ಕುಗ್ಗಿದ ಪ್ರಧಾನಿ ಮೋದಿ ಜನಪ್ರಿಯತೆ!
ಲೋಕಸಭೆ ಚುನಾವಣೆಗಳು ಮುಗಿದಿವೆ. ಫಲಿತಾಂಶಗಳೂ ಪ್ರಕಟವಾಗಿವೆ. ಹೊಸ ಸರಕಾರ ರಚನೆಯಷ್ಟೇ ಬಾಕಿ ಉಳಿದಿದೆ. ಈ ಚುನಾವಣೆ ಹಲವು ದೃಷ್ಟಿಯಿಂದ ಮಹತ್ವ ಪಡೆದಿದೆ. ಕಳೆದ 10 ವರ್ಷಗಳ ಜನಪ್ರಿಯತೆಯ ಉತ್ತುಂಗದಲ್ಲಿ ತೇಲುತ್ತಿದ್ದ ಪ್ರಧಾನಿ ಮೋದಿ ಅವರ ಸಾಮರ್ಥ್ಯವೇನು ಎಂಬುದನ್ನು ತೋರಿಸಿಕೊಟ್ಟಿದೆ. ಮತಗಟ್ಟೆ ಸಮೀಕ್ಷೆ ಹೆಸರಿನಲ್ಲಿ ಹಸಿ ಸುಳ್ಳು ಪ್ರಸಾರ ಮಾಡಿದ ಮಾಧ್ಯಮಗಳ ಬಣ್ಣ ಬಯಲು ಮಾಡಿದೆ.
ಕಳೆದೆರಡು ಲೋಕಸಭೆ ಚುನಾವಣೆಗಳಲ್ಲಿ ಯಾವುದೇ ಪಕ್ಷಗಳ ಬೆಂಬಲ ಪಡೆಯದೆ ಸ್ವಂತ ಬಲದ ಮೇಲೆ ಸರಕಾರ ರಚಿಸುವಷ್ಟು ಸ್ಥಾನಗಳನ್ನು ಬಿಜೆಪಿಗೆ ತಂದುಕೊಟ್ಟಿದ್ದ ನರೇಂದ್ರ ಮೋದಿ ಅನಿವಾರ್ಯವಾಗಿ ಈಗ ಮಿತ್ರ ಪಕ್ಷಗಳ ‘ದಾಕ್ಷಿಣ್ಯ’ಕ್ಕೆ ಕಾಯಬೇಕಿದೆ. ಇದು ಅವರ ವರ್ಚಸ್ಸು ಕುಗ್ಗಿರುವುದಕ್ಕೆ ಸಾಕ್ಷಿ. ಚುನಾವಣೆ ಫಲಿತಾಂಶದಿಂದ ತಾವು ಕುಗ್ಗಿಲ್ಲ ಎಂದು ತೋರಿಸಲು ಪ್ರಧಾನಿ ಕಷ್ಟ ಪಡುತ್ತಿದ್ದಾರೆ. ಬೆಂಬಲಿಗರು ಮೋದಿ ಮೋದಿ ಘೋಷಣೆ ಮುಂದುವರಿಸಿದ್ದಾರೆ. ಮಂಗಳವಾರ ದಿಲ್ಲಿ ಬಿಜೆಪಿ ಕಚೇರಿಯಲ್ಲಿ ಮೋದಿ ಮೋದಿ ಘೋಷಣೆ ಮೊಳಗಿದೆ.
ಈ ಚುನಾವಣೆಯಲ್ಲಿ ಬಿಜೆಪಿ ಬಲವಷ್ಟೇ ಕುಗ್ಗಿಲ್ಲ.
ಪ್ರಧಾನಿ ಅವರ ವೈಯಕ್ತಿಕ ಶಕ್ತಿಯೂ ಕುಂದಿದೆ. ವಾರಣಾಸಿ ಕ್ಷೇತ್ರದಿಂದ ಸತತ ಮೂರನೇ ಬಾರಿಗೆ ಮೋದಿ ಅವರು ಆಯ್ಕೆ ಆಗಿದ್ದರೂ ಗೆಲುವಿನ ಅಂತರ ಹಿಂದಿನ ಎರಡು ಚುನಾವಣೆಗಿಂತ ಕಡಿಮೆ ಆಗಿದೆ. ಅವರು ಕಾಂಗ್ರೆಸ್ ಅಭ್ಯರ್ಥಿ ಅಜಯ್ ರಾಯ್ ಅವರ ವಿರುದ್ಧ ಕೇವಲ 1,52, 513 ಮತಗಳ ಅಂತರದಿಂದ ಆಯ್ಕೆಯಾಗಿದ್ದಾರೆ. ನರೇಂದ್ರ ಮೋದಿ ದಾಖಲೆ ಅಂತರದಿಂದ ಗೆಲುವು ಪಡೆಯಲಿದ್ದಾರೆ ಎಂದು ಬಿಜೆಪಿ ನಾಯಕರು ಹೇಳಿಕೊಳ್ಳುತ್ತಿದ್ದರು.
2019ರ ಚುನಾವಣೆಯಲ್ಲಿ ಮೋದಿ ಅವರ ಗೆಲುವಿನ ಅಂತರ 4,59,505 ಇತ್ತು. ಇದಕ್ಕೂ ಹಿಂದಿನ ಚುನಾವಣೆಯಲ್ಲಿ 3,71,784 ಮತಗಳ ಅಂತರ ಇತ್ತು.
ಹದಿನಾಲ್ಕು ವರ್ಷ (2001ರಿಂದ 2014) ಗುಜರಾತಿನ ಮುಖ್ಯಮಂತ್ರಿ ಆಗಿದ್ದ ಮೋದಿ 2013ರಲ್ಲಿ ಗೋವಾದಲ್ಲಿ ನಡೆದ ಬಿಜೆಪಿಯ ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ರಾಷ್ಟ್ರ ರಾಜಕಾರಣಕ್ಕೆ ಭಡ್ತಿ ಪಡೆದರು. ಪಕ್ಷವನ್ನು ಕಟ್ಟಿ ಬೆಳೆಸಿದ್ದ ಎಲ್.ಕೆ.ಅಡ್ವಾಣಿ ಅವರಂಥ ಹಿರಿಯ ನಾಯಕರನ್ನು ಬದಿಗೆ ಸರಿಸಿ, ಮೋದಿ ಅವರಿಗೆ ನಾಯಕತ್ವ ವಹಿಸಲಾಯಿತು. ಆ ವೇಳೆ ದಿಲ್ಲಿಯಲ್ಲಿ ಕೆಲಸ ಮಾಡುತ್ತಿದ್ದ ನಾನು ಮೂರು ದಿನಗಳ ಕಾರ್ಯಕಾರಿಣಿಯನ್ನು ವರದಿ ಮಾಡಲು ಗೋವಾಕ್ಕೆ ಹೋಗಿದ್ದೆ. ಮೋದಿ ಅವರನ್ನು ನೇಮಕ ಮಾಡಿದ ಸಮಯದಲ್ಲಿ ದೊಡ್ಡ ‘ಹೈ ಡ್ರಾಮ’ ನಡೆಯಿತು.
ಮೋದಿ ಅವರಿಗೆ ನಾಯಕತ್ವದ ಪಟ್ಟ ಕಟ್ಟುವ ಸುಳಿವು ಮೊದಲೇ ಸಿಕ್ಕಿದ್ದರಿಂದ ಅಡ್ವಾಣಿ ಗೋವಾ ಕಡೆ ಮುಖ ಹಾಕಿರಲಿಲ್ಲ. ಅಡ್ವಾಣಿ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ಸುಷ್ಮಾ ಸ್ವರಾಜ್ ಸೇರಿದಂತೆ ಅನೇಕ ನಾಯಕರಿಗೆ ಈ ಬೆಳವಣಿಗೆ ಬೇಸರ ತರಿಸಿತ್ತು. ಕೊನೆಗೂ ಅಡ್ವಾಣಿ ಅವರ ಮನವೊಲಿಸಿ ಅಲ್ಲಿಗೆ ಕರೆತರಲಾಗಿತ್ತು. ಬಳಿಕ ಹಿರಿಯರನ್ನು ಸಂತೈಸುವ ಸಲುವಾಗಿ ಮಾರ್ಗದರ್ಶಕ ಮಂಡಳಿ ರಚಿಸಲಾಗಿತ್ತು. ಅದರಲ್ಲಿ ಅಡ್ವಾಣಿ, ಮುರಳಿ ಮನೋಹರ ಜೋಷಿ ಅವರಂಥ ಹಿರಿಯರಿಗೆ ಸ್ಥಾನ ನೀಡಲಾಗಿತ್ತು. ಅದು ಹೆಸರಿಗಷ್ಟೇ ಇದ್ದುದರಿಂದ ಬಹಳ ಕಾಲ ಉಳಿಯಲಿಲ್ಲ. ನಿಧಾನವಾಗಿ ಹಿರಿಯರನ್ನು ಕಡೆಗಣಿಸಲಾಯಿತು. ವಿಪರ್ಯಾಸವೆಂದರೆ, ಅಯೋಧ್ಯೆ ರಾಮ ಮಂದಿರ ನಿರ್ಮಿಸಲು ರಥ ಯಾತ್ರೆ ನಡೆಸಿದ ಅಡ್ವಾಣಿ ಅವರೂ ಮೋದಿ ವರ್ಚಸ್ಸಿನ ಮುಂದೆ ಮಸುಕಾದರು. ಬಿಜೆಪಿ, ಅವರ ಕೈಬಿಟ್ಟಾಗ ಪಕ್ಷದ ಯಾವ ನಾಯಕರೂ ಬೆಂಬಲಕ್ಕೆ ನಿಲ್ಲಲಿಲ್ಲ.
2002ರ ಗುಜರಾತ್ ಗಲಭೆ ಬಳಿಕ ಮೋದಿ ಪ್ರವರ್ಧಮಾನಕ್ಕೆ ಬಂದಿದ್ದು. ಇದಕ್ಕೆ ಕಾರಣವೇನು ಎಂದು ಬಿಡಿಸಿ ಹೇಳಬೇಕಾಗಿಲ್ಲ. ಗಲಭೆ ಸಮಯದಲ್ಲಿ ಪ್ರಧಾನಿ ಆಗಿದ್ದ ಎ.ಬಿ.ವಾಜಪೇಯಿ ಅವರೇ ‘ರಾಜಧರ್ಮ’ ಪಾಲಿಸುವಂತೆ ಮೋದಿ ಅವರಿಗೆ ಸಲಹೆ ನೀಡಿದ್ದರು. ಇದೇ ‘ಖ್ಯಾತಿ’ ಅವರನ್ನು ಪ್ರಧಾನಿ ಕುರ್ಚಿಗೂ ತಂದು ಕೂರಿಸಿತು. ‘ಹಿಂದುತ್ವ’ ರಾಜಕಾರಣಕ್ಕೆ ಜೋತು ಬಿದ್ದಿರುವ ಬಿಜೆಪಿಗೆ ಬೇಕಿರುವುದೇ ನರೇಂದ್ರ ಮೋದಿ ಅವರಂಥ ಪ್ರಖರ ಮುಖಂಡರು.
ಮೋದಿ ಉತ್ತರ ಪ್ರದೇಶದ ವಾರಣಾಸಿ ಕ್ಷೇತ್ರ ಆಯ್ಕೆ ಮಾಡಿಕೊಳ್ಳಲು ಕಾರಣವಿದೆ. ಒಟ್ಟು 80 ಕ್ಷೇತ್ರಗಳನ್ನು ಒಳಗೊಂಡಿರುವ ಈ ರಾಜ್ಯ ದೇಶದ ರಾಜಕಾರಣದಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತಿದೆ. ಇಲ್ಲಿ ಸ್ಪರ್ಧೆ ಮಾಡಿದರೆ ತಮ್ಮ ಪ್ರಭಾವದಿಂದ ಹೆಚ್ಚು ಕಡೆ ಪಕ್ಷವನ್ನು ಗೆಲ್ಲಿಸಬಹುದೆಂಬ ಲೆಕ್ಕಾಚಾರ ಇತ್ತು. ಅದು ಎರಡು ಚುನಾವಣೆಯಲ್ಲಿ ನಿಜವೂ ಆಗಿತ್ತು. 2014ರಲ್ಲಿ 71 ಮತ್ತು 2019ರ ಚುನಾವಣೆಯಲ್ಲಿ 62 ಸ್ಥಾನಗಳನ್ನು ಪಡೆದಿದ್ದ ಬಿಜೆಪಿ ಈಗ ಗೆದ್ದಿರುವುದು 33 ಕ್ಷೇತ್ರ ಮಾತ್ರ. ಈ ಸಲ ನಿರೀಕ್ಷೆ ತಲೆಕೆಳಗಾಯಿತು.
ಅಖಿಲೇಶ್ ಯಾದವ್ ಅವರ ಸಮಯೋಚಿತ ನಿರ್ಧಾರ, ಜಾತಿ ಸಮೀಕರಣ, ಕಾಂಗ್ರೆಸ್ ಜತೆಗಿನ ಮೈತ್ರಿ ಎಲ್ಲವೂ ‘ಇಂಡಿಯಾ’ ಮೈತ್ರಿಕೂಟಕ್ಕೆ ನಿರೀಕ್ಷೆ ಮೀರಿದ ಗೆಲುವು ತಂದುಕೊಟ್ಟಿತು.
ಮಾತೆತ್ತಿದರೆ ಹಿಂದೂ, ಹಿಂದುತ್ವ, ರಾಮ, ರಾಮ ಮಂದಿರ ಮತ್ತು ಮುಸ್ಲಿಮ್ ‘ಮಂತ್ರ’ ಪಠಿಸುತ್ತಿದ್ದ ಮೋದಿ ಮತ್ತು ಅವರ ನಾಯಕರಿಗೆ ಈ ಚುನಾವಣೆ ಫಲಿತಾಂಶವನ್ನು ಜೀರ್ಣಿಸಿಕೊಳ್ಳಲು ಆಗುತ್ತಿಲ್ಲ. ಇದು ಪ್ರಧಾನಿ ಮೋದಿ ಅವರಿಗಷ್ಟೇ ಅಲ್ಲ, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೂ ಪಾಠವಾಗಿದೆ. ಕಾನೂನು- ಸುವ್ಯವಸ್ಥೆ ಕಾಪಾಡುವ ನೆಪದಲ್ಲಿ ‘ಬುಲ್ಡೋಜ್ ಸಂಸ್ಕೃತಿ’ಗೆ ಮಣೆ ಹಾಕಿದ್ದ ಅವರಿಗೆ ಮತದಾರರು ಸ್ಪಷ್ಟ ಸಂದೇಶ ಕಳುಹಿಸಿದ್ದಾರೆ.
‘ಅಬ್‌ಕಿ ಬಾರ್ 400 ಪಾರ್’ ಎಂಬ ಘೋಷಣೆಯೊಂದಿಗೆ ಮತದಾರರ ಮನೆ ಕದ ಬಡಿದಿದ್ದ ಬಿಜೆಪಿಗೆ ಈಗ ಸಿಕ್ಕಿರುವುದು ಬರೀ 240 ಸ್ಥಾನಗಳು. ಸ್ವಂತ ಬಲದ ಮೇಲೆ ಸರಕಾರ ರಚಿಸಲು ಅದಕ್ಕೆ ಸಾಧ್ಯವಿಲ್ಲ. ಎನ್‌ಡಿಎ ಮಿತ್ರ ಪಕ್ಷಗಳು ಬೆಂಬಲಕ್ಕಿರುವುದರಿಂದ ಒಟ್ಟಾರೆ ಸಂಖ್ಯೆ 293 ಆಗಿದೆ. ಹೀಗಾಗಿ, ಬಿಜೆಪಿಯು ಮಿತ್ರ ಪಕ್ಷಗಳ ಹಂಗಿನಲ್ಲಿದೆ.
ನರೇಂದ್ರ ಮೋದಿ ದಶಕದ ಹಿಂದೆ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿ ಮುನ್ನಡೆಸಿದಾಗ 287 ಸ್ಥಾನಗಳನ್ನು ಗೆದ್ದಿತ್ತು. ಐದು ವರ್ಷದ ಹಿಂದಿನ ಚುನಾವಣೆಯಲ್ಲಿ 303 ಸ್ಥಾನ ಪಡೆದಿತ್ತು. ಈಗ 63 ಸ್ಥಾನ ಕಡಿಮೆಯಾಗಿವೆ. ಯಾವುದೇ ರಾಜಕೀಯ ಪಕ್ಷಕ್ಕೆ ಸ್ವಂತ ಬಲದ ಮೇಲೆ ಸರಕಾರ ರಚಿಸಲು ಬೇಕಿರುವುದು 272 ಸ್ಥಾನ. ಬಿಜೆಪಿಗೆ ಈಗ 32 ಸ್ಥಾನಗಳ ಕೊರತೆಯಾಗಿದೆ. ಇದು ಮೋದಿಯವರ ನಾಯಕತ್ವಕ್ಕೆ ಮತದಾರರು ಕೊಟ್ಟಿರುವ ಉಡುಗೊರೆ.
ಇನ್ನೊಂದೆಡೆ, ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ರಾಯ್‌ಬರೇಲಿ ಮತ್ತು ವಯನಾಡ್‌ಗಳಲ್ಲಿ ಭಾರಿ ಅಂತರದಿಂದ ಗೆದ್ದಿದ್ದಾರೆ. ಸದ್ಯವೇ ಒಂದು ಕ್ಷೇತ್ರ ಬಿಡುವುದಾಗಿ ಹೇಳಿದ್ದಾರೆ. ಹಿಂದಿನ ಚುನಾವಣೆಗಳಿಗೆ ಹೋಲಿಸಿದರೆ ಅವರ ಪಕ್ಷದ ಶಕ್ತಿ ದ್ವಿಗುಣಗೊಂಡಿದೆ. ಕಾಂಗ್ರೆಸ್ ಪಕ್ಷವನ್ನು 44 ಸ್ಥಾನಗಳಿಂದ 99 ಸ್ಥಾನಗಳಿಗೆ ತಂದು ನಿಲ್ಲಿಸಿದ್ದಾರೆ. ಇನ್ನು ಮುಂದಾದರೂ ‘ಪಪ್ಪು’ ಹಣೆ ಪಟ್ಟಿ ಕಳಚಿ ಹೊರಬರಬೇಕಿದೆ. ಪಕ್ಷದ ನಾಯಕನಾಗಿ ತನ್ನ ನಿಜವಾದ ಸಾಮರ್ಥ್ಯ ಸಾಬೀತುಪಡಿಸಲು ಇದು ಅವರಿಗೊಂದು ಅವಕಾಶ. ಈ ಅವಕಾಶವನ್ನು ಕಳೆದುಕೊಳ್ಳಬಾರದು.