ಬೂದಿಪಡಗ ಅರಣ್ಯದಲ್ಲಿ ಸಾಕಾನೆಗಳಿಗೆ ಶಿಬಿರ ಕಾರ್ಯಾರಂಭಕ್ಕೆ ಸಿದ್ಧತೆ

Update: 2024-07-15 09:25 GMT

ಚಾಮರಾಜನಗರ: ಕರ್ನಾಟಕ ತಮಿಳುನಾಡು ಮತ್ತು ಕೇರಳ ರಾಜ್ಯಗಳಿಗೆ ಮೂರು ದಶಕಗಳ ಕಾಲ ಸಿಂಹ ಸ್ವಪ್ನವಾಗಿದ್ದ ಶ್ರೀಗಂಧ ಚೋರ, ಆನೆ ದಂತ ಕಳ್ಳಸಾಗಣೆದಾರ ವೀರಪ್ಪನ್‌ನನ್ನು ಬಂಧಿಸಿಟ್ಟಿದ್ದ ಚಾಮರಾಜನಗರ ತಾಲೂಕಿನ ಬೂದಿಪಡಗ ಕಾಡಿನಲ್ಲಿ ಸಾಕಾನೆಗಳಿಗಾಗಿ ಶಿಬಿರ ಕಾರ್ಯಾರಂಭಕ್ಕೆ ಸಿದ್ಧತೆ ನಡೆಯುತ್ತಿದೆ.

ಚಾಮರಾಜನಗರ ಜಿಲ್ಲೆಯ ಬಿಳಿಗಿರಿರಂಗನಾಥ ಹುಲಿ ಸಂರಕ್ಷಿತ ಪ್ರದೇಶದ ವ್ಯಾಪ್ತಿಗೆ ಬರುವ ಬೂದಿಪಡಗ ಕಾಡಿನಲ್ಲಿ ಆನೆ ಕ್ಯಾಂಪ್ ನಿರ್ಮಾಣದ ಕಾಮಗಾರಿ ಬಿರುಸಿನಿಂದ ಸಾಗುತ್ತಿದೆ. ಇದುವರೆಗೂ ಕೆ.ಗುಡಿಯಲ್ಲಿದ್ದ ಆನೆ ಶಿಬಿರವನ್ನು ಬೂದಿಪಡಗಕ್ಕೆ ಸ್ಥಳಾಂತರಗೊಳ್ಳಲು ದಿನಗಣನೆಯಾಗುತ್ತಿದೆ.

ಕಳೆದ ನಾಲ್ಕು ವರ್ಷಗಳ ಹಿಂದೆ ಬಿಜೆಪಿ ನೇತೃತ್ವದ ರಾಜ್ಯ ಸರಕಾರವು ತನ್ನ ಬಜೆಟ್‌ನಲ್ಲಿ ಬೂದಿಪಡಗದಲ್ಲಿ ಆನೆ ಕ್ಯಾಂಪ್ ನಿರ್ಮಾಣ ಮಾಡಲು ಅನುದಾನ ಮೀಸಲಿರಿಸಿತ್ತು. ಅದರಂತೆ ಇದೀಗ ಬೂದಿ ಪಡಗದಲ್ಲಿ ಆನೆ ಕ್ಯಾಂಪ್‌ಗೆ ಸಿದ್ಧತೆ ನಡೆಯುತ್ತಿದೆ.

ಸುತ್ತಲೂ ರೈಲ್ವೆ ಹಳಿಗಳಿಂದ ಬ್ಯಾರಿಕೇಡ್ ನಿರ್ಮಾಣ ಮಾಡಿದ್ದು, ಇಲ್ಲಿ ಸೆರೆಹಿಡಿದ ಪುಂಡಾನೆಗಳನ್ನು ನುರಿತ ತಜ್ಞರಿಂದ ಪಳಗಿಸಲಾಗುವುದು. ಇದಕ್ಕೆ ಅರಣ್ಯ ಇಲಾಖೆ ಸಿಬ್ಬಂದಿಯನ್ನು ನೇಮಿಸಿಕೊಳ್ಳಲಿದೆ. ಅದೂ ಅಲ್ಲದೆ ಶಿಬಿರದಲ್ಲಿ ಇರುವ ಸಾಕಾನೆಗಳಿಗೆ ಪೌಷ್ಟಿಕ ಆಹಾರಗಳನ್ನು ಒದಗಿಸುವುದು ಅರಣ್ಯ ಇಲಾಖೆಯ ಹೊಣೆಯಾಗಿದೆ.

ಪ್ರಸ್ತುತ ಕೆ.ಗುಡಿಯಲ್ಲಿರುವ ಆನೆ ಶಿಬಿರವು ಬಿಳಿಗಿರಿರಂಗನ ಬೆಟ್ಟಕ್ಕೆ ಹೋಗುವ ರಸ್ತೆಯಲ್ಲಿದೆ . ಪ್ರತಿನಿತ್ಯ ಹಾಗೂ ವಾರಾಂತ್ಯದಲ್ಲಿ ಈ ಮಾರ್ಗವಾಗಿ ಬೆಟ್ಟಕ್ಕೆ ಹೋಗುವ ಪ್ರವಾಸಿಗರು ಹೆಚ್ಚಾಗಿದ್ದು, ಅವರೆಲ್ಲರೂ ಆನೆ ಶಿಬಿರದೆಡೆಗೆ ಬರುವುದರಿಂದ ಸಾಕಾನೆಗಳಿಗೆ ಕಿರಿಕಿರಿ ಆಗಬಹುದುದಾಗಿದೆ.

ಸಾಕಾನೆಗಳಿಗೆ ಜನರ ಕಿರಿಕಿರಿ ತಪ್ಪಿಸಲು ಶಿಬಿರವನ್ನು ಬೂದಿಪಡಗ ಕಾಡಿಗೆ ಸ್ಥಳಾಂತರಕ್ಕೆ ಅರಣ್ಯ ಇಲಾಖೆ ಮುಂದಾಗಿದ್ದರ ಹಿನ್ನೆಲೆಯಲ್ಲಿ ಸರಕಾರವೂ ಇದಕ್ಕೆ ಸಮ್ಮತಿಸಿದೆ.

ಈಗಾಗಲೇ ಚಾಮರಾಜನಗರ ಜಿಲ್ಲೆಯ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ರಾಂಪುರದಲ್ಲೂ ಸಾಕಾನೆಗಳ ಶಿಬಿರವಿದ್ದು, ಅಲ್ಲಿ ನುರಿತ ಮಾವುತರಿಂದ ಆನೆಗಳನ್ನು ಪಳಗಿಸಲಾಗುತ್ತಿದೆ. ಅದೇ ರೀತಿಯಾಗಿ ಚಾಮರಾಜನಗರ ತಾಲೂಕಿನ ಬೂದಿಪಡಗದಲ್ಲೂ ಸಾಕಾನೆಗಳಿಗೆ ಮಾವುತರಿಂದ ತರಬೇತಿ ಕೊಟ್ಟು ಪಳಗಿಸಲಾಗುವುದು.

ಕೆ.ಗುಡಿಯಲ್ಲಿರುವ ಸಾಕಾನೆ ಶಿಬಿರದಲ್ಲಿ ಕೇವಲ ಒಂದು ಆನೆ ಇದ್ದು, ನೆರೆಯ ಆನೆ ಶಿಬಿರದಿಂದ ಮೂರ್ನಾಲ್ಕು ಆನೆಗಳನ್ನು ಕರೆತಂದು ಇಲ್ಲಿ ಆನೆ ಶಿಬಿರ ಆರಂಭಿಸಲಾಗುವುದು. ಬೂದಿಪಡಗದಲ್ಲಿ ಸಾಕಾನೆ ಶಿಬಿರ ಆರಂಭಿಸುವುದಲ್ಲದೆ, ಹೊಸದಾಗಿ ಸಫಾರಿ ಕೇಂದ್ರವನ್ನು ಆರಂಭಿಸಲು ಅರಣ್ಯಾಧಿಕಾರಿಗಳು ಚಿಂತನೆ ಮಾಡಿದ್ದು, ಕೇಂದ್ರ ಸರಕಾರ ಹಾಗೂ ರಾಷ್ಟ್ರೀಯ ಹುಲಿ ಪ್ರಾಧಿಕಾರದ ಅನುಮತಿಗೆ ಪ್ರಸ್ತಾವ ಸಲ್ಲಿಸಿರುವ ಅರಣ್ಯಾಧಿಕಾರಿಗಳು ಪ್ರವಾಸಿಗರನ್ನು ಬಿಳಿಗಿರಿರಂಗನಾಥ ಹುಲಿಸಂರಕ್ಷಿತ ಪ್ರದೇಶದತ್ತ ಸೆಳೆಯಲು ಯೋಜನೆ ರೂಪಿಸಿದ್ದಾರೆ.

ಪ್ರವಾಸಿಗರಿಗೆ ಅವಕಾಶ

ಚಾಮರಾಜನಗರ ಜಿಲ್ಲೆಯ ಬಂಡೀಪುರದ ರಾಮಪುರದಲ್ಲೂ ಆನೆ ಶಿಬಿರವಿದೆ. ಈ ಆನೆ ಶಿಬಿರಕ್ಕೆ ಪ್ರವಾಸಿಗರ ನಿರ್ಬಂಧವಿದೆ. ಇದೀಗ ಚಾಮರಾಜನಗರ ತಾಲೂಕಿನ ಬೂದಿಪಡಗದಲ್ಲಿ ಎರಡನೇ ಆನೆ ಕ್ಯಾಂಪ್ ನಿರ್ಮಿಸಿ ಮಡಿಕೇರಿಯ ದುಬಾರೆ ಶಿಬಿರದಂತೆ ಪ್ರವಾಸಿಗರಿಗೆ ಅವಕಾಶ ಮಾಡಿಕೊಡಲು ತಯಾರಿ ನಡೆಯುತ್ತಿದೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ನಾ.ಅಶ್ವಥ್ ಕುಮಾರ್

contributor

Similar News