ವಾಸು ಸರಳ ಸಜ್ಜನಿಕೆಯ ರಾಜಕಾರಣಿ
ಮಾನ್ಯರೇ,
ಅಪರೂಪದಲ್ಲೇ, ಅಪರೂಪದ ರಾಜಕಾರಣಿ ಎನಿಸಿಕೊಂಡಿದ್ದ ಸರಳ ಸಜ್ಜನಿಕೆಯ ಸಾಕಾರ ಮೂರ್ತಿ, ಹಳೆ ಮೈಸೂರು ಭಾಗದ ಪ್ರಮುಖ ಒಕ್ಕಲಿಗ ಸಮುದಾಯದ ನಾಯಕ ಮಾಜಿ ಶಾಸಕ ವಾಸು ರವರ ನಿಧನ (09/03/2024), ಸಮುದಾಯಕ್ಕೆ ಆದ ದೊಡ್ಡ ಆಘಾತವೆಂದೇ ಹೇಳಬಹುದು.
ಅವರು ಶಾಸಕರಾಗಿದ್ದ ವೇಳೆ, ಮಾಡಿದ ಕೆಲಸಗಳಿಗೆ ಪ್ರಚಾರ ಸಿಕ್ಕಿದ್ದರೆ, 2019ರ ವಿಧಾನಸಭೆ ಚುನಾವಣೆಯಲ್ಲಿಯೂ ಗೆದ್ದು ಎರಡನೇ ಬಾರಿಗೆ ಶಾಸಕರಾಗುತ್ತಿದ್ದರು. ಆದರೆ ಅದು ಆಗಲಿಲ್ಲ. ಅದಕ್ಕೆ ಹೇಳುವುದು ‘ಊರು ಉಪಕಾರ ಬಲ್ಲದು, ಹೆಣ ಶೃಂಗಾರ ಬಲ್ಲದು ಎಂದು’. ಹಾಗೆಯೇ ಮೈಸೂರಿಗೆ ಜಯದೇವ ಆಸ್ಪತ್ರೆಯನ್ನು ತಂದ ಕೀರ್ತಿ ವಾಸು ರವರಿಗೆ ಸಲ್ಲಬೇಕು. ಕೆ.ಆರ್. ರಸ್ತೆಯ ಜಿಲ್ಲಾ ಆಸ್ಪತ್ರೆ, ಆಯುರ್ವೇದ ಆಸ್ಪತ್ರೆ, ಕಿದ್ವಾಯಿ ಆಸ್ಪತ್ರೆ , ಟ್ರಾಮಾ ಕೇರ್ ಸೆಂಟರ್, ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ಪಡುವಾರಳ್ಳಿಯಲ್ಲಿ ಮಹಾರಾಣಿ ಮಹಿಳಾ ಕಾಲೇಜು ಕಟ್ಟಡ ನಿರ್ಮಾಣ ಹೀಗೆ ಹತ್ತು ಹಲವು ಸಾರ್ವಜನಿಕ ಕೆಲಸ ಮಾಡಿದರು. ಅವರೆಂದೂ ಪ್ರಚಾರದ ಹುಚ್ಚಿ ಗೆ ಬೀಳಲಿಲ್ಲ, ಈ ಕಾರಣದಿಂದಲೇ ಅವರು ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಮೈಸೂರು ನಗರದ ಬಹುತೇಕ ಜನರಿಗೆ ಶಾಸಕ ವಾಸು ಎಂದರೆ ಯಾರೆಂದು ತಿಳಿಯುತ್ತಿರಲಿಲ್ಲ. ಆದರೆ ಮೇಯರ್ ವಾಸು ಎಂದರೆ ಅದು ಮನೆ ಮಾತಾಗಿತ್ತು. ಯಾವುದೇ ಜಾತಿ, ಧರ್ಮ ಎನ್ನದೆ ಪಕ್ಷಾತೀತವಾಗಿ ಸಹಾಯ ಕೇಳಿ ಬರುವವರಿಗೆ, ಸಹಾಯ ಹಸ್ತ ಚಾಚುತ್ತಿದ್ದರು.
ಮೈಸೂರಿನ ಜನತೆಗೆ ಇವರೊಬ್ಬ ಸಂತ ರಾಜಕಾರಣಿ ಎನಿಸಿದ್ದರು.