ನಗದು ಶುಲ್ಕ ಪಾವತಿ ಮರುಜಾರಿಗೊಳಿಸಿ

Update: 2023-09-23 10:29 GMT

ಮಾನ್ಯರೇ,

ಚಿತ್ರದುರ್ಗದ ಒನಕೆ ಓಬವ್ವನ ಕಿಂಡಿ ಹಾಗೂ ಐತಿಹಾಸಿಕ ಕೋಟೆ ವೀಕ್ಷಿಸಲು ರಾಜ್ಯದ ಮೂಲೆ ಮೂಲೆಗಳಿಂದ ಪ್ರವಾಸಿಗರು, ವಿದ್ಯಾರ್ಥಿಗಳು ಹಾಗೂ ಇತಿಹಾಸ ಪ್ರಿಯರು ಆಗಮಿಸುತ್ತಾರೆ. ಕೋಟೆಗೆ ಪ್ರವೇಶ ಪಡೆಯಲು ಟಿಕೆಟ್ ಖರೀದಿಸಬೇಕಿದ್ದು ಹಣಪಾವತಿಯನ್ನು ಆನ್‌ಲೈನ್ ಮಾದರಿಯಲ್ಲಿ ಮಾತ್ರವೇ ನೀಡಲಾಗಿದೆ. ಶುಲ್ಕಸಂಗ್ರಹಣೆಯಲ್ಲಿ ಆಗುವ ದುರುಪಯೋಗ ತಡೆಯಲು, ಪಾರದರ್ಶಕತೆ ತರಲು ಈ ಕ್ರಮ ಎಂದು ಸ್ಥಳೀಯವಾಗಿ ಸಂಬಂಧಪಟ್ಟವರು ಉತ್ತರಿಸುತ್ತಿದ್ದಾರೆ. ಆದರೆ ಕೋಟೆ ವೀಕ್ಷಿಸಲು ಆಗಮಿಸುವ ವೃದ್ಧರು, ಗ್ರಾಮೀಣಭಾಗದ ಜನರು, ಶಾಲಾಮಕ್ಕಳ ಬಳಿ ಸ್ಮಾರ್ಟ್‌ಫೋನ್ ಇರುವುದಿಲ್ಲ. ಕೆಲವರ ಬಳಿ ಲಭ್ಯವಿದ್ದರೂ ಹಣಪಾವತಿಯ ಡಿಜಿಟಲ್ ಸಾಕ್ಷರತೆಯ ಕೊರತೆಯಿದೆ. ಕಡ್ಡಾಯವಾಗಿ ಆನ್‌ಲೈನ್ ಮೂಲಕ ಹಣ ಪಾವತಿಸಬೇಕಾದ್ದರಿಂದ ಅದು ಸಾಧ್ಯವಾಗದೆ ನಿರಾಸೆಯಿಂದ ವಾಪಸ್ ತೆರಳುವ ದೃಶ್ಯಗಳು ಕಂಡುಬರುತ್ತಿವೆ. ಅಲ್ಲದೆ ಕೆಲವರು ಅಲ್ಲಿರುವ ಇತರ ಮೊಬೈಲ್ ಫೋನ್ ಹೊಂದಿದ ಪ್ರವಾಸಿಗರಿಗೆ ಹಣ ನೀಡಿ ಟಿಕೆಟ್ ಖರೀದಿಸಿಕೊಡಲು ಬೇಡುತ್ತಿದ್ದಾರೆ.

ಭಾರತೀಯ ಪುರಾತತ್ವ ಇಲಾಖೆಯ ಸಂರಕ್ಷಣೆಯಲ್ಲಿ ರುವ ಕೋಟೆಯನ್ನು ವೀಕ್ಷಿಸಲು ಪ್ರವೇಶ ಶುಲ್ಕವನ್ನು ಇ-ಪಾವತಿಯ ಜೊತೆಗೆ ಮೊದಲಿನಂತೆ ಕೌಂಟರ್ ಮೂಲಕ ನಗದನ್ನು ನೀಡಿ ಟಿಕೆಟ್ ಪಡೆಯುವಂತಹ ವ್ಯವಸ್ಥೆಯನ್ನು ಮರುಜಾರಿಗೊಳಿಸಬೇಕು. ಸ್ಥಳೀಯ ಸಂಸ್ಥೆಯ ಜನಪ್ರತಿನಿಧಿಗಳು ಮಧ್ಯಪ್ರವೇಶ ಮಾಡಿ ಪುರಾತತ್ವ ಇಲಾಖೆಗೆ ವಿಷಯ ಮನವರಿಕೆ ಮಾಡಿಕೊಡಬೇಕು. ಈ ಮೂಲಕ ಐತಿಹಾಸಿಕ ಮಹತ್ವದ ಸ್ಥಳಗಳ ಕುರಿತು ಆಸಕ್ತಿಯುಳ್ಳ ಪ್ರವಾಸಿಗರ ಹಿತಕಾಯಬೇಕು.

-ರೇಣುಕಾರಾಜ್ ಎಂ. ಹರನಹಳ್ಳಿ

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ವಾರ್ತಾಭಾರತಿ

contributor

Similar News