ಉ.ಪ್ರ.: ಆದಿತ್ಯನಾಥ್ ರಾಜಕೀಯ ಭವಿಷ್ಯ ಆರೆಸ್ಸೆಸನ್ನು ಅವಲಂಬಿಸಿದೆಯೇ?

ಜಾತಿ ಗಣತಿಯನ್ನು ಅಖಿಲೇಶ್ -ರಾಹುಲ್ ಜೋಡಿಗೆ ತಿರುಗು ಬಾಣವಾಗುವ ಹಾಗೆ ಮಾಡಬೇಕು ಎಂಬುದು ಆರೆಸ್ಸೆಸ್‌ನ ಬಯಕೆ. ಅದಕ್ಕಾಗಿ ಅದು ಮೋದಿ-ಶಾ ಜೋಡಿಗಿಂತ ಆದಿತ್ಯನಾಥ್‌ರನ್ನೇ ನೆಚ್ಚಿಕೊಂಡ ಹಾಗೆ ಕಾಣುತ್ತಿದೆ. ಉತ್ತರ ಪ್ರದೇಶದಲ್ಲಿ ಆದಿತ್ಯನಾಥ್ ರಾಜಕೀಯ ಭವಿಷ್ಯ ಏನು ಎಂಬುದು ಆರೆಸ್ಸೆಸ್‌ನ ಈ ನಿರ್ಧಾರವನ್ನು ಅವಲಂಬಿಸಿದೆ.

Update: 2024-08-28 09:53 GMT

2024ರ ಲೋಕಸಭೆ ಚುನಾವಣೆಯಲ್ಲಿ ಪ್ರಧಾನಿ ಮೋದಿಯವರಿಗೆ ಅಯೋಧ್ಯೆಯಲ್ಲಿ ಎದುರಾಗಲಿದ್ದ ಆಘಾತದ ಬಗ್ಗೆ 2024ರ ಜನವರಿ ವೇಳೆಗೆ ದೇಶದಲ್ಲಿ ಯಾರೂ ಊಹೆ ಕೂಡ ಮಾಡಿರಲಿಲ್ಲ.

ನಾಲ್ಕೇ ತಿಂಗಳಲ್ಲಿ ಎಲ್ಲವೂ ಬದಲಾಗಿ ಹೋಗಿತ್ತು.

ಈಗ ಆರೆಸ್ಸೆಸ್ ಮುಂದೆ ನಿಲ್ಲುತ್ತಿದ್ದು, ಉತ್ತರ ಪ್ರದೇಶದಲ್ಲಿ ಆದಿತ್ಯನಾಥ್ ಮೂಲಕ ರಾಜಕೀಯ ಮಾಡುವ ತಯಾರಿಯಲ್ಲಿದೆ.

ದೇಶದ ತುಂಬ ಜಾತಿ ಜನಗಣತಿಯದ್ದೇ ಮಾತಿರುವಾಗ, ಅದನ್ನು ಬಳಸಿಕೊಂಡೇ ರಾಜಕಾರಣ ಮಾಡುವುದರ ಬಗ್ಗೆಯೂ ಆರೆಸ್ಸೆಸ್ ಈಗಾಗಲೇ ಯೋಚಿಸಿಯೂ ಆಗಿದೆ.

ಬಿಜೆಪಿ ರಾಜಕಾರಣದ ಪ್ರಯೋಗಶಾಲೆಯಂತಿರುವ ಉತ್ತರ ಪ್ರದೇಶದಲ್ಲೀಗ ಜಾತಿ ರಾಜಕಾರಣದ ಸುತ್ತಲೂ ಆಟವೊಂದನ್ನು ರೂಪಿಸಲಾಗುತ್ತಿರುವ ಸುಳಿವುಗಳು ಸಿಗುತ್ತಿವೆ.

2014ರಿಂದ ಯುಪಿಯಲ್ಲಿ ಮೋದಿ-ಶಾ ಆಡಿದ್ದೇ ಆಟ ಎಂಬಂತಿತ್ತು. ಆದರೆ ಈಗ ಉತ್ತರ ಪ್ರದೇಶ ಮೋದಿ ಆಟದ ಕಣವಾಗಿ ಉಳಿದಿಲ್ಲ. ಅದು ಆದಿತ್ಯನಾಥ್ ಆಟದ ಕಣವಾಗಿ ಬದಲಾಗುತ್ತಿದೆ. ಅದು ಆರೆಸ್ಸೆಸ್ ಪ್ರಯೋಗಶಾಲೆಯಾಗಿ ಹೊಸ ವರಸೆಗಳಿಗೆ ಸಾಕ್ಷಿಯಾಗುತ್ತಿದೆ. ಹಾಗಾಗಿ ಬಿಜೆಪಿಯ ಪ್ರಬಲ ಆಯುಧದಂತೆ ಉತ್ತರ ಪ್ರದೇಶ ರಾಜಕಾರಣದಲ್ಲಿ ಆದಿತ್ಯನಾಥ್ ಅವರನ್ನು ಆರೆಸ್ಸೆಸ್ ಪರಿಗಣಿಸುತ್ತಿದೆಯೇ?

ಜಾತಿ ಜನಗಣತಿಯನ್ನು ಆರೆಸ್ಸೆಸ್ ಬಹಿರಂಗವಾಗಿ ಬೆಂಬಲಿಸುತ್ತಿರುವಾಗ, ಆದಿತ್ಯನಾಥ್ ಕೂಡ ಅದನ್ನು ಮೀರಲಾರದ ಸ್ಥಿತಿಯನ್ನು ಎದುರಿಸಬೇಕಾಗುತ್ತದೆ.ಆದರೆ ಜಾತಿ ಜನಗಣತಿ ನಡೆಯುವಲ್ಲಿ ಆದಿತ್ಯನಾಥ್ ಕೆಲಸವೇನಿರಲಿದೆ?

ಆದಿತ್ಯನಾಥ್ ರಜಪೂತ ಸಮುದಾಯಕ್ಕೆ ಸೇರಿದವರು.ಇದನ್ನು ಹೀಗೆ ಗಮನಿಸುವ ಪ್ರಮೇಯ ಈ ಮೊದಲು ಬಂದಿರಲಿಲ್ಲ. ಆದರೆ ಯಾವಾಗ ಮೋದಿ ತನ್ನನ್ನು ಒಬಿಸಿ ಎಂದು ಹೇಳಿಕೊಂಡರೋ, ಅಲ್ಲಿಂದಲೇ ಪ್ರಧಾನಿಯ, ಸಂಸದರ, ಶಾಸಕರ ಜಾತಿಯನ್ನು ನೋಡಬೇಕಾದ ಅನಿವಾರ್ಯತೆಯೂ ಎದುರಾಗಿದೆ.

ಆರೆಸ್ಸೆಸ್ ಉಸ್ತುವಾರಿಯಲ್ಲಿ ಚುನಾವಣೆಯಲ್ಲಿ ಭಾಗಿಯಾಗಲಿರುವ ಪ್ರತಿಯೊಬ್ಬ ಕಾರ್ಯಕರ್ತರೂ ಜಾತಿಯನ್ನು ನೋಡುವಂತಾಗಿದೆ.

ಜಾತಿ ಜನಗಣತಿಯನ್ನು ಹೊರತುಪಡಿಸಿದ ರಾಜಕಾರಣವನ್ನು ಈಗಿನ ಸನ್ನಿವೇಶದಲ್ಲಿ ಯಾರೂ ಊಹಿಸಲೂ ಸಾಧ್ಯವಿಲ್ಲ. ಇವತ್ತು ಪ್ರತಿಯೊಂದು ಪಕ್ಷವೂ ಜಾತಿ ಜನಗಣತಿಯ ಮಾತಾಡುತ್ತಿದೆ ಎಂದು ಎಸ್‌ಪಿ ನಾಯಕ ಅಖಿಲೇಶ್ ಯಾದವ್ ಹೇಳಿದ್ದಾರೆ. ಬಿಜೆಪಿ ಕೂಡ ಆ ದಾರಿಯಲ್ಲಿಯೇ ಹೋಗಬೇಕಿದೆ ಎಂದಿದ್ದಾರೆ. ವರ್ಷದ ಹಿಂದೆಯೇ ತಾವಿದನ್ನು ಹೇಳಿದ್ದಾಗಿ ಅಖಿಲೇಶ್ ಹೇಳಿದ್ದಾರೆ.

ಮುಂಬರುವ ದಿನಗಳಲ್ಲಿ ಬಿಜೆಪಿ ಹಿಂದುತ್ವ ವಿಷಯವನ್ನು ಬದಿಗಿಡಬೇಕಾದ ಅನಿವಾರ್ಯತೆಯೂ ಎದುರಾಗುತ್ತದೆ. ಹೀಗಾಗಿ, ಅಯೋಧ್ಯೆ, ಮಥುರಾ, ಬನಾರಸ್ ಇವು ಚುನಾವಣೆಯ ಮೇಲೆ ಬೀರಬಹುದಾದ ಪರಿಣಾಮಗಳೇನು?

2019ರವರೆಗೂ ಇದ್ದ ವಾತಾವರಣ ಒಂದು ಬಗೆಯಲ್ಲಿತ್ತು. ಆನಂತರ ಅಯೋಧ್ಯೆಯಲ್ಲಿ ರಾಮಮಂದಿರ, ಹಿಂದುತ್ವ ಮುನ್ನೆಲೆಗೆ ಬಂದವು.

2022ರ ಚುನಾವಣೆಯಲ್ಲಿ ಆದಿತ್ಯನಾಥ್ ಅವರ ನಾಯಕತ್ವದಲ್ಲಿಯೇ ಚುನಾವಣೆ ನಡೆದಿತ್ತು. ಅಯೋಧ್ಯೆಯೇ ಪ್ರಮುಖ ವಿಷಯವಾಗಿತ್ತು. ರಾಮ ಮಂದಿರ ನಿರ್ಮಾಣ ಬಹಳ ಪ್ರಮುಖ ನೆಲೆಯಲ್ಲಿತ್ತು.

ಆ ಹೊತ್ತಲ್ಲಿ ಹಿಂದೂ-ಮುಸ್ಲಿಮ್ ಆಟಗಳೂ ಕಂಡವು.

ಆದರೆ ಆಗ ಬುಲ್ಡೋಜರ್ ಇರಲಿಲ್ಲ.

ಅದು ಕಾಣಿಸಿಕೊಂಡದ್ದು 2022ರ ಚುನಾವಣೆ ನಂತರ.

ಆಗ ಮುಂಬರುವ ಚುನಾವಣೆಯಲ್ಲಿ ಬಿಜೆಪಿ ವೋಟ್ ಬ್ಯಾಂಕ್ ಮೇಲೆ ಯಾವ ಬದಲಾವಣೆಯೂ ಆಗಲಾರದು ಎನ್ನಲಾಗಿತ್ತು.

ಇದರ ಹೊರತಾಗಿಯೂ 2024ರ ಲೋಕಸಭಾ ಚುನಾವಣೆಯಲ್ಲಿ ಉತ್ತರ ಪ್ರದೇಶದಲ್ಲಿ ಬಿಜೆಪಿ ಗೆದ್ದ ಸೀಟುಗಳ ಪ್ರಮಾಣ ಕುಸಿದಿತ್ತು.

ಎಸ್‌ಪಿ ಬಿಜೆಪಿಯನ್ನೂ ಮೀರಿಸಿ ಗೆದ್ದಿತ್ತು, ಕಾಂಗ್ರೆಸ್-ಎಸ್‌ಪಿ ಜೊತೆಯಾಗಿ ಚುನಾವಣೆ ಎದುರಿಸಿದ್ದೂ ಫಲ ಕೊಟ್ಟಿತ್ತು.

ಈ ನಡುವೆ ಭಾರತ್ ಜೋಡೊ ಯಾತ್ರೆ, ಭಾರತ್ ಜೋಡೊ ನ್ಯಾಯಯಾತ್ರೆಯ ಪ್ರಭಾವವೂ ಪ್ರಮುಖವಾಗಿತ್ತು.

ಆದಿತ್ಯನಾಥ್ ಹಿಂದುತ್ವದ ಆಸರೆಯಿಲ್ಲದೆ ರಾಜಕೀಯ ಅಸಾಧ್ಯ ಎಂದು ಭಾವಿಸಿದ್ದರು. ಅಲ್ಲಿಂದ, ಈಗ ರಾಷ್ಟ್ರ ಮೊದಲು ಎನ್ನುವಲ್ಲಿಯವರೆಗೂ ಅವರು ಬಂದು ನಿಂತಿದ್ದಾರೆ. ರಾಷ್ಟ್ರೀಯ ಐಕ್ಯತೆಯ ಮಂತ್ರ ಪಠಿಸಿದ್ದಾರೆ.

ಒಂದು ವೇಳೆ ನಾವು ವಿಭಜಿಸ್ಪಟ್ಟರೆ ನಾಶವಾಗುತ್ತೇವೆ ಎಂದು ಹೇಳಿರುವ ಅವರು, ಬಾಂಗ್ಲಾದೇಶವನ್ನು ಉದಾಹರಣೆಯಾಗಿ ನೀಡಿದ್ದಾರೆ.

ಆಗ್ರಾದಲ್ಲಿ ಸೋಮವಾರ ನಡೆದ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ‘‘ದೇಶಕ್ಕಿಂತ ಮೇಲಿನದ್ದು ಯಾವುದೂ ಇಲ್ಲ. ನಾವು ಒಗ್ಗಟ್ಟಾಗಿದ್ದಾಗ ಮಾತ್ರ ದೇಶ ಕೂಡಾ ಶಕ್ತಿಶಾಲಿಯಾಗಿರುತ್ತದೆ’’ ಎಂದಿದ್ದಾರೆ.

‘‘ಪಕ್ಕದ ಬಾಂಗ್ಲಾದೇಶದಲ್ಲಿ ಏನು ನಡೆಯುತ್ತಿದೆ ಎಂಬುದನ್ನು ನಾವು ನೋಡುತ್ತಿದ್ದೇವೆ. ಅಲ್ಲಿನ ತಪ್ಪುಗಳು ಇಲ್ಲಿ ಮರುಕಳಿಸಬಾರದು. ಪಾಲು ಮಾಡಿದಲ್ಲಿ ತುಂಡಾಗುತ್ತೇವೆ, ಒಂದಾಗಿದ್ದರೆ ಗಟ್ಟಿಯಾಗಿರುತ್ತೇವೆ’’ ಎಂದು ಆದಿತ್ಯನಾಥ್ ಹೇಳಿದ್ದಾರೆ.

ಯುಪಿಯಲ್ಲಿ ವಿಧಾನಸಭಾ ಚುನಾವಣೆಗೆ ಇನ್ನೂ ಮೂರು ವರ್ಷ ಬಾಕಿಯಿದೆ. ಈ ನಡುವೆ ಪ್ರಿಯಾಂಕಾ ಗಾಂಧಿ, 2027ರವರೆಗೂ ಕಾಂಗ್ರೆಸ್-ಎಸ್‌ಪಿ ಮೈತ್ರಿ ಮುಂದುವರಿದರೆ ಮಹತ್ತರ ರಾಜಕೀಯ ವಿದ್ಯಮಾನವನ್ನು ಕಾಣಬಹುದಾದ ಸಾಧ್ಯತೆಯ ಬಗ್ಗೆ ಹೇಳಿದ್ದಾರೆ.

ಜಾತಿ ಜನಗಣತಿ ಕೂಡ ಬೀರಬಹುದಾದ ಮಹತ್ವದ ಪರಿಣಾಮದ ಬಗ್ಗೆ ಹೇಳಿದ್ದಾರೆ.

ಉತ್ತರ ಪ್ರದೇಶದಲ್ಲಿ ಈಗಾಗಲೇ ದಲಿತರ ಮತಗಳು ಮಾಯಾವತಿ ಪಕ್ಷಕ್ಕೆ ಸಿಕ್ಕಿರುವುದಕ್ಕಿಂತ ಹೆಚ್ಚಾಗಿ, ‘ಇಂಡಿಯಾ’ ಮೈತ್ರಿಕೂಟಕ್ಕೆ ಬಂದಿವೆ.

ಉತ್ತರ ಪ್ರದೇಶ ಚುನಾವಣೆಯಲ್ಲಿ ಆದಿತ್ಯನಾಥ್ ನಾಯಕತ್ವ ಮುಂದುವರಿಯುವುದೇ ಎಂಬುದು ಬಹಳ ಬೇಗ ನಿರ್ಧಾರವಾಗುವ ಲಕ್ಷಣಗಳು ಕಾಣಿಸುತ್ತಿವೆ.

ಇತರ ರಾಜ್ಯಗಳ ಸಿಎಂಗಳಿಗೆ ಹೋಲಿಸಿಕೊಂಡರೆ ಜನಪ್ರಿಯತೆಯಲ್ಲಿ, ವರ್ಚಸ್ಸಿನಲ್ಲಿ ಆದಿತ್ಯನಾಥ್ ಮುಂದಿದ್ದಾರೆ. ಇದರ ಹೊರತಾಗಿಯೂ ಚುನಾವಣೆಯಲ್ಲಿ ಆದಿತ್ಯನಾಥ್ ಇರುವರೇ ಅಥವಾ ಇರದೇ ಹೋಗುವರೇ ಎಂಬ ಪ್ರಶ್ನೆಯೂ ಇದೆ.

ಮೋದಿ ಹಾಗೂ ಅಮಿತ್ ಶಾ ಅವರಿಗೆ ಆದಿತ್ಯನಾಥ್ ಬೇಡವಾಗಿದ್ದಾರೆ. ಆದರೆ ಆದಿತ್ಯನಾಥ್‌ರನ್ನು ಬಿಟ್ಟು ಕೊಡಲು ಆರೆಸ್ಸೆಸ್ ಈಗ ಸಿದ್ಧವಿಲ್ಲ.

ಆರೆಸ್ಸೆಸ್‌ಗೂ ಆದಿತ್ಯನಾಥ್ ಜೊತೆ ಕೆಲವು ಸಮಸ್ಯೆಗಳಿವೆ.

ಆದಿತ್ಯನಾಥ್ ಅವರು ಆರೆಸ್ಸೆಸ್ ಗರಡಿಯಲ್ಲಿ ಬೆಳೆದವರಲ್ಲ.

ಆದರೆ ಇತ್ತೀಚೆಗೆ ಆರೆಸ್ಸೆಸ್ ಜೊತೆ ಯಾವುದೇ ಹೊಂದಾಣಿಕೆಗೆ ನಾನು ಸಿದ್ಧ ಎಂಬ ಸಂದೇಶವನ್ನು ಅವರು ಆಗಾಗ ರವಾನಿಸುತ್ತಿದ್ದಾರೆ.

ಈ ಹಿನ್ನೆಲೆಯಲ್ಲೇ ಅಖಿಲೇಶ್ ಹೇಳಿದ್ದು ‘‘ಆದಿತ್ಯನಾಥ್ ಅವರಿಗೆ ಪ್ರಧಾನಿಯಾಗುವ ಮನಸ್ಸಿದೆ. ಆದರೆ ಈಗಲೇ ಅವರು ಪ್ರಧಾನಿಯ ಹಾಗೆ ವರ್ತಿಸಬಾರದು. ವಿದೇಶಾಂಗ ವ್ಯವಹಾರಗಳ ವಿಷಯವನ್ನು ಪ್ರಧಾನಿ ಮತ್ತು ಅವರ ಸರಕಾರ ನೋಡಿಕೊಳ್ಳುತ್ತದೆ’’ ಎಂದು.

ಜಾತಿ ಜನಗಣತಿಯ ವಿಚಾರ ಎತ್ತಿದ್ದು ರಾಹುಲ್ ಗಾಂಧಿ ಮತ್ತು ಅಖಿಲೇಶ್ ಯಾದವ್.

ಅಖಿಲೇಶ್ ಹಾಗೂ ರಾಹುಲ್ ಗಾಂಧಿಯವರ ಪಿಡಿಎ ಅಂದರೆ ಹಿಂದುಳಿದ, ದಲಿತ ಮತ್ತು ಅಲ್ಪಸಂಖ್ಯಾತ ಸಮುದಾಯಗಳ ಸಮೀಕರಣದ ರಾಜಕಾರಣ ಯುಪಿಯಲ್ಲಿ ಮೋದಿ ಮ್ಯಾಜಿಕ್ ಅನ್ನೇ ಖತಂಗೊಳಿಸಿತು.

ಈ ಹಂತದಲ್ಲಿ ಅದಕ್ಕೆ ತಿರುಗೇಟು ನೀಡಲು ಆದಿತ್ಯನಾಥ್ ಬಳಿ ಏನು ಮ್ಯಾಜಿಕ್ ಇರಲು ಸಾಧ್ಯ?

ಪಿಡಿಎ ಪೊಲಿಟಿಕ್ಸ್ ಆದಿತ್ಯನಾಥ್ ಯುಗದ ಅಂತ್ಯಕ್ಕೆ ಕಾರಣವಾಗಲಿದೆಯೇ? ಅಥವಾ ಹಿಂದುತ್ವದ ಹೊಸ ಅಲೆಯೊಂದನ್ನು ಸೃಷ್ಟಿಸುವ ತಯಾರಿಯಲ್ಲಿ ಆರೆಸ್ಸೆಸ್ ಹಾಗೂ ಆದಿತ್ಯನಾಥ್ ತೊಡಗಿಸಿಕೊಂಡಿದ್ದಾರೆಯೇ?

ಜಾತಿ ಗಣತಿಯನ್ನು ಅಖಿಲೇಶ್ ರಾಹುಲ್ ಜೋಡಿಗೆ ತಿರುಗು ಬಾಣವಾಗುವ ಹಾಗೆ ಮಾಡಬೇಕು ಎಂಬುದು ಆರೆಸ್ಸೆಸ್‌ನ ಬಯಕೆ. ಅದಕ್ಕಾಗಿ ಅದು ಮೋದಿ-ಶಾ ಜೋಡಿಗಿಂತ ಆದಿತ್ಯನಾಥ್‌ರನ್ನೇ ನೆಚ್ಚಿಕೊಂಡ ಹಾಗೆ ಕಾಣುತ್ತಿದೆ. ಉತ್ತರ ಪ್ರದೇಶದಲ್ಲಿ ಆದಿತ್ಯನಾಥ್ ರಾಜಕೀಯ ಭವಿಷ್ಯ ಏನು ಎಂಬುದು ಆರೆಸ್ಸೆಸ್‌ನ ಈ ನಿರ್ಧಾರವನ್ನು ಅವಲಂಬಿಸಿದೆ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಪಿ.ಎಚ್. ಅರುಣ್

contributor

Similar News