ಮೀಸಲಾತಿ ಹಿಂದಿನ ಮೂಲ ಮತ್ತು ತಾರ್ಕಿಕತೆ

೧೯೫೦ರಲ್ಲಿ ಭಾರತದ ಸಂವಿಧಾನದ ಅಡಿಯಲ್ಲಿ ಪರಿಶಿಷ್ಟ ಜಾತಿಗೆ ವಿಶೇಷ ಸ್ಥಾನಮಾನವನ್ನು ನೀಡಲಾಯಿತು. ಇದು ೨೦ನೇ ಶತಮಾನದ ಆರಂಭಿಕ ದಶಕಗಳಲ್ಲಿ ಬ್ರಿಟಿಷ್ ಶಿಕ್ಷಣ ಮತ್ತು ಆಡಳಿತದಲ್ಲಿ ಅನೇಕ ಪ್ರಗತಿಶೀಲ ವ್ಯಕ್ತಿಗಳಲ್ಲಿ ಆತ್ಮಾವಲೋಕನಕ್ಕೆ ಕಾರಣವಾಯಿತು. ದೇಶ, ಪ್ರಾಂತೀಯ, ಶಾಸಕಾಂಗ ಮಂಡಳಿಗಳಿಗೆ ತುಳಿತಕ್ಕೊಳಗಾದ ವರ್ಗಗಳ ನಾಮನಿರ್ದೇಶನ ಹೊಂದಿದ ವಿದ್ಯಾವಂತ ಸದಸ್ಯರು ಸಮುದಾಯದ ವಿಮೋಚನೆಯಲ್ಲಿ ಸಾಮಾಜಿಕ, ನೈತಿಕ ಅಥವಾ ಧಾರ್ಮಿಕ ಕಾರ್ಯಗಳ ಕೊರತೆ ಅನುಭವಿಸಿದರು. ಆದ್ದರಿಂದ ಅವರು ಸಕ್ರಿಯ ರಾಜಕೀಯಕ್ಕೆ ಧುಮುಕಿದರು ಮತ್ತು ಬ್ರಾಹ್ಮಣೇತರ ಮಧ್ಯಮ ಜಾತಿಗಳೊಂದಿಗೆ ಒಟ್ಟಿಗೆ ಹೋಗಲು ಸಾಧ್ಯವಿಲ್ಲ ಎಂಬುದನ್ನು ಕೂಡಲೇ ಅರಿತುಕೊಂಡರು.

Update: 2024-02-06 04:29 GMT

ಸ್ವಾತಂತ್ರ್ಯದ ಮೊದಲು ಹಿಂದುಳಿದ ವರ್ಗಗಳಿಗೆ ಮೀಸಲಾತಿ ನೀತಿ ಎಂಬುದು ದೇಶವ್ಯಾಪಿ ಇರಲಿಲ್ಲ. ಸ್ವಾತಂತ್ರ್ಯದ 50 ವರ್ಷಗಳ ನಂತರವೂ ಹಿಂದುಳಿದ ಜಾತಿಗಳು ವಂಚಿತವಾಗಿಯೇ ಉಳಿದವು.

ಆದರೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳು ಮೀಸಲಾತಿ ಪ್ರಯೋಜನವನ್ನು ಪಡೆದುಕೊಂಡಿದ್ದವು. ರಾಷ್ಟ್ರೀಯ ರಂಗ ಸರಕಾರವು ಅಧಿಕಾರದಲ್ಲಿದ್ದಾಗ ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿದ ಭರವಸೆಗಳಲ್ಲಿ ಒಂದನ್ನು ಜಾರಿಗೆ ತರಲು ನಿರ್ಧರಿಸಿತು. ಅದು ಮಂಡಲ್ ವರದಿಯಲ್ಲಿ ನೀಡಲಾದ ಶಿಫಾರಸುಗಳ ಅನುಷ್ಠಾನವಾಗಿದ್ದು, ಸರಕಾರಿ ಸೇವೆಗಳು ಮತ್ತು ಇತರ ಕ್ಷೇತ್ರಗಳಲ್ಲಿ ಹಿಂದುಳಿದ ವರ್ಗಗಳಿಗೆ ಮೀಸಲಾತಿ ಪ್ರಯೋಜನವನ್ನು ನೀಡುತ್ತದೆ. 1990ರ ಅಂತ್ಯದ ವೇಳೆಗೆ ರಾಷ್ಟ್ರೀಯ ರಂಗ ಸರಕಾರದ ಈ ನಿರ್ಧಾರವು ವ್ಯಾಪಕವಾದ ಆಂದೋಲನಕ್ಕೆ ಕಾರಣವಾಯಿತು. ವಿಶೇಷವಾಗಿ ಬಿಹಾರ ಮತ್ತು ಉತ್ತರ ಪ್ರದೇಶ ಮತ್ತು ಹೆಚ್ಚಿನ ಇಂಗ್ಲಿಷ್ ಭಾಷೆಯ ಪತ್ರಿಕೆಗಳಲ್ಲಿ ತೀವ್ರ ಖಂಡನೆಗೆ ಗುರಿಯಾಯಿತು. ಈ ಸಮಯದಲ್ಲಿ ಸಮಾಜದ ಎಲ್ಲಾ ವರ್ಗಗಳ ಗಮನ ಚರ್ಚೆಯತ್ತ ಹೊರಳಿತು.

ಮೀಸಲಾತಿ ನೀತಿಯು ಭಾರತದಲ್ಲಿ ಮಾತ್ರವಲ್ಲದೆ ಇತರ ದೇಶಗಳಲ್ಲಿಯೂ ಸಾಮಾನ್ಯವಾಗಿ ಪ್ರತಿಲೋಮ ತಾರತಮ್ಯ ಅಥವಾ ಅಫರ್ಮೇಟಿವ್ ಆ್ಯಕ್ಷನ್ ಎಂಬಂಥ ಇತರ ಹೆಸರುಗಳಿಂದ ಕರೆಯಲ್ಪಡುತ್ತದೆ. ಮೀಸಲಾತಿಗೆ ಆಧಾರ ಅಥವಾ ಮಾನದಂಡ ಯಾವುದು? ಅದು ಜಾತಿ ಆಧಾರಿತವೋ ಅಥವಾ ವರ್ಗ ಆಧಾರಿತವೋ? ಎಂಬ ಪ್ರಶ್ನೆ ಉದ್ಭವಿಸುತ್ತದೆ.

ಭಾರತದಲ್ಲಿ ಕೇವಲ ವರ್ಗಕ್ಕಿಂತ ಜಾತಿಯ ಬಗ್ಗೆ ಮಾತನಾಡುವುದು ಹೆಚ್ಚು ಪ್ರಸ್ತುತವಾಗಿದೆ, ಏಕೆಂದರೆ ಜಾತಿಯು ಆಂತರಿಕವಾಗಿ ವರ್ಗದೊಂದಿಗೆ ಬೆರೆತಿದೆ. ಆಧುನಿಕ ಅಭಿವೃದ್ಧಿಯ ಹೊರತಾಗಿಯೂ ಜಾತಿಗಳ ಮತ್ತು ಉಪಜಾತಿಗಳ ಸಾಮಾಜಿಕ ಅಸಮಾನತೆಗಳು ಮತ್ತು ಅನನುಕೂಲಗಳು ಅಳಿದು ಹೋಗಿಲ್ಲ. ಸಾಮಾಜಿಕ ನ್ಯಾಯವೂ ಜಾತಿಯ ಅವಲಕ್ಷಣದ ವಾಸ್ತವಕ್ಕೆ ತನ್ನ ಕಣ್ಣುಗಳನ್ನು ಮುಚ್ಚಲು ಸಾಧ್ಯವಿಲ್ಲ. ಆದರೆ ಅಗತ್ಯವಿರುವವರಿಗೆ ಮೀಸಲಾತಿಗಳ ಪ್ರಯೋಜನವನ್ನು ಒಳಗೊಂಡಂತೆ ವ್ಯಾಪಕವಾದ ಕ್ರಮಗಳ ಮೂಲಕ ಅದನ್ನು ನಿಭಾಯಿಸಬೇಕು (ಘೋರ್ಪಡೆ).

ಆ ಸಾಮಾಜಿಕ ಗುಂಪುಗಳು, ಸಾಮಾಜಿಕ ಮತ್ತು ಶಿಕ್ಷಣದ ಅಸಮಾನತೆಯನ್ನು ಎಷ್ಟು ದಿನ ಅನುಭವಿಸುತ್ತವೆ ಎಂಬ ಪ್ರಶ್ನೆ ಏಳುವುದು ಸಹಜ. ಅವನ್ನು ಸಾಮಾನ್ಯ ಜನರಿಗೆ ಸರಿಸಮಾನವಾಗಿ ತರಲು ಸಾಧ್ಯವಾಗದಿದ್ದರೆ ಅಥವಾ ಅವು ಮುಂದುವರಿಯುವ ತನಕ, ಮೀಸಲಾತಿಯ ಪ್ರಯೋಜನಗಳ ಲಭ್ಯತೆಗೆ ಅವಕಾಶವಾಗಬೇಕು. ಅದರಿಂದಾಗಿ, ಅವರ ಮುಂಬರುವ ಸಂತತಿಯು ಅಂಥ ಸಾಮಾಜಿಕ ದೌರ್ಬಲ್ಯಗಳನ್ನು ನಿಭಾಯಿಸಲು ಸಾಧ್ಯವಾಗುತ್ತದೆ.

ಜಾತಿ ಪದ್ಧತಿ ಮತ್ತು ಅದರ ಮೂಲ

ಜಾತಿ ವ್ಯವಸ್ಥೆಯ ಮೂಲ ಮತ್ತು ಕಾರಣಗಳನ್ನು ಭಾರತ ಮತ್ತು ವಿದೇಶಗಳ ಪ್ರಸಿದ್ಧ ವಿದ್ವಾಂಸರು ನೀಡಿದ್ದಾರೆ. ಆದರೂ ಜಾತಿಯ ಮುಖ್ಯ ಲಕ್ಷಣಗಳು ಲಭ್ಯವಿರುವ ಆರಂಭಿಕ ಲಿಖಿತ ಸಂಸ್ಕೃತ ದಾಖಲೆಯಾದ ಋಗ್ವೇದದಲ್ಲಿ ಕಂಡು ಬರುತ್ತವೆ. ವರ್ಣ ವ್ಯವಸ್ಥೆಯು ಪುರೋಹಿತರು, ರಾಜರು - ಯೋಧರು, ವ್ಯಾಪಾರಿಗಳು, ರೈತರು ಮತ್ತು ಸೇವಕರನ್ನು ಸೃಷ್ಟಿಸಿದೆ. ವರ್ಣ ವ್ಯವಸ್ಥೆಯು ಅಂತರ್ ನಿರ್ಮಿತ ಜಾತಿ ಗುಣಕವಾಗಿ ಕಾರ್ಯನಿರ್ವಹಿಸಿತು, ಇದರ ಪರಿಣಾಮವಾಗಿ ಇಂದಿಗೂ ಪ್ರತಿಯೊಂದು ಭಾಷಾವಾರು ಪ್ರದೇಶಗಳು 1,500-2,000 ಜಾತಿಗಳು ಮತ್ತು ಉಪಜಾತಿಗಳನ್ನು ಹೊಂದಿವೆ. ಯಾವುದೇ ವರ್ಣಕ್ಕೂ ಸೇರದ ಅಂತ್ಯಜ ಅಥವಾ ಅವರ್ಣ ಎಂಬ ಮತ್ತೊಂದು ವರ್ಗ ಬಲವಂತವಾಗಿ ಹೊರಹಾಕಲ್ಪಟ್ಟು ಅಸ್ಪಶ್ಯರೆನಿಸಿಕೊಂಡರು. ಧರ್ಮದೊಳಗಿನ ಯಾವುದೇ ಪ್ರಕ್ರಿಯೆಗಳು ಅಸ್ಪಶ್ಯತೆಯ ತಡೆಗೋಡೆಯನ್ನು ಜಯಿಸಲು ಕಷ್ಟವೆನಿಸಿದವು. ಇದು, ಇಸ್ಲಾಮ್, ಕ್ರೈಸ್ತ, ಸಿಖ್ ಮತ್ತು ಬೌದ್ಧ ಧರ್ಮದಂತಹ ಇತರ ಧರ್ಮಗಳ ಮೇಲೆ ನಂಬಿಕೆ ಇಡಲು ಕಾರಣವಾಯಿತು. ಈ ಅಂಶಗಳು ದೀನದಲಿತರಿಗೆ ಸರಿಯಾದ ಸ್ಥಾನ-ಮಾನವನ್ನು ನೀಡುವ ಇತರ ಧರ್ಮಗಳನ್ನು ಸ್ವೀಕರಿಸುವಂತಾಯಿತು. ಅಸ್ಪಶ್ಯರು ತಮ್ಮ ಅಮಾನವೀಯ ದಾಸ್ಯ ಜೀವನದ ವಿರುದ್ಧ ದಂಗೆ ಏಳದಂತೆ ಕಟ್ಟಿ ಹಾಕಿದ್ದೇ ಕರ್ಮ ಸಿದ್ಧಾಂತ.ಬಹುಶಃ ಇದರಿಂದಾಗಿ ಅಸ್ಪಶ್ಯತೆಗೆ ಒಳಗಾದ ಬಹು ಜನರು ದ್ವಂದ್ವಕ್ಕೆ ಒಳಗಾಗಿರುವ ಸಾಧ್ಯವಿದೆ.

ಸುಧಾರಣಾ ಚಳವಳಿಗಳು

ಭಾರತದಲ್ಲಿ ಅನೇಕ ಜಾತಿ ವಿರೋಧಿ ಚಳವಳಿಗಳು ನಡೆದಿವೆ. ಬೌದ್ಧ ಮತ್ತು ಜೈನ ಧರ್ಮವು ತರ್ಕಬದ್ಧ ಮತ್ತು ಮಾನವೀಯ ಸಾಮಾಜಿಕ ದೃಷ್ಟಿಕೋನದ ಅಭಿವ್ಯಕ್ತಿಗಳಾಗಿವೆ. ಮಧ್ಯಕಾಲೀನ ಅವಧಿಯ ಭಕ್ತಿ ಚಳವಳಿಯ ಎಲ್ಲಾ ಭಕ್ತರು ಅವರ ಜಾತಿಯ ಸಂಬಂಧವನ್ನು ಲೆಕ್ಕಿಸದೆ ಆಧ್ಯಾತ್ಮಿಕವಾಗಿ ಸಮಾನವಾಗಿರುವ ಜಗತ್ತನ್ನು ಸೃಷ್ಟಿಸಲು ಯತ್ನಿಸಿದರು. ಆದರೂ, ಅಂಥ ಚಳವಳಿಗಳು ಅಸ್ತಿತ್ವದಲ್ಲಿರುವ ಆರ್ಥಿಕ ವ್ಯವಸ್ಥೆಯನ್ನು ಬದಲಾಯಿಸಲು ಸಾಧ್ಯವಾಗಲಿಲ್ಲ ಮತ್ತು ದೀನ-ದಲಿತ ವರ್ಗಗಳ ಸ್ಥಿತಿಯನ್ನೂ ಸುಧಾರಿಸಲು ಸಾಧ್ಯವಾಗಲಿಲ್ಲ. ಬ್ರಿಟಿಷರ ಆಳ್ವಿಕೆಯಲ್ಲಿ ಎಲ್ಲಾ ಸಮಾಜ ಸುಧಾರಣಾ ಚಳವಳಿಗಳು ಅಸ್ಪಶ್ಯತೆಯ ನಿವಾರಣೆಯನ್ನು ತಮ್ಮ ಕಾರ್ಯಕ್ರಮದ ಅವಿಭಾಜ್ಯ ಅಂಗವನ್ನಾಗಿ ಮಾಡಿಕೊಂಡವು. ಬ್ರಹ್ಮ ಸಮಾಜ, ಸತ್ಯ ಶೋಧಕ ಸಮಾಜ, ಆರ್ಯ ಸಮಾಜ, ರಾಮಕೃಷ್ಣ ಮಿಷನ್ ಮತ್ತು ಪ್ರಾರ್ಥನಾ ಸಮಾಜ ಇವೆಲ್ಲವೂ ಸಾಮಾಜಿಕ ಸಮಾನತೆಯ ಮನೋಭಾವನೆಯಿಂದ ಪ್ರೇರೇಪಿಸಲ್ಪಟ್ಟವು.

ಅದೇ ಸಮಯದಲ್ಲಿ ಜಾರಿಗೆ ಬಂದ 1892ರ ಭಾರತೀಯ ರಾಷ್ಟ್ರೀಯ ಮಂಡಳಿಯ ಕಾಯ್ದೆಯು ಕೇಂದ್ರ ಮತ್ತು ಪ್ರಾಂತೀಯ ಶಾಸಕಾಂಗ ಮಂಡಳಿಗಳಲ್ಲಿ ಭಾರತೀಯರ ಪ್ರಾತಿನಿಧ್ಯವನ್ನು ಹೆಚ್ಚಿಸಿತು. ಈ ಕಾಯ್ದೆಯು ಕೋಮುವಾದದ ನೆಲೆಯಲ್ಲಿ ಜನಪ್ರಿಯ ಸಂಸ್ಥೆಗಳ ರಚನೆಯ ಸಾಧ್ಯತೆಯನ್ನು ತೋರಿಸಿತು.

1872ರಲ್ಲಿ ಭಾರತದ ಜನಗಣತಿಯ ಪ್ರಕಟಣೆಯೊಂದಿಗೆ ಸಂಪೂರ್ಣ ಮಾಹಿತಿಯು ಮುಂಚೂಣಿಗೆ ಬಂದಿತು. ಜನಗಣತಿ ಆಯುಕ್ತರಾಗಿದ್ದ ಸರ್ ಹರ್ಬರ್ ರಿಸ್ಲೆ ಅವರು ಪ್ರತೀ ಜಾತಿಯ ನಿಖರವಾದ ಶ್ರೇಣಿಯನ್ನು ಪಡೆಯಲು ನಿರ್ಧರಿಸಿದರು, ಆದರೆ ಜಾತಿ ಪ್ರಾಶಸ್ತ್ಯ ಸಮಿತಿಗಳ ಸಂಸ್ಥೆಯು ದೇಶದೊಳಗೆ ಜಾತಿ ಭೇದವನ್ನು ಸೃಷ್ಟಿಸುವ ಸಾಧನವಾಗಿ ಪರಿಗಣಿಸಲ್ಪಟ್ಟಿದ್ದರಿಂದ ಅಸಮಾಧಾನವನ್ನು ಹುಟ್ಟುಹಾಕಿತು.

1887ರಲ್ಲಿ ತನ್ನ ಮೊದಲ ಅಧಿವೇಶನವನ್ನು ನಡೆಸಿದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ 1895ರ ವೇಳೆಗೆ ನ್ಯಾಯಮೂರ್ತಿ ರಾನಡೆಯವರ ದಂಡನೆಯಿಂದಾಗಿ ನಿಮ್ನ ವರ್ಗಗಳ ಸುಧಾರಣೆಗಾಗಿ ನಿರ್ಣಯಗಳನ್ನು ಅಂಗೀಕರಿಸಿತು. ತುಳಿತಕ್ಕೊಳ್ಳಗಾದವರ ಸಂಖ್ಯಾಬಲದ ಪ್ರಜ್ಞೆ ಮತ್ತು ರಾಜಕೀಯ ಮತ್ತು ಸಾಮಾಜಿಕ ಪ್ರಗತಿಯ ಅಗತ್ಯತೆಯನ್ನು ಈ ಎದ್ದು ಕಾಣುವ ಅಸಮಾನತೆಗಳನ್ನು ಸಮಾಜದಿಂದ ತೆಗೆದು ಹಾಕದ ಹೊರತು ಎಂದಿಗೂ ಮಾಡಲು ಸಾಧ್ಯವಿಲ್ಲ.

ಪ್ರತ್ಯೇಕ ಪ್ರಾತಿನಿಧ್ಯದ ಮೂಲ

1950ರಲ್ಲಿ ಭಾರತದ ಸಂವಿಧಾನದ ಅಡಿಯಲ್ಲಿ ಪರಿಶಿಷ್ಟ ಜಾತಿಗೆ ವಿಶೇಷ ಸ್ಥಾನಮಾನವನ್ನು ನೀಡಲಾಯಿತು. ಇದು 20ನೇ ಶತಮಾನದ ಆರಂಭಿಕ ದಶಕಗಳಲ್ಲಿ ಬ್ರಿಟಿಷ್ ಶಿಕ್ಷಣ ಮತ್ತು ಆಡಳಿತದಲ್ಲಿ ಅನೇಕ ಪ್ರಗತಿಶೀಲ ವ್ಯಕ್ತಿಗಳಲ್ಲಿ ಆತ್ಮಾವಲೋಕನಕ್ಕೆ ಕಾರಣವಾಯಿತು. ದೇಶ, ಪ್ರಾಂತೀಯ, ಶಾಸಕಾಂಗ ಮಂಡಳಿಗಳಿಗೆ ತುಳಿತಕ್ಕೊಳಗಾದ ವರ್ಗಗಳ ನಾಮನಿರ್ದೇಶನ ಹೊಂದಿದ ವಿದ್ಯಾವಂತ ಸದಸ್ಯರು ಸಮುದಾಯದ ವಿಮೋಚನೆಯಲ್ಲಿ ಸಾಮಾಜಿಕ, ನೈತಿಕ ಅಥವಾ ಧಾರ್ಮಿಕ ಕಾರ್ಯಗಳ ಕೊರತೆ ಅನುಭವಿಸಿದರು. ಆದ್ದರಿಂದ ಅವರು ಸಕ್ರಿಯ ರಾಜಕೀಯಕ್ಕೆ ಧುಮುಕಿದರು ಮತ್ತು ಬ್ರಾಹ್ಮಣೇತರ ಮಧ್ಯಮ ಜಾತಿಗಳೊಂದಿಗೆ ಒಟ್ಟಿಗೆ ಹೋಗಲು ಸಾಧ್ಯವಿಲ್ಲ ಎಂಬುದನ್ನು ಕೂಡಲೇ ಅರಿತುಕೊಂಡರು.

ಎ.ಎಸ್. ಗವಾಯಿ, ಛತ್ರ ಸಿಂಗ್ ಲಾಲ್‌ಜಿ ಮತ್ತು ಬಿ.ಆರ್. ಅಂಬೇಡ್ಕರ್ ಅವರಂತಹ ಪ್ರಖ್ಯಾತ ನಾಯಕರಿದ್ದ ಅನೇಕ ತುಳಿತಕ್ಕೊಳಗಾದ ವರ್ಗದ ಸಮ್ಮೇಳನಗಳಲ್ಲಿ, ಅವರ ಸಾಮಾಜಿಕ ಮತ್ತು ರಾಷ್ಟ್ರೀಯ ಹಕ್ಕುಗಳ ವಿರುದ್ಧ ಅಸಮಾಧಾನ ಕಂಡು ಬಂದಿತು. ಅಂತಹ ಸಭೆಗಳು ಸಮಾಜದ ಮೇಲಾಗಲಿ, ಬ್ರಿಟಿಷ್ ಸರಕಾರದ ಮೇಲಾಗಲಿ ಮತ್ತು ಮಹಾತ್ಮಾ ಗಾಂಧಿಯಂತಹ ನಾಯಕರ ಮೇಲಾಗಲಿ ಯಾವುದೇ ರಾಜಕೀಯ ಪರಿಣಾಮ ಬೀರಲಿಲ್ಲ.

ನಿಮ್ನ ವರ್ಗಗಳು ಮತ್ತು ರಾಷ್ಟ್ರೀಯ ಚಳವಳಿ

ತುಳಿತಕ್ಕೊಳಗಾದ ವರ್ಗಗಳ ಮಿಷನ್ ಸೊಸೈಟಿ ಆಫ್ ಇಂಡಿಯಾ 1925ರ ಅಖಿಲ ಭಾರತ ಸಮ್ಮೇಳನದಲ್ಲಿ, ನಾಮನಿರ್ದೇಶನದ ಮೂಲಕ ತುಳಿತಕ್ಕೊಳಗಾದ ವರ್ಗಗಳ ಪ್ರಾತಿನಿಧ್ಯವೂ ಅತೃಪ್ತಿಕರವಾಗಿದೆ ಮತ್ತು ಅದು ಕುಚೇಷ್ಟೆಯಿಂದ ಕೂಡಿದೆ ಎಂದು ಘೋಷಿಸಿತು. ಎಲ್ಲಾ ಸ್ಥಳೀಯ ಮತ್ತು ಕೇಂದ್ರೀಯ ಸಂಸ್ಥೆಗಳಲ್ಲಿ ತಮ್ಮದೇ ಆದ ಚುನಾಯಿತ ಪ್ರತಿನಿಧಿಗಳು ಇರಬೇಕು. ಅವರ ಸಂಖ್ಯೆಗಳು ಆಯಾ ಅಧಿಕಾರ ವ್ಯಾಪ್ತಿಯಲ್ಲಿ ಅವರ ಜನಸಂಖ್ಯೆ ಅನುಪಾತಕ್ಕೆ ಅನುಗುಣವಾಗಿರಬೇಕು. ಸರಕಾರವು ಕಾಲಕಾಲಕ್ಕೆ ಅವರಿಗಾಗಿ ಕಾಯ್ದಿರಿಸಿದ ಹುದ್ದೆಗಳನ್ನು ಶೇಕಡವಾರು ಪ್ರಮಾಣದಲ್ಲಿ ನಿಗದಿಪಡಿಸಬೇಕು ಎಂದಿತು

ಸೈಮನ್ ಆಯೋಗ

ತುಳಿತಕ್ಕೊಳಗಾದ ವರ್ಗಗಳ ಬೇಡಿಕೆಯನ್ನು ಸೈಮನ್ ಆಯೋಗವು ಸಂಪೂರ್ಣವಾಗಿ ಪರಿಗಣನೆಗೆ ತೆಗೆದುಕೊಳ್ಳಲಿಲ್ಲ ಮತ್ತು ಮಿಲಿಟರಿ ಮತ್ತು ನಾಗರಿಕ ಆಡಳಿತದಲ್ಲಿ ಉದ್ಯೋಗಕ್ಕಾಗಿ ಅವರ ಮನವಿಯನ್ನು ಕಡೆಗಣಿಸಿದರೂ, ಆಯೋಗವು ಬ್ರಿಟಿಷ್ ಸರಕಾರದ ಪ್ರಯತ್ನವಾಗಿ ತುಳಿತಕ್ಕೊಳಗಾದ ವರ್ಗಗಳ ಸಮಸ್ಯೆ ಅರಿತು, ಅವರಿಗೆ ಕೆಲವು ರಾಜಕೀಯ ಪ್ರಾತಿನಿಧ್ಯವನ್ನು ನೀಡುತ್ತದೆ ಅಷ್ಟೇ ಅಲ್ಲದೆ, ಪ್ರಮುಖ ರಾಜಕೀಯ ಶಕ್ತಿಯಾಗಿ ಅದು ತನ್ನನ್ನು ತಾನು ಪ್ರತಿಪಾದಿಸಿ ಕೊಳ್ಳಲು ಒತ್ತು ಕೊಡುತ್ತದೆ.

ನಿಮ್ನ ವರ್ಗಗಳ ಸಾಮಾಜಿಕ ಸ್ಥಾನ

ಅಂತ್ಯಜರು ಸಮಾಜೋ -ಆರ್ಥಿಕ ಪರಿಸ್ಥಿತಿಯಿಂದಾಗಿ ಎಲ್ಲಾ ರೀತಿಯಲ್ಲೂ ಹಿಂದುಳಿದ ಮತ್ತು ತುಳಿತಕ್ಕೆ ಒಳಗಾಗಿದ್ದರು, ಆದ್ದರಿಂದ ಅವರನ್ನು ನಿಮ್ನ ವರ್ಗಗಳು ಎಂದು ಕರೆಯಲಾಗಿತ್ತು. ಮಹಾತ್ಮಾ ಗಾಂಧಿಯವರು ‘ಪಂಚಮ’( ಐದನೇ ವರ್ಗ) ಎಂದು ಕರೆದರು, ಏಕೆಂದರೆ ಅವರನ್ನು ನಾಲ್ಕು ವರ್ಣಗಳಿಂದ ಹೊರಗಿಡಲಾಗಿತ್ತು.

ಪೂನಾ ಒಪ್ಪಂದ

ಪೂನಾ ಒಪ್ಪಂದವು ತುಳಿತಕ್ಕೆ ಒಳಗಾದ ವರ್ಗಗಳಿಗೆ ಹಕ್ಕು ನೀಡುವ ವಿಧಾನಗಳನ್ನು ನಿರ್ಧರಿಸಲು ರಚಿಸಲಾದ ಫ್ರಾಂಚೈಸ್ ಸಮಿತಿಯ ಹೊರತಾಗಿ ಅಸ್ತಿತ್ವಕ್ಕೆ ಬಂದಿತು. ಮುಸ್ಲಿಮರು, ಸಿಖ್ಖರು, ಯುರೋಪಿಯನ್ನರು ಮತ್ತು ಕ್ರೈಸ್ತರಿಗೆ ಪ್ರತ್ಯೇಕ ಮತದಾರರನ್ನು ನೀಡಿದ ಕೋಮು ಐತೀರ್ಪು ಅದಾಗಿತ್ತು. ಈ ಐತೀರ್ಪನ್ನು ವಿರೋಧಿಸಿದ ಮಹಾತ್ಮಾ ಗಾಂಧಿ ಆಮರಣಾಂತ ಉಪವಾಸ ಕೈಗೊಂಡರು. ಡಾ.ಅಂಬೇಡ್ಕರ್ ಕೂಡ ತೀಕ್ಷ್ಣವಾಗಿ ಮಹಾತ್ಮಾ ಗಾಂಧಿಯ ನಿಲುವನ್ನು ವಿರೋಧಿಸುತ್ತಾರೆ. ಕೊನೆಗೆ ಪರಿಸ್ಥಿತಿಯ ಒತ್ತಡದಿಂದಾಗಿ ಗಾಂಧೀಜಿಯವರ ಪ್ರಾಣ ರಕ್ಷಣೆ ಮಾಡುವ ಉದ್ದೇಶದಿಂದ ಡಾ. ಅಂಬೇಡ್ಕರ್ ರಾಜಿ ಮಾಡಿಕೊಳ್ಳಬೇಕಾಯಿತು. ತತ್ಫಲವಾಗಿ ದಿನಾಂಕ 24.09.1932ರಂದು ಪೂನಾ ಒಪ್ಪಂದದಲ್ಲಿ ಒಂದು ಹೊಸ ಒಪ್ಪಂದಕ್ಕೆ ಬರಲಾಯಿತು. ಅದರ ಪ್ರಕಾರ ಪ್ರತೀ ಪ್ರಾಂತದಲ್ಲಿ ಮುಸ್ಲಿಮರನ್ನು ಹೊರತುಪಡಿಸಿದಂತೆ ಸಾಮಾನ್ಯ ಕ್ಷೇತ್ರಗಳನ್ನು ರಚಿಸಲಾಯಿತು.

ಶೋಷಿತ ವರ್ಗದವರ ಜನಸಂಖ್ಯೆಗೆ ಅನುಗುಣವಾಗಿ ಸಾಮಾನ್ಯ ಕ್ಷೇತ್ರದಲ್ಲಿ ಶೇ.18ರಷ್ಟು ಕ್ಷೇತ್ರಗಳನ್ನು ಮೀಸಲಿರಿಸಲಾಯಿತು. ಬಾಬಾ ಸಾಹೇಬರ ಕಾರಣದಿಂದಾಗಿ ಮೀಸಲಾತಿ ಪರಿಕಲ್ಪನೆ ಉದಯಿಸಿ ಶೋಷಿತ ವರ್ಗದವರಿಗೆ ವಿಶೇಷ ಸ್ಥಾನಮಾನ ನೀಡಲು ಸಾಧ್ಯವಾಯಿತು. ಕ್ಷೇತ್ರಗಳ ರಚನೆಯಲ್ಲಿ ಡಾ. ಅಂಬೇಡ್ಕರ್ ಅವರು ಪ್ರಮುಖ ಪಾತ್ರ ವಹಿಸಿದ್ದರು ಮತ್ತು ಆ ಸಂದರ್ಭದಲ್ಲಿ ಈ ರೀತಿ ಹೇಳಿದ್ದರು-

‘‘ಈ ಎಲ್ಲಾ ಸಮುದಾಯಗಳನ್ನು ಸಮಾನತೆಯ ಮಟ್ಟಕ್ಕೆ ತರಬೇಕಾದರೆ, ಅಸಮಾನತೆಯ ತತ್ವವನ್ನು ಅಳವಡಿಸಿಕೊಳ್ಳುವುದು ಮತ್ತು ಒಂದು ಮಟ್ಟಕ್ಕಿಂತ ಕೆಳಗಿರುವವರಿಗೆ ಒಲವು ತೋರುವುದೊಂದೇ ಪರಿಹಾರ’’

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ಕೆ.ಎನ್. ಲಿಂಗಪ್ಪ

ಮಾಜಿ ಸದಸ್ಯ, ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗ

Similar News