ರಕ್ಷಣಾತ್ಮಕ ತಾರತಮ್ಯ: ಒಂದು ಕಿರು ನೋಟ
ಜಾತಿ/ಸಮುದಾಯಗಳ ಪ್ರತಿನಿಧಿಗಳು ದೂರುವ ಪ್ರಕಾರ ಮೀಸಲಾತಿ ವರ್ಗಗಳಲ್ಲಿ ಹೆಚ್ಚು ವಿದ್ಯಾವಂತ ಮತ್ತು ಸಾಮಾಜಿಕವಾಗಿ ಅನುಕೂಲವಿರುವ ಜಾತಿಗಳು ಮೀಸಲಾತಿಯ ಸವಲತ್ತುಗಳನ್ನು ಏಕಸ್ವಾಮ್ಯಗೊಳಿಸಿವೆ ಮತ್ತು ಮೀಸಲಾತಿ ವರ್ಗಗಳ ಒಳಗಿನ ಪ್ರತಿಯೊಂದು ಜಾತಿಗಳಿಗೂ ಪ್ರತ್ಯೇಕ ಕೋಟಾಗಳನ್ನು ಕೋರುವ ಹೊಸ ಪ್ರವೃತ್ತಿ ಪ್ರಾರಂಭವಾಗಿದೆ. ಈ ಪ್ರವೃತ್ತಿಯು ಜಾತಿಗಳ ಮತ್ತು ಜಾತಿಗಳೊಳಗಿನ ಉಪಜಾತಿಗಳ ಗುರುತನ್ನು ಹರಿತಗೊಳಿಸಿದೆ. ಕರ್ನಾಟಕದ ಮೀಸಲಾತಿ ಪಟ್ಟಿಯಲ್ಲಿಯೂ ಬಲಹೀನ ಜಾತಿಗಳೊಡನೆ ಬಲಾಢ್ಯ ಜಾತಿಗಳನ್ನು ಸೇರಿಸಿರುವ ದೃಷ್ಟಾಂತಗಳಿಗೇನೂ ಬರವಿಲ್ಲ. ಹೀಗಾಗಿ ನ್ಯಾಯೋಚಿತವಾಗಿ ಹಿಂದುಳಿದ ವರ್ಗಗಳಿಗೆ ಸಲ್ಲಬೇಕಾದ ಸೌಲಭ್ಯಗಳಿಂದ ಬಲಹೀನ ಜಾತಿಗಳು ವಂಚಿತವಾಗಿವೆ.
ಭಾರತವು ಬಹಳ ಹಿಂದಿನಿಂದಲೂ ದಮನ ಮತ್ತು ತುಳಿತಕ್ಕೆ ಒಳಗಾಗಿದೆ. ಪುರಾಣದ ಕಾಲದಲ್ಲಾಗಲಿ, ರಾಜಪ್ರಭುತ್ವದ ಯುಗವಾಗಲಿ ಅಥವಾ ಬ್ರಿಟಿಷ್ ಆಳ್ವಿಕೆಯ ಕಾಲದಲ್ಲಾಗಲಿ ತಳ ಸಮುದಾಯಗಳು ಯಾವಾಗಲೂ ತಾರತಮ್ಯ ಮತ್ತು ಶೋಷಣೆಗೆ ಒಳಗಾಗಿವೆ. ಪ್ರಭಾವಿ ಜನರಿಂದ ಅವರ ನೋವನ್ನು ತೋಡಿಕೊಳ್ಳದ ರೀತಿಯಲ್ಲಿ ಅವರ ಬಾಯಿಯನ್ನು ಕಟ್ಟಿ ಹಾಕಲಾಗಿದೆ. ಅವರು ಜೀವನಾನುಕೂಲವಿಲ್ಲದೆ ಮತ್ತು ಯಾವುದೇ ಆರ್ಥಿಕ ಅಧಿಕಾರವಿಲ್ಲದೆ, ಸಂತತಿಯಿಂದ ಸಂತತಿಗೆ ಬಲವಂತದ ಬಡತನ ಅನುಭವಿಸುವಂತಾಗಿದ್ದಾರೆ.
ಭಾರತೀಯ ಸಾಮಾಜಿಕ ವ್ಯವಸ್ಥೆಯೊಳಗೆ ಅಸಮಾನತೆ ಮತ್ತು ತಾರತಮ್ಯವಿರುವುದನ್ನು ಲೆಕ್ಕಿಸಿ ಸಂವಿಧಾನದಲ್ಲಿಯೇ, ‘ಆದ್ಯತಾ ಉಪಚಾರ ತತ್ವ’ದ ಅಡಿಯಲ್ಲಿ ಮೀಸಲಾತಿಗೆ ಸಂವಿಧಾನ ಪಿತೃಗಳು ಅವಕಾಶ ಕಲ್ಪಿಸಿಕೊಟ್ಟಿದ್ದಾರೆ.
ಭಾರತೀಯ ಸಂವಿಧಾನ ಹಿಂದುಳಿದ ವರ್ಗಗಳ ಸಾಮಾಜಿಕ ಅಸಮರ್ಥತೆಯನ್ನು ಹೋಗಲಾಡಿಸಲು ಒತ್ತಾಸೆಯಾಗಿ ನಿಂತಿದೆ. ಅದಕ್ಕೆ ಪೂರಕವಾಗಿ ಕೆಲವು ಕಾಯ್ದೆಗಳನ್ನೂ ಕೂಡ ಜಾರಿಗೆ ತರಲಾಗಿದೆ. ಅವುಗಳಲ್ಲಿ ಪ್ರಮುಖವಾದವು, ನಾಗರಿಕ ಹಕ್ಕುಗಳ ರಕ್ಷಣಾ ಕಾಯ್ದೆ, 1976 ಮತ್ತು ದೌರ್ಜನ್ಯ ತಡೆ ಕಾಯ್ದೆ, 1989. ಈ ಕ್ರಮಗಳು ತಾರತಮ್ಯದಂತಹ ಜಾತಿ ಪದ್ಧತಿಯನ್ನು ತೊಡೆದು ಹಾಕಲು ಮತ್ತು ಹಿಂದುಳಿದ ವರ್ಗಗಳಿಗೆ ಅವುಗಳ ಸಾಮಾಜಿಕ ನ್ಯೂನತೆಗಳನ್ನು ನಿವಾರಿಸಲು ಸಮರ್ಥನೀಯವಾದ ಆರಂಭಿಕ ಹೆಜ್ಜೆ ಗುರುತುಗಳು.
ಸರ್ವೋಚ್ಚ ನ್ಯಾಯಾಲಯ ಇಂದಿರಾ ಸಹಾನಿ ಪ್ರಕರಣದ ತೀರ್ಪಿನಲ್ಲಿ ಇತ್ತ ನಿರ್ದೇಶನದ ಅನ್ವಯ ಸರಕಾರವು ಒಬಿಸಿಗಳಿಗೆ ಉದ್ದೇಶಿಸಲಾದ ಮೀಸಲಾತಿಯ ಪ್ರಯೋಜನವನ್ನು ಕೆನೆ ಪದರ ವರ್ಗದ ಅಡಿಯಲ್ಲಿ ಬರುವ ವ್ಯಕ್ತಿಗಳಿಗೆ ವಿಸ್ತರಿಸದಿರಲೂ ನಿರ್ಧರಿಸಿತು. ಅದಕ್ಕಾಗಿ ಒಂದು ಸಮಿತಿಯನ್ನೂ ನೇಮಿಸಿ ವರದಿ ಪಡೆದುಕೊಂಡು ಅದನ್ನು ಜಾರಿಗೂ ತಂದಿತು ಕೂಡ.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗಿಂತ ಹಿಂದುಳಿದ ವರ್ಗಗಳು ಉನ್ನತ ಸ್ಥಾನದಲ್ಲಿದ್ದ ಕಾರಣ ಸಂಸತ್ತು ಮತ್ತು ಶಾಸಕಾಂಗಗಳಲ್ಲಿ ಇತರ ಹಿಂದುಳಿದ ವರ್ಗಗಳಿಗೆ ಸ್ಥಾನಗಳ ಮೀಸಲಾತಿಗೆ ಯಾವುದೇ ನಿಯಮಗಳನ್ನು ಮಾಡಲಾಗಿಲ್ಲ ಎಂಬುದು ಇಲ್ಲಿ ಉಲ್ಲೇಖನೀಯ. ಹಿಂದುಳಿದ ವರ್ಗಗಳು ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಮುಂದಿಲ್ಲದಿದ್ದರೂ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೇಲೆ ಉಂಟಾಗುವ ಅದೇ ಸಾಮಾಜಿಕ ನ್ಯೂನತೆಗಳನ್ನು ಹಿಂದುಳಿದ ವರ್ಗಗಳು ಅನುಭವಿಸುವುದಿಲ್ಲ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಮೀಸಲಾತಿಯ ಉದ್ದೇಶವು ಅವರನ್ನು ರಾಷ್ಟ್ರೀಯ ಮುಖ್ಯವಾಹಿನಿಗೆ ತರುವುದು. ಆದರೆ ಹಿಂದುಳಿದ ವರ್ಗಗಳಿಗೆ ಮೀಸಲಾತಿಯ ಉದ್ದೇಶವು ಅವರ ಸಾಮಾಜಿಕ ಮತ್ತು ಶೈಕ್ಷಣಿಕ ಹಿಂದುಳಿದಿರುವಿಕೆಯನ್ನು ತೊಡೆದು ಹಾಕುವುದು. ಪರಿಣಾಮವಾಗಿ ಹಿಂದುಳಿದ ವರ್ಗಗಳನ್ನು ವಿಭಿನ್ನವಾಗಿ ಪರಿಗಣಿಸಲಾಗಿದೆ.
ವಾಸ್ತವ:
ಅಂತಹ ರಕ್ಷಣಾತ್ಮಕ ತಾರತಮ್ಯ(protective discrimination) ದ ಯಶಸ್ಸು ಮತ್ತು ವೈಫಲ್ಯಗಳನ್ನು ನಿರ್ಣಯಿಸಲು ಕಾಲದಿಂದಲೂ ನಿರಂತರ ಪ್ರಯತ್ನಗಳನ್ನು ಮಾಡಲಾಗಿದೆ. ಅನೇಕ ಸಮಾಜ ವಿಜ್ಞಾನಿಗಳು, ರಾಜಕೀಯ ಪಕ್ಷಗಳು ಜಾತಿ/ ಸಮುದಾಯಗಳ ಸಂಘಟನೆಗಳು ಇಂತಹ ಚರ್ಚೆಗಳಲ್ಲಿ ಭಾಗವಹಿಸಿ ಹಲವು ರೀತಿಯಲ್ಲಿ ವಾದಿಸಿದ್ದಾರೆ. ಇಂತಹ ಪ್ರಯತ್ನಗಳು ಜಾತಿ/ಸಮುದಾಯಗಳ ಕೆನೆ ಪದರರಿಗೆ ಮಾತ್ರ ಲಾಭ ತಂದು ಕೊಟ್ಟಿವೆ ಎಂದು ಅನೇಕ ಸಮಾಜ ವಿಜ್ಞಾನಿಗಳು ಪ್ರತಿಪಾದಿಸುತ್ತಾರೆ. ಇನ್ನೂ ಕೆಲವರು ಮೀಸಲಾತಿಯನ್ನು ಇಂದು ಕಾಣುತ್ತಿರುವಂತೆ ಶಾಶ್ವತ ವಿಷಯವಾಗಿಸಬಾರದು ಎಂದೂ ಹೇಳುತ್ತಾರೆ. ಏಕೆಂದರೆ ಇದರಲ್ಲಿ ಒಬಿಸಿಗಳ ಹಿತವೂ ಅಡಗಿಲ್ಲ ಅಥವಾ ರಾಷ್ಟ್ರದ ಹಿತಾಸಕ್ತಿಯೂ ಇಲ್ಲ.
ಜಾತಿ/ಸಮುದಾಯಗಳ ಹಿಂದುಳಿದಿರುವಿಕೆಯನ್ನು ನಿರ್ಣಯಿಸಲು ಯಾವುದೇ ವೈಜ್ಞಾನಿಕ ಮಾನದಂಡವನ್ನು ವಿಕಸನಗೊಳಿಸದ ಕಾರಣ ರಕ್ಷಣಾತ್ಮಕ ತಾರತಮ್ಯ ನೀತಿಯ ಅಡಿಯಲ್ಲಿ ಮಾಡಲಾದ ಸಂಬಂಧಗಳು ಟೀಕೆಗೆ ಗುರಿಯಾಗುತ್ತವೆ ಮತ್ತು ಅದರಿಂದ ನಿಜವಾದ ಹಿಂದುಳಿದ ವರ್ಗಗಳು ಅಸ್ತಿತ್ವದಲ್ಲಿರುವ ಮೀಸಲಾತಿ ನೀತಿಯಿಂದ ಪ್ರಯೋಜನ ಪಡೆಯುವುದಿಲ್ಲ.
ರಕ್ಷಣಾತ್ಮಕ ತಾರತಮ್ಯವು ರಾಜಕೀಯ ತಿರುವನ್ನು ಪಡೆದುಕೊಂಡಿದೆ ಅಲ್ಲದೆ ಹೆಚ್ಚು ಸಂಕೀರ್ಣಗೊಂಡಿದೆ ಮತ್ತು ಅದರ ಪ್ರಸ್ತುತತೆಯನ್ನೂ ಕಳೆದುಕೊಂಡಿದೆ. ಮೀಸಲಾತಿಯು ಈಗ ರಾಜಕೀಯವಾಗಿ ಸೂಕ್ಷ್ಮ ವಿಷಯವಾಗಿ ಮಾರ್ಪಟ್ಟಿದೆ. ರಾಜಕೀಯ ಪಕ್ಷಗಳು ಮತ್ತು ಜಾತಿ/ಸಮುದಾಯಗಳ ಸಂಘಟನೆಗಳು ತಮ್ಮ ಪಟ್ಟ ಭದ್ರ ಹಿತಾಸಕ್ತಿಗಾಗಿ ಮೀಸಲಾತಿ ಸಮಸ್ಯೆಯನ್ನು ಹೆಚ್ಚು ಮಾಡುತ್ತಿವೆ. ಹೆಚ್ಚು ಹೆಚ್ಚು ಜಾತಿಗಳನ್ನು ಮೀಸಲಾತಿಗೆ ಒಳಪಡಿಸುವ ಕಾರ್ಯದಲ್ಲಿ ನಿರತವಾಗಿವೆ ಮತ್ತು ಜಾತಿಗಳ ನಡುವೆ ಅಸಮಾಧಾನ ಮೂಡಿಸುತ್ತಿವೆ. ಜಾತಿ/ಸಮುದಾಯಗಳ ಪ್ರತಿನಿಧಿಗಳು ದೂರುವ ಪ್ರಕಾರ ಮೀಸಲಾತಿ ವರ್ಗಗಳಲ್ಲಿ ಹೆಚ್ಚು ವಿದ್ಯಾವಂತ ಮತ್ತು ಸಾಮಾಜಿಕವಾಗಿ ಅನುಕೂಲವಿರುವ ಜಾತಿಗಳು ಮೀಸಲಾತಿಯ ಸವಲತ್ತುಗಳನ್ನು ಏಕಸ್ವಾಮ್ಯಗೊಳಿಸಿವೆ ಮತ್ತು ಮೀಸಲಾತಿ ವರ್ಗಗಳ ಒಳಗಿನ ಪ್ರತಿಯೊಂದು ಜಾತಿಗಳಿಗೂ ಪ್ರತ್ಯೇಕ ಕೋಟಾಗಳನ್ನು ಕೋರುವ ಹೊಸ ಪ್ರವೃತ್ತಿ ಪ್ರಾರಂಭವಾಗಿದೆ. ಈ ಪ್ರವೃತ್ತಿಯು ಜಾತಿಗಳ ಮತ್ತು ಜಾತಿಗಳೊಳಗಿನ ಉಪಜಾತಿಗಳ ಗುರುತನ್ನು ಹರಿತಗೊಳಿಸಿದೆ. ಕರ್ನಾಟಕದ ಮೀಸಲಾತಿ ಪಟ್ಟಿಯಲ್ಲಿಯೂ ಬಲಹೀನ ಜಾತಿಗಳೊಡನೆ ಬಲಾಢ್ಯ ಜಾತಿಗಳನ್ನು ಸೇರಿಸಿರುವ ದೃಷ್ಟಾಂತಗಳಿಗೇನೂ ಬರವಿಲ್ಲ. ಹೀಗಾಗಿ ನ್ಯಾಯೋಚಿತವಾಗಿ ಹಿಂದುಳಿದ ವರ್ಗಗಳಿಗೆ ಸಲ್ಲಬೇಕಾದ ಸೌಲಭ್ಯಗಳಿಂದ ಬಲಹೀನ ಜಾತಿಗಳು ವಂಚಿತವಾಗಿವೆ.
ಹಲವಾರು ಸಮಾಜ ವಿಜ್ಞಾನಿಗಳು ಮೀಸಲಾತಿಯ ನಂತರದ ಪರಿಣಾಮಗಳ ಬಗ್ಗೆ ಅದರಲ್ಲೂ ಬಿಹಾರ, ಮಹಾರಾಷ್ಟ್ರ, ಕರ್ನಾಟಕ, ಆಂಧ್ರಪ್ರದೇಶ ಇತ್ಯಾದಿ ರಾಜ್ಯಗಳ ಕುರಿತು ದಶಕಗಳ ಹಿಂದೆಯೇ ಅಧ್ಯಯನಾಧಾರಿತ ಅಭಿಪ್ರಾಯಗಳನ್ನು ಮಂಡಿಸಿದ್ದಾರೆ.
ಎಂ.ಎಸ್.ಎ.ರಾವ್ (1978) ಹಿಂದುಳಿದ ವರ್ಗಗಳ ಚಳವಳಿಗಳು ತಮ್ಮ ಬೆಂಬಲದ ನೆಲೆ, ಗುರಿಗಳು ಮತ್ತು ವಿಧಾನಗಳಲ್ಲಿ ಭಿನ್ನವಾಗಿರುತ್ತವೆ ಎಂದು ವಿವರಿಸುತ್ತಾರೆ. ಅಂತಹ ನಾಲ್ಕು ರೀತಿಯ ಚಲನೆಗಳನ್ನು ಅವರು ಗುರುತಿಸಿದ್ದರು. ಮದ್ರಾಸ್, ಕರ್ನಾಟಕ, ಮಹಾರಾಷ್ಟ್ರದಲ್ಲಿ ಬ್ರಾಹ್ಮಣ, ಬ್ರಾಹ್ಮಣೇತರ ಭೇದಗಳು ರಾಜಕೀಯ ಮತ್ತು ಕಸುಬಿನಲ್ಲಿ ಬ್ರಾಹ್ಮಣರ ಪ್ರಾಬಲ್ಯವನ್ನು ಕಡಿಮೆ ಮಾಡುವ ಗುರಿಯನ್ನು ಹೊಂದಿದ್ದವು. ಎರಡನೆಯ ಮಾದರಿಯು ಉತ್ತರದ ರಾಜ್ಯಗಳಲ್ಲಿ ಚಾಲ್ತಿಯಲ್ಲಿತ್ತು. ಅಲ್ಲಿ ಸಾಮಾನ್ಯವಾಗಿ ಮುಂದುವರಿದ ಮತ್ತು ‘ಎರಡು ಬಾರಿ’ ಜನಿಸಿದ ಜಾತಿಗಳ ನಡುವೆ ಬಿರುಕು ಕಾಣಿಸಿಕೊಂಡವು. ಅವೆಂದರೆ- ಬ್ರಾಹ್ಮಣ, ಭೂಮಿಹಾರ್, ಕಾಯಸ್ಥ ಮತ್ತು ರಜಪೂತ ಮತ್ತಿತರ ಜಾತಿಗಳು ಮತ್ತು ಅಹಿರ್, ಕುರ್ಮಿ ಇತ್ಯಾದಿ ಮಧ್ಯಂತರ ಜಾತಿಗಳು. ಮತ್ತೊಂದು ಮೂರನೇ ಮಾದರಿಯಲ್ಲಿ ನಿಮ್ನ ಜಾತಿಗಳು ಮತ್ತು ಮುಂದುವರಿದ ಜಾತಿಗಳ ನಡುವಿನ ಸಂಘರ್ಷ. ಬುಡಕಟ್ಟು ಚಳವಳಿಗಳು ನಾಲ್ಕನೇ ಮಾದರಿಯನ್ನು ರೂಪಿಸಿದವು.
70ರ ದಶಕದಲ್ಲಿ ಆಂಧ್ರಪ್ರದೇಶದಲ್ಲಿ ಕಾಂಗ್ರೆಸ್ ಪಕ್ಷವು ಹಿಂದುಳಿದ ವರ್ಗಗಳಿಗೆ ಶೇ.25ರಷ್ಟು ಮೀಸಲಾತಿಯನ್ನು ಒದಗಿಸಿತು ಮತ್ತು 1972ರ ನಂತರ ಕಮ್ಮ ಮತ್ತು ರೆಡ್ಡಿ ಜಾತಿಗಳಿಗೆ ಕಾಂಗ್ರೆಸ್ ಟಿಕೆಟ್ ಸಂಖ್ಯೆಯನ್ನು ಕಡಿಮೆ ಮಾಡಿತು.ಅದೇ ರೀತಿ ಕರ್ನಾಟಕದಲ್ಲಿಯೂ ಆಗಿನ ಮುಖ್ಯಮಂತ್ರಿ ದೇವರಾಜ ಅರಸು ಕಾಂಗ್ರೆಸ್ ಟಿಕೆಟ್‌ನಲ್ಲಿ ಮೇಲ್ಜಾತಿ ಲಿಂಗಾಯತ ಮತ್ತು ಒಕ್ಕಲಿಗರ ಪಾಲನ್ನು ಕೊಂಚ ತಗ್ಗಿಸಿದರು. ಗುಜರಾತ್‌ನಲ್ಲಿ ಪಾಟೀದಾರರು 1975ರಲ್ಲಿ ಕಾಂಗ್ರೆಸ್ ತೊರೆದರು. ಆದರೆ ಕೋಲಿ-ಕ್ಷತ್ರಿಯರು, ಪರಿಶಿಷ್ಟ ಜಾತಿಗಳು, ಆದಿವಾಸಿಗಳು ಮತ್ತು ಮುಸ್ಲಿಮರನ್ನು ಒಟ್ಟುಗೂಡಿಸುವ ಕಾಂಗ್ರೆಸ್ ತಂತ್ರವು ಫಲಿಸಿದ ಪ್ರಯುಕ್ತ 1980ರ ಚುನಾವಣೆಯಲ್ಲಿ ಜಯಗಳಿಸಿತು. ಹಿಂದುಳಿದ ವರ್ಗಗಳಿಗೆ ಸೇರಬೇಕೆಂದ ಪಾಟೀದಾರರು, ಕ್ಷತ್ರಿಯ ಸ್ಥಾನಮಾನಕ್ಕಾಗಿ ಹಕ್ಕು ಮಂಡಿಸಿದ್ದರೂ, ಹಿಂದುಳಿದ ಜಾತಿಗಳ ಮೀಸಲಾತಿ 1978ರಲ್ಲಿ ಶೇ.10ರಷ್ಟು ಇದ್ದದ್ದನ್ನು 1985ರಲ್ಲಿ ಶೇ.28ಕ್ಕೆ ಹೆಚ್ಚಿಸಲು ಯಶಸ್ವಿಯಾಗಿ ಪ್ರಭಾವ ಬೀರಿದ್ದರು.
ಪ್ರಸಕ್ತ ಹಿಂದುಳಿದ ವರ್ಗಗಳು ಸಾಂಪ್ರದಾಯಿಕವಾಗಿ ಕೃಷಿ, ಪಶುಸಂಗೋಪನೆ, ಕುಶಲಕರ್ಮಿ ಕೆಲಸ ಮತ್ತು ಕಸುಬು ಸಂಬಂಧಿತ ಸೇವೆಗಳಲ್ಲಿ ತೊಡಗಿಸಿಕೊಂಡಿರುವ ಜಾತಿ-ಸಮುದಾಯಗಳನ್ನು ಒಳಗೊಂಡಿವೆ. ಸಾಮಾಜಿಕ ಬದಲಾವಣೆ ಮತ್ತು ಚಲನಶೀಲತೆಯು ಅವರ ಸಾಂಪ್ರದಾಯಿಕ ಉದ್ಯೋಗ ಮತ್ತು ಸಾಮಾಜಿಕ- ಆರ್ಥಿಕ ಮತ್ತು ರಾಜಕೀಯ ಸ್ಥಿತಿಯ ಹೊರತಾಗಿಯೂ, ಹಲವಾರು ಜಾತಿ ಸಮುದಾಯಗಳು ಇನ್ನೂ ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದಿವೆ. ಜಾತಿ ಶ್ರೇಣಿ ಮತ್ತು ಉದ್ಯೋಗವು ಪ್ರಮುಖ ಮಾನದಂಡವಾಗಿದ್ದು ಹೆಚ್ಚಿನ ಹಿಂದುಳಿದ ವರ್ಗಗಳನ್ನು ಹಿಂದುಳಿದವರು ಎಂದು ಪರಿಗಣಿಸಲಾಗುತ್ತದೆ.
ಬಿಹಾರದ ಅಂದಿನ ಮುಖ್ಯಮಂತ್ರಿ ಕರ್ಪೂರಿ ಠಾಕೂರ್ ಅವರ ಮೀಸಲಾತಿ ನೀತಿಯಿಂದ ಉಂಟಾದ ಮಾರ್ಪಾಡಿನ ಬಗ್ಗೆ ಯಾರಿ ಬ್ಲೇರ್(1980) ಗಮನಿಸಿರುವಂತೆ, ಕರ್ಪೂರಿ ಠಾಕೂರ್ ಅವರ ಮೀಸಲಾತಿ ನೀತಿಯು ಬಿಹಾರದ ರಾಜಕೀಯ ಆರ್ಥಿಕತೆಯನ್ನು ಬದಲಾಯಿಸಿತು ಮತ್ತು ಸಾಮಾಜಿಕ ಶ್ರೇಣೀಕರಣದ ವ್ಯವಸ್ಥೆಯಲ್ಲಿ ಪ್ರಬಲವಾದ ಸ್ತರವಾಗಿ ಹಿಂದುಳಿದ ಜಾತಿಗಳಿಂದ ಮುಂದುವರಿದ ಜಾತಿಗಳನ್ನು ಬದಲಿಸುವ ಪ್ರಕ್ರಿಯೆಯನ್ನು ಪ್ರಾರಂಭಿಸಿತು. ಹಿಂದುಳಿದ ವರ್ಗಗಳ ಮೇಲಿನ ಸ್ತರಗಳು (ಬನಿಯ, ಯಾದವ್, ಕುರ್ಮಿ, ಕಂಡು, ತೇಲಿ, ತತ್ವ) ಅಂದರೆ ಬಿಹಾರದ ಒಟ್ಟು ಜನಸಂಖ್ಯೆಯ ಶೇ.19.3ರಷ್ಟು ರಾಜಕೀಯ ಆರ್ಥಿಕತೆಯಲ್ಲಿ ಪ್ರಾಬಲ್ಯ ಸಾಧಿಸಿವೆ ಮತ್ತು ಅವರ ಸಾಮಾಜಿಕ ಸ್ಥಿತಿಯನ್ನು ಗಮನಾರ್ಹವಾಗಿ ಸುಧಾರಿಸಿವೆ. ಪ್ರಸಕ್ತ, ಅದೇ ಮೀಸಲಾತಿ ನೀತಿ ಮುಂದುವರಿದೂ ಬಿಹಾರದಲ್ಲಿ ರಾಜಕೀಯವಾಗಿ ಮತ್ತು ಆರ್ಥಿಕವಾಗಿ ಹಿಂದುಳಿದ ವರ್ಗಗಳು ಸಾಕಷ್ಟು ಮುಂದೆ ಬಂದಿವೆ.
ಚಕ್ರವರ್ತಿ (2001) ಅವರು ಬಿಹಾರದ ‘ಜಾತಿ ಮತ್ತು ಕೃಷಿ ವರ್ಗ’ ಅಧ್ಯಯನದಲ್ಲಿ, ಸಾಂಪ್ರದಾಯಿಕ ಮತ್ತು ಹೊಸ ಪ್ರಬಲ ಜಾತಿಗಳು ರಾಜಕೀಯ ಆಶ್ರಯ ಪಡೆಯಲು ವಿಶೇಷ ಅಧಿಕಾರ ಹೊಂದಿವೆ ಅಲ್ಲದೆ ಪ್ರಬಲ ವರ್ಗಗಳಾಗಿ ರೂಪಾಂತರ ಹೊಂದುತ್ತವೆ ಎಂಬುದನ್ನು ಕಂಡುಕೊಂಡಿದ್ದಾರೆ. ಪರಿಣಾಮವಾಗಿ ಕೃಶಗೊಂಡ ಸಾಮಾಜಿಕ ಗುಂಪುಗಳಿಗೆ ಸೇರಿದವರಿಗೆ ಅಂತಹ ಅವಕಾಶ ಸಾಧ್ಯವಿಲ್ಲ. ಸಂದರ್ಭಗಳು ಮತ್ತು ಕೆಳ ಶ್ರೇಣಿ ಜಾತಿಗಳಲ್ಲಿನ ಹುಟ್ಟು ಅವರ ಸಾಮಾಜಿಕ ಮತ್ತು ಭೌತಿಕ ಸ್ಥಿತಿಯನ್ನು ನಿರ್ಧರಿಸುತ್ತದೆ.
ಉತ್ತರ ಪ್ರದೇಶದ ಬಸ್ತಿ ಜಿಲ್ಲೆಯ ಇತ್ತೀಚಿನ ಅಧ್ಯಯನ ಒಂದರಲ್ಲಿ ರಾಜೇಂದ್ರ ಸಿಂಗ್ ಅವರು ಭೂಮಿಯ ಮಾಲಕತ್ವ ಮತ್ತು ಜನರ ಬೆಂಬಲ (ಜಾತಿಗಳ ಸಂಖ್ಯಾಬಲ) ಒಟ್ಟಾಗಿ ಮಧ್ಯಮ ರೈತ ಜಾತಿಗಳು ಅಧಿಕಾರದ ಕಾರಿಡಾರ್‌ಗಳನ್ನು ತಲುಪಲು ಸುಗಮವಾಗಿಸಿದೆ ಎಂದು ಬರೆದಿದ್ದಾರೆ. ಮೇಲ್ಜಾತಿಗಳು ಭೂಮಿಯ ಮೇಲೆ ಹಿಡಿತವನ್ನು ಕಳೆದುಕೊಂಡಿರುವುದರಿಂದ ಮತ್ತು ಸಂಖ್ಯಾತ್ಮಕವಾಗಿ ಎಂದಿಗೂ ಪ್ರಾಬಲ್ಯ ಹೊಂದಿಲ್ಲದ ಕಾರಣ ಸ್ವಾತಂತ್ರ್ಯಾನಂತರದ ಯುಗದ ಬದಲಾದ ಸಂದರ್ಭಗಳಲ್ಲಿ ಅವರು ತಮ್ಮ ಸಾಂಪ್ರದಾಯಿಕತೆಯನ್ನು ಮುಂದುವರಿಸಲು ಸಾಧ್ಯವಾಗಲಿಲ್ಲ.
ರೇ ಮತ್ತು ಕುಂಪತೆ(1987) ಅವರು ಕರ್ನಾಟಕದಲ್ಲಿ ಜಿಲ್ಲಾ ಪರಿಷತ್ತಿನ ಅಧ್ಯಕ್ಷರ ಅಧ್ಯಯನದಲ್ಲಿ ಸ್ಥಳೀಯ ಆಡಳಿತದ ನಾಯಕತ್ವದ ಜಾತಿ ಸಂಯೋಜನೆಯು ಗಮನಾರ್ಹವಾಗಿ ಬದಲಾಗಿಲ್ಲ ಎಂದು ಸೂಚಿಸುತ್ತದೆ ಎಂದಿದ್ದಾರೆ. ಲಿಂಗಾಯತರು ಮತ್ತು ಒಕ್ಕಲಿಗರು ಎರಡೂ ಪ್ರಾಬಲ್ಯ ಭೂಮಾಲಕ ಜಾತಿಗಳು. ಹಿಂದಿನಂತೆ ಈಗಲೂ ಗ್ರಾಮೀಣ ರಾಜಕೀಯ ರಂಗದಲ್ಲಿ ಪ್ರಾಬಲ್ಯ ಹೊಂದಿವೆ.
ಆದರೆ ಸಂವಿಧಾನದ 73 ಮತ್ತು74ನೇ (1993)ತಿದ್ದುಪಡಿಯ ನಂತರ, ಹಿಂದುಳಿದ ವರ್ಗಗಳಿಗೆ ಮೀಸಲಾತಿ ದಕ್ಕಿದ ಮೇಲೆ, ಸದಸ್ಯ ಸಂಖ್ಯೆಯಲ್ಲಿ ಅಲ್ಪ ಸ್ವಲ್ಪ ಬದಲಾವಣೆ ಕಂಡಿದೆ. ಆದರೂ ಆ ಎರಡೂ ಜಾತಿಗಳಲ್ಲೇ ಅಧಿಕ ಸಂಖ್ಯೆಯ ಜಿಲ್ಲಾ ಪಂಚಾಯತ್ ಸದಸ್ಯರುಗಳು ಆಯ್ಕೆಯಾಗುತ್ತಿರುವುದನ್ನು ಅಂಕಿ ಅಂಶಗಳೇ ಹೇಳುತ್ತವೆ.
ಕುಶಲಕರ್ಮಿ/ಭೂರಹಿತ ಕಾರ್ಮಿಕರು ಮುಖ್ಯವಾಗಿ ಕೆಳಮುಖ ಚಲನೆಯಲ್ಲಿರುವುದನ್ನು ಕಾಣಬಹುದು. ಉನ್ನತ ಹುದ್ದೆಯ ವೃತ್ತಿಯಲ್ಲಿ ತೊಡಗಿರುವ ವಿದ್ಯಾವಂತ ಕುಟುಂಬಗಳು ಆರ್ಥಿಕವಾಗಿ ಉತ್ತಮ ಸ್ಥಿತಿಯಲ್ಲಿದ್ದು ಮೀಸಲಾತಿಯ ಗರಿಷ್ಠ ಲಾಭವನ್ನು ಪಡೆದರೆ, ಅನಕ್ಷರಸ್ಥರು ಕೆಳಮಟ್ಟದ ಉದ್ಯೋಗಗಳಲ್ಲಿ ತೊಡಗಿಸಿಕೊಂಡಿರುವ ಮತ್ತು ಆರ್ಥಿಕ ದೃಢತೆ ಇಲ್ಲದ ಬಡವರು ಮೀಸಲಾತಿಯಿಂದ ವಂಚಿತರಾಗಿದ್ದಾರೆ. ಕರ್ನಾಟಕವನ್ನೇ ಉದಾಹರಣೆಯಾಗಿ ಪರಿಗಣಿಸುವು ದಾದರೆ, ಜಾರಿಯಲ್ಲಿರುವ ಹಿಂದುಳಿದ ವರ್ಗಗಳ ಪಟ್ಟಿಯಲ್ಲಿ ಪ್ರವರ್ಗ ಒಂದು ಮತ್ತು ಎರಡರಲ್ಲಿ ಕೆಲವೇ ಕೆಲವು ಜಾತಿಗಳು ಮೀಸಲಾತಿಯ ಲಾಭವನ್ನು ಪಡೆದುಕೊಂಡಿವೆ. ಅತ್ಯಂತ ಕೆಳಸ್ತರದ, ಜನಸಂಖ್ಯೆಯಲ್ಲಿ ತೀರಾ ಕಡಿಮೆ ಇರುವ ಜಾತಿಗಳಿಗೆ ಮೀಸಲಾತಿ ಇನ್ನೂ ದೂರದ ಕನಸಾಗಿಯೇ ಉಳಿದಿದೆ. ಈ ವಿಷಯದಲ್ಲಿ ಸರಕಾರವೇ ಆಗಲಿ, ಆಯೋಗವೇ ಆಗಲಿ ಕಾಯ್ದೆ ಬದ್ಧ ಪ್ರಕಾರ್ಯಗಳನ್ನು ನಿರ್ವಹಿಸದೆ ಕರ್ತವ್ಯ ವಿಮುಖವಾಗಿವೆ.
ಸಮಾಪ್ತಿ:
ವಿವಿಧ ಕಾನೂನುಗಳು ಮತ್ತು ನಿಬಂಧನೆಗಳ ಮೂಲಕ ಭಾರತದ ಸಂವಿಧಾನವು ಸಮಾಜದ ವಿವಿಧ ವರ್ಗಗಳ ನಡುವಿನ ಅಸಮಾನತೆಗಳನ್ನು ತೊಡೆದು ಹಾಕಲು ಮತ್ತು ಎಲ್ಲರಿಗೂ ಸ್ಥಾನಮಾನ ಮತ್ತು ಅವಕಾಶದ ಸಮಾನತೆಯನ್ನು ಒದಗಿಸುವ ಗುರಿಯನ್ನು ಹೊಂದಿವೆ.
ಇನ್ನು ಮುಂದೆ ನಮ್ಮ ಸಮಾಜದಲ್ಲಿ ಪರಿಶಿಷ್ಟ ಜಾತಿಗಳು, ಪರಿಶಿಷ್ಟ ಪಂಗಡಗಳು ಮತ್ತು ಇತರ ಹಿಂದುಳಿದ ವರ್ಗಗಳ ನಾಗರಿಕರು ಮತ್ತು ಮಹಿಳೆಯರ ರಕ್ಷಣೆ ಮತ್ತು ಸಂರಕ್ಷಣೆಗಾಗಿ ಸಾಂವಿಧಾನಿಕ ಸಿದ್ಧಾಂತವಾಗಿ ರಕ್ಷಣಾತ್ಮಕ ತಾರತಮ್ಯವನ್ನು (ಮೀಸಲಾತಿ)ಶಿಫಾರಸು ಮಾಡಲಾಗಿದೆ. ಸರಕಾರಿ ಸೇವೆಗಳು ಮತ್ತು ಹುದ್ದೆಗಳಿಗೆ ಸಂಬಂಧಿಸಿದ ವರ್ಗಗಳು ಹೆಚ್ಚು ಹೆಚ್ಚು ಪ್ರಯೋಜನ ಪಡೆದುಕೊಂಡಷ್ಟೂ ಸಾಮಾಜಿಕ ಅಸಮಾನತೆ ಅಷ್ಟಿಷ್ಟಾದರೂ ಅಳಿಯಲು ಸಾಧ್ಯ.