ಬಹರಾಯಿಚ್ ಹಿಂಸಾಚಾರಕ್ಕೆ ಪೊಲೀಸರದೇ ಕುಮ್ಮಕ್ಕಿತ್ತೆ?!

‘ದೈನಿಕ್ ಭಾಸ್ಕರ್’ನ ಶುಭಂ ಮತ್ತು ಶಿವಂ ಶ್ರೀವಾಸ್ತವ್ ಅವರ ವರದಿ ಸ್ಫೋಟಕ ವಿವರಗಳನ್ನು ಹೊರಗೆಳೆದಿದೆ. ಇಬ್ಬರೂ ವರದಿಗಾರರು ಮಹಾರಾಜ್‌ಗಂಜ್ ಮತ್ತು ಅದರ ಆಸುಪಾಸಿನ ಹಳ್ಳಿಗಳಲ್ಲಿ ನಡೆಸಿದ ತನಿಖೆಯ ಬಳಿಕ ಗೊತ್ತಾಗಿರುವ ಸತ್ಯ ಅದು. ಬಹರಾಯಿಚ್‌ನ ಬೆಡ್ವಾ ಗ್ರಾಮದಿಂದ ‘ದೈನಿಕ್ ಭಾಸ್ಕರ್’ ಮಾಡಿರುವ ಸ್ಫೋಟಕ ವರದಿ ಅದಾಗಿದೆ. ಅಕ್ಟೋಬರ್ 14ರಂದು ಮಹಾರಾಜ್‌ಗಂಜ್‌ನಲ್ಲಿ ನಡೆದ ಹಿಂಸಾಚಾರದಲ್ಲಿ ಭಾಗಿಯಾಗಿರುವುದನ್ನು ಇಬ್ಬರು ಒಪ್ಪಿಕೊಂಡಿರುವುದು ವೀಡಿಯೊದಲ್ಲಿದೆ. ಹಿಂಸಾಚಾರ ಪೂರ್ವ ಯೋಜಿತವಾಗಿತ್ತು ಎಂಬುದನ್ನು ಅವರಿಬ್ಬರೂ ಬಹಿರಂಗಪಡಿಸಿದ್ದಾರೆ. ದಾಳಿ ನಡೆಸಲು ಪೊಲೀಸರೇ ಎರಡು ಗಂಟೆಗಳ ಕಾಲಾವಕಾಶ ನೀಡಿದ್ದರೆಂಬ ಮಾಹಿತಿಯಂತೂ ಆಘಾತಕಾರಿಯಾಗಿದೆ.

Update: 2024-10-24 07:44 GMT
Editor : Thouheed | Byline : ಎನ್. ಕೇಶವ್

ಬಹರಾಯಿಚ್ ಹಿಂಸಾಚಾರ ನಡೆದ ಐದು ದಿನಗಳ ಬಳಿಕ ಬಿಜೆಪಿ ಶಾಸಕ ಸುರೇಶ್ವರ್ ಸಿಂಗ್ ತಮ್ಮದೇ ಪಕ್ಷದ 7 ನಾಯಕರ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ.

ಇಡೀ ಬಹರಾಯಿಚ್ ಹಿಂಸಾಚಾರ ಏನೇನೋ ಕಥೆಗಳೊಂದಿಗೆ ಹೊಸ ಹೊಸ ರೂಪದಲ್ಲಿ ಸುದ್ದಿಯಾಗುತ್ತಿದೆ. ಈ ಪ್ರಕರಣದ ಆರೋಪಿಗಳು ಬೇರೆ ಸಮುದಾಯದವರಾಗಿದ್ದರೆ ಇಷ್ಟೊತ್ತಿಗಾಗಲೇ ಯಾವ ಕ್ರಮ ತೆಗೆದುಕೊಳ್ಳುತ್ತಿದ್ದರು ಎಂಬುದು ಕೂಡ ಸುಲಭವಾಗಿ ಊಹಿಸಬಹುದಾದ ಸಂಗತಿ.

ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾದ ಬಿ.ಆರ್. ಗವಾಯಿ ಮತ್ತು ಕೆ.ವಿ. ವಿಶ್ವನಾಥನ್ ಅವರ ಪೀಠ, ತನ್ನ ಆದೇಶವನ್ನು ಉತ್ತರ ಪ್ರದೇಶ ಸರಕಾರ ಉಲ್ಲಂಘಿಸಲು ಬಯಸಿದರೆ ಅದು ಅದರ ರಿಸ್ಕ್ ಆಗಲಿದೆ ಎಂದು ಎಚ್ಚರಿಸಿದೆ.

ಬಹರಾಯಿಚ್ ಹಿಂಸಾಚಾರದ ಬಳಿಕ ಆರೋಪಿಗಳ ಒಡೆತನದ ಕಟ್ಟಡಗಳ ತೆರವಿಗೆ ಸರಕಾರ ಮುಂದಾಗಿರುವುದರ ಬಗ್ಗೆ ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆ ನಡೆದಿತ್ತು.

ಬಹರಾಯಿಚ್ ಹಿಂಸಾಚಾರ ಪ್ರಕರಣದ ಆರೋಪಿಗಳ ಒಡೆತನದ ಕಟ್ಟಡಗಳನ್ನು ತೆರವುಗೊಳಿಸುವ ಕುರಿತ ನೋಟೀಸ್‌ಗೆ ಸಂಬಂಧಿಸಿ ಅಕ್ಟೋಬರ್ 23ರವರೆಗೆ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳುವುದಿಲ್ಲ ಎಂದು ಉತ್ತರ ಪ್ರದೇಶ ಸರಕಾರ ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ.

ಈ ನಡುವೆ, ಬಹರಾಯಿಚ್ ಹಿಂಸಾಚಾರ ಪ್ರಕರಣದಲ್ಲಿ ಹೊಸ ಟ್ವಿಸ್ಟ್ ಕಂಡುಬಂದಿದೆ. ಬಿಜೆಪಿ ಶಾಸಕ ಸುರೇಶ್ವರ್ ಸಿಂಗ್ ತಮ್ಮದೇ ಪಕ್ಷದ 7 ನಾಯಕರ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ. ಯುವ ಮೋರ್ಚಾ ನಗರಾಧ್ಯಕ್ಷ ಅರ್ಪಿತ್ ಶ್ರೀವಾಸ್ತವ್ ಸೇರಿದಂತೆ 7 ಮಂದಿ ಕಾರ್ಮಿಕರ ವಿರುದ್ಧ ಗಂಭೀರ ಸೆಕ್ಷನ್‌ಗಳ ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.

ಎಫ್‌ಐಆರ್ ಪ್ರಕಾರ, ಮಹಾರಾಜ್‌ಗಂಜ್‌ನಲ್ಲಿನ ಹಿಂಸಾಚಾರದಲ್ಲಿ ಸಾವನ್ನಪ್ಪಿದ ರಾಮ್ ಗೋಪಾಲ್ ಮಿಶ್ರಾ ದೇಹವನ್ನು ಬಹರಾಯಿಚ್ ವೈದ್ಯಕೀಯ ಕಾಲೇಜಿನ ಹೊರಗಿನ ಗೇಟ್‌ನಲ್ಲಿ ಇರಿಸಿ ಗುಂಪು ಪ್ರತಿಭಟನೆ ನಡೆಸುತ್ತಿತ್ತು. ಆಗ ಶಾಸಕ ತಮ್ಮ ಅಂಗರಕ್ಷಕ ಮತ್ತು ಇತರರೊಂದಿಗೆ ಅಲ್ಲಿಗೆ ಬಂದಾಗ ಕೆಲ ಕಿಡಿಗೇಡಿಗಳು ಅವರ ವಿರುದ್ಧ ಘೋಷಣೆಗಳನ್ನು ಕೂಗಲು ಪ್ರಾರಂಭಿಸಿದರು.

ಅವರಲ್ಲಿ ಬಿಜೆಪಿ ಯುವ ಮೋರ್ಚಾ ನಗರಾಧ್ಯಕ್ಷ ಅರ್ಪಿತ್ ಶ್ರೀವಾಸ್ತವ್, ಬಿಜೆಪಿ ಕಾರ್ಯಕರ್ತರಾದ ಅನುಜ್ ಸಿಂಗ್ ರೈಕ್ವಾರ್, ಶುಭಂ ಮಿಶ್ರಾ, ಕುಶ್ಮೇಂದ್ರ ಚೌಧರಿ, ಮನೀಶ್ ಚಂದ್ರ ಶುಕ್ಲಾ, ಪುಂಡರೀಕ್ ಪಾಂಡೆ, ಸುಂಧಾಶು ಸಿಂಗ್ ರಾಣಾ ಮತ್ತು ಇನ್ನಷ್ಟು ಅಪರಿಚಿತರು ಇದ್ದರು ಎಂದು ಎಫ್‌ಐಆರ್‌ನಲ್ಲಿ ಹೇಳಲಾಗಿದೆ.

ಶವವನ್ನು ಶವಾಗಾರದಲ್ಲಿಟ್ಟು ಶಾಸಕ ಮತ್ತು ಜಿಲ್ಲಾಧಿಕಾರಿ ಮುಂದೆ ಹೋದ ಕೂಡಲೇ ಕಾರು ನಿಲ್ಲಿಸಿ ಕೊಲೆ ಮಾಡುವ ಉದ್ದೇಶದಿಂದ ಜನರು ಕಲ್ಲು ತೂರಾಟ ನಡೆಸಿದ್ದಾರೆ ಎಂದು ಎಫ್‌ಐಆರ್‌ನಲ್ಲಿ ಹೇಳಲಾಗಿದೆ.

ಗುಂಪಿನಿಂದ ಗುಂಡಿನ ದಾಳಿಯೂ ನಡೆದಿದ್ದು, ಕಾರಿನ ಗಾಜು ಒಡೆದಿದೆ. ಈ ಘಟನೆಯಲ್ಲಿ ತಮ್ಮ ಪುತ್ರ ಅಖಂಡ ಪ್ರತಾಪ್ ಸಿಂಗ್ ಕೂದಲೆಳೆ ಅಂತರದಲ್ಲಿ ಪಾರಾಗಿರುವುದಾಗಿ ಶಾಸಕ ತಮ್ಮ ಎಫ್‌ಐಆರ್‌ನಲ್ಲಿ ಆರೋಪಿಸಿದ್ದಾರೆ.

ಇದಿಷ್ಟೂ ರಾತ್ರಿ 8ರಿಂದ 10ರ ಸಮಯದಲ್ಲಿ ನಡೆದಿದೆ. ಸಿಸಿಟಿವಿ ದೃಶ್ಯಾವಳಿಯಿಂದ ಘಟನೆ ಸ್ಪಷ್ಟವಾಗಿದೆ ಎಂದು ಶಾಸಕ ತಮ್ಮ ದೂರಿನಲ್ಲಿ ಹೇಳಿದ್ದಾರೆ.

ಆರೋಪಿಗಳ ವಿರುದ್ಧ ಪೊಲೀಸರು ಗಲಭೆ, ಮಾರಕಾಸ್ತ್ರಗಳಿಂದ ಹಲ್ಲೆ, ಕೊಲೆ ಯತ್ನ, ವೈಯಕ್ತಿಕ ಸುರಕ್ಷತೆಗೆ ಧಕ್ಕೆ ಮತ್ತು ಹಲ್ಲೆ ಸೇರಿದಂತೆ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ತಾನು ಯಾರ ಮೇಲೆಯೂ ಗಲಭೆಗೆ ಕಾರಣರಾಗಿದ್ದಾರೆಂಬ ಆರೋಪ ಮಾಡಿಲ್ಲ ಎಂಬ ಅವರ ಹೇಳಿಕೆ ‘ದೈನಿಕ್ ಭಾಸ್ಕರ್’ನಲ್ಲಿ ಪ್ರಕಟವಾಗಿದೆ.

ಇದೇ ಥರದ ದಾಳಿ ಬೇರೆ ಸಮುದಾಯದವರಿಂದ ನಡೆದಿದ್ದರೆ ಅದರ ಮನೆಗಳ ಮೇಲೆಲ್ಲ ಇಷ್ಟು ಹೊತ್ತಿಗೆ ಬುಲ್ಡೋಜರ್ ಕಾರ್ಯಾಚರಣೆ ನಡೆದಿರುತ್ತಿತ್ತು. ಆದರೆ ಬಿಜೆಪಿ ಶಾಸಕನ ಮೇಲೆ ಗುಂಡಿನ ದಾಳಿ ನಡೆಸಿದ ಆರೋಪ ಹೊತ್ತ ಈ 7 ಮಂದಿಯ ಮೇಲೆ ಏಕೆ ಕ್ರಮ ತೆಗೆದುಕೊಳ್ಳುತ್ತಿಲ್ಲ ಎಂಬ ಪ್ರಶ್ನೆ ಎದ್ದಿದೆ.

ಬಿಜೆಪಿಯ ವಿರುದ್ಧ ತಮ್ಮ ಆರೋಪವಿಲ್ಲ ಎಂದು ಸುರೇಶ್ವರ್ ಸಿಂಗ್ ಸ್ಪಷ್ಟಪಡಿಸಿದ್ದಾರೆ. ಬಿಜೆಪಿ ಯುವ ಮೋರ್ಚಾ ನಗರಾಧ್ಯಕ್ಷನ ಮೇಲೆ ಆರೋಪ ಹೊರಿಸಿರುವ ಅವರು, ಆ ಗುಂಪಿನಲ್ಲಿದ್ದ ಹೆಚ್ಚಿನವರು ಕುಡಿದ ಮತ್ತಿನಲ್ಲಿದ್ದರು ಎಂದಿದ್ದಾರೆ.

ಆದರೆ ಸುರೇಶ್ವರ್ ಸಿಂಗ್ ಆರೋಪಕ್ಕೆ ಸಂಬಂಧಿಸಿ ಮೀಡಿಯಾಗಳೇಕೆ ಸುಮ್ಮನಿವೆ ಎಂಬುದು ಈಗ ಎದ್ದಿರುವ ಪ್ರಶ್ನೆ. ಸುರೇಶ್ವರ್ ಸಿಂಗ್ ಸುದ್ದಿಗೋಷ್ಠಿಯಲ್ಲಿ ಅಷ್ಟೊಂದು ಚಾನೆಲ್‌ಗಳ ಮೈಕ್‌ಗಳಿದ್ದರೂ ಯಾವ ಚಾನೆಲ್ ಕೂಡ ಅವರು ಆರೋಪ ಮಾಡಿರುವ ಬಿಜೆಪಿ ನಾಯಕರ ವಿರುದ್ಧವಾಗಿ ಮಾತನ್ನೇ ಆಡುತ್ತಿಲ್ಲ. ಘಟನೆಯಲ್ಲಿ ಅವರ ಕಾರನ್ನು ಸುಡುವ ಯತ್ನವೂ ಆಗಿದ್ದರ ಬಗ್ಗೆ ಆರೋಪಿಸಲಾಗಿದೆ. ಶವಾಗಾರದ ಬಾಗಿಲನ್ನೂ ದುಷ್ಕರ್ಮಿಗಳ ಗುಂಪು ಒಡೆದು ಹಾಕಿದೆ ಎಂದು ಸುರೇಶ್ವರ್ ಸಿಂಗ್ ಆರೋಪಿಸಿದ್ದಾರೆ. ಶಾಸಕನ ಪುತ್ರನ ಮೇಲೆ ಗುಂಡಿನ ದಾಳಿ ಆಯಿತೆನ್ನಲಾಗಿದೆ. ಪ್ರಾಣಕ್ಕೇ ಕುತ್ತು ಬಂದಿದ್ದರೆ ಎಂಥ ಗಂಭೀರ ಘಟನೆಯಾಗುತ್ತಿತ್ತಲ್ಲವೆ?

ಇದರ ಹಿಂದೆ ದೊಡ್ಡ ಸಂಚೇ ಇತ್ತೇ ಎಂಬ ಅನುಮಾನವೂ ಮೂಡದೇ ಇರುವುದಿಲ್ಲ. ಬಹರಾಯಿಚ್‌ನಲ್ಲಿ ಹಿಂಸಾಚಾರ ನಡೆದಾಗಿನಿಂದಲೂ ದ್ವೇಷ ಹರಡುವ ಕೆಲಸವೇ ನಡೆಯುತ್ತಿದೆ. ಹಿಂಸಾಚಾರದಲ್ಲಿ ಮೃತ ರಾಮ್ ಗೋಪಾಲ್ ಮಿಶ್ರಾನನ್ನು ಚಿತ್ರಹಿಂಸೆ ನೀಡಿ ಕೊಲ್ಲಲಾಗಿದೆ ಎಂದು ಉತ್ಪ್ರೇಕ್ಷಿಸಿ ಹೇಳಲು ತಪ್ಪು ತಪ್ಪು ವಿವರಗಳನ್ನು ಹಬ್ಬಿಸಲಾಗಿದೆ. ಉಗುರುಗಳನ್ನು ಕೀಳಲಾಗಿದೆ, ಚಾಕು ಮತ್ತು ತಲ್ವಾರ್‌ನಿಂದ ಹಲ್ಲೆ ನಡೆದಿದೆ, ಕೊಲ್ಲುವ ಮುಂಚೆ ಆತನಿಗೆ ಇಲೆಕ್ಟ್ರಿಕ್ ಶಾಕ್ ನೀಡಲಾಗಿದೆ, ಅದರಿಂದಾಗಿ ಮೆದುಳಿನಲ್ಲಿ ರಕ್ತಸ್ರಾವವಾಗಿದೆ ಎಂದೆಲ್ಲ ಸುಳ್ಳು ಸುಳ್ಳೇ ಮಾಹಿತಿಗಳನ್ನು ಹರಡಲಾಗಿದೆ.

ಅದೇ ಮಾಹಿತಿಗಳನ್ನು ಎಷ್ಟು ಸರಿ, ಎಷ್ಟು ಸುಳ್ಳು ಎಂಬುದರ ವಿವೇಚನೆಯನ್ನೇ ಮಾಡದೆ ಆಜ್‌ತಕ್‌ನ ಸುಧೀರ್ ಚೌಧರಿ ಯಥಾವತ್ತಾಗಿ ಪ್ರೈಮ್ ಟೈಮ್ ಶೋನಲ್ಲಿ ಹೇಳಿರುವುದು ನಿಜಕ್ಕೂ ಆಘಾತಕಾರಿ.

ಇತರ ಚಾನೆಲ್‌ಗಳೂ ಇದೇ ಥರದ ಹಸಿ ಸುಳ್ಳು ವರದಿಯನ್ನೇ ಮಾಡಿವೆ. ಮಡಿಲ ಮೀಡಿಯಾಗಳ ವರದಿಗಾರಿಕೆ ಭಾಷೆ ಎಂಥದಾಗಿಬಿಟ್ಟಿದೆಯೆಂದರೆ, ಅದು ವೀಕ್ಷಕರಿಗೆ ಕಲ್ಪನೆ ಮಾಡಿಕೊಳ್ಳುವುದನ್ನು ಕಲಿಸಿದೆ. ಹೀಗೆ ಕಲ್ಪನೆ ಮಿತಿಮೀರಿ, ದ್ವೇಷ ಹರಡುವ ಮಟ್ಟ ಮುಟ್ಟುತ್ತದೆ.

ಕಡೆಗೆ ಬಹರಾಯಿಚ್ ಜಿಲ್ಲೆಯ ಪೊಲೀಸರು ಖುದ್ದು ಪ್ರಕಟಣೆ ಹೊರಡಿಸಿ, ಸಾಮಾಜಿಕ ಸೌಹಾರ್ದ ಕೆಡುವ ಇಂತಹ ಯಾವ ವದಂತಿಗಳಿಗೂ ಕಿವಿಗೊಡಬೇಡಿ ಎಂದಿದ್ದಾರೆ.

ಇಲೆಕ್ಟ್ರಿಕ್ ಶಾಕ್ ನೀಡಲಾಗಿದೆ, ಉಗುರುಗಳನ್ನು ಕೀಳಲಾಗಿದೆ, ಕತ್ತಿಯಿಂದ ಹಲ್ಲೆ ಮಾಡಲಾಗಿದೆ ಎಂದೆಲ್ಲ ಹಿಂದೂ ವ್ಯಕ್ತಿಯ ಸಾವಿನ ಬಗ್ಗೆ ಹರಡಿರುವ ಮಾಹಿತಿ ಸಂಪೂರ್ಣ ಸುಳ್ಳು ಎಂದು ಪೊಲೀಸರು ತಮ್ಮ ಅಪೀಲಿನಲ್ಲಿ ಸ್ಪಷ್ಟಪಡಿಸಿದ್ದಾರೆ. ಇದೆಲ್ಲವೂ ಸಾಮಾಜಿಕ ಸೌಹಾರ್ದ ಹಾಳು ಮಾಡುವ ಉದ್ದೇಶದಿಂದ ಹರಡಲಾಗಿರುವ ತಪ್ಪು ಮಾಹಿತಿಗಳಾಗಿದ್ದು, ಯಾವುದೂ ಸತ್ಯವಲ್ಲ ಎಂದಿದ್ದಾರೆ.

ಗುಂಡಿಕ್ಕಿ ಕೊಲ್ಲಲಾಗಿರುವುದು ಪೋಸ್ಟ್ ಮಾರ್ಟಂ ವರದಿಯಿಂದ ಗೊತ್ತಾಗಿದೆ. ಯಾರೂ ಈ ದ್ವೇಷ ಹರಡುವ ಸುಳ್ಳು ಮಾಹಿತಿಗಳಿಗೆ ಕಿವಿಗೊಡಬೇಡಿ ಎಂದು ಪೊಲೀಸರು ಮನವಿ ಮಾಡಿಕೊಂಡಿದ್ಧಾರೆ.

ಆದರೆ ಪೊಲೀಸರು ಈ ಪ್ರಕಟಣೆಯಲ್ಲಿ ಮೀಡಿಯಾ ಎನ್ನದೆ, ಸೋಷಿಯಲ್ ಮೀಡಿಯಾ ಎಂದಿದ್ದಾರೆ.

ಯಾವುದೇ ಟಿವಿ ವಾಹಿನಿಯ ಹೆಸರನ್ನು ಉಲ್ಲೇಖಿಸಿಲ್ಲ. ಯಾವುದೇ ಆ್ಯಂಕರ್ ಹೆಸರನ್ನೂ ಉಲ್ಲೇಖಿಸಿಲ್ಲ.

ಇವೆಲ್ಲದರ ನಡುವೆಯೇ ಬಿಜೆಪಿ ನಾಯಕಿ ನೂಪುರ್ ಶರ್ಮಾ ಕೂಡ ಇದೇ ವಿಚಾರವಾಗಿ ಮಾತಾಡಿ ಸುದ್ದಿಯಾದರು. ಅವರ ಕಾಲ್ಪನಿಕ ಕಥೆಗೆ ಇನ್ನೂ ಭಯಾನಕ ವಿವರಗಳು ಸೇರಿದ್ದವು. ಕಡೆಗೆ ತಮ್ಮ ಹೇಳಿಕೆಗಾಗಿ ಕ್ಷಮೆ ಕೇಳುವಾಗ, ಮೀಡಿಯಾದಲ್ಲಿ ಬಂದದ್ದನ್ನು ಗಮನಿಸಿದ್ದೆ ಎಂದಿದ್ದರು. ಕಡೇ ಪಕ್ಷ ಅವರು ಮಿಡಿಯಾಗಳಲ್ಲಿ ಹೀಗೆ ಸುಳ್ಳು ಮಾಹಿತಿ ಪ್ರಸಾರವಾಗಿದೆ ಎಂದಾದರೂ ಒಪ್ಪಿಕೊಂಡರು. ಆದರೆ ಅವರು ಕೂಡ ಯಾವ ಚಾನೆಲ್‌ನಲ್ಲಿ ಅಂತಹ ಸುದ್ದಿ ನೋಡಿದರು ಅಥವಾ ಯಾವ ಪತ್ರಿಕೆಯಲ್ಲಿ ಅಂತಹ ಸುಳ್ಳುಗಳನ್ನು ಓದಿದರು ಎಂಬುದನ್ನು ಹೇಳಿಲ್ಲ.

ಸುಳ್ಳುಗಳನ್ನು ಹೇಳಿಬಿಡುವುದು, ಆನಂತರ ಏನೇನೂ ಗೊತ್ತೇ ಇಲ್ಲವೆಂಬಂತೆ ಮೌನವಾಗಿಬಿಡುವುದು ಇವೆರಡೂ ಮೀಡಿಯಾಗಳು ತೋರುತ್ತಿರುವ ಅತ್ಯಂತ ನೀಚತನ ಮತ್ತು ಹೊಣೆಗೇಡಿತನ.

ಮುಸ್ಲಿಮ್ ಸಮುದಾಯದ ವಿರುದ್ಧ ದ್ವೇಷ ಹರಡುವುದಷ್ಟೇ ಅವುಗಳ ಪರಮ ಗುರಿ ಮತ್ತು ಅದಕ್ಕಾಗಿ ಅವು ಎಂತಹ ಅತಿಗೂ ಹೋಗುತ್ತವೆ.

ಆದರೆ ಬಿಜೆಪಿ ಶಾಸಕ ತನ್ನದೇ ಪಕ್ಷದ ನಾಯಕರ ವಿರುದ್ಧ ಕೇಸ್ ಹಾಕಿದರೆ, ಆ ಆರೋಪಿಗಳ ವಿರುದ್ಧ ಏಕೆ ಈ ಚಾನೆಲ್‌ಗಳು ಮಾತನಾಡುತ್ತಿಲ್ಲ?

ಅವರ ಜಾಗದಲ್ಲಿ ಮುಸ್ಲಿಮ್ ವ್ಯಕ್ತಿಗಳಿದ್ದಿದ್ದರೆ ಇದೇ ಚಾನೆಲ್‌ಗಳು ಹೇಗೆ ಮುಗಿಬಿದ್ದು ಏನೇನೆಲ್ಲ ತೀರ್ಮಾನ ಕೊಡುತ್ತಿದ್ದವು? ಹೇಗೇಗೆಲ್ಲಾ ಫರ್ಮಾನು ಹೊರಡಿಸುತ್ತಿದ್ದವು?

ಸುರೇಶ್ವರ್ ಸಿಂಗ್ ದಾಖಲಿಸಿರುವ ಎಫ್‌ಐಆರ್‌ನಲ್ಲಿರುವ ಅರ್ಪಿತ್ ಶ್ರೀವಾಸ್ತವ್ ಹೆಸರು ಬಿಟ್ಟರೆ ಉಳಿದ ಆರೋಪಿಗಳನ್ನೆಲ್ಲ ಮಾಧ್ಯಮಗಳು ಬಿಜೆಪಿ ಕಾರ್ಯಕರ್ತರು ಎಂದು ಮಾತ್ರ ಹೇಳಿವೆ.

ಯಾವ ಮೀಡಿಯಾ ಕೂಡ ಅರ್ಪಿತ್ ಶ್ರಿವಾಸ್ತವ್ ಫೋಟೊವನ್ನು ಪ್ರಕಟಿಸಿಲ್ಲ ಎನ್ನಲಾಗುತ್ತಿದೆ.

ಆರೋಪ ಬಂದಿರುವ ಬಗ್ಗೆ ಆತನ ಪ್ರತಿಕ್ರಿಯೆ ಕೂಡ ಮೀಡಿಯಾಗಳಲ್ಲಿ ಇಲ್ಲ.

‘ದೈನಿಕ್ ಭಾಸ್ಕರ್’ನಲ್ಲಿ ಬಂದಿರುವ ಒಂದು ವೀಡಿಯೊ ಮತ್ತು ವರದಿಯನ್ನು ಎಸ್‌ಪಿ ನಾಯಕ ಅಖಿಲೇಶ್ ಯಾದವ್ ಟ್ವೀಟ್ ಮಾಡಿದ್ದಾರೆ. ಅದೇ ವೀಡಿಯೊವನ್ನು ಕಾಂಗ್ರೆಸ್ ನಾಯಕಿ ಸುಪ್ರಿಯಾ ಶ್ರಿನೇತ್ ಕೂಡ ಟ್ವೀಟ್ ಮಾಡಿದ್ದಾರೆ. ಈ ಆರೋಪ ನಿಜವೇ ಸುಳ್ಳೇ ಎಂಬುದನ್ನು ಪೊಲೀಸರು ತಕ್ಷಣ ಬಹಿರಂಗಪಡಿಸುವ ಅಗತ್ಯವಿತ್ತು ಎಂದು ಪ್ರತಿಪಾದಿಸಲಾಗಿದೆ.

ಇದೇ ವೇಳೆ, ‘ದೈನಿಕ್ ಭಾಸ್ಕರ್’ನ ಶುಭಂ ಮತ್ತು ಶಿವಂ ಶ್ರೀವಾಸ್ತವ್ ಅವರ ವರದಿ ಸ್ಫೋಟಕ ವಿವರಗಳನ್ನು ಹೊರಗೆಳೆದಿದೆ. ಇಬ್ಬರೂ ವರದಿಗಾರರು ಮಹಾರಾಜ್‌ಗಂಜ್ ಮತ್ತು ಅದರ ಆಸುಪಾಸಿನ ಹಳ್ಳಿಗಳಲ್ಲಿ ನಡೆಸಿದ ತನಿಖೆಯ ಬಳಿಕ ಗೊತ್ತಾಗಿರುವ ಸತ್ಯ ಅದು.

ಬಹರಾಯಿಚ್‌ನ ಬೆಡ್ವಾ ಗ್ರಾಮದಿಂದ ‘ದೈನಿಕ್ ಭಾಸ್ಕರ್’ ಮಾಡಿರುವ ಸ್ಫೋಟಕ ವರದಿ ಅದಾಗಿದೆ.

ಅಕ್ಟೋಬರ್ 14ರಂದು ಮಹಾರಾಜ್‌ಗಂಜ್‌ನಲ್ಲಿ ನಡೆದ ಹಿಂಸಾಚಾರದಲ್ಲಿ ಭಾಗಿಯಾಗಿರುವುದನ್ನು ಇಬ್ಬರು ಒಪ್ಪಿಕೊಂಡಿರುವುದು ವೀಡಿಯೊದಲ್ಲಿದೆ. ಹಿಂಸಾಚಾರ ಪೂರ್ವ ಯೋಜಿತವಾಗಿತ್ತು ಎಂಬುದನ್ನು ಅವರಿಬ್ಬರೂ ಬಹಿರಂಗಪಡಿಸಿದ್ದಾರೆ. ದಾಳಿ ನಡೆಸಲು ಪೊಲೀಸರೇ ಎರಡು ಗಂಟೆಗಳ ಕಾಲಾವಕಾಶ ನೀಡಿದ್ದರೆಂಬ ಮಾಹಿತಿಯಂತೂ ಆಘಾತಕಾರಿಯಾಗಿದೆ.

ರಹಸ್ಯ ಕ್ಯಾಮರಾದಲ್ಲಿ ಸೆರೆಹಿಡಿಯಲಾದ ಅವರಿಬ್ಬರ ತಪ್ಪೊಪ್ಪಿಗೆ ಹೇಳಿಕೆಗಳು, ಕಾನೂನು ಸುವ್ಯವಸ್ಥೆ ಕಾಪಾಡಬೇಕಾದವರೇ ಮಾಡಿರುವ ಅಕ್ರಮ ಕುರಿತು ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕುತ್ತವೆ.

ಈ ಆರೋಪಗಳ ಬಗ್ಗೆ ಪೊಲೀಸರು ಏನು ಹೇಳುತ್ತಾರೆ? ಯಾಕೆ ಅಂಥದೊಂದು ಗಂಭೀರ ಆರೋಪದ ಬಗ್ಗೆ ತಕ್ಷಣವೇ ಪ್ರತಿಕ್ರಿಯೆ ಬಂದಿಲ್ಲ?

‘ದೈನಿಕ್ ಭಾಸ್ಕರ್’ನ ಈ ವರದಿಗೆ ಪ್ರತಿಕ್ರಿಯೆಯಾಗಲೀ, ಆರೋಪ ನಿರಾಕರಣೆಯಾಗಲೀ ಪೊಲೀಸರ ಕಡೆಯಿಂದ ಬಂದಿಲ್ಲ. ಬಿಜೆಪಿ ನಾಯಕರ ವಿರುದ್ಧ ಬಿಜೆಪಿ ಶಾಸಕನಿಂದಲೇ ಎಫ್‌ಐಆರ್ ದಾಖಲಾಗಿರುವಾಗ, ಹಲವು ಗಂಭೀರ ಆರೋಪಗಳನ್ನು ಮಾಡಿರುವಾಗ ಯಾಕೆ ಆರೋಪಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಲಾಗಿಲ್ಲ?

ಗಲಭೆ ಹುಟ್ಟುಹಾಕಿರುವುದು ಯಾರ ಹುನ್ನಾರವಾಗಿತ್ತು ಎಂಬುದನ್ನಾದರೂ ಮಾಧ್ಯಮಗಳು ಪತ್ತೆ ಮಾಡಬೇಕಿತ್ತಲ್ಲವೆ? ಆದರೆ ಆರೋಪಿಗಳ ವಿಚಾರವನ್ನೇ ಮೀಡಿಯಾಗಳು ಎತ್ತುತ್ತಿಲ್ಲ.

ಅವರ ಬಗ್ಗೆ ಸುರೇಶ್ವರ್ ಸಿಂಗ್ ಸುದ್ದಿಗೋಷ್ಠಿಯಲ್ಲಿ ಆರೋಪ ಮಾಡಿದ ಬಳಿಕ ಆ ಆರೋಪಿಗಳ ಆಸ್ತಿ ಸರ್ವೇ ಶುರುವಾಗಿರುವುದು ವರದಿಯಾಗಿದೆ. ಆದರೆ ಬುಲ್ಡೋಜರ್ ಕಾರ್ಯಾಚರಣೆ ವಿರುದ್ಧ ಸುಪ್ರೀಂ ಕೋರ್ಟ್ ಆದೇಶವಿದ್ದು, ಅದರ ಬಗ್ಗೆ ಅನೇಕ ಮಾಧ್ಯಮಗಳು ಉಲ್ಲೇಖವನ್ನೇ ಮಾಡಿಲ್ಲ. ಹೀಗೆ ಜನರಿಂದ ಸತ್ಯಗಳನ್ನು ಮೀಡಿಯಾಗಳು ಮರೆಮಾಚುವುದು ನಡೆಯುತ್ತಲೇ ಇದೆ.

ಸುರೇಶ್ವರ್ ಸಿಂಗ್ ಮಾಡಿರುವ ಆರೋಪಗಳ ಬಗ್ಗೆಯಾಗಲೀ, ಆರೋಪಿಗಳ ಬಗ್ಗೆಯಾಗಲೀ ಮೀಡಿಯಾಗಳು ಮಾತಾಡುತ್ತಲೇ ಇಲ್ಲ. ಕಡೇ ಪಕ್ಷ, ಘಟನೆ ನಡೆದ ಐದು ದಿನಗಳ ಬಳಿಕ ಎಫ್‌ಐಆರ್ ದಾಖಲಿಸಿದ್ದೇಕೆ ಎಂಬ ಪ್ರಶ್ನೆಯನ್ನೂ ಮೀಡಿಯಾಗಳು ಎತ್ತುತ್ತಿಲ್ಲ.

ಆದಿತ್ಯನಾಥ್ ಸರಕಾರವೂ ಮೌನವಾಗಿದೆ.

ಇಡೀ ಘಟನೆಗೆ ಸಂಬಂಧಿಸಿ ಇಷ್ಟೊಂದು ಸುಳಿಗಳಿರುವಾಗ ಏಕೆ ಇಂಥ ಮೌನ? ಬಿಜೆಪಿಯವರ ವಿರುದ್ಧ ಬಿಜೆಪಿಯವರೇ ಆರೋಪ ಮಾಡಿದ್ದು, ಅದರ ಗಂಭೀರತೆಯನ್ನು ಅರ್ಥ ಮಾಡಿಕೊಳ್ಳಲೇಬೇಕಾಗಿದೆ.

ಅದರ ಹಿಂದಿನ ಹಕೀಕತ್ತು ಏನು? ಅದರ ಹಿಂದಿನ ಸತ್ಯ ಬೇಡವಾಗಿರುವುದು ಯಾರಿಗೆ?

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಎನ್. ಕೇಶವ್

contributor

Similar News