ಪರಿಸರ ಕಾಳಜಿ ಮೂಲಕ ಜನಮನ ಗೆದ್ದ ರಾಜೇಂದ್ರ ಸಿಂಗ್

Update: 2024-01-08 08:46 GMT

ಮಡಿಕೇರಿ: ಕೊಡಗು ಜಿಲ್ಲೆಯ ವೀರಾಜಪೇಟೆ ತಾಲೂಕಿನ ಸಿದ್ದಾಪುರದಲ್ಲಿ ವಾಸವಾಗಿರುವ,ಮೂಲತ ರಾಜಸ್ಥಾನದವರಾದ ಚಿನ್ನ ಬೆಳ್ಳಿ ವ್ಯಾಪಾರಿ ರಾಜೇಂದ್ರ ಸಿಂಗ್ ಕೊಡಗು ಜಿಲ್ಲೆಯಲ್ಲಿ ಅಂದಾಜು 1.80 ಲಕ್ಷ ಸಸಿಗಳನ್ನು ನೆಟ್ಟು ಜನಮನ ಗೆದ್ದಿದ್ದಾರೆ.

23 ವರ್ಷಗಳ ಹಿಂದೆ

ಕೊಡಗಿಗೆ ಬಂದು ನೆಲೆಸಿರುವ ಇವರು, ನಿರಂತರ ಗಿಡಗಳನ್ನು ನೆಟ್ಟು ಪೋಷಣೆ ಮಾಡುತ್ತಿದ್ದು ಪ್ರಾಣಿ ಪಕ್ಷಿ ಸಂರಕ್ಷಣೆ, ಸಾರ್ವಜನಿಕರಿಗೆ ಆರೋಗ್ಯ ಶಿಬಿರಗಳನ್ನೂ ಆಯೋಜಿಸುತ್ತಿದ್ದಾರೆ.

ಬಾಲ್ಯದಿಂದಲೂ ಪರಿಸರದ ಮೇಲೆ ಅಪಾರ ಪ್ರೀತಿ, ಕಾಳಜಿ ಹೊಂದಿರುವ ಇವರು, ಶಾಲಾ ಕಾಲೇಜು ಆವರಣಗಳಲ್ಲಿ, ಆಸ್ಪತ್ರೆ, ರಸ್ತೆ ಬದಿ, ಪೊಲೀಸ್ ಠಾಣೆ, ಪ್ರವಾಸಿ ತಾಣ ಸ್ಥಳ, ಸರಕಾರಿ ಕಚೇರಿ ಪ್ರದೇಶಗಳಲ್ಲಿ ಪ್ರಾಣಿ-ಪಕ್ಷಿಗಳಿಗೆ ಉಪಯೋಗವಾಗುವ ಗಿಡಗಳನ್ನು ನೆಟ್ಟು ಪೋಷಿಸುವ ಕಾರ್ಯವನ್ನು ನಿರಂತರವಾಗಿ ಮಾಡುತ್ತಿದ್ದಾರೆ. ಇದುವರೆಗೆ ಜಿಲ್ಲೆಯಲ್ಲಿ ಅಂದಾಜು 1.80 ಲಕ್ಷ ಸಸಿಗಳನ್ನು ನೆಟ್ಟಿದ್ದು, ಬೇಸಿಗೆಯಲ್ಲಿ ತಾವೇ ನೆಟ್ಟ ಗಿಡಗಳಿಗೆ ನೀರು ಹಾಕುತ್ತಿದ್ದಾರೆ. ಪರಿಸರ ನಾಶದಿಂದ ಗಿಡಗಳನ್ನು ಬೆಳೆಸುವ ಕೆಲಸ ಒಬ್ಬರಿಂದ ಸಾಧ್ಯವಾಗುತ್ತಿಲ್ಲ ಎಂದು ಮನಗಂಡು ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಗಿಡಗಳನ್ನು ನೆಟ್ಟು ಬೆಳೆಸುವ ಬಗ್ಗೆ ಹಾಗೂ ವಿವಿಧ ಸ್ಪರ್ಧೆಗಳನ್ನು ನಡೆಸಿ ಬಹುಮಾನ ನೀಡುವ ಮೂಲಕ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಿಸುವ ಕೆಲಸವನ್ನೂ ಮಾಡುತ್ತಿದ್ದಾರೆ. ಕಾಡಿನಲ್ಲಿ ವರ್ಷವಿಡೀ ಓಡಾಡಿ ಅಪರೂಪದ ಸಸ್ಯಗಳ ಬೀಜಗಳನ್ನು ಸಂಗ್ರಹಿಸಿ, ಅರಣ್ಯ ಇಲಾಖೆ ಹಾಗೂ ಇತರ ಸಂಘಟನೆಗಳ ಸಹಯೋಗದೊಂದಿಗೆ ಹಲವು ವರ್ಷಗಳಿಂದ ಜೂನ್ ತಿಂಗಳಿನಲ್ಲಿ ಅವುಗಳನ್ನು ಕಾಡಿನಲ್ಲಿಯೇ ಬಿತ್ತುವ ವಿಶಿಷ್ಟ ಕಾರ್ಯ ನಡೆಸುತ್ತಿದ್ದಾರೆ. ಬರಡಾಗಿದ್ದ ಅರಣ್ಯ ಪ್ರದೇಶದಲ್ಲಿ ಸಾವಿರಾರು ಗಿಡಗಳನ್ನು ನೆಡುವ ಮೂಲಕ ಪೋಷಣೆಗೆ ಮುಂದಾಗಿದ್ದಾರೆ.

► ಶುದ್ಧ ನೀರಿನ ಘಟಕ ಪ್ರಾರಂಭಿಸಿದ ಪರಿಸರ ಪ್ರೇಮಿ: ಹಲವು ವರ್ಷಗಳಿಂದಲೂ ಸಿದ್ದಾಪುರ ಬಸ್ ನಿಲ್ದಾಣದಲ್ಲಿ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಇಲ್ಲದೆ ಪ್ರಯಾಣಿಕರು, ಸಾರ್ವಜನಿಕರು, ಶಾಲಾ ವಿದ್ಯಾರ್ಥಿಗಳು, ಕಾರ್ಮಿಕರು ಸಮಸ್ಯೆ ಎದುರಿಸುತ್ತಿದ್ದುದನ್ನು ಮನಗಂಡ ರಾಜೇಂದ್ರ ಸಿಂಗ್ 1.50 ಲಕ್ಷ ರೂ. ವೆಚ್ಚದಲ್ಲಿ ಇಕೋ ಫ್ರೆಂಡ್ಲಿ ಶುದ್ಧ ಕುಡಿಯುವ ನೀರಿನ ಘಟಕವನ್ನು ಕೊಡುಗೆಯಾಗಿ ನೀಡಿರುತ್ತಾರೆ.

24 ಗಂಟೆಯೂ ಕುಡಿಯುವ ನೀರಿನ ಘಟಕದಲ್ಲಿ ನೀರನ್ನು ಬಳಸಬಹುದಾಗಿದೆ ಹಾಗೂ ಪರಿಸರ ಉಳಿಸಿ, ಪ್ಲಾಸ್ಟಿಕ್ ನಿರ್ಮೂಲನೆ, ಮರಗಳನ್ನು ಉಳಿಸಿ ಸ್ವಚ್ಛತೆಗೆ ಆದ್ಯತೆ ನೀಡಿ ಎಂಬ ಜಾಗೃತಿ- ನಾಮಫಲಕಗಳನ್ನು ಅಳವಡಿಸಿದ್ದಾರೆ. ಯಾವುದೇ ಜಾಗದಲ್ಲಿ ಗಿಡ ಮರಗಳನ್ನು ನೆಡಲು ಬಯಸಿದಲ್ಲಿ ರಾಜೇಂದ್ರ ಸಿಂಗ್‌ನ್ನು ಸಂಪರ್ಕಿಸಿದಲ್ಲಿ ಉಚಿತವಾಗಿ ಗಿಡಗಳನ್ನು ನೀಡಲಿದ್ದಾರೆ.

ಪರ್ಯಾವರ್ಣ ಪಂಚಾಮೃತ ಯಾತ್ರೆ

ಪರ್ಯಾವರ್ಣ ಪಂಚಾಮೃತ ಯಾತ್ರೆಯ ಪ್ರಾರಂಭಕ್ಕೆ ಚಿಂತನೆ ಮಾಡಿದ್ದು, ಇದರ ಭಾಗವಾಗಿ ಆಲದಮರ,ಅರಳಿಮರ, ಕಹಿಬೇವು, ಬಿಲ್ವಪತ್ರ,ಹತ್ತಿಮರವನ್ನು ಕೊಡಗಿನ ಪ್ರತಿ ಗ್ರಾಮಗಳಲ್ಲಿ ಸಂಚರಿಸಿ ನೆಡುವುದು ಉದ್ದೇಶವಾಗಿದೆ. ಈ ಪರ್ಯಾವರ್ಣ ಪಂಚಾಮೃತ ಯಾತ್ರೆಯನ್ನು ಜೂ. 5ರಂದು ಪ್ರಾರಂಭಿಸುವ ಅಭಿಲಾಷೆ ಹೊಂದಿದ್ದು ಇದಕ್ಕೆ ಜನಪ್ರತಿನಿಧಿಗಳು, ಸಂಘ-ಸಂಸ್ಥೆಗಳು, ಧಾರ್ಮಿಕ ಸಂಸ್ಥೆಗಳು, ಪತ್ರಿಕಾ ಮಾಧ್ಯಮ, ಸರಕಾರದ ಸಹಕಾರ ಅಗತ್ಯವಾಗಿದ್ದು ಎಲ್ಲರೂ ಈ ಕಾರ್ಯಕ್ರಮಕ್ಕೆ ಕೈ ಜೋಡಿಸುವಂತೆ ರಾಜೇಂದ್ರ ಸಿಂಗ್ ತಿಳಿಸಿದ್ದಾರೆ.

ಪ್ರಕೃತಿ ಸೌಂದರ್ಯದಿಂದ ಕೂಡಿರುವ ಜಿಲ್ಲೆಯಲ್ಲಿ ಇತ್ತೀಚೆಗೆ ತಾಪಮಾನ ಏರಿಕೆಯಾಗುತ್ತಿದೆ. ಪ್ರತಿಯೊಬ್ಬರೂ ಗಿಡಮರಗಳನ್ನು ನೆಟ್ಟು ಪೋಷಿಸುವ ಮೂಲಕ ಪರಿಸರ ಅಭಿಮಾನ ಬೆಳೆಸಿಕೊಳ್ಳಬೇಕು. ಎಲ್ಲರಿಗೂ ಪ್ರಯೋಜನವಾಗುವ ನಿಟ್ಟಿನಲ್ಲಿ ನೀರಿನ ಘಟಕ ಪ್ರಾರಂಭಿಸಲಾಗಿದ್ದು, ಇದರ ಸದುಪಯೋಗಪಡಿಸಿಕೊಳ್ಳಬೇಕು.

► ರಾಜೇಂದ್ರ ಸಿಂಗ್, ಪರಿಸರ ಪ್ರೇಮಿ, ಸಿದ್ದಾಪುರ

ಮನುಷ್ಯ ಅಭಿವೃದ್ಧಿ ಹೊಂದಿದಂತೆ ಪರಿಸರದ ಮೇಲೆ ತನ್ನ ಆಕ್ರಮಣ ಕೂಡ ಜಾಸ್ತಿ ಯಾಗುತ್ತಿರುವ ಸಂದರ್ಭದಲ್ಲಿ ನಿರುಪಯುಕ್ತ, ಪರಿಸರಕ್ಕೆ ಹಾನಿ ಉಂಟು ಮಾಡುವ ವಸ್ತುಗಳಿಂದ ನೀರಿನ ತೊಟ್ಟಿ ತಯಾರಿಸುವುದು ಸೇರಿದಂತೆ ಶಾಲಾ ಮಕ್ಕಳಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿರುವ ರಾಜೇಂದ್ರ ಸಿಂಗ್‌ರವರ ಪರಿಸರ ಪ್ರೇಮ ಇತರರಿಗೆ ಮಾದರಿ.

► ಕೃಷ್ಣ,ಸಾಮಾಜಿಕ ಕಾರ್ಯಕರ್ತ

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಕೆ.ಎಂ ಇಸ್ಮಾಯಿಲ್ ಕಂಡಕರೆ

contributor

Similar News