ಕರ್ನಾಟಕದ ರಾಜಕಾರಣ ಜಾತಿಯನ್ನು ಮೀರಿದ್ದು

Update: 2023-11-18 06:50 GMT

ಮಾನ್ಯರೇ,

ಬಸವಣ್ಣ ಹುಟ್ಟಿದ ಈ ನಾಡಿನಲ್ಲಿ ಕುವೆಂಪುರವರ ವೈಚಾರಿಕ ಪ್ರಜ್ಞೆಯನ್ನು ಪ್ರತಿಷ್ಠಾಪಿಸಿದ ಈ ಮಣ್ಣಿನಲ್ಲಿ ಎಂದಿಗೂ ಸಹ ರಾಜಕಾರಣದಲ್ಲಿ ಜಾತಿ ನಡೆಯುವುದಿಲ್ಲ. ಇಲ್ಲಿನ ರಾಜಕಾರಣ ಜಾತಿಯನ್ನು ಮೀರಿದ್ದು. ಅಲ್ಪಸಂಖ್ಯಾತರ ಸಮುದಾಯಕ್ಕೆ ಸೇರಿದ್ದ ದಿವಂಗತ ಅಬ್ದುಲ್ ನಝೀರ್ ಸಾಬ್‌ರವರನ್ನು ‘ನೀರ್ ಸಾಬ್’ ಎಂದು ಹೃದಯ ತುಂಬಿ ಸ್ಮರಿಸಿಕೊಳ್ಳುವ ನಾಡಿದು. ಬಸವಲಿಂಗಪ್ಪ, ರಾಚಯ್ಯ, ಕೆ.ಎಚ್. ರಂಗನಾಥ್ ಮುಂತಾದ ದಲಿತ ನಾಯಕರಿಗೆ ಮನ್ನಣೆಯನ್ನು ನೀಡಿದ ನಾಡು, ದೇವರಾಜ ಅರಸು ಅವರ ವ್ಯಕ್ತಿತ್ವಕ್ಕೆ ಅವರ ಚಿಂತನೆಗಳಿಗೆ ಇಂದಿಗೂ ಸ್ಮರಿಸಿಕೊಳ್ಳುತ್ತಿರುವ ಮಣ್ಣಿದು. ಅತ್ಯಂತ ಕಡಿಮೆ ಜನಸಂಖ್ಯೆಯನ್ನು ಹೊಂದಿರುವ ಸಮಾಜಕ್ಕೆ ಸೇರಿದ ಧರಂಸಿಂಗ್, ವೀರಪ್ಪಮೊಯ್ಲಿ ಇವರನ್ನು ಮುಖ್ಯಮಂತ್ರಿಯನ್ನಾಗಿ ಕಂಡ ನಾಡು, ಹಿಂದುಳಿದ ವರ್ಗ ಸಮಾಜದ ಬಂಗಾರಪ್ಪನವರಿಗೆ ಪ್ರೀತಿಯನ್ನು ನೀಡಿದ ನಾಡು. ಸಿದ್ದರಾಮಯ್ಯನವರಿಗೆ ನಾಯಕತ್ವವನ್ನು ನೀಡಿದ ಜನರ ನಾಡು. ಇಲ್ಲಿ ನಿಜಲಿಂಗಪ್ಪನವರು, ಕೆಂಗಲ್ ಹನುಮಂತಯ್ಯನವರು ಜಾತಿಯ ಕಾರಣದಿಂದ ಮುಖ್ಯಮಂತ್ರಿಯಾದವರಲ್ಲ. ವ್ಯಕ್ತಿತ್ವಕ್ಕಾಗಿ ಚುಕ್ಕಾಣಿಯನ್ನು ಹಿಡಿದವರು.

ಇತ್ತೀಚಿನ ಕೆಲವು ದಿನಗಳಿಂದ ರಾಜಕೀಯ ವಿಶ್ಲೇಷಣೆಯನ್ನು ಜಾತಿಯ ಆಧಾರದ ಮೇಲೆ ಮಾಡುತ್ತಿರುವುದು ಯಾರೂ ಒಪ್ಪುವಂತದಲ್ಲ. ಬ್ರಾಹ್ಮಣ ಸಮುದಾಯಕ್ಕೆ ಸೇರಿದ ರಾಮಕೃಷ್ಣ ಹೆಗಡೆಯವರಿಗೆ ಉತ್ತರ ಕರ್ನಾಟಕದ ವೀರಶೈವರು ಮತ್ತು ಹಿಂದುಳಿದ ವರ್ಗದ ಸಮಾಜದ ಜನ ತೋರಿದಷ್ಟು ಪ್ರೀತಿ ಯಾರೂ ಮರೆಯುವಂತಿಲ್ಲ. ದೇವೇಗೌಡರು ರಾಜ್ಯದ ಮುಖ್ಯಮಂತ್ರಿಯಾದದ್ದು, ಅವರ ರೈತಪರ ಹೋರಾಟಗಳು ಮತ್ತು ಸುದೀರ್ಘವಾದ ರಾಜಕೀಯ ಪ್ರಯಾಣದಿಂದ ಎಂಬುದು ಅತಿ ಮುಖ್ಯವಾಗಿರುತ್ತದೆ. ಇವೆಲ್ಲವೂ ಈ ಮಣ್ಣಿನ ಗುಣ. ನಮ್ಮನ್ನಾಳುವ ನಾಯಕ ನನ್ನ ಜಾತಿಯವರಿರಬೇಕೆಂದು ಬಯಸುವವರು ಕೆಲವು ಅಧಿಕಾರಿಗಳು. ಕಾರಣ ತಮ್ಮ ಜಾತಿಯವರು ಅಧಿಕಾರಕ್ಕೆ ಬಂದರೆ ತಮಗೆ ಆಯಾಕಟ್ಟಿನ ಜಾಗಗಳು ಸಿಗುತ್ತದೆಂದು. ಕೆಲವು ಉದ್ಯಮಿಗಳು ತಮ್ಮ ಉದ್ಯಮಕ್ಕೆ ರಾಜಕೀಯ ಬೆಂಬಲ ದೊರೆಯುತ್ತದೆಂದು, ಕೆಲವು ಸಂಸ್ಥೆಯವರು ಸರಕಾರದ ಸವಲತ್ತುಗಳಿಗಾಗಿ, ಮತ್ತಷ್ಟು ಮಂದಿ ಹೊಗಳುಭಟರು ತಮ್ಮ ಬದುಕನ್ನು ಬಂಗಾರವನ್ನಾಗಿಸಿಕೊಳ್ಳುವ ಕಾರಣದಿಂದ ತಮ್ಮ ಜಾತಿಯವರೇ ಇರಬೇಕೆಂದು ಬಯಸುತ್ತಾರೆ. ಜನಸಾಮಾನ್ಯರಿಗೆ ಬೇಕಿರುವುದು ಪ್ರಾಮಾಣಿಕವಾದ, ದಕ್ಷತೆಯಿಂದ ಆಡಳಿತವನ್ನು ನಡೆಸುವ, ಸೌಕರ್ಯ, ಸೌಲಭ್ಯ ವನ್ನು ನೀಡುವ, ದುಃಖ, ದುಮ್ಮಾನಗಳಿಗೆ ಸ್ಪಂದಿಸುವ ಮನುಷ್ಯ ಜಾತಿಗೆ ಸೇರಿದ ಮುಖಂಡ.

ಪ್ರಬಲವಾದ ಜಾತಿಯ ಬೆಂಬಲವಿದ್ದು, ನಾಯಕರ ಮನೆಯ ಮಂದಿಯಾದರೆ ನಾಯಕತ್ವವು ದೊರೆಯುತ್ತದೆ, ಹಾಡಿ ಹೊಗಳುವವರು ಜೊತೆಯಲ್ಲಿರುತ್ತಾರೆ. ಆರ್ಥಿಕ ಸಂಪನ್ಮೂಲವು ಸದೃಢವಾಗಿರುತ್ತದೆ. ಜೊತೆಗೆ ಬಡವರ ಬಂಧು, ದೀನದಲಿತರ ನಾಯಕ, ಸಮಾಜ ಸುಧಾರಕ, ಭವಿಷ್ಯದ ನಾಯಕ, ಭರವಸೆಯ ನಾಯಕ ಮುಂತಾದ ವರ್ಣರಂಜಿತವಾದ ಪದಗಳ ಜೋಡಣೆಯ ಜಾಹೀರಾತುಗಳು ಎಲ್ಲೆಲ್ಲೂ ರಾರಾಜಿಸುತ್ತದೆ.

-ಕೆ.ಎಸ್. ನಾಗರಾಜ್ ಹನುಮಂತನಗರ, ಬೆಂಗಳೂರು

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News