ನಂಜನಗೂಡು ರಸಬಾಳೆಗೆ ಪುನಃಶ್ಚೇತನ

Update: 2024-07-29 05:00 GMT

ಮೈಸೂರು: ನಂಜನಗೂಡು ರಸಬಾಳೆ ಇತಿಹಾಸ ಪ್ರಸಿದ್ಧಬೆಳೆ. ಇತ್ತೀಚೆಗೆ ನಶಿಸಿಹೋಗುತ್ತಿದ್ದ ಬೆಳೆಗೆ ಪುನಃಶ್ಚೇತನ ನೀಡಲು ಸರಕಾರ ಮುಂದಾಗಿದ್ದು, ನಂಜನಗೂಡಿನ ದೇವರಸನಹಳ್ಳಿ ಭಾಗ ಸೇರಿದಂತೆ ತಾಲೂಕಿನ ಹಲವು ಕಡೆಗಳಲ್ಲಿ ರಸ ಬಾಳೆ ಮತ್ತೆ ನಳ ನಳಿಸುತ್ತಿದೆ.

ರಸಬಾಳೆ ದೇಶದ ಅನೇಕ ಕಡೆಗಳಲ್ಲಿ ಬೆಳೆಯುವುದುಂಟು. ಆದರೆ ನಂಜನಗೂಡು ರಸಬಾಳೆ ತನ್ನದೇ ಆದ ವಿಶೇಷತೆಯನ್ನು ಹೊಂದಿದೆ. ನಂಜನಗೂಡಿನ ಇತಿಹಾಸ ಪ್ರಸಿದ್ಧ ಶ್ರೀಕಂಠೇಶ್ವರ ದೇವಸ್ಥಾದಿಂದ ಅನತಿ ದೂರದಲ್ಲಿರುವ ದೇವರನಹಳ್ಳಿ ಗ್ರಾಮದ ಪ್ರದೇಶದಲ್ಲಿ ಇಲ್ಲಿನ ಬಹುತೇಕ ರೈತರು ಸಾವಯವ ಗೊಬ್ಬರ ಹಾಕಿ ರಸಬಾಳೆ ಬೆಳೆದು ಮಾರಾಟ ಮಾಡಿ ಜೀವನ ಕಟ್ಟಿಕೊಂಡಿದ್ದರು.

ನಂಜನಗೂಡು ರಸಬಾಳೆ ದೇಶ ವಿದೇಶದಲ್ಲಿಯೇ ಪ್ರಖ್ಯಾತಿ ಹೊಂದಿತು. ಮೈಸೂರಿನ ಅಂದಿನ ಮಹರಾಜರು ರಸಬಾಳೆಗೆ ಹೆಚ್ಚಿನ ಹೊತ್ತು ಕೊಟ್ಟು ರೈತರಿಗೆ ಉತ್ತೇಜನ ನೀಡುತ್ತಿದ್ದರು. ಇದರಿಂದ ರೈತರು ರಸಬಾಳೆ ಬೆಳೆದು ಹಣ ಗಳಿಸುವುದಕ್ಕಿಂತ ಮಹಾರಾಜರು ಈ ಬಾಳೆ ಹಣ್ಣನ್ನು ಇಷ್ಟಪಡುತ್ತಾರೆ ಎಂದು ಬೆಳೆಯುತ್ತಿದ್ದರು ಎಂಬ ಇತಿಹಾಸವಿದೆ. ಮೈಸೂರಿನ ಮಹರಾಜರು ಯಾವುದೇ ಹಬ್ಬ, ಕಾರ್ಯಕ್ರಮ, ಸಮಾರಂಭ ಮಾಡಿದರೂ ನಂಜನಗೂಡು ರಸಬಾಳೆ ಇದ್ದೇ ಇರುತ್ತಿತ್ತು.

ಇಷ್ಟೆಲ್ಲಾ ಇತಿಹಾಸವನ್ನು ಹೊಂದಿದ್ದ ನಂಜನಗೂಡು ರಸಬಾಳೆಗೆ ಬರು ಬರುತ್ತಾ ರೋಗ ರುಜಿನ ಅಂಟಿ ಬೆಳೆ ಕುಂಠಿತಗೊಂಡಿತು. ರಸಬಾಳೆ ಬೆಳೆದ ರೈತ ಅಸಲನ್ನು ಪಡೆಯವಲ್ಲಿ ವಿಫಲನಾದ. ನಂತರ ನಂಜನಗೂಡು ರಸಬಾಳೆ ಬೆಳೆ ಸದ್ದಿಲ್ಲದೆ ಕಡಿಮೆಯಾಗುತ್ತಾ ಬಂತು.

ಆದರೂ ದೇವರಸನಹಳ್ಳಿ ಭಾಗದ ಕೆಲವು ರೈತರು ಈ ಬೆಳೆಯನ್ನು ಉಳಿಸಿಕೊಂಡು ಅಲ್ಪ ಸ್ವಲ್ಪಬೆಳೆಯುತ್ತಿದ್ದರು. ಆ ಬೆಳೆಯನ್ನೇ ಆಧಾರವಾಗಿಟ್ಟು ಕೊಂಡು ರಾಜ್ಯ ಸರಕಾರ ನಂಜನಗೂಡು ರಸಬಾಳೆ ಬೆಳೆಯಲು ಕಳೆದ ವರ್ಷದಿಂದ ರೈತರಿಗೆ ಉತ್ತೇಜನ ನೀಡುತ್ತಿದೆ. ನಂಜನಗೂಡು ರಸಬಾಳೆ ಬೆಳೆ ಮತ್ತೆ ಪುನಃಶ್ಚೇತನಗೊಳ್ಳಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 2023-24ರ ಬಜೆಟ್‌ನಲ್ಲಿ ಘೋಷಣೆ ಮಾಡಿರುವುದು ನಂಜನಗೂಡು ರಸಬಾಳೆ ಬೆಳೆಗೆ ಮತ್ತೆ ಜೀವ ಬಂದಂತಾಗಿದೆ.

ಕಳೆದ ವರ್ಷದಲ್ಲಿ ನಂಜನಗೂಡು ತಾಲೂಕಿನ ದೇವರಸನಹಳ್ಳಿ ಗ್ರಾಮ ಸೇರಿದಂತೆ ಕೆಲವು ಕಡೆಗಳಲ್ಲಿ ಒಂಬತ್ತು ಎಕರೆಯಲ್ಲಷ್ಟೇ ಈ ಬೆಳೆಯನ್ನು ಬೆಳೆಯಲಾಗುತ್ತಿತ್ತು. ತೋಟಗಾರಿಕೆ ಇಲಾಖೆ ಮತ್ತೆ ರೈತರ ಜೊತೆ ಸಂಪರ್ಕಮಾಡಿ ನಿಮ್ಮ ಬೆನ್ನ ಹಿಂದೆ ಸರಕಾರ ಇದೆ. ನಂಜನಗೂಡು ರಸಬಾಳೆ ಬೆಳೆಯುವಂತೆ ಪ್ರೋತ್ಸಾಹಿಸಿದ ಮೇಲೆ ಈ ವರ್ಷ ದೇವರಸನಹಳ್ಳಿ, ನಂಜನಗೂಡು ಕಸಬಾ ಹೋಬಳಿ, ಕೌಲಂದೆ ಹೋಬಳಿ ಸಹಿತ ನೂರು ಎಕರೆ ಪ್ರದೇಶದಲ್ಲಿ ನಂಜನಗೂಡು ರಸಬಾಳೆ ಬೆಳೆಯಲು ರೈತರು ಮುಂದಾಗಿದ್ದಾರೆ.

ಇಲಾಖೆಯಿಂದ ಪ್ರೋತ್ಸಾಹ ಧನ: ನಂಜನಗೂಡು ರಸಬಾಳೆ ಬೆಳೆಯಲು ತೋಟಗಾರಿಕೆ ಇಲಾಖೆ ಅಧಿಕಾರಿಗಳು ರೈತರಿಗೆ ಅರಿವು ಮೂಡಿಸುತ್ತಿದ್ದು, ಇದರಿಂದ ಪ್ರಾಯೋಗಿಕವಾಗಿ ರೈತರು ಏಲಕ್ಕಿ, ಪಚ್ಚಬಾಳೆ, ನೇಂದ್ರ ಬಾಳೆಯ ಜೊತೆಯಲ್ಲಿ 20 ಗುಂಟೆಗಳಲ್ಲಿ ನಂಜನಗೂಡು ರಸಬಾಳೆ ಬೆಳೆಯಲು ಮುಂದಾಗಿದ್ದಾರೆ.

ನಂಜನಗೂಡು ರಸಬಾಳೆ ಬೆಳೆಯುವ ರೈತರಿಗೆ ಇಲಾಖೆ ವತಿಯಿಂದ ನಂಜನಗೂಡು ರಸಬಾಳೆ ಫಸಲು ಬೆಳೆಯಲು 20 ಗುಂಟೆಗೆ ಎಸ್‌ಸಿ, ಎಸ್‌ಟಿಗಳಿಗೆ ಶೇ.90 ಸಬ್ಸಿಡಿ, ಸಾಮಾನ್ಯ ವರ್ಗದವರಿಗೆ ಶೇ.75 ಸಬ್ಸಿಡಿ ನೀಡಲಾಗುತ್ತಿದೆ. ಡ್ರಿಪ್, ಸೇರಿ ನಂಜನಗೂಡು ರಸಬಾಳೆ ಬೆಳೆಯಲು ಸಾಮಾನ್ಯ ವರ್ಗದವರಿಗೆ 54 ಸಾವಿರ ರೂ, ಎಸ್ಸಿ ಎಸ್ಟಿಗಳಿಗೆ 65 ಸಾವಿರ ರೂ. ಡ್ರಿಪ್ ಬಳಸದೆ ಬೆಳೆಯಲು ಸಾಮಾನ್ಯ ವರ್ಗದವರಿಗೆ 31 ಸಾವಿರ ರೂ. ಎಸ್‌ಸಿ, ಎಸ್‌ಟಿಗಳಿಗೆ 35 ಸಾವಿರ ರೂ. ಪ್ರೋತ್ಸಾಹ ಧನ ನೀಡಲಾಗುತ್ತಿದೆ.

ಪ್ರತ್ಯೇಕ ಮಾರುಕಟ್ಟೆ: ನಂಜನಗೂಡು ರಸಬಾಳೆ ಬೆಳೆ ಮಾರಾಟಕ್ಕೆ ತೋಟಗಾರಿಕೆ ಇಲಾಖೆಯ ಹಾಪ್ ಕಾಮ್ಸ್‌ನಲ್ಲಿ ಮಾರುಕಟ್ಟೆ ತೆರೆಯಲಾಗಿದೆ. ಇದರ ಜೊತೆಗೆ ಬೇರೆ ಅಂಗಡಿಗಳಲ್ಲೂ ನಂಜನಗೂಡು ರಸಬಾಳೆ ಕೊಂಡು ಕೊಳ್ಳುತ್ತಿದ್ದಾರೆ. ನಂಜನಗೂಡು ರಸಬಾಳೆ ಬೆಳೆಗೆ ಹೆಚ್ಚು ಬೇಡಿಕೆ ಇರುವುದರಿಂದ ಮಾರುಕಟ್ಟೆ ಸಮಸ್ಯೆ ಬೆಳೆಗಾರರಿಗೆ ಇಲ್ಲದಂತಾಗಿದೆ.

ನಂಜನಗೂಡಿನ ಕೆಲವು ಅಂಗಡಿಗಳಲ್ಲಿ ಮಾತ್ರ ಲಭ್ಯ: ನಂಜನಗೂಡು ರಸಬಾಳೆ ನಂಜನಗೂಡಿನ ಎಲ್ಲ ಕಡೆಗಳಲ್ಲೂ ಸಿಗುವುದಿಲ್ಲ. ನಂಜನಗೂಡಿನ ಆರ್.ಪಿ.ರಸ್ತೆಯಲ್ಲಿರುವ ಸಣ್ಣಪ್ಪ ಅವರ ಅಂಗಡಿ, ಮಾರುಕಟ್ಟೆಯ ರಸ್ತೆಯಲ್ಲಿ ಈ ಹಿಂದೆ ಇದ್ದ ದೇವರಸನಹಳ್ಳಿಯ ಸಿದ್ಧಪ್ಪಅವರ ಬಾಳೆ ಅಂಗಡಿ, ತಿಮ್ಮಯ್ಯ ಬಿಲ್ಡಿಂಗ್, 6ನೇ ತಿರುವಿನಲ್ಲಿರುವ ಒಂದು ಬಾಳೆ ಹಣ್ಣಿನ ಅಂಗಡಿ, ನಂಜನಗೂಡು ದೇವಸ್ಥಾನದ ಬಳಿ ಇರುವ ದೇವರಸನಹಳ್ಳಿ ವೆಂಕಟೇಶ್ ಅವರ ಅಂಗಡಿಗಳಲ್ಲಿ ಮಾತ್ರ ನೈಜ ನಂಜನಗೂಡು ರಸಬಾಳೆ ದೊರೆಯುತ್ತದೆ. ಇದರ ಜೊತೆಗೆ ಮೈಸೂರು ದೇವರಾಜ ಮಾರುಕಟ್ಟೆಯ ನಂ.85ರ ಗಿರೀಶ್ ಅವರ ಬಾಳೆ ಹಣ್ಣಿನ ಅಂಗಡಿಯಲ್ಲೂ ದೊರೆಯುತ್ತದೆ.

 ನಂಜನಗೂಡು ರಸಬಾಳೆ ದೇವರಸನಹಳ್ಳಿ ಗ್ರಾಮದಲ್ಲಿ ಮಾತ್ರ ಬೆಳೆಯಲಾಗುತಿತ್ತು. ನಂತರ ಮಣ್ಣಿನ ಫಲವತ್ತತೆ ಕಡಿಮೆಯಾಗುತ್ತಿದ್ದಂತೆ ನಂಜನಗೂಡು ರಸಬಾಳೆಗೆ ರೋಗ ಹೆಚ್ಚು ಬರಲು ಪ್ರಾರಂಭವಾಯಿತು. ಈಗ ನಂಜನಗೂಡು ರಸಬಾಳೆಯಯನ್ನು ಗುಂಡ್ಲುಪೇಟೆ, ಗದ್ದಿಗೆ ಭಾಗದಲ್ಲೂ ಬೆಳೆಯುತ್ತಾರೆ. ದೇವರಸನಹಳ್ಳಿಯಲ್ಲಿ ಬೆಳೆಯುವ ನಂಜನಗೂಡು ರಸಬಾಳೆ ಬಹಳ ರುಚಿಕರ.

-ಗಿರೀಶ್, ಬಾಳೆ ಹಣ್ಣಿನ ವ್ಯಾಪಾರಿ, ದೇವರಾಜ ಮಾರುಕಟ್ಟೆ, ಮೈಸೂರು.

20 ಗುಂಟೆಯಲ್ಲಿ 5 ಟನ್ ಬೆಳೆ

ನಂಜನಗೂಡು ರಸಬಾಳೆ ಬೇರೆ ಬಾಳೆ ಹಣ್ಣಿನಂತೆ ಹೆಚ್ಚು ಇಳುವರಿ ಬರುವುದಿಲ್ಲ. ಒಂದು ಗೊನೆ 8 ರಿಂದ 10 ಕೆ.ಜಿ.ಮಾತ್ರ ಬರಲಿದೆ. ಒಂದು ಕೆ.ಜಿ. ನಂಜನಗೂಡು ರಸಬಾಳೆ ಅಂದಾಜು ಪ್ರಕಾರ 100 ರಿಂದ 150 ರೂ.ಗಳಿವೆ. 20 ಗುಂಟೆಯಲ್ಲಿ ಸುಮಾರು 4 ರಿಂದ 5 ಟನ್ ರಸಬಾಳೆ ಬೆಳೆಯಬಹುದು. ಕನಿಷ್ಠ 2.5 ಲಕ್ಷದಿಂದ 3.5 ಲಕ್ಷ ರೂ. ಗಳಿಸಬಹುದು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ನೇರಳೆ ಸತೀಶ್ ಕುಮಾರ್

contributor

Similar News