾನೆ. ಹಾಗಾಗಿ ನಮ್ಮನ್ನು ಮೂರ್ಖರನ್ನಾಗಿ ಮಾಡುತ್ತಿವೆ ಎಂಬುದು ತಿಳಿಯಿತು. ಆಗಿನಿಂದ ಆ ಪತ್ರಿಕೆಗಳ ಸುದ್ದಿಗಳು ನನಗೆ ಅಸಹ್ಯ ಹುಟ್ಟಿಸಿದವು. ಆಗ ಕೆಲವು ದಿನ ಪತ್ರಿಕೆ ಓದುವುದನ್ನೆ ನಿಲ್ಲಿಸಿದ್ದೆ.
ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ತುಮಕೂರಿಗೆ ಬಂದ ನಂತರ ಗೌರಿ ಲಂಕೇಶ್ ಮತ್ತು ಅಗ್ನಿ ವಾರ ಪತ್ರಿಕೆ ಓದಲು ಶುರು ಮಾಡಿದ್ದ ನನಗೆ ಮತ್ತೆ ದಿನ ಪತ್ರಿಕೆಗಳ ಬಗ್ಗೆ ಭರವಸೆ ಮೂಡಿಸಿದ್ದು 2016ರಲ್ಲಿ ಸಿಜ್ಞಾ ಯುವ ಸಂವಾದ ಎಂಬ ಸಂಸ್ಥೆಗೆ ಬರುತ್ತಿದ್ದ ‘ವಾರ್ತಾಭಾರತಿ’ ಪತ್ರಿಕೆ. ಬಣ್ಣ ಬಣ್ಣದ ಪುಟಗಳಿಲ್ಲದೆ, ಭಾವಾವೇಶಕ್ಕೊಳಗಾಗದ ಹುಚ್ಚು ಹೆಡ್ಡಿಂಗ್‌ಗಳಿಲ್ಲದೆ, ಕೀಳು ಮಟ್ಟದ ಜನ ಆಕರ್ಷಿಸುವ ತಂತ್ರವನ್ನು ಬಳಸದೇ ಸುದ್ದಿಯನ್ನು ಸುದ್ದಿ ಮಾತ್ರವಾಗಿಸಿ ಬರೆಯುವ ವಾರ್ತಾಭಾರತಿ ಪತ್ರಿಕೆ ಸುಳ್ಳಿನ ಕಾಲದಲ್ಲಿ ನನಗೆ ಸತ್ಯ ಹುಡುಕುವ ಸಾಧನವಾಯಿತು. 2016- 17ರಲ್ಲಂತೂ ಯಾವುದಾದರೂ ಸುದ್ದಿ ಬಂದರೆ ಅದರ ಕುರಿತು ‘ವಾರ್ತಾಭಾರತಿ’ಯಲ್ಲಿ ಏನಿದೆ? ಅದರ ಸಂಪಾದಕೀಯದಲ್ಲಿ ಏನಿದೆ ಎಂದು ಹುಡುಕುವ ಮಟ್ಟಿಗೆ ‘ವಾರ್ತಾಭಾರತಿ’ ನನ್ನ ಮೆಚ್ಚಿನ ಪತ್ರಿಕೆಯಾಯಿತು. ಈ ದೇಶದ ಬಹುತೇಕ ಚಳವಳಿಗಾರರು, ಚಿಂತಕರು, ಬರಹಗಾರರು ನನಗೆ ‘ವಾರ್ತಾಭಾರತಿ’ ಮೂಲಕವೇ ಪರಿಚಯವಾಗಿದ್ದಾರೆ.
ಇತ್ತೀಚಿನ ವರ್ಷಗಳಲ್ಲಿ ಕೆಲವು ಜನಪರ ಪತ್ರಿಕೆಗಳು ನಡೆಸಲಾಗದೇ ಮುಚ್ಚಿ ಹೋಗಿವೆ. ಕೆಲವು ಪತ್ರಿಕೆಗಳು ರಾಜಿಯಾಗಿವೆ. ಆದರೆ ‘ವಾರ್ತಾಭಾರತಿ’ ಮಾತ್ರ ಹಲವು ಸಂದಿಗ್ಧ ಪರಿಸ್ಥಿತಿಯ ನಡುವೆಯೂ ಜನರ ಗಟ್ಟಿ ಧ್ವನಿಯಾಗಿ ನಿಂತಿದೆ. ಡಿಜಿಟಲ್ ಕ್ಷೇತ್ರಕ್ಕೆ ಕಾಲಿಟ್ಟಿರುವ ‘ವಾರ್ತಾಭಾರತಿ’ ಕಾಲಕ್ಕೆ ತಕ್ಕಂತೆ ಅಪ್‌ಡೇಟ್ ಆಗುತ್ತಿರುವುದು ಖುಷಿಯ ವಿಚಾರ. ವಾರ್ತಾಭಾರತಿ ಯೂಟ್ಯೂಬ್ ಚಾನೆಲ್ ವೇಗವಾಗಿ ಬೆಳೆಯುತ್ತಿದ್ದು, ಜನಪರ ಧ್ವನಿಯಾಗಿ ಹೀಗೆ ಮುಂದುವರಿಯಲಿ. ಸತ್ಯ-ನ್ಯಾಯ ಉಳಿಯಲಿ. ಯಾವತ್ತೂ ರಾಜಿಯಾಗದಿರಲಿ.
<ನಂದನ್ ಖಂಡೇನಹಳ್ಳಿ, ಓದುಗ
‘ವಾರ್ತಾಭಾರತಿ’ಯಿಂದ ಜಾಗೃತಿ ಮೂಡಿಸುವ ಕೆಲಸ
ನಾನು ‘ವಾರ್ತಾಭಾರತಿ’ ಪತ್ರಿಕೆಯನ್ನು ಪ್ರಾರಂಭದಿಂದಲೂ ಓದುತ್ತಿದ್ದೇನೆ. ವರ್ಷದಿಂದ ವರ್ಷಕ್ಕೆ ಪ್ರಸಾರದಲ್ಲಿ ಅಭಿವೃದ್ಧ್ಧಿ ಹೊಂದುತ್ತಿರುವುದು ಈ ಪತ್ರಿಕೆಯಲ್ಲಿ ಬರುತ್ತಿರುವ ವರದಿ, ಲೇಖನ, ಸಂಪಾದಕೀಯ, ಜಾಹೀರಾತು ಮೊದಲಾದ ವಿಷಯಗಳು ಜನರಿಗೆ ಇಷ್ಟವಾಗುತ್ತಿರುವುದರ ಹೆಗ್ಗುರುತು ಎಂದರೂ ತಪ್ಪಾಗಲಾರದು. ಸುದ್ದಿಗಳನ್ನು ಒದಗಿಸುವ ಜೊತೆಗೆ ಜನರಿಗೆ ಶಿಕ್ಷಣ, ಮನೋರಂಜನೆ, ಜಾಗೃತಿಯನ್ನು ಮೂಡಿಸುವ ಕೆಲಸವನ್ನೂ ‘ವಾರ್ತಾಭಾರತಿ’ ಮಾಡುತ್ತಿದೆ. ಅಲ್ಲದೆ ರಾಜಕೀಯ, ವ್ಯಾಪಾರ, ಕ್ರೀಡೆ, ಕಲೆ ಮತ್ತು ವಿಜ್ಞಾನದಂತಹ ವಿವಿಧ ಕೃತಿಗಳನ್ನು ಒಳಗೊಂಡಿರುವ ಅತ್ಯುತ್ತಮ ಪತ್ರಿಕೆಯಾಗಿದೆ. ಒಟ್ಟಾರೆಯಾಗಿ ‘ವಾರ್ತಾಭಾರತಿ’ ಜನಮಾನಸದ ಪತ್ರಿಕೆ. ಇದು ಇನ್ನೂ ಹೆಚ್ಚು ಬೆಳೆಯಲಿ, ಶತ ಶತಮಾನಗಳ ಕಾಲ ಬೆಳಗಲಿ ಎಂದು ಮನ ತುಂಬಿ ಹಾರೈಸುವೆ.
<ಬಿ.ಮನಮೋಹನ ರಾವ್, ನಿವೃತ್ತ ಸಬ್ ಇನ್‌ಸ್ಪೆಕ್ಟರ್
ನಿಖರ ಸುದ್ದಿಗಳನ್ನು ನೀಡುವುದರಲ್ಲಿ ಎತ್ತಿದ ಕೈ
ನಾನು ಕಂಡಂತೆ ಅತ್ಯುತ್ತಮವಾದ ಪತ್ರಿಕೆಯಾಗಿರುವ ‘ವಾರ್ತಾಭಾರತಿ’ ಇನ್ನಷ್ಟು ಬೆಳೆಯಬೇಕು. ವಾರ್ತಾಭಾರತಿ ದೇಶದ ಆರ್ಥಿಕ ಪರಿಸ್ಥಿತಿ, ಕ್ರೀಡೆ, ಆಟಗಳು, ಮನೋರಂಜನೆ, ವ್ಯಾಪಾರ ಮತ್ತು ವಾಣಿಜ್ಯದ ಬಗ್ಗೆ ನಿಖರ ಸುದ್ದಿಗಳನ್ನು ನೀಡುವುದರಲ್ಲಿ ಎತ್ತಿದ ಕೈ ಎಂದರೆ ತಪ್ಪಾಗದು. ವಾಸ್ತವ ವಿಷಯಗಳನ್ನು ಜನರ ಮುಂದಿಟ್ಟು ಜಾಗೃತಿ ಮೂಡಿಸುತ್ತಿದೆ. ಸುಳ್ಳು ಮಾಹಿತಿ, ವಿಚಾರಗಳನ್ನು ಪ್ರಕಟಿಸಿ ಜನರು ಸುಳ್ಳನ್ನೇ ಸತ್ಯವೆಂದು ನಂಬುವಂತೆ ಮಾಡುವ ಈ ದಿನಗಳಲ್ಲಿ ವಾರ್ತಾಭಾರತಿ ನೀರಿಗೆ ಬಿದ್ದವನಿಗೆ ಹುಲ್ಲುಕಡ್ಡಿ ಸಿಕ್ಕಂತೆ ಎಂದರು ತಪ್ಪಾಗಲಾರದು. ನಾನು ಕಂಡಂತೆ ಈ ಪತ್ರಿಕೆಯಲ್ಲಿ ಅಶ್ಲೀಲ ಜಾಹೀರಾತುಗಳು ಪ್ರಕಟವಾಗುವುದಿಲ್ಲ. ಎಲ್ಲಾ ಪುಟಗಳು ಬಹುತೇಕವಾಗಿ ಸುದ್ದಿಗಳಿಂದಲೇ ಕೂಡಿರುತ್ತವೆ. ನನ್ನ ಅಮ್ಮ ದಿ. ಜಯಂತಿ ಕೂಡ ವಾರ್ತಾಭಾರತಿಯ ಅಭಿಮಾನಿ. ಅವರು ಬೆಳಗ್ಗಿನ ಚಹಾ ಆದರೂ ಬಿಟ್ಟಾರು ವಾರ್ತಾಭಾರತಿ ಪತ್ರಿಕೆ ಓದುವುದನ್ನು ಮರೆಯುತ್ತಿರಲಿಲ್ಲ. ವಾರ್ತಾಭಾರತಿ ವೆಬ್‌ಸೈಟ್ ಮಾಧ್ಯಮ ಸಾಕಷ್ಟು ಓದುಗರು, ವೀಕ್ಷಕರನ್ನು ಒಳಗೊಂಡಿರುವಂತೆ ಪತ್ರಿಕೆಯೂ ಎಲ್ಲರಿಗೂ ದೊರಕುವಂತಾಗಬೇಕು. ಇನ್ನಷ್ಟು ಕ್ರಾಂತಿಕಾರಿ ಮಾಧ್ಯಮವಾಗಿ ವಾರ್ತಾಭಾರತಿ ಸಮಾಜದ ಧ್ವನಿ ಆಗಲಿ ಎಂಬುದು ನನ್ನ ಆಶಯ.
<ಮಂಜುಳಾ ನಾಯಕ್, ಸಾಮಾಜಿಕ ಕಾರ್ಯಕರ್ತರು, ಮಂಗಳೂರು.
ಸಂವಿಧಾನ ಪ್ರತಿಪಾದಿಸುವ ಪತ್ರಿಕೆ
ನನಗೆ ವಾರ್ತಾಭಾರತಿ ತುಂಬಾ ಇಷ್ಟ ಏಕೆಂದರೆ ಇದು ನಮ್ಮ ಸಂವಿಧಾನ ಪರವಾದ ಲೇಖನಗಳು, ಅಂಬೇಡ್ಕರ್ ವಿಚಾರಗಳು ಹಾಗೂ ಶೋಷಿತ ಸಮಾಜದ ಪರಿಚಯದ ಜೊತೆಗೆ ಸಮಾನತೆ, ಸಾಮಾಜಿಕ ನ್ಯಾಯವನ್ನು ಪ್ರತಿಪಾದಿಸುತ್ತದೆ. ಪತ್ರಿಕೋದ್ಯಮ ಅತ್ಯಂತ ಅಪೇಕ್ಷಿತ ಮತ್ತು ಗೌರವಾನ್ವಿತ ವೃತ್ತಿಗಳಲ್ಲಿ ಒಂದಾಗಿದೆ. ಇದು ವ್ಯಕ್ತಿಯನ್ನು ಜಗತ್ತಿಗೆ ಪರಿಚಯಿಸುತ್ತದೆ ಮತ್ತು ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಪತ್ರಿಕೆಗಳ ಮೂಲಕ ದೇಶದ ಮತ್ತು ಇಡೀ ಪ್ರಪಂಚದಲ್ಲಿ ಏನು ನಡೆಯುತ್ತಿದೆ ಎಂಬುದರ ಬಗ್ಗೆ ನಮಗೆ ಸ್ಪಷ್ಟ ಕಲ್ಪನೆ ಹಾಗೂ ತಿಳುವಳಿಕೆ ಮೂಡಿಸುತ್ತದೆ. ಇದು ರಾಜಕೀಯ, ಆರ್ಥಿಕತೆ, ಮನೋರಂಜನೆ, ಕ್ರೀಡೆ, ವ್ಯಾಪಾರ, ಉದ್ಯಮ ಮತ್ತು ವಾಣಿಜ್ಯದ ಬಗ್ಗೆ ಮಾಹಿತಿಯನ್ನು ಒಯ್ಯುತ್ತದೆ ಹಾಗೂ ನಮ್ಮ ಭಾಷಾ ಕೌಶಲ್ಯ ಮತ್ತು ಶಬ್ದ ಕೋಶವನ್ನು ಸುಧಾರಿಸುತ್ತದೆ.
<ಕೆ.ಸತೀಶ್ ಅರಳ, ಪರಿಶಿಷ್ಟ ಸಮುದಾಯದ ಮುಖಂಡ, ಸಾಮಾಜಿಕ ಕಾರ್ಯಕರ್ತ
ಸಂವಿಧಾನದ ಆಶಯಗಳನ್ನು ಕಾಪಾಡಿಕೊಂಡು ಸುದ್ದಿ ಕೊಡುವ ವಾರ್ತಾಭಾರತಿ
ಪತ್ರಿಕೆ ಪ್ರಜಾಪ್ರಭುತ್ವದಲ್ಲಿ ಹೆಚ್ಚಿನ ಮಹತ್ವವನ್ನು ಪಡೆದುಕೊಂಡಿದೆ. ಇದನ್ನು ಪ್ರಜಾಪ್ರಭುತ್ವದ ಕಾವಲು ನಾಯಿ ಎಂಬುದಾಗಿ ಕರೆಯುತ್ತಾರೆ. ಈ ನಿಟ್ಟಿನಲ್ಲಿ ವಾರ್ತಾಭಾರತಿ ದಿನಪತ್ರಿಕೆ ಸಂವಿಧಾನದ ಆಶಯಗಳನ್ನು ಕಾಪಾಡಿಕೊಂಡು ದಿನನಿತ್ಯ ನಡೆಯುವ ರಾಜಕೀಯ ಸ್ಥಿತ್ಯಂತರಗಳನ್ನು ಸುಂದರವಾಗಿ ವರದಿ ಮಾಡುತ್ತಿದೆ. ರಾಷ್ಟ್ರ ನಿರ್ಮಾಣದ ಹಾಗೂ ಸಾಮಾಜಿಕ ನ್ಯಾಯದ ವಿಷಯಗಳನ್ನು ನೀಡುತ್ತಿದೆ. ನಮ್ಮ ದೇಶದಲ್ಲಿ ಜಗತ್ತಿನಲ್ಲಿ ಅತಿ ಹೆಚ್ಚು ಯುವಜನತೆ ಇದ್ದಾರೆ. ಈ ಯುವಜನತೆಯ ಕೊಡುಗೆ ದೇಶದ ಅಭಿವೃದ್ಧಿಗೆ ಬೇಕಾಗಿದೆ. ಇದಕ್ಕಾಗಿ ಪತ್ರಿಕೆಯು ಭ್ರಷ್ಟಾಚಾರ ನಿವಾರಣೆ ಹಾಗೂ ಡ್ರಗ್ಸ್ ಮುಕ್ತ ಸಮಾಜ ನಿರ್ಮಾಣ ಮಾಡುವ ನಿಟ್ಟಿನಲ್ಲಿ ಇನ್ನಷ್ಟು ಹೆಚ್ಚಿನ ಲೇಖನಗಳು ಪತ್ರಿಕೆಯಲ್ಲಿ ಬರಲಿ. ವಾರ್ತಾಭಾರತಿ ನಾಡಿನ ಜನತೆಯ ಅಶೋತ್ತರಗಳಿಗೆ ಇದೇರೀತಿ ಸದಾ ಸ್ಪಂದಿಸಲೆಂದು ಹಾರೈಸುತ್ತೇನೆ.
<ಕೆ.ಎನ್.ಗಂಗಾಧರ ಆಳ್ವ, ನಿವೃತ್ತ ಪ್ರಾಂಶುಪಾಲರು
ಪಕ್ಷಾತೀತ ವರದಿಗಾರಿಕೆಗೆ ಸಾಕ್ಷಿ
ವಾರ್ತಾಭಾರತಿ ಹಲವು ವರ್ಷಗಳಿಂದ ಇಷ್ಟಪಟ್ಟು ಓದುವ ದಿನಪತ್ರಿಕೆ. ಪತ್ರಿಕಾ ಧರ್ಮವನ್ನೇ ಮರೆತು ತಮಗಿಷ್ಟ ಬಂದಂತೆ, ರಾಜಕೀಯ ಪಕ್ಷ ಮತ್ತು ಧರ್ಮದ ಕುರಿತು ಬರೆಯುವ ಪತ್ರಿಕೆಗಳ ನಡುವೆ ಪಕ್ಷಾತೀತವಾಗಿ ವರದಿ ಮಾಡಿ ರಾಜಕೀಯ ಪಕ್ಷಗಳಿಗೆ ಛಾಟಿ ಬಿಸುವ ಏಕೈಕ ದಿನಪತ್ರಿಕೆ ವಾರ್ತಾಭಾರತಿ ಎಂದರೆ ತಪ್ಪಲ್ಲ. ಇನ್ನು ಸಂಪಾದಕೀಯದೆಡೆ ಬಂದರೆ ಹೊಸ ಹೊಸ ಅಂಕಣಗಳೊಂದಿಗೆ ಸದಾ ಹೊಸತನ್ನು ನೀಡುತ್ತಿದೆ. ಸಮಾಜದ ಕೆಳವರ್ಗದವರು ಮತ್ತು ಹೋರಾಟಗಾರರ ಪರ ನಿಲ್ಲುವ ಏಕೈಕ ಪತ್ರಿಕೆ ನಮ್ಮ ವಾರ್ತಾಭಾರತಿ 22ನೇ ವರ್ಷಕ್ಕೆ ಕಾಲಿಡುತ್ತಿದ್ದು, ಪತ್ರಿಕೆಗೆ ಶುಭಕೋರುತ್ತಾ, ಪತ್ರಿಕಾ ಧರ್ಮ ಹೀಗೆಯೇ ಮುಂದುವರಿಯಲಿ ಹಾರೈಸುತ್ತೇನೆ.
<ಗಣೇಶ್ ಮೆಂಡನ್, ಕುಂದಾಪುರ.
ವಾರ್ತಾಭಾರತಿ ಶೋಷಿತರ ಗಟ್ಟಿ ಧ್ವನಿ
ಅನೇಕ ವರ್ಷಗಳ ಪತ್ರಿಕಾ ಮಾಧ್ಯಮ ಪ್ರತಿನಿಧಿಗಳ ಒಡನಾಡಿಯಾಗಿ, ಒಬ್ಬ ದಿನ ಪತ್ರಿಕೆಯ ಓದುಗಾರನಾಗಿ ವಾರ್ತಾಭಾರತಿ ಪತ್ರಿಕೆಯ ಅಭಿಮಾನಿಗಳಲ್ಲಿ ನಾನೂ ಒಬ್ಬ ಅನ್ನಬಲ್ಲೆ ..! ಕಾರಣ ನನ್ನ ಹೋರಾಟದ ಜೀವನದಲ್ಲಿ ಮಲೆನಾಡಿನ ಗ್ರಾಮೀಣ ಭಾಗದ ಜನರ ಜೀವನದ ತಲ್ಲಣಗಳು, ಭೂಮಾಲಕರ ಪಾಳೇಗಾರಿಕೆಗಳು, ನಮ್ಮನ್ನು ಆಳುವ ವರ್ಗದ ಸರಕಾರವನ್ನು ಜಡ್ಡುಗಟ್ಟಿದ ವ್ಯವಸ್ಥೆಯಿಂದ ಬಡಿದೆಬ್ಬಿಸುವ ಹೋರಾಟಗಳು ಅನೇಕ ವರದಿಗಳನ್ನು ಯಾವುದೇ ರಾಜಿಯಿಲ್ಲದೆ ಪ್ರಚುರಪಡಿಸಿದೆ ಪತ್ರಿಕೆಯೊಂದಿದ್ದರೆ ಅದು ವಾರ್ತಾಭಾರತಿ ಎಂದು ಹೆಮ್ಮೆಯಿಂದ ಹೇಳಬಲ್ಲೆ. ವಾರ್ತಾಭಾರತಿ ಸತ್ಯವನ್ನು ಬಿತ್ತರಿಸುವ ಪತ್ರಿಕೆಯಾಗಿ ಜನಮಾನಸದಲ್ಲಿ ಶೋಷಿತರ ಗಟ್ಟಿ ಧ್ವನಿಯಾಗಿದೆ.
<ವಾಸುದೇವ ಮುದೂರು, ಉಡುಪಿ ಜಿಲ್ಲಾ ದೌರ್ಜನ್ಯ ತಡೆ ಜಾಗೃತಿ ಉಸ್ತುವಾರಿ ಸಮಿತಿ ಸದಸ್ಯರು ಕರ್ನಾಟಕ ಸರಕಾರ
ಗಾಂಧಿ, ಅಂಬೇಡ್ಕರ್, ಲೋಹಿಯಾ ಕನಸಿನ ಸಾಕಾರದ ಪ್ರಯತ್ನ
‘ದಲಿತ, ದಮನಿತ, ಅಲ್ಪಸಂಖ್ಯಾತ ಜನ ಸಮುದಾಯದ ಪರ ಯಾವುದೇ ಮರ್ಜಿಗೆ ಒಳಗಾಗದೆ ನಿಲ್ಲುವ, ಅಸಹಾಯಕರ ದನಿ ‘ವಾರ್ತಾಭಾರತಿ’. ಅಕ್ಷರ ವಂಚಿತ ವರ್ಗದಿಂದ ಬಂದ ನಮ್ಮಂಥವರಿಗೆ ಪತ್ರಿಕೆ ಆಶಾಕಿರಣ. ಕಲುಷಿತಗೊಂಡಿರುವ ಮಾಧ್ಯಮ ವ್ಯವಸ್ಥೆಯ ನಡುವೆ ‘ವಾರ್ತಾಭಾರತಿ’ ಭರವಸೆಯ ಬೆಳಕು. ಒಳಿತು ಬಯಸುವ ನಾಡಿನ ಜನರೇ ಈ ಪತ್ರಿಕೆಯ ಪೋಷಕರು. ಲಂಕೇಶೋತ್ತರ ಕಾಲಘಟ್ಟದ ದಿಟ್ಟದನಿ ‘ವಾರ್ತಾಭಾರತಿ’. ಬಸವಣ್ಣನ ನಾಡಿನ ಸೌಹಾರ್ದ ಪರಂಪರೆಯನ್ನು, ಗಾಂಧಿ, ಅಂಬೇಡ್ಕರ್, ಲೋಹಿಯಾ ಕಂಡ ಕನಸಿನ ಭಾರತವನ್ನು ಸಾಕಾರಗೊಳಿಸಲು ಎರಡು ದಶಕ ‘ವಾರ್ತಾಭಾರತಿ’ ಮಾಡಿರುವ ಕೆಲಸ ದೊಡ್ಡದು. ಗೊಂದಲಮಯ ಸಂಗತಿಗಳಿಗೆ ಸ್ಪಷ್ಟತೆ ನೀಡುತ್ತಾ, ಪ್ರಭುತ್ವದ ವಿಷಕಾರಿ ಧೋರಣೆಗೆ ಛಡಿಯೇಟು ಕೊಡುತ್ತಾ, ಪ್ರಜ್ಞಾವಂತಿಕೆಯನ್ನು ವಿಸ್ತರಿಸುತ್ತಿರುವ ‘ವಾರ್ತಾಭಾರತಿ’ ಬಳಗಕ್ಕೆ ಅಭಿನಂದನೆಗಳು.
<ಯತಿರಾಜ್ ಬ್ಯಾಲಹಳ್ಳಿ, ಬರಹಗಾರರು, ಗುಬ್ಬಿ, ತುಮಕೂರು
ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ವಾರ್ತಾಭಾರತಿ
ಕಳೆದ 21 ವರ್ಷಗಳಿಂದ ನಾಡಿನ ಹೆಮ್ಮೆಯ ದಿನಪತ್ರಿಕೆಯಾಗಿ ಬೆಳೆದಿರುವ ‘ವಾರ್ತಾಭಾರತಿ’ ನೈಜ ಪತ್ರಿಕಾ ಧರ್ಮಗಳನ್ನು ಪಾಲಿಸುತ್ತಾ, ಶೋಷಿತರ ಹಾಗೂ ದಮನಿತರ ಧ್ವನಿಯಾಗಿದ್ದುಕೊಂಡು ಸಮಾಜದಲ್ಲಿ ಜಾಗೃತಿಯ ಭಾವವನ್ನು ಸೃಷ್ಟಿಸುತ್ತಾ ಸಾಗಿದೆ ಎನ್ನಲು ಹೆಮ್ಮೆಯಾಗುತ್ತದೆ. ಇದರಲ್ಲಿ ಪ್ರಕಟವಾಗುವ ಪ್ರತಿಯೊಂದು ವರದಿಯೂ ಪ್ರಾಮಾಣಿಕತೆ ಹಾಗೂ ಸತ್ಯಕ್ಕೆ ಸನಿಹವೇ ಇರುವ ಕಾರಣಕ್ಕಾಗಿಯೇ ‘ವಾರ್ತಾಭಾರತಿ’ಯನ್ನು ಒಪ್ಪಿಕೊಳ್ಳುವ ಒಂದು ಬಹುದೊಡ್ಡ ಓದುಗ ವರ್ಗವೇ ಸೃಷ್ಟಿಯಾಗಿದೆ. ಇಲ್ಲಿ ಯಾವುದೇ ವಿಚಾರಗಳಲ್ಲಿ ವೈಭವೀಕರಣವಿಲ್ಲ, ಸಾಮರಸ್ಯ ಕೆಡಿಸುವ ಪದಪುಂಜಗಳಿಲ್ಲ, ದ್ವೇಷ ಹರಡುವ, ಕಿಚ್ಚು ಹಚ್ಚುವ ಬೆಂಕಿಯುಂಡೆಗಳಿಲ್ಲ. ಆದರೆ ಸಮಾಜದ ಅಂಕುಡೊಂಕುಗಳನ್ನು ಅವ್ಯವಸ್ಥೆ ಹಾಗೂ ಅನ್ಯಾಯಗಳನ್ನು ನೇರ ಮಾತುಗಳಿಂದ ಖಂಡಿಸುತ್ತಾ ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಅಗತ್ಯವಿರುವ ಸಂದೇಶಗಳಿದ್ದರೆ ಅದು ‘ವಾರ್ತಾಭಾರತಿ’ಯಂತಹ ಪತ್ರಿಕೆಗಳಲ್ಲಿ ಮಾತ್ರ. ಇಲ್ಲಿ ಸಾಮಾಜಿಕ ಶೈಕ್ಷಣಿಕ ಧಾರ್ಮಿಕ ಹಾಗೂ ನಮ್ಮ ಸಂಸ್ಕೃತಿಯ ಬಿಂಬ- ಪ್ರತಿಬಿಂಬಗಳಿವೆ. ಅನ್ಯಾಯವನ್ನು ವಿರೋಧಿಸುವ ಕಟು ಶಬ್ದಗಳೊಂದಿಗೆ ನ್ಯಾಯವನ್ನು ಬೆಂಬಲಿಸುವ ಮೃದು ಮಾತುಗಳೂ ಇವೆ. ಜೊತೆಗೆ ಸಮಾಜದ ಅಂಕುಡೊಂಕುಗಳನ್ನು ಪ್ರಶ್ನಿಸುತ್ತಾ ವಿಶ್ಲೇಷಿಸುತ್ತಾ ಸಾಮಾಜಿಕ ಪ್ರಜ್ಞೆಯನ್ನು ಬೆಳೆಸುವ ಪ್ರಾಮಾಣಿಕ ಕಾಳಜಿಯ ನುಡಿಗಳು ಅಚ್ಚಾಗಿರುವ ಕಾರಣಕ್ಕಾಗಿಯೇ ಪತ್ರಿಕೆ ಜನಮಾನಸದಲ್ಲಿ ‘ಅಚ್ಚಳಿಯದೇ’ ಉಳಿದಿರುವುದು ಎಂದರೆ ಅತಿಶಯೋಕ್ತಿಯಲ್ಲ.
<ರಹ್ಮಾನ್ ಖಾನ್ ಕುಂಜತ್ತಬೈಲ್, ಅಧ್ಯಕ್ಷರು, ರಂಗ ಸ್ವರೂಪ ಕುಂಜತ್ತಬೈಲ್, ಮಂಗಳೂರು.
ವಾರ್ತಾಭಾರತಿ ಕನ್ನಡದ ಆಸ್ತಿ
ವಾರ್ತಾಭಾರತಿ ಕನ್ನಡದ ಪ್ರಮುಖ ದಿನಪತ್ರಿಕೆಗಳಲ್ಲಿ ಒಂದಾಗಿದ್ದು, ಸಮಾಚಾರ, ವಿಶ್ಲೇಷಣೆ ಮತ್ತು ಪ್ರತಿ ಸಂದರ್ಭ ಸನ್ನಿವೇಶಗಳ ಆಳವಾದ ವರದಿಗಳನ್ನು ಒದಗಿಸುತ್ತದೆ. ವಾರ್ತಾಭಾರತಿಯು ನಿಷ್ಪಕ್ಷ ವರದಿಗಳ ಮೂಲಕ ಹೆಸರುವಾಸಿಯಾಗಿದೆ. ವಾರ್ತಾ ಭಾರತೀಯಲ್ಲಿ ಪ್ರಕಟವಾಗುವ ಲೇಖನಗಳು ಮತ್ತು ಪ್ರಸಕ್ತ ಜ್ವಲಂತ ಸಮಸ್ಯೆಗಳು, ಸಮಾಜದ ಓರೆಕೋರೆಗಳನ್ನು ತಿದ್ದುವಲ್ಲಿ ಎಚ್ಚರಿಸುವಲ್ಲಿ ಮತ್ತು ಸರಿಪಡಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ. ಇದು ಕನ್ನಡದ ಆಸ್ತಿ ಎಂದರು ತಪ್ಪಾಗಲಾರದು. ವಾರ್ತಾಭಾರತಿಯು ಕರ್ನಾಟಕದ ವಿವಿಧ ಭಾಗಗಳಲ್ಲಿ ಪ್ರಕಟವಾಗುವುದರ ಜೊತೆಗೆ ಅದರ ಆನ್‌ಲೈನ್ ಆವೃತ್ತಿಯು ವಿಶ್ವಾದ್ಯಂತ ಕನ್ನಡಿಗರಿಗೆ ಲಭ್ಯವಾಗತೊಡಗಿರುವುದು ಸಂತಸದ ವಿಚಾರ. ವಾರ್ತಾಭಾರತಿಯಲ್ಲಿ ವರದಿಯಾಗುವ ವಿಚಾರಗಳು ನಂಬಲಾರ್ಹವಾಗಿದ್ದು, ಯಾವುದೇ ಊಹೆ ಅಥವಾ ಕಲ್ಪನೆಗಳಿಗೆ ಆಸ್ಪದ ನೀಡುವುದಿಲ್ಲ ಎಂಬುದು ನಮ್ಮ ನಂಬಿಕೆ. ದೇಶದ ರಾಷ್ಟ್ರೀಯತೆಯನ್ನು, ಸೌಹಾರ್ದವನ್ನು ಗೌರವಿಸುವ ಒಂದು ವಿಶಿಷ್ಟ ಪತ್ರಿಕೆ ವಾರ್ತಾಭಾರತಿ. 22ನೇ ವರ್ಷಕ್ಕೆ ಕಾಲಿಡುತ್ತಿರುವ ಈ ಸಂದರ್ಭದಲ್ಲಿ ವಾರ್ತಾಭಾರತಿ ಇನ್ನಷ್ಟು ಬೆಳೆಯಲಿ. ಶುಭಾಶಯಗಳು.
<ಡಾ.ಸದಾನಂದ ಬೈಂದೂರು, ಅಧ್ಯಕ್ಷರು ಸಮುದಾಯ ಕುಂದಾಪುರ.
ಸಾಮಾಜಿಕ ನ್ಯಾಯ ಪರವಾದ ಪತ್ರಿಕೆ
ನಾನು ಸಾಮಾಜಿಕ ನ್ಯಾಯದ ಪರವಾದ ವಾರ್ತಾಭಾರತಿಯ ನಿರಂತರ ಓದುಗ. ವಿಶೇಷವಾಗಿ ಹಿಂದುಳಿದ, ಶೋಷಿತ, ಅಲ್ಪಸಂಖ್ಯಾತ ಸಮುದಾಯಕ್ಕೆ ಅನ್ಯಾಯವಾದಾಗ ನಿಷ್ಪಕ್ಷ್ಷವಾಗಿ ಸುದ್ದಿಗಳನ್ನು ಪ್ರಕಟಿಸಿ ಸಮಾಜಕ್ಕೆ ಸತ್ಯವನ್ನು ಹೇಳುವ ಕೆಲಸವನ್ನು ವಾರ್ತಾಭಾರತಿ ಮಾಡುತ್ತಿದೆ. ಸರಕಾರಿ ಕಚೇರಿ, ವಿವಿಧ ಸಂಸ್ಥೆ ಅಧಿಕಾರಿಗಳಿಂದ ಅನ್ಯಾಯವಾದಾಗ ನಿರ್ಭಯವಾಗಿ ಪತ್ರಿಕೆಯ ಮೂಲಕ ಜನರಿಗೆ ತಿಳಿಸುವ ಕೆಲಸ ಮಾಡುತ್ತಿದೆ. ಉತ್ತಮವಾದ ಸಂಪಾದಕೀಯದಿಂದ ಕೂಡಿದ ಪತ್ರಿಕೆಯು ದಿನನಿತ್ಯ ಸಂಭವಿಸುತ್ತಿರುವ ಘಟನೆಗಳನ್ನು ಸಮಾಜದ ಒಡಕು - ಕೆಡಕುಗಳನ್ನು ವಿಮರ್ಶೆಗಳ ಮೂಲಕ ಸಾಮರಸ್ಯ ಸಹಬಾಳ್ವೆ, ಬಹುತ್ವಕ್ಕೆ ಗೌರವ ಸಲ್ಲಿಸುವ ಮೂಲಕ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಎತ್ತಿ ಹಿಡಿಯುವ ಕೆಲಸವನ್ನು ಪತ್ರಿಕೆ ಮಾಡುತ್ತಿದೆ. 22ನೇ ವರ್ಷಕ್ಕೆ ಕಾಲಿಡುತ್ತಿರುವ ಸಂದರ್ಭದಲ್ಲಿ ಪತ್ರಿಕೆ ಇನ್ನಷ್ಟು ಮೆರುಗಿನೊಂದಿಗೆ ಮೂಡಿ ಬರಲಿ ಎಂದು ಆಶಿಸುತ್ತೇನೆ.
<ಅಶ್ರಫ್ ಗುಂಡಿ ಅರಂತೋಡು (ಸುಳ್ಯ), ಸಾಮಾಜಿಕ ಕಾರ್ಯಕರ್ತ