ಸರ್ಫರಾಝ್ ಖಾನ್ ಎಂಬ ದೈತ್ಯ ಪ್ರತಿಭೆ
ಸರ್ಫರಾಝ್ ಖಾನ್ ತನ್ನ ಅಮೋಘ ಆಟದ ಹೊರತಾಗಿಯೂ ಭಾರತ ಕ್ರಿಕೆಟ್ ತಂಡದಲ್ಲಿ ಸ್ಥಾನ ಸಿಗದೆ ನಿರಂತರ ಸಂಘರ್ಷ, ಹೋರಾಟವನ್ನು ಮಾಡಿದ್ದು ವಿಪರ್ಯಾಸವೇ ಸರಿ. ಎಂದೋ ಭಾರತ ಟೆಸ್ಟ್ ಕ್ರಿಕೆಟ್ ತಂಡದಲ್ಲಿ ಸರ್ಫರಾಝ್ ಕಾಣಿಸಿಕೊಳ್ಳಬೇಕಿತ್ತು. ಆದರೆ ‘ಫಿಟ್‌ನೆಸ್ ಮಟ್ಟ’ ಮತ್ತು ‘ಆಫ್ ಫೀಲ್ಡ್ ನಡವಳಿಕೆ’ಯ ನೆಪ ಇಟ್ಟುಕೊಂಡು ಈತನನ್ನು ದೂರ ಇಡಲಾಗಿತ್ತು. ಸುನಿಲ್ ಗವಾಸ್ಕರ್ ತೀವ್ರವಾಗಿ ಇದನ್ನು ಖಂಡಿಸಿದ್ದರು.
ಕ್ರಿಕೆಟ್ ಜಗತ್ತಿನ ಅಂತಿಮ ಹಂತವಾದ ಅಂತರ್‌ರಾಷ್ಟ್ರೀಯ ಪಂದ್ಯಗಳಲ್ಲಿ ದೇಶವನ್ನು ಪ್ರತಿನಿಧಿಸಲು ಪ್ರತಿಭೆಯ ಜೊತೆಗೆ ಅದೃಷ್ಟವನ್ನು ಹೊಂದಿರಬೇಕು ಎಂಬುದು ಬಿಸಿಸಿಐ ಸರ್ಫರಾಝ್ ಖಾನ್‌ನನ್ನು ನಡೆಸಿಕೊಂಡ ರೀತಿಯಿಂದ ಗೊತ್ತಾಗುತ್ತದೆ. ಆತನ ಅಮೋಘ ಆಟದ ಹೊರತಾಗಿಯೂ ಭಾರತ ಕ್ರಿಕೆಟ್ ತಂಡದಲ್ಲಿ ಸ್ಥಾನ ಸಿಗದೆ ನಿರಂತರ ಸಂಘರ್ಷ, ಹೋರಾಟವನ್ನು ಮಾಡಿದ್ದು ವಿಪರ್ಯಾಸವೇ ಸರಿ. ಎಂದೋ ಭಾರತ ಟೆಸ್ಟ್ ಕ್ರಿಕೆಟ್ ತಂಡದಲ್ಲಿ ಸರ್ಫರಾಝ್ ಕಾಣಿಸಿಕೊಳ್ಳಬೇಕಿತ್ತು. ಆದರೆ ‘ಫಿಟ್‌ನೆಸ್ ಮಟ್ಟ’ ಮತ್ತು ‘ಆಫ್ ಫೀಲ್ಡ್ ನಡವಳಿಕೆ’ಯ ನೆಪ ಇಟ್ಟುಕೊಂಡು ಈತನನ್ನು ದೂರ ಇಡಲಾಗಿತ್ತು. ಸುನಿಲ್ ಗವಾಸ್ಕರ್ ತೀವ್ರವಾಗಿ ಇದನ್ನು ಖಂಡಿಸಿದ್ದರು. ಅವರನ್ನು ಹೊರತುಪಡಿಸಿದರೆ ಯಾರೂ ವಿರೋಧಿಸಲಿಲ್ಲ. ಹಾಗೆ ನೋಡಿದರೆ ಅನೇಕ ಪ್ರತಿಭಾನ್ವಿತ ಆಟಗಾರರು ಅದ್ಭುತ ಆಟದ ಹೊರತಾಗಿಯೂ ಆಯ್ಕೆದಾರರ ಅವಕೃಪೆಗೆ ಒಳಗಾಗಿ ನರಳಿರುವುದುಂಟು. ಅದರಲ್ಲೂ ದಕ್ಷಿಣ ಭಾರತದ ಅಂಬಟಿ ರಾಯ್ಡು, ಮಯಾಂಕ್ ಅಗರ್‌ವಾಲ್, ಕರುಣ್ ನಾಯರ್‌ರಂತಹ ಅನೇಕರಿಗೆ ಅನ್ಯಾಯವಾಗಿದೆ. ಅವರಿಗೆ ದೊಡ್ಡಮಟ್ಟದಲ್ಲಿ ಇನ್ನು ಅವಕಾಶಗಳು ಸಿಗಬೇಕಿತ್ತು. ಹನುಮ ವಿಹಾರಿಯ ಕಥೆಯೂ ಇದಕ್ಕೆ ಭಿನ್ನವಾಗಿಲ್ಲ.
ಅಕ್ಟೋಬರ್ 22, 1997ರಲ್ಲಿ ಜನಿಸಿದ ಸರ್ಫರಾಝ್ ಭಾರತದ ಪರ ಆಡಿದ 311ನೇ ಟೆಸ್ಟ್ ಆಟಗಾರ. ತನ್ನ ಹನ್ನೆರಡನೇ ವಯಸ್ಸಿನಲ್ಲಿಯೇ ಮುಂಬೈಯ ಹ್ಯಾರಿಸ್ ಶೀಲ್ಡ್‌ನಲ್ಲಿ 421 ಎಸೆತಗಳಲ್ಲಿ 439 ರನ್ ಬಾರಿಸುವುದರ ಮೂಲಕ ಸಚಿನ್ ತೆಂಡುಲ್ಕರ್ ಹೆಸರಿನಲ್ಲಿದ್ದ ದಾಖಲೆಯನ್ನು ಮುರಿದ ಕೀರ್ತಿ ಸರ್ಫರಾಝ್‌ಗೆ ಸಲ್ಲುತ್ತದೆ. 2014 ಮತ್ತು 2016ರಲ್ಲಿ ಭಾರತದ ಪರ 19 ವರ್ಷ ವಯಸ್ಸಿನೊಳಗಿನ ಕ್ರಿಕೆಟ್ ತಂಡದಲ್ಲಿ ಸ್ಥಾನ ಪಡೆದು ವಿಶ್ವಕಪ್ ಆಡಿದ ಆಕ್ರಮಣಕಾರಿ ಆಟಗಾರ. 2015ರಲ್ಲಿ ಆರ್‌ಸಿಬಿ ಪರ ಆಡಿ ಎಲ್ಲರ ಗಮನ ತನ್ನ ಕಡೆ ಸೆಳೆದ ಕಿರಿಯ ಬ್ಯಾಟ್ಸ್‌ಮನ್. ಇದರ ಜೊತೆಗೆ 2019-20 ರಣಜಿ ಋತುವಿನಲ್ಲಿ ಉತ್ತರ ಪ್ರದೇಶದ ವಿರುದ್ಧ ತ್ರಿಶತಕ ಬಾರಿಸುವುದರೊಂದಿಗೆ 928, 2021-22ರಲ್ಲಿ 983, 2022-23ರಲ್ಲಿ 656 ರನ್ ಬಾರಿಸಿದ್ದರೂ ಭಾರತ ತಂಡದಲ್ಲಿ ಸ್ಥಾನ ಗಳಿಸಲು ಸಾಧ್ಯವಾಗಿರಲಿಲ್ಲ. ಒಂಭೈನೂರು ರನ್‌ಗಳನ್ನು ಒಂದೇ ಋತುವಿನಲ್ಲಿ ದಾಖಲಿಸಿದರೂ ಅವರ ದಪ್ಪ ದೇಹಾಕೃತಿಯನ್ನು ನೆಪವಾಗಿಟ್ಟುಕೊಂಡು ಅವರು ತಮ್ಮ ದೇಹದ ಮೇಲೆ ಹೆಚ್ಚು ಕೆಲಸ ಮಾಡಬೇಕು. ತೂಕವನ್ನು ಕಳೆದುಕೊಳ್ಳಬೇಕು. ತೆಳ್ಳಗಾಗಿ ಬಂದರೆ ಫಿಟ್ನೆಸ್ ಮರಳುತ್ತದೆ. ಇದು ಬ್ಯಾಟ್ಸ್‌ಮನ್ ಆಯ್ಕೆಯ ಮಾನದಂಡ ಎಂದು ಬಿಸಿಸಿಐ ಅಭಿಪ್ರಾಯಪಟ್ಟಿತ್ತು. ಇದು ಸರ್ಫರಾಝ್‌ರಂತಹ ಅದ್ಭುತ ಆಟಗಾರನಿಗೆ ಹೆಚ್ಚು ಯೋಚಿಸುವಂತೆ ಮಾಡಿತು. ಮಾನಸಿಕ ಸಂಘರ್ಷ, ತಳಮಳದಂತಹ ಸ್ಥಿತಿಯನ್ನು ಅನುಭವಿಸಬೇಕಾಗಿ ಬಂತು. ಆದರೂ ತನ್ನ ಗುರಿಯ ಕಡೆ ಏಕಾಗ್ರತೆಯನ್ನು ಕೇಂದ್ರೀಕರಿಸಿದ ಕಾರಣಕ್ಕೆ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ತಂಡದಲ್ಲಿ ಸ್ಥಾನ ಪಡೆದುಕೊಳ್ಳಲು ಸಾಧ್ಯವಾಯಿತು. ಆದರೆ ಇಂತಹ ಸಂದಿಗ್ಧ ಸ್ಥಿತಿಯಿಂದ ಹೊರಬರಲು ಸಾಧ್ಯವಾಗದ ಅನೇಕ ಪ್ರತಿಭೆಗಳು ಕಮರಿಹೋಗಿರುವ ಉದಾಹರಣೆಗಳಿವೆ. ಆಟಗಾರರು ಕೋಪ, ಅಸಹನೆ, ಪ್ರತಿಕ್ರಿಯೆಗಳನ್ನು ವ್ಯಕ್ತಪಡಿಸಿದರೂ ಅದರಿಂದ ಪ್ರಯೋಜನವಾಗುವುದಿಲ್ಲ. ಅಂತಿಮವಾಗಿ ಬಿಸಿಸಿಐಯ ಚುಕ್ಕಾಣಿ ಹಿಡಿದಿರುವವರು ಕಣ್ಣು ಬಿಡಬೇಕು. ಕೆಲವೊಂದು ಕ್ಷುಲ್ಲಕ ಕಾರಣಗಳನ್ನು ಕೊಟ್ಟು ಪ್ರತಿಭಾನ್ವಿತ ಆಟಗಾರರನ್ನು ದೂರ ಇಡುವುದು ಅಕ್ಷಮ್ಯ ಅಪರಾಧ. ಆದರೆ ಕ್ರಿಕೆಟನ್ನು ಹತ್ತಿರದಿಂದ ನೋಡುವ ಪಂಡಿತರು ಇದನ್ನು ಏಕೆ ಪ್ರಶ್ನೆ ಮಾಡುತ್ತಿಲ್ಲ?
ಕ್ರಿಕೆಟ್ ಇತಿಹಾಸವನ್ನು ತೆಗೆದು ನೋಡಿದರೆ ದಢೂತಿ ದೇಹಾಕೃತಿಯನ್ನು ಹೊಂದಿದ್ದ ಅನೇಕ ಆಟಗಾರರು ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಅದ್ಭುತವಾಗಿ ಆಡಿ ಸಫಲವಾಗಿರುವುದು ಇದೆ. ಶ್ರೀಲಂಕಾದ ಮಾಜಿ ನಾಯಕ ಅರ್ಜುನ್ ರಣತುಂಗ ಇದಕ್ಕೆ ಉತ್ತಮ ಉದಾಹರಣೆ. ರಣತುಂಗ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡಲು ದೇಹ ಯಾವತ್ತೂ ಅಡ್ಡಿ ಬರಲಿಲ್ಲ. ಅದ್ಭುತವಾಗಿ ಕ್ಷೇತ್ರರಕ್ಷಣೆ ಮಾಡುತ್ತಿದ್ದ ರಣತುಂಗ ಅಸಾಧ್ಯವಾದ ಕ್ಯಾಚ್‌ಗಳನ್ನು ಹಿಡಿದಿರುವುದುಂಟು. ರಣತುಂಗ ತಮ್ಮ ನಾಯಕತ್ವದಲ್ಲಿ ಶ್ರೀಲಂಕಾಕ್ಕೆ 1996ರಲ್ಲಿ ವಿಶ್ವಕಪ್ ಗೆಲ್ಲಿಸಿಕೊಟ್ಟಿದ್ದು ಅವಿಸ್ಮರಣೀಯ ಘಟನೆ. ರಣತುಂಗರ ದೇಹದ ತೂಕ 115 ಕಿಲೋ ಇತ್ತು. ಆದರೂ ಅಂತರ್‌ರಾಷ್ಟ್ರೀಯ ಕ್ರಿಕೆಟ್‌ನಲ್ಲಿ 12,561 ರನ್ ಗಳಿಸಿ 95 ವಿಕೆಟ್ ಉರುಳಿಸಿದ್ದಾರೆ. ಅಂತರ್‌ರಾಷ್ಟ್ರೀಯ ಕ್ರಿಕೆಟ್ ಇತಿಹಾಸದಲ್ಲಿ ಆಸ್ಟ್ರೇಲಿಯದ ವಾರ್ವಿಕ್ ಆರ್ಮ್‌ಸ್ಟ್ರಾಂಗ್ ಎರಡನೇ ಸ್ಥಾನ ದಲ್ಲಿರುವ ದಢೂತಿ ದೇಹದ ಆಟಗಾರ. 133 ಕಿಲೋ ಭಾರದ ಈ ಆಟಗಾರ ಕ್ರಿಕೆಟ್ ಜಗತ್ತು ಕಂಡ ಅದ್ಭುತ ಆಲ್‌ರೌಂಡರ್. ಎರಡು ದಶಕ ಕ್ರಿಕೆಟ್ ಆಡಿದ ಈ ಸವ್ಯಸಾಚಿ ಆಟಗಾರ 2,863 ರನ್ ಗಳನ್ನು ಬಾರಿಸಿ, 87 ವಿಕೆಟ್‌ಗಳನ್ನು ಉರುಳಿಸಿರುವುದು ಆತನ ಕ್ಷಮತೆಯನ್ನು ತೋರಿಸುತ್ತದೆ. ಇಷ್ಟೇ ಅಲ್ಲದೆ ಆತ ಆಸ್ಟ್ರೇಲಿಯ ಕಂಡ ಸರ್ವಶ್ರೇಷ್ಠ ನಾಯಕರಲ್ಲಿ ಒಬ್ಬ. ಈತನ ಹಾಗೆ ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಆಡಿದ ಅತೀ ತೂಕದ ಆಟಗಾರರೆಂದರೆ ನ್ಯೂಝಿಲ್ಯಾಂಡಿನ ಜೆಸ್ಸಿ ರೈಡರ್, ಅಫ್ಘಾನಿಸ್ಥಾನದ ಮುಹಮ್ಮದ್ ಶೆಹಝಾದ್, ಆಸ್ಟ್ರೇಲಿಯದ ಮಾರ್ಕ್ ಕಾಸ್ಗ್ರೋವ್, ಇಂಗ್ಲೆಂಡಿನ ಮೈಕ್ ಗ್ಯಾಟಿಂಗ್, ಕಾಲಿನ್ ಮಿಲ್ಬ್ರೇನ್, ಪಾಕಿಸ್ತಾನದ ಇಂಝಮಾಮುಲ್ ಹಕ್, ಬರ್ಮುಡಾದ ಡೆವೆನ್ ಲೆವಿರಾಕ್, ವೆಸ್ಟ್ ಇಂಡೀಸ್‌ನ ರಕೀಮ್ ಕಾರ್ನ್‌ವಾಲ್ ಅತೀ ತೂಕದ ಅಂದರೆ 140 ಕಿಲೋ ತೂಕದ ಆಟಗಾರ ...ಹೀಗೆ ಅನೇಕ ಆಟಗಾರರು ಫಿಟ್‌ನೆಸ್ ಇಲ್ಲದೆಯೂ ಅದ್ಭುತ ಪ್ರದರ್ಶನವನ್ನು ನೀಡಿ ತಮ್ಮ ದೇಶದ ಕ್ರಿಕೆಟ್ ತಂಡವನ್ನು ಅನೇಕ ಸಂದರ್ಭಗಳಲ್ಲಿ ಗೆಲ್ಲಿಸಿದ್ದಾರೆ ಹಾಗೂ ಇವರಲ್ಲಿ ಕೆಲವರು ಕ್ರಿಕೆಟ್ ಜಗತ್ತು ಕಂಡ ಸರ್ವಶ್ರೇಷ್ಠ ಆಟಗಾರರ ಸಾಲಿನಲ್ಲಿ ನಿಲ್ಲುತ್ತಾರೆ. ಹಾಗಾಗಿ ದೇಹದ ತೂಕ ಕ್ರಿಕೆಟ್ ಆಟಗಾರರ ಪ್ರದರ್ಶನಕ್ಕೆ ಅಡ್ಡಿಯಾಗುವುದಿಲ್ಲ. ಕ್ಷೇತ್ರ ರಕ್ಷಣೆಯಲ್ಲಿ ಚೆಂಡು ಹಿಡಿಯಲು ಬಗ್ಗಲು ಸಾಧ್ಯವಾದರೆ, ಬ್ಯಾಟಿಂಗ್ ಸಮಯದಲ್ಲಿ ವಿಕೆಟ್‌ಗಳ ಮಧ್ಯೆ ಜೋರಾಗಿ ಓಡಲು ಸಾಧ್ಯವಾದರೆ ಅಷ್ಟೇ ಸಾಕು ಹೆಚ್ಚು ವರ್ಷಗಳ ಕಾಲ ರಾಷ್ಟ್ರದ ಪರ ಆಡಬಹುದು. ಆದರೂ ಮೇಲಿನ ದಢೂತಿ ಆಟಗಾರರ ಜೊತೆ ಸರ್ಫರಾಝ್‌ರನ್ನು ಹೋಲಿಸಿಕೊಂಡು ನೋಡಿದರೆ ತೂಕ ಏನೇನೂ ಇಲ್ಲವೆಂದೇ ಹೇಳಬಹುದು.
ಕ್ರೀಡಾ ಕ್ಷೇತ್ರದಲ್ಲಿ ಬಹುಪಾಲು ಸಂದರ್ಭಗಳಲ್ಲಿ ಆಟಗಾರನ ಪ್ರದರ್ಶನದ ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಆನ್‌ಲೈನ್ ಸ್ಕೋರಿಂಗ್, ಲೈವ್ ಮ್ಯಾಚ್‌ಗಳು, ಅಂಗೈಯಲ್ಲಿ ಸ್ಟಾಟಿಸ್ಟಿಕ್ ಎಲ್ಲವೂ ಇರುವುದರಿಂದ ಭ್ರಷ್ಟತೆ, ವಶೀಲಿ ಕಡಿಮೆ ಆಗಿದೆ. ಆಯ್ಕೆಯ ಸಂದರ್ಭದಲ್ಲಿ ಪ್ರದೇಶ, ಜಾತಿ, ಧರ್ಮ, ಭಾಷೆ ಯಾವುದೂ ಲೆಕ್ಕಕ್ಕೆ ಬರುವುದಿಲ್ಲ. ಅಷ್ಟರಮಟ್ಟಕ್ಕೆ ಕ್ರೀಡೆ ಮುಕ್ತವಾಗಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಕ್ರೀಡೆಯ ಬಗ್ಗೆ ಏನೂ ಗೊತ್ತಿಲ್ಲದ ರಾಜಕಾರಣಿಗಳು ಕ್ರೀಡಾ ಮಂಡಳಿಗಳಲ್ಲಿ ನುಸುಳುತ್ತಿರುವುದರಿಂದ ಪ್ರಾದೇಶಿಕತೆ, ಜಾತಿ, ಧರ್ಮದ ವಾಸನೆ ಬರುತ್ತಿದೆ. ಅದರಲ್ಲೂ ಕ್ರಿಕೆಟ್‌ನಲ್ಲಿ ಇದು ಕಾಣಿಸಿಕೊಳ್ಳುತ್ತಿರುವುದು ಒಂದು ದುರಂತವೇ ಸರಿ. ಏಕೆಂದರೆ ಭಾರತದಲ್ಲಿ ಸಾವಿರಾರು ಪ್ರತಿಭೆಗಳಿವೆ. ಲೀಗ್ ಹಂತದಿಂದ ಹಿಡಿದು ದೇಶೀಯ ರಣಜಿ, ಐಪಿಎಲ್ ನಂತಹ ಟೂರ್ನಿಗಳನ್ನು ಆಡುವ ಅವಕಾಶವಿರುತ್ತದೆ. ತನ್ಮೂಲಕ ಭವಿಷ್ಯವನ್ನು ಕಂಡುಕೊಳ್ಳಬಹುದಾಗಿದೆ. ಆದರೆ ಆ ಪ್ರತಿಭೆಗಳು ಮುಖ್ಯವಾಹಿನಿಗೆ ಬರುವ ಮೊದಲೇ ನಶಿಸಿಹೋದರೆ ದೇಶೀಯ ಕ್ರಿಕೆಟಿಗೆ ನಷ್ಟ ಎನ್ನುವುದನ್ನು ಅರಿತುಕೊಳ್ಳಬೇಕಿದೆ.