ಜಾರ್ಖಂಡ್ ರಾಜಕೀಯ ಬೆಳವಣಿಗೆಗಳ ಸುತ್ತ ಮುತ್ತ

Update: 2024-08-24 08:46 GMT

ಜಾರ್ಖಂಡ್ ಸಿಎಂ ಸ್ಥಾನದಿಂದ ಇಳಿದ ಬಳಿಕ ಚಂಪಯಿ ಸೊರೇನ್ ಬಿಜೆಪಿ ಸೇರಿಯೇ ಬಿಡುತ್ತಾರೆ ಎಂಬ ಸುದ್ದಿ ಮೂರ್ನಾಲ್ಕು ದಿನಗಳ ಹಿಂದೆ ಜೋರಾಗಿ ಹರಡಿತ್ತು. ಅವರೊಡನೆ ಜೆಎಂಎಂನ 6 ಶಾಸಕರೂ ಸೇರಲಿದ್ದಾರೆ ಎನ್ನಲಾಗಿತ್ತು. ಈ ಚರ್ಚೆಯ ಬೆನ್ನಲ್ಲೇ ಚಂಪಯಿ ಸೊರೇನ್ ದಿಲ್ಲಿಗೂ ಹೋದರು. ಇನ್ನೇನು ಅವರೆಲ್ಲ ಬಿಜೆಪಿ ಸೇರಿಯೇ ಬಿಡುತ್ತಾರೆ ಎಂದು ಸುದ್ದಿಯಾಯಿತು.

ಆದರೆ, ದಿಲ್ಲಿಯಲ್ಲಿ ಬಿಜೆಪಿಯಿಂದ ತಮಗೆ ದೊಡ್ಡ ಸ್ವಾಗತ ಕಾದಿದೆ ಎಂದು ನಂಬಿ ಚಂಪಯಿ ಕೆಟ್ಟ ಹಾಗಾಗಿದೆ.

ಇರುವುದನ್ನೂ ಕಳಕೊಂಡು, ಈಗ ಅಸ್ತಿತ್ವ ಉಳಿಸಿಕೊಳ್ಳಲು ಹೊಸ ಪಕ್ಷ ಕಟ್ಟುವ ಬಗ್ಗೆ ಅವರು ಮಾತಾಡುತ್ತಿದ್ದಾರೆ.

ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ದಿಲ್ಲಿಗೆ ಬಂದಿದ್ದ ಚಂಪಯಿ ಒಬ್ಬರೇ ಇದ್ದರು. ಅವರೊಡನೆ ಬರುತ್ತಾರೆ ಎನ್ನಲಾದ 6 ಶಾಸಕರು ಜಾರ್ಖಂಡ್‌ನಲ್ಲೇ ಹೇಮಂತ್ ಸೊರೇನ್ ಜೊತೆಗೇ ಇದ್ದರು. ದಿಲ್ಲಿಯಲ್ಲಿ ಚಂಪಯಿ ಅವರನ್ನು ಮಾತಾಡಿಸುವವರು ಯಾರೂ ಇರಲಿಲ್ಲ.

ಬಹಳ ದೊಡ್ಡ ತೀರ್ಮಾನ ತೆಗೆದುಕೊಳ್ಳುವ ಹಾಗಿದೆಯಲ್ಲವೇ ಎಂದು ಮೀಡಿಯಾದವರು ದಿಲ್ಲಿಯಲ್ಲಿ ಕೇಳಿದ್ದಕ್ಕೆ ಚಂಪಯಿ, ರಾಜಕಾರಣದ ಮಾತು ಬಿಟ್ಟು, ಮಗಳನ್ನು ಭೇಟಿಯಾಗಲು ಬಂದಿದ್ದೇನೆ ಎಂದು ಹೇಳಬೇಕಾಗಿ ಬಂದಿತ್ತು.

ಬಿಜೆಪಿಯ ಒಂದು ಇಷಾರೆಯಲ್ಲೇ ವಿಪಕ್ಷ ಸರಕಾರ ಬಿದ್ದುಹೋಗಬೇಕಿತ್ತಲ್ಲವೆ?

ಜಾರ್ಖಂಡ್‌ನಲ್ಲಿ ಅಂಥದ್ದು ಯಾವುದೂ ಸಂಭವಿಸಲಿಲ್ಲ.

ಚಂಪಯಿ ಸೊರೇನ್ ಜೆಎಂಎಂ ಬಿಟ್ಟು ಬಿಜೆಪಿಯನ್ನು ಹೊಗಳಲು ಶುರು ಮಾಡಿಬಿಟ್ಟಿದ್ದರು.

ಆದರೆ ಏನಾಯಿತು?

ತಮ್ಮ ಪಕ್ಷದಲ್ಲಿ ತಮಗೆ ಅವಮಾನವಾಯಿತು, ಶಾಸಕಾಂಗ ಪಕ್ಷದ ಸಭೆ ಕರೆಯುವುದಕ್ಕೂ ಅವಕಾಶ ಕೊಡದೆ

ರಾಜೀನಾಮೆ ನೀಡಲು ಸೂಚಿಸಲಾಯಿತು ಎಂದೆಲ್ಲ ಚಂಪಯಿ ಗೋಳಾಡಿದ್ದರು.

ಬಿಜೆಪಿ ಕೂಡ ನಿಮಗೆ ಅನ್ಯಾಯವಾಗಿದೆ. ಹೇಮಂತ್ ಸೊರೇನ್ ವಿರುದ್ಧ ನೀವು ದನಿಯೆತ್ತಲೇ ಬೇಕಿದೆ.

ನಿಮಗಾದ ಅವಮಾನಕ್ಕೆ ತಕ್ಕ ಉತ್ತರ ಕೊಡಬೇಕಿದೆ ಎಂದೆಲ್ಲ ಚಂಪಯಿ ಸೊರೇನ್ ಅವರನ್ನು ಹುರಿದುಂಬಿಸಿತ್ತು ಎನ್ನಲಾಗಿದೆ.

ಬಿಜೆಪಿ ಮುಖಂಡರು ಸಿಕ್ಕ ಸಿಕ್ಕಲ್ಲೆಲ್ಲ ಚಂಪಯಿ ಸೊರೇನ್‌ರನ್ನು ಹೊಗಳೋದು ಶುರುವಾಗಿತ್ತು.

ಜಾರ್ಖಂಡ್‌ನಲ್ಲಿ ಏನಾದರೂ ಕೆಲಸ ಆಗಿದ್ದರೆ ಅದು ಚಂಪಯಿ ಸೊರೇನ್ ಅವಧಿಯಲ್ಲೇ ಆಗಿದ್ದು ಎಂದು ಹೇಳಲು ಪ್ರಾರಂಭಿಸಿದ್ದರು ಬಿಜೆಪಿಯವರು. ಆದರೆ ಚಂಪಯಿ ಜೊತೆ ಯಾವ ಶಾಸಕರೂ ಬರಲಿಲ್ಲ ಎಂದು ಗೊತ್ತಾಗುತ್ತಲೇ ಬಿಜೆಪಿಗೆ ಆಸಕ್ತಿಯೇ ಹೊರಟುಹೋಗಿತ್ತು. ಇದರಿಂದ ಚಂಪಯಿ ಸ್ಥಿತಿ ಅತಂತ್ರವಾಗಿ ಹೋಯಿತು. ಬಿಜೆಪಿ ಸೇರಲು ಜೆಎಂಎಂನಿಂದ ಆಗಲೇ ಒಂದು ಕಾಲು ಹೊರಗಿಟ್ಟಂತಿದ್ದ ಅವರಿಗೆ ಬಿಜೆಪಿ ಕೈಕೊಡುತ್ತಿದ್ದಂತೆ ಮಾಡಿಕೊಂಡ ಯಡವಟ್ಟಿನ ಅರಿವಾದಂತಿತ್ತು.

ಯಾಕೆಂದರೆ ಅಗಲೇ ಅವರು ತಮ್ಮ ಪಕ್ಷದ ಬಗ್ಗೆ ಏನೆಲ್ಲ ಟೀಕೆ ಮಾಡಿಬಿಟ್ಟಿದ್ದರು. ಅಲ್ಲಿಂದ ಹೊರಬೀಳಲೂ ಆಗದ, ಉಳಿಯಲೂ ಆಗದ ಸ್ಥಿತಿ ತಂದುಕೊಂಡಿದ್ದಾರೆ.

ಅವರೆದುದು ಯಾವ ದಾರಿಯೂ ಕಾಣಿಸದೇ ಹೋಯಿತು.

ರಾಜಕೀಯ ಭವಿಷ್ಯ ಏನು ಎಂಬ ಪ್ರಶ್ನೆ ಮೂಡಿತು.

ಚಂಪಯಿ ಸೊರೇನ್ ಮತ್ತು ಹೇಮಂತ್ ಸೊರೇನ್ ನಡುವೆ ಯಾವುದೇ ಕೌಟುಂಬಿಕ ಸಂಬಂಧವಿಲ್ಲದಿದ್ದರೂ ಚಂಪಯಿ ಸೊರೇನ್ ಅವರು ಹೇಮಂತ್ ಸೊರೇನ್ ಮತ್ತು ಅವರ ತಂದೆ ಶಿಬು ಸೊರೇನ್‌ರವರ ಅತ್ಯಂತ ಆಪ್ತರ ಪಟ್ಟಿಯಲ್ಲಿ ದಶಕಗಳಿಂದ ಇದ್ದವರು.

ಸಚಿವರಾಗಿದ್ದ ಚಂಪಯಿ ಸೊರೇನ್ ಅವರನ್ನು ಹೇಮಂತ್ ಸೊರೇನ್ ಅವರನ್ನು ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಈ.ಡಿ. ಬಂಧಿಸಿದ ಬಳಿಕ ಜಾರ್ಖಂಡ್ ಸಿಎಂ ಮಾಡಲಾಯಿತು.

ಕುಟುಂಬದ ಆಪ್ತ, ಕಷ್ಟಕಾಲದಲ್ಲಿ ಪಕ್ಷ ಹಾಗೂ ಸರಕಾರವನ್ನು ಮುನ್ನಡೆಸಿ, ತನ್ನ ಬಿಡುಗಡೆ ಬಳಿಕ ಮತ್ತೆ ಹುದ್ದೆ ಬಿಟ್ಟು ಕೊಡುತ್ತಾರೆ ಎಂಬ ನಂಬಿಕೆಯಲ್ಲಿ ಚಂಪಯಿ ಸೊರೇನ್ ಅವರನ್ನು ಸಿಎಂ ಮಾಡಿದ್ದರು ಹೇಮಂತ್. ಆದರೆ ದಶಕಗಳ ನಂಬಿಕೆಗೆ ಅಧಿಕಾರ ಹುಳಿ ಹಿಂಡಿತು. ಆ ಹುಳಿ ಹಿಂಡುವಲ್ಲಿ ಬಿಜೆಪಿ ನಿರ್ಣಾಯಕ ಪಾತ್ರ ವಹಿಸಿತು.

ವಿಧಾನಸಭಾ ಚುನಾವಣೆಗೆ ಮೊದಲು ಜೆಎಂಎಂ ಪಕ್ಷ ಒಡೆದರೆ ಮಾತ್ರ ತನಗೆ ಅಧಿಕಾರ ಪಡೆಯಲು ಸಾಧ್ಯ ಎಂದು ಹೊಂಚು ಹಾಕಿತು. ಬಿಜೆಪಿಯ ಇಂತಹ ಮನೆ ಮುರುಕ ರಾಜಕೀಯ ಅದೆಷ್ಟು ರಾಜ್ಯಗಳಲ್ಲಿ ಈಗಾಗಲೇ ಯಶಸ್ವಿಯಾಗಿ ನಡೆದುಹೋಗಿದೆ. ಆ ಪಟ್ಟಿಗೆ ಜಾರ್ಖಂಡ್ ಕೂಡ ಸೇರುವುದರಲ್ಲಿತ್ತು.

ಆದರೆ ಕಾಲ ಬದಲಾಗಿದೆ, ಜೊತೆಗೆ ರಾಜಕೀಯ ಕೂಡ.

ತನ್ನ ಪಕ್ಷದ ಶಾಸಕರನ್ನು ತನ್ನ ಜೊತೆ ಉಳಿಸಿಕೊಂಡು ಬಿಜೆಪಿಗೆ ತಿರುಗೇಟು ನೀಡಿದ್ದಾರೆ ಹೇಮಂತ್ ಸೊರೇನ್ ಚಂಪಯಿ ಜೊತೆಗೆ ತನ್ನ ನಿಷ್ಠಾವಂತ ಶಾಸಕನೊಬ್ಬನನ್ನು ತಾನೇ ಕಳಿಸಿ ಚಂಪಯಿ ಏನೇನು ಮಾಡಲಿದ್ದಾರೆ, ಯಾವ್ಯಾವ ಶಾಸಕರನ್ನು ಸೆಳೆಯಲಿದ್ದಾರೆ ಎಂದು ಸಂಪೂರ್ಣ ಮಾಹಿತಿ ಪಡೆದುಕೊಂಡಿದ್ದರು ಹೇಮಂತ್. ಆ ಎಲ್ಲ ಶಾಸಕರನ್ನು ತಾನೇ ಸಂಪರ್ಕಿಸಿ ಅವರನ್ನು ಪಕ್ಷದಲ್ಲೇ ಉಳಿಯುವಂತೆ ಮಾಡಿ ಬಿಟ್ಟರು ಹೇಮಂತ್ ಸೊರೇನ್ ಅನೇಕ ರಾಜ್ಯಗಳಲ್ಲಿ ವಿಪಕ್ಷ ಸರಕಾರಗಳನ್ನು ಬೀಳಿಸಿದ್ದ ಬಿಜೆಪಿ ಈಗ ಮಾತ್ರ ಅಂಥ ಬಲ ಕಳೆದುಕೊಂಡಿರುವುದು ಈ ವಿದ್ಯಮಾನದಿಂದ ಸ್ಪಷ್ಟವಾಗಿದೆ. ಬಿಜೆಪಿ ಸೇರುವುದೆಂದರೆ ತುದಿಗಾಲ ಮೇಲೆ ಇರುತ್ತಿದ್ದ ನಾಯಕರೂ ಈಗ ಯೋಚಿಸಿ ನೋಡಿದರಾಯಿತು ಎಂಬ ಹಂತಕ್ಕೆ ಮುಟ್ಟಿದ್ದಾರೆ.

ಕೆಲವು ರಾಜ್ಯಗಳಲ್ಲಿನ ಚುನಾವಣೆಗಳಲ್ಲಿ ಬಿಜೆಪಿ ಸೋತಿದ್ದರೂ, ಆ ರಾಜ್ಯಗಳಲ್ಲಿನ ವಿಪಕ್ಷಗಳ ಸರಕಾರಗಳನ್ನು ಉರುಳಿಸುವಲ್ಲಿ ಅದು ಕಳೆದ ಹತ್ತು ವರ್ಷಗಳಲ್ಲಿ ಮತ್ತೆ ಮತ್ತೆ ಗೆಲ್ಲುತ್ತಲೇ ಬಂದಿತ್ತು. ವಿವಿಧ ರಾಜ್ಯಗಳಲ್ಲಿ ಚುನಾಯಿತ ನಾಯಕರನ್ನು ಗುರಿಯಾಗಿಸಿ ಈ.ಡಿ., ಸಿಬಿಐ, ಐಟಿಯಂಥವುಗಳನ್ನು ಬಿಜೆಪಿ ಬಳಸುತ್ತಲೇ ಬಂದಿತ್ತು. ಕಡೆಗೆ ರಾಜ್ಯಪಾಲರನ್ನೂ ತನ್ನ ಕೆಲಸಕ್ಕೆ ಬಿಜೆಪಿ ಉಪಯೋಗಿಸಿಕೊಳ್ಳುತ್ತದೆ.

ಆಪರೇಷನ್ ಕಮಲದ ಮೂಲಕ ಬಿಜೆಪಿ ಅಧಿಕಾರ ಹಿಡಿದಿದ್ದ ರಾಜ್ಯಗಳೆಂದರೆ, ಅರುಣಾಚಲ ಪ್ರದೇಶ (2016), ಗೋವಾ (2017), ಕರ್ನಾಟಕ (2019), ಮಧ್ಯಪ್ರದೇಶ (2020), ಮಹಾರಾಷ್ಟ್ರ (2022), ಬಿಹಾರ (2024).

ಬಿಹಾರದಲ್ಲಿ ನಿತೀಶ್ ಅವರನ್ನು ಮತ್ತೊಮ್ಮೆ ಎನ್‌ಡಿಎ ತೆಕ್ಕೆಗೆ ಸೆಳೆದ ಹೊತ್ತಲ್ಲೇ ಜಾರ್ಖಂಡ್‌ನಲ್ಲಿ ಹೇಮಂತ್ ಸೊರೇನ್ ಅವರನ್ನೂ ಸೆಳೆಯಲು ಬಿಜೆಪಿ ಯತ್ನಿಸಿತ್ತು. ಆದರೆ ಹೇಮಂತ್ ಸೊರೇನ್ ಮಣಿದಿರಲಿಲ್ಲ. ಕಡೆಗೆ ಅವರನ್ನು ಭೂ ಹಗರಣವೊಂದರ ನೆಪದಲ್ಲಿ ಜೈಲಿಗೆ ಕಳಿಸಲಾಗಿತ್ತು. ಬಿಡುಗಡೆಯಾಗಿ ಬಂದಿರುವ ಹೇಮಂತ್ ಸೊರೇನ್ ಮತ್ತೆ ಜಾರ್ಖಂಡ್ ಗದ್ದುಗೆ ಹಿಡಿದಿದ್ದಾರೆ.

ಕಳೆದ ಐದು ವರ್ಷಗಳಲ್ಲಿ ಜಾರ್ಖಂಡ್‌ನಲ್ಲಿ ಸರಕಾರವನ್ನು ಕೆಡಹುವ ಬಿಜೆಪಿಯ ಐದು ಪ್ರಯತ್ನಗಳೂ ವಿಫಲವಾಗಿವೆ.

ಈಗ ಚಂಪಯಿ ಸೊರೇನ್ ಅವರನ್ನು ಬಳಸಿಕೊಂಡು ಹೇಮಂತ್ ಸೊರೇನ್ ಸರಕಾರಕ್ಕೆ ಕುತ್ತು ತರಲು ಬಿಜೆಪಿ ಮುಂದಾಗಿತ್ತೆಂಬುದು ಸ್ಪಷ್ಟ.

ಚಂಪಯಿ ಸೊರೇನ್ ಬಿಜೆಪಿ ಸೇರಲಿದ್ದಾರೆ. ಬಿಜೆಪಿ ಸಹ ನಮ್ಮ ಶಾಸಕರನ್ನು ಸೆಳೆಯಲು ಪ್ರಯತ್ನ ನಡೆಸಿದೆ ಎಂದು ಹೇಮಂತ್ ಸೊರೇನ್ ಬಿಜೆಪಿ ಮತ್ತು ಚಂಪಯಿ ವಿರುದ್ಧ ಟೀಕೆ ಮಾಡಿದ್ದರು.ಅದಾದ ಬಳಿಕ ಹೇಮಂತ್ ಸೊರೇನ್ ಅವರೇ ತಮ್ಮ ಶಾಸಕರ ಜೊತೆ ಪ್ರತ್ಯೇಕ ಮಾತುಕತೆ ನಡೆಸಿ ಇಡೀ ಸ್ಥಿತಿಯನ್ನು ಹತೋಟಿಗೆ ತೆಗೆದುಕೊಂಡರು. ಬಿಜೆಪಿಯ ಆಟಕ್ಕೆ ಬ್ರೇಕ್ ಹಾಕಿದರು.

ಈಗ ಚಂಪಯಿ ಸೊರೇನ್ ತಮ್ಮದೇ ರಾಜಕೀಯ ಪಕ್ಷ ಆರಂಭಿಸುವ ಬಗ್ಗೆ ಹೇಳಿದ್ದಾರೆ. ಇದರ ಹಿಂದೆಯೂ ಬಿಜೆಪಿಯೇ ಇದೆ ಎನ್ನಲಾಗುತ್ತಿದೆ. ಚಂಪಯಿ ಸೊರೇನ್ ಅವರನ್ನು ಮುಂದಿಟ್ಟುಕೊಂಡು ಹಿಂದಿನಿಂದ ತನ್ನ ರಾಜಕೀಯ ದಾಳಗಳನ್ನು ಉರುಳಿಸುವುದು ಅದರ ಲೆಕ್ಕಾಚಾರವೆನ್ನಲಾಗುತ್ತಿದೆ.

ಹೊಸ ಪಕ್ಷಕ್ಕಾಗಿ ಚಂಪಯಿ ಸೊರೇನ್‌ಗೆ ಬೇಕಿರುವ ಸಂಪನ್ಮೂಲವನ್ನೂ ಕೂಡ ದಿಲ್ಲಿಯಿಂದಲೇ ಒದಗಿಸುವ ಮಾತಾಗಿದೆ ಎಂದು ಹೇಳಲಾಗುತ್ತಿದೆ.

ಹೊಸ ಪಕ್ಷದ ಬಗ್ಗೆ ಹೇಳಿರುವ ಚಂಪಯಿ, ಒಂದು ವಾರದೊಳಗೆ ತಮ್ಮ ಮುಂದಿನ ನಡೆ ಬಗ್ಗೆ ಸ್ಪಷ್ಟ ಚಿತ್ರಣ ಹೊರಬೀಳಲಿದೆ ಎಂದು ಹೇಳಿದ್ದಾರೆ.

ಸಿಎಂ ಹುದ್ದೆಯಿಂದ ಇಳಿದ ಬಳಿಕ, ಅವಮಾನವಾಗಿದೆ, ಆತ್ಮಗೌರವಕ್ಕೆ ಧಕ್ಕೆಯಾಗಿದೆ ಎಂದಿದ್ದ ಚಂಪಯಿ ಸೊರೇನ್, ಈಗ ಬಿಜೆಪಿ ತನ್ನನ್ನು ಒಳಗೂ ಸೇರಿಸಿಕೊಳ್ಳದೆ, ಹೊರಗೂ ಸ್ವತಂತ್ರವಾಗಿ ಇರಲು ಬಿಡದೆ ಇರುವ ಸ್ಥಿತಿಯ ಬಗ್ಗೆ ಏನೂ ಹೇಳುತ್ತಿಲ್ಲ.

ಆಪರೇಷನ್ ಕಮಲದ ಮೂಲಕ ಆಟವಾಡಿಬಿಡುವ ಬಿಜೆಪಿಯ ಭ್ರಮೆ ಕಳಚಿಬೀಳುತ್ತಿದೆ. ಈ ಹಂತದಲ್ಲಿ, ಈಗ ನಡೆಯಲಿರುವ ನಾಲ್ಕು ರಾಜ್ಯಗಳ ಚುನಾವಣೆಗಳು ಬಿಜೆಪಿ ಪಾಲಿಗೆ ಇನ್ನೂ ಗಂಭೀರ ಸ್ಥಿತಿಯನ್ನು ತಂದಿಡುವ ಲಕ್ಷಣಗಳೂ ಕಾಣಿಸತೊಡಗಿವೆ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಎಸ್. ಸುದರ್ಶನ್

contributor

Similar News