ಸಾರ್ವಜನಿಕ ಸೇವೆ ಪರಿಣಾಮಕಾರಿಯಾಗಬೇಕು

Update: 2024-07-04 04:44 GMT

ವಿವಿಧ ಸಾರ್ವಜನಿಕ ಕ್ಷೇತ್ರಗಳಲ್ಲಿ ಹೂಡುವುದರ ಜೊತೆಗೆ ಅದು ಸಾರ್ವಜನಿಕ ಸೇವೆಯನ್ನು ಎಷ್ಟರ ಮಟ್ಟಿಗೆ ಉತ್ತಮ ಪಡಿಸುತ್ತದೆ ಮತ್ತು ಆ ಮೂಲಕ ಜನರ ಬದುಕನ್ನು ಹೇಗೆ ಸುಧಾರಿಸುತ್ತದೆ ಅನ್ನುವುದನ್ನು ಗಮನಿಸಬೇಕು. ನಿಜ, ಒಬ್ಬ ವ್ಯಕ್ತಿಗೆ ಒಂದು ಮತದ ಹಕ್ಕು ಇದೆ. ಆ ಮಟ್ಟಿಗೆ ರಾಜಕೀಯ ಸಮಾನತೆ ಇದೆ ಎಂದು ಭಾವಿಸಬಹುದು. ಜಾತಿ, ಹಣ, ಶಿಕ್ಷಣ ಇವೆಲ್ಲಾ ನಮಗೆ ಸಿಗಲಿರುವ ಸೌಲಭ್ಯದ ಮಟ್ಟವನ್ನು ನಿರ್ಧರಿಸುತ್ತಿವೆ. ಕೆಲಸ ಮಾಡುವುದಕ್ಕೆ, ಸ್ಪರ್ಧಿಸುವುದಕ್ಕೆ ಇರುವ ಸಾಮರ್ಥ್ಯವನ್ನು ನಿರ್ಧರಿಸುವ ಶಿಕ್ಷಣ, ಆರೋಗ್ಯ ಇವುಗಳಲ್ಲಿ ಇಂದು ಢಾಳಾಗಿ ಕಾಣುತ್ತಿರುವ ಅಸಮಾನತೆ ತಪ್ಪಬೇಕು. ಅದನ್ನು ಸಾಧ್ಯಮಾಡುವುದಕ್ಕೆ ಸರಕಾರಕ್ಕೆ ಹೆಚ್ಚಿನ ನೈತಿಕ ಸಾಮರ್ಥ್ಯ ಬೇಕು. ಆಗಷ್ಟೇ ಭಾರತದಲ್ಲಿ ಪ್ರಜಾಸತ್ತೆ ಪರಿಣಾಮಕಾರಿಯಾಗುವುದಕ್ಕೆ ಸಾಧ್ಯ.

ಭಾರತ ಆರ್ಥಿಕವಾಗಿ ಬಲಾಢ್ಯ ರಾಷ್ಟ್ರವಾಗಲಿದೆ ಎಂದು ಸಂಭ್ರಮಿಸುವುದಕ್ಕೆ ಕಾರಣಗಳು ಇರುವಂತೆಯೇ, ನಮ್ಮ ಆರ್ಥಿಕತೆಯಲ್ಲಿ ಗಂಭೀರವಾದ ಸಮಸ್ಯೆಗಳಿವೆ ಎಂದು ಆತಂಕಗೊಳ್ಳುವುದಕ್ಕೂ ಕಾರಣಗಳಿವೆ. ಈ ಕುರಿತು ನಮ್ಮ ದೇಶದ ಆರ್ಥಿಕತೆಯ ಬಗ್ಗೆ ಅಪಾರ ಕಾಳಜಿಯುಳ್ಳ ಹಲವು ಅರ್ಥಶಾಸ್ತ್ರಜ್ಞರು ಎಚ್ಚರಿಸಿದ್ದಾರೆ. ನಮ್ಮ ಆರ್ಥಿಕ ಬೆಳವಣಿಗೆಯ ದೃಷ್ಟಿಯಿಂದ ಹಲವು ಸಲಹೆಗಳನ್ನೂ ನೀಡುತ್ತಾ ಬಂದಿದ್ದಾರೆ. ಉದಾಹರಣೆಗೆ ಇತ್ತೀಚೆಗೆ ಕಾರ್ತಿಕ್ ಮುರಳೀಧರನ್ ತಮ್ಮ ಇಪ್ಪತ್ತೈದು ವರ್ಷಗಳ ಸಂಶೋಧನೆಯನ್ನು ‘ಐಕ್ಸೇಲ್‌ರೇಟಿಂಗ್ ಇಂಡಿಯಾಸ್ ಡೆವಲಪ್‌ಮೆಂಟ್’ ಕೃತಿಯ ಮೂಲಕ ನಮ್ಮ ಮುಂದಿಟ್ಟಿದ್ದಾರೆ.

ಮುರಳೀಧರನ್ ಹೇಳುವಂತೆ ಸ್ವಾತಂತ್ರ್ಯ ಬಂದಾಗ ಭಾರತದ ಸ್ಥಿತಿ ತೀರಾ ಕೆಟ್ಟದಾಗಿತ್ತು. ಹಲವರು ಭಾರತ ಒಟ್ಟಿಗೆ ಉಳಿಯುತ್ತಾ ಎಂದು ಅನುಮಾನವನ್ನೂ ವ್ಯಕ್ತಪಡಿಸಿದ್ದರು. ಅದರೆ ಭಾರತ ಒಟ್ಟಾಗಿ ಉಳಿದಿದೆ. ನಿರೀಕ್ಷೆಯನ್ನು ಮೀರಿ ಅಭಿವೃದ್ಧಿಯನ್ನೂ ಸಾಧಿಸಿದೆ. ನಮ್ಮ ದೇಶದ ಸಂವಿಧಾನ 75 ವರ್ಷ ಉಳಿದುಕೊಂಡಿದೆ. ಇದು ನಿಜವಾಗಿ ಹೆಮ್ಮೆ ಪಡಬೇಕಾದ ವಿಷಯ. ಜೊತೆಗೆ ಆರ್ಥಿಕವಾಗಿಯೂ ಸುಧಾರಣೆಯಾಗಿದೆ. ಬಡತನ, ಹಸಿವು ಇವೆಲ್ಲಾ ಸ್ವಲ್ಪವಾದರೂ ಕಡಿಮೆಯಾಗಿದೆ. 1947ರಲ್ಲಿ ಶೇ. 70ರಷ್ಟಿದ್ದ ದಾರಿದ್ರ್ಯ 2011ರ ವೇಳೆಗೆ ಶೇ. 21.9ಕ್ಕೆ ಬಂದಿದೆ. ಖಾಸಗಿ ಕ್ಷೇತ್ರವೂ ಗಣನೀಯವಾಗಿ ಬೆಳೆದಿದೆ.

ಆಡಳಿತದಲ್ಲೂ ಸಾಕಷ್ಟು ಸುಧಾರಣೆಗಳಾಗಿವೆ. ಜಗತ್ತಿನಲ್ಲೇ ದೊಡ್ಡ ಪ್ರಮಾಣದ ಚುನಾವಣೆಯನ್ನು ಯಶಸ್ವಿಯಾಗಿ ಮಾಡುತ್ತಿದ್ದೇವೆ. ಕುಂಭಮೇಳದಂತಹ ದೊಡ್ಡ ಮೇಳಗಳನ್ನು ಆಚರಿಸಿಬಿಡುತ್ತೇವೆ. ಆದರೆ ನಮ್ಮ ಯಶಸ್ಸು ಆಗೊಮ್ಮೆ ಈಗೊಮ್ಮೆ ನಡೆಯುವ ಬೃಹತ್ ಕಾರ್ಯಕ್ರಮಗಳಿಗೆ ಸೀಮಿತವಾಗಿದೆ. ದಿನನಿತ್ಯ ಒದಗಿಸಬೇಕಾದ ಶಿಕ್ಷಣ, ಆರೋಗ್ಯ, ರಕ್ಷಣೆ, ನ್ಯಾಯ ಇತ್ಯಾದಿ ಮೂಲಭೂತ ಸಾರ್ವಜನಿಕ ಸೇವೆಗಳನ್ನು ಪರಿಣಾಮಕಾರಿಯಾಗಿ ಜನರಿಗೆ ಸಿಗುವಂತೆ ಮಾಡುವಲ್ಲಿ ಆ ಮಟ್ಟಿನ ಯಶಸ್ಸು ಸಾಧ್ಯವಾಗಿಲ್ಲ.

ಶಿಕ್ಷಣವನ್ನು ಗಮನಿಸಿ. ವರ್ಷಕ್ಕೆ 7.5 ಲಕ್ಷ ಕೋಟಿ ರೂಪಾಯಿಗಳನ್ನು ಅದಕ್ಕಾಗಿ ಹೂಡುತ್ತಿದ್ದೇವೆ. ಶೇ. 90 ಮಕ್ಕಳು ಶಾಲೆಗೆ ಹೋಗುತ್ತಿದ್ದಾರೆ. ಆದರೆ ಶೇ. 50ಕ್ಕೂ ಹೆಚ್ಚು ಮಕ್ಕಳಿಗೆ ಓದುವ ಸಾಮರ್ಥ್ಯ ಬಂದಿಲ್ಲ. ಅವರಿಗೆ ಆಧುನಿಕ ಆರ್ಥಿಕತೆಯಲ್ಲಿ ಭಾಗವಹಿಸುವುದಕ್ಕೆ ಸಾಧ್ಯವಾಗುವುದಿಲ್ಲ. ಆರೋಗ್ಯದ ವಿಷಯಕ್ಕೆ ಬಂದರೆ ಪೌಷ್ಟಿಕಾಂಶದ ಕೊರತೆಯಿಂದ ಬಳಲುತ್ತಿರುವವರ ಸಂಖ್ಯೆ ಶೇ. 25ಕ್ಕಿಂತ ಹೆಚ್ಚಿದೆ. 600 ಲಕ್ಷ ಮಕ್ಕಳ ಬೆಳವಣಿಗೆ ಕುಂಠಿತವಾಗಿದೆ. ಆರೋಗ್ಯ ವ್ಯವಸ್ಥೆ ಶೇ. 60ಕ್ಕಿಂತ ಹೆಚ್ಚು ಖಾಸಗಿಯವರ ಕೈಯಲ್ಲಿದೆ. ಪರಿಸರ ಹದಗೆಟ್ಟು ಜನರ ಆರೋಗ್ಯವನ್ನು ಇನ್ನಷ್ಟು ಹಾಳು ಮಾಡುತ್ತಿದೆ. ಜಗತ್ತಿನ 15 ಅತ್ಯಂತ ಮಾಲಿನ್ಯಗೊಂಡ ನಗರಗಳಲ್ಲಿ 13 ನಗರಗಳು ಭಾರತದಲ್ಲಿವೆ.

ಸಾರ್ವಜನಿಕ ಸುರಕ್ಷತೆ ಸರಕಾರದ ಮೂಲ ಕರ್ತವ್ಯ. ನಡೆಯುವ ಬಹುತೇಕ ಅಪರಾಧಗಳು ವರದಿಯೂ ಆಗುವುದಿಲ್ಲ. ಹೆಚ್ಚೆಂದರೆ ಶೇ. 10ರಿಂದ 15ರಷ್ಟು ಅಪರಾಧಗಳು ವರದಿಯಾಗುತ್ತಿವೆ. ಇನ್ನೂ ನ್ಯಾಯಾಲಯಗಳಲ್ಲಿ ಇತ್ಯರ್ಥವಾಗದಿರುವ ಪ್ರಕರಣಗಳು 300 ಲಕ್ಷಕ್ಕೂ ಹೆಚ್ಚು ಇವೆೆಯಂತೆ. ಜೊತೆಗೆ ಪ್ರತಿವರ್ಷ 10 ಲಕ್ಷ ಪ್ರಕರಣಗಳು ಸೇರ್ಪಡೆಯಾಗುತ್ತಿವೆ.

ಮೂಲಭೂತ ಸೌಕರ್ಯ ಒದಗಿಸುವಲ್ಲಿ ಸರಕಾರ ವಿಫಲವಾದಾಗ ಹೆಚ್ಚು ತೊಂದರೆಗೆ ಒಳಗಾಗುವವರು ಬಡವರು. ಅವರು ಬಹುತೇಕ ಸೌಲಭ್ಯಗಳಿಗೆ ಸರಕಾರವನ್ನು ನೆಚ್ಚಿಕೊಂಡಿರುತ್ತಾರೆ. ಆದರೆ ಗುಣಮಟ್ಟದ ಸೌಕರ್ಯವನ್ನು ಒದಗಿಸುವಂತೆ ಸರಕಾರವನ್ನು ಒತ್ತಾಯಿಸುವ ಅಥವಾ ಪ್ರಭಾವಿಸುವ ಸಾಮರ್ಥ್ಯ ಅವರಿಗಿರುವುದಿಲ್ಲ. ಹಾಗಾಗಿ ಸರಕಾರ ವಿಫಲವಾದಾಗ ಅಪಾರ ಹಣ ತೆತ್ತು ಖಾಸಗಿಯವರಿಂದ ಆ ಸೌಲಭ್ಯಗಳನ್ನು ಪಡೆದುಕೊಳ್ಳಬೇಕಾಗುತ್ತದೆ. ಸರಕಾರದ ವೈಫಲ್ಯಕ್ಕೆ ಹಣದ ಕೊರತೆ ಕಾರಣವಲ್ಲ. ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸುವುದಕ್ಕೆ ಬೇಕಾದ ಸಾಮರ್ಥ್ಯ ಸರಕಾರಕ್ಕೆ ಇಲ್ಲ. ಈ ಆಡಳಿತಾತ್ಮಕ ದುರ್ಬಲತೆಯಿಂದಾಗಿ ಸರಕಾರಕ್ಕೆ ತನ್ನ ವೆಚ್ಚಕ್ಕೆ ಅನುಗುಣವಾಗಿ ಅಪೇಕ್ಷಿತ ಪರಿಣಾಮವನ್ನು ಪಡೆಯುವುದಕ್ಕೆ ಸಾಧ್ಯವಾಗುತ್ತಿಲ್ಲ. ಸರಕಾರದ ಸಾಮರ್ಥ್ಯ ವೃದ್ಧಿಯಾಗದೇ ಹೋದರೆ ಈ ಸಮಸ್ಯೆಯಿಂದ ಹೊರಬರಲಾಗುವುದಿಲ್ಲ. ನಾವು ಇಂದೂ 1950ರಲ್ಲಿ ಚಾಲು ಮಾಡಿದ ವಾಹನದಲ್ಲೇ ಕುಳಿತು ಉನ್ನತ ಬದುಕನ್ನು ನಿರೀಕ್ಷಿಸುತ್ತಾ ಸಾಗುತ್ತಿದ್ದೇವೆ. ಈಗ ಅದರ ಕಾರ್ಯಕ್ಷಮತೆ ಕಡಿಮೆಯಾಗಿದೆ. ನೀವು ಇಂಧನದ ಮೇಲೆ ಎಷ್ಟೇ ಹಣ ಚೆಲ್ಲಿದರೂ ನಿರೀಕ್ಷಿತ ಪರಿಣಾಮ ಸಿಗುವುದಿಲ್ಲ. ವಾಹನದ ಕಾರ್ಯಕ್ಷಮತೆಯನ್ನು ಹೆಚ್ಚಿಸಬೇಕು ಅನ್ನುವುದು ಕಾರ್ತಿಕ್ ಅವರ ವಾದ.

ಬಹುತೇಕ ದೇಶಗಳಲ್ಲಿ ಪ್ರಜಾಸತ್ತಾತ್ಮಕ ವ್ಯವಸ್ಥೆ ಅಸ್ತಿತ್ವಕ್ಕೆ ಬರುವುದು ಆರ್ಥಿಕ ಬೆಳವಣಿೆಗೆ ಒಂದು ಮಟ್ಟವನ್ನು ತಲುಪಿದ ಮೇಲೆ. ಆದರೆ ಭಾರತದಲ್ಲಿ ಅಂತಹ ಬೆಳವಣಿಗೆಗೆ ಮೊದಲೇ ಪ್ರಜಾತಂತ್ರ ಸಾಧ್ಯವಾಯಿತು. ಸ್ವಾತಂತ್ರ್ಯ ಸಿಕ್ಕ ದಿನವೇ ಮತದಾನದ ಹಕ್ಕು ಎಲ್ಲರಿಗೂ ಸಿಕ್ಕಿತು. ಅದು ನೈತಿಕವಾಗಿ ದೊಡ್ಡ ಸಾಧನೆ. ಹೆಗ್ಗಳಿಕೆಯ ವಿಷಯ. ಅಷ್ಟೇ ಅಲ್ಲ ಆರ್ಥಿಕ ಬೆಳವಣಿಗೆಗೆ ಕಾಯದೆ ಜನ ಕಲ್ಯಾಣ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದೇವೆ. ಭಾರತದಲ್ಲಿ ಇನ್ನೂ ತಲಾ ವಾರ್ಷಿಕ ವರಮಾನ 1,200 ಡಾಲರ್ ಇದ್ದಾಗಲೇ ಸಾರ್ವಜನಿಕ ಪಡಿತರ ಪದ್ಧತಿ ಪ್ರಾರಂಭವಾಯಿತು. ಅಮೆರಿಕದಲ್ಲಿ ಆಹಾರದ ಸೌಲಭ್ಯ ಕಲ್ಪಿಸುವಾಗ ಅಲ್ಲಿಯ ತಲಾ ವರಮಾನ ಇದರ 15 ಪಟ್ಟು ಇತ್ತು. ನಿಜ, ಇದು ನೈತಿಕವಾಗಿ ದೊಡ್ಡ ಸಾಧನೆ.

ದಿನ ಕಳೆದಂತೆ ಸರಕಾರದಿಂದ ಜನರ ನಿರೀಕ್ಷೆ ಹೆಚ್ಚುತ್ತಾ ಹೋಯಿತು. ಪರಿಣಾಮವಾಗಿ ಜವಾಬ್ದಾರಿಯೂ ಹೆಚ್ಚುತ್ತಾ ಹೋಯಿತು. ಪ್ರಾರಂಭದಲ್ಲಿ ದೇಶದ ಗಡಿಯನ್ನು ಹಾಗೂ ಅಂತರಿಕ ಕಾನೂನು ವ್ಯವಸ್ಥೆಯನ್ನು ಕಾಪಾಡಿಕೊಳ್ಳುವುದು ಮುಖ್ಯವಾಗಿತ್ತು. ರಾಷ್ಟ್ರ ನಿರ್ಮಾಣದ ಕನಸನ್ನು ಇಟ್ಟುಕೊಂಡಿದ್ದ ಆಗಿನ ಸರಕಾರಕ್ಕೆ, ಕೈಗಾರಿಕೆಗಳನ್ನು ನಿರ್ಮಿಸುವುದು, ಉನ್ನತ ಶಿಕ್ಷಣ ಹಾಗೂ ತಾಂತ್ರಿಕ ಉನ್ನತಿಯನ್ನು ಸಾಧಿಸುವುದು, ಸರಕಾರಿ ವ್ಯವಸ್ಥೆಯನ್ನು ನಿರ್ಮಿಸುವುದು ಆದ್ಯತೆ ವಿಷಯವಾಗಿತ್ತು. ಕ್ರಮೇಣ ಮೂಲಭೂತ ಸೌಕರ್ಯವನ್ನು ಒದಗಿಸುವುದು, ಆರ್ಥಿಕ ಬೆಳವಣಿಗೆಯನ್ನು ಉತ್ತೇಜಿಸುವುದು, ಆರ್ಥಿಕ ಚಟುವಟಿಕೆಗಳನ್ನು ಹಾಗೂ ಉದ್ದಿಮೆಗಳನ್ನು ನಿಯಂತ್ರಿಸುವುದು, ಸಾರ್ವಜನಿಕ ಸೇವೆಯನ್ನು ಒದಗಿಸುವುದು, ಸಮಾನತೆ ಹಾಗೂ ಸಾಮಾಜಿಕ ನ್ಯಾಯ ಒದಗಿಸುವುದು ಇವೆಲ್ಲಾ ಸರಕಾರದ ಜವಾಬ್ದಾರಿಗಳಾಗುತ್ತಾ ಬಂದವು. ಸರಕಾರದ ಗುರಿಯ ವ್ಯಾಪ್ತಿ ಹಿಗ್ಗುತ್ತಾ ಹೋಯಿತು. ಆದರೆ ಅದಕ್ಕೆ ತಕ್ಕಂತೆ ಅದನ್ನು ಈಡೇರಿಸಲು ಬೇಕಾದ ಸಾಮರ್ಥ್ಯ ಹೆಚ್ಚಲಿಲ್ಲ. ರಾಜಕೀಯ ಸ್ವಾತಂತ್ರ್ಯ ಜನರ ನಿರೀಕ್ಷೆಯನ್ನು ಹೆಚ್ಚಿಸಿತು. ಅದನ್ನು ಪೂರೈಸಬೇಕಾದ ಒತ್ತಡ ಸರಕಾರಕ್ಕೆ ಹೆಚ್ಚುತ್ತಾ ಹೋಯಿತು. ಆದರೆ ಅದಕ್ಕೆ ಬೇಕಾದ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳುವುದಕ್ಕೆ ರಾಜಕೀಯ ಒತ್ತಾಯವಾಗಲಿ, ಉತ್ತೇಜನವಾಗಲಿ ಇರಲಿಲ್ಲ. ನಿರೀಕ್ಷೆಗೆ ತಕ್ಕಂತೆ ಸಾಮರ್ಥ್ಯ ಬೆಳೆಯಲಿಲ್ಲ. ಇದು ಸರಕಾರದ ಸಾಮರ್ಥ್ಯವನ್ನು ಇನ್ನಷ್ಟು ಕುಗ್ಗಿಸುತ್ತದೆ. ಭಾರ ಎತ್ತುವವರು ತಮ್ಮ ದೇಹದ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳುತ್ತಾ ಅದಕ್ಕೆ ತಕ್ಕಂತೆ ಭಾರದ ಪ್ರಮಾಣವನ್ನು ಹೆಚ್ಚಿಸಿಕೊಳ್ಳಬೇಕು. ಇಲ್ಲದೇ ಹೋದರೆ ದೇಹಕ್ಕೆ ನೋವಾಗುತ್ತದೆ. ಜನರ ನಿರೀಕ್ಷೆಗೆ ಸ್ಪಂದಿಸದೆ ಹೋದಾಗ ಸರಕಾರದ ಮೇಲಿನ ವಿಶ್ವಾಸ ಕಡಿಮೆಯಾಗುತ್ತದೆ. ಸರಕಾರದ ಕಾರ್ಯಕ್ರಮಗಳಿಗೆ ಜನರ ಬೆಂಬಲ ಸಿಗುವುದಿಲ್ಲ. ಇದು ಒಟ್ಟಾರೆ ಸರಕಾರದ ಆಡಳಿತದ ಮೇಲೆ ಪರಿಣಾಮ ಬೀರುತ್ತದೆ.

ಸರಕಾರಕ್ಕೆ ಜನರ ಬೆಂಬಲ ವ್ಯಕ್ತವಾಗುವುದು ಚುನಾವಣೆಗಳಲ್ಲಿ. ಪ್ರಾರಂಭದಲ್ಲಿ ಮತದಾರರನ್ನು ಓಲೈಸುವ ಅವಶ್ಯಕತೆ ಸರಕಾರಕ್ಕೆ ಇರಲಿಲ್ಲ. ಆಗಿನ ಬಹುತೇಕ ನಾಯಕರು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ್ದರು. ಕಾಂಗ್ರೆಸ್ ಬಗ್ಗೆ ಜನರಿಗೆ ವಿಶೇಷ ಗೌರವವಿತ್ತು. ಚುನಾವಣೆಯಲ್ಲಿ ಗೆಲುವು ದೊಡ್ಡ ವಿಷಯವಾಗಿರಲಿಲ್ಲ. ನಂತರದ ದಿನಗಳಲ್ಲಿ ಕಾಂಗ್ರೆಸ್ ಒಡೆಯಿತು. ಹಲವು ಪ್ರಾಂತೀಯ ಪಕ್ಷಗಳು ಹುಟ್ಟಿಕೊಂಡವು. ಚುನಾವಣೆಯ ಸ್ಪರ್ಧೆ ಹೆಚ್ಚಿತು. ಚುನಾವಣಾ ಲೆಕ್ಕಾಚಾರ ಸರಕಾರದ ನೀತಿಗಳನ್ನು ಪ್ರಭಾವಿಸುವುದಕ್ಕೆ ಪ್ರಾರಂಭಿಸಿತು. ಕಣ್ಣಿಗೆ ಕಾಣುವ ಕಾರ್ಯಕ್ರಮಗಳು ಮುನ್ನೆಲೆಗೆ ಬರತೊಡಗಿದವು. ಶಾಲೆ ಕಟ್ಟಡದ ನಿರ್ಮಾಣ, ಮಕ್ಕಳ ಕಲಿಕೆಗಿಂತ ಮುಖ್ಯವಾಯಿತು. ಸರಕಾರದ ನೀತಿಗಳನ್ನು ರಾಜಕೀಯ ಲೆಕ್ಕಾಚಾರ ನಿರ್ಧರಿಸತೊಡಗಿತು.

ನಮ್ಮಲ್ಲಿ ಹೆಚ್ಚು ಮತ ಪಡೆದವರು ಚುನಾವಣೆಯಲ್ಲಿ ಗೆಲ್ಲುತ್ತಾರೆ. ಶೇ. 50 ಮತದಾನವಾಗುತ್ತದೆ ಅಂದುಕೊಂಡರೆ, ಅದರಲ್ಲಿ ಗೆದ್ದವನಿಗೆ ಶೇ. 40 ಮತ ಬಂದಿದ್ದರೆ ಒಟ್ಟಾರೆ ಮತಗಳಲ್ಲಿ ಗೆದ್ದವನಿಗೆ ಸಿಕ್ಕಿರುವುದು ಕೇವಲ ಶೇ. 20 ಮತ. ಅಂದರೆ ಒಟ್ಟು ಮತದಾರರಲ್ಲಿ ಶೇ. 20ರಿಂದ 30 ಮತ ಪಡೆದವರು ಚುನಾವಣೆಯಲ್ಲಿ ಗೆಲ್ಲಬಹುದು. ಅಂದರೆ ಇಡೀ ಮತದಾರರನ್ನು ತೃಪ್ತಿಪಡಿಸುವ ಅವಶ್ಯಕತೆ ಇಲ್ಲ. ಕೇವಲ ಶೇ. 30 ಮತದಾರರು ಅಭ್ಯರ್ಥಿಯನ್ನು ಬಲವಾಗಿ ಸಮರ್ಥಿಸಿದರೆ ಸಾಕು. ಈ ಬೆಳೆವಣಿಗೆಯಿಂದ ತಮ್ಮ ಸಮರ್ಥಕರನ್ನು ಓಲೈಸುವ, ಉಳಿಸಿಕೊಳ್ಳುವ ವೋಟ್‌ಬ್ಯಾಂಕ್ ರಾಜಕೀಯ ಇಂದು ವ್ಯಾಪಕವಾಗಿದೆ. ಇದಕ್ಕೆ ಜಾತಿ, ಧರ್ಮ, ಭಾಷೆ ಏನೇ ಬೇಕಾದರೂ ಆಧಾರವಾಗಿರಬಹುದು. ಹಾಗಾಗಿ ಸರಕಾರ ತನ್ನಲ್ಲಿರುವ ಮಿತವಾದ ಸಂಪನ್ಮೂಲವನ್ನು ತನ್ನ ಬೆಂಬಲಿಗರಿಗೆ ನೇರವಾಗಿ ವರ್ಗಾಯಿಸಿ ಅವರ ಮತಗಳನ್ನು ಗಟ್ಟಿ ಮಾಡಿಕೊಳ್ಳುವ ಕಡೆ ಗಮನಕೊಡುತ್ತದೆ. ಜನರೂ ತಮ್ಮ ಹಿತಾಸಕ್ತಿಯನ್ನು ಕಾಪಾಡುವ ಪ್ರತಿನಿಧಿಗಳನ್ನು ಬಯಸುತ್ತಾರೆ. ಹಾಗಾಗಿ ಒಟ್ಟಾರೆ ಸರಕಾರದ ಸಾಮರ್ಥ್ಯವನ್ನು ಬೆಳೆಸುವುದಕ್ಕೆ ಉತ್ತೇಜನ ಇನ್ನೂ ಕಡಿಮೆಯಾಗುತ್ತದೆ. ಸರಕಾರ ಇನ್ನಷ್ಟು ಸಾಮರ್ಥ್ಯ ಕಳೆದುಕೊಳ್ಳುತ್ತದೆ. ಧ್ರುವೀಕರಣ ಇನ್ನಷ್ಟು ತೀವ್ರವಾಗುತ್ತದೆ.


 



ಸಮಸ್ಯೆ ಇರುವುದು ಹಣದ ಹೂಡಿಕೆಯಲ್ಲಿ ಅಲ್ಲ. ಅದು ಸರಕಾರದ ಸಾಮರ್ಥ್ಯದ ಕೊರತೆಯಿಂದ. ಅದರಿಂದ ನಿರೀಕ್ಷಿತ ಪರಿಣಾಮ ಸಾಧ್ಯವಾಗುತ್ತಿಲ್ಲ. ಶಾಲೆಗಳಲ್ಲಿ ಪರಿಣಾಮಕಾರಿ ಕಲಿಕೆ ಸಾಧ್ಯವಾಗುತ್ತಿಲ್ಲ. ಆಸ್ಪತ್ರೆಗಳಲ್ಲಿ ಪರಿಣಾಮಕಾರಿ ಸೇವೆ ದೊರಕುತ್ತಿಲ್ಲ ಇತ್ಯಾದಿ. ಇದರಿಂದ ಆಗುತ್ತಿರುವ ಇನ್ನೊಂದು ಪರಿಣಾಮವೆಂದರೆ ನಮ್ಮ ದೇಶದ ಎಲೈಟುಗಳು ಹಾಗೂ ಮಧ್ಯಮ ವರ್ಗದವರೂ ಸಾರ್ವಜನಿಕ ಸೇವೆಗಳಿಂದ ವಿಮುಖರಾಗುತ್ತಿದ್ದಾರೆ. ಅವರು ಶಿಕ್ಷಣ, ಆರೋಗ್ಯ, ಸಾರಿಗೆ ಕೊನೆಗೆ ಸುರಕ್ಷತೆ ಹೀಗೆ ಪ್ರತಿಯೊಂದಕ್ಕೂ ಖಾಸಗಿ ಸೇವೆಯನ್ನು ಬಳಸಿಕೊಳ್ಳುತ್ತಿದ್ದಾರೆ. ಹಾಗಾಗಿ ಸಾರ್ವಜನಿಕ ಕ್ಷೇತ್ರದಲ್ಲಿ ಗುಣಮಟ್ಟದ ಸೇವೆಗೆ ಒತ್ತಾಯ ಮಾಡುವುದಕ್ಕೆ ಯಾರೂ ಇಲ್ಲ. ಎಲೈಟುಗಳು ಬಳಸಿಕೊಳ್ಳುತ್ತಿದ್ದಾಗ ಸಾರ್ವಜನಿಕ ಸೇವೆಯ ಗುಣಮಟ್ಟ ಹೆಚ್ಚಿರುತ್ತಿತ್ತು ಎಂದು ಕಾರ್ತಿಕ್ ಹಲವು ಅಧ್ಯಯನಗಳನ್ನು ಉಲ್ಲೇಖಿಸುತ್ತಾರೆ. ಅಷ್ಟೇ ಅಲ್ಲ ಸಾರ್ವಜನಿಕ ಸೇವೆ ಸುಧಾರಿಸಿದರೆ ಖಾಸಗಿ ಸೇವೆಯ ಮೇಲೂ ಒತ್ತಡ ಹೆಚ್ಚುತ್ತದೆ. ಅದು ಸುಧಾರಿಸಬೇಕಾಗುತ್ತದೆ. ಇದೊಂದು ರೀತಿ ಬೆನ್ನು ಹತ್ತಿದ ಕರಡಿಯನ್ನು ತಪ್ಪಿಸಿಕೊಳ್ಳಲು ಓಡುತ್ತಿರುವ ಇಬ್ಬರು ಮನುಷ್ಯರಂತೆ. ಇಬ್ಬರೂ ಒಬ್ಬರನ್ನು ಸದಾ ಇನ್ನೊಬ್ಬರು ಹಿಂದೆ ಹಾಕಿ ಮುಂದೆ ಓಡುತ್ತಿರಬೇಕು. ಹಿಂದೆ ಬಿದ್ದವರು ಕರಡಿಗೆ ಸಿಕ್ಕಿಬಿದ್ದು ಸಾಯುತ್ತಾರೆ. ಸಾರ್ವಜನಿಕ ಸೇವೆ ಸುಧಾರಿಸಿದರೆ ತಮಗೂ ಒಳ್ಳೆಯದು ಅನ್ನುವುದು ಎಲೈಟುಗಳಿಗೂ ಅರ್ಥವಾಗಬೇಕು. ವಾಯುಮಾಲಿನ್ಯವನ್ನು ತಪ್ಪಿಸಿಕೊಳ್ಳುವುದಕ್ಕೆ ಮನೆಯೊಳಗಡೆ ಫಿಲ್ಟರ್ ಹಾಕಿಕೊಳ್ಳಬಹುದು. ಆದರೆ ಮನೆಯ ಆಚೆ ಬಂದರೆ ಎಲ್ಲರಂತೆ ಅವರೂ ಮಾಲಿನ್ಯವನ್ನು ಎದುರಿಸಬೇಕು.

ನಮ್ಮಲ್ಲಿ ಆರ್ಥಿಕ ಬೆಳವಣಿಗೆ ಹಾಗೂ ಅಭಿವೃದ್ಧಿಗೆ ಸಂಬಂಧಿಸಿದಂತೆ ಎರಡು ಅಭಿಪ್ರಾಯಗಳಿವೆ. ಇಬ್ಬರು ಹಿರಿಯ ಅರ್ಥಶಾಸ್ತ್ರಜ್ಞರಾದ ಭಗವತಿ ಹಾಗೂ ಅಮರ್ತ್ಯಸೇನ್ ನಡುವಿನ ಜಗಳ ಹಳೆಯದು. ಬೆಳವಣಿಗೆ ನಮ್ಮ ಆದ್ಯತೆಯಾಗಬೇಕೋ ಅಭಿವೃದ್ಧಿಯಾಗಬೇಕೋ ಅನ್ನುವ ಬಗ್ಗೆ ಅವರಿಬ್ಬರಲ್ಲಿ ವಿವಾದವಿದೆ. ಆರ್ಥಿಕ ಬೆಳವಣಿಗೆ ಮುಖ್ಯವೆನ್ನುವ ಭಗವತಿ ಪ್ರಕಾರ ಆರ್ಥಿಕ ಬೆಳವಣಿಗೆ ಸಾಧ್ಯವಾದರೆ ಸಾಕು. ಉಳಿದೆಲ್ಲವೂ ಸರಿಹೋಗುತ್ತದೆ. ಆದರೆ ಮಾನವನ ಅಭಿವೃದ್ಧಿಯನ್ನು ಮುಖ್ಯ ಅನ್ನುವ ಸೇನ್ ಬೆಳವಣಿಗೆಯ ಉದ್ದೇಶ ತಲಾ ಜಿಡಿಪಿಯ ಹೆಚ್ಚಳವಲ್ಲ. ಮನುಷ್ಯನ ಬದುಕನ್ನು, ಮನುಷ್ಯನ ಸಾಮರ್ಥ್ಯವನ್ನು, ಮನುಷ್ಯನ ಅನುಭವವನ್ನು ಹೆಚ್ಚಿಸುವುದು ಬೆಳವಣಿಗೆಯ ಉದ್ದೇಶವಾಗಬೇಕು ಅನ್ನುತ್ತಾರೆ. ಅದಕ್ಕೆ ಅವರು ಶ್ರೀಲಂಕಾ, ವಿಯಟ್ನಾಂ, ಬಾಂಗ್ಲಾದೇಶ ಅಂತಹ ದೇಶಗಳನ್ನು ಉದಾಹರಣೆಯಾಗಿ ಕೊಡುತ್ತಾ ಕಡಿಮೆ ವರಮಾನ ಇದ್ದಾಗಲೂ ಹೆಚ್ಚಿನ ಮಾನವ ಅಭಿವೃದ್ಧಿ ಸಾಧ್ಯ. ಅಭಿವೃದ್ಧಿಯನ್ನು ಸಾಧಿಸುವುದಕ್ಕೆ ದೇಶ ಶ್ರೀಮಂತವಾಗುವವರೆಗೆ ಕಾಯಬೇಕಾಗಿಲ್ಲ ಎಂದು ವಾದಿಸುತ್ತಾರೆ. ಸರಳವಾಗಿ ಹೇಳುವುದಾದರೆ ಒಬ್ಬರು ಭೌತಿಕ ಬಂಡವಾಳಕ್ಕೆ ಗಮನಕೊಡುತ್ತಾರೆ. ಮತ್ತೊಬ್ಬರು ಮಾನವ ಬಂಡವಾಳಕ್ಕೆ ಗಮನಕೊಡುತ್ತಾರೆ.

ಕಾರ್ತಿಕ್ ಮುರಳೀಧರನ್ ಎರಡೂ ಸರಿ ಅನ್ನುತ್ತಾ ಸಮಸ್ಯೆ ಇರುವುದು ಯಾವುದಕ್ಕೆ ಹಣ ತೊಡಗಿಸುತ್ತೀರಿ ಅನ್ನುವುದು ಮುಖ್ಯವಲ್ಲ. ಯಾವುದಕ್ಕೇ ಖರ್ಚು ಮಾಡಲಿ ಅದು ಪರಿಣಾಮಕಾರಿಯಾಗಿರಬೇಕು. ಅದು ನಿರೀಕ್ಷಿತ ಫಲ ನೀಡಬೇಕು. ಭಾರತದಲ್ಲಿ ನೀವು ಮೂಲ ಸೌಕರ್ಯ, ಸಾಮಾಜಿಕ ವಲಯ ಅಥವಾ ಇನ್ಯಾವುದರ ಮೇಲೆ ಬಂಡವಾಳ ಹೂಡಿದರೂ ಅವುಗಳ ಗುಣಮಟ್ಟ ಕೆಟ್ಟದಾಗಿದೆ. ಹಾಗಾಗಿ ದೇಶದ ಸಾಮರ್ಥ್ಯ ಬೆಳೆಯುತ್ತಿಲ್ಲ ಅನ್ನುವುದು ಮುರಳೀಧರನ್ ಅವರ ವಾದ. ಸರಕಾರದ ಸಾಮರ್ಥ್ಯ ವೃದ್ಧಿಯಾದರೆ ಅದು ಮಾಡುವ ಖರ್ಚಿನಿಂದ ಸಿಗುವ ಪ್ರತಿಫಲ ಹತ್ತು ಪಟ್ಟು ಹೆಚ್ಚುತ್ತದೆ ಅನ್ನುವುದು ಅವರ ಅಂದಾಜು. ಸಾರ್ವಜನಿಕ ಖರ್ಚನ್ನು ಹೆಚ್ಚು ಪರಿಣಾಮಕಾರಿಯಾಗಿ ಮಾಡುವುದರ ಮೂಲಕ ಜನರ ಜೀವನ ಮಟ್ಟ ಸುಧಾರಿಸುವುದರ ಜೊತೆಗೆ ಬೆಳವಣಿಗೆಯ ದರವೂ ತೀವ್ರಗೊಳಿಸಬಹುದು. ಈಗ ಮಕ್ಕಳಲ್ಲಿ ಕುಂಠಿತ ಬೆಳವಣಿಗೆ ಶೇ. 25 ಇದೆ. ಸರಕಾರದ ಸಾಮರ್ಥ್ಯ ಹೆಚ್ಚದಿದ್ದರೆ ಶೇ. 6 ಜಿಡಿಪಿಯ ಬೆಳವಣಿಗೆಯನ್ನು ಸಾಧಿಸಿದರೂ ಮಕ್ಕಳ ಆರೋಗ್ಯ ಸುಧಾರಿಸುವುದಿಲ್ಲ. ಇನ್ನು ಎರಡು ದಶಕದ ನಂತರವೂ ಇದು ಹಾಗೇ ಇರುತ್ತದೆ. ಇದಕ್ಕೆ ವ್ಯತಿರಿಕ್ತವಾಗಿ ಸಾರ್ವಜನಿಕ ವೆಚ್ಚವನ್ನು ಹೆಚ್ಚು ಪರಿಣಾಮಕಾರಿಯಾಗಿ ಮಾಡಿದರೆ ಕುಂಠಿತ ಬೆಳವಣಿಗೆಯ ದರವನ್ನು ತಗ್ಗಿಸಬಹುದು. ಮಕ್ಕಳ ಆರೋಗ್ಯ ಸುಧಾರಿಸಿದರೆ ದೇಶದ ಬೆಳವಣಿಗೆಯೂ ಸುಧಾರಿಸುತ್ತದೆ.

ಹಾಗೆಯೇ ದೇಶದ ಗ್ರಾಮೀಣ ಸರಕಾರಿ ಶಾಲೆಗಳಲ್ಲಿ ಅಧ್ಯಾಪಕರ ಗೈರು ಹಾಜರಿ ಶೇ. 23.6 ಇರುತ್ತದೆ ಅನ್ನಲಾಗಿದೆ. ಅದರಿಂದ ವರ್ಷಕ್ಕೆ ಹಲವು ಸಾವಿರ ಕೋಟಿ ರೂ.ಯಷ್ಟು ನಷ್ಟವಾಗುತ್ತದೆ. ಇದನ್ನು ತಪ್ಪಿಸುವ ಮೂಲಕ ಶಿಕ್ಷಣಮಟ್ಟವನ್ನು ಸುಧಾರಿಸುವುದು ಹೆಚ್ಚು ಪರಿಣಾಮಕಾರಿಯಾದ ಕ್ರಮ ಎನ್ನುತ್ತಾರೆ. ಸಂಬಳದ ಹೆಚ್ಚಳದಿಂದ ಶಿಕ್ಷಣದ ಗುಣಮಟ್ಟ ಹೆಚ್ಚುವುದಿಲ್ಲ. ಗುಣಮಟ್ಟವನ್ನೇ ಗಮನದಲ್ಲಿಟ್ಟುಕೊಂಡು ಕಾರ್ಯಕ್ರಮ ಹಮ್ಮಿಕೊಳ್ಳಬೇಕಾಗುತ್ತದೆ. ಕೆಲವು ಕಡೆ ಕೆಲಸಗಾರರ ಕೊರತೆಯ ಸಮಸ್ಯೆಯೂ ಇದೆ. ನ್ಯಾಯಾಲಯಗಳಲ್ಲಿ ಖಾಲಿ ಇರುವ ಸ್ಥಾನಗಳನ್ನು ತುಂಬಿದರೆೆ ಗುಣಮಟ್ಟ ಹಲವು ಪಟ್ಟು ಸುಧಾರಿಸುತ್ತದೆ. ಸಾರ್ವಜನಿಕ ಸೇವೆಯ ಗುಣಮಟ್ಟವನ್ನು ಹೆಚ್ಚಿಸುವುದು ಅಗತ್ಯವಾಗಿ ಆಗಬೇಕಾಗಿದೆ. ಕೋವಿಡ್‌ನಂತಹ ಪ್ರಕರಣಗಳು ಸಾರ್ವಜನಿಕ ಆರೋಗ್ಯದಂತಹ ಮೂಲ ವ್ಯವಸ್ಥೆಯನ್ನು ಸುಧಾರಿಸುವ ಅವಶ್ಯಕತೆಯನ್ನು ತೆರೆದಿಟ್ಟಿದೆ.

ವಿವಿಧ ಸಾರ್ವಜನಿಕ ಕ್ಷೇತ್ರಗಳಲ್ಲಿ ಹೂಡುವುದರ ಜೊತೆಗೆ ಅದು ಸಾರ್ವಜನಿಕ ಸೇವೆಯನ್ನು ಎಷ್ಟರ ಮಟ್ಟಿಗೆ ಉತ್ತಮ ಪಡಿಸುತ್ತದೆ ಮತ್ತು ಆ ಮೂಲಕ ಜನರ ಬದುಕನ್ನು ಹೇಗೆ ಸುಧಾರಿಸುತ್ತದೆ ಅನ್ನುವುದನ್ನು ಗಮನಿಸಬೇಕು. ನಿಜ, ಒಬ್ಬ ವ್ಯಕ್ತಿಗೆ ಒಂದು ಮತದ ಹಕ್ಕು ಇದೆ. ಆ ಮಟ್ಟಿಗೆ ರಾಜಕೀಯ ಸಮಾನತೆ ಇದೆ ಎಂದು ಭಾವಿಸಬಹುದು. ಜಾತಿ, ಹಣ, ಶಿಕ್ಷಣ ಇವೆಲ್ಲಾ ನಮಗೆ ಸಿಗಲಿರುವ ಸೌಲಭ್ಯದ ಮಟ್ಟವನ್ನು ನಿರ್ಧರಿಸುತ್ತಿವೆ. ಕೆಲಸ ಮಾಡುವುದಕ್ಕೆ, ಸ್ಪರ್ಧಿಸುವುದಕ್ಕೆ ಇರುವ ಸಾಮರ್ಥ್ಯವನ್ನು ನಿರ್ಧರಿಸುವ ಶಿಕ್ಷಣ, ಆರೋಗ್ಯ ಇವುಗಳಲ್ಲಿ ಇಂದು ಢಾಳಾಗಿ ಕಾಣುತ್ತಿರುವ ಅಸಮಾನತೆ ತಪ್ಪಬೇಕು. ಅದನ್ನು ಸಾಧ್ಯಮಾಡು ವುದಕ್ಕೆ ಸರಕಾರಕ್ಕೆ ಹೆಚ್ಚಿನ ನೈತಿಕ ಸಾಮರ್ಥ್ಯ ಬೇಕು. ಆಗಷ್ಟೇ ಭಾರತದಲ್ಲಿ ಪ್ರಜಾಸತ್ತೆ ಪರಿಣಾಮಕಾರಿಯಾಗುವುದಕ್ಕೆ ಸಾಧ್ಯ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ಟಿ.ಎಸ್. ವೇಣುಗೋಪಾಲ್

contributor

Similar News